ಇದು ಕವಿತೆಯ ಸಮಯವಲ್ಲ..

 

ಸತ್ತವಳನು ಹೊತ್ತುಕೊಂಡು ನಡೆದವನನ್ನು ಕಂಡು ಹುಟ್ಟಿಕೊಂಡ ಕವಿತೆ ಇದು.

ಇದು ಕವಿತೆ ಬರೆಯುತ್ತಾ ಕುಳಿತುಕೊಳ್ಳಬೇಕಾದ ಸಮಯವಲ್ಲ, ಗೊತ್ತು.

ಆದರೂ ಕೆಲವು ಸಾಲುಗಳು ಬೇಡ ಬೇಡ ವೆಂದರೂ ಮೂಡಿ ಕಾಡಿದಾಗ ಬರೆದು ಹೋಯಿತು.

body6

ಇನ್ನೊಮ್ಮೆ ನೀನು ಹೀಗೆ ನಡೆಯುವಂತಾದರೆ

ಸತ್ಯಕಾಮ ಶರ್ಮಾ ಕಾಸರಗೋಡು

body6

ಇನ್ನೊಮ್ಮೆ ನೀನು ಹೀಗೆ
ನಡೆಯುವಂತಾದರೆ
-ಹಾ! ಹಾಗಾಗದಿರಲಿ ದೇವರೆ
ಮರೆಯದೆ ಮೂಡಿಸು
ನಿನ್ನ ಹೆಜ್ಜೆ ಗುರುತು

ಅದರರಕದಲಿ ತಗೆದು
ಮಾಡಿದ ಪಾದರಕ್ಷೆಗಳನು
ತೊಡಿಸಬೇಕಿದೆ
ಬಳಸು ದಾರಿಗಳೇ ಅಭ್ಯಾಸ
ಆಗಿ ಹೋದವರಿಗೆ
ಹೀಗೆ ಬಂದು ಹಾಗೆ
ಹೊರಟು ಹೋಗುವ
ಹೋರಾಟಗಾರರಿಗೆ
ತರಬೇಕಾಗಿದೆ ಬದ್ಧತೆ
ನಿಷ್ಠೆಯ ನೆಲೆ

ಹಸಿವು ನೀರಡಿಕೆ ನೀಗುವುದೇ
ಗುರಿಯಾದ ನಿನ್ನಂಥವರಿಗೆ
ಬಂದೆರಗುವ ಸಾವು ತಂದೊಡ್ಡುವ ಹೊರೆಗೆ
ಕುರುಡಾದ ಕೋಟಿ ಕೋಟಿ ಕಂಗಳನು
ತೆರೆಯಬಲ್ಲೆಯಾದರೆ ನಡೆ

odisha-man-650_650x400_41472141426ಇನ್ನೊಮ್ಮೆ ನೀನು ಹೀಗೆ
ನಡೆಯುವಂತಾದರೆ ನಡೆ

ವೇಗ ಪಡೆ
ಗೆಲ್ಲುವುದಕಲ್ಲ ಪದಕಗಳನು
ಬಿಡಿಸುವುದಕೆ ಸಂಕಲೆಗಳನು
ಚರಿತ್ರೆಯಾಗಬಲ್ಲ ಚಿತ್ರಗಳನು

ನಿನ್ನ ನಡಿಗೆಯ ಜರೂರತ್ತು, ಗೈರತ್ತು
ತಟ್ಟದವರಿಗೆ ಇದೆಯೆಂದರೂ ಅಕ್ಷಿಪಟಲ
ಅದೊಂದು ಪೊರೆ
ಖರೆ, ಇಲ್ಲವೆಂದರವರಿಗೆ ಎದೆ

ನೀನು ನಡೆಯಲಿಲ್ಲ ಬರಿದೆ
ಇತಿಹಾಸ ಬರೆದೆ
ಆದರೇನು ಶೂನ್ಯ ನಿನ್ನ ಗಮ್ಯ?
ಆಗಲಿಲ್ಲವೇನು ನೀನು ದನಿ
ತಾರತಮ್ಯಗಳಿಗೆ, ಅದಮ್ಯ?

ಅಲ್ಲವದು ಪಾದಯಾತ್ರೆ, ಶವಯಾತ್ರೆ
ಅಲ್ಲವಾಗಿತ್ತಲ್ಲ ದೂರ ಅನತಿ
ಶವವಾಗಿ ಹೇಗಲೇರಿದ್ದ ನಿನ್ನ ಸತಿ
ಬಿಂಬಿಸುತಾ ನಮ್ಮೆಲ್ಲರ ಮೌಲ್ಯಗಳ ಅವನತಿ
ಸಾವು ಕಾರಣವಾದರೂ ನಿನ್ನ ನಡೆಗೆ
ಸಾವಿರಾರು ಮನಗಳಲಿ ನೀನು ಜೀವ ಪಡೆದೆ
ನೀನು ತುಳಿದ ಒಂದೊಂದೂ ಹೆಜ್ಜೆ
ತುಳಿಕೊಳಗಾದವರ ಪಾಲಿಗಾಗಲಿ
ಗೆಲುವಿನ ಗೆಜ್ಜೆ

ಧರೆಗಿಳಿಯಲೊಲ್ಲೆ ಎಂಬ ತಾರೆಗಳಿಗೆ
ಕಲಿಸುವಂತೆ ಪಾಠಗಳನು ಮೋಡ, ಮಳೆ
ಇನ್ನೊಮ್ಮೆ ನೀನು ಹೀಗೆ
ನಡೆಯುವಂತಾದರೆ ನೆರವಿಲ್ಲದೆ
ನಮ್ಮೆಲ್ಲರ ಭರವಸೆ, ಮೊರೆಗಳಿಗೆ
ಬಿದ್ದಂತೆ ತೆರೆ

‍ಲೇಖಕರು Admin

August 29, 2016

* | Avadhi

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sangeeta Kalmane

    ನಾ ಖರೀದಿಸಿತ
    ತರಕಾರಿ ಚೀಲ ಎತ್ತಿದಾಗ
    ಯಾಕೊ ನೆನಪಾಯಿತು
    ಆತ್ಮ ಬಿಟ್ಟ ದೇಹ
    ಶವವಾದಾಗ
    ಹೆಣಭಾರವಂತೆ
    ನಿಜವಿರಬಹುದೆ?
    ಗೊತ್ತಿಲ್ಲ
    ಆದರೂ
    ಒಮ್ಮೆ ಸಿಕ್ಕರೆ
    ನಾ ಕೇಳಬೇಕು
    ಅವನನ್ನೇ ಅದೆ
    ಶವ ಹೊತ್ತು ನಡೆದ
    ಸತಿಯೊಂದಿಗಿನ
    ಪ್ರೀತಿ, ಭಾಂದವ್ಯ
    ಸಂಸಾರದ ಸವಿ
    ನೆನಪಿಟ್ಟು ತನ್ನ
    ಕತ೯ವ್ಯ ಮಾಡಿ
    ಜಗಕೆ ಮಾದರಿಯಾದ
    ಸರದಾರನನ್ನು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: