ಇನ್ನೊಬ್ಬ ಪುಟ್ಟಣ್ಣಯ್ಯನವರನ್ನು ಸೃಷ್ಟಿಸಿಕೊಳ್ಳುವ ಪರಿಸರದಲ್ಲಿ ನಾವಿಲ್ಲ..!

ಸಿ.ಎಸ್.ದ್ವಾರಕಾನಾಥ್

ಪುಟ್ಟಣ್ಣಯ್ಯನವರ ಅನಿರೀಕ್ಷಿತ ವಿದಾಯ ನನ್ನನ್ನು ತಲ್ಲಣಗೊಳಿಸಿತು!

ಹೊರನೋಟಕ್ಕೆ, ಕಬ್ಬಿಣದಲ್ಲಿ ಕಡೆದಂತಿದ್ದ ಪುಟ್ಟಣ್ಣಯವರಿಗೂ ಸಾವು ಬರುತ್ತದೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ..!!

ಕೇವಲ ಎರಡು ವಾರದ ಹಿಂದೆ ಶಾಸಕರ ಭವನದಲ್ಲಿ ‘ಮಹಾಮೈತ್ರಿ’ ಯ ಸಭೆ.. ದಿನಪೂರ್ತಿ‌ ದೇವನೂರು, ಹಿರೇಮಠ, ರಾಘವೇಂದ್ರ ಕುಷ್ಟಗಿಗಳಂತಹ ಹಿರಿಯರೊಂದಿಗೆ ಇದ್ದು ಮಾತಾಡುತ್ತಾ, ನಮಗೆಲ್ಲ ಊಟ ಕೊಡಿಸಿ, ಮುಂದಿನ‌ ಸಭೆಯಲ್ಲಿ ‘ಯಾರುಯಾರದು ಏನೇನು ಜವಾಬ್ದಾರಿ..?’ ಎಂದಾಗ “ನನ್ನದು ಮಾತ್ರ ಊಟದ ಜವಾಬ್ದಾರಿ..” ಎಂದು ನಗಿಸುತ್ತಾ. “ಯಾರು ಏನೇ ಮಾಡಲಿ ಅನ್ನ ನೀಡುವುದಷ್ಟೇ ನನ್ನ ಕೆಲಸ..” ಎಂಬಂತೆ ತನ್ನ ಪಾಡಿಗೆ ತನ್ನ ಕಾಯಕ ಮಾಡುವ ರೈತನ ಸಂಕೇತದಂತೆ ಪುಟ್ಟಣ್ಣಯ್ಯ ಅಂದು ಮಾತಾಡಿದಂತಿತ್ತು…

ಸುಮಾರು ಒಂದು ದಶಕದ ಹಿಂದೆ ನಮ್ಮ ಜಿಲ್ಲೆಯಲ್ಲಿ ರೈತ ಸಂಘ ಪ್ರಾರಂಬಿಸಲು ಬಂಗಾರಪೇಟೆಗೆ‌ ಕರೆದೊಯ್ದಿದ್ದೆ… ಅಲ್ಲಿ ಕಮುನಿಷ್ಟ್ ರೈತ ಸಂಘ ಮೊದಲಿಂದಲೂ ಇದ್ದ ಕಾರಣಕ್ಕೆ ನಮ್ಮ ಜಿಲ್ಲೆಯಲ್ಲಿ ರೈತ ಸಂಘ ಮಾಡುವ ಪ್ರಯತ್ನ ಸಪಲವಾಗಲಿಲ್ಲ

ಆದರೆ, ಅಂದು ಪುಟ್ಟಣ್ಣಯ್ಯನವರು ಮಹಿಳೆಯರ ದುಡಿಮೆಯ ಬಗ್ಗೆ ಮಾಡಿದ ಬಾಷಣ ಅಂತೂ ಇನ್ನೂ ನನ್ನ ಮನಸಲ್ಲಿದೆ! “ದಿನಪೂರ್ತಿ ದುಡಿದು, ಕೂಲಿ ಕೂಡ ಪಡೆಯದೆ, ರಜೆಯಿಲ್ಲದೆ, ಯಾವ ಸವಲತ್ತನ್ನೂ ಪಡೆಯದ ಕಾಯಕ ಜೀವಿ ನಮ್ಮ ಗೃಹಸ್ಥ ಮಹಿಳೆ..‌” ಎಂದು ಪುಟ್ಟಣ್ಣಯ್ಯನವರು ತಮ್ಮದೇ ಶೈಲಿಯಲ್ಲಿ ಮಾಡಿದ ಭಾಷಣವನ್ನು ನಮ್ಮ ಹೆಣ್ಣುಮಕ್ಕಳು ಇಂದಿಗೂ ಮರೆತಿಲ್ಲ!

ಹಸಿರು ಲೈಟಿನ ಕಾರಲ್ಲಿ ಕುಂತು ಪುಟ್ಟಣ್ಣಯ್ಯನವರೊಂದಿಗೆ ಮಾಡಿದ ಪಯಣ ನನಗೆ ವಿಚಿತ್ರ ‘ಥ್ರಿಲ್’ ನೀಡಿತ್ತು.!? “ಸರ್.. ಕಾರಿನ ಮೇಲೆ ಕೆಂಪು ಲೈಟ್ ಹಾಕಿಕೊಳ್ಳೋದು ಸರ್ಕಾರದ ಮಂತ್ರಿಗಳು, ಹಿರಿಯ ಅಧಿಕಾರಿಗಳಲ್ಲವೆ..? ನೀವು ಹಾಕಿಕೊಳ್ಳೋದು ಕಾನೂನು ಬಾಹಿರವಲ್ಲವೆ?” ಎಂದಿದ್ದೆ..‌

“ನೋಡಿ ಈ ಮಂತ್ರಿ, ಅಧಿಕಾರಿ ಎಲ್ಲಾ ಅನ್ನ ತಿಂದೇ ಬದುಕಬೇಕು..‌ ಅಂತವರು ಕೆಂಪು ಲೈಟಾಕಿಕೊಂಡು ಓಡಾಡಬಹುದು ಇವರಿಗೆ ಅನ್ನ ನೀಡುವ ಒಡೆಯರಾದ ನಾವು ಹಸಿರು ದೀಪ ಹಾಕಿಕೊಂಡು ಓಡಾಡಬಾರದೆ..? ಅದು ಹೇಗೆ ಕಾನೂನು ಬಾಹಿರ..? ನಿಮ್ಮ ಕಾನೂನಲ್ಲಿ ಹಸಿರು ಲೈಟು ಹಾಕ್ಕೋಬಾರದು ಅಂತಿದೆಯೇ.. ತೋರಿಸಿ ನೋಡೋಣ..” ಎಂದು ನಕ್ಕಿದ್ದರು.

ನಾನು ತಣ್ಣಗಾದೆ! ಹೋರಾಟದ ಹಾದಿಗಳು ಕಾನೂನಿರಲಿ ಮತ್ತೇನೇ ಇರಲಿ ಎಲ್ಲಾ ವಾಸ್ತವದ ಪಾಠಗಳನ್ನು ಕಲಿಸಿಬಿಡುತ್ತವೆ.!

ಅರೇಳು ವರ್ಷಗಳ ಹಿಂದೆ ಮಂಡ್ಯದಲ್ಲೊಂದು ಸಭೆ.. ಪುಟ್ಟಣ್ಣಯ್ಯನವರೊಂದಿಗೆ ವೇದಿಕೆಯ ಮೇಲಿದ್ದೆ. ಯುವನಾಯಕನೊಬ್ಬ ಖದರ್ ಬಟ್ಟೆಗಳನ್ನು ಧರಿಸಿ ತಮ್ಮ ಹಿಂಬಾಲಕರೊಂದಿಗೆ ಜೈಕಾರ ಹಾಕಿಸಿಕೊಳ್ಳುತ್ತಾ ಬಂದರು.‌

ಪುಟ್ಟಣ್ಣಯ್ಯ ನನ್ನ ಕಡೆ ವಾಲಿ ‘ಯಾರು..?’ ಅಂದರು. ನಾನು ‘ವರ್ತೂರು ಪ್ರಕಾಶ್’ ಎಂದೆ.. ತಕ್ಷಣ ‘ಏನು ಕೆಲ್ಸ ಮಾಡ್ತಾನೆ’ ಎಂದರು ‘ಸಾರ್ ಅವರು ಕೋಲಾರದ ಎಮ್ಮೆಲ್ಲೆ.. ಈಗ ಒಳಚರಂಡಿ ಮಂಡಳಿ ಅದ್ಯಕ್ಷ’ ಎಂದೆ… “ಏನೋಪ್ಪ ನಾನು ನೋಡಿಲ್ಲ..’ ಅಂದರು.

ವರ್ತೂರು ತಮ್ಮ ಬಾಷಣದಲ್ಲಿ ದೇವೇಗೌಡರನ್ನು ಮನಸ್ಸಲ್ಲಿಟ್ಟುಕೊಂಡು ಪರೋಕ್ಷವಾಗಿ ಒಂದು ಸಮುದಾಯದ ಬಗ್ಗೆಯೇ ಠೇಂಕಾರದಿಂದ ಮಾತಾಡತೊಡಗಿದರು.. ತಕ್ಷಣ ಮದ್ಯದಲ್ಲಿ ತಡೆದ ಪುಟ್ಟಣ್ಣಯ್ಯ “ನೋಡ್ರಿ.. ಮಾತಾಡೋದಿದ್ರೆ ದೇವೇಗೌಡರ ಹೆಸರೇಳಿಯೇ ಮಾತಾಡಿ ಅದು ಬಿಟ್ಟು ಒಂದು ಸಮುದಾಯವನ್ನೇ ಗುರಿಮಾಡಿ ಅನಾವಶ್ಯಕವಾಗಿ ಮಾತಾಡಬೇಡಿ.. ಇದು ಮಂಡ್ಯ.. ಇಲ್ಲಿ ಅವೆಲ್ಲ ನಡೆಯಲ್ಲ..” ಎಂದರು. ವರ್ತೂರು ತಡಬಡಾಯಿಸಿ ಬಾಷಣ ಮುಗಿಸಿ ಕಾರು ಹತ್ತಿದರು..

ಈ ರೀತಿಯ ಅನೇಕ ಘಟನಾವಳಿಗಳು ನೆನಪಾಗುತ್ತವೆ..

ಈಗಿನ ಅಸೆಂಬ್ಲಿಯಲ್ಲಿ ಇದ್ದ ಒಂಟಿ ದ್ವನಿ‌ ಪುಟ್ಟಣ್ಣಯ್ಯ.. ಕೊಂಚ ತಮಾಷೆ, ಮೇಲ್ನೋಟಕ್ಕೆ ಕೊಂಚ ಉಡಾಫೆಯಂತೆ ಕಂಡರೂ ವಿಷಯವೊಂದರ ಬಗ್ಗೆ ಮಾತಾಡುವ ನಿಕರ ಮಾಹಿತಿ ಮತ್ತು ಛಾತಿ ಇದ್ದದ್ದು ಪುಟ್ಟಣ್ಣಯ್ಯನವರಿಗೆ ಮಾತ್ರ.. ಅವರ ದ್ವನಿಯಲ್ಲೇ ಒಂದು ರೀತಿಯ ಗತ್ತಿತ್ತು..! ಪ್ರೊಫೆಸರ್ ರವರಿಂದ ಪುಟ್ಡಣ್ಣಯ್ಯ ಪ್ರಭಾವಿತರಾಗಿರುವುದು ಸ್ಪಷ್ಟವಾಗಿ ಕಾಣುತಿತ್ತು.. ಸದನದಲ್ಲಿ ನಮಗಿದ್ದದ್ದೇ ಒಂದು ದ್ವನಿ.. ಅದನ್ನೂ ಕಳಕೊಂಡೆವು…

ಇನ್ನೊಬ್ಬ ಪುಟ್ಟಣ್ಣಯ್ಯನವರನ್ನು ಸೃಷ್ಟಿಸಿಕೊಳ್ಳುವ ಪರಿಸರದಲ್ಲಿ ನಾವಿಲ್ಲ..!

‍ಲೇಖಕರು avadhi

February 21, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: