ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದುವರೆಗೂ ಯಾರು ಮಹಿಳಾ ದಿನಾಚರಣೆಯ ಶುಭಾಶಯ ಹೇಳಿರಲಿಲ್ಲ..

ಸುಜಾತ ವಿಶ್ವನಾಥ

ನಾನೊಬ್ಬ ಮಧ್ಯಮ ವರ್ಗದ ವ್ಯಾಪಾರಸ್ಥ ಮಹಿಳೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗದಲ್ಲೂ ಕಾಂಪಿಟೇಷನ್ ಇರುವುದರಿಂದ, ನನ್ನ ವ್ಯಾಪಾರವೂ ತುಂಬಾ ಕುಸಿದಿತ್ತು. ಅಂದು ಶುಕ್ರವಾರ ಸಂಜೆ ಗೋಧೂಳಿ ಸಮಯ, ನಾನು ದೀಪ ಹಚ್ಚಿಟ್ಟು, ವ್ಯಾಪಾರವಿಲ್ಲದ ಕಾರಣ, ವ್ಯಾಪಾರ ಈ ರೀತಿ ದಿನೇ ದಿನೇ ಕೈ ಕೊಟ್ಟರೆ ಏನೂ ಮಾಡೋದು, ಸಾಲ ಬೇರೆ ಜಾಸ್ತಿಯಾಗಿದೆ ತೀರಿಸುವ ಬಗೆಯಾದರೂ ಹೇಗೆ, ಎಂಬ ಯೋಚನೆಯಲ್ಲಿ ಮಗ್ನಳಾಗಿ ಕುಳಿತಿರುವಾಗ…ತಾಯಿ ಎಂದು ಯಾರೋ ಕೂಗಿದ ಶಬ್ದ ನನ್ನ ಕಿವಿಗೆ ಬಿತ್ತು. ಅದು ನನ್ನ ಪರಿಚಯದ ಧ್ವನಿ ಎಂಬ ಅರಿವು ನನಗೆ ಬಂತು. ಅವರು ಯಾರೆಂದೂ ನನ್ನ ಅರಿವಿಗೆ ಬಂದಿತು. ತಿರುಗಿ ನೋಡಿದೆ, ಹೆಣ್ಣೂ ಅಲ್ಲದ ಗಂಡೂ ಅಲ್ಲದ ಒಬ್ಬ ಲೈಂಗಿಕ ಅಲ್ಪ ಸಂಖ್ಯಾತರ (ಮಂಗಳ ಮುಖಿಯರು) ಮಹಿಳೆಯ ಧ್ವನಿ. ಅವಳು ಕಳೆದ 6-8 ವರ್ಷಗಳಿಂದ ನನ್ನ ಅಂಗಡಿಗೆ ಬಂದು ಹೋಗುವುದರಿಂದ ಅವಳ ಪರಿಚಯ ನನಗೆ ತುಂಬಾ ಇತ್ತು.
ಬನ್ನಿ ಎಂದು ಕರೆಯುತ್ತಲೆ ಎದ್ದು ನಿಂತೆ. ಅವಳು ಬಂದಳು ನನಗೂ ನನ್ನ ಅಂಗಡಿಗೂ ದೃಷ್ಠಿ ತೆಗೆದು, ಹೊರಗೆ ಹೋಗಿ ಒಂದು ನಿಂಬೆಹಣ್ಣನ್ನು ಹೊಡೆದು, ಕೈತಟ್ಟುತ್ತಲೇ ಒಳಗೆ ಬಂದು, ಒಂದು ರೂಪಾಯಿಯನ್ನು ನನ್ನ ಕೈಗಿತ್ತಳು. ನಾನು ಅದನ್ನು ತೆಗೆದುಕೊಂಡು ಹತ್ತು ರೂಪಾಯಿಯ ನೋಟನ್ನು ಅವಳ ಕೈಗಿತ್ತೆ. ಅವಳು ಇನ್ನೇನು ಹೊರಡಲು ಸಿದ್ಧವಾಗಿ ತಾಯಿ ಬರಲೆ ಎಂದಳು. ಮಾರ್ಚ್ ತಿಂಗಳಾದ್ದರಿಂದ ತಟ್ಟನೆ ನೆನಪಾಯಿತು, ಈ ತಿಂಗಳು 8ಕ್ಕೆ ‘ಮಹಿಳಾ ದಿನಾಚರಣೆ ‘ಇದನ್ನು ಇವರು ಹೇಗೆ ಆಚರಿಸುವರೆಂಬ ಕೂತೂಹಲ, ತಡ ಮಾಡದೆ ಈ ತಿಂಗಳು ಮಹಿಳಾ ದಿನಾಚರಣೆ ನೀವು ಹೇಗೆ ಆಚರಿಸುತ್ತೀರ ಎಂದು ಕೇಳಿಯೇ ಬಿಟ್ಟೆ. ಏನವ್ವ ತಾಯಿ ಈ ರೀತಿ ಪ್ರಶ್ನೆನಾ ಕೇಳೋದು. ಲೈಂಗಿಕ ಅಲ್ಪ ಸಂಖ್ಯಾತರು ನಾವು ಹೇಗೆ ಆಚರಿಸಲಿ, ಈ ಮಹಿಳಾ ದಿನಾಚರಣೆಯನ್ನು ಇದಕ್ಕೆ ಉತ್ತರ ಕೊಡೋದು ಸ್ವಲ್ಪ ಕಷ್ಟಾನೇ ತಾಯಿ ಎಂದಳು. ಹೇಳಿ ಪ್ಲೀಸ್ ಎಂದು ಒತ್ತಾಯ ಮಾಡಿದೆ.
ಈ ಬದುಕೇ ಒಂದು ದುಸ್ಥಿರ, ಯಾವ ದಿನಾಚರಣೆಯನ್ನು ನಾವು ಆಚರಿಸುವುದಿಲ್ಲ ಎಂದರು. ಅದಕ್ಕೆ ನಾನು ಕೇಳಿದೆ, ಆದರೂ ನೀವು ಮಹಿಳೆಯರಂತೆ ಸಿಂಗಾರ ಮಾಡಿಕೊಂಡು ಹೀಗೆ ಹಣ ಕೇಳುತ್ತಿರಲ್ಲ, ಇದು ಸರಿನಾ? ಎಂಬ ನನ್ನ ಪ್ರಶ್ನೆ ಅವಳು ಕೊಟ್ಟ ಉತ್ತರ…ನಾವು ಬದುಕಬೇಕಲ್ಲ ತಾಯಿ. ನಮ್ಮನ್ನು ಆ ಬ್ರಹ್ಮ ಈ ರೀತಿ ಸೃಷ್ಟಿ ಮಾಡಿಬಿಟ್ಟಾ. ಹುಟ್ಟಿದಾಗ ಗಂಡಾಗಿದ್ದ ನನಗೆ, ಈಗ ಈ ರೀತಿಯ ಬದಲಾವಣೆ ಯಾಕೆ ಕೊಟ್ಟ ಆ ಭಗವಂತ, ನಮಗೆ ಮದುವೆಯ ಯಾವ ಸುಖವೂ ಇಲ್ಲ ಅದರೂ, ನಿತ್ಯ ಸುಮಂಗಳಿಯರೆಂಬ ಬಿರುದು ಕೊಟ್ಟುಬಿಟ್ಟ ಆ ಶಿವ. ಅವನಿಗೆ ಕರುಣೆ ಎಲ್ಲಿದೆ ತಾಯಿ? ನಮ್ಮನ್ನ ಸೃಷ್ಟಿಸುವಾಗ ಆ ಬ್ರಹ್ಮನ ಮನಸ್ಥಿತಿ ಹೇಗಿತ್ತೋ ಏನೋ?…ನಾವು ಈ ರೀತಿ ಬದಲಾದವೆಂಬ ಕಾರಣಕ್ಕೆ ನಮ್ಮ ಹೆತ್ತವರು ನಮ್ಮನ್ನು ಮನೆಯಿಂದ ಹೊರ ಹಾಕಿದರು. ಅಕ್ಕ-ತಂಗಿ,ಅಣ್ಣ-ತಮ್ಮ, ಬಂಧು-ಬಳಗವೆಲ್ಲ ನಮ್ಮನ್ನು ದೂರವಿಟ್ಟರು. ಯಾರಿಗಾಗಿ ಬದುಕಲಿ? ಯಾಕೆ ಬದುಕಲಿ? ನೀನೆ ಹೇಳು ತಾಯಿ. ಇನ್ನೂ ಬದಕಲು ಕೆಲಸಬೇಕೆಂದು ಕೇಳಿದರೆ ಯಾರೂ ನಮಗೆ ಕೆಲಸ ಕೊಡುವುದಿಲ್ಲ.

ಬಿಸಲಲ್ಲಿ ಒಣಗಿ, ಮಳೆಯಲ್ಲಿ ನೆನೆದು, ಚಳಿಯಲ್ಲಿ ನಡುಗಿ ಹಣಕ್ಕಾಗಿ ಬಣ್ಣ ಹಚ್ಚಿ ಬಣ್ಣದ ಮಾತುಗಳನ್ನಾಡುತ್ತಾ, ಬೀದಿಗಿಳಿಯೋದು ನಮ್ಮದೂ ಒಂದು ಬದುಕೇ ತಾಯಿ…ಈ ತುತ್ತಿನ ಚಿಲ ತುಂಬಲಿಕ್ಕೆ ಈ ಎಲ್ಲವನ್ನು ಮಾಡುತ್ತೇವೆ. ಮಾಡಲೇಬೇಕಾದ ಪರಿಸ್ಥಿತಿ ನಮ್ಮದು. ಎಲ್ಲರಿಂದಲೂ ದೂರಾದ ನಾವು ಬದುಕಬೇಕೆಂಬ ಆಸೆಯೇ ಇಲ್ಲಾದಾಗಿದೆ ತಾಯಿ ನಮಗೆ. ಆದರೂ ಮಾನವ ಜನ್ಮ ಬಲು ದೊಡ್ಡದು ಅದನ್ನು ಹಾಳು ಮಾಡಬಾರದು ಎಂಬ ಕಾರಣಕ್ಕಾಗಿ ಬದುಕುತ್ತಿದ್ದೇವೆ. ಮನುಷ್ಯರಾಗಿ ಈ ಭೂಮಿಗೆ ಬಂದ್ದಿದ್ದೇವೆ, ಆದರೆ ನಾನು ಚಿಕ್ಕವನಿದ್ದಾಗ ನನ್ನನ್ನು ಶಾಲೆಗೆ ಕಳುಹಿಸಲು ನನ್ನ ತಾಯಿ ತುಂಬಾ ಕಷ್ಟ ಪಟ್ಟರು. ನನ್ನ ತಾಯಿ ಅನಕ್ಷರಸ್ಥೆ, ನಮ್ಮ ಅಪ್ಪ ಕುಡುಕ ಜವಾಬ್ದಾರಿ ಇಲ್ಲದ ಮನುಷ್ಯ. ನಾವು 5 ಜನ ಮಕ್ಕಳು, ಮೊದಲನೆಯವನೇ ನಾನು. ನಾನೆಂದರೆ ನಮ್ಮ ತಾಯಿಗೆ ಬಹಳ ಪ್ರೀತಿ. ಕಾರಣ ಅವಳ ಕಷ್ಟ-ಸುಖ ನನ್ನಲ್ಲಿ ಹಂಚಿಕೊಳ್ಳುತ್ತಿದ್ದಳು. ನಮ್ಮ ಕುಟುಂಬವನ್ನು ಕಾಪಾಡಲು ನನ್ನ ತಾಯಿ ಪಟ್ಟ ಕಷ್ಟ ಈಗಲೂ ನನ್ನ ಕಣ್ಣ ಮುಂದಿದೆ. ನಮ್ಮ ಐದು ಜನ ಮಕ್ಕಳ ಯಶಸ್ಸಿನ ಹಿಂದೆ ನಮ್ಮ ತಾಯಿಯ ಶ್ರಮವಿದೆ, ಅರೆ ನಿದ್ದೆಯೂ ಇದೆ, ಅರೆ ಹೊಟ್ಟೆಗೆ ತಿಂದದ್ದು ಇದೆ. ನಮಗೆ ಮಾತ್ರ ಹೊಟ್ಟೆ ತುಂಬ ತಿನ್ನಿಸಿದ ನೆನಪಿದೆ, ಅದನ್ನು ಕಂಡು ಯಾಕಮ್ಮ ಹೀಗೆ ಮಾಡುವೆ ನನ್ನ ಪಾಲಿನಲ್ಲಿ ನೀನು ತಿನ್ನಬಹುದಿತ್ತಲ್ಲ ಎಂದು ಕೇಳಿದಾಗ, ನೀನು ಬೆಳೆಯುವ ಮಗ ಹೊಟ್ಟೆ ತುಂಬಾ ತಿಂದು ಗಟ್ಟಿಮುಟ್ಟಾಗಿರಬೇಕು ಮಗ, ಪರವಾಗಿಲ್ಲ ನನಗೇನೂ ಆಗದು ಎಂದು ಸಮಾಧಾನ ಮಾಡಿ ಮಲಗಿಸುತ್ತಿದ್ದಳು.
