ಅಮೆರಿಕಾದಲ್ಲಿರುವ ರವಿ ಕೃಷ್ಣಾ ರೆಡ್ಡಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ವಿಕ್ರಾಂತ ಕರ್ನಾಟಕದಲ್ಲಿ ಸತತವಾಗಿ ಬರೆದ ತಮ್ಮ ಅಂಕಣ ಬರಹಗಳಿಗೆ ಈಗ ಕೇಳು ಪುಸ್ತಕದ ರೂಪು ನೀಡಿದ್ದಾರೆ. ಕನ್ನಡದಲ್ಲಿ ಅಪರೂಪವಾಗಿದ್ದ ಕೇಳು ಪುಸ್ತಕ ಈಗ ರೆಕ್ಕೆ ಪಡೆದುಕೊಳ್ಳುತ್ತಿದೆಯೇ?.
ತಮ್ಮ ಸಾಹಸದ ಬಗ್ಗೆ ಅವರೇ ಬರೆದ ವಿವರ ಇಲ್ಲಿದೆ. ರವಿ ಕೃಷ್ಣಾ ರೆಡ್ಡಿ ಅವರಿಗೆ ಅಭಿನಂದನೆಗಳು. ಇಂತಹ ಸಾಹಸಗಳು ಇನ್ನಷ್ಟು ಹೆಚ್ಚಲಿ.
ಸ್ನೇಹಿತರೆ,
ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಆಡಿಯೊ ಪುಸ್ತಕ ಸಂಸ್ಕೃತಿ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲವೆ ಇಲ್ಲ. ನಮ್ಮಲ್ಲಿ ಆಗಾಗ ಇನ್ಸ್ಪಿರೇಷನಲ್ ಆಡಿಯೊ ಕ್ಯಾಸೆಟ್ಗಳು ಬಿಡುಗಡೆಯಾಗುತ್ತವೆ ಎನ್ನುವುದನ್ನು ಬಿಟ್ಟರೆ ಇಡೀ ಗದ್ಯ ಪುಸ್ತಕವೆ ಆಡಿಯೊ ಆಗಿದ್ದು ಇಲ್ಲ. ಇತ್ತೀಚೆಗೆ ತಾನೆ ಕವಿ-ಪತ್ರಕರ್ತ ಜಿ.ಎನ್. ಮೋಹನ್ರವರು ತಮ್ಮ “ಪ್ರಶ್ನೆಗಳಿರುವುದು ಷೇಕ್ಸ್ಪಿಯರನಿಗೆ” ಕವನಸಂಕಲನದ ಕವನಗಳನ್ನು ಹಲವಾರು ಕನ್ನಡ ಸಾಹಿತಿಗಳಿಂದ ವಾಚಿಸಿ, ಅದನ್ನೆ ಸಿ.ಡಿ. ಮಾಡಿದ್ದಾರೆ. ಆ ನಿಟ್ಟಿನಲ್ಲಿ ಇದೇ ಮೊದಲ ಪ್ರಯತ್ನವೇನೊ.
ಕೆಂಟ್ ಕೀತ್ರವರು ಇಂಗ್ಲಿಷಿನಲ್ಲಿ ಬರೆದಿರುವ “Anyway – The Paradoxical Commandments” ಎಂಬ ಪುಸ್ತಕವಿದೆ. ಈ ಪುಸ್ತಕವನ್ನು ನಾನು “ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ.” ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದೇನೆ. ಇದು ಸುಮಾರು 14 ವಾರಗಳ ಕಾಲ “ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಈಗ ಅದನ್ನೆ ನಾನು ಆಡಿಯೊ ಪುಸ್ತಕವಾಗಿ ಪರಿವರ್ತಿಸಿದ್ದೇನೆ.
ಪ್ರೀತಿಯಿಂದ,
ರವಿ…






ಮಾನ್ಯರೆ,
ಅವಧಿಯಲ್ಲಿ ನನ್ನ ಪ್ರಯತ್ನದ ಬಗ್ಗೆ ಬರೆದಿದ್ದಕ್ಕೆ ಧನ್ಯವಾದಗಳು.
ಅಂದ ಹಾಗೆ, ನಾನು ನಿಮ್ಮ ಈ ಬ್ಲಾಗನ್ನು ಬಹುಶಃ ಮೊದಲ ದಿನದಿಂದಲೂ ಓದುತ್ತ ಬಂದಿದ್ದೇನೆ. ಯಾರು ಯಾವ ಹೆಸರಿನಲ್ಲಿ ಬೇಕಾದರೂ ಕಾಮೆಂಟ್ ಹಾಕಬಹುದಾದ ಮತ್ತು ಕೆಲವು ಮುಖೇಡಿಗಳು ಆಗಾಗ ಅದನ್ನು ಕೆಟ್ಟದಾಗಿ ಬಳಸಿಕೊಳ್ಳುವ ರೀತಿಯಿಂದಾಗಿ, ನಾನು ಎಷ್ಟೇ ಬ್ಲಾಗುಗಳನ್ನು ಓದಿದರೂ ಕಾಮೆಂಟ್ ಹಾಕುವುದಿಲ್ಲ. ಹಾಗೆಯೆ, ಈ ಅವಧಿ ನಡೆಸುತ್ತಿರುವ ತಾವು ಯಾರು ಎಂದು ನನಗೆ ಗೊತ್ತಿಲ್ಲ. ಇಂತಹ ಸಮಯದಲ್ಲಿಯೂ ಯಾರಿಗೆ ಕಳುಹಿಸುತ್ತಿದ್ದೇನೆ ಎಂದು ಗೊತ್ತಿಲ್ಲದೆ ಇಮೇಯ್ಲ್ ಕಳುಹಿಸುವುದೂ ನನಗೆ ಕಷ್ಟದ ಕೆಲಸ. ನಿಮ್ಮ ಪ್ರಯತ್ನವನ್ನು ಅಭಿನಂದಿಸಬೇಕು ಎಂದು ಅಂದುಕೊಂಡರೂ ಈ ಕಾರಣಕ್ಕಾಗಿಯೆ ಅದನ್ನು ನಾನು ಮಾಡಿರಲಿಲ್ಲ. ಈಗ ನೀವು ನನ್ನ ಪ್ರಯತ್ನದ ಬಗ್ಗೆ ಬರೆದಿದ್ದರಿಂದ, ಧನ್ಯವಾದ ಹೇಳದೆ ಇರುವುದು ತಪ್ಪು ಎಂದು ಬರೆಯುತ್ತಿದ್ದೇನೆ.
ಮತ್ತೊಮ್ಮೆ ಹೇಳಬೇಕೆಂದರೆ, ಅವಧಿ ನಾನು ಪದೆಪದೆ ಸಂದರ್ಶಿಸುವ ಬ್ಲಾಗ್. ಒಬ್ಬಿಬ್ಬರ ಲೇಖನಗಳನ್ನು ಬಿಟ್ಟು ಇಲ್ಲಿ ಬಂದಿರುವ/ಬರುವ ಲೇಖನಗಳನ್ನೆಲ್ಲ ಓದಿದ್ದೇನೆ/ಓದುತ್ತೇನೆ. ಹಾಗಾಗಿ, ನಾನು ನಿಮಗೆ ಕೃತಜ್ಞ.
ನಮಸ್ಕಾರ,
ರವಿ…