ಇನ್ನಿಲ್ಲದಂತೆ ಕಾಡುವ 'ಅಪ್ಪನ ಅಂಗಿ'

“ಅಪ್ಪನ ಅಂಗಿಯ” ತುಂಬ ವಿಷಾದದ ಗಾಢ ಮಡು.
ಡಿ ಎಸ್ ರಾಮಸ್ವಾಮಿ 
ಡಾ. ಲಕ್ಷ್ಮಣ್ ವಿ ಎ ಸದ್ಯ ಕವಿತೆ ಬರೆಯುತ್ತಿರುವ ಹೊಸ ತಲೆಮಾರಿನ ಯುವ ಕವಿ. ಈಗಾಗಲೇ “ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ” ಸಂಕಲನದ ಮೂಲಕ ಭರವಸೆ ಹುಟ್ಟಿಸಿದ್ದ ಈ ಕವಿಯ ಹೊಸ ಕೃತಿ ” ಅಪ್ಪನ ಅಂಗಿ” ಹಸ್ತಪ್ರತಿಗೆ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದಿದ್ದು ಇದೀಗ ಬೆಂಗಳೂರಿನ “ಬಹುರೂಪಿ” ಪ್ರಕಟಿಸಿದೆ‌
ಮುದ್ರಣ, ಬಳಸಿರುವ ಕಾಗದ ಮತ್ತು ಒಟ್ಟೂ ಪ್ರೊಡಕ್ಷನ್ ಹೊಟ್ಟೆಕಿಚ್ಚು ಪಡುವಷ್ಟು ಸೊಗಸಾಗಿ ಬಂದಿದೆ. ಪ್ರಕಾಶಕ, ಸ್ವತಃ ಕವಿ ಜಿ.ಎನ್. ಮೋಹನ್ ಇಡೀ ಪುಸ್ತಕವನ್ನು ಅದೆಷ್ಟು ಚನ್ನಾಗಿ ರೂಪಿಸಿದ್ದಾರೆಂದರೆ ಈ ಪುಸ್ತಕವನ್ನು ಕೊಳ್ಳದೇ ಹೋದರೆ ಏನೋ ಕಳಕೊಂಡೆವೆಂದು ಕಂಡವರು ಮರುಗುವಷ್ಟು.
ಕವನ ಸಂಕಲನಗಳಿಗೆ ಮಾರುಕಟ್ಟೆ ಇಲ್ಲ ಎಂಬ ಪ್ರಕಾಶಕರ ಗೋಳು ಮತ್ತು ಸಂಕಲನ ತಂದೇ ತರಬೇಕೆಂಬ ಹುಚ್ಚಿನಲ್ಲೇ ಇರುವ ಕವಿ ಇಬ್ಬರೂ ಸೇರಿಕೊಂಡರೆ ಪುಸ್ತಕ ಪ್ರಕಟಣೆ ಆಗುವುದಾದರೂ ಅಲ್ಲಿ ವ್ಯವಹಾರವೇ ಮುಖ್ಯವಾಗಿ ಪುಸ್ತಕದ ಮುದ್ರಣ, ಅಚ್ಚುಕಟ್ಟು ಮತ್ತು ಬಳಸಿದ ಕಾಗದದ ಗುಣಮಟ್ಟ ಪೇಲವವಾಗಿ ಸಂಕಲನದಲ್ಲಿದ್ದಿರಬಹುದಾದ ಒಳ್ಳೆಯ ಪದ್ಯಗಳೂ ಕೆಟ್ಟದಾಗಿ ಮುದ್ರಣಗೊಂಡು ಗಲಿಬಿಲಿ ಉಂಟು ಮಾಡುತ್ತವೆ. ಜೊತೆಗೇ ಡಿಟಿಪಿ ದೋಷಗಳು ಕೂಡ ಕಿರಿ ಕಿರಿ ಮಾಡುವುದೇ ಹೆಚ್ಚು.
ಆದರೆ ಲಕ್ಷ್ಮಣ್ ವಿ ಎ ಅವರ ಅದೃಷ್ಟ ದೊಡ್ಡದು. ಪುಸ್ತಕದ ಅಂದ, ಹೂರಣ ಎಲ್ಲವೂ ಸೊಗಸಾಗಿದೆ.
ಇನ್ನು ಪುಸ್ತಕದ ಮುನ್ನುಡಿಯಾಗಿ ವಿಭಾ ಸಾಹಿತ್ಯ ಸ್ಪರ್ಧೆಯ ನಿರ್ಣಾಯಕರಾಗಿದ್ದ ಪ್ರತಿಭಾ ನಂದಕುಮಾರ್ ಮತ್ತು ಸುಬ್ಬು ಹೊಲೆಯಾರ್ ಅವರ ಮೌಲಿಕ ಮಾತುಗಳನ್ನು ಬಳಸಲಾಗಿದೆ. ಈ ಕವಿ ಸದ್ಯ ಬರೆಯುತ್ತಿರುವ ಕವಿಗಳಿಗಿಂತ ಹೇಗೆ ಭಿನ್ನ ಮತ್ತು ಈ ಕವಿಗೇ ಏಕೆ ಪ್ರಶಸ್ತಿ ಸಂದಿದೆ ಎಂಬುದಕ್ಕೆ ಸಹವರ್ತಿಯಾಗಿಯೂ ಈ ನಿರ್ಣಾಯಕರ ಮಾತು ಇದೆ.
ಇನ್ನು ಪ್ರಕಾಶಕರ ಮಾತೇ ಮತ್ತೊಂದು ಕವಿತೆಯಂತೆ ಇದೆ. ವಿಭಾ ಸಾಹಿತ್ಯ ಸ್ಪರ್ಧೆಯ ಸಂಚಾಲಕ ದಂಪತಿ ಪ್ರಕಾಶ್ ಮತ್ತು ಸುನಂದಾ ಅವರ ಮಾತುಗಳು ಕೂಡ ಈ ಸಂಕಲನಕ್ಕೆ ಮತ್ತಷ್ಟು ಹುರುಪು ಕೊಟ್ಟಿದೆ.
ವಿಷಾದದಲ್ಲೇ ಅದ್ದಿ ತೆಗೆದಂತಿರುವ ಕವಿಯ ಮಾತು ಮೊದಲ ಓದಿಗೇ ಓದುಗನನ್ನು ಆವರಿಸಿಬಿಡುತ್ತದೆ. ಹತಾಶ ಬದುಕಿನ  ಬೆಳ್ಳಿ ಸೆಳಕಂತಿರುವ ಕವಿತೆಯನ್ನು ಈ ಕವಿ ಆವಿರ್ಭವಿಸಿಕೊಂಡಿರುವ ಪರಿಯೇ ಪರಿಪೂರ್ಣ.

