ಹೊಗೇನಕಲ್ನ ಇನ್ನೊಂದು ಮುಖ
ಮಲ್ಲಿಕಾರ್ಜುನ ಹೊಸಪಾಳ್ಯ
ಹೊಗೇನಕಲ್ ಎಂದರೆ ಕಣ್ಮುಂದೆ ಸುಳಿಯುವುದು ಅಲ್ಲಿನ ಫಾಲ್ಸ್. ಹೊರೆ-ಹೊರೆಯಾಗಿ ಧುಮುಕುವ ಹೊನ್ನ ಬಣ್ಣದ ಜಲರಾಶಿ, ಉಕ್ಕುವ ನೊರೆ, ಮುಖಕ್ಕೆ ಸಿಂಚನಗೊಳಿಸುವ ತುಂತುರು ಹನಿಗಳು, ಮೂರು ದಿಕ್ಕಿಗೂ ಎದ್ದುನಿಂತ ಕಾಡಿನ ಗೋಡೆ, ಮತ್ತೊಂದೆಡೆ ಬಟಾಬಯಲು….
ಈ ಫಾಲ್ಸ್ ಇರುವ ಸ್ಥಳ ಅತ್ಯಂತ ಮನೋಹರವಾಗಿದೆ. ನಿಧಾನವಾಗಿ, ಗಂಭೀರವಾಗಿ ಹರಿದು ಬರುವ ಕಾವೇರಿ ನದಿ, ಇಲ್ಲಿ ಒಮ್ಮೆಗೇ ವಯಸ್ಸಿಗೆ ಬಂದ ಮಕ್ಕಳಂತೆ ಅಡ್ಡಾದಿಡ್ಡಿ ಹರಿದು, ಜಲಪಾತಗಳಾಗಿ ಧುಮ್ಮಿಕ್ಕಿ, ನೆಲಕೊರೆದು, ಅಡ್ದಬಂದ ಕಲ್ಲುಗಳನ್ನು ಮಸೆದು ನುಣುಪುಗೊಳಿಸಿ ಅವುಗಳಿಗೆ ಚಿತ್ರವಿಚಿತ್ರ ರೂಪಕೊಡುತ್ತಾ ಹರಿದು ಸ್ವಲ್ಪ ದೂರ ಸಾಗಿದ ನಂತರ ಮರ್ಯಾದಸ್ಥ ಸಂಸಾರಿಯಂತೆ ಸಾಗುತ್ತದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಇಲ್ಲೆಲ್ಲಾ ನಿಸರ್ಗದತ್ತ ಹಾಸುಗಲ್ಲುಗಳಿವೆ. ಅವುಗಳ ಮೇಲೆ ಸದಾ ನೆರಳು ಚೆಲ್ಲುವ ಹೊಳೆಮತ್ತಿ ಮರಗಳಿವೆ. ಸುತ್ತ ಹಸಿರಾದ ಕಾಡಿದೆ.
ಇಷ್ಟೇ ಇದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಇವೆಲ್ಲದರ ಜೊತೆಗೆ ಇಲ್ಲಿ ಜನರಿದ್ದಾರೆ! ಈ ಜನರಾದರೂ ಎಂಥವರೆಂದರೆ ಧುಮುಕುವ ನೀರ ಹನಿಗಳನ್ನೂ, ನುಣುಪುಗಲ್ಲುಗಳನ್ನೂ, ಮರದ ನೆರಳನ್ನೂ ಸಹ ಹಣವಾಗಿಸುವ ನಿಪುಣ ಜನ. ಜಲಪಾತದ ರಭಸದ ರೋಮಾಂಚನ, ನೆರಳಿನ ನೆಮ್ಮದಿ, ನೈಸರ್ಗಿಕ ಕಲ್ಲುಗಳ ಅಚ್ಚರಿ ಎಲ್ಲವೂ ಇವರ ನೈಪ್ಯಣ್ಯದೆದುರು ದಿವಾಳಿ ಎದ್ದುಬಿಡುತ್ತದೆ. ನಮಗೆ ಅಡಿಗಡಿಗೂ ಕಾಡಿದ ಅಂತಹ ಕೆಲವರ ಪರಿಚಯ ಇಲ್ಲಿದೆ.
ಎಣ್ಣೆ ಗಿರಾಕಿಗಳು
ನಿಮ್ಮ ಊಹೆ ತಪ್ಪು! ನೀವಂದುಕೊಂಡಂತಹ ಎಣ್ಣೆ ಗಿರಾಕಿಗಳಲ್ಲ ಇವರು. ಕೈಯಲ್ಲೊಂದು ಎಳ್ಳೆಣ್ಣೆ ಅಥವಾ ಎಂಥದ್ದೊ ಒಂದು ಎಣ್ಣೆ ಬಾಟಲಿ ಹಿಡಿದು ಪ್ರವಾಸಿಗರಿಗೆ ಮಸಾಜ್ ಮಾಡುವವರು. ಮಸಾಜ್ ಮಾಡುವುದೂ ಒಂದು ಕಲೆ, ಅದಕ್ಕೆ ಸೂಕ್ತ ತರಬೇತಿ, ನೈಪುಣ್ಯತೆ ಅಗತ್ಯ, ಇದು ಕೆಲವರಿಗಷ್ಟೇ ಸೀಮಿತ ಎಂದು ನಾವು ತಿಳಿದಿದ್ದೆವು. ಆದರೆ ಇಲ್ಲಿ ಚಿಳ್ಳೆ-ಪುಳ್ಳೆಗಳೆಲ್ಲಾ ಮಸಾಜ್ ಮಾಡುವವರೇ. ಪ್ರವಾಸಿಗರು ಬಂದ ತಕ್ಷಣ ಮುತ್ತಿಕೊಳ್ಳುತಾರೆ, ಬೆನ್ನು ಹತ್ತುತ್ತಾರೆ, ಈಜಾಡಲು ಬಟ್ಟೆ ಬಿಚ್ಚಿದರಂತೂ ಮುಗಿದೇ ಹೋಯಿತು.
ನಮ್ಮ ಹಿಂದೆ ಬಿದ್ದ ಹುಡುಗನಂತೂ ಗೋಗರೆದು, ಕಾಡಿ-ಬೇಡಿ ಇನ್ನೇನು ಅತ್ತೇ ಬಿಡುತ್ತಿದ್ದ. ತಲಾ ಇನ್ನೂರು ಕೇಳಿದ್ದವನು ಕೊನೆಗೆ ಐವತ್ತಕ್ಕೇ ಒಪ್ಪಿದ. ಇಲ್ಲಿನ ಮಸಾಜೆಂದರೆ ತಲೆಗೆ ತಪ-ತಪ ಬಡಿದು, ಕೈತಿರುವಿ, ತೊಡೆ ತಟ್ಟಿ, ಎದೆ ಹಿಂಡಿ, ಬೆನ್ನು ನೀವಿ, ಕಾಲು ಒತ್ತಿ ಜೇಬು ಕರಗಿಸುವುದು. ಇವರ ದೆಸೆಯಿಂದಾಗಿ ಇಲ್ಲಿ ಏಕಾಂತವೆಂಬುದೇ ಇಲ್ಲ. ಎಲ್ಲಿ ಕುಳಿತರೂ ಅಮರಿಕೊಳ್ಳುತಾರೆ.
ಬೆಂಬಿಡದ ಅಂಬಿಗರು

ಎಣ್ಣೆ ಗಿರಾಕಿಗಳಿಂದ ಬಚಾವಾಗಿ ಬಂದರೆ ಹರಿಗೋಲಿನವರು ಅಟಕಾಯಿಸುತ್ತಾರೆ. ‘ಪೆರಿಯ ಪಾಲ್ಸ್ ಒರು ಗಿಲೋಮೀಟರ್ ಆಗ್ತದೆ ಸಾರ್ ರೊಂಬ ಚೆಂದಾಗಿದೆ’ ಮುಂತಾಗಿ ತಮಿಳ್ಗನ್ನಡದಲ್ಲಿ ಮರುಳುಮಾಡಿ ಹರಿಗೋಲು ಹತ್ತಿಸಿಕೊಂಡು ನಾವು ಖರ್ಚಿಲ್ಲದೆ ಮೇಲಿನಿಂದ ನೋಡಿದ ಫಾಲ್ಸ್ ಅನ್ನು ನದಿಯ ಮೇಲಿಂದ ತೋರಿಸಿ ಕಾಸು ಕಿತ್ತ. ನಾವು ಕನ್ನಡಿಗರೆಂದು ