
ಮಂಜುನಾಥ ಕಾಮತ್
ಬೆಂಗಳೂರಿನಿಂದ ಚಂದ್ರಶೇಖರ ಮಂಡೆಕೋಲು ಬಂದಿದ್ದಾರೆ. ಊರಿಗೆ ಬರೋವಾಗ ಎಲ್ಲೆಲ್ಲಿ ಆಟ ಉಂಟು ಅಂತ ಉದಯವಾಣಿ ಇಪೇಪರ್ ನೋಡಿಕೊಂಡೇ ಬಂದಿರುತ್ತಾರೆ.. ಕೋಲ, ನೇಮಗಳ ಚಪ್ಪರಗಳನ್ನು ಹುಡುಕುತ್ತಾ ಇರುತ್ತಾರೆ.
ಅವರೊಂದಿಗೆ ಆಗುಂಬೆಯ ಸೂರ್ಯಾಸ್ತ ನೋಡಬೇಕೆಂದು ಉಡುಪಿಯಿಂದ ಹೆಬ್ರಿಗೆ ಬಂದವನು ನಾನು. ಧರ್ಮಸ್ಥಳ ಮೇಳದವ್ರ ಆಟವಿದೆಯಂತೆ. ಗೋಳಿಯಂಗಡಿ. ಒಳಗೆಲ್ಲೋ ಕೋಟೆ ಅನ್ನೋ ಊರಿನಲ್ಲಿ, ಶೆಟ್ರೊಬ್ಬರ ಮನೆಯಲ್ಲಿ ಹರಕೆಯ ಆಟ. ಹೋಗೋಣ್ವ ಅಂದ್ರು.
ಈವರೆಗೆ ಒಂದೇ ಒಂದು ಯಕ್ಷಗಾನ ನೋಡಿದವನಲ್ಲ ನಾನು. ಗೊತ್ತಿಲ್ಲದ ಊರುಗಳನ್ನು ಸುತ್ತಾಡೋದೇ ಹುಚ್ಚು. ದಾರಿ ತಪ್ಪಿದ್ರೆ ಮತ್ತಷ್ಟೂ ಖುಷಿ ಪಡುತ್ತಾ ಅಲೆಯುವವನಿಗೆ ಕೋಟೆಯಂತೆ ಹಬ್ಬಿರುವ ಕಾಡಿನ ನಡುವೆ ಚಂಡೆ ಸದ್ದು ಕೇಳಿದತ್ತ ಬೈಕ್ ತಿರುಗಿಸೋ ಮಜಕ್ಕಾಗಿ ಆಗುಂಬೆಯನ್ನು ಅಲ್ಲೇ ಬಿಟ್ಟು ಹೆಬ್ರಿಯಿಂದ ಹಾಲಾಡಿ ರಸ್ತೆಯನ್ನು ಹಿಡಿದೆವು.
ಹೆಬ್ರಿಯಿಂದ 19 ಕಿ.ಮೀ. ಗೋಳಿಯಂಗಡಿ ಅನ್ನೋ ಪುಟ್ಟ ಪೇಟೆ. ಅದ್ಕಿಂತ ನೂರು ಮೀಟರ್ ಹಿಂದೆ ಬಲಕ್ಕೆ ಹೆಂಗವಳ್ಳಿ ರಸ್ತೆ. ಜನ್ರ ಬಳಿ ದಾರಿ ಕೇಳಿಕೊಂಡು, ಸೀತಾನದಿಯನ್ನು ಸೇರೋ ದೊಡ್ಡ ಹೊಳೆಯ ಸೇತುವೆ ದಾಟಿ, ಸಿಗುವ ಮೊದಲ ಎಡದ ಮಣ್ಣ ರಸ್ತೆಯಲ್ಲಿ ಹೋಗಿ ಶೆಟ್ರ ಮನೆ ತಲುಪಿದೆವು.
ಮಂಡೆಕೋಲು ಯಕ್ಷಗಾನದ ಕುರಿತು ಪುಸ್ತಕವನ್ನೇ ಬರೆದವ್ರು. ಮೇಳದ ಎಲ್ಲರ ಪರಿಚಯ. ಹಾಗೇ ನುಗ್ಗಿದ್ದು ಚೌಕಿಗೆ. ನಾನಂತೂ ಮೊತ್ತ ಮೊದಲ ಬಾರಿಗೆ ಯಕ್ಷಗಾನದ ಬಣ್ಣದ ಮನೆ ಚೌಕಿಯೊಳಗೆ ಕಾಲಿಟ್ಟಿದ್ದೆ. ಒಂದಷ್ಟು ಫೋಟೋ ತೆಗೆದೆ. ಗಣಪತಿಯ ಪ್ರಸಾದ ಪಡೆದೆ. ಎಲ್ಲರ ಬಳಿ ಮಾತನಾಡಿದ ಮೇಲೆ ಕಲಾವಿದರಲ್ಲೇ ಒಬ್ಬರು ನಮ್ಮನ್ನು ಊಟಕ್ಕೆ ಕರೆದೊಯ್ದರು. ಊಟ ಮಾಡಿದೆವು. ಮತ್ತೆ ಬಂದು ಟೆಂಟಿನೊಳಗೆ ಆಟ ನೋಡಲು ಕೂತೆವು.
ಕೈಲಾಸದಿಂದ ಧರ್ಮದೇವತೆಗಳು ಭೂಲೋಕಕ್ಕೆ ಹೊರಟು ಹೋದರು. ಈಶ್ವರನ ಕಣ್ಣಿನಿಂದ ಹುಟ್ಟಿದ ನೇತ್ರಾವತಿಯೂ ಭೂಮಿಗಿಳಿದಳು.
ನೆಲ್ಯಾಡಿ ಬೀಡಿನಲ್ಲಿ ತಾಯಿ ಮಗ ಮಾತುಕತೆಯಲ್ಲಿ ಮುಳುಗಿದ್ದಾರೆ. ಮಾರುವೇಷದಿಂದ ಒಬ್ಬರು ಬಂದಿದ್ದಾರೆ. ಭೂಲೋಕದಲ್ಲಿ ಯಾರೊಬ್ಬರೂ ಅನ್ನ ಕೊಡುತ್ತಿಲ್ಲ. ಮೂರು ದಿನದಿಂದ ಖಾಲಿ ಹೊಟ್ಟೆ. ಹಸಿವು ನೀಗುತ್ತೀರಮ್ಮ. ಆಶ್ರಯ ಕೊಡುತ್ತೀರಮ್ಮಾ ಅಂತ ಕೇಳುತ್ತಾ ಬಂದವನು ಅಣ್ಣಪ್ಪನಂತೆ.
ಮಂಡೆಕೋಲು ಬಾಯಿತೆರೆದರು. ಈ ಅಣ್ಣಪ್ಪ ಪಾತ್ರದಾರಿಯೇ ನಮ್ಮನ್ನು ಆಗ ಊಟಕ್ಕೆ ಕರೆದೊಯ್ದವರು ಅಂದ್ರು. ಗುರುತಿಸಲು ನನಗೆ ಸಾಧ್ಯವಾಗಲಿಲ್ಲ. ರಂಗಮಂಚದ ಮೇಲೆ ಆ ವ್ಯಕ್ತಿ ನಿಜಕ್ಕೂ ಅಣ್ಣಪ್ಪನಾಗಿದ್ದ.
ಆದ್ರೆ ಈ ಅಣ್ಣಪ್ಪ ಹಸಿವು ಹಸಿವು ಅನ್ನುತ್ತಿದ್ದ. ಇದೇ ಅಣ್ಣಪ್ಪ ತನ್ನ ಅರೆವೇಷದಲ್ಲಿ ನಮ್ಮಿಬ್ಬರಿಗೂ ಊಟ ಬಡಿಸಿದ್ದ. ಹೊಟ್ಟೆ ತುಂಬಿಸಿದ್ದ. ವೇದಿಕೆಯ ಮೇಲೆ, ಆಶ್ರಯ ನೀಡಲು ಮುಂದೆ ಬಂದ, ಅನಾರೋಗ್ಯದಿಂದ ಮಲಗಿದ್ದ ಹೆಗ್ಗಡೆಯವ್ರ ಖಾಯಿಲೆಯನ್ನು ಗಿಡಮೂಲಿಕೆಗಳಿಂದ ಗುಣಪಡಿಸಿಬಿಟ್ಟ. ಬರೀ ಅಣ್ಣಪ್ಪನಲ್ಲ. ದೇವ ಅಣ್ಣಪ್ಪ ಅಂತ ಕರೆಸಿಕೊಂಡ. ಸ್ವಾಮಿ ಅಣ್ಣಪ್ಪ ಅಂತ ಹೆಸರು ಪಡೆದ.
ಧರ್ಮದೇವತೆ ಸ್ವಾಮಿ ಅಣ್ಣಪ್ಪ ಗಿಡಮೂಲಿಕೆಗಳ ಗೂಡಾಗಿರುವ, ಜೀವ ಸಂಜೀವಿನಿ ನೇತ್ರಾವತಿಯನ್ನು ಉಳಿಸಿಯಾನಾ?
ಇನ್ನು ಅಮಾಸೆ ಬೈಲಿಗೆ ನಮ್ಮ ಪಯಣ. ಅಲ್ಲಿ ಪೆರ್ಡೂರು ಮೇಳದ ಆಟವಂತೆ.












0 Comments