ಇದು ಉಪ್ಪಿಟ್ಟಿನ ಕಥೆ, ಉಪ್ಪಿ2 ಕಥೆಯಲ್ಲ!

ಉಪ್ಪಿಟ್ಟಾಯಣ

ಗೊರೂರು ಶಿವೇಶ್

ಅಮ್ಮ ನೋಡೆ ಕಣ್ಬಿಟ್ಟು
ನಮ್ಮಯ ಶಾಲೆಯ ಉಪ್ಪಿಟ್ಟು
ಮೇಸ್ಟ್ರಿಗೆ ಮಾತ್ರ ಬಹಳಷ್ಟು
ಮಕ್ಕಳಿಗೆ ಮಾತ್ರ ಇಷ್ಟೇ ಇಷ್ಟು
ಮಧ್ಯಾಹ್ನ ತರಗತಿ ಬಿಟ್ಟೊಡನೆ ಅಮೇರಿಕಾದಿಂದ ಆಗ ಸರಬರಾಜಾಗುತ್ತಿದ್ದ ಕೇರ್ ಉಪ್ಪಿಟ್ಟಿಗೆ (ಗೋಧಿರವೆ) ಮುಗಿಬೀಳುತ್ತಿದ್ದ ನಾವು ಹಾಡುತ್ತಿದ್ದ ಹಾಡು ಆಗ ಜನಪ್ರಿಯವಾಗಿದ್ದ ಸಿನಿಮಾ ಹಾಡೊಂದರ ಅಣಕವಾಡಾಗಿತ್ತು. ರೊಟ್ಟಿಯ ಬಿಟ್ಟರೆ ಉಳಿದ ತಿಂಡಿಗಳು ಅಪರೂಪವಾಗಿದ್ದ ಆ ಕಾಲದಲ್ಲಿ ಶಾಲೆಯಲ್ಲಿ ಹಸಿದು ಹಣ್ಣಾಗಿರುತ್ತಿದ್ದ ನಮಗೆ ‘ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಕೊಟ್ಟ ಕೆಲಕ್ಷಣದಲ್ಲಿ ಖಾಲಿ ಮಾಡುತ್ತಿದ್ದ ನಮಗೆ ಈ ರೀತಿ ಅನಿಸುತ್ತಿದ್ದದ್ದು ಸಹಜವೇ ಆಗಿತ್ತು. ಆದರೆ ಅದನ್ನು ತಾವು ತಿನ್ನದೆ ತಮ್ಮ ಮನೆಯ ನಾಯಿಗಳಿಗೆ ಕೊಂಡೋಗುತ್ತಿದ್ದ ಶ್ರೀಮಂತ ಸಹಪಾಠಿಗಳು ಇದ್ದರು. ಇಂಥ ಉಪ್ಪಿಟ್ಟಿಗೆ ಕೆಲದಿನಗಳ ಹಿಂದೆ ವಿದೇಶದಲ್ಲಿ ನಡೆದ ‘ತಿಂಡಿಮೇಳ’ದಲ್ಲಿ ಅಗ್ರಸ್ಥಾನ ದೊರಕಿದ್ದರ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿತ್ತು.

ಇಸ್ಪೀಟಾಟದ ‘ಜೋಕರಿನಂತೆ’ ಎಲ್ಲಾ ಕಾಲಕ್ಕೂ, ಎಲ್ಲಾ ತಿಂಡಿಗಳ ನಡುವೆ ಇದಕ್ಕೆ ಸ್ಥಾನವಿದೆ. ಮನೆಯವರಿಗಾಗಲಿ, ಹೋಟೆಲ್ನವರಿಗಾಗಲಿ ತುರ್ತು ಸಮಯಕ್ಕಾಗುವ ನೆಂಟ ಇದು. ಪ್ರಖ್ಯಾತ ಹೋಟೆಲ್ನಿಂದ ಹಿಡಿದು ಸಂತೆ ಹೋಟೆಲ್ನವರೆಗೆ ಇದಕ್ಕೆ ಸ್ಥಾನವಿದೆ. ಉಪ್ಪಿಟ್ಟು, ಚಿತ್ರಾನ್ನಗಳನ್ನು ಬಾಂಡಲಿಗಳಲ್ಲಿ ತುಂಬಿ ಅದರ ಪಕ್ಕ ವಡೆಗಳನ್ನು ತಟ್ಟೆಯಲ್ಲಿ ಇಟ್ಟು, ತಿಂಡಿ ಹಾಕುವ ಸ್ಟೀಲ್ ಕೈಯಿಂದ ಬಾಂಡಲಿಯ ಮೇಲೆ ‘ಕಟ್ ಕಟೀಲ್’ ಎಂದು ಸದ್ದುಮಾಡುವಂತೆ ಬಡಿದು ಸಂತೆಗೆ ಬಂದವರ ಗಮನ ಸೆಳೆಯುತ್ತಿದ್ದ ‘ವೀರಶೈವರ ಕಾಫಿ ಟೀ ಕ್ಲಬ್’ಗಳಲ್ಲಿ ಇದು ಪ್ರಮುಖ ಆಕರ್ಷಣೆ. ಗಾದೆಗಳ ಮೇಲೆ ಆಗಾಗ ಬೆಳಕು ಚೆಲ್ಲುವ ಸ್ನೇಹಿತ ರಂಗಣ್ಣಿ ‘ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು’ ಎಂಬ ಗಾದೆ ಇರಲಿಕ್ಕೆ ಸಾಧ್ಯವಿಲ್ಲ. ಏಕೆಂದರೆ ಯಾರೂ ಉಪ್ಪನ್ನು ತಿನ್ನಲಿಕ್ಕೆ ಹೋಗುವುದಿಲ್ಲ. ಬದಲಾಗಿ ಅದು ‘ಉಪ್ಪಿಟ್ಟನ್ನು ತಿಂದ ಮೇಲೆ ನೀರು ಕುಡಿಯಲೇಬೇಕು’ ಎಂದಿರಬೇಕು ಎಂದು ವಾದಿಸುತ್ತಿದ್ದ. ಉಪ್ಪಿಟ್ಟನ್ನು ತಿಂದು ನಂತರ ಅದು ಕಾಂಕ್ರ್ರೀಟಿನಂತೆ ಜೀರ್ಣಾಂಗವ್ಯೂಹದಲ್ಲಿ ‘ಸೆಟ್’ ಆಗಿ ಮುಂದೆೆ ಚಲಿಸದೇ ಇದ್ದಾಗ ನಮ್ಮ ಶಾಲೆಯ ಬಳಿ ಇದ್ದ ಕಾಲುವೆಗೆ ನೀರನ್ನು ಕುಡಿಯಲು ಓಡುತ್ತಿದ್ದ ಸಂದರ್ಭ ನೆನಪಿಸಿಕೊಂಡರೆ ಅವನು ಹೇಳಿದ್ದೇ ಸರಿ ಇರಬಹುದು ಎನಿಸುತ್ತದೆ.

ಉಪ್ಪಿಟ್ಟನ್ನು ಬಹಳ ಸುಲಭವಾಗಿ ಮಾಡಬಹುದೆಂದು ಬಹಳಷ್ಟು ಜನ ಅಂದುಕೊಂಡಿದ್ದಾರೆ. ಒಮ್ಮೆ ನಮ್ಮ ತಾಯಿ ಅನಿವಾರ್ಯವಾಗಿ ಅಜ್ಜಿಯ ಊರಿಗೆ ಹೋಗಬೇಕಾದ ಪ್ರಸಂಗ. ನನ್ನಕ್ಕನಿಗೆ ಉಪ್ಪಿಟ್ಟನ್ನು ಮಾಡುವ ವಿಧಾನ ಹೇಳಿ ಹೋಗಿದ್ದರು. ‘ಮೊದಲಿಗೆ ಎಣ್ಣೆ ಹಾಕು, ಸಾಸಿವೆ ಹಾಕಿದಾಗ ಸಿಡಿದರೆ ಎಣ್ಣೆ ಕಾದಿದೆ ಎಂದರ್ಥ. ನಂತರ ಹಸಿರುಮೆಣಸಿನಕಾಯಿ, ಈರುಳ್ಳಿ ಚೂರನ್ನು ಹಾಕಿ ನಂತರ ನಾಲ್ಕು ಕಪ್ ನೀರು ಹಾಕಿ, ಅದು ಕುದ್ದ ನಂತರ ನಾಲ್ಕು ಚಮಚ ಉಪ್ಪು, ಎರಡು ಕಪ್ ಅಕ್ಕಿ ರವೆಯನ್ನು ಹಾಕಿ ಅಲ್ಲಾಡಿಸುತ್ತಿದ್ದು, ಹದವಾಗಿ ಬೆಂದಿದೆ ಎಂದಾಗ ತೆಗೆದಿಡು’ ಎಂದು ನನ್ನಕ್ಕನಿಗೆ ಹೇಳಿ ಹೋಗಿದ್ದರು. ಅವಳ ಉಪ್ಪಿಟ್ಟಿನ ಪ್ರಯೋಗಕ್ಕೆ ನಾನು ಮತ್ತು ನನ್ನಣ್ಣ ಸಹಕಾರ ನೀಡಲು ನಿಂತೆವು. ಪ್ರಾರಂಭಿಕ ಘಟ್ಟಗಳನ್ನು ಯಶಸ್ವಿಯಾಗಿ ಮುಗಿಸಿದೆವು. ಉಪ್ಪನ್ನು ಹಾಕಲಾಯಿತು. ನಂತರ ಕುದಿಯುತ್ತಿದ್ದ ನೀರಿಗೆ ರವೆಯನ್ನು ಹಾಕುವಾಗ ಯಡ್ವ್ವಟ್ಟಾಗಿ ರವೆ ಹೆಚ್ಚಾಯಿತೆಂದು ನೀರನ್ನು, ನೀರು ಹೆಚ್ಚಾಯಿತೆಂದು ರವೆಯನ್ನು ಹಾಕಿ ಅದು ಗಂಟು ಗಂಟಾಗಲು ಕೆಳಗಿಟ್ಟೆವು. ಬಾಯಿಗಿಟ್ಟೊಡನೆ ಹಲ್ಲುಗಳ ನಡುವೆ ಪೇಸ್ಟಿನಂತೆ ಅಂಟಿಕೊಂಡು ಮುಖವನ್ನು ನಾನು ಹುಳ್ಳಗೆ ಮಾಡಲು ನನ್ನಕ್ಕ ‘ಯಾಕೆ ಚೆನ್ನಾಗಿಲ್ವೇನೋ’? ಎಂದಳು. ನನ್ನಣ್ಣನು ನನಗೆ ‘ಉಪ್ಪಿಟ್ಟನ್ನು ಸಂಧಿ ಬಿಡಿಸಿ ಹೇಳು’ ಎಂದು ಕೇಳಿದ. ಉಪ್ಪು ಪ್ಲಸ್ ಹಿಟ್ಟು=ಉಪ್ಪಿಟ್ಟು-ಹಲ್ಲುಸಂಧಿ ಎಂದು ನಾನು ಉತ್ತರಿಸಿದೆನು. ಆಗ ಆಕೆಯು ರುಚಿ ನೋಡಿ ನಿಜ, ಮೇಲ್ನೋಟಕ್ಕೆ ನಾವು ಸುಲಭ ಎಂದುಕೊಂಡರೂ ನಿಜಜೀವನದಲ್ಲಿ ನಾವು ಎಣಿಸಿದಷ್ಟು ಸುಲಭವಾಗಿರೋಲ್ಲ ಎಂದು ವೇದಾಂತಿಯಂತೆ ನುಡಿದಳು.

ಇನ್ನು ಗಂಡು ನೋಡಲು ಹೋದಾಗ ಬಹುತೇಕ ಹೆಣ್ಣಿನ ಮನೆಯಲ್ಲಿ ಮಾಡುತ್ತಿದ್ದದ್ದೆ ಉಪ್ಪಿಟ್ಟು. ಕೆಲವೊಮ್ಮೆ ಗಂಡಿಗೆ ಅದೃಷ್ಟವಿದ್ದರೆ ಅದರ ಜೊತೆಯಲ್ಲಿ ಕೇಸರಿಬಾತ್ (ಇದು ಉಪ್ಪಿಟ್ಟಿನ ಸಹೋದರಿ) ಇರುತ್ತಿತ್ತು. ಆ ಸಂದರ್ಭದಲ್ಲಿ ಉಪ್ಪಿಟ್ಟಿನ ಯಶಸ್ಸು, ವರನ ಒಪ್ಪಿಗೆ ಎರಡರ ಸಂಭವನೀಯತೆಯು ಶೇ. ಐವತ್ತು ಮಾತ್ರ. ಕೆಲ ವಧು ‘ಬೇಟೆ’ಗಾರರಂತೂ ಉಪ್ಪಿಟ್ಟನ್ನು ತಿಂದು ತಿಂದು ಮದುವೆಯಾಗುವಷ್ಟರಲ್ಲಿ ಉಪ್ಪಿಟ್ಟೆಂದರೆ ಅಲರ್ಜಿ  ಎನ್ನುವ ಮಟ್ಟವನ್ನು ತಲುಪಿರುತ್ತಾರೆ. ಇದೇ ಸಂದರ್ಭದಲ್ಲಿ ದುಂಡಿರಾಜರ ಕವಿತೆ ನೆನಪಾಗುತ್ತದೆ.

ಪ್ರಿಯ
ನಿನ್ನ ಮೊಗವೇಕೆ
ಕಪ್ಪಿಟ್ಟಿದೆ ?
ಏಕೆಂದರೆ, ಪ್ರಿಯೆ
ನನ್ನೆದುರು ನೀ ಮಾಡಿದ
ಉಪ್ಪಿಟ್ಟಿದೆ.

ವರ್ಷವಿಡೀ ವಿವಿಧ ರವೆ, ತರಕಾರಿಗಳ ಜೊತೆ ಟೊಮೆಟೋ ಉಪ್ಪಿಟ್ಟು, ಅವರೇಕಾಳು ಉಪ್ಪಿಟ್ಟು, ಬಟಾಣಿ ಉಪ್ಪಿಟ್ಟು, ಯಾವುದೇ ತರಕಾರಿಯಿಲ್ಲದ ಬರೀ ಕಾಯಿತುರಿ ಬೆರೆಸಿದ ಬೋಳುಪ್ಪಿಟ್ಟುಗಳ ವೈವಿಧ್ಯತೆಯೊಂದಿಗೆ ಇತರೆ ದಕ್ಷಿಣ ಭಾರತದ ತಿಂಡಿಗಳಾದ ಇಡ್ಲಿ, ದೋಸೆಗಳ ಜೊತೆಗೆ ಹೋರಾಟ ಮಾಡಿ ಟಿ.ಆರ್.ಪಿ.ಯಲ್ಲಿ (ತಿಂಡಿ ರೇಟಿಂಗ್ ಪಾಯಿಂಟ್) ಸದಾ ಒಂದನೇ ಸ್ಥಾನದಲ್ಲಿ ಕಾಯ್ದುಕೊಳ್ಳುತ್ತಾ ಮುಂದುವರೆದಿದೆ. ಆದರೆ ಚಿತ್ರಾನ್ನ, ಉಪ್ಪು, ಉಪ್ಪಿನಕಾಯಿ ಮೇಲೆ ಗೀತೆ ಬರೆದು ಜನಪ್ರಿಯಗೊಳಿಸಿದ ‘ಉಪ್ಪಿ’ ಉಪೇಂದ್ರ ಉಪ್ಪಿಟ್ಟಿನ ಮೇಲೆ ಯಾವಾಗ ಹಾಡು ಬರೆದು ಹಾಡಿ ನಟಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

‍ಲೇಖಕರು avadhi

March 22, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: