ಮಲ್ಲಿಕಾರ್ಜುನ ತಳವಾರ
ಸ್ವರ ಬರದಿದ್ರೂ….. ಬಾರಿಸ್ಲೇಬೇಕು ತಂಬೂರಿ
ನಿನ್ನೆ ಮೊನ್ನೆ ಪಕ್ಕದಲ್ಲಿ ಓಡಾಡಿಕೊಂಡಿದ್ದ ಹುಡುಗ, ‘ನಾನು ಬೆಂಗಳೂರಿಗೆ ಹೊರಟೆ’ ಎಂದು ಘೋಷಿಸಿದಾಗ ಜತೆಯಿದ್ದ ಗೆಳೆಯರ ಗುಂಪಿನೊಳಗೆ ಆಶ್ಚರ್ಯ. ಬಂಧುವರ್ಗದವರಲ್ಲಿ ಕುತೂಹಲ. ಸಮಾನ ಮನಸ್ಕರಲ್ಲಿ ಗೊಂದಲ. ಎಲಾ… ಇವನ ಅಂತೂ!. ನೆಲೆ ನಿಲ್ಲಾಕ ಹೊಂಟ ಪಾ… ಎಂಬಂತಹ ಹೆಮ್ಮೆ ಮತ್ತು ಬಿಗುಮಾನ. ಅಲೆಮಾರಿತನ ಮನುಷ್ಯನ ಸ್ವಭಾಗಳೆಲ್ಲೊಂದು. ಅನಿವಾರ್ಯ ಸಂದರ್ಭಗಳು ಊರು ಬಿಡಿಸುತ್ತವೆ. ಆದರೆ ನಾವೆಲ್ಲ ಅಂದುಕೊಂಡ ಹಾಗೇ ಒಕ್ಕಲುತನ ತನ್ನ ಬೆಲೆ ಕಳೆದುಕೊಂಡಿಲ್ಲ. ಅದರ ಬೆಲೆ ಕಳೆಯಲಾಗುತ್ತಿದೆ. ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ, ರೈತ ಈ ದೇಶದ ಬೆನ್ನೆಲುಬು ಅನ್ನುತ್ತಲೇ ಮಣ್ಣಿನ ಮಕ್ಕಳ ಬೆನ್ನು ಮುರಿಯಲಾಗುತ್ತಿದೆ. ಅದರ ಕಷ್ಟ ಅರ್ಥವಾಗಬೇಕಾದರೆ ಸಮೀಪದ ಯಾವುದಾದರೂ ತರಕಾರಿ ಹರಾಜು ಮಾರುಕಟ್ಟೆಗೆ ಭೇಟಿ ಕೊಟ್ಟರೇ ದಲ್ಲಾಳಿಗಳ ಹೊಟ್ಟೆ ನೆಲ ಮುಟ್ಟುತ್ತಿರುವಂತೆ ಭಾಸವಾಗುತ್ತಿರುತ್ತದೆ. ಬೆಳೆದದ್ದನ್ನು ಅವರ ಪಾದಕ್ಕೆ ಅಪರ್ಿಸಿ, ಕೊಟ್ಟಷ್ಟು ಇಸಿದುಕೊಂಡು ನಾವು ಮನೆಗೆ ಬಂದರೆ, ಉಂಟಾಗುವ ಕೊರತೆಗಳು ರೈತನ ಮಕ್ಕಳ ಒತ್ತಾಯದ ವಲಸೆಗೆ ಕಾರಣವಾಗಿಬಿಡುತ್ತವೆ.
ಅದಿರಲಿ, ತನ್ನಪ್ಪ ಒಂದು ಎಕರೆ ಹೊಲದಲ್ಲಿ ಮೆಣಸಿನಕಾಯಿ, ಟೋಮೆಟೋ ಬೆಳೆದು, ಮಾಯಾ ಪೆಟ್ಟಿಗೆಯಲ್ಲಿ ಬಂಗಾರದಂತ(?) ಅತ್ತೆ ಸೊಸೆಯರ ಕಿರಿಕ್ಕು ನೋಡುತ್ತಿದ್ದರೆ, ಅಕ್ಷರಸ್ಥ ಮಗನ ಕಣ್ಣಲ್ಲಿ ಅವನು ಹೆಬ್ಬೆಟ್ಟು. ವಾರದ ಸಂತೆ ದಿನ ಪಿಗ್ಮಿಯವನಿಗೆ ರೊಕ್ಕ ತುಂಬಿ ಅಡುಗೆ ಮನೆ ಸೇರುವ ಅಮ್ಮ ಪಾಪ!. ಒಂದು ಹಂತಕ್ಕೆ ಓದಿಕೊಂಡು ದೇಶ ಕಾಯಲು ಹೋದ ಅಣ್ಣ ಋತುಮಾನದ ಸಂಬಂಧಿ. ಇದೆಲ್ಲದರ ನಡುವೆ ತನ್ನ ನೆಲೆ ಇಲ್ಲದ ಬದುಕಿಗೆ ಹೇಗಾದರೂ ಮಾಡಿ ಲಗಾಮು ಹಾಕಿ ಕಟ್ಟಬೇಕು ಅನ್ನೋ ಆತ್ಮವಿಶ್ವಾಸ. ಅಂತಹ ಸಂದಿಗ್ಧ ಪರಿಸ್ಥಿಯಲ್ಲಿ ಊರು ಬಿಡಲು ಅವನು ಸಜ್ಜಾಗಬಹುದು. ಅದಕ್ಕೆ ಕಾರಣ ಅವನೂ ಹೌದು. ಅವನ ಸುತ್ತಲಿನ ಚುಚ್ಚುಮದ್ದು ಕೊಡುವ ಪರಿಸರವೂ ಹೌದು. ಏಕೆಂದರೆ, ಓದು ಮುಗಿಸಿ ಮನೆಯಲ್ಲಿರುವ ಹಳ್ಳಿ ಹುಡುಗರಿಗೆ ಡಿಮ್ಯಾಂಡಿಲ್ಲ. ಏನೂ ಬರದಿದ್ದರೂ ಬಿಳಿ ಉಡುಗೆ ಧರಿಸಿ ಪಂಚಾಯಿತಿ ರಗಳೆಗಳಲ್ಲಿ ಹವಾ ಮೇಂಟೇನ್ ಮಾಡೋ ಪುಢಾರಿಗಳಿಗೆ ಸಿಗೋವಷ್ಟು ಕಿಮ್ಮತ್ತು ಕೂಡ, ಅಕ್ಷರ ಕಲಿತ ಕುವರರಿಗೆ ಸಿಗಲ್ಲ. ಹಾಗಾಗಿ ಕೊನೆಯದಾಗಿ ಸಿಗುವ ಮಧುರ ಆಯ್ಕೆಯ ಹೆಸರು ಬೆಂಗಳೂರು.
ಒಂದು ಡಿಗ್ರಿ ಮುಗಿಸಿಕೊಂಡು ಅಥವಾ ತೋಚಿದಷ್ಟು ಓದಿಕೊಂಡು ಬೆಂಗಳೂರು ರೈಲು ಹತ್ತುವ ಪ್ರತಿ ಹಳ್ಳಿ ಹುಡುಗನಲ್ಲಿ ಅಗಾಧ ಕನಸಿರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಒಂದು ಹುಸಿ ಕನಸಾದರೂ ಇರುತ್ತದೆ. ಒಂದು ಸಲ ಈ ಊರು ಬಿಟ್ಟು, ಒಂದಷ್ಟು ವರ್ಷ ಬೆಂಗಳೂರಿನಲ್ಲಿ ದುಡಿದು ದುಡ್ಡು ಮಾಡಿ, ವಾಪಸ್ಸು ಊರಿಗೆ ಹೋಗಿ ಕಿರಾಣಿ ಅಂಗಡಿ ಹಾಕ್ಕೊಂಡು ಬದುಕುತ್ತೇನೆ! ಅನ್ನುವಂತಹ ಚಿಕ್ಕ ಕನಸಾದರೂ ಪ್ರತಿಯೊಬ್ಬ ಹುಡುಗನೂ ಹೊಂದಿರುತ್ತಾನೆ. ಆ ವಯಸ್ಸು ಕೂಡ ಅಂತಹ ರಭಸದ ಕನಸಿಗೆ ಸದ್ದಿಲ್ಲದೇ ಸಪೋಟರ್ು ಮಾಡುತ್ತಿರುತ್ತದೆ. ಆದರೆ ಹುಟ್ಟಿ ಬೆಳೆದು, ಆಡಿ ನಲಿದು, ಮರೆಯಾಲಾಗದ ಗಳೆಯರು, ಎಲ್ಲವನ್ನು ಬದಿಗೊತ್ತಿ, ಬೆಂಗಳೂರಿನ ಹಾದಿ ಹಿಡಿಯುವ ಹುಡುಗರಲ್ಲಿ ಮೂಡುವ ಅಭದ್ರತೆ, ತಳಮಳ, ಆತಂಕಗಳು ಸೃಷ್ಟಿ ಮಾಡುವ ಪರಿಸ್ಥಿತಿ ಮಾತ್ರ ಖಿನ್ನತೆಗಿಂತ ಕೊಂಚ ದೊಡ್ಡದು. ಆದರೆ, ಏನೇ ಮಾಡಿದರೂ ಬದುಕಿನ ನೈಜ ಜಾದೂಗಾರಿಕೆಯ ಮುಂದೆ ನಮ್ಮ ಲೆಕ್ಕಾಚಾರ ನಿಲ್ಲವುದಿಲ್ಲ. ‘ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ’ ಎಂಬ ಭಂಡ ಧೈರ್ಯದಲ್ಲಿ ಸಿಲಿಕಾನ್ ಸಿಟಿ ಜೀವನಕ್ಕೆ ತಕರಾರು ತೆಗೆಯದೇ ಒಗ್ಗಿಕೊಳ್ಳಬೇಕಾಗುತ್ತದೆ. ಇವರೇನಿದ್ದರೂ ಕಂಪ್ಯೂಟರ್ ಮುಂದೆ ತೌಡು ಕುಟ್ಟಲು ಮಾತ್ರ ಲಾಯಕ್ಕು! ಅಂದವರಿಗೆ ನಾವೇನು ಅಂತ ತೋರಿಸುವ ಹುಮ್ಮಸ್ಸು ಕೆಲವರದ್ದಾದರೆ, ಹೇಗಾದರಾಗಲಿ ಒಂದು ರೇಂಜಿಗೆ ಜೀವನ ಸ್ಥಿರಗೊಂಡರೆ ಸಾಕು ಎನ್ನುವವರದ್ದು ಇನ್ನೊಂದು ತೆರನಾದ ಮನಸ್ಥಿತಿ. ಹಾಗಂತ ಬರಿ ದಿಕ್ಕು ತಪ್ಪಿದವರೇ ಇಲ್ಲಿಗೆ ಬರುತ್ತಾರೆಂದಲ್ಲ. ಆದರೆ ಅಂತವರ ಪ್ರಮಾಣ ಹೆಚ್ಚಿರೋದಂತೂ ಖರೇ.

ಸುಮ್ಮನೇ ಹುಬ್ಬಳ್ಳಿ ಮತ್ತು ಇನ್ನಿತರೇ ಮಹಾನಗರಗಳ ರೈಲ್ವೇ ಅಂಗಳದಲ್ಲಿ ನಿಂತು ಗಮನಿಸಿದರೆ ಬ್ಯಾಗು ಹೊತ್ತುಕೊಂಡು ಬೆಂಗಳೂರಿಗೆ ಬರುವ ನೂರಾರು ಹುಡುಗರು, ಹುಡುಗಿಯರು ಸಿಗುತ್ತಾರೆ. ಬಂದ ನಂತರ ಎಕ್ಕಾ ಆದರೇನೂ ರಾಜಾ ಆದರೇನೂ ಎಲೆ ಕಲೆಸಲೇಬೇಕು. ಆಟ ಮುಗಿಯುವವರೆಗೆ ಕಾಯಲೇಬೇಕು. ಸಿಕ್ಕ ಸಣ್ಣ ಗೆಲುವನ್ನು ಫೇಸ್ಬುಕ್ಕಿನ ಗೋಡೆಗೆ ಅಂಟಿಸಿ ಕೇಕೆ ಹೊಡೆದು ನಗಬೇಕು. ಹೇಗಾದರೂ ಮಾಡಿ ಒಂದು ಕೆಲಸ ಹಿಡಿದು ರಾತ್ರಿ ಪಾಳಿ ಮುಗಿಸಿ ಚಾಟ್ನಾ ಅಂಗಡಿಯಲ್ಲಿ ಒಂದು ರೈಸ್ ಪಾರ್ಸಲ್ ಕಟ್ಟಿಸಿಕೊಂಡು ರೂಮಿನಲ್ಲಿ ತಿಂದು ಗಟಗಟ ಒಂದು ತಂಬಿಗೆ ನೀರು ಕುಡಿದು ‘ಯವ್ವಾ….. ಯಲ್ಲಮ್ಮ ನಿನ್ನ ದಯೆ ಇರಲಿ’ ಎಂದುಕೊಂಡು ಹಾಸಿಗೆಗೆ ಬೆನ್ನು ಕೊಟ್ಟರೇ ನಿದ್ರಾ ದೇವತೆ ಓಡಿ ಬಂದಾಳು. ಹಾಗಂತ ನಮ್ಮ ಹಳ್ಳಿ ಹುಡುಗರ ಬದುಕು ಮೂರಾಬಟ್ಟೆ ಅಂತಲ್ಲ. ಆದರೆ ‘ಇವನು ಏನೂ ಆಗೋದಿಲ್ಲ’… ಅನ್ನಿಸಿಕೊಂಡು ಬಂದವನಿಗೆ ಸಿಕ್ಕ ಪ್ರತಿ ಗೆಲುವು ಅಪ್ಯಾಯಮಾನವಾದದ್ದು. ಹೇಳಿ ಕೇಳಿ ಬೆಂಗಳೂರು ಉದ್ಯೋಗದ ಸಮುದ್ರ. ಏನಿಲ್ಲವೆಂದರೂ ಸೆಕ್ಯೂರಿಟಿ ಗಾರ್ಡ ಕೆಲಸವಾದರೂ ಆದೀತು. ಕೈ ಬಾಯಿ ಶುದ್ಧ ಇಟ್ಟುಕೊಂಡು ದುಡಿಯುವ ಎಲ್ಲರಿಗೂ ಬೆಂಗಳೂರು ಕಿಂಗ್ ಆಪ್ ಗುಡ್ ಟೈಮ್ಸ್ ಇದ್ದಂಗೇನೆ.
ಹಾಗಾದರೆ, ಬೆಂಗಳೂರಿನ ಹಾದಿ ಅಷ್ಟು ಸುಲಭದ್ದಾ? ಅಂದುಕೊಂಡರೆ ತಪ್ಪು. ಇಲ್ಲಿ ಕೂಡ ಎಲ್ಲಿ ಹೋದ್ರು ಬಿಡಲಿಲ್ಲ ಶನಿ ದೇವರು ಅನ್ನೋ ಹಾಗೇ ಕಷ್ಟಗಳ ಸರಮಾಲೆ ಕೊರಳಿಗೆ ಅಮರುತ್ತದೆ. ಇರಲು ಜಾಗ, ತಿನ್ನಲು ಅನ್ನ, ಮನಸ್ಸು ಹಂಚಿಕೊಳ್ಳಲು ಸಮಾನ ಮನಸ್ಕರ ಕೊರತೆ ಎಲ್ಲವೂ ಹಾಜರ್. ಮಾಡುವ ಕೆಲಸ ಗಾರೆ ಆದರೇನು? ಬ್ಯಾರೇ ಇದ್ದರೇನು. ಕೆಲಸಕ್ಕೆ ತಕ್ಕಂತಹ ರಗಳೆಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಆದರೆ ಕಟ್ಟಿಕೊಂಡು ಬಂದ ಕನಸಿನ ಗೋಪುರ ಕುಸಿಯಬಾರದು ಎಂದರೇ, ಸುಮ್ಮನೇ ಸಹಿಸಿಕೊಳ್ಳಬೇಕು. ಹೊಂಚು ಹಾಕಿ ಬೇಟೆಗಾಗಿ ಕಾಯುವ ಬೆಕ್ಕಿನಂತೆ ಅವಕಾಶಗಳಿಗಾಗಿ ಎದುರು ನೋಡಬೇಕು. ಸಿಕ್ಕ ಅವಕಾಶವನ್ನು ಮುಚ್ಚಿದ ಬಾಗಿಲು ತೆರೆದಾದರೂ ದಕ್ಕಿಸಿಕೊಳ್ಳಬೇಕು. ಸ್ವರ ಬರದಿದ್ದರೂ ತಂಬೂರಿ ಬಾರಿಸಲೇಬೇಕು.
ನಮ್ಮೂರಿನ ಹಸಿರು, ಜೋಳದ ರೊಟ್ಟಿ, ಮುದ್ದೆ ಸಾರು ಎಲ್ಲವನ್ನು ಮಿಸ್ ಮಾಡಿಕೊಳ್ಳುತ್ತ ಬದುಕುವ ಹುಡುಗರು ತಮ್ಮನ್ನು ನಂಬಿದವರಿಗೋಸ್ಕರ ದುಡಿಮೆಯನ್ನು ಎಂಜಾಯ್ ಮಾಡಲೇಬೆಕು. ಧೋ ಧೋ ಸುರಿಯುವ ಮಳೆಯಲ್ಲಿ ಆಲಿಕಲ್ಲು ಆಯುವ ಖುಷಿ, ಬಾತ್ ರೂಮಿನ ಷವರ್ ಸ್ನಾನದಲ್ಲಿ ಸಿಗಲಾರದು ಅಂದುಕೊಂಡರೂ, ಅನಿವಾರ್ಯವಾಗಿ ತಲೆ ತೊಯ್ಯಿಸಲೇಬೇಕು.. ಏನೇ ಪಡಿಪಾಟಲು ಪಟ್ಟು ದುಡಿದರೂ ಹೆತ್ತವರ ಕನಸಿಗೆ ಸತ್ವ ತುಂಬುವ ಈ ಮಾರ್ಗದಲ್ಲಿ ಸಂತೋಷವಂತು ಇರುತ್ತದೆ.
ತಿಂಗಳಿಡಿ ದುಡಿದು, ತಿಂಗಳು ಕೊನೆಗೆ ಸಮೀಪದ ಯಾವುದಾದರೂ ಬ್ಯಾಂಕ್ ಶಾಖೆ ಹುಡುಕಿ, ಬಂದ ಸಂಬಳವನ್ನೆಲ್ಲ ಮನೆಯವರ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಉಳಿದ ಚಿಲ್ಲರೆ ದುಡ್ಡಿನಲ್ಲಿ ಒಂದು ಅನ್ನ ಸಾಂಬಾರು ಉಂಡು, ರೂಮಿನ ಕಡೆ ನಡೆಯುವ ಜೀವಕ್ಕಿಂತ ಜವಾಬ್ದಾರಿಯುತ ಒಳ್ಳೆಯ ಹೃದಯ ಇನ್ನೆಲ್ಲಿರಲು ಸಾಧ್ಯ






ತುಂಬ ಚೆಂದ ಬರೆದಿದೀರಿ.ನನ್ನ ಲೇಖನಕ್ಕೆ ಪೂರಕವೂ ಆದಂತಿದೆ.ಹೀಗೇ ಬರೀತಾ ಇರಿ.ನಿಮ್ ಕಡೆ ಹಳ್ಳಿಗಳಕತೆ ಹೇಳಿ.
thank u madam ji
Hellow Mallikarjun,
Nimma baraha Odi vinoda, vishaada, vaicharika thaLamaLa, dukha,
namma jana auto/taxi driver, security guard, sales ishtakke seemitharagthiddaaralla …
ಮಲಕಾಜಿ ಛೋಲೊ ಐತ್ರಿ, ಧಾರವಾಡದ ಪೈಪೋಟಿ ದಿನ ನೆನಪಾದ್ವು…..
ಒಕ್ಕಲು ತನ ತನ್ನ ಬೆಲೆ ಕಳೆದುಕೊಂಡಿಲ್ಲ. ಅದರ ಬೆಲೆ ಕಳೆಯಲಾಗುತ್ತಿದೆ.ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ, ರೈತ ಈ ದೇಶದ ಬೆನ್ನೆಲುಬು ಅನ್ನುತ್ತಲೇ ಮಣ್ಣಿನ ಮಕ್ಕಳ ಬೆನ್ನು ಮುರಿಯಲಾಗುತ್ತಿದೆ —ಅಬ್ಬಬ್ಬಾ ಎಂಥ ಸತ್ಯದ ಮಾತುಗಳು ! ಅಭಿನಂದನೆಗಳು -ಮಲ್ಲಿಕಾರ್ಜುನ ತಳವಾರ ರವರಿಗೆ.
artha garbhita
Nice brother,nijvaglu nin knowledg ge kiayetti mugibeku,nin barabanige nange tumba tumbane hidisutte. Saar…
yallarugu dhanayavadagalu.
good keep on writing.
hai brother,sogasagide baraha.anubhavisida tallanagalanna yeleyeleyagi bichhchittiruve keep it up.
thumba channagide sir.
tumba channagide sir.