ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ರಾಮನ್ ದಿನ

ಇಂದು ವಿಜ್ಞಾನ ದಿನಾಚರಣೆ. ಸಿ ವಿ ರಾಮನ್  ನೆನಪಿನಲ್ಲಿ.
ಆ ವಿಜ್ಞಾನ ದಿನಾಚರಣೆಗೆ ‘ಅವಧಿ’ ಯ ನುಡಿ ನಮನ ಕೆ ಎಸ್ ನಿಸಾರ್ ಅಹ್ಮದ್ ಅವರ ಎಂದೂ ಬಾಡದ ‘ರಾಮನ್ ಸತ್ತ ಸುದ್ದಿ’ಯ ಮೂಲಕ

ರಾಮನ್ ಸತ್ತ ಸುದ್ದಿ
——————
ಕೆ.ಎಸ್.ನಿಸಾರ್ ಅಹಮದ್

ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ
ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ
ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ-
ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ
ದುಃಖವಾಯಿತು. ಮೈಲಿಗೆ
ಪರಿಚಿತ ಸಿಕ್ಕಿದ್ದು ನವುಲೆ ಗ್ರಾಮದ ಹನುಮ;
ಯಾರದೋ ಗದ್ದೆಯಲ್ಲಿ ಗೇಯುವ, ಮೋಟು ಬೀಡಿಯ
ಕಿವಿಗೆ ಸಿಕ್ಕಿಸಿಕೊಳ್ಳುವ, ತೊಡೆಯ ಪರಪರ ಕೆರೆದುಕೊಳ್ಳುವ,
ಹಳ್ಳಿಯೇ ಹನುಮಿಸಿದಂತೆ ನನಗೆ ಭಾಸವಾಗುವ ವಿಚಿತ್ರ-
ಅಭ್ಯಾಸರೂಪಿತ ನಿರ್ದಿಷ್ಟ ಅಳತೆಯ ನಿರ್ವಿವಿಧ ಕೂಗಿಂದ
ಹಕ್ಕಿಗಳ ಅಟ್ಟುತಿದ್ದ; ಪಾತಿ ಸರಿಗೊಳಿಸುತಿದ್ದ; ಅಪ್ರಚಲಿತ
ಹಳ್ಳಿಪದದ ಅಶಾಸ್ತ್ರೀಯ ಮಟ್ಟನ್ನು ಕುರುಕುತಿದ್ದ.
ಕಂಡೊಡನೆ, ’ಹ್ಯಾಂಗಿದೀರಿ’ ಅಂದ;
ಈಚೀಚೆಗೆ ಅಪರೂಪವಲ್ಲ ಅಂದ, ಯಾಕೋ ಬಡವಾಗಿದ್ದೀರಿ
ಅಂದ, ಮಳೆ ಬೇಕಾಗಿಲ್ಲ ಅಂದ, ಫಸಲನ್ನು ಅಂದಾಜಿಸಿದ,
ನೆರೆಯವರೊಡನೆ ದಿನವಹಿ ಕಾದಾಟ ಸಾಕಾಗಿದೆ ಮಾರಾಯರೇ
ಅಂದ-ಕೊರೆಯುತ್ತಲೇ ಇದ್ದ-ಹೂಂಗುಟ್ಟಿದೆ-
ಅವನ ಮಾತಿಗೆ ಮಂಜಿನೊಳಗಿನ ಸೂರ್‍ಯ ನನ್ನ ಪ್ರಜ್ಞೆ.
’ರಾಮನ್ ಸತ್ತರೋ ಹನುಮ’ ಅನ್ನಬೇಕು, ಆಗ ತಡೆದು
ಸುಮ್ಮನಾದೆ. ರಾಮನ್ ಅರ್ಥೈಸಿಕೊಳ್ಳಬಹುದೆ ಇವನ
ಅಶಿಕ್ಷಿತ ಅರಿವಿಗೆ?
ಆ ಕಡೆ ರಾಮನ್, ಈ ಕಡೆ ಹನುಮ;
ದಿನವಿಡೀ ಮೈ ಕೆಸರಿಸಿಕೊಂಡು, ನನ್ನಂಥವ ನೆನೆಯಲೂ
ನಿರಾಕರಿಸುವ ತಂಗಳುಂಡು, ರಾತ್ರಿ ಕಳ್ಳಭಟ್ಟಿಯ ಹೊಡೆದು-
ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನೆನ್ನೆಯ
ಪುನರಾವರ್ತನೆಯ ಏಕತಾನತೆಯಲ್ಲಿ-ಲೋಕ ಮರೆಯುವ
ಹನುಮನಿಗೆ ರಾಮನ್ ಹೋದರೆಷ್ಟೋ ರಸೆಲ್ ಹೋದರೂ ಅಷ್ಟೆ.
ಪತ್ರಿಕೆಯೋದುವುದಿಲ್ಲ; ನಾನು ಕವಿಯೆಂಬುದು ಗೊತ್ತಿಲ್ಲ:
ಹೊಟ್ಟೆಬಟ್ಟೆಯ ಅಗತ್ಯ ಮೀರಿದ ನನ್ನ ಹಸಿವು, ಅಸ್ವಸ್ಥತೆ
ಅರಿತಿಲ್ಲ; ಲೋಕದ ಪ್ರತಿನಿತ್ಯದ ಆಗು-ಹೋಗುಗಳಿಗೆ ಪ್ರತಿಕ್ರಿಯಿಸುವ
ಸೂಕ್ಷ್ಮತೆ ಕಂಡಿಲ್ಲ; ಅನೇಕ ಮಟ್ಟದಲ್ಲಿ ಬಾಳುವ ಪ್ರಶ್ನೆಯೇ
ಉದ್ಭವಿಸಿಲ್ಲ-ಆದರೂ ತೃಪ್ತ…
ಗದ್ದೆ, ಧಣಿ, ಹ್ಯಾಪ ಮೊಲೆಯ ಹೆಂಡಿರು, ಸಿಂಬಳಸುರುಕ ಮಕ್ಕಳು,
ದೇವರ ಗ್ರಾಮ್ಯ ಕಲ್ಪನೆ, ಊರಿನ ಪುಢಾರಿ-ಇಷ್ಟೇ ಜಗತ್ತು-ಆದರೂ ತೃಪ್ತ…
ನನ್ನಂತೆ ಕನ್ನಡ, ಗಡಿ, ನದಿ, ಪದ್ಯ, ಪ್ರತಿಷ್ಠೆ ಕಾಡುವುದಿಲ್ಲ-
ಹೆಂಡತಿಗೆ ಚೋಲಿ, ಹಿರಿ ಮಗನ ಶಾಲೆ
ಬೆಲ್ಲದ ಕಾಫಿಯ ಹಾಲೇಶಿಯ ಸಾಲ
ಹೊತ್ತು ಹೊತ್ತಿಗೆ ರುಚಿ ಗೌಣ ಅರಸಿಕ ಕೂಳು-ಚಿಂತೆಯಿಲ್ಲವೆಂದಲ್ಲ-ಆದರೂ ತೃಪ್ತ…
ಇದ ಮೆಚ್ಚಿ, ಕರುಬಿ, ಪೇಚಾಡಿ ನಡೆದಾಗ
ದೂರದಿಂದ, ಪ್ರಕೃತಿಯ ಅಗಾಧದಲ್ಲಿ ಹಿಮಾಚ್ಛಾದಿತ ಹನುಮ,
ಅವನ ಕೂದಲೆಳೆಯ ಕೂಗು-
ಅರ್ಥ ತೋರದ ಚುಕ್ಕೆ.
ಇಲ್ಲಿಂದ ನನಗೆ ವರ್ಗವಾಗುತ್ತೆ-ಒಂದು ದಿನ
ಹನುಮ ಸಾಯುತ್ತಾನೆ-ತಿಳಿಯುವುದಿಲ್ಲ.
ಇಲ್ಲಿನ ಹಳಬ ಅಲ್ಲಿ ಹೊಸಬನಾಗುತ್ತೇನೆ,
ಎಲ್ಲೋ ಹೇಗೋ ಸಾಯುತ್ತೇನೆ-ತಿಳಿಯುವುದಿಲ್ಲ.
ನನ್ನ ಹೆಸರು, ಹುದ್ದೆ, ಪದ್ಯ, ತಳಮಳ, ಬದುಕು-ತಿಳಿಯುವುದಿಲ್ಲ.
ಈ ಪರಿಚಿತ ಆಕಾಶ, ತೆಂಗಿನ ಮರ, ಕಾಲುವೆ, ಗುಡ್ಡ, ಗುಡಿಸಲು-
ಇವು ಕೊಟ್ಟ ಧಾರಾಳ, ಅರ್ಥವಂತಿಕೆ, ಭಾವ ಸಂಚಾರ-ತಿಳಿಯುವುದಿಲ್ಲ.
ಕೊರಲು ಬಿಗಿದು ಒಬ್ಬಂಟಿ ನಿಧಾನ ನಡೆದಂತೆ
ರಾಮನ್ ಸತ್ತ ತೀವ್ರತೆ, ಕಳವಳ ತಣ್ಣಗಾಯಿತು.

‍ಲೇಖಕರು avadhi

28 February, 2010

3 Comments

  1. H. Anandarama Shastry

    ’ರಾಮನ್ ಸತ್ತ ಸುದ್ದಿ’ ಈ ನಿಸಾರರ ಕವನವನ್ನು ಅನುಸರಿಸಿ-ಅನುಕರಿಸಿ ನಾನು ಬರೆದಿರುವ ಈ ಅಣಕ ಕವನದಲ್ಲಿ ಬರುವ (ಸತ್ತಿರುವ) ಆನಂದರಾಮನ್ ಒಬ್ಬ ಲೇಖಕ. ಎಲ್ಲರಂತೆ ಅವನೂ ಸತ್ತ. ಅವನ ಸುತ್ತಮುತ್ತ ಹರಿದಿರುವ ಸಾಲುಗಳನ್ನು -ಕವನದ ಸಾಲುಗಳನ್ನು- ಓದಿ ಆನಂದಿಸಿರಿ ಅಥವಾ ದುಃಖಿಸಿರಿ.
    ನಿಸಾರರ ಕ್ಷಮೆ ಕೋರಿ ನಾನು ಬೆಳಕಿಗೆ ತಂದ ನನ್ನ ಈ ಅಣಕವನ ಅಣಕ ಕವನ ಕಳೆದ ವರ್ಷದ (ಏಪ್ರಿಲ್ ೨೦೦೮) ’ಸುಧಾ’ ಹಾಸ್ಯ ಸಂಚಿಕೆಯಲ್ಲಿ ಪ್ರಕಟವಾಗಿದೆ.
    ಆನಂದರಾಮನ್ ಸತ್ತ ಸುದ್ದಿ
    ————————-
    ಆನಂದರಾಮನ್ ಸತ್ತ ದಿನ ಬೆಂಗಳೂರಿನಲ್ಲಿ
    ದರಿದ್ರ ಥಂಡಿ; ಚಳಿಗಾಲದಲ್ಲೇ ಸಾಯುವುದೆ
    ಈ ಬರಹಗಾರ, ಕೊರೆದದ್ದು ಸಾಲದೆ ಬದುಕಿದ್ದಾಗ
    ಕೊರೆವ ಚಳಿಯಲ್ಲೇ ಸತ್ತು ಬೆಳಗಿನ ಹೊತ್ತು
    ಹೊರಗೆ ಬರುವಂತಾಯ್ತಲ್ಲಾ ಈ ಚಳಿಗೆ
    ಅವನ ಪಾರ್ಥಿವ ಶರೀರದ ಬಳಿಗೆ ಎಂದು
    ದುಃಖವಾಯಿತು ಅವನ ಬಂಧು
    -ಗಳಿಗೆ, ಪರಿಚಿತರಿಗೆ ಮತ್ತು ಸಹ
    -ಬರಹಗಾರರ ಬಳಗಕ್ಕೆ.
    ಪತ್ರಿಕೆಗಳಿಗೆ ಪತ್ರ ಬರೆಯುತ್ತ
    ವಾಚಕರಿಗೆ ಕೀಚಕಪ್ರಾಯ ಆದಾತ,
    ಕವಿಗೋಷ್ಠಿಗಳಲಿ ಭಯಂಕರ
    ಕೊರೆದಾತ, ತಾನು ಬಲು ಆದರ್ಶ ವ್ಯಕ್ತಿ
    ಎಂದು ಮೆರೆದಾತ, ಸಾಯಲಿ ಬಿಡು ಪೀಡೆ
    ತೊಲಗಿತು ಎಂದರು ಬಹುತೇಕ ಎಲ್ಲ ಜನರು.
    ಆದರೆ, ಅವನೊಬ್ಬ ಹನುಮ ಮಾತ್ರ,
    ಹಳ್ಳಿ ಗಮಾರ, ಒಳ್ಳೆ ಕೆಲಸಗಾರ,
    ಹಳ್ಳಿ ಪದದ ಅಶಾಸ್ತ್ರೀಯ ಮಟ್ಟನ್ನು
    ಕುರುಕುವ ಹರಕಲು ಬಟ್ಟೆಯ
    ಗಾಯನಶೂರ, ದಿವಂಗತ ಆನಂದರಾಮನ
    ಅತೀವ ಪ್ರೀತಿಗೆ ಪಾತ್ರ; ಅವನಿಗೆ ಆನಂದರಾಮ
    ಕವಿಯೆಂಬುದು ಗೊತ್ತಿಲ್ಲ, ಬರಹ
    ಓದಿಲ್ಲ, ಅಸಲು ಓದಲಿಕ್ಕೇ ಬರೋಲ್ಲ,
    ಆದರೂ ದುಃಖಿಸಿದ ಮನಸಾರೆ; ಕಾರಣವಿಲ್ಲದಿಲ್ಲ.
    ಕೆಟ್ಟು ಪಟ್ಟಣ ಸೇರಿದ್ದಾಗ ಹನುಮ,
    ಹಸಿವು, ಅಸ್ವಸ್ಥತೆಯ ಗೂಡಾಗಿದ್ದಾಗ,
    ಆಸರೆ ನೀಡಿದ್ದು ಇದೇ ಆನಂದರಾಮ.
    ಪ್ರೀತಿಸಿದ್ದು ಸಹ; ಕನ್ನಡ, ಗಡಿ, ನದಿ,
    ಪದ್ಯ, ಪ್ರತಿಷ್ಠೆಗಳನ್ನು ಮೀರಿ.
    ಖಡ್ಗಕ್ಕಿಂತ ಲೇಖನಿಗೆ ಬಲ ಹೆಚ್ಚಂತೆ, ಗೊತ್ತಿಲ್ಲ.
    ಲೇಖನಿಗಿರದ ಬಲ ಪ್ರೀತಿಗೆ; ಎರಡು ಮಾತಿಲ್ಲ.
    ಈ ಕಡೆ ಹನುಮ, ಆ ಕಡೆ ಆನಂದರಾಮ;
    ಮಧ್ಯೆ ಅಗಾಧ ಬಂಧು-ಬಳಗ,
    ಸ್ಹೇಹಿತರು, ಸಹ ಲೇಖಕರು, ’ಅಭಿಮಾನಿಗಳು’.
    ಮಧ್ಯದಲ್ಲಿ ಕಳಚಿದ ಕೊಂಡಿ.
    ನಿಧನವಾಗಿಹೋದ ಆನಂದರಾಮನ್
    ಒಬ್ಬಂಟಿ. ಕಳವಳಗೊಂಡು ಕುಳಿತಿರುವ
    ಹನುಮ ಸಹ ಒಬ್ಬಂಟಿ. ಅಗಾಧ
    ಜನಸಾಗರ ಕರ್ಮಕ್ಕೆ.
    –೦–

  2. Ganesh Shenoy

    Magical writing!

  3. ಶ್ರೀವತ್ಸ ಜೋಶಿ

    ೧. ಪ್ರೊ. ನಿಸಾರ್ ಅಹ್ಮದ್ ಇಲ್ಲಿ (ವಾಷಿಂಗ್ಟನ್ ಡಿಸಿ)ಗೆ ಬಂದಾಗ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಈ ಕವಿತೆ ಹುಟ್ಟಿದ ಸಂದರ್ಭ (ರಾಮನ್ ಸತ್ತ ಕ್ಷಣ, ಕವಿತೆ ಹುಟ್ಟಿದ ಕ್ಷಣ)ವನ್ನೂ ವಿವರಿಸಿದ್ದರು. ಮನೋಜ್ಞವಾಗಿತ್ತು. ಆ ಕವಿತೆಯ ಪೂರ್ಣಪಾಠವನ್ನು ಪ್ರಕಟಿಸಿದ್ದಕ್ಕಾಗಿ ಅವಧಿಗೆ ಸ್ಪೆಷಲ್ ಥ್ಯಾಂಕ್ಸ್!
    ೨. ಇನ್ನು, ಇವತ್ತಿನ ಈ ಬ್ಲಾಗ್‌ಪೋಸ್ಟ್‌ನ ಒಕ್ಕಣೆ- “ಇಂದು ವಿಜ್ಞಾನ ದಿನಾಚರಣೆ. ಸಿ.ವಿ.ರಾಮನ್ ನೆನಪಲ್ಲಿ… ಅವಧಿಯ ನುಡಿನಮನ ’ರಾಮನ್ ಸತ್ತ ಸುದ್ದಿ’ಯ ಮೂಲಕ…” ಅಂತಿರುವುದು ಇವತ್ತೇ ಸಿ.ವಿ.ರಾಮನ್ ಪುಣ್ಯತಿಥಿಯೋ ಎಂದು ಭಾಸವಾಗುವಂತಿದೆ (ಎಲ್ಲರಿಗೂ ಅಲ್ಲದಿದ್ದರೂ ಕೆಲವರಿಗೆ ಹಾಗೆ ಅನಿಸಿದರೆ ಆಶ್ಚರ್ಯವಿಲ್ಲ). ಇವತ್ತು ಫೆಬ್ರವರಿ 28 ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಏಕೆಂದರೆ ಸಿ.ವಿ.ರಾಮನ್ ಮತ್ತವರ ಸಹೋದ್ಯೋಗಿ/ಶಿಷ್ಯ ಕೆ.ಎಸ್.ಕೃಷ್ಣನ್ ಜತೆಸೇರಿ 1928ರಲ್ಲಿ ಇದೇ ದಿನದಂದು “Raman Effect” ಅನ್ನು ಜಗಜ್ಜಾಹೀರುಪಡಿಸಿದರು. ಮುಂದೆ ಎರಡು ವರ್ಷಗಳಲ್ಲಿ ರಾಮನ್ ಭೌತವಿಜ್ಞಾನ ನೊಬೆಲ್ ಪ್ರಶಸ್ತಿ ವಿಜೇತರಾದರು. ’ರಾಮನ್ ಪರಿಣಾಮ’ ಜಗಜ್ಜಾಹೀರುಗೊಂಡ ದಿನವನ್ನು ಭಾರ‍ತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ.
    ನಿಮ್ಮ ಬ್ಲಾಗ್ ಒಕ್ಕಣೆ ಬದಲಾಯಿಬೇಕೆಂದು ಇದನ್ನು ಬರೆಯುತ್ತಿರುವುದಲ್ಲ. ಓದುಗರಿಗೆ ಪೂರಕಮಾಹಿತಿ ಒದಗಿಸಲಿಕ್ಕಷ್ಟೇ.
    ಅಂದಹಾಗೆ ರಾಮನ್ ಸತ್ತದ್ದು 21 ನವೆಂಬರ್ 1970ರಂದು.
    ರಾಮನ್ ಜತೆ ಪ್ರಯೋಗಮಾಡಿದ್ದ ಕೆ.ಎಸ್.ಕೃಷ್ಣನ್ ಬಗ್ಗೆ ವಿಸ್ತೃತ ಲೇಖನ ಇವತ್ತಿನ ಉದಯವಾಣಿ ಸಾಪ್ತಾಹಿಕ ಸಂಪದ ಮುಖಪುಟದಲ್ಲಿ ಡಾ. ಎ.ಪಿ.ರಾಧಾಕೃಷ್ಣ ಬರೆದಿದ್ದಾರ‍ೆ. ಆಸಕ್ತರು ಗಮನಿಸಬಹುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading