ಸಕ್ಕರೆ ಇದ್ದಲ್ಲಿ ಇರುವೆಗಳು ಬರುವಂತೆ ಮನೆ ಎಂದ ಮೇಲೆ ಮೂಷಿಕಗಳು ಬರದೇ ಇರುತ್ತವೆಯೇ? ನಾವು ಕರೆಯದಿದ್ದರೂ ಅವು ತಾನಾಗಿಯೇ ಬರುತ್ತವೆ. ಹೀಗೆ ನಮ್ಮ ಮನೆಗೂ ಬಂದು ಸೇರಿಕೊಂಡ ಇಲಿಗಳನ್ನು ‘ಅವು ನಮ್ಮಂತೆ ಜೀವಿಗಳು. ತಮ್ಮ ಪಾಡಿಗೆ ತಾವು ಇರುವುದಾದರೇ ಇರಲಿ’ ಎಂದು ಅವುಗಳ ಇರುವಿಕೆಯನ್ನು ನಾವು ಮೊದಲು ಸಹಜವಾಗಿಯೇ ಸ್ವೀಕರಿಸಿದೆವು. ಅಡುಗೆ ಮನೆಯ ಆಹಾರ ಧಾನ್ಯಗಳು, ಅಕ್ಕಿ ಮೂಟೆ, ತರಕಾರಿಗಳ ಮೇಲೆಲ್ಲ ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದಾಗಲೂ ನಾವು ಹೆಚ್ಚೇನು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ತಮ್ಮ ದಂತೋಕ್ತಿಗಳ ಸಾಮರ್ಥ್ಯವನ್ನು ನಮಗೆ ತಿಳಿಯಪಡಿಸಲು ನಮ್ಮ ಬಟ್ಟೆಗಳ ಮೇಲೆಲ್ಲ ಕಲಾಕೃತಿಯ ಚಿತ್ತಾರಗಳನ್ನು ಬಿಡಿಸತೊಡಗಿದಾಗ ನಾವು ಇವುಗಳಿಗೆ ಕೊಟ್ಟ ಸ್ವಾತಂತ್ರ್ಯದ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಾಯಿತು. ಪ್ರಾಣಿಹಿಂಸೆ ಮಹಾಪಾಪ ಎಂಬ ಬಸವಣ್ಣನವರ ತತ್ವದಂತೆ ಅವುಗಳಿಗೆ ಹೊಡೆಯದೆ ಬಡಿಯದೆ ನಾನಾ ಕಸರತ್ತುಗಳನ್ನು ಮಾಡಿ ಜೀವಂತವಾಗಿ ಮನೆಯಿಂದ ಹೊರಗೋಡಿಸಿದರೂ ಅದು ಹೇಗೋ ಮತ್ತೆ ಬಂದು ಸೇರಿಕೊಂಡು ‘ನಿಜವಾದ ಕಲಾವಿದರಿಗೆ ಯಾರ ಪ್ರೋತ್ಸಾಹದ ಅಗತ್ಯವೂ ಇಲ್ಲ’ ಎಂದು ನನಗೇ ಸೆಡ್ಡು ಹೊಡೆಯತೊಡಗಿದವು. ನಮ್ಮ ಪ್ರಾಣಿದಯಾ ಉದಾರತನವನ್ನು ಹೀಗೆ ದುರಪಯೋಗ ಪಡಿಸಿಕೊಂಡ ಇಲಿಗಳು ತಮ್ಮ ವಂಶಾಭಿವೃದ್ಧಿಯನ್ನು ನಮ್ಮ ಕಣ್ಮುಂದೆ ಓಡಾಡಿಸಲು ಅದನ್ನು ನೋಡಿಕೊಂಡು ಸುಮ್ಮನಿರಲು ಹೇಗೆ ಸಾಧ್ಯ?
‘ಕಷ್ಟಪಟ್ಟು ಮನೆ ಬಾಡಿಗೆ ಕಟ್ಟುತ್ತಿರುವವರು ನಾವು. ಲಾಡ್ಜಿಂಗ್ ಜೊತೆ ಬೋರ್ಡಿಂಗ್ ಸುಖ ಅನುಭವಿಸುತ್ತಿರುವವರು ನೀವೇ?’ ಎಂದು ರೋಸತ್ತು ಇವುಗಳ ದಾಳಿಗೆ ಪ್ರತಿದಾಳಿ ಹೂಡಲು ಎರಡು ಮುದ್ದಾದ ಬೆಕ್ಕಿನ ಮರಿಗಳನ್ನು ಹಿಡಿದು ತಂದೆವು. ಇವು ಬಂದ ಸ್ವಲ್ಪ ದಿನಗಳಲ್ಲೇ ಇಲಿಗಳ ಸಂತತಿ ಮನೆಯಿಂದ ದೂರಾಗಿ ಸಂಪೂರ್ಣವಾಗಿ ನಮ್ಮ ಯೋಜನೆ ಫಲಕಾರಿಯಾಯಿತೆಂದು ನಿಟ್ಟುಸಿರು ಬಿಟ್ಟೆವು. ಮನೆಗೆ ಬಂದ ಹೊಸತರಲ್ಲಿ ಯಾವುದೋ ಅನ್ಯಗ್ರಹ ಜೀವಿಗಳಂತೆ ನಮ್ಮನ್ನು ಕಾಣುತ್ತಿದ್ದ ಬೆಕ್ಕಿನ ಮರಿಗಳು ಕ್ರಮೇಣ ನಮ್ಮ ಮನೆಯ ಪರಿಸರಕ್ಕೆ ಹೊಂದಿಕೊಂಡವು. ನಮ್ಮ ಹಾಸಿಗೆ ಬಟ್ಟೆಗಳು ಸೇರಿದಂತೆ ಎಲ್ಲೆಂದರಲ್ಲಿ ತಮ್ಮ ಮೂತ್ರಾಭಿಷೇಕದ ಸಿಂಚನವನ್ನು ಸಿಂಪಡಿಸತೊಡಗಿದಾಗ ಇವುಗಳಿಗೆ ನಾಗರೀಕತೆಯ ಪ್ರಥಮ ಪಾಠವನ್ನು ಕಲಿಸಲೇಬೇಕಾಯಿತು. ಒಂದು ಪ್ಲಾಸ್ಟಿಕ್ ಪ್ಲೇಟಿನಲ್ಲಿ ಮಣ್ಣನ್ನು ತುಂಬಿ ಹಾಲ್’ನ ಮೂಲೆಯಲ್ಲಿಟ್ಟು ಇವುಗಳು ಅಲ್ಲಿಯೇ ಹೋಗಿ ತಮ್ಮ ಬಹಿರ್ದೆಶೆಗಳನ್ನು ಮಾಡುವದ ಕಲಿಸಲು ಯಶಸ್ವಿಯೇನೋ ಆದೆವು. ಆ ನಂತರ ಈ ಕೆಲಸವೂ ಬೇಸರವಾಯಿತು. ಸರ್ಕಾರವೇ ಈ ಪದ್ದತಿಯನ್ನು ನಿಷೇಧಿಸಿರುವದರಿಂದ ನಾವು ಹೊರುವುದು ಸರಿಯಲ್ಲವೆಂದು ಇವುಗಳು ತಮ್ಮ ಅಪರಕರ್ಮಗಳನ್ನು ಮನೆಯಿಂದ ಹೊರಗೆ ಮುಗಿಸಿಕೊಂಡು ಬರಲಿ ಎಂದು ಹೊರಗೆ ಕಳಿಸತೊಡಗಿದೆವು. ಆದರೆ ಇವು ಮತ್ತೆ ಮನೆಯೊಳಗೆ ಬಂದು ತಮ್ಮ ಹಳೇ ಚಾಳಿ ಮುಂದುವರೆಸುತ್ತಿದ್ದವು! ‘ಹೊರಗೆಲ್ಲಾ ತಿರುಗಾಡಿಕೊಂಡು ಇಲ್ಲಿ ಬಂದು ಮಾಡಲು ನಮ್ಮ ಮನೆಯನ್ನೇನು ಶೌಚಾಲಯವೆಂದುಕೊಂಡಿರಾ?’ ಎಂದು ಪ್ರಶ್ನಿಸಿದರೆ ನಿನ್ನ ಪ್ರಶ್ನೆಗೆ ಇದೇ ನಮ್ಮ ಉತ್ತರ ಎಂದು ನನ್ನೆಡೆಗೆ ಅಸಡ್ಡೆಯಿಂದ ಅಂಡು ತಿರುಗಿಸಿಕೊಂಡು ಹೊರಟು ಬಿಡುತ್ತಿದ್ದವು. ಮನುಷ್ಯರಾದವರಿಗೆ ಇದಕ್ಕಿಂತ ಅವಮಾನ ಬೇಕೆ?
ಮನೆಯವರೆಲ್ಲಾ ಊರಿಗೆ ಹೋದಾಗ ಇವುಗಳ ಯೋಗಕ್ಷೇಮ ಊಟೋಪಚಾರಗಳನ್ನು ನೋಡಿಕೊಳ್ಳಲು ವಾರಗಟ್ಟಲೇ ನಾನೊಬ್ಬನೇ ಮನೆಯಲ್ಲಿ ಉಳಿದೆ. ಇತ್ತೀಚೆಗೆ ಟೀ ಕುಡಿಯುವ ಚಟವನ್ನು ಅತಿಯಾಗಿ ಹಚ್ಚಿಕೊಂಡಿದ್ದರಿಂದ ಅದರಿಂದ ಪಾರಾಗಲು ನಾನೊಬ್ಬನೇ ಇದ್ದಾಗ ಮನೆಗೆ ಹಾಲು ತರುವುದನ್ನೇ ನಿಲ್ಲಿಸಿಬಿಡಬೇಕೆಂದಿದ್ದೆ. ಇವುಗಳ ದೆಸೆಯಿಂದಾಗಿ ಹಾಲು ತಂದು ಐದೂ ಬಾರಿ ಕುಡಿಯುತ್ತಿದ್ದವನು ಹತ್ತು ಬಾರಿ ಟೀ ಕುಡಿಯುವಂತಾಯಿತು. ಹೊರಗೆಲ್ಲಾದರೂ ನಾಯಿಗಳು ಬೊಗಳಿದ ಶಬ್ಧವಾದರೇ ಸಾಕು ಮಾಡುತ್ತಿರುವ ಕೆಲಸವನ್ನು ಅರ್ಧಕ್ಕೆ ಬಿಟ್ಟು ಕಲ್ಲು ಹಿಡಿದು ನಾಯಿಗಳನ್ನು ಓಡಿಸುವುದೇ ನನಗೆ ನಿತ್ಯ ಕಾಯಕವಾಗಿಬಿಟ್ಟಿತು. ಮನೆ ಸುತ್ತಮುತ್ತಲಿನ ಪೊದೆಗಳಲ್ಲಿ ಅವಿತುಕೊಂಡಿರುತ್ತಿದ್ದ ಇವುಗಳನ್ನು ನಾಯಿಗಳ ಬಾಯಿಂದ ತಪ್ಪಿಸಿ ಹಿಡಿದುಕೊಂಡು ಬರುವುದನ್ನು ನೋಡಿದವರು ‘ಇವನ್ಯಾರೋ ಬೆಕ್ಕು ಹಿಡಿಯುವವನಿರಬೇಕು’ ಎಂದು ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಿದ್ದರು. ಕೆಲವೊಮ್ಮೆ ಮಧ್ಯರಾತ್ರಿಯವರೆಗೂ ಶೂಟಿಂಗ್ ಮುಗಿಸಿ ಒಬ್ಬನೇ ರಸ್ತೆಯಲ್ಲಿ ಬರುವಾಗ ನನಗೇನು ಮಾಡದಿರಲು ನನ್ನ ಪರಿಚಯ ನಾಯಿಗಳಿಗಿರುವುದು, ಅವುಗಳ ಸ್ನೇಹ ನಾನು ಸಂಪಾದಿಸುವುದು ಅತ್ಯಗತ್ಯವಾಗಿತ್ತು. ಹಾಗಾಗಿ ನಮ್ಮ ಏರಿಯಾ ನಾಯಿಗಳು ಸಿಕ್ಕಾಗಲೆಲ್ಲಾ ಅವುಗಳಿಗೆ ಕುಶಲವೇ ಕ್ಷೇಮವೇ ಎಂದು ಕೇಳುವುದು, ಅವು ಬಾಲ ಅಲುಗಾಡಿಸಿ ಹಾಯ್ ಹೆಲೋ ಹೇಳುವುದು ನಡೆದೇ ಇತ್ತು. ಇಂತಹ ನಮ್ಮ ಅಪೂರ್ವ ಸ್ನೇಹಲೋಕವನ್ನು ಯಕಶ್ಚಿತ್ ಈ ಎರಡು ಬೆಕ್ಕುಗಳು ಹಾಳು ಮಾಡುತ್ತಿವೆಯಲ್ಲ ಎಂದು ಕೋಪ ಬರದೇ ಇರಲಿಲ್ಲ. ಇದು ಸಾಲದೆಂಬಂತೆ ಪ್ರಾಣಿಪ್ರಿಯೆ ನಮ್ಮಮ್ಮ ಫೋನ್ ಮಾಡಿದಾಗಲೆಲ್ಲ ಮೊದಲು ನನ್ನ ಬಗ್ಗೆ ವಿಚಾರಿಸದೆ ‘ಬೆಕ್ಕುಗಳು ಹೇಗಿವೆ? ಅವುಗಳಿಗೆ ಊಟ ಹಾಕಿದೆಯಾ? ಅವುಗಳ ಫೋಟೋ ತೆಗೆದು ಕಳಿಸು’ ಎಂದು ಕೇಳಲಾಗಿ ನನಗೆ ಇವುಗಳ ಮೇಲೆ ಒಂದು ರೀತಿಯ ಸವತಿ ಮಾತ್ಸರ್ಯ ಬೆಳೆಯತೊಡಗಿತು.
ಕೆಲಸ ಮುಗಿಸಿ ಮನೆಗೆ ಬಂದಾಗ ಇವುಗಳೆರಡು ಸೇರಿ ದೇಶದ ರಾಜ ತಾಂತ್ರಿಕ ರಹಸ್ಯವನ್ನು ಹುಡುಕುವವರಂತೆ ಮನೆಯ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿರುತ್ತಿದ್ದವು. ಸಾಲದಕ್ಕೆ ನನ್ನ ವೈಯಕ್ತಿಕ ಉಡುಪುಗಳ ಮೇಲೆಲ್ಲ ತಮ್ಮ ಸುಗಂಧಭರಿತ ಹಸಿ ಹಸಿಯಾದ ಹಸ್ತಾಕ್ಷರವನ್ನು ಹಾಕಿರುತ್ತಿದ್ದವು. ಇದನ್ನೆಲ್ಲಾ ನೋಡಿ ಒಮ್ಮೊಮ್ಮೆ ಕೋಪ ಉಕ್ಕೇರಿ ಹೊಡೆಯಲು ಹೋದರೆ ತಮ್ಮ ಅಮಾಯಕ ಮುಗ್ಧತನವನ್ನು ಅಭಿನಯಿಸಿ ಇವುಗಳಿಗೆ ಏನು ಮಾಡುಬೇಕೆಂದು ತಿಳಿಯದಂತೆ ನನಗೆ ಕಕ್ಕಾಬಿಕ್ಕಿಯಾಗಿಸುತ್ತವೆ. ನಿಜಕ್ಕೂ ಇವು ಮಾರ್ಜಾಲ ಸಂನ್ಯಾಸಿಗಳೇ! ಈಗಂತೂ ಮಲಗಿದರೆ ಎದೆಯೇರಿ, ಕುಳಿತರೆ ತೊಡೆಯೇರಿ, ಇನ್ನು ಸುಮ್ಮನಿದ್ದರೆ ಭುಜವೇರಿ ಕುಳಿತುಕೊಳ್ಳುವ ಮಟ್ಟಕ್ಕೆ ಬಂದು ನಿಂತಿವೆ. ತಲೆಯೇರುವ ದಿನಗಳೂ ದೂರಿವಿಲ್ಲವೇನೋ. ಇಲಿಗಳ ಕಾಟದಿಂದ ಬೇಸತ್ತು ಬೆಕ್ಕನೇನೋ ತಂದೆವು. ಈಗ ಇವುಗಳ ಕಾಟದಿಂದ ಹೇಗೆ ತಪ್ಪಿಸಿಕೊಳ್ಳುವುದೆಂದು ತಿಳಿಯದಾಗಿದೆ..








Prashanth, sulabhavagi odisikondu hoguva shaili. Tumba istavaytu, matte matte bareyuttiri.