ನನ್ನಲ್ಲಿ ಈ ಬದಲಾವಣೆ ಬಂದ ನಂತರ ನನ್ನ ತಾಯಿ ನನ್ನನ್ನು ದ್ವೇಷಿಸಲು ಪ್ರಾರಂಭಿಸಿದಳು. ಇದು ನನ್ನಿಂದ ಸಹಿಸಲಾಗದ ಘಟನೆ. ಅಷ್ಟೇ ಅಲ್ಲ ನನ್ನ ಅಕ್ಕ-ಪಕ್ಕದ ಮನೆಯವರು ಏನೋ ವಿಚಿತ್ರವಾಗಿ ನೋಡಲಾಂಭಿಸಿದರು. ಅಲ್ಲದೆ ನನ್ನ ಮನೆಯವರೂ ಯಾರೂ ನನ್ನ ಜೊತೆ ಮಾತನಾಡದ ನೋವು ನನಗೆ ಸಹಿಸಲಾಗುತ್ತಿರಲಿಲ್ಲ. ಒಂದು ದಿನ ನನ್ನ ತಾಯಿ ನೀನು ಈ ಮನೆಗೆ ದೊಡ್ಡ ಮಗ ನೀನು ಈ ರೀತಿಯ ವರ್ತನೆಯಿಂದ, ಮನೆಯಲ್ಲಿದ್ದರೆ ಬೇರೆ ಮಕ್ಕಳನ್ನು ಈ ಸಮಾಜ ನೋಡುವ ರೀತಿಯೇ ಬೇರೆಯಾಗುತ್ತದೆ. ಆದಷ್ಟು ಬೇಗ ಮನೆಯಿಂದ ಹೊರಬೀಳು ಎಲ್ಲಿಯಾದರು ಹೋಗಿ ಬಿಡು, ನನ್ನ ಕಣ್ಣಿಗ ಕಾಣಿಸಿಕೊಳ್ಳಬೇಡ ಎಂದು ಕಟುವಾಗಿ ನುಡಿದರು. ಇದನ್ನು ಕೇಳಿದ ನಾನು ಹೌದು ನನ್ನಿಂದ ಮನೆಯಲ್ಲಿ ಯಾರಿಗೂ ತೊಂದರೆಯಾಗುವುದು ಬೇಡ, ಎಂಬ ಕಾರಣಕ್ಕೆ ಒಂದು ದಿನ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿರುವಾಗ ಮನೆ ಬಿಟ್ಟು ಬಂದುಬಿಟ್ಟೆ.
ಮನೆಯಿಂದ ಹೊರಬಂದ ನಾನು ಈ ಸಮಾಜದಿಂದ ಬಹಳ ಯಾತನೆ, ನೋವು, ಸಂಕಟಗಳನ್ನು ಅನುಭವಿಸಿದ್ದೇನೆ. ಮನೆಯಿಂದ ಹೊರ ಬಿದ್ದ ನಾನು ಲೈಂಗಿಕ ಅಲ್ಪ ಸಂಖ್ಯಾತರು ಇರುವ ಜಾಗವನ್ನು ಪತ್ತೆ ಹಚ್ಚಿ ಬದುಕಲು ಮುಂದಾದೆ. ನಮಗೂ ಎಲ್ಲರ ಜೊತೆ ಬೆರೆತು ಬದುಕಬೇಕೆಂಬ ಆಸೆಯೂ ಇದೆ. ಆದರೆ ಯಾವುದೂ ನಮ್ಮ ಕೈಗೆ ನಿಲುಕದ ಆಕಾಶದಲ್ಲಿನ ನಕ್ಷತ್ರವಾಗಿ ಬಿಟ್ಟಿದೆ. ಆದರೂ ಈ ಮಹಿಳಾ ದಿನಾಚರಣೆ, ಇಂದು ನಮ್ಮ ತಾಯಿ, ನನ್ನ ತಂಗಿ, ತಮ್ಮಂದಿರನ್ನು, ಬಂಧು-ಬಳಗವನ್ನು ನೆನೆಸಿಕೊಳ್ಳುವಂತೆ ಮಾಡಿದೆ ತಾಯಿ. ಎಲ್ಲೋ ಒಂದು ಕಡೆ ಮನೆಯವರನ್ನು ನೆನೆಪಿಸಿಕೊಂಡು ಸಮಾಧಾನ ತಾಯಿ ನನಗೆ. ಆ ನೆನಪೇ ಸಾಕಲ್ಲವೇ ನನ್ನ ಜೀವನಕ್ಕೆ, ಈ ನೆನಪನ್ನೇ ಮೆಲುಕು ಹಾಕುತ್ತಾ ಬದುಕನ್ನು ಕಳೆಯುವೆ. ಈ ಮಹಿಳಾ ದಿನಾಚರಣೆಯಂದು ನಾನು ಹೇಳುವುದಿಷ್ಟೆ ನನ್ನ ತಾಯಿ ಮತ್ತು ತಂಗಿ ಸುಖವಾಗಿರಲಿ ಎಂದಳು.
ನೊಂದುಕೊಳ್ಳಬೇಡಿ ನಿಮ್ಮನ್ನು ನೋಹಿಸುವ ಉದ್ದೇಶ ನನ್ನದಲ್ಲ, ನೀವು ಹೇಗೆ ಆಚರಿಸುವಿರೆಂದು ಕೇಳುವ ಕೂತೂಹಲವಷ್ಟೆ. ಅಲ್ಲ ಸರ್ಕಾರವೂ ನಿಮಗೆ ಎಲ್ಲಾ ಸೌಕರ್ಯಯಗಳನ್ನು ಕೊಟ್ಟಿದೆಯಲ್ಲವೆ? ಯಾಕೆ ಬೇಸರಪಟ್ಟುಕೊಳ್ಳುತ್ತೀರ? ಎಂದು ಸಮಾಧಾನ ಮಾಡಿದೆ. ಮತ್ತು ಅವರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಅವಳ ಕೈ ಕುಲುಕಿದೆ. ಆ ಕ್ಷಣದಲ್ಲಿ ಆಕೆಯ ಕಣ್ಣಲ್ಲಿ ತುಂಬಿದ ನೀರಿನಲ್ಲಿ ನಾನು ಅವಳ ಕಣ್ಣಿಗೆ ಮಂಜಾಗಿ ಕಂಡಿರಬೇಕು. ಕಣ್ಣುಗಳನ್ನು ಒರೆಸಿಕೊಳ್ಳುತ್ತಲೆ ನನಗೆ ಧನ್ಯವಾದ ಹೇಳುತ್ತ, ಇದುವರೆಗೂ ಯಾರು ನನಗೆ ಮಹಿಳಾ ದಿನಾಚರಣೆಯ ಶುಭಾಶಯ ಹೇಳಿರಲಿಲ್ಲ. ನೀನೆ ಮೊದಲನೇ ಹೆಣ್ಣು ಮಗಳು ತಾಯಿ ನನಗೆ ಶುಭಾಶಯ ಹೇಳಿದ್ದು ಎಂದು ಭಾವುಕಳಾಗಿ. ನೀನು ಚನ್ನಾಗಿರು ಎಂದು ನನ್ನ ತಲೆ ಮೇಲೆ ಆಕೆಯ ಕೈಯನ್ನಿಟ್ಟು ಸವರಿ ಹೊರ ನಡೆದಳು. ಅವಳು ಹೋದ ದಾರಿಯನ್ನೆ ನೋಡುತ್ತ ಕುಳಿತೆ…ಎಷ್ಟು ವಿಚಿತ್ರ ಅಲ್ಲವೆ. ಈ ಪ್ರಪಂಚದಲ್ಲಿ ಒಬ್ಬೊಬ್ಬರ ಬದುಕಲ್ಲೂ ಒಂದೊಂದು ತಿರುವುಗಳು, ಇವರಲ್ಲಿಯೂ ನೋವಿನ ಇನ್ನೆಷ್ಟು ಕತೆಗಳಿವೆಯೋ ತಿಳಿಯದು. ಎಂದು ನಾನು ಭಾವುಕಳಾಗಿ ಬಿಟ್ಟೆ. ಈ ಮಹಿಳಾ ದಿನಾಚರಣೆಯಂದೂ ಎಲ್ಲ ಮಹಿಳೆಯರಿಗೂ ನನ್ನ ಶುಭಾಶಯಗಳು…
 

‍ಲೇಖಕರು G

8 March, 2014

11 Comments

  1. Prabhakar Nimbargi

    You have beautifully touched a pained string. The pathos of the transgenders has been well brought out to the fore. Congrats.

    • Anonymous

      Dhanavaadagalu Prabhadar Nimbargi yavare….

    • sujatha vishwanath

      ಧನ್ಯವಾದಗಳು ಪ್ರಭಾಕರ್ ರವರೆ…..

  2. Ravishankar korgal

    Very nice

  3. ಪಂಡಿತಾರಾಧ್ಯ ಮೈಸೂರು

    ಇಂದು ಮೈಸೂರಿನಲ್ಲಿ ನಡೆದ ಮಹಿಳಾ ದಿನಾಚರಣೆಯ ಮೆರವಣಿಗೆಯಲ್ಲಿ ಮೂರನೇ ಲಿಂಗದ ಕೆಲವರು ಭಾಗವಹಿಸಿದ್ದು ನೋಡಿ ವಿಚಿತ್ರ ಸಂಕಟವೆನಿಸಿತು. ಅವರಿಗೆ ಅವರದೇ ಆದ ದಿನಾಚರಣೆ ಅಚರಿಸಿ ಅವರು ಸಮಾಜದಲ್ಲಿ ಘನತೆಯಿಂದ ಬದುಕುವುದಕ್ಕೆ ಅವಕಾಶಗಳನ್ನು ಒದಗಿಸುವುದು ಸರಕಾರದ ಹೊಣೆಯಾಗಿದೆ. ಅವರನ್ನು ಮಹಿಳೆಯರು ತಮ್ಮ ದಿನಾಚರಣೆಯಲ್ಲಿ ಭಾಗವಹಿಸಲು ಅವಕಾಶ ಮಾಡಕೊಟ್ಟಿರುವಂತೆ ಎಲ್ಲ ಸ‌ಾರ್ವಜನಿಕ ಕಾರ್ಯಕ್ರಮಗಳಲ್ಲಿ ಗೌರವದಿಂದ ಯಾವುದೇ ಅಂಗ ವಿಕಲರು ಭಾಗವಹಿಸುವಂತೆ ಗೌರವದಿಂದ ಭಾಗವಹಿಸಿ ತಮ್ಮ ಕೊಡುಗೆಯನ್ನು ಸಮಾಜಕ್ಕೆ ಸಲ್ಲಿಸುವ ಅವಕಾಶ ಮಾಡಿಕೊಡುವ ಕಡೆ ಎಲ್ಲ ಸಾಮಾಜಿಕ ಕಾರ್ಯಕರ್ತರು ಗಮನಹರಿಸಬೇಕು.

  4. ಜಿ.ಎನ್ ನಾಗರಾಜ್

    ಒಳ್ಳೆಯ ಬರಹ. ತಮ್ಮದಲ್ಲದ ತಪ್ಪಿಗೆ ಸಮಾಜ ಹೇರಿದ ನೋವಿನ ಮೂಟೆಯನ್ನು ನುಂಗಿಕೊಂಡು ಬಾಳುತ್ತಿದ್ದಾರಲ್ಲಾ ! ! ! ಪಂಡಿತಾರಧ್ಯರವರೆಂದಂತೆ ಅಂಗವಿಕಲರಿಗೊಂದು ದಿನ ವನ್ನು ವಿಶ್ವಸಂಸ್ಥೆ ಘೋಷಿಸಿರುವಂತೆ ಇವರಿಗೂ ಒಂದು ದಿನಾಚರಣೆ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು.

  5. Nanda Kumar.K.V

    ಒಳ್ಳೆಯ ಬರಹ. Abhinandanegalu 🙂

  6. Rudranna

    Sujatha avara ee lekhana hrudaya tattuva riti ide, mana kalakuttade. istu olle baraha kotta avarige mtftu prakatisida Avadhi ge danyavadagalu
    -Rudranna

  7. sujatha

    nimmellarigu nanna hrudyantharaalada dhanyavaadagalu….

  8. sujatha

    Nanna ee lekhanavannu mechida nimmellarigu, nanna hrudyantharaalada namanagalu….

  9. ರಾಮ್ದಾಸ

    ಬಹಳ ಇಷ್ಟವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading