
ಸ್ಪೂರ್ತಿ ಗಿರೀಶ್
ಇದು ಬರಿ ಗಡಿಯಾರವಲ್ಲೋ ಅಣ್ಣಾ
ಮುಳ್ಳುವಾಡಗಳಲ್ಲಿ
ಬಂಧಿಸಿಹುದು ಎನ್ನ.
ಗಳಿಗೆಗೋ
ಎರಡು ಅಂಕಿ ಗೆರೆಯಲ್ಲಿ
ಕಾಲದ ಕುದುರೆ ಓಡಿಸುವುದೇ ಕಾಯಕ.
ಎಷ್ಟೊಂದು ದಾವಂತ
ಹಳ್ಳ ಕೊಳ್ಳ ತಿಟ್ಟತ್ತಿ ತಿರುಗಿ
ಗಡಿಯಾರ ಬೆನ್ನಿಗೆ ಕಟ್ಟಿಕೊಂಡ
ನದಿಗೋ
ಕಡಲ ಸೇರುವುದೇ ಗಮ್ಯ.
ಕಡಲಿಗೋ
ಕಾಲ ಬೆಂಬತ್ತಿ
ಹಿಂತಿರುಗಿ ನದಿಯಾಗಲಾರದ ಮರಳು ಸವೆತ.
ದಾಹದ ಕಿಚ್ಚಿನಲಿ
ಮೋಹದ ಹುಚ್ಚಿನಲಿ
ಬದುಕ ಬೇಯಿಸಿ
ಬರಿಗೈಯಲ್ಲಿ ಮಣ್ಣಾಗಿಸುವ
ಕಾಲದ ಮಾಯೆಗೆ ಸಿಲುಕಿ
ಪಡೆಯಬಹುದೇ ಯಾರದರೂ ಅಮರತ್ವ
ಗಡಿಯಾರವನು ಸಾಕ್ಷಿಯಿಟ್ಟು ?
ಓಡುತ್ತಲಿರು ಓ ಪುಟ್ಟ ಹುಡುಗ
ಇಂದಿಗೋ ನಾಳೆಗೋ
ಗಮ್ಯಸೇರಿಕೋ ಅಲ್ಲಿಹುದು ಎಲ್ಲರ ನಿಲ್ದಾಣ.

ಇದುವೆ ಆಟಕೆ ಸಮಯ..
ಗಣಪತಿ ದಿವಾಣ
ಆಡು ಮಗುವೇ ನೀನು
ಇದುವೆ ಸರಿ ಸಮಯ
ಹೊತ್ತು ಕಳೆದರೆ ಮತ್ತೆ
ಕತ್ತಲಾಗುವುದಿನ್ನು
ಆಡು ಜೀವವೆ ನೀನು
ಬದುಕು ಬಯಸುವ ಆಟ
ಟೊಂಕ ಕುಂಟೆಬಿಲ್ಲೆ
ಮರಕೋತಿ ಆಟ
ಈಗ ಆಡಿದ್ದೀಗ
ಮತ್ತೆ ಬಾಯಿಯ ಚಪಲ
ಎಷ್ಟು ಆಡಿದರೇನು
ಈಗ ಆಡಿದ ಹಾಗೋ?
ಆಡು ಆಟವ ನೀನು
ಮೋಸ ಮಾಡದ ಹಾಗೆ
ಮೋಸ ಆಗದ ಹಾಗೆ
ಚಂದದಾಟವನಾಡು
ಮುಗಿಲ ಕರಗಿಪ ಆಟ
ಮಳೆಯ ಸುರಿಸುವ ಆಟ
ಚಿಗುರ ಚಿಗುರಿಪ ಆಟ
ಹೂವ ಅರಳಿಪ ಆಟ
ಪ್ರೀತಿ ಹಂಚುವ ಆಟ
ಹುಚ್ಚೆದ್ದು ಕುಣಿಕುಣಿದು
ಅಳುವ ಮರೆಯುವ ಆಟ
ನಗುವ ಚೆಲ್ಲುವ ಆಟ
ತಡೆಯುವರು ನಿನ್ನನ್ನು
ಸಣ್ಣವನು ನೀನು
ಅವರ ಕನಸಿನ ಬಾಣ
ಇದು ಡೊಂಬರಾಟ
ರೆಕ್ಕೆ ಮೂಡಿದ ಹಕ್ಕಿ
ಹಾರುವ ಬೆಳ್ಳಕ್ಕಿ
ಮತ್ತೆ ಕೂರುವುದೇನು
ಗೂಡಿನೊಳಗೆ
ಮತ್ತೆ ಬಾರದು ತಿರುಗಿ
ನೆನಪಾದ ಆ ದಿನವು
ಈ ದಿನವೆ ನಿನಗೆ
ಮುಂದೊಂದು ನೆನಪು
ಬುತ್ತಿ ಕಟ್ಟಿಕೊ ನೀನು
ಸಿಹಿ ನೆನಪ ತುಂಬಿಸಲು
ಕಾಯದಿರು ಯಾರನ್ನು
ಇದುವೆ ಆಟಕೆ ಸಮಯ.





0 Comments