ಇಡೀ ದಿನ ಮೋಡ ಮುಸುಕಿತ್ತು ಮತ್ತು ಅವತ್ತು ಸೋಮವಾರವೇ ಆಗಿತ್ತು !

shivu morigeri
 ಶಿವು ಮೋರಿಗೇರಿ 
ಇದನ್ನೂ ಹೇಳಿಬಿಡ್ತೀನಿ,

ಅವತ್ತು ಬೆಳಗಿನ ಜಾವ ಮನೆಗೆ ಬಂದು ಮಂಚಕ್ಕೆ ಬಿದ್ದಿದ್ದೆ. ಅಂವ ಬಂದು ನನ್ನ ಹೊದಿಕೆ ತೆಗೆದು ‘ಬೇಗಿನ ಹೊತ್ತಾಗೈತೋ ಸೌಕಾರಾ ಎದ್ದೇಳು ಇವತ್ತು ನಿಂದೇ ಹಬ್ಬ’ ಎಂದೇಳಿದಾಗ ರಾತ್ರಿ ನಾ ಅಂವಂಗೆ ಬರೆದು ಕೊಟ್ಟ ಲವ್ ಲೆಟರ್ ಪುಕ್ಷಳ ಫಲ ನೀಡಿದೆ ಅನ್ನೋದು ಗೊತ್ತಾಯ್ತು. ಎದ್ದು ರೆಗ್ಗು ವಗೆದು ಕನ್ನಡಿ ಎದಿರು ಕೂದಲು ಸರಿ ಮಾಡಿಕೊಂಡು ಬ್ರಷ್ ಮಾಡಿ ಬರೋವಷ್ಟರಲ್ಲಿ ಅವ್ವನ ಕೈಯಲ್ಲಿದ್ದ ತಾಟಿನ ತುಂಬ ತೊಳೆ ತೊಳೆ ಹಣ್ಣುಗಳು.

couple‘ಸ್ಟೌ ಮ್ಯಾಲೆ ಚಾಕ್ಕಿಟ್ಟೀನಿ ನಮ್ಮಪ್ಪ ಜಾಣ ಅಲಾ, ನಾಕು ಓಳು ಹಣ್ಣು ತಿನ್ನು’ ಅಂತೇಳಿದಾಗಲೂ ನಾನು ನನ್ನ ಅವ್ವನ ಕಣ್ಣು ನೋಡಿ ಸುಮ್ಮನೆ ಹಣ್ಣು ಮುಕ್ಕುತ್ತಿರುವಾಗಲೇ ಮೊಸರನ್ನ ಕಲಸುತ್ತ ಬಂದ ಅವ್ವ ‘ಇದನ್ನ ಎರಡೇ ತುತ್ತು ತಿಂದುಬಿಡಪ್ಪಾ ನಮ್ಮಪ್ಪ ಅಲ್ವಾ ನೀನು ಜಾಣ ತಿನ್ನಪ್ಪ’ ಅಂದಿದ್ದಕ್ಕೆ ಪಕ್ಕದಲ್ಲಿದ್ದ ಗುಬಾಲ್ ‘ಇಬ್ರೂ ತಿನ್ನೋಣ ಬಾ…ಣ’ ಅಂತೇಳಿ ತಟ್ಟೆ ತಗೊಂಡು ತಿನ್ನುತ್ತಲೇ ನಮ್ಮೆದಿರು ಟೀ ಬಂದಿತ್ತು. ಕಾಲಿ ಕಪ್ ಕೆಳಗಿಡುತ್ತಲೇ ಅವ್ವ 2 ರೂಪಾಯಿ ಕಾಯಿನ್ ಕೈಗಿಟ್ಟರು. ನನ್ನ ಆಯವ್ಯಯಗಳೇನೇ ಇರಲಿ ಅದು ಅವ್ವ ಕೊಡುವ 2 ರೂಪಾಯಿಗೆ ಸಮನಲ್ಲ. ಹಂಗಾಗೇ ನಾನು ಮನೆಯಲ್ಲಿರುವವರೆಗೂ ಪ್ರತಿದಿನ ಅವ್ವನಿಂದ 2 ರೂಪಾಯಿಗೆ ಕೈ ಚಾಚುತ್ತೇನೆ ಈಗ್ಲೂ. ಇದನ್ನೆಲ್ಲಾ ಮುಗಿಸಿ ನಮ್ಮ ಹೈಸ್ಕೂಲಿನ ಕಟ್ಟೆಯ ಮೇಲೆ ಕೂತು ನನ್ನ ಗೆಳೆಯನ ಶೃಂಗ ಕಥೆ ಕೇಳುತ್ತಿರುವಾಗಲೇ ಅಲ್ವಾ ನೀನು ಲೈಬ್ರೆರಿಯಿಂದ ನನ್ನ ಮುಂದೆ ಹಾದು ಹೋದದ್ದು.

ನೋಡಿದ ತಕ್ಷಣ ‘ಯಾರ್ಲೇ ತಮ್ಮಾ ಈ ಹುಡ್ಗೀ’ ಅಂತಂದು, ‘ನೋಡ್ಪಾ ಇಕಿ ಮ್ಯಾಲೆ ನಮಗೆ ಇಷ್ಕ್ ಆಗೈತಿ, ನೀ ಡೀಲ್ ಮಾಡು’ ಅಂತ ಹೇಳುತ್ತಲೇ ಅಂವ ನನ್ನ ಕಾಲಿಡಿದಿದ್ದ ! ‘ಯಾರಿಗೂ ಬಗ್ಗದ ನೀ ಇಷ್ಟ ಪಟ್ಟೀ ಅಂದ್ರ ಮುಗೀತು ಅಲ್ಲಿಗೆ ಕಥೆ’ ಅಂದೋನೇ ‘ರಾತ್ರಿಗೇ ರಿಜಲ್ಟ್ ಕೊಡ್ತೀನಿ ಬಾ’ ಅಂತೇಳಿ ಅಲ್ಲಿಂದ ಬಂದದ್ದೇ ನೆಪ್ಪು. ನಾನೋ ನನ್ನ ಮಾಮೂಲಿ ಸ್ಪಾಟಲ್ಲಿದ್ದೆ. ಇಡೀ ರಾತ್ರಿ ಅಂದರ್ ಬಾಹರ್. ಬೆಳಗ್ಗೆ ಮನೆ ಮುಟ್ಟಿದ್ನಾ ? ಇರಬಹುದೇನೋ. ಮತ್ತೆ ಅಂವ ಬಂದು ರೆಗ್ಗು ತೆಗೆದು ‘ನಮಸ್ಕಾರ ಸೌಕಾರಾ’ ಅಂದಾಗ್ಲೇ ಕಣ್ಬಿಟ್ಟೆ. ‘ಏನ್ ಲಕ್ಲೇ ನಿಂದು ! ಹುಡ್ಗಿ ಬರಿ ನಿನ್ನ ಹೆಸ್ರು ಕೇಳ್ತಿದ್ದಂಗೆನೆ ಇನ್ನೊಂದ್ಸತಿ ಕನ್ ಫರ್ಮ್ ಮಾಡ್ಕೊಳ್ಳಿ ನಾನ್ ರೆಡಿ’ ಅಂದಿದ್ದಾಳೆ ಅಂದಿದ್ದ.

ಇಡೀ ಊರಲ್ಲಿ ಎರಡನೆಯ ದೊಡ್ಮನೆ ನಿಮ್ಮದು. ನಿಮ್ಮನೆಗೂ ನಂಗೂ ಇದ್ದ ಸಲುಗೆ ವಿಪರೀತ ಮೇಲುಗೈ. ನಿನ್ನ ಸೌಂದರ್ಯವನ್ನು ವಿವಿರಿಸಿ ಹಗುರಾಗಲಾರೆ. ‘ರಾತ್ರಿ ಎಂಟಕ್ಕೆ ಅದೇ ಹೈಸ್ಕೂಲ್ ಗ್ರೌಂಡ್ ಗೆ ಬರ್ತೀನಿ ನೀವಿಬ್ರೂ ಬನ್ನಿ ನನ್ನೆದಿರು ಅಂವ ಅದೇ ಮಾತೇಳಿದ್ರೆ ಊರಿಗೂರೇ ಊಳಿಟ್ರೂ ಪರ್ವಾಗಿಲ್ಲ ನಾನವನ ಮಿಡಿತ ಆಗ್ತೀನಿ’ ಅಂದಿದ್ದೆಯಂತೆ, ನಾನೂ ಹೊರಡೋ ಮಗಾನೇ, ಟೈಂಗೆ ಸರಿಯಾಗಿ ನನ್ನ ಇನ್ನೊಬ್ಬ ಗೆಳೆಯನ ಅಫೈರ್ ಅಡಕತ್ತರಿಯಲ್ಲಿತ್ತು, ಸುದ್ದಿ ಕೇಳಿ ಡೀಲ್ ಗೆ ಹೋಗಿ ಮರಳುವಷ್ಟರಲ್ಲಿ ರಾತ್ರಿ 2: 36.

ನೀ ಕಾದೂ ಕಾದೂ ಹೊಳ್ಳಿ ಹೋಗಿದ್ದೆ. ವೆರಿ ನೆಕ್ಸ್ಟ್ ಡೇ ಮತ್ತೂ ನಾ ನಿದ್ರೆಯಲ್ಲಿದ್ದೆ, ಅಂವ ಬಂದವನೇ ‘ಸೌಕಾರಾ,,, ನಮ್ಮ ಸೊಸಿ ಸಿನ್ಮಾಕ್ಕೆ ಬರ್ತಾಳಂತೆ ನಮ್ಮಿಬ್ರುದೂ ಎಲ್ಲಾ ಖರ್ಚು ಅಕಿದೇ ಅಂತೆ ನಡಿ ಹೋಳಿ ಹುಣ್ಮಿ ಮಾಡೋಣ’ ಅಂದಾಗಲೇ ನಾನು ಜಾಗ್ರನಾಗಿದ್ದು, ಅಸಲು ವಲ್ಲೆ ಅಂತ ಕೈಚೆಲ್ಲಿದೆ, ನೀನು ಆ ಥೇಟರ ಗೇಟಿನ ಬಳಿ ಕಾದು ವಾಪಸ್ ಬಂದಿದ್ದೆ, ವಿಷ್ಯ ಇಷ್ಟೇ, ಆಗಲೂ ನಂಗೆ ನನ್ನ ಗುರಿಯೇ ಮುಖ್ಯವಾಗಿತ್ತು ಮತ್ತದು ನಿಂಗೂ ಗೊತ್ತಿತ್ತು.

ಆ ಮುಂಜಾನೆ ನನ್ನ ಮೊಬೈಲ್ ಬಡಕೊಳ್ಳೋದ ನೋಡಿ ‘ಹಲೋ’ ಅಂದ್ರೆ ‘ಸಾಹೇಬ್ರಿಗೆ ಡಿಸ್ಟರ್ಬ್ ಆಗಲ್ಲ ಅಂದ್ರೆ ಎದ್ದು ಬೀದಿ ಕೊನೇಗೆ ಬಂದ್ರೆ ನಾಲ್ಕೆಜ್ಜೆ ನನ್ನ ಜೊತೆ ವಾಕ್ ಮಾಡ್ಬಹುದು’ ಅಂತೇಳಿ ಕರೆದು ಹಂಪೆಯ ಕಲ್ಲು ಕೊಟರೆಗಳನ್ನೆಲ್ಲಾ ಸುತ್ತಿಳಿಸಿ ಮನೆಗೆ ಬರೋವಾಗ ‘ನೋಡು, ನಿನ್ನ ಕನಸೇನೇ ಇದ್ರೂ ಅವೆಲ್ಲ ಖರೆ ಆಗ್ಲಿ. ನನ್ನ ದಾರಿ ನಂಗೆ ಇದ್ದಿದ್ದೇ, ಚಣ ಮೂಡಿದ ಬಾಲ ಭಾವಗಳನ್ನು ಬದಿಗಿಟ್ಟು ನೀ ವೈನಾಗಿರು. ಅಪ್ರಾಪ್ತ ಪ್ರಲಾಪಕ್ಕೆ ಅಂತಿಮ ಪುಟವೂ ಇರುತ್ತೆ’ ಅಂದಿದ್ದೆ!

ಎಷ್ಟೊಂದು ಸಾಹಿತ್ಯಿಕ ಶೈಲಿ ನಿಂದು ! ನಿಬ್ಬೆರಗಾಗಿದ್ದೆ ನಾನಾಗ, ಮಾತು ಮುಂದುವರೆಸಿದ ನೀ ‘ಇಬ್ರೂ ಸಂಧಿ ಕಾಲದ ಸ್ನೇಹಿತರಾಗಿರೋಣ ಸುಮ್ನೆ ಹೂಂ ಅನ್ನು’ ಅಂದದ್ದಿನ್ನೂ ಆಪ್ತತೆ, ಆಮೇಲೊಂದು ವರ್ಷ ನಿಂಗೆ ಮದ್ವೆಯಾಯ್ತು ಮಾರನೇ ವರ್ಷ, ನಾನು ಬಸ್ ಸ್ಟ್ಯಾಂಡಲ್ಲಿದ್ದಾಗಲೇ ನೀ ಊರಿಗಿಳಿದಿದ್ದೆ, ನಾಲ್ಕಾರು ಬ್ಯಾಗು ಮತ್ತೊಂದು ಮಗು ನೋಡಿದವನೇ ನೇರ ಬಂದು ಬ್ಯಾಗ್ ಗಳನ್ನು ಮನೆ ತಲುಪಿಸಿ ಹೊರಳುವಾಗ ‘ಇವತ್ತು ಹುಣ್ವಿ ಐತಿ ಮಾಳಿಗಿ ಮ್ಯಾಲ ಬೆಳದಿಂಗಳ ದಿಂಬಿಗೆ ನಿಮ್ಮ ದೊಡ್ಡಪ್ಪ ಅಂದ್ಕೊಂಡಿದ್ದನ್ನೆಲ್ಲಾ ಸುರುವಿ ಆ ಮುಗಿಲ ಮಾತಾಯಿನ ಬೇಡ್ಕ ಅನ್ನಮ್ಮಾ ಆಸಿಗಳೆಲ್ಲಾ ಹಗಲಾಗ್ತಾವು’ ಅಂತ ನೀನೆತ್ತಿಕೊಂಡಿದ್ದ ನಿನ್ನ ಮಗುವಿಗೇಳಿದ್ದೆ ಅದೊಂಥರಾ ಹಾರೈಕೆ.

ಆಗೇನೂ ಮಾತೇ ಆಡದೆ ಅಲ್ಲಿಂದ ಸುಮ್ಮನೆ ಬಂದೆ. ಮತ್ತು ರಾತ್ರಿ ಅಂಗಳದಲ್ಲಿ ಹೊಟ್ಟೆ ತುಂಬಿದ ಶಶಿ ನೋಡಿ ನನ್ನೆಲ್ಲಾ ಹಲುಬು ಬಿಟ್ಟು ಮಲಗಿದೆ, ಮುಂದೆ ನಡೆದದ್ದೆಲ್ಲಾ ಐತಿಹ್ಯ.

ಅಸಲಿ ಯೇನ್ ಗೊತ್ತಾ ? ಮೊಟ್ಟ ಮೊದಲ ಬಾರಿಗೆ ನನ್ನೂರಿನ ಆ ಹೈಸ್ಕೂಲ್ ಕಟ್ಟೆಯ ಮೇಲೆ ನಿನ್ನ ನೋಡಿದ್ದು ಸೋಮವಾರ. ಅವತ್ತಿಡೀ ದಿನ ಮೊಡ ಮಸುಕಿತ್ತು. ನೀನು ಸಿನ್ಮಾಕ್ಕೆ ಕರೆದೆಯಲ್ಲಾ ಅದೂ ಸೋಮವಾರ ಅವತ್ತೂ ಇಡೀ ದಿನ ಮೋಡ ಮುಸುಕಿತ್ತು. ಹಂಪೆಯ ಕಲ್ಲು ಕೊಟರೆಗಳನ್ನು ಹತ್ತಿಳಿದಾಗಲೂ ಸೋಮವಾರವೇ. ಮತ್ತೂ ಮೋಡ ಮುಸುಕಿತ್ತು. ದಿಂಗಳಿಗೆ ಮೈಮರೆತು ಅಂಗಳದ ಮ್ಯಾಲೆ ಮಲಗಿದ್ದೆನಲ್ಲಾ ಅದೂ ಸೋಮವಾರವೇ. ಅವತ್ತೇನೂ ಮುಗಿಲು ವಾಣವಾಗಿರಲಿಲ್ಲ. ಕಟ್ಟ ಕಡೇದಾಗಿ ನಿಂಗೆ ವಿದಾಯ ಹೇಳಿದ್ನಲ್ಲ ಅವತ್ತೂ ಸೋಮವಾರವೇ ಮತ್ತವತ್ತು ಇಡೀ ಮುಗಿಲು ರೆಗ್ಗು ಹೊದ್ದು ಮಲಗಿತ್ತು.

ಕಳೆದ ಸೋಮವಾರ ನಾ ಮತ್ತದೇ ಹೈಸ್ಕೂಲಿನ ಕಟ್ಟೆಯ ಮೇಲೆ ಸಂಜೆ ಒಬ್ಬನೇ ಕುಳಿತಾಗಲೂ ಯಾಕೋ ಮೋಡ ಮುಸುಕಿತ್ತು, ನಿನ್ನ ನೆಪ್ಪುಗಳಿಗೆನ್ನ ತಳ್ಳಿತ್ತು ಅಷ್ಟೆ.

‍ಲೇಖಕರು admin

December 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: