
ಸಿಬಂತಿ ಪದ್ಮನಾಭ
ಇವರು ತಮ್ಮಯ್ಯ ಗೌಡರು. ಹೈಸ್ಕೂಲಿನಲ್ಲಿ ನನಗೆ ಇಂಗ್ಲಿಷ್ ಪಾಠ ಮಾಡಿದವರು. ಈ ಮೇಸ್ಟ್ರ ಕ್ಲಾಸು ಬಂತೆಂದರೆ ಹೊಟ್ಟೆಯೊಳಗಿಂದಲೇ ನಡುಕ. ಕಾರಣ, ವಾರದಲ್ಲಿ ಮೂರು ದಿನವೂ ಅವರು ಮಾಡುತ್ತಿದ್ದ ವ್ಯಾಕರಣ ಪಾಠ. ಹೇಳಿಕೇಳಿ ನಾವು ಅಚ್ಚಗನ್ನಡ ಮಾಧ್ಯಮದ ಹಳ್ಳೀ ಮಕ್ಕಳು. ಇಂದು ಅವರು ಹೇಳಿದ ವ್ಯಾಕರಣ ಸೂತ್ರಗಳನ್ನು ನಾಳೆ ಒಪ್ಪಿಸದೇ ಹೋದರೆ ಅಷ್ಟೇ ಕಥೆ.
Parts of Speechನಿಂದ ತೊಡಗಿ Active Voice-Passive Voice, Direct Speech-Indirect Speech, Tenses, ವಾಕ್ಯರಚನೆಯ ಬೇರೆಬೇರೆ ವಿಧಾನಗಳನ್ನೆಲ್ಲ ಎಂಟನೇ ಕ್ಲಾಸಿಗೇ ಅರೆದರೆದು ಕುಡಿಸಿದ್ದರು ಈ ತಮ್ಮಯ್ಯ ಮೇಸ್ಟ್ರು. ಇಂದು ಸಂಜೆ ಮೇಸ್ಟ್ರು I eat a mango ಎಂಬೊಂದು ವಾಕ್ಯ ಕೊಟ್ಟು ಕಳಿಸಿದರೆ ಮಾರನೆ ದಿನ ಬರುವಾಗ ಅದನ್ನು ಭೂತ, ವರ್ತಮಾನ, ಭವಿಷ್ಯತ್ಕಾಲದಲ್ಲಿ ಏಳು ಸರ್ವನಾಮಗಳನ್ನು ಬಳಸಿ ಬರೋಬ್ಬರಿ 74 ವಾಕ್ಯಗಳಲ್ಲಿ ಬರೆದು ತರಲೇಬೇಕಿತ್ತು. ನಾವು ಮೇಸ್ಟ್ರನ್ನು ಬಯ್ದುಕೊಳ್ಳದ ದಿನವೇ ಇರಲಿಲ್ಲವೇನೋ!
ಆದರೆ ತಮ್ಮಯ್ಯ ಮೇಸ್ಟ್ರು ಪ್ರಾತಸ್ಮರಣೀಯರಾಗುವುದಕ್ಕೆ ತುಂಬ ಸಮಯ ಹಿಡಿಯಲಿಲ್ಲ. ಅವರು ಪಟ್ಟು ಹಿಡಿದು ಮಾಡಿದ ಪಾಠ ಎಂತಹ ಕಾನ್ವೆಂಟಿನ ಮಕ್ಕಳ ನಡುವೆಯೂ ಎದೆಗುಂದದೆ ನಡೆದಾಡುವ ಆತ್ಮವಿಶ್ವಾಸ ನೀಡಿತು. ಡಿಗ್ರಿಗೆ ಬಂದಾಗಲಂತೂ ‘ಇಂಗ್ಲಿಷ್ ಮೀಡಿಯಂ ಮಕ್ಕಳಿಗಿಂತಲೂ ಈ ಕನ್ನಡ ಮೀಡಿಯಂ ಮಕ್ಕಳ ಇಂಗ್ಲೀಷೇ ಬೆಟರ್ರು’ ಎಂದು ಮೇಸ್ಟ್ರುಗಳೇ ಸರ್ಟಿಫಿಕೇಟ್ ನೀಡಿದ್ದುಂಟು. ಓದು ಮುಗಿಸಿ ಇಂಗ್ಲಿಷ್ ಪೇಪರಿಗೆ ಸೇರಿದಾಗಲೂ ಮತ್ತೆ ನೆನಪಾದವರೂ ಅದೇ ತಮ್ಮಯ್ಯ ಮೇಸ್ಟ್ರು.
ಅಂದಹಾಗೆ, ಎಂಟನೇ ಕ್ಲಾಸಿನಿಂದಲೇ ಪ್ರತಿದಿನ ಡೈರಿ ಬರೆಯುವುದನ್ನು ಕಡ್ಡಾಯ ಮಾಡಿದ ಪುಣ್ಯಾತ್ಮರೂ ಇವರೇ. ಅವರ ಒತ್ತಾಯಕ್ಕೋ ಹೆದರಿಕೆಗೋ ಬರೆಯತೊಡಗಿದ ಡೈರಿ ದಿನೇದಿನೇ ನಾನು ಬರೆಯುವುದನ್ನು ಅನಿವಾರ್ಯವಾಗಿಸಿತು. ಅದು ನನ್ನ ಜೀವನದ ಭಾಗವೇ ಆಯಿತು. ನಾನು ತುಂಬ ಪ್ರೀತಿಸುವ ಬರೆವಣಿಗೆ ನನ್ನ ಕೈಹಿಡಿದಿದ್ದರೆ ಅದರಲ್ಲಿ ತಮ್ಮಯ್ಯ ಮೇಸ್ಟ್ರ ಪಾಲು ದೊಡ್ಡದೆಂದು ಧಾರಾಳವಾಗಿ ಹೇಳಬಹುದು.
ಇದೆಲ್ಲ ಯಾಕೆ ನೆನಪಾಯಿತೆಂದರೆ…
ಮೊನ್ನೆ ಡಿಸೆಂಬರ್ 19ಕ್ಕೆ ನಾನು ಕಲಿತ ಕುಂತೂರು ಪದವಿನ ಸಂತ ಜಾರ್ಜ್ ಪ್ರೌಢಶಾಲೆಯ ವಾರ್ಷಿಕೋತ್ಸವ. ತಮ್ಮಯ್ಯ ಮೇಸ್ಟ್ರು ಈಗ ಆ ಶಾಲೆಯ ಹೆಡ್ಮಾಸ್ಟ್ರಾಗಿದ್ದಾರೆ. “ನೀನು ಬರಲೇಬೇಕು. ನನ್ನ ಶಿಷ್ಯ ಮಾತಾಡೋದನ್ನು ಕೇಳಬೇಕು. ಇಲ್ಲ ಅನ್ಬೇಡ” ಅಂತ ಒಂದೇ ಮಾತಿನಲ್ಲಿ ಹೇಳಿದ್ದರು. ನಾನು ಮರುಮಾತನಾಡದೆ ತುಂಬ ಇಷ್ಟಪಟ್ಟು ನನ್ನ ಶಾಲೆಗೆ ಹೋದೆ. ಮೇಸ್ಟ್ರೊಂದಿಗೆ ಕುಳಿತು ತುಂಬ ಹೊತ್ತು ಹರಟಿದೆ. ಶಾಲೆಯ ಸುತ್ತಮುತ್ತೆಲ್ಲ ನನ್ನಷ್ಟಕ್ಕೇ ನಡೆದಾಡಿದೆ. ಮಕ್ಕಳೊಂದಿಗೆ ಅರ್ಧ ಗಂಟೆ ನನ್ನ ನೆನಪುಗಳನ್ನು ಹಂಚಿಕೊಂಡೆ.
ನನ್ನ ಬರ್ತ್’ಡೇ ಇಷ್ಟೊಂದು ಸುಂದರವಾಗಿರುತ್ತದೆಂದು ನಾನಂತೂ ಊಹಿಸಿರಲಿಲ್ಲ.





ನಿನ್ನೆ ನಾವು ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡಿದ್ದು ಮತ್ತು ಅಂದಿನ ಶಿಕ್ಷಣ, ಸಂಬಂಧಗಳ ಅನನ್ಯತೆ ಇಂದು ಈ ಬರಹ ಎರಡೂ ಬಿಟ್ಟೂ ಬಿಡದೆ ಕಾಡುತ್ತಿದೆ. ತಮ್ಮಯ್ಯ ಮೇಷ್ಟರಿಗೆ ನನ್ನ ನಮನ..