ಹೈದರಾಬಾದ್ ವಿಶ್ವವಿದ್ಯಾನಿಲಯದಿಂದ ಹೊರಹಾಕಲ್ಪಟ್ಟ ದಲಿತ ಯುವಕ ರೋಹಿತ್ ವೇಮುಲ ಅವರು ಆತ್ಮಹತ್ಯಗೆ ಶರಣಾಗಿದ್ದಾರೆ. ಅವರ ಕೊನೆಯ ಪತ್ರ ನನ್ನನ್ನು ಕಲಕಿದೆ. ಅದನ್ನು ಕನ್ನಡಕ್ಕೆ ಭಾಷಾಂತರಿಸಿ (ತಪ್ಪುಗಳಿದ್ದರೆ ನನ್ನವೇ) ಹಾಕುತ್ತಿದ್ದೇನೆ. ಒಮ್ಮೆ ಓದಿ..
ದಲಿತನಾಗಿ ಆತನ ಬಾಲ್ಯ ಮತ್ತು ಕನಸುಗಳು ಹೇಗಿದ್ದವು ಎಂಬುದನ್ನು ಅರ್ಥಮಾಡಿಕೊಳ್ಳಿ. ಸಾಧ್ಯವಾದರೆ ಈ ಸ್ಥಿತಿಗೆ ಕಾರಣವಾದ ವ್ಯವಸ್ಥೆಯನ್ನು ವಿರೋಧಿಸಿ.
-ಕಿರಣ್ ಗಾಜನೂರು

ನಾನು ವಿಜ್ಞಾನ ಮತ್ತು ನಕ್ಷತ್ರಗಳನ್ನು ಪ್ರೀತಿಸುತ್ತಿದ್ದೆ. . . .
ಶುಭ ಮುಂಜಾನೆ,
ಈ ಪತ್ರವನ್ನು ಓದುವ ಹೊತ್ತಿಗೆ ನಾನು ಇರುವುದಿಲ್ಲ! ನನ್ನ ಮೇಲೆ ಸಿಟ್ಟಾಗಬೇಡಿ ನನಗೆ ಗೊತ್ತು ನಿಮ್ಮಲ್ಲಿ ಹಲವರು ನನ್ನ ಮೇಲೆ ತುಂಬಾ ಕಾಳಜಿ ವಹಿಸಿದ್ದೀರ, ಪ್ರೀತಿಸಿದ್ದಿರ, ತುಂಬಾ ಚೆನ್ನಾಗಿ ನೋಡಿಕೊಂಡಿದ್ದೀರ, ನನಗೆ ಯಾರ ಮೇಲೂ ದೂರುಗಳಿಲ್ಲ! ಹಾಗೆ ನೋಡಿದರೆ ನನಗೆ ಸಮಸ್ಯೆಗಳು ನನ್ನೊಂದಿಗೇ ಇದ್ದವು! ನಿಜ ಹೇಳಬೇಕು ಎಂದರೆ ಬೆಳೆಯುತ್ತಿರುವ ನನ್ನ ದೇಹ ಮತ್ತು ಆತ್ಮದ ನಡುವೆ ಅಂತರವಿದೆ ಎಂಬ ಭಾವ ನನ್ನಲ್ಲಿ ಅವರಿಸುತ್ತಿದೆ.
ನಾನು ಒಬ್ಬ ಬರಹಗಾರನಾಗಬೇಕು ಎಂದು ಆಶಿಸುತ್ತಿದ್ದೆ, Carl Sagan ರಂತೆ ಒಬ್ಬ ವಿಜ್ಞಾನದ ಬರಹಗಾರನಾಗಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ ಕೊನೆಗೆ ನನಗೆ ಈ ಕಡೆಯ ಪತ್ರ ಬರೆಯುವ ಅವಕಾಶ ಮಾತ್ರ ನನಗೆ ಸಿಕ್ಕಿದೆ.
ನಾನು ವಿಜ್ಞಾನ, ನಕ್ಷತ್ರ ಮತ್ತು ನಿಸರ್ಗವನ್ನು ಪ್ರೀತಿಸಿದೆ. ನಂತರ ನನಗೆ ಅರಿವಿಲ್ಲದೆ ನಿಸರ್ಗದ ಬಂಧವನ್ನು ಕಡಿದುಕೊಂಡ ಮನುಷ್ಯರನ್ನು ಪ್ರೀತಿಸಿದೆ. ಆದರೆ ವಾಸ್ತವದ ಜಗತ್ತಿನಲ್ಲಿ ಮನುಷ್ಯರ ನಡುವಿನ ಭಾವನೆಗಳು ಸೆಕೆಂಡ್ ಹ್ಯಾಂಡೆಡ್ ಆಗಿ ಬದಲಾಗಿವೆ, ಇಲ್ಲಿ ಪ್ರೀತಿಯೂ ಕೃತಕವಾಗಿ ನಿರ್ಮಿಸಲ್ಪಟ್ಟಿದೆ, ನಮ್ಮ ಭಾವನೆಗಳಿಗೆ ಬಣ್ಣ ಕೊಡಲಾಗಿದೆ. ನಮ್ಮ ನೈಜತೆಯು ಕೃತಕ ಕಲೆಯ ಮೂಲಕವೇ ಮೌಲ್ಯೀಕರಣಗೊಳ್ಳುವ ಹಂತಕ್ಕೆ ನಾವು ತಲುಪಿದ್ದೇವೆ. ನಿಜ ಹೇಳಬೇಕು ಎಂದರೆ ಇಂದು ಜಗತ್ತಿನಲ್ಲಿ ನೋವು ಇಲ್ಲದ ಪ್ರೀತಿಯನ್ನು ಪಡೆಯುವುದು ಅಂತ್ಯಂತ ಕಷ್ಟಕರವಾಗಿದೆ.. .
ಮನುಷ್ಯನೊಬ್ಬನ ಮೌಲ್ಯ ಈ ನಿಮಿಷದ ಗುರುತಿಸುವಿಕೆ ಮತ್ತು ಈ ಕ್ಷಣದ ಅವಕಾಶಗಳಿಗೆ ಪೂರಕವಾಗಿ ಸಂಕುಚಿತಗೊಳ್ಳುತ್ತಿದೆ. ಈ ಜಗತ್ತಿನಲ್ಲಿ ಮನುಷ್ಯ ನೈಸರ್ಗಿಕವಾಗಿ ಪ್ರಜ್ಞೆಯುಳ್ಳ ಜೀವಿಯಾಗಿ ಗುರುತಿಸಲ್ಪಡದೆ ಮತವಾಗಿ, ಸಂಖ್ಯೆಯಾಗಿ, ವಸ್ತುವಾಗಿ ಪರಿಗಣಿಸಲ್ಪಡುತ್ತಿದ್ದಾನೆ. ಜಗತ್ತಿನ ನೈಜ ಸೌಂದರ್ಯವನ್ನು ಇಂದು ಧೂಳು ಅವರಿಸುತ್ತಿದೆ ಇದು ಎಲ್ಲಾ ಕ್ಷೇತ್ರಗಳನ್ನು ಅಂದರೆ ಅಧ್ಯಯನ, ಬೀದಿಗಳು, ರಾಜಕೀಯ, ಸಾವು, ಬದುಕು ಎಲ್ಲವನ್ನೂ ಅವರಿಸುತ್ತಿದೆ.
ನಾನು ಈ ರೀತಿಯ ಪತ್ರವನ್ನು ಮೊದಲ ಬಾರಿ ಬರೆಯುತ್ತಿದ್ದೇನೆ. ಇದು ನನ್ನ ಮೊದಲ ಮತ್ತು ಕೊನೆಯ ಪತ್ರವಾಗಿದೆ. ನನ್ನ ಭಾವಗಳನ್ನು ನಿಮಗೆ ಅರ್ಥ ಮಾಡಿಸಲು ಸಾಧ್ಯವಾಗದಿದ್ದರೆ ಕ್ಷಮೆ ಇರಲಿ.
ಈ ಜಗತ್ತನ್ನು, ನೋವನ್ನು, ಪ್ರೀತಿಯನ್ನು, ಬದುಕು ಮತ್ತು ಸಾವುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಾನು ತಪ್ಪಿರಬಹುದು ಅವಸರವೇನಿಲ್ಲ! ಆದರೆ ನನಗೆ ಬದುಕನ್ನು ಬದುಕಬೇಕೆಂಬ ಉತ್ಸಾಹವಿತ್ತು! ಕೆಲವು ಜನರಿಗೆ ಬದುಕು ಎಂಬುದು ಒಂದು ಸಂಗತಿ ಅಷ್ಟೆ ಹಾಗೆ ನೋಡಿದರೆ ನನ್ನ ಹುಟ್ಟು ಒಂದು ಆಕಸ್ಮಿಕ ನಾನು ನನ್ನ ಬಾಲ್ಯದ ಒಂಟಿತನದಿಂದ ಚೇತರಿಸಿಕೊಂಡಿಲ್ಲ! ನಾನು ಗತದಲ್ಲಿ ಯಾರು ಹೊಗಳದ, ಗುರುತಿಸದ ಮಗುವಾಗಿದ್ದೆ.
ಈ ನಿಮಿಷದಲ್ಲಿ ನಾನು ನೊಂದಿಲ್ಲ, ಬೇಸರದಲ್ಲಿ ಇಲ್ಲ ಆದರೆ ಖಾಲಿಯಾಗಿದ್ದೇನೆ ನನ್ನ ಕುರಿತು ನನಗೆ ಯಾವುದೇ ನಿರೀಕ್ಷೆಗಳಿಲ್ಲ ತನ್ನೂಳಗೆ ತಾನು ಇಲ್ಲದಿರುವ ಈ ಸ್ಥಿತಿ ಬದುಕಿನ ಅಂತ್ಯಂತ ಕರುಣಾಜನಕ ಸಂಗತಿ! ಆ ಕಾರಣಕ್ಕೆ ನಾನು ಈ ಕೃತ್ಯವನ್ನು ಮಾಡುತ್ತಿದ್ದೇನೆ.
ನಾನು ಹೋದ ಮೇಲೆ ಜನ ನನ್ನನ್ನು ಹೇಡಿ, ಸ್ವಾರ್ಥಿ, ಮೂರ್ಖ ಎನ್ನಬಹುದು! ನಾನು ನನ್ನನ್ನು ಏನೆಂದು ಕರೆಯುತ್ತಾರೆ ಎಂಬುದರ ಕುರಿತು ಯೋಚಿಸುವುದಿಲ್ಲ. ನಾನು ಸಾವಿನ ನಂತರದ ಬದುಕಿನ ಕುರಿತಾದ ದೆವ್ವ, ಆತ್ಮಗಳ ಕಥೆಗಳನ್ನು ನಂಬುವುದಿಲ್ಲ. ನಾನು ಏನಾದರು ನಂಬುವುದಿದ್ದರೆ ನಾನು ಬೇರೆ ಲೋಕವನ್ನು ಕುರಿತು ಅರಿಯಲು ನಕ್ಷತ್ರಗಳ ಕಡೆ ಪಯಣಿಸುತ್ತೇನೆ ಎಂಬುದನ್ನು ಮಾತ್ರ ನಂಬುತ್ತೇನೆ.
ಈ ಪತ್ರ ಓದುತ್ತಿರುವವರು ನನಗೆ ಒಂದು ಸಹಾಯ ಮಾಡುತ್ತೀರ ಎಂದು ನಂಬುತ್ತೇನೆ. ನನಗೆ ಏಳು ತಿಂಗಳಿನ ಶಿಷ್ಯವೇತನ ಒಂದು ಲಕ್ಷದ ಎಪ್ಪತ್ತೈದು ಸಾವಿರ ಮಂಜೂರಾಗಿದೆ. ಅದನ್ನು ದಯಮಾಡಿ ನನ್ನ ಕುಟುಂಬಕ್ಕೆ ಕಳುಹಿಸಿ. ನಾನು ರಾಮ್ ಜಿ ಗೆ ನಲವತ್ತು ಸಾವಿರ ಹಣ ನೀಡಬೇಕು ಅವನು ಎಂದೂ ಅದನ್ನು ಕೇಳಿಲ್ಲ ಈ ಹಣದಲ್ಲಿ ಅದನ್ನು ಆತನಿಗೆ ನೀಡಿ.
ನನ್ನ ಅಂತಿಮ ಸಂಸ್ಕಾರ ಮೌನ ಮತ್ತು ಸರಳವಾಗಿ ನಡೆಯಲಿ, “ಹೀಗೆ ಕಂಡು ಹಾಗೆ ಹೋದ” ಎಂಬಂತೆ ಭಾವಿಸಿ ನನಗೋಸ್ಕರ ಕಣ್ಣೀರು ಹರಿಸಬೇಡಿ. ಏಕೆಂದರೆ ನಾನು ಬದುಕುವುದಕ್ಕಿಂತ ಸಾಯುವುದರಲ್ಲಿ ಸುಖಿಯಾಗಿದ್ದೇನೆ ಎಂಬುದನ್ನು ಗ್ರಹಿಸಿ. ನನ್ನ ಬದುಕು ನೆರಳಿನಿಂದ ನಕ್ಷತ್ರದವರೆಗೆ . . . .
ಉಮಾ ಅಣ್ಣ ಈ ಕೆಲಸಕ್ಕೆ ನಿನ್ನ ಕೋಣೆ ಬಳಸುತ್ತಿರುವುದಕ್ಕೆ ಕ್ಷಮಿಸು. ಅಂಬೇಡ್ಕರ್ ವಿಧ್ಯಾರ್ಥಿ ಸಂಘಟನೆ ನನ್ನ ಕುಟುಂಬ. ನಿಮ್ಮನ್ನು ನಿರಾಸೆ ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ. ನಿಮ್ಮೆಲ್ಲರ ಭವಿಷ್ಯಗಳು ಉಜ್ವಲವಾಗಲಿ ಎಂದು ಹಾರೈಸುತ್ತೇನೆ.
ಕೊನೆಯದಾಗಿ
ಜೈ ಭೀಮ್
ಇಷ್ಟೆಲ್ಲಾ ಬರೆದು ಈ ಪತ್ರದ ವಿಧಿ ವಿಧಾನಗಳನ್ನು ಬರೆಯಲು ಮರೆತೆ
ನನ್ನ ಈ ಆತ್ಮಹತ್ಯಗೆ ಯಾರೂ ಕಾರಣರಲ್ಲ. ನನ್ನನ್ನು ಯಾರೂ ಅವರ ವರ್ತನೆಗಳಿಂದಾಗಲಿ, ಮಾತುಗಳಿಂದಾಗಲಿ ಈ ಕೃತ್ಯಕ್ಕೆ ಪ್ರೇರೇಪಿಸಿಲ್ಲ. ಇದು ನನ್ನ ಸ್ವಂತ ನಿರ್ಧಾರ, ಇದಕ್ಕೆ ನಾನೇ ಹೊಣೆ. ನಾನು ಹೋದ ಮೇಲೆ ನನ್ನ ಮಿತ್ರರು ಮತ್ತು ಶತ್ರುಗಳಿಗೆ ತೊಂದರೆ ನೀಡಬೇಡಿ. . . .





ತುಂಬಾ ಮನ ಕಲಕುವ ಪತ್ರ; ಗಾಢ ವಿಷಾದವನ್ನು ಕವಿಸುವ ಪತ್ರ. ರೋಹಿತ್ ಅವರ ಈ ಪತ್ರವನ್ನು (ಅದು ಅನುವಾದವಾಗಿದ್ದರೂ) ಓದಿದಾಗ ಮುಂದೆ ಅವರೊಬ್ಬ ಸಮರ್ಥ ಲೇಖಕರಾಗುತ್ತಿದ್ದರು ಎಂಬುದಕ್ಕೆ ಸಂದೇಹವೇ ಇಲ್ಲ. ಅವರು ಇನ್ನೂ ಬಹು ಕಾಲ ಬದುಕಿ ಬಾಳಬೇಕಿತ್ತು. ಕನಿಷ್ಠ ಪಕ್ಷ ಅವರ ಕೊನೆಯಾಸೆಗಳಾದರೂ ಪೂರೈಸಿದರೆ ಆ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಬಹುದು. ತುಂಬಾ ನೋವಿನಿಂದ —ಸಿ. ಎನ್. ರಾಮಚಂದ್ರನ್
ಇನ್ನು ಬದುಕಬೇಕಿದ್ದ ಇ ನೆಲದ ಮಗ ಮಣ್ಣಾಗಿದ್ದಾನೆ ಮನುಷ್ಯತ್ವ ಇರುವ ಎಲ್ಲರು ಮಿಡಿಯುತ್ತಿದ್ದಾರೆ ನಕ್ಷತ್ರ ಕನಸಿನ ಹುಡುಗ ನಿನ್ನ ಸಾವು ವ್ಯರ್ಥವಾಗದು ..
ರೋಹಿತ ಬರೆದ ಪತ್ರವನ್ನು ಕನ್ನಡಿಗರಿಗೆ ತಲುಪಿಸಿದ ನಿಮಗೆ ಧನ್ಯವಾದಗಳು. ಅವರ ಪತ್ರವನ್ನು ಓದಿದರೆ ಸಂಕಟವಾಗುತ್ತದೆ. ಎಲ್ಲರನ್ನೂ ಕಾಡುವಂತೆ ಮಾನವ ಸಮಾಜದ ವಿವಿಧ ಸಂಬಂಧಗಳ ನಡುವಿನ ಭಾವನೆಗಳ ತಿಕ್ಕಾಟ, ವರ್ತನೆಗಳ ತಾಕಲಾಟ ಅವರನ್ನೂ ಕಾಡಿವೆ. ಆದರೆ ಅಂತಹ ಸನ್ನಿವೇಶಗಳ ಮೇಲೆ ಜಯ ಸಾಧಿಸುವಲ್ಲಿ ವೇಮುಲ ಸೋತು ಹೋದ ಹುಚ್ಚಪ್ಪ… ಒಂದೇ ಒಂದು ಸಲ ಯಾರಾದರೂ ಆಪ್ತರಲ್ಲಿ ಇಂತಹ ಭಾವನೆ ಬರುತ್ತಿದೆ ಅಂತ ತೋಡಿಕೊಂಡಿದ್ದರೆ ಮನಸ್ಸು ಹಗುರವಾಗಬಹುದಿತ್ತು… ಬದುಕಿನ ಮುಂದಿನ ದಾರಿ ಕಾಣಬಹುದಿತ್ತು….
ಯಾವುದೋ ಅನಾದಿ ನೋವೊಂದು ಜಾಗ ಬದಲಾಯಿಸುತ್ತಿದೆ
ಅನಂತ ಗಾಯಗಳು ಮೈಮುರಿಯುತ್ತಿವೆ ಒಡಲಾಳದಲ್ಲಿ
ಏಕೆ ಹೀಗೆ ಎಂದು ಯಾರನ್ನೂ ಕೇಳಬಾರದು
ನೀಲ ನಕ್ಷತ್ರವೇ
ನಿನಗಾಗಿ ಸಾವಿರ ಕಣ್ಣಿನ ಅಸಂಖ್ಯ ನವಿಲ ರಕ್ತಗಂಬನಿ
ಸತ್ಯವ ಹೇಳುತ್ತೇವೆ ಶಕ್ತಿಯ ಎದುರೇ
ಏಕಲವ್ಯನ ಹೆಬ್ಬೆರಳು ತುಂಡರಿಸಿದವರೇ ಇಂದು ನಿನ್ನ ಕತ್ತು ಹಿಸುಕಿದರು
ನಮ್ಮ ನಾಳೆಗಳಲ್ಲಿ
ನಕ್ಷತ್ರಗಳು ನೆಲದ ಮೇಲೂ ಉರಿಯುತ್ತವೆ
ಬೆಳಕಿಗೆ, ಬವಣೆಗೆ, ಎಲ್ಲದಕ್ಕೂ
ಸುಮ್ಮನಿರುವ ಮಾತೇ ಇಲ್ಲ
ಇಷ್ಟೊಂದು ಸಹಜ ಬದುಕಿನ ಯುವಕ ಹೀಗೆ ಮಾಡುತ್ತಾನೆಂದರೆ! ನಂಬಲಾಗುತ್ತಿಲ್ಲ. ನಮ್ಮ ನಡುವಿನ ಅತ್ಯಂತ ಅಪರೂಪದ ಹುಡುಗ! ಏನೂ ಹೇಳಲಾಗುತ್ತಿಲ್ಲ.
….ಮನುಷ್ಯತ್ವದ ವಿರೋಧಿಗಳಿಗೊಂದು ಧಿಕ್ಕಾರವಿರಲಿ. ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಅವಘಡ ನಡೆದುಬಿಟ್ಟಿದೆ. ರೋಹಿತ್ ದಯವಿಟ್ಟು ಈ ಜನರನ್ನು ಕ್ಷಮಿಸು. ನಿನ್ನ ಮಾನವೀಯ ಗುಣಕ್ಕೆ ತಲೆಬಾಗಿ ಸಲಾಮ್. ನಮ್ಮ ಯುವ ಜನಾಂಗ ಹೆಚ್ಚು ಹೆಚ್ಚು ಫ್ಲೆಕ್ಷಿಬಲ್ ಆಗಿರಬೇಕು. ಪ್ರತಿಯೊಬ್ಬರನ್ನು ಪರಸ್ಪರ ನೋಡುವ ದೃಷ್ಟಿಯೂ ಕೂಡ ಪ್ರೀತಿಯಿಂದ ತುಂಬಿರಬೇಕು. ನಮ್ಮ ಯುವಜನಾಂಗಕ್ಕೆ ನಾವು ವಿಷವನ್ನು ಉಣಿಸುತ್ತಿದ್ದೇವೆಯೇ? ತಪ್ಪು ನಮ್ಮೊಳಗೆ ಇದೆ. ಎಲ್ಲರೂ ಸರಿಪಡಿಸಿಕೊಳ್ಳೋಣ. ಸಕಲರ ಎದೆಗಳಲ್ಲಿ ಸಮತೆಯ ಹಣತೆ ಬೆಳಗುವುದರಿಂದ ಇಂತಹ ನೊಂದ ಹೃದಯಗಳು ಮತ್ತೆ ಬದುಕಿ ಬಾಳಿಯಾವು. ಯೋಚಿಸಿ….
We do not know Rohit Vemul ,but this note of him certainly shows he had talent His interest in stars , galaxies certainly appreciated but what circumstances provoked him to enter black holes of the galaxies Why university system became part of it also not known completely. Introvert and highly sensitive people often take extreme step Today’s fast life , pace external competitions , frustrations often lead to quick decisions It should not have happened Authorities should take precautions If there any culprits pushing them to take such decisions must be punished
ದುಃಖ, ನೋವು, ವಿಷಾದ ಯಾವ ಪದಗಳಿಗೂ ನೀನು ಹೊತ್ತ ಯಾತನೆಯ ಉರಿಮೂಟೆಯ ಸಂಕಟವನ್ನು ವರ್ಣಿಸಲು ಶಕ್ತಿ ಇಲ್ಲ ರೋಹಿತ್. ನಕ್ಷತ್ರ ಲೋಕಕ್ಕೆ ಪಯಣಿಸುತ್ತೇನೆನ್ನುವ ಮೂಲಕ ನೀನು ಆ ಉರಿಮೂಟೆಯನ್ನು ಬದುಕಿರುವ ನಿನ್ನ ತಂದೆ-ತಾಯಿಯ ಹೆಗಲಿಗೆ; ನಿನ್ನನ್ನು ಪ್ರೀತಿಸುವವರ ಹೆಗಲಿಗೆ ಹೊರಿಸಿಬಿಟ್ಟಿದ್ದೀಯ. ಬಹುಶಃ ನೀನು ಕೇರಳದ ಪ್ರೊ. ವಾರಿಯರ್ ಬರೆದ memories of father (ಪುತ್ರಶೋಕ: ಅನುವಾದ ಜಗದೀಶ್ ಕೊಪ್ಪ) ಕೃತಿಯನ್ನು ಓದಿಲ್ಲವೆನೊ. ಓದಿದ್ದರೆ ಇಂತಹ ಕೃತ್ಯಕ್ಕೆ ಖಂಡಿತ ಮುಂದಾಗುತ್ತಿರಲಿಲ್ಲ. ಅಲ್ಲಿ ರಾಜಕೀಯ ಕ್ರೌರ್ಯಕ್ಕೆ ನಿನ್ನಂತಹ ವಿದ್ಯಾರ್ಥಿ ಬಲಿಯಾದ. ಈಗ ನಿನ್ನ ಸಾವಿನ ಹಿಂದಿರುವುದೂ ಅದೇ ಕ್ರೂರತೆಯೇ. ಹೀಗೆ ಬಲಿಯಾದವರು ಇನ್ನಷ್ಟು ಮಂದಿ. ಆದರೆ, ಇಲ್ಲಿ ನಿನಗೆ ಹಾದಿಗಳಿತ್ತು. ನಿನ್ನ ಯಾತನೆಗೆ ದನಿ ತುಂಬಲು ನಿನ್ನ ಬೆನ್ನಿಗಿದ್ದವರು ಈ ಪರಿಯಾಗಿ ಸುಡುವಂತೆ ನೀನು ಮಾಡಬಾರದಿತ್ತು. ನಿನ್ನ ಮೊದಲ ಹಾಗು ಕೊನೆಯದಾದ ಈ ಪತ್ರ ಯಾವ ಸೃಜನಶೀಲ ಕೃತಿಗಿಂತಲೂ ಖಂಡಿತ ಮಿಗಿಲಾದುದೇ. ಹೇಳಬೇಕೆಂದರೆ ನಿನ್ನ ಪತ್ರ ಓದುತ್ತಿದ್ದ ಪ್ರತಿ ಕ್ಷಣದಲ್ಲು ನನಗೆ ಕಾಸರಗೋಡಿನ ಮೂಲೆಯಲ್ಲಿ ಕುಳಿತು ಬರೆದ ಕನ್ನಡದ ಕಥೆಗಾರ ಎಮ್.ವ್ಯಾಸರ ಕಥಾಪಾತ್ರ ಎದೆಗೆ ಒದೆಯುತ್ತಿರುವಂತನಿಸಿದ್ದು ಮಾತ್ರ ಸುಳ್ಳಲ್ಲ. ನಿನ್ನೆ ಮಧ್ಯಾಹ್ನ ಅವಧಿಯಲ್ಲಿ ನಿನ್ನ ಪತ್ರ ಓದಿದಾಗಲೇ ನಾನಿದನ್ನು ಬರೆದುಕೊಂಡೆ. ಆದರೆ, ನಿನ್ನ ಸಾವಿನ ಮುಂದೆ ಯಾವ ಅಕ್ಷರಗಳಿಗೂ ಅರ್ಥವಿಲ್ಲವೆನಿಸಿತ್ತು. ಇವತ್ತು ಮತ್ತೆ ಬರೆಯುತ್ತಿದ್ದೇನೆ “ನಿನ್ನ ಹಾದಿಯಲ್ಲಿ ನಡೆದು ಬರುತ್ತಿರುವವರು ಈ ಬಿಂದುವನ್ನು ಸಂಧಿಸಬಾರದೆಂಬ ಆಶಯದಿಂದ.
ಅನುಪಮಾ ಪ್ರಸಾದ್.
Beediyalli malagi,Tentu haaki
pratibhatisida ninna manasu
Saavinalleke summnayitu..
Saavu parihavadare
Dushtarella khushipattaru
Ninnante Ella ide daari hididaaru
Hedigalu hedarisuvaru
Bedarisuvaru basavaliyuvante
Maaduvaru konege dushta kanikara beeruvaru .