ಸಂಕಲನದಲ್ಲಿ  ಕೇವಲ ೨೬ ಕವಿತೆಗಳಿರುವುದು ಮತ್ತು ಅವೆಲ್ಲವೂ ನಿಜ ಬದುಕಿನ ನಿಸ್ಪೃಹ ಪರಿವಿಡಿಯಂತೆ ಇರುವುದು ಈ ಸಂಕಲನದ ವಿಶೇಷ. ಗಾಢ ವಿಷಾದ ಇಲ್ಲಿನೆಲ್ಲ ಕವಿತೆಗಳ ಮೂಲ ಧಾತು. ಮೂರೋ ನಾಲ್ಕೋ ರಚನೆಗಳು ಮಾತ್ರ ಬದುಕನ್ನು ಬೇರೆಯದೇ ಬಗೆಯಾಗಿ ಧ್ಯಾನಿಸುತ್ತವಾದರೂ ಅವುಗಳಲ್ಲೂ ಈ ಕವಿಯ ವಯಸ್ಸಿನಲ್ಲಿ ಸಹಜವಾಗಿ ಇರ(ಲೇ)ಬೇಕಾದ ಪ್ರೀತಿ ಪ್ರಣಯ ಮತ್ತು ಕಾಮದ ಸೆಲೆಯನ್ನು ಸಂಪೂರ್ಣವಾಗಿ ದೂರ ಇಟ್ಟಿರುವುದು ಏಕೆ ಎಂಬ ಪ್ರಶ್ನೆ ಸಂಕಲನದ ಓದಿನ ನಂತರ ಶೃತವಾಗುತ್ತದೆ.
ಕವಿತೆಯ ಮೊದಲಿಗೆ ಮೋಡವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದ ಕವಿ, ಒಮ್ಮೆಲೇ ಬಾರದ ಮಳೆ ಮತ್ತು ಅದರ ನಿರೀಕ್ಷೆಯಲ್ಲೇ ಗತಿಸಿದ ಅಪ್ಪನನ್ನು ನೆನೆಯುವುದು ಹೀಗೆ;
ಆಕಾಶ ದಿಟ್ಟಿಸುವಾಗಲೆಲ್ಲ ಅಪ್ಪನ ಗಾಂಧಿ
ಟೊಪ್ಪಿಗೆ ನೆಲಕೆ ಬಿದ್ದು ಮಣ್ಣುಪಾಲಾಗುತಿತ್ತು
ಕೊನೆಗೆ ಮೋಡಗಳು ಕೆಳಗಿಳಿಯದಿದ್ದಾಗ
ಟೊಪ್ಪಿ ಧರಿಸುವುದು ಬಿಟ್ಟ
ಅಂಗೀ ಹಾಕುವುದ ಮರೆತ
( ಗಾಂಧಿ ಟೊಪ್ಪಿಗೆ ಮತ್ತು ಅಪ್ಪ)
 
ಬಿಕರಿಯಾಗದ ದೇವರ
ಪಟ ಹೊತ್ತು ನಡೆದಿದ್ದಾನೆ ಐಸು ಕಡ್ಡಿಯ ಪೋರ
ಹೊಂಗೆಯ ಮರದ ಎಡೆಗೆ
( ಬಿಕರಿಯಾಗದ ದೇವರ ಪಟ)
 
ಹಾಡುವುದು ಹೇಗೆ ಗಟ್ಟಿ ದನಿಯಲಿ
ಗಂಟೆ ಜಾಗಟೆಗಳ ಸದ್ದು ಮುಳುಗಿರುವಾಗ
(ನೆರೆ ದೇವರು)
 
ಜೋಡಿಯಾಗುತ್ತಿಲ್ಲ ಯಾವ ಜೋಡು
ಒಂಟಿ
ಚಪ್ಪಲಿಯಷ್ಟು ಅನಾಥ ಯಾರೂ ಇಲ್ಲ ನಿಜ
(ಒಂಟಿ ಚಪ್ಪಲಿ)
ಇಂಥ ವಿಷಾದದ ಸಾಲುಗಳನ್ನು ಪ್ರತಿ ಕವಿತೆಯಲ್ಲೂ ಇರುವುದರಿಂದಲೇ ಈ ಸಂಕಲನವನ್ನು ವಿಷಾದದ ಮಡುವಲ್ಲಿ ಅದ್ದಿ ತೆಗೆದ ಚಿತ್ರಗಳು ಎನ್ನಬಹುದು.

ಗುಂಡಿಗೆಯ ಬಡಿತ ನಿಂತ ದಿನವೂ
ಗುಂಡಿ ತಪ್ಪಿದ ಅಂಗಿ ಇವನ ತಲೆ ದಿಂಬಿಗೇ…
(ಅಪ್ಪನ ಅಂಗಿ) ಎನ್ನುವಾಗ ಈ ವಿಷಾದ ಪರಿಪೂರ್ಣ ಪ್ರಮಾಣ ಮುಟ್ಟುತ್ತದೆ. ಥಟ್ಟನೇ ಮತ್ತೆಲ್ಲಿಗೋ ಹೊರಳುವ ಪದ್ಯ
 
ಮುದಿ ಹಕ್ಕಿಯೊಂದು ಬಂದು
ಕೂರುವುದು ನೋಡಿದ್ದೇನೆ ಆಗಾಗ
ಬೆರ್ಚಪ್ಪನ ಭುಜದ ಮೇಲೆ ಎಷ್ಟೋ ಹೊತ್ತಿನ ತನಕ
ಹಸಿದರೂ ಜೋಳ ತಿನ್ನದೆ
ಎನ್ನುವಲ್ಲಿಗೆ ನಿಂತಿದ್ದರೆ ಸಾಕಿತ್ತು. ಆದರೆ ಕವಿತೆ
ಮರಳುವ ಅದರ ಮರಿ ಹಕ್ಕಿಗಳ ಸಮೇತ
ಅನ್ನುವಾಗ ಮುದಿ ಹಕ್ಕಿಯ ಜೊತೆ ಮರಿ ಯಾಕೆ ಬಂದಾವು ಅನ್ನುವ ಸೂಕ್ಷ್ಮ ಕಾಡದೇ ಇರದು.
 
ತಿಥಿಯ ಕಾರ್ಡಿನ ಮೇಲೆ
ಫೋಟೋ ಬೇಕೇ ಬೇಕು ಎಲ್ಲಿ ಹುಡುಕುವುದು
ಈಗ ಇವಳ ಒಂಟಿಯಾಗಿರುವ ಫೋಟೋ?
( ಮದುವೆ ಆಲ್ಬಮಿನಲಿ ಅವ್ವ) ಅನ್ನುವುದು ‘ಇವಳು
ಒಂಟಿಯಾಗಿರುವ ಫೋಟೋ’ ಎಂದಾಗಿದ್ದಿದ್ದರೆ ಮುಟ್ಟುತ್ತಿದ್ದ ಎತ್ತರವೇ ಬೇರೆ.
 
“ಲಕ್ಸ್ ಜಾಹೀರಾತಿನ ಶ್ರೀದೇವಿ” ಮೇಲ್ನೋಟಕ್ಕೆ ಸುರು ಆಗುವುದು ವ್ಯಂಗ್ಯದ ದನಿಯಲ್ಲಿ. ಆದರೆ ಪದ್ಯ ಬೆಳೆದಂತೆ ಅದು ಬದುಕ ಭೀಭತ್ಸತೆಗೆ ಢಿಕ್ಕಿಯಾಗಿ ಮತ್ತೆ ಶ್ರೀದೇವಿ ಮಹಾತ್ಮೆ
ಅವಳಿಗೆ ಮಾತ್ರ ಗೊತ್ತಾಗದಿರಲಿ
ಜೈ ಕಾಳಿ ಮಾತಾ   ಅಲಕ್ ನಿರಂಜನ್
 
ಎನ್ನುವ ಅಂತ್ಯ ಪಡೆಯುವುದೂ ಒಂದು ಸೊಗಸೇ!
ಉಳಿದ ಪದ್ಯಗಳ ಸಾಲನ್ನೂ ಉದ್ಧರಿಸಿ ಮತ್ತೆ ಕವಿಯ ಬೆನ್ನು ತಟ್ಟಬಹುದಾದರೂ ನೀವೇ ಅದನ್ನು ಓದಿದಾಗ ದಕ್ಕುವ ವಿಷಾದದ ಅಲೆ ನಿಮ್ಮೊಳಗನ್ನೂ ಮೀಯಿಸದೇ ಇರಲಾರದು ಅನ್ನುವುದು ಮಾತ್ರ ಸತ್ಯ!

‍ಲೇಖಕರು avadhi

February 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಒಳ್ಳೆಯ ವಿಮರ್ಶೆ; ಓದಬೇಕೆನಿಸಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: