ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದೆ ‘ಸರ್ವೆ ಸಾಹಿತ್ಯ’

ಇಲ್ಲಿ ಭೂಮಿ ಕುರಿತ ಕವನಗಳಿವೆ 

ಭೂಮಿ ಕುರಿತು ಮಾತ್ರವೇ ಕವನಗಳಿವೆ 

ಇದಕ್ಕೆ ಕಾರಣ ಇಲ್ಲಿನ ಕವಿಗಳೆಲ್ಲರೂ ಭೂ ಸರ್ವೆ ಮಾಡುವವರು 

ಮೊತ್ತ ಮೊದಲ ಬಾರಿಗೆ ಇಂತಹ ಸಂಕಲನವೊಂದು ಬಂದಿದೆ.

ಈ ಸಂಕಲನಕ್ಕೆ ಅನಿಲ್ ಗುನ್ನಾಪುರ್ ಬರೆದ ಮುನ್ನುಡಿ ಇಲ್ಲಿದೆ-

ಅನಿಲ್ ಗುನ್ನಾಪೂರ

ಸರ್ವೆ ಸಾಹಿತ್ಯವೆಂಬ ಹೊಸಹೊರಳಿನ ಕುತೂಹಲದ ದಾರಿಯಲ್ಲಿ..

ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಾದ ಕವಿ, ವಿಮರ್ಶಕ, ನಾಟಕಕಾರ, ಪತ್ರಕರ್ತರಾಗಿದ್ದ ಪಿ.ಲಂಕೇಶ್ ಅವರು ತಮ್ಮ ಹೆಸರಾಂತ “ಅವ್ವ” ಕವಿತೆಯಲ್ಲಿ…

ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.

ಇಡೀ ಈ ಪದ್ಯ ಓದುತ್ತಾ ಹೋದಂತೆ ನಮಗರಿವಿಲ್ಲದಂತೆ ಮನಸ್ಸು ಭಾರವಾಗುತ್ತದೆ. ಅಮ್ಮನ ನೆನೆದು ಆಹ್ಲಾದಕರ ಭಾವ ಉಂಟಾಗುತ್ತದೆ. ಒಂದು ಅತ್ಯುತ್ತಮ ಕವಿತೆ ಓದುಗರನ್ನು ಕಾಡುತ್ತಲೇ ಬದುಕಿನ ಹತ್ತಾರು ಆಯಾಮಗಳನ್ನು ಓದುಗರ ಮುಂದಿರಿಸುತ್ತದೆ. ಮತ್ತು ಓದಿದಾಗೊಮ್ಮೆ ಹೊಸ ಅರ್ಥ, ಹೊಸ ಹೊಳವು ಕೊಡುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಮೇಲಿನ ಸಾಲುಗಳನ್ನು ಉಲ್ಲೇಖಿಸಬೇಕಾಯಿತು. ಸಾಮಾನ್ಯವಾಗಿ ನಾವು ಭೂಮಿಯನ್ನು ತಾಯಿಗೆ ಹೋಲಿಸುವುದು ರೂಢಿ. ಹೆತ್ತ ತಾಯಿಗೂ ಮತ್ತು ಭೂತಾಯಿಗೂ ಹೋಲಿಕೆ ಮಾಡಿ ಅವ್ವನ ಪ್ರೀತಿ ಅಂತಃಕರಣ, ತ್ಯಾಗವನ್ನು ಪ್ರತಿ ಓದುಗನ ಭಾವವೇ ಆಗುವ ಹಾಗೆ ಈ “ಅವ್ವ” ಕವಿತೆಯ ಸಾಲುಗಳಲ್ಲಿ ಪಿ.ಲಂಕೇಶ್ ಅವರು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

ಲಂಕೇಶರ ಈ ಪದ್ಯವನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಲು ಒಂದು ಕಾರಣವಿದೆ. ಈ ಕನ್ನಡನಾಡಿನ ನೆಲದವ್ವನ ಫಲವತ್ತತೆಯನ್ನು, ವಿಸ್ತಾರ-ವ್ಯಾಪ್ತಿಯನ್ನು ಅಳೆದು ಅವಳ ಅಂಗಳದಲ್ಲೇ ಬೆಳೆಯುವ ಭೂಮಾಪಕರುಗಳ ಸಾಹಿತ್ಯಪ್ರೇಮ, ನಾಡಭಾಷೆಯ ಪ್ರೇಮ ಪ್ರಕಟವಾಗುವ ಸಂದರ್ಭವಿದು. ಪ್ರಾದೇಶಿಕ ಭೂಮಾಪನ ತರಬೇತಿ ಸಂಸ್ಥೆ ಕಲಬುರಗಿಯಲ್ಲಿ 2018ರ ಬ್ಯಾಚಿನ ಸರ್ಕಾರಿ ಭೂಮಾಪಕರಾಗಿ ಆಯ್ಕೆಯಾಗಿ ತರಬೇತಿ ನಿರತ ಪ್ರಶಿಕ್ಷಣಾರ್ಥಿಗಳು ರಚನೆ ಮಾಡಿರುವ ಕವಿತೆಗಳು ಮತ್ತು ಲೇಖನಗಳು ಈ ನೆಲದವ್ವನ ಕುರಿತೇ ಆಗಿವೆ.

ನಾಡಿನ ಅನೇಕಾನೇಕ ಭಾಷೆ, ಉಪಭಾಷೆಗಳ ಜೊತೆ ಆಡಳಿತ ಕನ್ನಡದಂತೆಯೇ ಸರ್ವೆ ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ ಬಳಕೆಯಾಗುವ ಸರ್ವೆ ಕನ್ನಡ, ಅದರ ವಿಶಿಷ್ಟ ಪದಗಳು, ಭಿನ್ನಾಭಿವ್ಯಕ್ತಿ ಭಿನ್ನರೂಪ ರೂಪಕವನ್ನು ತಳೆಯುವ ಸಾಧನ ಸಲಕರಣೆಗಳು, ಸಾಮಾನ್ಯ ಜನರನ್ನೂ ತಲುಪಿಲ್ಲ. ಇಂತಹ ಸ್ಥಿತಿಯಲ್ಲಿ ಈ ಸರ್ವೆ ಕನ್ನಡ ಜನಪ್ರಿಯವಾಗುವ ಅವಶ್ಯಕತೆ ಇದೆ. ಇದು ಸಾಹಿತ್ಯ ರೂಪವನ್ನು ಪಡೆದುಕೊಳ್ಳುವ ಒಂದು ಅವಿಸ್ಮರಣೀಯ ಕ್ಷಣಕ್ಕೆ ನಾನು ಸಾಕ್ಷಿಯಾದೆ.

ಇಲಾಖೆಯ ಪಾರಿಭಾಷಿಕ ಶಬ್ಧಗಳನ್ನು ಬಳಸಿಕೊಂಡು ತಮ್ಮ ಸೃಜನಶೀಲತೆ ಬೆರಸಿ ಅರ್ಥ ಕೊಡುವ ಹಾಗೆ ಬರೆಯುವುದಕ್ಕೆ ವಿಶೇಷವಾದ ಜಾಣ್ಮೆ ಮತ್ತು ತಾಳ್ಮೆ ಬೇಕಾಗುತ್ತದೆ. ಭೂಮಾಪಕರು ಸಾಮಾನ್ಯವಾಗಿ ರೈತರ ನೋವು ನಲಿವುಗಳನ್ನು ಹತ್ತಿರದಿಂದ ಕಾಣುವುದರಿಂದ ಸಾಹಿತ್ಯ ಕೃಷಿಗೆ ಬೇಕಾದ ವಸ್ತು ಮತ್ತು ವಿಷಯ, ರೂಪಕಗಳು ಹೇರಳವಾಗಿ ಸಿಗುತ್ತವೆ. ಇದನ್ನು ಸಮಯೋಚಿತವಾಗಿ ಬಳಸಿಕೊಂಡು, ಭೂಮಾಪಕರ ತರಬೇತಿಯ ಅವಧಿಯಲ್ಲಿ ಸರ್ವೆ ಕನ್ನಡದ ಬಳಕೆಯ ಜೊತೆಗೆ ಸೃಜನಶೀಲ ಸಾಹಿತ್ಯದ ರಚನೆಗೆ ಅವಕಾಶ ಸೃಷ್ಟಿಸಲಾಯಿತು.

ಈ ಸಂದರ್ಭದಲ್ಲಿ ತರಬೇತಿ ನಿರತ ಪ್ರಶಿಕ್ಷನಾರ್ಥಿಗಳು ತಮ್ಮ ಅನುಭವ, ಆಡುನುಡಿ, ಸೃಜನಶೀಲತೆಗೆ ಅನುಗುಣವಾಗಿ ಅನೇಕ ಕವನಗಳನ್ನು ಲೇಖನಗಳನ್ನು ರಚಿಸಿ, ವಾಚಿಸಿದರು. ಅವುಗಳಲ್ಲಿ ಸೂಕ್ತವಾದ ಸಶಕ್ತವಾದವುಗಳನ್ನು ಆಯ್ದುಕೊಂಡು ಒಂದು ಸಂಕಲನದ ರೂಪದಲ್ಲಿ ತರುವ ಕ್ರಿಯೆ ಅರ್ಥಪೂರ್ಣವೆನಿಸಿತು. ನನಗೆ ತುಂಬಾ ಮೆಚ್ಚುಗೆಯಾದ ಅನೇಕ ಕವನಗಳಲ್ಲಿ ಕೆಲವನ್ನು ಮಾತ್ರ ಉಲ್ಲೇಖಿಸಿ ನನ್ನ ಅಭಿಪ್ರಾಯವನ್ನು ಮಂಡಿಸುತ್ತಿದ್ದೇನೆ..
ನವೀನ ಬೆಂಕಿಪೂರ ಅವರು “ತರಿಗೊಳಿಸಿದೆ” ಎಂಬ ಕವಿತೆಯಲ್ಲಿ ತಮ್ಮ ಮನದಿಂಗಿತವನ್ನು ಹೀಗೆ ಹರಿಬಿಡುತ್ತಾರೆ.

ಇದ್ಯಾವ ಅಡಚಣೆ ಗೊತ್ತಿಲ್ಲ / ನಿನ್ನ ನೋಡಲು ಸಾಧ್ಯ
ಮಾತನಾಡಿಸಲು ಸಾಧ್ಯವಾಗುತ್ತಿಲ್ಲ
ತರತರದ ಕನಸು ಬಿತ್ತಿ / ತರಿಗೊಳಿಸಿದೆ ನೀ ಈ ಖುಷ್ಕಿ ಮನಸನು

ಮೊದಲ ಓದಿಗೆ ಸುಲಭ ಗ್ರಾಹ್ಯವಾಗದಿದ್ದರೂ ಸರ್ವೆ ಇಲಾಖೆಯಲ್ಲಿ ಬರುವ ಅಡಚಣೆಗಳ ಕುರಿತು ಮತ್ತು ಖುಷ್ಕಿ ಮತ್ತು ತರಿ ಎಂಬ ಭೂಮಿಯ ಫಲವತ್ತತೆಗೆ ಅನುಗುಣವಾಗಿ ವಿಂಗಡಿಸಿ ಮಾಡಿರುವ ಸೂಕ್ಷ್ಮವನ್ನು ಅರಿತಾಗ ಕವಿತೆಯ ಮಹತ್ವ ಅರಿವಾಗುತ್ತದೆ.
ಇನ್ನೂ ಶಿಲ್ಪಾ ಪಿ ಪಟ್ಟೆದ ಅವರು ತಮ್ಮ ‘ಪ್ರೀತಿಯ ನೆಲಪ್ರತಿ’ ಕವಿತೆಯಲ್ಲಿ ಸರ್ವೆ ಶಬ್ಧಗಳು ಬಳಸಿಕೊಂಡು ರಚಿಸಿರುವ ಕವನ ಶ್ಲಾಘನೀಯವಾದದು.

ಹೃದಯ ಎಂಬ ಜಮೀನಿನಲ್ಲಿ
ಶಾಮೀಲಾಗುವ ಬಯಕೆ
ಮಾಡದಿರು ವಜಾಯಿ
ಬಾಂದುಗಲ್ಲಾದರಾಗಿಯೂ ಉಳಿಯುವೆ
ನಿನ್ನೊಲವಿನ ವಸಲೆಯಲ್ಲಿ…

ಧನಂಜಯ ಸ ಬಡಿಗೇರ ಅವರ ‘ಪ್ರೀತಿ ನಮ್ಮ ರೀತಿ’ ಕವಿತೆಯಲ್ಲಿ ಪ್ರೇಯಸಿಯ ನೋಟದ ಕುರಿತು ತಮ್ಮೊಳಗೆ ಉಂಟಾದ ಸಂವೇದನೆಯನ್ನು ಕಡಿಮೆ ಪದಗಳಲ್ಲಿಯೇ ಕಟ್ಟಿಕೊಡುವ ಈ ಕವಿತೆ ಖುಷಿ ನೀಡುತ್ತದೆ.

ಲಂಬವಾದ ನಿನ್ನ ನೋಟದಿ
ಪೋಡಿ ಆಯಿತು ನನ್ನ ಹೃದಯ
ಚೈನಿನಂತೆ ಬಳಕುವ ನಿನಗೆ
ನಾನಾಗುವೆನು ಇನಿಯ

ನವೀನಕುಮಾರ ಗುದಿಗಪ್ಪ ಅವರ ‘ನಾವು ಭೂಮಾಪಕರು’ ಕವಿತೆಯಲ್ಲಿ ಭೂಮಾಪಕರ ಬದುಕು ಬವಣೆಯನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.

ಬಿಸಿಲೆಂಬ ವಿನಾಯಿತಿ ನಮಗಿಲ್ಲ / ದುಡಿಯುವೆವು ರಾತ್ರಿ ಹಗಲೆಲ್ಲ
ದೇಶದ ಗಡಿ ರಕ್ಷಣೆ ಮಾಡುವವನು ಸೈನಿಕ
ಜಮೀನಿನ ಗಡಿ ರಕ್ಷಣೆ / ಮಾಡುವವನು ಭೂಮಾಪಕ

ಮಮತಾ ರಾಮಾಪೂರ ಅವರ ‘ಶಾಮೀಲಾಗುವ ಬಯಕೆ’ ಕವಿತೆಯ ಪುಟ್ಟ ಸಾಲಿನಲ್ಲಿಯೇ ಹಿರಿದಾದ ಅರ್ಥವೊಂದನ್ನು ಹಿಡಿದಿದ್ದಾರೆ.

ನೀನೊಂಥರ ನೋಡಲು ಸಾಧ್ಯ/ ಅಳೆಯಲು ಸಾಧ್ಯವಾಗದ ಅಡಚಣೆ
ಆದರೂ
ಸಂತಸ ತುಂಬುತಿದೆ ನಿನ್ನೆಡೆಗಿನ ಈ ಆಕರ್ಷಣೆ
ಮಂಜುನಾಥ ಮಲ್ಲಾಡದ ಅವರು ತಮ್ಮ “ಆದರ್ಶ ಭೂಮಾಪಕ” ಕವಿತೆಯಲ್ಲಿ ಇಡೀ ಭೂಮಾಪಕನ ಜಾಣ್ಮೆ, ನೈಪುಣ್ಯತೆ, ಸಾಹಸ ಪ್ರವೃತ್ತಿಯನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ.
ಧರೆಯ ಅದ್ಭುತಗಳೆಲ್ಲವು ಚಿತ್ರಿಸಿ
ನಕ್ಷೆಯ ರಚಿಸಿದ ಮುತ್ಸದ್ದಿ;
ಇವ ಕಾಣದ ತಾಣವ ಇಳೆಯೊಳಗಿಲ್ಲ
ಆ ಆದಿತ್ಯನಿಗಿವನೇ ಪ್ರತಿಸ್ಪರ್ಧಿ

‘ಪ್ರತಿಭಾ ಕುಲಕರ್ಣಿ’ ತಮ್ಮ ಪ್ರತಿಭೆಯನ್ನು ನಾಲ್ಕೇ ನಾಲ್ಕು ಸಾಲಿನ ಕವನದ ಮೂಲಕ ಸರ್ವೆ ಸಾಹಿತ್ಯದ ಸೃಜನಶೀಲತೆಯನ್ನು ತೆರೆದಿಟ್ಟಿದ್ದಾರೆ.

ಬಿರುಸಿನಿಂದ ನಡೆಯುತಿದೆ ಸಾಹಿತ್ಯದ ಹಂಗಾಮ
ಸಾಹಿತ್ಯದೊಂದಿಗೆ ಬಲು ಜೋರು
ಸರ್ವೆ ಪದಗಳ ಸಂಗಮ
ಹೊರಹೊಮ್ಮಿದ ಎಲ್ಲ ಲೇಖನ
ಕವಿತೆಗಳಿಗೆ ನನ್ನದೊಂದು ದೊಡ್ಡ ಸಲಾಮು
ಇದುವೇ
ಕನ್ನಡ ಸಾಹಿತ್ಯಕ್ಕೆ ನಮ್ಮೀ ಇಲಾಖೆಯ ಚಿಕ್ಕ ಇನಾಮು.

ಇನ್ನೊಂದು ವಿಶೇಷತೆ ಎಂದರೆ ಇಲ್ಲಿನ ಭಾಗಶಃ ಪ್ರಶಿಕ್ಷಣಾರ್ಥಿಗಳು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅದರಲ್ಲೂ ಇಂಜಿನಿಯರಿಂಗ್ ಓದಿಕೊಂಡು ಬಂದವರು ಬಹಳ. ಕನ್ನಡ ನಾಡು-ನುಡಿಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತದ ಬಗ್ಗೆ ಅಪಾರ ಅಭಿರುಚಿ ಇರಿಸಿಕೊಂಡ ಇವರಿಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಇನ್ನೂ ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತದೆ.

ನಿರಂತರ ಸಾಹಿತ್ಯಾಭ್ಯಾಸ, ಓದು, ವಿಚಾರ ಮಂಥನ ಸಾಗಿದ್ದೇ ಆದಲ್ಲಿ ಕನ್ನಡ ಸಾಹಿತ್ಯಕ್ಕೆ ಅಪರೂಪದ ಕವಿ ಮನಸ್ಸುಗಳ ಸೇರ್ಪಡೆಯಾಗುತ್ತದೆ. ಆ ನಿಟ್ಟಿನಲ್ಲಿ ನಾವು ಪ್ರಶಿಕ್ಷಣಾರ್ಥಿಗಳಲ್ಲಿನ ಗದ್ಯ ಬರವಣಿಗೆಯ ಕೌಶಲವನ್ನು ಗಮನಿಸುವ ಪ್ರಯತ್ನ ಮಾಡಲಾಯಿತು. ಲಲಿತ ಪ್ರಬಂಧ ಶೈಲಿಗೆ ಹೋಲುವ ಹತ್ತಾರು ಲೇಖನಗಳನ್ನು ಇಲ್ಲಿ ಬಳಸಿಕೊಳ್ಳಲಾಯಿತು.

ತಮಾಷೆ ಎನ್ನಿಸುವ ಕೆಲ ಬರಹಗಳು ಓದುಗರ ಮೊಗದಲ್ಲಿ ನಗು ಚಿಮ್ಮುಸುತ್ತಲೇ ಒಂದಿಷ್ಟು ಸಂದೇಶವನ್ನು ನೀಡುತ್ತದೆ. ಈ ಸಂಕಲನದಲ್ಲಿಯ ಪ್ರತಿ ಬರಹದಲ್ಲಿಯೂ ವೃತ್ತಿಯ ಕುರಿತು ಇರುವ ಬದ್ಧತೆ, ಗೌರವ, ಪ್ರಾಮಾಣಿಕತೆಯ ಅಂಶಗಳು ಎದ್ದು ಕಾಣುತ್ತಿದೆ. ಸೂಚನೆ ನೀಡಿದಾಕ್ಷಣ ಸರ್ವೆ ಕನ್ನಡವನ್ನು ಬಳಸಿ ಬರವಣಿಗೆಗೆ ತೊಡಗಿದ ಪ್ರಶಿಕ್ಷಣಾರ್ಥಿಗಳ ತನ್ಮಯತೆ, ಸಕ್ರಿಯ ಪಾಲ್ಗೊಳ್ಳುವಿಕೆ ಉತ್ತಮವಾಗಿತ್ತು. ಅನೇಕಾನೇಕ ವಿಚಾರಗಳು ಅವರ ನಡುವೆ ವಿಮರ್ಶೆಗೊಳಗಾಗಿ ಉತ್ತಮವೆನಿಸುವ ಲೇಖನಗಳು ಈ ಸಂಕಲನಕ್ಕೆ ಸೇರ್ಪಡೆಯಾದವು.

ಈ ಲೇಖನಗಳನ್ನು ಓದುತ್ತಾ ಸಾಗಿದಂತೆ ನನಗೆ ನಿಜಕ್ಕೂ ಖುಷಿಯಾಯಿತು. ಒಂದು ತರಬೇತಿ ಸಂಸ್ಥೆ ಇಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಪ್ರಶಿಕ್ಷಣಾರ್ಥಿಗಳ ಮೇಲೆ ಪ್ರಭಾವ ಬೀರಿದೆ ಎಂದರೆ ಅಲ್ಲಿನ ಬೋಧಕ ಹಾಗೂ ಸಿಬ್ಬಂದಿ ವರ್ಗದ ನಡೆ ಶ್ಲಾಘನೀಯವಾದುದು. ಇಂತಹ ಅಪರೂಪದ ಬಳಗದಲ್ಲಿ ನಾನು ಸಹ ಇದ್ದಿರುವೆನೆಂಬ ತೃಪ್ತಿ ಮತ್ತು ಖುಷಿ ನನ್ನದು. ಈ ಸರ್ವೆ ಸಾಹಿತ್ಯದ ಸಸಿ ನಮ್ಮೊಳಗೆ ಚಿಗುರೊಡೆದ ದಿನದಿಂದ ನಮ್ಮ ಮಾನ್ಯ ಪ್ರಾಚಾರ್ಯರರು. ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಿ ಸೂಕ್ತ ಸಲಹೆಗಳನ್ನು ನೀಡಿದರು. ತರಬೇತಿಯ ಕೆಲಸಗಳ ನಡುವೆಯೂ ಈ ತರಹದ ಸೃಜನಶೀಲ ಕೆಲಸಗಳಿಗೆ ಒತ್ತಾಸೆಯಾಗಿ ನಿಂತ ಸಹೋದ್ಯೋಗಿ ಮಿತ್ರರು ಮತ್ತು ಹಿರಿಯ ಬೋಧಕ ವರ್ಗದವರಿಗೆ ನನ್ನ ಸಲಾಮ್.
ಸಕಾಲಕ್ಕೆ ನಮ್ಮ ಪ್ರೀತಿಯ ಒತ್ತಾಯಕ್ಕೆ ಮಣಿದು ಚೆಂದದ ಕವಿತೆ ಮತ್ತು ಲೇಖನಗಳನ್ನು ಬರೆದು ಕೊಟ್ಟ ಎಲ್ಲ ಕವಿ ಮನಸ್ಸುಗಳಿಗೆ ನನ್ನ ನಮನಗಳು.

‍ಲೇಖಕರು avadhi

9 October, 2018

1 Comment

  1. D.M.Nadaf

    ಸರ್
    ಹಾ.ಮಾ.ನಾಯಕರು ಕಲಬುರಗಿ ವಿ.ವಿ. ಕುಲಪತಿಗಳಾಗಿದ್ದಾಗ ಬ್ಯಾಂಕ್ ಉದ್ಯೋಗಿಗಳಾದ ಯುವ ಲೇಖಕರ ಸಂಪಾದಿತ ಕಥಾ ಸಂಕಲನವೊಂದರ ಬಿಡುಗಡೆ ಮಾಡುತ್ತ್ತ ” ಈ ಸಂಕಲನದ ಕತೆಗಾರರೆಲ್ಲ ಬ್ಯಾಂಕ್ ಉದ್ಯೋಗಿಗಳು, ನೀವಲ್ಲದೇ ಬೇರೆ ಯಾರು ಇಂಥ ಸುಂದರ ಪ್ರೇಮಕತೆಗಳನ್ನು ಬರೆಯಲು ಸಾಧ್ಯ? ಏಕೆಂದರೆ ಈ ಪ್ರೇಮ, ಗೀಮ ಎಲ್ಲ ನಡೆಯೋದು on the bank of the river ತಾನೇ?”ಎಂದು ತಮಾಷೆಗಯಾಗಿ ಮಾತನಾಡಿದ
    ಸಂಗತಿ ಈ ಲೇಖನ ಓದಿದಾಗ ಮರುಕಳಿಸಿತು.
    ಕನ್ನಡ ಸಾಹಿತ್ಯವೆಂದರೆ ಮೇಷ್ಟ್ರುಗಳದ್ದೇ ಮೇಲುಗೈ ಎಂಬ ವಾತಾವರಣದ ಮಧ್ಯೆ ಮೋಜಣಿದಾರರ ಮಜಾ ಮಸ್ತಿಯ ಮಾತುಗಳು ಕೇಳಿಸಿ ಕೊಳ್ಳಲು ಖುಷಿಯಾಗುತ್ತದೆ.
    ಡಿ.ಎಮ್. ನದಾಫ್
    ಅಫಜಲಪುರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading