ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ನನ್ನ ಅಮ್ಮ ರಿಟೈರ್ ಆಗ್ತಾರೆ..

ಸುಚಿತ್ ಕೋಟ್ಯಾನ್ 

ಇಂದು ನನ್ನ ಅಮ್ಮ ರಿಟೈರ್ ಆಗ್ತಾರೆ..

ನನ್ನಮ್ಮನ 39 ವರ್ಷದ ಸುಧೀರ್ಘ ವೃತ್ತಿ ಜೀವನಕ್ಕೆ ಅಂಕದ ಪರದೆ ಇಂದು ಸಂಜೆ ಬೀಳುತ್ತಿದೆ..

ನಾನು ಚಿಕ್ಕವನಿದ್ದಾಗ ಮತ್ತು ಅದಕ್ಕೂ ಮೊದಲು ನಮ್ಮ ಮನೆಗೆ ಸರಿಯಾಗಿ ರಸ್ತೆ ಇರಲಿಲ್ಲ. ನಮ್ಮ ಮನೆ ಪಾತಾಳದಲ್ಲಿದೆ ಅಂತ ತುಂಬಾ ಜನ ಈಗಲೂ ತಮಾಷೆ ಮಾಡ್ತಾರೆ. ಗುಡ್ಡ ಹತ್ತಿ, ಇಳಿದು, ಕೊರಕಲಲ್ಲಿ ಸಾಗಿ ಮನೆ ಸೇರಬೇಕಾದ ದಿನಗಳಿತ್ತು ಅಮ್ಮನಿಗೆ.

suchith-kotian-with-motherಅಂತಹ ಹಾದಿಯಲ್ಲಿ ಬಸ್ ಸ್ಟ್ಯಾಂಡ್ ಗೆ ಬರಬೇಕಾದ್ರೆ 12 ನಿಮಿಷ ಹಿಡಿಯುತ್ತಿತ್ತು. ಅದನ್ನು ಅಮ್ಮ 5 ನಿಮಿಷಕ್ಕಿಂತಲೂ ಕಡಿಮೆ ಸಮಯದಲ್ಲಿ ಓಡಿ ತಲುಪುತ್ತಿದ್ದರು. ಓಡುವಾಗ ಎಷ್ಟು ಸಲ ಬಿದ್ದಿದ್ದಾರೋ ಗೊತ್ತಿಲ್ಲ. ಮನೆಕೆಲಸ, ಅಡುಗೆ, ಬುತ್ತಿ ಕಟ್ಟುವುದು ಎಲ್ಲಾ ಸರಿಯಾಗಿ ಮಾಡಿಟ್ಟು ಬೆಳಿಗ್ಗೆ 7.45 ಕ್ಕೆ ಬಸ್ ಹಿಡಿಯುವುದು ಅಮ್ಮನಿಗೆ ನಿಜವಾಗಿಯೂ ಸವಾಲೇ ಆಗಿತ್ತು. ಅದನ್ನು ಅಮ್ಮ ಈ 39 ವರ್ಷ 8 ತಿಂಗಳು ಅದ್ಭುತವಾಗಿ ನಿಭಾಯಿಸಿದ್ದಾರೆ.

ನಡುವಲ್ಲೊಮ್ಮೆ ಅಮ್ಮನಿಗೆ ಅನಾರೋಗ್ಯ ಕಾಡಿತ್ತು. ಆದರೆ ಅಮ್ಮ ಅದೆಲ್ಲವನ್ನೂ ಗೆದ್ದು ಬಲಹೀನತೆಯನ್ನು ಮೀರಿ ನಿಂತು ಮತ್ತೆ ಕೆಲಸಕ್ಕೆ ಹೋದರು. ಈ ಮನೆಗಾಗಿ ದುಡಿದರು. ನಿವೃತ್ತಿಯಾಗುವ ಈ ಸಮಯದಲ್ಲಿ ಅಮ್ಮನಿಗೆ ಇರುವ ಒಂದೇ ಒಂದು ಬೇಸರವೇನೆಂದರೆ ಅವರ ಸಂಬಳ ಈಗಲೂ 10,700 ಮಾತ್ರ ಇರುವುದು! ಇದು ಈಗಿನ ಕೆಲವರ ಮೊದಲ ಸಂಬಳಕ್ಕಿಂತಲೂ ತುಂಬಾ ಕಡಿಮೆ. ಆದರೆ ಆ ಸಣ್ಣ ಮೊತ್ತದಲ್ಲಿ ಮಾಡಿದ ಉಳಿತಾಯವೇ ನಮ್ಮನ್ನು ಸಾಕಿ ಸಲಹಿದೆ, ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವಂತೆ ಮಾಡಿದೆ, ನೆಮ್ಮದಿಯ ಜೀವನ ನೀಡಿದೆ..

ಸಹೋದ್ಯೋಗಿ ಮಿತ್ರ ಮಂಜುನಾಥ್ ಸರ್ ಒಮ್ಮೆ ಅವರ ಫೇಸ್ ಬುಕ್ ನಲ್ಲಿ ಬರೆದ ಸಾಲುಗಳು ನೆನಪಾಗುತ್ತದೆ. “ನಾವು ಹೆಚ್ಚಿನೋರು ಮಧ್ಯಮ ವರ್ಗದೋರು. ಬಡತನದಿಂದ ಮಧ್ಯಮ ವರ್ಗಕ್ಕೆ ದೂಡಿದ್ದು ನಮ್ಮ ತಂದೆ ತಾಯಿಗಳ ಪರಿಶ್ರಮ. ಓದಿ ಉದ್ಯೋಗದಲ್ಲಿರೋ ನಾವುಗಳು ದಿನದಿನಕ್ಕೂ ಹೊಸತಾಗುತಿರೋ ಹೊಸತನದೊಂದಿಗೆ ಹೊಂದಿಕೊಳ್ಳಲು ಹೆಣಗಾಡೋದ್ರಲ್ಲೇ ಕಾಲ ಕಳೆಯುತ್ತಿದ್ದೇವೆ. ಆ ನಡುವೆ ಅಪ್ಪ ಅಮ್ಮಂದಿರ ಮೂವತ್ತು ನಲ್ವತ್ತು ವರುಷಗಳ ದುಡಿಮೆಯನ್ನು ಸುಮ್ಮನೆ ಮರೆತು ಬಿಡುತ್ತೇವೆ.” ನಿಮ್ಮ ಮಾತು ಸತ್ಯ ಸರ್..

ಅಮ್ಮ.. ಹ್ಯಾಪಿ ಬರ್ತ್ ಡೇ.. ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ..

ನಗುತಾ ನಗುತಾ.. ಬಾಳಿ.. ನೀವು.. ನೂರು ವರುಷ..

‍ಲೇಖಕರು Admin

4 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading