ಇಲ್ಲಿ 'ಕನಸ ಕೋಳಿಯ ಕತ್ತು' ಮುರಿಯಲಾಗಿದೆ.. ಹುಷಾರು..!!

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.
ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.
ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.
ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.
ಈಗ ಪ್ರಕಟವಾಗಿರುವ ಡಾ ಗೋವಿಂದ ಹೆಗಡೆ ಅವರ ಕವಿತೆಗಳ ಬಗ್ಗೆ
ಟಿಪ್ಪಣಿ ಬರೆಯಲಿರುವವರು ಮಹಿಪಾಲ ರೆಡ್ಡಿ ಮುನ್ನೂರು. ಕಾದು ಓದಿ

 

ಅರಿವಳಿಕೆ ಲೋಕದಿಂದ ಕಾವ್ಯ ಲೋಕಕ್ಕೆ ಹೊರಳಿಕೊಂಡವರು ಹುಬ್ಬಳ್ಳಿಯ ಡಾ ಗೋವಿಂದ ಹೆಗಡೆ. ಇವರ ‘ಕನಸ ಕೋಳಿಯ ಕತ್ತು’ ಈಗಾಗಲೇ ಕಾವ್ಯ ಓದುಗರ ಮಧ್ಯೆ ಸಂಚರಿಸಿಯಾಗಿದೆ. ಎರಡನೇ ಸಂಕಲನಕ್ಕೆ ಸಜ್ಜಾಗಿರುವ ಗೋವಿಂದ ಹೆಗಡೆ ಕವಿತೆಗೆ ಬೇಂದ್ರೆ ಅಜ್ಜನಂತೆಯೇ ಮೂಡಲ ಮನೆಯ ಮುತ್ತಿನ ಹನಿಗಳನ್ನು ಪೋಣಿಸಬಲ್ಲರು.

 
ನೋಟ

ಗೋಡೆಯಲ್ಲಿ ಇಳಿಬಿದ್ದ ಚಿತ್ರಪಟದಲ್ಲಿ
ಆ ದೊರೆ ‘ಬಿರುದೆಂತೆಂಬರ ಗಂಡ’
ಬೇಕಿದ್ದಕ್ಕಿಂತ ತುಸು ಹೆಚ್ಚು ಗಂಭೀರ
ಸಿಡುಕೇ ಎನಿಸುವಂತೆ ಹುಬ್ಬು-ಗಂಟು
ದಾಟುವಾಗೆಲ್ಲ ನೋಡುವೆ ಅವನ
ಹುಬ್ಬುಗಳನ್ನು
ಅದೊಮ್ಮೆ ಅವನ ಹುಬ್ಬು ತುಸು ಸಡಲಿ
ನಕ್ಕಂತಾಗಿ
ಈಗ ಅದನ್ನೇ ಕಾಯುತ್ತಿರುತ್ತೇನೆ
ಮತ್ತೊಮ್ಮೆ ಸಿಂಹಾಸನದ ತೋಳಿನ
ಮೇಲೆ ಮಂಡಿತ ಅವನ ಬಲಿಷ್ಠ ಕೈಯ ಆ
ಕಿರುಬೆರಳು ತುಸು ಅಲುಗಿ ನನ್ನ ಕರೆದಂತಾಗಿ
ಹೌದೋ ಅಲ್ಲವೋ ಬಿಡುಗಣ್ಣಲ್ಲಿ ನೋಡುವೆ
ಈಗೀಗ ಇವಳ ಗೊಣಗು
‘ಬರಬರುತ್ತ ನಿಮ್ಮ ಸಿಡುಕು
ಜಾಸ್ತಿಯಾಯ್ತು
ಅದೇನು ಹುಬ್ಬುಗಂಟು!’
ಸಜೀವ 
ಕವಿತೆ ನನ್ನ ಲೋಕಕ್ಕೆ
ಬಂದಾಗಿನಿಂದ ಜೊತೆಗಿದೆ
ಕಿಸೆಯ ಕನ್ನಡಕ
ಪೆನ್ನು ಪರ್ಸುಗಳಂತೆ
ನನ್ನದಾಗಿ
ಅಷ್ಟೇ ಅಲ್ಲ
ಎದೆಯ ಲಬ್ ಡಬ್ ಗಳಗುಂಟ
ನಾಡಿಗಳಲ್ಲಿ ಹರಿದಿದೆ
ಉಸಿರ ತಿದಿಯಲ್ಲಿ
ಯಾತಾಯಾತ ಆಡಿದೆ
ಕಣ್ಣಾಗಿ ಕಂಡು ಕಿವಿಯಾಗಿ ಕೇಳಿ
ನರಮಂಡಲದಲ್ಲಿ ಗ್ರಹಿಸಿ
ಸ್ಪಂದಿಸಿ ನನ್ನ ಭಾಗವೇ
ಬೇಲಿಸಾಲಿನ ಹೂಗಳಿಗೆ ಕೈ
ಆಡಿಸಿ ನಕ್ಕು ಹಕ್ಕಿಗಳ ಪಕ್ಕ
ಹಾರಿ ತಾರೆಗಳಿಗೆ ಕಣ್ಮಿಟುಕಿಸಿ
ಅಲೆ-ದಂಡೆಗಳಗುಂಟ ಅಲೆದು
ಮರುಳು ಮನೆ ಕಟ್ಟಿ ಕುಣಿದು
ಮೈಪಡೆದ ಕವಿತೆ
ಹಾಗಲ್ಲದೆ
ಕವಿತೆ ಕವಿತೆ ಹೇಗೆ
ನಾನು
ಜೀವಂತ ಹೇಗೆ
ವಾಸ್ತವ

ಆ ನಗರದ ಕೌಪೀನದಷ್ಟೂ
ಇರದ ಮೈದಾನಕ್ಕೆ ಈಗ
ಬಿಗಿ ಪಹರೆ
ಬಾವುಟ ಸ್ವಾತಂತ್ರ್ಯ ಕೋರ್ಟು
ಬಂದೋಬಸ್ತು ಎಲ್ಲಕ್ಕೂ
ತೀರ ಅಪರಿಚಿತ
ಆ ಇಳಿವಯಸ್ಸಿನ ಹೆಂಗಸು
ಅದೇ ಮೈದಾನದ ಮೂಲೆಯಲ್ಲಿ
ಮೂರು ಕಲ್ಲಿಟ್ಟು ಒಲೆ ಹಚ್ಚಿ-
ದಾರಿಹೋಕರ ಹೊಟ್ಟೆ ತಂಪು
ಈಗ ಎಲ್ಲೋ ಜೋಪಡಿಯಲ್ಲಿ
ಮಂಡಿಯಲ್ಲಿ ಮುಖ ಹೂತು
ವಾರದಿಂದ ಅವಳ ಒಲೆ
ತಣ್ಣಗೆ
 

 
ಸಂತೆ-ಸಂತ
ಕನ್ನಡಿಯಲ್ಲಿ ತನ್ನ ತಾನೇ ಕಂಡು
ಬೆರಗಾಗಿದೆ ಸಂತೆ
ಮಾಯಾಲಾಂದ್ರದಿಂದ ಹೊರಬಂದಂತೆ
ಒಂದೊಂದೇ ಸರಕು ಸರಂಜಾಮು
ಅಂಗಡಿಗಳೇ ತೆರಪಿಲ್ಲದೇ ಬಂದು
ಶಿಸ್ತಾಗಿ ಕೂತ ಪರಿಗೆ
ಏನೆಲ್ಲ ವೈವಿಧ್ಯ-ಗಾತ್ರ ಗುಣಗಳಲ್ಲಿ
ದೃಶ್ಯ ರುಚಿ ಸದ್ದು ವಾಸನೆಯ
ಹಸಿವಿಗೆ ತೆರೆದುಕೊಳ್ಳುವ ಲೋಕ
ಕಂಡಷ್ಟೂ ಕಾಣುವ ಬಗೆದಷ್ಟೂ
ಮೊಗೆಯಲಿರುವ ತನ್ನೊಡಲು
ಬಿಚ್ಚಿ ಹರವಿದ ಪರಿಗೆ
ಥಕ್ಕಾಗಿದೆ ಸಂತೆ
ಅಲ್ಲಿ ಮೂಲೆಯಲ್ಲಿ ನಿಂತಿದ್ದಾನೆ ಸಂತ
ಮಾಯದ ಮುಗುಳ್ನಗೆ ಬೆಳೆದಿದೆ
ಅವನ ತುಟಿ ಕಣ್ಣುಗಳಲ್ಲಿ
ನಿಧಾನ ಸಂತೆಯ ಉದ್ದಗಲ
ಓಡಾಡುತ್ತಿದ್ದಾನೆ- ಯಾವ ಅವಸರ
ಅವನಿಗೆ
ಕೀಲಿ ಕೊಟ್ಟರೆ ಡೋಲು ಬಾರಿಸುವ
ಬೊಂಬೆಯನ್ನೆತ್ತಿ ಕೊಟ್ಟು ಕೀಲಿ
ಮುನ್ನಡೆದಿದ್ದಾನೆ ಅಲ್ಲಿ
ಕವಡೆ ಮಣಿಸರ ಕಪ್ಪೆಚಿಪ್ಪುಗಳ ಕರೆಗೆ
ಒಂದೊಂದೇ ಚಿಪ್ಪನ್ನೆತ್ತಿ ಕಿವಿಗಿಟ್ಟು ಆಲಿಸಿ
ಬಳಿಯ ಹೂವಿನಂಗಡಿಯಿಂದ
ಪಕಳೆಯೊಂದನ್ನೆತ್ತಿ ಮೂಸಿ ದಾರಿ
ತಪ್ಪಿ ಸಂತೆಗೆ ಬಂದು ಗೊಂದಲಿಸುತ್ತಿರುವ
ಚಿಟ್ಟೆಯ ಕಣ್ಣಲ್ಲೇ ಮೈದಡವಿ
ಸಿಹಿತಿಂಡಿಗಳೆಡೆಗೆ ಬಂದು ಮೂಗರಳಿಸಿದ್ದಾನೆ
ನಿಲ್ಲದೇ ನಡೆದಿದ್ದಾನೆ ಕಾಲು
ತಿರುಗಿದ ಕಡೆಗೆ
‘ಸಂತ್ಯಾತನೋ ಅಜ್ಜಾ’ ಯಾರದೋ
ಕೂಗಿಗೆ ಹ್ಞೂಂ ಎಂದಿದ್ದಾನೆ
ಅದೇ ಮುಗುಳುನಗೆಯಲ್ಲಿ
ಸಂಜೆಯಾಗಿದೆ-ಒಂದೊಂದೇ
ಅಂಗಡಿ ಕಳಚುತ್ತ ಮತ್ತೆ
ಪೆಟ್ಟಿಗೆ ಸೇರಿ
ಬಯಲಾದ ಸಂತೆ
ಈಗ ಸಂತನೊಳಗೆ ಬಿಚ್ಚಿಕೊಳ್ಳುತ್ತ..
 

 
ದಿನ 

ಈರುಳ್ಳಿಯಂತೆ ದಿನ ಬಿಚ್ಚಿಕೊಳ್ಳುತ್ತಿದೆ

ಒಂದೊಂದೇ ಸಿಪ್ಪೆ ಬಿಚ್ಚುತ್ತ ಬಿಚ್ಚಿ
ಕೊಳ್ಳುತ್ತ
ಘಾಟು ಕಣ್ಣಲ್ಲೂರಿ ನೀರು ಕರೆಯುತ್ತ
ಮೂಗು ಹನಿಸುತ್ತ
ಸುಲಿ ಸುಲಿದಂತೆ

ಕರಗಿ ಇಲ್ಲವಾಗುವ ಉಳ್ಳಿ
ಉಳಿದ ಸಿಪ್ಪೆ ನೆನಪು
ಕೈಗೆ ಮೆತ್ತಿಯೇ ಇರುವಂತೆ

ದಿನ –
ಬಿಚ್ಚುತ್ತ ಬಯಲಾಗುವ ಸಂತೆ

ಥೇಟು ಈರುಳ್ಳಿಯಂತೆ

 

‍ಲೇಖಕರು avadhi

December 28, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Vasudev nadig

    ಅವಧಿಯ ಈ ಹೊಸ ಪ್ರಯತ್ನ ಕವಿಯ ಪಾಲಿಗೆ ಬಹುದೊಡ್ಡ ಸ್ಪೇಸ್. ಗೋವಿಂದ ಹೆಗಡೆ ಅವರ ಕವಿತೆಗಳಲಿನ ಜೀವಂತವಾದ ಇಮೇಜ್ ಗಳು ಅನುರಣನದ ಶಕ್ತಿ ಪಡೆದಿವೆ

    ಪ್ರತಿಕ್ರಿಯೆ
  2. Lalitha siddabasavayya

    ನೋಟ ಮತ್ತು ವಾಸ್ತವ ಎರಡೂ ಸೊಗಸಾಗಿವೆ. ಇನ್ನೊಂದು ಸಲ ಓದಬೇಕೆನ್ನಿಸುವ ಕವನಗಳಿವು.

    ಪ್ರತಿಕ್ರಿಯೆ
  3. ಭರತ್ ಶಾಸ್ತ್ರಿ

    ಕವಿ ಡಾ. ಗೋವಿಂದ ಹೆಗಡೆಯವರ ಕವನ ಸಂಕಲನದಿಂದ ಆಯ್ದ ಕವನಗಳನ್ನು ಎಲ್ಲ ಓದುಗರಿಗೆ ಹಂಚಿದ ‘ಅವಧಿ’ ಗೆ ಧನ್ಯವಾದಗಳು. ಭರವಸೆ ತರುವ, ಆಶಾವಾದದ ಕವನವೊಂದಾದ ಕಾರ್ಗಿಲ್ ಕದನದ ಹುತಾತ್ಮರ ನೆನಪಿನಲ್ಲಿ ಬರೆದ ಕವನವೊಂದನ್ನು (ಶೀರ್ಷಿಕೆ ಮರೆತೆ, ಅವರ ಕವನಸಂಕಲನ
    ‘ಕನಸು ಕೋಳಿಯ ಕತ್ತು’ ದ ಮೊದಲಿನಲ್ಲೇ ಇದೆ) ಪ್ರಕಟಿಸಬಹುದಿತ್ತು, ಇರಲಿ.
    “ಅರಿವಳಿಕೆ ಲೋಕದಿಂದ ಕಾವ್ಯ ಲೋಕಕ್ಕೆ ಹೊರಳಿಕೊಂಡವರು ಹುಬ್ಬಳ್ಳಿಯ ಡಾ. ಗೋವಿಂದ ಹೆಗಡೆ” ಎಂಬ ಪರಿಚಯ ಅಷ್ಟಾಗಿ ಸರಿ ಕಾಣಲಿಲ್ಲ. ವಿದ್ಯಾರ್ಥಿ ದೆಸೆಯಿಂದಲೂ ಅವರನ್ನು ಬಲ್ಲ ನನಗೆ ಅವರ ಕವಿ ಹೃದಯದ ಪರಿಚಯ ಚೆನ್ನಾಗಿ ಇದೆ. ವೈದ್ಯವೃತ್ತಿ ಮತ್ತು ಕಾವ್ಯ ಎರಡನ್ನೂ ಜತೆಜತೆಯಾಗಿ ನಿಭಾಯಿಸುತ್ತಿದ್ದಾರೆ. ಹಾಗಿದ್ದರೆ ಅವರು ವೈದ್ಯರೋ ಅಥವಾ ಕವಿಯೋ ಎಂಬ ಪ್ರಶ್ನೆಗೆ ಉತ್ತರ, ಎರಡೂ ಹೌದು.
    ಆಯ್ದ ಉತ್ತಮ ಕವಿತೆಗಳಿಗೆ ಧನ್ಯವಾದಗಳು.

    ಪ್ರತಿಕ್ರಿಯೆ
  4. ಪೂರ್ಣಿಮಾ ಸುರೇಶ್

    ಚೆಂದದ ಕವನಗಳನ್ನ ಓದಿಸಿದ ಅವಧಿಗೆ ವಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: