ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನೊಂದು ಕತೆ ಇಲ್ಲಿಯೇ ಎಲ್ಲೋ ಶುರುವಾದ ಹಾಗೆ ಅನ್ನಿಸುವ ಹಾಗಿತ್ತು..

ಶ್ರೀಮದಾಗುಂಬಾಪುರದ ಸಂಗತಿಗಳು

ನಾಗಶ್ರೀ ಶ್ರೀರಕ್ಷಾ 

ಒಂದು ಊರು, ಊರ ಬೀದಿಯ ದಿಕ್ಕುದಿಕ್ಕುಗಳಲ್ಲಿ, ಬಿಸಿಲ ಝಳಕ್ಕೆ ಓಡಾಡುವ ಜನರು, ತಣ್ಣಗೆ ಹರಿವ ಹೊಳೆತೊರೆಗಳು, ಪೇಟೆಯ ಬದಿಯಲ್ಲಿ ಕಾಣುವ ನಾರದ ಮುನಿ ಚಿಕನ್ ಸ್ಟಾಲ್, ವೀರಭದ್ರೇಶ್ವರ ಹೋಟೆಲು, ಅಥವಾ ಪೇಟೆಯ ಮಾಲ್ ನಂತೆ ತೋರುವ ಹಳ್ಳಿಯ ಜಗಮಗ ಅಂಗಡಿಗಳು ಆ ಊರನ್ನು ಲವಲವಿಕೆಯಿಂದ ಇಟ್ಟಿತ್ತು. ಅಂತರ ಘಟ್ಟಮ್ಮನೋ, ಕರಿಯಮ್ಮನದೋ ಜಾತ್ರೆ ಮುಗಿಸಿ ಊರತುಂಬಾ  ಜಾತ್ರೆಯ ಹೋರ್ಡರ್ ಗಳು, ಕಸದ ರಾಶಿಗಳು, ಮದುವೆ ಮುಗಿದ ಮಂಟಪದ ಹಾಗೆ, ಸುಸ್ತು ಹೊಡೆದ ಮದುಮಕ್ಕಳಂತೆ ತೋರುತ್ತಿತ್ತು. ಹಬ್ಬ ಮುಗಿಸಿ ಹೊಲಕ್ಕೆ ಹೊರಟ ಅಲ್ಲಿನ ದ್ಯಾವಪ್ಪನೋ, ತಿಪ್ಪೇಸ್ವಾಮಿಯೋ ಚೆನ್ನಮ್ಮನೋ ಪೇಟೆಯಿಂದ ಭರ್ರನೆ ಸಾಗುವ ಕಾರು ಬಸ್ಸುಗಳ ನಡುವೆ ತಾವು ಕಳೆದುಕೊಂಡ ಹೊಲದ ದಾರಿಗಳನ್ನು ನೋಡುತ್ತಾ, ದೊಡ್ಡ ರಸ್ತೆಯನ್ನು ದಾಟಲು ಒದ್ದಾಡುತ್ತಿದ್ದರು. ಇದೆಲ್ಲಾ ಮಾಮೂಲು ಎಂಬಂತೆ, ಒಮ್ಮೆ ಕಾದು, ಇನ್ನೊಮ್ಮೆ ಆಗುವುದಾಗಲಿ ಎಂದು ರಸ್ತೆಗೆ ಇಳಿದೇ ಬಿಟ್ಟರು. “ಸಾಯಕ್ಕೆ ನನ್ ಕಾರೇ ಬೇಕೇನ್ರಿ’ ಎಂದು ಬಯ್ಯುವ ಕಾರು ಚಾಲಕರನ್ನು ನೋಡಿ ಪೆದ್ದಾಗಿ ನಕ್ಕು ಮುಂದೆ ನಡೆಯುತ್ತಿದ್ದರು.

bbfd9d3f-8842-4341-bc67-bf05f9c7b3a5ಬಯಲು ಮುಗಿದು ಮತ್ತೆ ಘಾಟಿ ರಸ್ತೆ. ತಿರುವಿನಲ್ಲಿ ಮೈ ವಾಲುವಾಗ ಗೊತ್ತೇ ಆಗದೆ ಎತ್ತರಕ್ಕೇರುವ ಪರ್ವತಗಳು. ಮೆಲ್ಲಗೆ ಕೇಳುವ ಸಂಗೀತ ಮತ್ತು ಮೈಗೆ ತಣ್ಣಗೆ ಸೋಂಕುವ ಚಳಿಗೆ ಒಂದು ಸಣ್ಣ ಅಂಗಡಿಯಲ್ಲಿ, ಟೀ ಕುಡಿಯುತ್ತಾ ಬನ್ಸು ತಿಂದು ಮೈ ಮುರಿಯುವುದು ಎಂತಹ ಸೌಭಾಗ್ಯವೆನಿಸಿತು. ದೇವರೇ ಇಲ್ಲೇ ಹೇಗಾದರೂ ದಾರಿ ತಪ್ಪಿ ಹೋಗಲಿ  ಅಂದುಕೊಳ್ಳುತ್ತಿದ್ದಂತೆ ಮತ್ತೆ ತಿಳಿಯಾದ ಆತಂಕದಲ್ಲಿ  ದಾರಿ ಕೇಳಿಕೊಂಡು ಮುನ್ನಡೆಯುವ ಜಾಗರೂಕತೆಗೇ ಇನ್ನೊಂದು ಊರೇ ಸಿಕ್ಕಿಬಿಟ್ಟಿತ್ತು., ಎಲ್ಲೋ ಎತ್ತರದಲ್ಲಿ ಕಾಣುವ ಭೂರಮೆಯ ನಡುವಿನ ವಿಶಾಲ ಅಂಕುಡೊಂಕುಗಳು, ಇಳಿದರೆ ದೂರದಲ್ಲಿ ಆಕಾಶಕ್ಕೆ ಮುತ್ತಿಡುವಂತೆ ಕಾಣುವ ವಕ್ಷಸ್ಥಳಗಳಂತಹ ಗುಡ್ಡಗಳು, ಒಮ್ಮೆ ಬೆಟ್ಟ ಒಮ್ಮೆ ಬಯಲು,  ಸ್ಥಬ್ದ ಹೊಳೆಗಳು, ಹೊಳೆಯ ಬೆನ್ನಿಗೆ ಬಾಗುವ, ನೇರ ನಿಂತಿರುವ ಮರಗಳು, ಪ್ರಖರ, ಆಕಾಶ, ಅಲ್ಲಲ್ಲಿ ಕಾಣುವ ಜನರು, ಹೌದೋ ಅಲ್ಲವೋ ಎಂದು ದೂರದಲ್ಲಿ ದೊಡ್ಡ ಹಕ್ಕಿ ಕುಳಿತ ಹಾಗೆ ಕಾಣುವ ಸಣ್ಣ ದೋಣಿಗಳು. ಅಲ್ಲಲ್ಲಿ ನಿಲ್ಲುವ, ಮತ್ತೊಮ್ಮೆ ಚಲಿಸುವ, ಕೆಲವೊಮ್ಮೆ ಅರಿಯದ, ಇನ್ನೊಮ್ಮೆ ಒಳಗೆ ಸೆಳೆದು ಕೊಳ್ಳಲು ಮಾತ್ರ ಸಿಗುವ ನಿರಾಧಾರ ಪರಿಮಳಗಳು. ಇನ್ನೊಂದು ಕತೆ ಇಲ್ಲಿಯೇ ಎಲ್ಲೋ ಶುರುವಾದ ಹಾಗೆ ಅನ್ನಿಸುವ ಹಾಗಿತ್ತು.

ಹಾಗೇ ಘಟ್ಟ ಹತ್ತಿ ಬರುವಾಗಲೇ ಆಗುಂಬೆಯ ಸಣ್ಣ ಓಣಿಯಲ್ಲಿ ಸಿಕ್ಕಿದವರು ಧನಂಜಯ. ತನ್ನ ಅಜ್ಜಿಯ ಒಬ್ಬನೇ ಮೊಮ್ಮಗ. ಧನಂಜಯರ ಅಜ್ಜಿ ಶಾಂತೇರಮ್ಮನಿಗೆ ನೂರಕ್ಕೆ ಮೂರು ವರ್ಷ ಕಮ್ಮಿ ಇತ್ತು. ಈ ಪ್ರಾಯದಲ್ಲೂ ಹೊಳೆಯುತ್ತಿದ್ದ ಅಂತಹ ಸುಕ್ಕುಗಳಿಲ್ಲದ ಬೆಳ್ಳಗಿನ ಮುಖದಲ್ಲಿ ಯಾರದೋ ಮೇಲಿನ ಅವರ ಮುನಿಸು ದೃಷ್ಟಿ ಬೊಟ್ಟಂತೆ ಕೂತಿತ್ತು. ಹಾಸಿಗೆಯಿಂದ ಎದ್ದು ನಾಲ್ಕು ಹೆಜ್ಜೆ ನಡೆಯಲೂ ಅವರಿಗೆ ಆಗುತ್ತಿರಲಿಲ್ಲ. ದಿನದಲ್ಲಿ, ಬಾತ್ ರೂಂಗೆ ಹೋಗಲು ಜಾಸ್ತಿ ಎಂದರೆ ಹತ್ತು ಹೆಜ್ಜೆ ಇಡುತ್ತಿದ್ದರು. ಹೀಗಿರುವ ಶಾಂತೇರಮ್ಮ  ತನ್ನ ವಿಪರೀತ ಕಾಲು ನೋವನ್ನು ಕ್ಯಾರೇ ಎನ್ನದೆ ಕುಂತಲ್ಲೇ ಕುಂತು, ಬದುಕಿನ ಸುಖ ಮರುಕಗಳು ಯಾವುದೂ ಬೇಡ ಎಂಬಂತೆ ಎಲ್ಲೋ ನೆಟ್ಟ ನೋಟದಲ್ಲಿ ಕೂತಿದ್ದರು., ಧನಂಜಯರ ಅಪ್ಪ ಅಮ್ಮ ತೀರಿ ಹೋಗಿದ್ದರು. ಈ ಅಜ್ಜಿ ಮತ್ತು ಮೊಮ್ಮಗ ಆ ಮನೆಯಲ್ಲಿ ದಿನದ ಯಾವುದೋ ಹೊತ್ತಲ್ಲಿ ಸ್ವಲ್ಪ ಹರಟೆ ಹೊಡೆದು ಆಮೇಲೆ ಎರಡು ದ್ವೀಪಗಳಂತೆ ಇರುತ್ತಿದ್ದರು.

ab8288b5-ce65-4550-916e-eb9686d3aa5eಮನೆಯ ಕೆಲಸದವಳು ಶಾಂತೇರಮ್ಮನಿಗೆ ಸ್ನಾನ ಮಾಡಿಸಿ ಬಿಳ್ಳೆಗಿನ ಶುಭ್ರ ಬಟ್ಟೆ ತೊಡಿಸುವಾಗ ಧನಂಜಯ ಮನೆಯಲ್ಲಿದ್ದ ಮೂರು ಬಾವಿಗಳಲ್ಲಿ ದೇವರ ಮಡಿನೀರಿನ ಬಾವಿಯಿಂದ ನೀರು ಸೇದಿ ಪೂಜೆ ಕಾರ್ಯಕ್ಕೆ ತಯಾರಾಗುತ್ತಿದ್ದರು. ಮೇಜಿನ ಮೇಲೆ ಇಟ್ಟಿದ್ದ ಎರಡು ಬಾಳೇಹಣ್ಣು ಹಾಲಿನ ಲೋಟವನ್ನು ಹಾಗೆಯೇ ಬಿಟ್ಟು ಪೂಜೆ ಮುಗಿವ ತನಕ ಶಾಂತೇರಮ್ಮನವರು ತಿನ್ನದೆ ಕೂತಿದ್ದರು. ಧನಂಜಯ ಪೂಜೆ ಮುಗಿಸಿ ಬಂದ ಮೇಲೆ, “ಆಯಿತಲ್ಲಾ, ಇನ್ನೂ ತಿನ್ನಲ್ಲಿಕ್ಕೇನು” ಎಂದು ಸುಕ್ಕುಗಟ್ಟಿದ ದೊಗಳೆ ಶರ್ಟು ಹಾಕಿ ಹೊರಟಾಗಲೂ ಶಾಂತೇರಮ್ಮ ಹಾಗೆಯೇ ಕುಳಿತಿದ್ದರು.

ಆ ಕತ್ತಲಿನ ಶಬ್ದಕ್ಕೆ ಒಂಥರಾ ಅನ್ನಿಸಿ, ಹೇಗಿರ್ತೀರಾ, ಒಬ್ರೆ, ಈ ಮನೆಯಲ್ಲಿ ಎಂದು ಕೇಳಿದೆ.

“ಇರುವುದು ಏನು? ದೇವರು ಇಲ್ಲಿಂದ ಕರೆಸಿಕೊಳ್ಳುವ ಒಂದು ಘಳಿಗೆಗೆ ಕಾಯುವುದಷ್ಟೇ,  ಹೊಟ್ಟೆಯ ಮಕ್ಳಳನ್ನೆಲ್ಲಾ ಆಗಲೇ ಕಳಿಸಿ ಆಯಿತು”, ಎನ್ನುತ್ತಾ ಮಾತಾಡಲೂ ಬಿಡದ ಕೆಮ್ಮಿಗೆ ಶಾಂತೇರಮ್ಮ ಮತ್ತೆ ಮೌನವಾದರು. ಬೇರೆ ಯಾರೂ ಇಲ್ಲದ ಆ ದೊಡ್ಡ ಕತ್ತಲು ಮನೆಯಲ್ಲಿ, ಅವರ ಸಣ್ಣ ಕೆಮ್ಮೂ ದೊಡ್ದಗೆ ಕೇಳಿಸುತ್ತಿತ್ತು.

ಮಳೆಗೆ, ತಿಂಗಳಾನುಗಟ್ಟಲೆ ಸೂರ್ಯೋದಯನ್ನೇ ಕಾಣದಿದ್ದ ಆ ಊರಿನಲ್ಲಿ ಶಾಂತೇರಮ್ಮನವರದು ದೊಡ್ಡ ಮನೆ. ಅವರ ಅಜ್ಜನ ಕಾಲದಲ್ಲಿ ಎಪ್ಪತೈದು ಜನರಿದ್ದ ಮನೆಯದು. ಸಂಜೆ ಭಜನೆ ಮುಗಿಸಿ, ಮಣ್ಣಿನ ನೆಲದಲ್ಲಿ ಹುಚ್ಚು ಹಿಡಿಸುವ ಮಳೆ, ಚಳಿಗೆ ಅಗ್ಗಿಷ್ಟಿಕೆ ಹಾಕಿ ಮನೆಯವರೆಲ್ಲಾ ಸುತ್ತ ಕೂತು ಚಳಿ ಕಾಯಿಸುತ್ತಿದ್ದರು. ಬೆಳಗಾದರೆ ಮನೆತುಂಬಾ ಮುಗಿಯದ ಕೆಲಸ. ಈಗ ಅದೆಲ್ಲಾ ಮುಗಿದು ಅರ್ಧ ಶತಮಾನಗಳೇ ಸಂದುಹೋಗಿದೆ. ಅಪಘಾತವೊಂದರಲ್ಲಿ ತನ್ನ ಮುಕ್ಕಾಲುಪಾಲು ಬಂಧುಗಳನ್ನು ಕಳೆದುಕೊಂಡ ಶಾಂತೇರಮ್ಮನಿಗೆ ಈಗ ಉಳಿದಿರುವುದು ಈ ಧನಂಜಯ. ಈಗ ನೋಡಿದರೆ, ಊರಿನ ಮಕ್ಕಳೂ  ಬೆಳೆದು ದೂರದ ಊರುಗಳಿಗೆ ಹೋಗಿ, ಆಗುಂಬೆಯಲ್ಲಿ ಊರಿಗೆ ಊರೇ ಇಲ್ಲವಾಗುತ್ತಿತ್ತು.  ಆ ಮನೆಯಂತೆ ಆ ಊರೂ ಬಿಕೋ ಅನ್ನುವಂತಿತ್ತು..

4c3f6959-8ab2-4336-82f7-2ac349f3b82cಒಂದು ಕಾಲದಲ್ಲಿ ಸೋಮೇಶ್ವರ, ಆಗುಂಬೆಯ ಪಟ್ಟಣವಾಗಿತ್ತಂತೆ. ಘಟ್ಟದ ಕೆಳಗೆ ಇರುವ ಸೋಮೇಶ್ವರ ದೇವಸ್ಥಾನಕ್ಕೆ ಶಾಂತೇರಮ್ಮನವರು ಪ್ರತೀ ದೀಪಾವಳಿಗೆ ರಾತ್ರಿ ಪೂಜೆಗೆ ಹೋಗುತ್ತಿದ್ದರು. ಸಣ್ಣ ಊರಾದ ಆಗುಂಬೆಯಲ್ಲಿ ಊರಿನ ಎಲ್ಲಾ ಪುಟಾಣಿ ಮಕ್ಕಳನ್ನು ಸೇರಿಸಿಕೊಂಡು ಶಾಂತೇರಮ್ಮನ ಹಿರಿಯರು ಕಾಡಿನ ಬಳಸು ದಾರಿಯಲ್ಲಿ ನಡೆಯುವಾಗ ಹುಲಿಗಳಿರುತ್ತಿದ್ದವಂತೆ. ಊರಿನ ಜನರೆಲ್ಲಾ ಒಟ್ಟು ಸೇರಿ ರಾತ್ರಿ ಸೋಮೇಶ್ವರ ದೇವಸ್ಥಾನದ ಪೂಜೆ ಮುಗಿಸಿ ಆಗುಂಬೆಯ ಪುರಾತನ ವಿಷ್ಣು ದೇವಸ್ಥಾನಕ್ಕೆ ಬರಬೇಕಿತ್ತು. ಹಾಗೆ ಬರುವಾಗ ಹುಲಿಗಳನ್ನು ಹೆದರಿಸಲು ಗುಂಪುಕಟ್ಟಿಕೊಂಡು ಜೋರಾಗಿ ಮಾತಾಡುತ್ತಾ ನಡೆಯುತ್ತಿದ್ದರಂತೆ. ಬಂದು ಆಗುಂಬೆ ದೇವಸ್ಥಾನದ ಪೂಜೆ ಮುಗಿಸಿ ಮನೆಯಲ್ಲಿ ಊಟ ಮಾಡುತ್ತಿದ್ದರು.

ಈಗ ಹೆಂಗಸಿನ ಸಪ್ಪಳಗಳೇ ಕೇಳಿಸದ ಆ ಅಡುಗೆ ಮನೆಯಲ್ಲಿ ಧನಂಜಯ ಘಾಟಿ ಮೆಣಸಿನ ಚೊಟ್ಟು ತೆಗೆದು ಕತ್ತರಿಸಿಟ್ಟಿದ್ದರು. ಬಾಳೆ ನಾರಿನಲ್ಲಿ ಕಟ್ಟಿದ ಮಂಗಳೂರು ಸೌತೆಕಾಯಿ ಮೇಲೆ  ಸಾಲಾಗಿ ಕಟ್ಟಲಾಗಿತ್ತು.  “ಇವತ್ತು ಕೆಲಸದವಳು ಮಧ್ಯಾಹ್ನ ಇಲ್ಲ, ನಾನೇ ಊಟ ಕೊಡ್ಬೇಕು ಅಜ್ಜಿಗೆ”, ಎಂದು ನನ್ನನ್ನೂ ಕರೆದು, ತನ್ನ ವೇಸ್ಟಿ ಮೇಲಕ್ಕೆ ಕಟ್ಟಿ ಧನಂಜಯ ಮನೆಗೆ ಓಡುತ್ತಿದ್ದರು. ಊಟ ಮಾಡುತ್ತಾ, ಬೆಟ್ಟದ ತಪ್ಪಲಿನಲ್ಲಿರುವ ಆಗುಂಬೆಗೆ ಬೇರೆ ಏನಾದರೂ ಹೆಸರಿದೆಯಾ ಎಂದು ಅಜ್ಜಿ ಮೊಮ್ಮಗನನ್ನು ಕೇಳಿದೆ. ಶಾಂತೇರಮ್ಮನವರು, “ಏನೋ ನಮ್ಮ ಮುತ್ತಾತನ ಕಾಲದಲ್ಲಿ ಮದಗುಂಬಾಪುರ ಅಂತ ಹೇಳ್ತಿದ್ರು, ಅದು ಬಿಟ್ರೆ ಇನ್ನೇನೂ ಗೊತ್ತಿಲ್ಲ” ಎಂದರೆ, ಈ ಅಜ್ಜಿಗೆ ಏನೂ ತಿಳಿದಿಲ್ಲ ಎಂಬಂತೆ, ಅದು ಹಾಗಲ್ಲ, , ಶ್ರೀಮದಾಗುಂಬಾಪುರವನ್ನು ಬಿಡಿಸಿದರೆ ಶ್ರೀಮತ್ ಆಗುಂಬಾಪುರ  ಆಗುತ್ತೆ. ಈ ಜನ್ರ ನಾಲಿಗೆ ಉರುಳೋದಿಲ್ಲ,  ಮದಗುಂಬಾಪುರ ಅಂತ ತಪ್ಪು ಹೇಳ್ತಾರೆ. ಹಾಗೇ ಮೊದಲೆಲ್ಲಾ ಹೊರಗಿನವರು ಊರಿನ ಮಾರಿ ಓಡಿಸುವುದಕ್ಕೆ ಗೊಂಬೆ ಮಾಡಿ ಈ ರಸ್ತೆಗಳಲ್ಲಿ ಇಡುತ್ತಿದ್ದರಂತೆ. ಆದ್ದರಿಂದ ಆಗುಂಬೆ ಎಂದೂ ಆಗಿರಬಹುದೆಂದು ಎಂದು ಹೇಳುತ್ತಿದ್ದರು.

ಆಗುಂಬೆಯ ದಟ್ಟ ಕಾಡಲ್ಲಿ ಮೊದಮೊದಲು ಘಾಟಿಯಲ್ಲಿ ಒಬ್ಬರೇ ನಡೆದು ಹೋಗುವಷ್ಟು ಮಾತ್ರ ಜಾಗವಿತ್ತು. ರಸ್ತೆ ಸಂಪರ್ಕವಿಲ್ಲದ ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬ್ರಾಹ್ಮಣರು, ಬಂಟರು, ಘಟ್ಟದ ಮೇಲಿನ ಶ್ರೀಮಂತರ ಮನೆಗೆ ಅಡುಗೆ ಕೆಲಸಕ್ಕೆ, ತೋಟದ ಕೆಲಸಕ್ಕೆ ಹೋಗುತ್ತಿದ್ದರು.  ಕಾಡಿನಲ್ಲಿ ಮರದ ಮೇಲೆ cb4c2e62-7968-4dbf-8a31-133d6f44cbcdಇರುವ ವಿಷಪೂರಿತ ಜಂತುಗಳು ಕುಟುಕದಂತೆ ತಲೆಯ ಮೇಲೆ ಒಂದು ದೊಡ್ಡ ಕಲ್ಲು ಹೊತ್ತು ಬರುತ್ತಿದ್ದರು. ಕರಿಮೀನು ಸಾಬರಂತವರು, ಬೇರೆ ವ್ಯಾಪಾರಸ್ಥರು ಗಿರಾಕಿ ಹುಡುಕುತ್ತಾ ಕಾರ್ಕಳದಿಂದ  ಆಗುಂಬೆ ತೀರ್ಥಹಳ್ಳಿಗೆ ಬಂದು ಸೇರುತ್ತಿದ್ದರು ಕಳ್ಳಕಾಕರು, ಸಾಮಾನ್ಯವಾಗಿದ್ದ ಆ ಕಾಲದ ಸಾಹಸ, ಭಯಗಳು, ಮಲೆನಾಡಿನ ಗಡ್ಡೆಜ್ವರಗಳು ಜನರ ನಿತ್ಯ ಬವಣೆಗಳಾಗಿದ್ದವು. ಆಮೇಲೆ  ಆ ಕಾಲುಹಾದಿಯಲ್ಲಿ ಸ್ಕೂಟರ್ ಗಳು, ಸಣ್ಣ ವಾಹನಗಳು ಹೋಗುವುದಕ್ಕೆ ಶುರುವಾಯಿತು. ಈಗ ಬಸ್ಸುಗಳೂ ಘಾಟಿ ಹತ್ತಿ ಇಳಿಯುತ್ತವೆ

ಮೊದಲು ದಿನವೂ ಬಸ್ಸು ಹತ್ತಿ ಘಾಟಿ ಹತ್ತಿಳಿದು ಧನಂಜಯ ಉಡುಪಿಗೆ ಹೋಗಿಬರುತ್ತಿದ್ದರು. ಅಲ್ಲಿ ಶಾಲೆಯೊಂದರಲ್ಲಿ ಮಾಸ್ತರರಾಗಿದ್ದರು. ಆದರೆ ಅಜ್ಜಿಯನ್ನು ಬಿಟ್ಟುಹೋಗಲಾಗದೆ, ಊರೂ ಬಿಡಲಾಗದೆ ಇದ್ದ ಕೆಲಸವನ್ನು ಬಿಟ್ಟು ದಿನವಿಡೀ ಕಾಡಲ್ಲಿ ಅಲೆಯುತ್ತಿದ್ದ ಧನಂಜಯ ಈಗ ಕಾಡಿನ ಸಹವಾಸ ಕಮ್ಮಿ ಮಾಡಿದ್ದಾರಂತೆ. ಅವರಿಗೆ ಕಾಡು ಅಲೆಯುವುದು ಬಿಟ್ಟು ಈಗ ಮಾಡಲು ಅಂತಹ ಘನಂಧಾರಿ ಕೆಲಸಗಳೇನೂ ಇರಲಿಲ್ಲ. ನಕ್ಸಲರ ತಾಣವಾಗಿರುವ ಆಗುಂಬೆ ಕಾಡಲ್ಲಿ ನಕ್ಸಲರಿಗಿಂತ ಪೋಲಿಸರ ಹಾವಳಿಯೇ ಜೋರಾಗಿದೆಯಂತೆ. ಇರುವ ಆರೇಳು ನಕ್ಸಲರಿಗೆ ಆರು ಸಾವಿರ ಪೋಲಿಸ್ ಸ್ಕ್ವಾಡ್ ಗಳಿದ್ದಾರೆ.

“ಒಂದು ಕೋಲು ಹಿಡ್ಕೊಂಡು ಬ್ಯಾಗ್ ಹಾಕೊಂಡೋದ್ರೆ, ನಾನೂ ನಕ್ಸಲರ ತರನೇ ಕಾಣ್ತೇನೆ, ಇನ್ನು ದೂರದಲ್ಲೇ ಈ ಪೋಲೀಸರು ಡಿಶುಂ ಮಾಡುವುದು ಬೇಡ ಅಂತ ಕಾಡಿನ ಸಾವಾಸ ಬಿಟ್ಟು ಬಿಟ್ಟೆ”ಎನ್ನುತ್ತಿದ್ದರು.

ಆಗುಂಬೆಗೆ ಕಾಡು ನೋಡಲು ಬರುವ ಹುಡುಗರಿಗೆ ಧನಂಜಯ ತಾವಾಗೇ ಕರೆದು ಬುದ್ಧಿಮಾತು ಹೇಳುತ್ತಾರೆ.  ಎಲ್ಲೆಲ್ಲೋ ದೂರ ಹೋಗಿ ದಾರಿ ತಪ್ಪ ಬೇಡಿ, ಜಿಗಣೆಗಳ ಸಂಸಾರನೇ  ಇರುತ್ತದೆ, ಕಾಲು ನೋಡಿಕೊಳ್ಳಿ, ಕಾಮನಬಿಲ್ಲು ನೋಡುವುದಾದರೆ ಮೇಲೆ ನೋಡ್ಬೇಡಿ, ನಿಮ್ಮ ಕಣ್ಣ ಮುಂದೆ ನೇರಕ್ಕೆ ನೋಡಿ, ದಿಕ್ಕುಗಳು ಗೊತ್ತಾಗದಿದ್ದರೆ ಆಕಾಶ ನೋಡಿ ಅಂದಾಜು ಮಾಡ್ಕೊಳಿ, ಕಾಡಲ್ಲಿ ಒಂದು ಬಳ್ಳಿ ಇದೆ, ಅದನ್ನೆಲ್ಲಾದರೂ ಮೆಟ್ಟಿದರೆ ಎಂಥಾ ಲಾಗ ಹೊಡೆದ್ರೂ ನಿಮಗೆ c6010fc2-7b4d-4e8d-ac5e-4dc7335f484aದಾರಿ ಗೊತ್ತಾಗ್ಲಿಕ್ಕಿಲ್ಲ ಇದೆಲ್ಲಾ ಎಲ್ಲಿ ಗೊತ್ತಿರ್ತದೆ ನಿಮಗೆ? ಎಂದು ಬುದ್ಧಿಮಾತು ಹೇಳುತ್ತಾ “ಇನ್ನೊಂದು ಮಧುನಾಶಿನಿ ಅಂತ ಬಳ್ಳಿ ಇದೆ. ಅದನ್ನು ತಿಂದರೆ ನೀವು ಎಷ್ಟು ಸಕ್ಕರೆ ಇಂದ್ರೂ ಮಣ್ಣು ತಿಂದ ಹಾಗಗ್ತದೆ ಎಂದು ತನ್ನ ಜ್ಞನ ವ್ಯಾಪ್ತಿಯನ್ನು, ಎಳೆಯ ಹುಡುಗರಿಗೆ ವಿವರಿಸುತ್ತಿದ್ದರು.

ಆಗಲೇ ಬಸ್ಸೊಂದು ಬರುತ್ತಿತ್ತು. ದೊಡ್ಡ ಕಿಟಕಿಗಳಿರುವ, ಸ್ವಲ್ಪ ನಿಧಾನವಾಗಿ ಚಲಿಸುವ, ಎಲ್ಲರೂ ತನ್ನವರೆಂದು ಅಲ್ಲಲ್ಲಿ ನಿಲ್ಲಿಸುತ್ತಾ, ಕಾಳಜಿಯಿಂದ ಬರುವವರನ್ನು ಕರೆಯುತ್ತಾ, ಹತ್ತಿಸಿಕೊಳ್ಳುತ್ತಿತ್ತು. ಇಳಿದವರು ಈ ಕಾಡು ಊರಲ್ಲಿ ಹೋಟೆಲು ಹುಡುಕುತ್ತಿದ್ದರು. ಒಂದಷ್ಟು ಜನರು ಸೂರ್ಯಾಸ್ತಮಾನ ನೊಡುತ್ತಾ ಆವತ್ತಿನ ಆ ಸೂರ್ಯನನ್ನು ಬೀಳ್ಕೊಡುತ್ತಿದ್ದರು. ಇರುವ ಸಣ್ಣ ಸಣ್ಣ ತಿಂಡಿ ಹೋಟೆಲುಗಳು, ಪುಟ್ಟ ಅಂಗಡಿಗಳು ಅಂತಹ ಗಿರಾಕಿಗಳಲ್ಲಿದ್ದದೆ ಊರಿನ ಒಳಗೆ ಇನ್ನಷ್ಟು ಹೂತುಹೋದಂತಿದ್ದವು. ಶಾಂತೇರಮ್ಮನವರು ಬಹುಶಃ ನೆಟ್ಟ ನೋಡಿಕೊಂಡೋ, ಸುಮ್ಮನೆ ಮಲಗಿಕೊಂಡೋ, ದೇವರು ಕರುಣಿಸುವ ಘಳಿಗೆಯನ್ನು ನೆನ್ನೆಯುತ್ತಿರಬಹುದು. ವಿಷ್ಣು ದೇವಸ್ಥಾನದಲ್ಲಿ ಭಜನೆ ಕೇಳಿಸುತ್ತಿತ್ತು. “ಎಂಥಾ ಹಾಡ್ತಾರೋ, ಇವರ ಹನುಮಾನ್ ಚಾಲೀಸು ಕೇಳಿದರೆ ಹನುಮಂತ ಓಡಿ ಹೋಗ ಬೇಕು” ಎನ್ನುತ್ತಾ ಧನಂಜಯ ಆ ಕತ್ತಲು ಮನೆಗೆ ನಡೆಯುತ್ತಿದ್ದರು. ಆಗುಂಬೆ ಮೌನವಾಗಿತ್ತು.

‍ಲೇಖಕರು Admin

9 June, 2016

7 Comments

  1. ಮಲ್ಲಿಕಾರ್ಜುನಗೌಡ ತೂಲಹಳ್ಳಿ

    ಚೆನ್ನಾಗಿದೆ

  2. ತಿಲಕ್ ರಾಜ್ ಸೋಮಯಾಜಿ

    ಮುಂದಿನ ಸಾರಿ ಆಗುಂಬೆಯ ಮೂಲಕ ಊರಿಗೆ ಹೊರಟಾಗ ನೆನೆಸಿಕೊಳ್ಳಲು ಒಂದು ಕಥೆ ಸಿಕ್ಕಿತು. ಉತ್ತಮ ಬರಹ.

  3. Anonymous

    Nicely written..

  4. Anonymous

    How beautifully you have captured a bygone era and the current Agumbe! A little nostalgic with a twinge of sadness. Nice

  5. sharadhi

    “ಎಲ್ಲೋ ಎತ್ತರದಲ್ಲಿ ಕಾಣುವ ಭೂರಮೆಯ ನಡುವಿನ ವಿಶಾಲ ಅಂಕುಡೊಂಕುಗಳು, ಇಳಿದರೆ ದೂರದಲ್ಲಿ ಆಕಾಶಕ್ಕೆ ಮುತ್ತಿಡುವಂತೆ ಕಾಣುವ ವಕ್ಷಸ್ಥಳಗಳಂತಹ ಗುಡ್ಡಗಳು, ಒಮ್ಮೆ ಬೆಟ್ಟ ಒಮ್ಮೆ ಬಯಲು, ಸ್ಥಬ್ದ ಹೊಳೆಗಳು, ಹೊಳೆಯ ಬೆನ್ನಿಗೆ ಬಾಗುವ, ನೇರ ನಿಂತಿರುವ ಮರಗಳು” – ಒಳ್ಳೆಯ ಸಾಲುಗಳು!. ದೊಡ್ಡ ಪಟ್ಟಣದಲ್ಲಿ ಸುಖವಿಲ್ಲ, ದಟ್ಟ ನಿರ್ಜನ ಕಾಡಿನಲ್ಲಿ ಕತೆಗಳಿರುವುದಿಲ್ಲ. “ಸುಖ”ದ ಕತೆಗಳು ಇರುವುದು ಪುಟ್ಟ ಊರುಗಳಲ್ಲಿ …, ಊರು ಹಾಗೂ ಕಾಡು ಸೇರುವಲ್ಲಿ ..

  6. Vidyashankar

    Lovely write up… tells everything yet leaves you empty…

  7. Anonymous

    Thumba chenagidhe…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading