ವಿ ಆರ್ ಕಾರ್ಪೆಂಟರ್
ಐರ್ಲೆಂಡಿನಲ್ಲಿ ಮೊನ್ನೆ ಅಲ್ಲಿನ ಧಾರ್ಮಿಕ ಅಂಧತ್ವದಿಂದ ತೀರಿಕೊಂಡ, ಸವಿತಾ ಹಾಲಪ್ಪನವರ್ ಪರವಾಗಿ ಅಂತರರಾಷ್ಟ್ರೀಯವಾಗಿ ಟೀಕೆ, ಖಂಡನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ನಮ್ಮ ದೇಶದಲ್ಲೇ ಧಾರ್ಮಿಕ ಹಿಂಸಾಚಾರದಿಂದ ಜೀವಕಳೆದುಕೊಂಡ ಅಸಂಖ್ಯಾತ ಅಕ್ಕ-ತಂಗಿಯರ ಬಗ್ಗೆ ಏಕೆ ಇಷ್ಟು ಚರ್ಚೆಯಾಗುತ್ತಿಲ್ಲ. ಇಂದಿಗೂ ದೇವದಾಸೀ ಪದ್ಧತಿ, ದಲಿತ ಮಹಿಳೆಯರ ಮೇಲೆ ನಡೆದ ಅತ್ಯಾಚಾರಗಳು, ಮೌಢ್ಯದ ಆಚರಣೆಗೆ ನಡೆಯುವ ನರಬಲಿ, ಜಾತ್ಯತೀತ ದೇಶವೆಂದು ಸಾರುತ್ತಿರುವ ದೇಶದಲ್ಲೇ ಜಾತಿಗಾಗಿ ನಡೆಯುವ ಮರ್ಯಾದಾದಾ ಹತ್ಯೆ, ಲವ್ಜಿಹಾದ್ ದಾಳಿ, ಬರ್ತ್ಡೇ ಪಾರ್ಟಿಯ ಮೇಲಿನ ದಾಳಿ, ಹೆಣ್ಣು ಎಂಬ ಒಂದೇ ಕಾರಣಕ್ಕೆ ನಡೆಯುವ ಕೌಟುಂಬಿಕ ಹಿಂಸೆ, ವರದಕ್ಷಿಣೆ ಹಿಂಸೆ, ಶಾಪಿಂಗ್ ಮಾಲ್, ರೆಸ್ಟೋರೆಂಟ್ ಮತ್ತು ಗಾರ್ಮೆಂಟ್ಸ್ ಮುಂತಾದ ಕೆಲಸದ ಜಾಗಗಳಲ್ಲಿ ನಡೆಯುವ ಲೈಂಗಿಕ ಕಿರುಕುಳ, ಆಸಿಡ್ ದಾಳಿ… ಇನ್ನೂ ಮೊದಲಾದ ಹಿಂಸೆಗಳು ನಡೆಯುತ್ತಿದ್ದರೂ ನಮ್ಮ ಮಾಧ್ಯಮಗಳಿಗೆ ಅವೆಲ್ಲಾ ಕ್ಷುಲ್ಲಕ ವಿಚಾರ! ಸುದ್ಧಿ ಮಾಡಲು ಅರ್ಹವಲ್ಲದ ವಿಚಾರ! ಮಾಡಿದರೂ ಕ್ರೈಂ ನ್ಯೂಸ್ ಎಂಬ ಟಿಆರ್ಪಿ ಲೆಕ್ಕಾಚಾರವಷ್ಟೆ.
(ಚಿತ್ರ ಕೃಪೆ : ಸತೀಶ್ ಆಚಾರ್ಯ)
ವಿದೇಶದ ಕಾನೂನಿಂದ ಅನ್ಯಾಯವಾದರೆ ಮಾತ್ರ ಇಡೀ ದೇಶಕ್ಕಾದ ಅವಮಾನವೆಂದು ಬಿಂಬಿಸಿಕೊಂಡು, ಇಲ್ಲಿ ನಡೆಯುವ ಅಸಂಖ್ಯ ಹಿಂಸಾಚಾರವನ್ನು ಮುಚ್ಚಲಾಗುತ್ತಿರುವುದು ನಾಚಿಕೆಗೇಡು! ನಾನು ಮೇಲೆ ಹೇಳಿದ ಎಲ್ಲ ಕೃತ್ಯಗಳನ್ನು ಹತ್ತಿಕ್ಕಲು ಇಲ್ಲಿ ಬೇಕಾದಷ್ಟು ಕಾನೂನು ಕಟ್ಟಳೆಗಳಿವೆ. ಆದರೂ ಎಗ್ಗಿಲ್ಲದೆ ಕಾನೂನಿನ ಉಲ್ಲಂಘನೆಯಾಗುತ್ತಿದೆ. ವಿದೇಶದವರು ಯಾವುದೇ ಕಾರಣಕ್ಕೂ ಕಾನೂನನ್ನು ಮುರಿಯುವುದಿಲ್ಲವೆಂಬುದನ್ನು ಈ ಪ್ರಕರಣದಿಂದ ಸಾಬೀತಾಗಿದೆ. ಅದು ಕುರುಡು ಕಾನೂನಾಗಿದ್ದರೂ ಸಹ! ಆದರೆ, ಇಂಡಿಯಾದ ಇಡೀ ದೇಹ ಮೌಢ್ಯ, ಕಂದಾಚಾರಗಳೆಂಬ ಗಾಯದ ನಂಜಿನಿಂದ ನರಳುತ್ತಿದ್ದರೂ, (ದೇವನೂರ ಮಹಾದೇವ ಅವರ ಮಾತಿನ ಪ್ರೇರಣೆ) ಇನ್ನೊಂದು ದೇಶದ ಮೇಲೆ ಎಗರುತ್ತಿದೆ. ಅದು ತನ್ನ ಮುಂದೆ ಕನ್ನಡಿಯನ್ನು ಇಟ್ಟುಕೊಳ್ಳುವುದು ವಾಸಿಯೆಂದು ಅನಿಸುತ್ತದೆ.







nimma maatu satyasya satya….