ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಸಂಜೆ ‘ಶಂಕರ್ ಲಾಲ್’

ಕನ್ನಡ ರಂಗಭೂಮಿಗೂ ಬ್ರೆಕ್ಟ್ ಗೂ ಇನ್ನಿಲ್ಲದ ನಂಟು. ಇಡೀ ಜಗತ್ತನ್ನು ತನ್ನದೇ ಮನೆಯೆಂಬಂತೆ ಆಕ್ರಮಿಸಿಕೊಂಡ ಶೇಕ್ಸ್ ಪಿಯರ್ ಕನ್ನಡದಲ್ಲಿ ಎಷ್ಟರ ಮಟ್ಟಿಗೆ ಕಾಣಿಸಿಕೊಂಡಿದ್ದಾನೋ ಗೊತ್ತಿಲ್ಲ. ಆದರೆ ಬ್ರೆಕ್ಟ್ ಗಂತೂ ಇಲ್ಲಿ ಇನ್ನಿಲ್ಲದ ಸ್ಥಾನ. ಇದಕ್ಕೆ ಕಾರಣವೂ ಇದೆ. 80 ರ ದಶಕದಲ್ಲಿ ಎದ್ದು ಬಂದ ಚಳವಳಿಗಳು ರಂಗಭೂಮಿಯನ್ನೂ ಆವರಿಸಿಕೊಳ್ಳದೇ ಬಿಡಲಿಲ್ಲ. ‘ಸಮುದಾಯ’ ಸೇರಿದಂತೆ ಪ್ರತಿಯೊಂದು ತಂಡವೂ ತನ್ನ ನಾಟಕ ಜನರ ಬದುಕಿಗೆ ಹತ್ತಿರವಾಗಿರಬೇಕು ಎಂದು ಬಯಸುತ್ತಿದ್ದವು. ಸರ್ವಾಧಿಕಾರವನ್ನು ಕೆಣಕುವ ‘ಗರೀಬಿ ಹಠಾವೋ’ ನಾಟಕವನ್ನು ಆಡಿಸುವ ಮೂಲಕ ಪ್ರಸನ್ನ ಒಂದು ಹೊಸ ರೀತಿಯ ನಾಟಕ ಮನಸ್ಸನ್ನು ಉದ್ಘಾಟಿಸಿದರು. ಈ ಬೆನ್ನಲ್ಲೇ ಎನ್ ಎಸ್ ವೆಂಕಟರಾಮ್ ‘ಆನೆ ಬಾಲ’ ಆಡಿಸಿ ಬ್ರೆಕ್ಟ್ ನನ್ನು ಕನ್ನಡಕ್ಕೆ ನಡೆಸಿಕೊಂಡು ಬಂದರು. ಅಲ್ಲಿಂದ ಸಾಗಿದ ಆನೆ ಈಗ ‘ಸಂಚಯ’ ಅಂಗಳದಲ್ಲಿ ನಿಂತಿದೆ.

ಸಂಚಯದ ರೂವಾರಿ, ಸದಾ ಗೆಲುವಿನ ನಗೆಯ ಗಣೇಶ್ ‘ಅಂಕೆ ತಪ್ಪಿದ ಶಂಕರಲಾಲ್’ ನಾಟಕ ನಿರ್ದೇಶಿಸಿದ್ದಾರೆ. ಇದು ಬ್ರೆಕ್ಟ್ ನ The Resistible Rise of Arturo Ui ನಾಟಕದ ರೂಪಾಂತರ. ‘ರಂಗಭೂಮಿಯ ಗೆಳೆಯರೊಂದಿಗೆ ಒಂದಷ್ಟು ದಿನ ಆಟವಾಡಿಕೊಂಡಿದ್ದ’ ಕೆ ವಿ ನಾರಾಯಣ್ ಈ ನಾಟಕವನ್ನು ಅನುವಾದಿಸಿದ್ದಾರೆ. ನಾಟಕ ಹುಟ್ಟಿ ದಶಕಗಳು ಕಳೆದಿವೆ. ‘ಸಂಚಯ’ಕ್ಕೆ ಗಣೇಶ್ ಈ ನಾಟಕವನ್ನು ನಿರ್ದೆಶಿಸಿಯೂ ಹಲವು ವರ್ಷಗಳಾಗಿವೆ. ಆದರೆ ಈ ನಾಟಕ ಮಾತ್ರ ಅಂದಿಗೂ, ಎಂದೆಂದಿಗೂ ಪ್ರಸ್ತುತವಾಗುವ ನಾಟಕವಾಗಿಯೇ ಉಳಿದಿದೆ. ಆಗಿನ ತರಕಾರಿ ಮಾರುಕಟ್ಟೆಯ ಮೇಲೆ ಗ್ಯಾಂಗ್ ಗಳು ಹಿಡಿತ ಸಾಧಿಸುವುದು ಈ ನಾಟಕದ ವಸ್ತು. ಈಗ ತರಕಾರಿ ಮಾರುಕಟ್ಟೆಯ ಬದಲು ಜಾಗತೀಕರಣದ ಹಿನ್ನಲೆಯಲ್ಲಿಟ್ಟು ನೋಡಿದರೆ ಖಂಡಿತಾ ಇಂದಿನ ನಾಟಕವೇ.

ಇಡೀ ತಂಡ ಗೆಲುವಿನಿಂದ ಈ ನಾಟಕವನ್ನು ರಂಗಕ್ಕೆ ತಂದಿದೆ. ( ಸಂಪರ್ಕ: ಗಣೇಶ್- 94484 61718). ನಾಟಕ ನೋಡಬೇಕು ಎಂದಾದರೆ ಇಂದು (ಸೋಮವಾರ) ಸಂಜೆ 7 ಕ್ಕೆ ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ.

 

‍ಲೇಖಕರು avadhi

29 November, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading