ಇದು, ನನ್ನ ಮನಸ್ಸಿನ ಮಾಯಾಬಜಾರು…

 

ಅಂಗೈಯಲ್ಲಿದ್ದ ಪಾಸ್ ಅನ್ನು ಮತ್ತೊಮ್ಮೆ ನೋಡಿದೆ..

ಜೋಪಾನವಾಗಿಟ್ಟಿದ್ದ ಐದು ವರ್ಷಗಳ ಪಾಸ್ ಗಳ ಜೊತೆ ಇದನ್ನೂ ಸೇರಿಸಿದೆ. ಅದು ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದ ಪಾಸ್. ಯಾಕೋ ಗೊತ್ತಿಲ್ಲ, ಈ ಎಲ್ಲಾ ಪಾಸ್ ಗಳನ್ನೂ ನನ್ನ ಸರ್ಟಿಫಿಕೇಟ್ ಗಳಿಗಿಂತಾ ಜೋಪಾನವಾಗಿಟ್ಟುಕೊಂಡಿದ್ದೇನೆ.

ನನಗೆ ಚಿತ್ರೋತ್ಸವ ಅಂದರೆ ಚಿತ್ರಗಳು ಮಾತ್ರ ಅಲ್ಲ, ಅದು ಶುರುವಾಗುವ ಮೊದಲೇ ನೋಡಬೇಕಾದ ಚಿತ್ರಗಳ ಪಟ್ಟಿ ಮಾಡಿಕೊಳ್ಳುವುದು, ಅವುಗಳ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಅನ್ನು ಜಾಲಾಡುವುದು, ಅಲ್ಲಿ ಹೆಜ್ಜೆ ಇಟ್ಟ ಕೂಡಲೆ ಸ್ನೇಹಿತರಿಗಾಗಿ ಹುಡುಕುವ ಕಣ್ಣುಗಳು, ಅಲ್ಲಿರುವ ಜನರಲ್ಲಿ ಎಷ್ಟೊಂದು ಜನ ನಮ್ಮೋರು, ಸಿಕ್ಕ ಒಂದೆರಡು ನಿಮಿಷಗಳಲ್ಲಿ ಬೆಚ್ಚನೆಯ ಕೈ ಸ್ಪರ್ಶ, ಸ್ನೇಹದ ಅಪ್ಪುಗೆ, ’ಇದನ್ನು ಮಿಸ್ ಮಾಡಲೇಬೇಡಿ’ ಎನ್ನುವ ಅಕ್ಕರೆ, ಉದ್ದಾನೆ ಸಾಲುಗಳಲ್ಲಿ ನಿಲ್ಲುವ ಖುಷಿ, ಮಾತು, ಅವಸರದಲ್ಲಿ ತಿನ್ನುವ ತಿಂಡಿ, ಇಡಿ ದಿನದ ಕನಸಿನ ಲೋಕ..

 

ನೋಡಿದ 25 ಚಿತ್ರಗಳು, ಕಾಡಿದ, ಕಾಡುತ್ತಲೇ ಇರುವ Letters from Prague, Polor Boy, Salesman, Loving Lou, Pretenders, Personal affairs, Clash, Distinguished Citizen, Sami Blood, One man and his Cow, Warehoused, Neruda, Flemish Heaven….

ಅಯ್ಯೋ ಮಿಸ್ ಆಯ್ತಲ್ಲ ಅಂದುಕೊಂಡ ಚಿತ್ರಗಳು…

ಪ್ರತಿ ಸಲ ಹೀಗೆ, ಚಿತ್ರಗಳನ್ನು ನೋಡುವುದು, ಆ ಕ್ಷಣದ ತೀವ್ರತೆ, ಸಂವೇದನೆ, ಆದರೆ ಸ್ವಲ್ಪ ದಿನಗಳಾಗುವಷ್ಟರಲ್ಲಿ ಒಟ್ಟೊಟ್ಟಾಗಿ ನೋಡಿದ ಚಿತ್ರಗಳು ಮನಸೆಂಬ ಬೆಳ್ಳಿತೆರೆಯಲ್ಲಿ ಕೊಲಾಜ್ ಆಗಿ ಉಳಿದುಬಿಡುತ್ತದೆ. ಹಾಗಾಗಿಯೇ ನನ್ನನ್ನು ಕಾಡುವ ಕೆಲವು ಚಿತ್ರಗಳ ಬಗ್ಗೆ ಅನಿಸಿದ್ದನ್ನು ಬರೆದುಬಿಡೋಣ ಎನ್ನುವ ಪ್ರಯತ್ನ ಇದು.

ಚಿತ್ರಗಳ ಬಗ್ಗೆ ನನಗೆ ಮೋಹ ಮೂಡಿದ್ದೆಲ್ಲಿಂದ ಎಂದು ಹುಡುಕುತ್ತೇನೆ. ಇಂದಿಗೂ ನಾನು ಎಲ್ಲರೂ ಮೆಚ್ಚಿ ಅಹುದಹುದೆನ್ನುವ ಕ್ಲಾಸಿಕ್ ಗಳನ್ನು ನೋಡುವಷ್ಟೇ ಪ್ರೀತಿಯಿಂದ ಪಕ್ಕಾ ಮಸಾಲೆ ಕಥೆ ಇರುವ ತೆಲುಗು ಚಿತ್ರವನ್ನೂ ನೋಡುತ್ತೇನೆ. ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಒಂದು ವಾರ ವರಸೆಯಾಗಿ ೨೫ ಚಿತ್ರಗಳನ್ನು ನೋಡಿದ ಮೇಲೂ ಮರುದಿನ ಪಕ್ಕಾ ಕಮರ್ಷಿಯಲ್ ಚಿತ್ರವೊಂದಕ್ಕೆ ಹೋಗಿ ತಲೆದೂಗಬಲ್ಲೆ.

ಸಿನಿಮಾ ಎನ್ನುವುದೊಂದು ಮಾಯಾಬಜಾರು

ಏನು ಹೇಳುತ್ತಿದ್ದಾರೆ ಎನ್ನುವುದಷ್ಟೇ ಅಲ್ಲ, ಅದನ್ನು ಎಷ್ಟು ಚೆನ್ನಾಗಿ ಹೇಳುತ್ತಾರೆ ಎನ್ನುವುದೂ ಅಷ್ಟೇ ಮುಖ್ಯ ಇಲ್ಲಿ.

ನನ್ನಮ್ಮ ಕೈಗೆ ತುತ್ತು ಹಾಕುವಾಗ ‘ಉಗುರೆ ಚಿಗುರೇ’ ಮರದ ಕಥೆ ಹೇಳುತ್ತಿದ್ದರು. ರಾಜಕುಮಾರಿಯ ಉಗುರಿನ ತುಂಡು ತೋಟದಲ್ಲಿ ಬಿದ್ದು, ಅದು ಮರವಾಗಿ ಬೆಳೆದು, ಮರದ ಕೊಂಬೆಯಿಂದ ರಾಜಕುಮಾರನೊಬ್ಬ ರಾಜಕುಮಾರಿಯ ಛಾವಣಿಗೆ ಇಳಿದು ಬರುವ ಕಥೆ ಅದು.

’ಅರೆ, ಉಗುರು ಚಿಗುರಲು ಸಾಧ್ಯವೆ, ರಾಜಕುಮಾರ ಕೋಟೆ ಗೋಡೆ ಹಾರಲು ಸಾಧ್ಯವೆ’ ಎಂದು ಪ್ರಶ್ನಿಸಿದ ದಿನ ನಾನು ಕಥೆಗಳಲ್ಲಿನ ಬೆರಗು ಕಳೆದುಕೊಳ್ಳುತ್ತೇನೆ, ಕಥೆ ಸಾಯುತ್ತದೆ. ನನಗೆ ಚಿತ್ರಗಳೂ ಅಷ್ಟೇ. ಸಿನಿಮಾ ಎನ್ನುವ ಮಾಯಾಬಜಾರಿಗೆ ನಾನು ಪ್ರತಿಸಲ ಅದೇ ಪುಟ್ಟ ಹುಡುಗಿಯಾಗಿ ಹೋಗುತ್ತೇನೆ ಮತ್ತು ನನ್ನ ಆ ಮಾಯಾಬಜಾರು ಇಂದಿಗೂ ತನ್ನ ಬೆರಗನ್ನು ಹಾಗೆಯೇ ಉಳಿಸಿಕೊಂಡು ಬಂದಿದೆ.

ಕಥೆಯೊಂದು ವಾಸ್ತವದ ಗೆರೆಗಳನ್ನು ಅಳಿಸಿ ಅವಾಸ್ತವದ ಎಲ್ಲೆಕಟ್ಟುಗಳನ್ನು ಹೊಕ್ಕಾಡಬಹುದಾದರೆ ಒಂದು ಸಿನಿಮಾ ಆ ಪ್ರಯತ್ನ ಮಾಡಿದಾಗ ನಮಗೆ ಯಾಕೆ ಅದು ಅವಾಸ್ತವ ಎನ್ನಿಸಬೇಕು? ಕಾಫ್ಕನ ‘ಮೆಟಮಾರ್ಫೋಸಿಸ್’ ನನ್ನೊಡನೆ ತನ್ನ ಸಂಕೇತಗಳಲ್ಲಿ ಮಾತನಾಡಿದರೆ ರಾಜಮೌಳಿಯ ‘ಈಗ’ ನನ್ನೊಡನೆ ತನ್ನ ಕಲ್ಪನಾಶಕ್ತಿಯ ಬೆರಗಿನಿಂದ ಪಿಸುಗುಟ್ಟುತ್ತದೆ.

“ನಮೋ ವೆಂಕಟೇಶ, ನಮೋ ತಿರುಮಲೇಶ, ಮಹಾನಂದಮಾಯೆ, ಓ ಮಹಾದೇವ ದೇವ..”, ಊರಾಚೆಯ ಬಯಲಿನಲ್ಲಿದ್ದ ಟೂರಿಂಗ್ ಟಾಕೀಸ್ ನ ದೊಡ್ಡ ದೊಡ್ಡ ಸ್ಪೀಕರ್ ಗಳಿಂದ ಈ ಹಾಡು ಕೇಳುತ್ತಿದ್ದಂತೆಯೇ ನಮಗೆಲ್ಲಾ ರೋಮಾಂಚನ, ಇನ್ನೇನು ಫಿಲಂ ಶುರುಯಾಗುತ್ತದೆ ಅಂತ. ಫಿಲಂ ನೋಡಲು ನಾವು ಥಿಯೇಟರ್ ಗೆ ಹೋಗಬೇಕು ಅಂತೇನೂ ಇರಲಿಲ್ಲ, ರೂಮಿನ ಎತ್ತರದ ಕಿಟಕಿ ಬಳಿ ಕೋಡುಬಳೆಯಂತೆ ಸುತ್ತಿಟ್ಟಿರುತ್ತಿದ್ದ ಹಾಸಿಗೆಗಳ ರಾಶಿಯೇರಿ ಕೂತು, ಕಿಟಕಿಗೆ ಕಿವಿ ನೆಟ್ಟರೆ ಸಾಕು ಸಿನಿಮಾ ಸೌಂಡ್ ಟ್ರಾಕ್ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಆಗೆಲ್ಲಾ ಇಡೀ ಇಡೀ ಸಿನಿಮಾ ಬಾಯಿಪಾಠ ಆಗಿರುತ್ತಿತ್ತು!

 

“ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು, ನಿನ್ನ ಕೈಲಾಡೋ ಗೊಂಬೆ ನಾನಯ್ಯ, ಗೊಂಬೆ ನಾನಯ್ಯ, ತಾನ ತಂದಾನ ತಾನ, ತಾನ ತಂದಾನ ತಾನ..” ಕಲಿತದ್ದು ಇಲ್ಲಿ, ಕುಣಿದದ್ದು ಇಲ್ಲಿ..

“ಏಮಂಟಿವೇಮಂಟಿವಿ, ಇದಿ ಕ್ಷಾತ್ರ ಪರೀಕ್ಷಮೇ ಕಾನಿ, ಕ್ಷತ್ರಿಯ ಪರೀಕ್ಷ ಕಾದು ಕದ? ಕಾದು, ಕಾಕೂಡದು (ಏನಂದಿರೇನಂದಿರಿ, ಇದು ಕ್ಷಾತ್ರ ಪರೀಕ್ಷೆಯೇ ಹೊರತು, ಕ್ಷತ್ರಿಯ ಪರೀಕ್ಷೆ ಅಲ್ಲ ಅಲ್ಲವಾ, ಹಾಗಲ್ಲ, ಹಾಗಿರಕೂಡದು), ಧನುರ್ವಿದ್ಯಾ ಪ್ರದರ್ಶನಕ್ಕೆ ಬಂದ ಕರ್ಣನನ್ನು, ಅವನು ಸೂತ ಕುಲದವನೆಂದು ಛೇಡಿಸಿದಾಗ ಧುರ್ಯೋದನ ಅಬ್ಬರಿಸಿ ಹೇಳುವ ಈ ಮಾತನ್ನು ಕೇಳಿ ರೋಮಾಂಚನಗೊಂಡಿದ್ದು ಇಲ್ಲಿ..

‘ಭಾಗ್ಯವಂತರು’ ನೋಡಿ ಅತ್ತದ್ದು, ‘ಗುರುಶಿಷ್ಯರು’ ನೋಡಿ ನಕ್ಕಿದ್ದು, ಗುಟ್ಟಾಗಿ ಸ್ಕ್ರೀನಿನ ಹಿಂದೆ ಬಗ್ಗಿ ರಾಜಕುಮಾರ್ ಅಲ್ಲಿರಬೋದ ಅಂತ ನೋಡಿದ್ದು ಎಲ್ಲಾ ಇಲ್ಲಿಯೇ! ಅಜ್ಜಿ ಮನೆಗೆ ರಜಕ್ಕೆ ಹೋದರೆ ರಜೆ ಮುಗಿಯುವ ವೇಳೆಗೆ ನಾಲ್ಕೈದು ಸಿನಿಮಾ ಸಂಭಾಷಣೆ ಕಂಠಪಾಠ ಆಗಿರುತ್ತಿತ್ತು!

ನನ್ನ ಬಾಲ್ಯ, ಶಾಲೆ, ಕಾಲೇಜು ಎಲ್ಲಾ ಕೋಲಾರ ಜಿಲ್ಲೆಯಲ್ಲಿ. ಹೀಗಾಗಿ ನಾವು ಕನ್ನಡ, ತೆಲುಗು ಮತ್ತು ತಮಿಳು, ಈ ಮೂರೂ ಭಾಷೆಯ ಚಿತ್ರಗಳನ್ನೂ ನಿರ್ವಂಚನೆಯಿಂದ ನೋಡುತ್ತಿದ್ದೆವು! ಪೌರಾಣಿಕ, ಐತಿಹಾಸಿಕ ಚಿತ್ರಗಳ ಎನ್ ಟಿ ಆರ್, ಸಾಮಾಜಿಕ ಅದರಲ್ಲೂ ದುರಂತ ಪಾತ್ರಗಳ ಎ ಎನ್ ಆರ್, ತಮಿಳಿನಲ್ಲಿ ಮಿಂಚಿದ ಕನ್ನಡದ ಕೋಕಿಲಾ ಮೋಹನ್, ಯಾವಾಗಲೂ ಪೊಲಿಟಿಕಲಿ ಕರೆಕ್ಟ್ ಆಗೇ ಇರುತ್ತಿದ್ದ ಆರತಿ, ಭಾವುಕತೆಯ ಕಲ್ಪನ, ಬೊಂಬೆಯಂತಹ ಭಾರತಿ ಎಲ್ಲರೂ ನಮ್ಮವರೇ. ಈಗಲೂ ನಾನು ಎಲ್ಲಾ ಭಾಷೆಯ ಚಿತ್ರಗಳನ್ನೂ ನೋಡುತ್ತೇನೆ.

ಕುಡುಕರು ದುಃಖ ಆದರೆ ನೋವು ಮರೆಯಲು, ಸಂತೋಷ ಆದರೆ ಆಚರಿಸಲು ಕುಡಿಯುವ ಹಾಗೆ ನಾವು ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಬಂದರೆ, ಸ್ಕೂಲಲ್ಲಿ ಮೇಷ್ಟ್ರು ಬೈದರೆ, ಶಿವರಾತ್ರಿ ಜಾಗರಣೆ ಮಾಡಬೇಕಾದರೆ, ನ್ಯೂ ಇಯರ್ ಸೆಲೆಬ್ರೇಟ್ ಮಾಡಬೇಕಾದರೆ ಎಲ್ಲಕ್ಕೂ ಓಡುತ್ತಿದ್ದದ್ದು ನಮ್ಮೂರಿನಲ್ಲಿದ್ದ ಎರಡು ಥಿಯೇಟರ್ ಗಳಿಗೇ..

ಒಂದು ಸಲ ಅಂತೂ ಬೆಳಗಾದರೆ ೭ ನೇ ತರಗತಿ ಪರೀಕ್ಷೆ, ರಾತ್ರಿ ಸೆಕೆಂಡ್ ಶೋಗೆ ಅಪ್ಪ ಅಮ್ಮನ ಜೊತೆ ನಾನು ‘ನಾನೊಬ್ಬ ಕಳ್ಳ’ ಸಿನಿಮಾಗೆ ಅಮೋಘ ಮೂರನೇ ವೀಕ್ಷಣೆಗೆ. ಆಗ ನಮ್ಮ ಓದು ಪರೀಕ್ಷೆ ಬಗ್ಗೆ ಯಾರೂ ಅಷ್ಟು ತಲೆ ಕೆಡಿಸಿಕೊಳ್ಳುತ್ತಲೂ ಇರಲಿಲ್ಲ, ಅದು ಬೇರೆ ವಿಷಯ. ಆದರೆ ನನ್ನ ಗ್ರಹಚಾರಕ್ಕೆ ನಮ್ಮ ಮೇಷ್ಟ್ರು ನಿದ್ದೆ ಬಾರದೆ ಅದೇ ಶೋಗೆ ಬರಬೇಕೆ? ಅವರು ಬೆಳಗ್ಗೆ ಪರೀಕ್ಷೆ ಇಟ್ಟುಕೊಂಡು, ಅಚ್ಚುಕಟ್ಟಾಗಿ ಕಡ್ಲೆಬೀಜ ಪ್ಯಾಕೆಟ್ ಹಿಡಿದು ಮಗಳನ್ನು ಫಿಲಂಗೆ ಕರೆದುಕೊಂಡು ಬಂದ ಅಪ್ಪ ಅಮ್ಮನನ್ನು ನೋಡಿದ ನೋಟ ಇನ್ನೂ ಕಣ್ಣಿಗೆ ಕಟ್ಟಿದಂತಿದೆ!

ಆಗ ಸಿನಿಮಾ ನಮ್ಮ ಬದುಕಿನ ಅವಿಭಾಜ್ಯ ಅಂಗ.

 

ಎಸ್ ಎಲ್ ಸಿ ಯಲ್ಲಿ ಒಳ್ಳೆ ಮಾರ್ಕ್ಸ್ ತೆಗೆದಿದ್ದಕ್ಕೆ ಅಪ್ಪ ಅಲ್ಲಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾ ತೋರಿಸಿದ ದಾಖಲೆ ನಮ್ಮ ಮನೆಯಲ್ಲಿ ಇನ್ನೂ ಯಾರೂ ಮುರಿದಿಲ್ಲ!

ರಾಜ್ ಕುಮಾರ್ ಫಿಲಂ ಬಂದರೆ ಬಸ್ ಮಾಡಿಕೊಂಡು ಊರ ಜನ ಬುತ್ತಿ ಕಟ್ಟಿಕೊಂಡು ಫಿಲಂ ನೋಡಲು ಬರುತ್ತಿದ್ದರು ಅಂದರೆ ನಂಬಬೇಕು ನೀವು. ‘ಭಕ್ತ ಪ್ರಹ್ಲಾದ’ ರಿಲೀಸ್ ಆಗಿದ್ದ ಸಮಯ, ಟಿಕೆಟ್ ಸಿಗೋದು ಭಾರಿ ಕಷ್ಟ ಇತ್ತು. ಅಂದು ದೊಡ್ಡಮ್ಮನ ಮಗಳ ಮದುವೆ, ಬಸ್ ಇಳಿದು ಕಪಾಲಿ ಟಾಕೀಸ್ ಮುಂದೆ ಬರ್ತಾ ಇದೀವಿ, ಟಿಕೆಟ್ ಕೌಂಟರ್ ಖಾಲಿ ಇದೆ, ಟಿಕೆಟ್ ಸಿಗುತ್ತಿದೆ, ಇನ್ನೊಂದು ಯೋಚನೆ ಮಾಡದೆ, ಭಯಭಕ್ತಿಯಿಂದ ಫಿಲಂ ನೋಡಿ, ಮದುವೆಗೆ ತಡವಾಗಿ ಹೋಗಿದ್ದರ ಬಗ್ಗೆ ಒಂದಿಷ್ಟಾದರೂ ಪಶ್ಚಾತಾಪ ಆಗಿದ್ದರೆ ಕೇಳಿ!

ಈಗ ಯೋಚಿಸುತ್ತೇನೆ, ಆ ಸಿನಿಮಾಗಳಲ್ಲಿ ಹಾಗೆ ನಮ್ಮನ್ನು ಕಟ್ಟಿಹಾಕುವಂತಹುದ್ದೇನಿತ್ತು? ನಿಜಜೀವನದಲ್ಲಿ ಸಾಧಾರಣಕ್ಕೆಲ್ಲಾ ಕಣ್ಣೀರು ಹಾಕದ ನಾನು ಈಗಲೂ ಫಿಲಂ ನೋಡುವಾಗ ಒಂದು ಹನಿ ಸಂಕೋಚವಿಲ್ಲದೆ ಕಣ್ಣೀರು ಹಾಕುತ್ತೇನಲ್ಲ, ಅಂತಹ ಅದ್ಯಾವ ಶಕ್ತಿ ಇದೆ ಆ ಬಿಳಿಪರದೆಯ ಮೇಲಿನ ಬೆಳಕಿನ ಛಾಯೆಗಳಿಗೆ?

ಆ ಅಳುವಿಗೆ ಭಾಷೆಯ ಹಂಗೇ ಇಲ್ಲ,

ಬಾಲ್ಯದಲ್ಲಿ ನೋಡಿದ ’ಪಾಪಂ ಪಸಿವಾಡು’, ಕಾಲೇಜಿನ ದಿನಗಳ ’ಒರು ತಲೈ ರಾಗಂ’, ’ಬಂಧನ’, ’ಕಥೆ ಹೇಳುವೆ ನನ್ನ ಕಥೆ ಹೇಳುವೆ’ ಎಂದ ಅಲಮೇಲು, ಪ್ರೆಟ್ಟಿ ವುಮನ್, ಸ್ಟೆಪ್ ಮಮ್, ಅದು ಬಿಡಿ ಈಗಲೂ, ಎಷ್ಟನೆಯ ಸಲವೋ ನೋಡಿದರೂ ನಾಚಿಕೆಯಿಲ್ಲದೆ ಕಣ್ಣಿಂದ ಧಾರೆ ಹರಿಸುವ ’ತಾರೆ ಜಮೀನ್ ಪರ್’, ದೇವದಾಸ್….

ಇವುಗಳಲ್ಲಿ ಯಾವ ಒಂದು ಹೆಸರನ್ನು ಹೆಕ್ಕಿ ಇದು ನನ್ನನ್ನು ಕಾಡಿದ ಸಿನಿಮಾ ಎನ್ನಲಿ? ಇವೆಲ್ಲಾ ನನ್ನನ್ನು ಕಾಡಿದ್ದು ಹೌದು ಮತ್ತು ನಾನು ಅನ್ನುವ ನಾನು ಇದೆಲ್ಲಾ ಸೇರಿ ಆದದ್ದೂ ಹೌದು.

ಸಿನಿಮಾ ನನ್ನ ಒಂದು ಭಾಗ. ಅದನ್ನು ನಾನು ಪ್ರಯೋಗಾಲಯದಲ್ಲಿ ಕುಳಿತು, ಟೇಬಲ್ ಮೇಲಿಟ್ಟು ಕತ್ತರಿಸಿ ವರ್ಗೀಕರಿಸಿದಂತೆ ವಿಶ್ಲೇಷಣೆ ಮಾಡಲಾರೆ. ಚಿತ್ರಗಳ ಬಗ್ಗೆ ನನ್ನ ಬರಹವನ್ನು ಚಿತ್ರವಿಮರ್ಶೆ ಅನ್ನುವುದಕ್ಕಿಂತ ಹೆಚ್ಚಾಗಿ ಚಿತ್ರದ ಜೊತೆಗಿನ ನನ್ನ ಅನುಸಂಧಾನ ಎನ್ನಲು ಬಯಸುತ್ತೇನೆ.

ಹಾಗೆ ನನ್ನನ್ನು ಕಾಡಿದ ಚಿತ್ರಗಳ ಬಗ್ಗೆ ಬರವಣಿಗೆ ಇದು,

ನನ್ನ ಮನಸ್ಸಿನ ಮಾಯಾಬಜಾರು…

‍ಲೇಖಕರು admin

March 10, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

7 ಪ್ರತಿಕ್ರಿಯೆಗಳು

  1. JOGI

    ತುಂಬಾ ಚೆನ್ನಾಗಿದೆ ಸಂಧ್ಯಾರಾಣಿ. ಮುಂದಿನ ವಾರದ ಕಂತನ್ನು ಓದಲು ಕಾಯುತ್ತಿದ್ದೇನೆ. ಥ್ಯಾಂಕ್ಸ್-ಜೋಗಿ

    ಪ್ರತಿಕ್ರಿಯೆ
  2. ರಘುನಂದನ ಕೆ.

    ವಾವ್, ಮತ್ತೊಮ್ಮೆ ನಿಮ್ಮ ಅಂಕಣ ಓದುವ ಅವಕಾಶ,
    ಓದು ಮುಗಿಯೊಷ್ಟತ್ಗೆ ಎಷ್ಟೆಲ್ಲ ಸಿನಿಮಾಗಳು ಮತ್ತೊಮ್ಮೆ ನೋಡಿಸಿಕೊಂಡವೋ…
    ಥ್ಯಾಂಕ್ಸ್.

    ಪ್ರತಿಕ್ರಿಯೆ
  3. Girijashastry

    ನನಗೂ ಸಿನಿಮಾಗಳೆಂದರೆ ಅದೂ off beat. ತುಂಬಾ ಇಷ್ಟ. ಚಿಕ್ಕವರಾಗಿದ್ದಾಗ ನಮ್ಮನ್ನು ಸಿನಿಮಾ ನೋಡಲು ಕಳಿಸುತ್ತಿರಲಿಲ್ಲ. ಕೇವಲ ದೇವರ ಇಲ್ಲವೇ ಐತಿಹಾಸಿಕ ಸಿನಿಮಾಗಳನ್ನು ನೋಡಲು ಮಾತ್ರ ಅನುಮತಿ ಇರುತ್ತಿತ್ತು. ಸಿನಿಮಾಕ್ಕೆ ಹೋಗಲುpermission ಸಿಕ್ಕಿದೆಯೆಂದು ಗೊತ್ತಾದ ಕೂಡಲೇ ಎದೆ ಢವ ಢವ ಅಂತ ಹೊಡೆದುಕೊಳ್ಳೋಕೆ ಶುರುವಾಗೋದು.. ಕ್ಯೂನಲ್ಲಿ ನಿಂತಾಗ ಟಿಕಟ್ ಸಿಗದೇ ಇದ್ದರೆ ಎನ್ನುವ ಆತಂಕ ಬೇರೆ. ಟಿಕೆಟ್ ಸಿಗಲಿ ಎಂದು ದೇವರನ್ನು ಬೇಡಿಕೊಳ್ಳೋವು.
    ಈಗಲೂ, ಗಾಳಿಯಲ್ಲಿ ಅಲೆ ಅಲೆಯಾಗಿ ತೇಲಿ ಬರುತ್ತಿದ್ದ ನಮೋ ವೆಂಕಟೇಶಾ….ನೆನೆಸಿಕೊಂಡರೆ ರೋಮಾಂಚನ ವಾಗುವುದು.
    ಅದ್ಭುತವಾಗಿ ಇಂತಹ ಅನುಭವಗಳನ್ನು ಹಂಚಿಕೊಂಡು ನಮ್ಮನ್ನೂ ಹುಚ್ಚೆಬ್ಬಿಸಿದ್ದಕ್ಕೆ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: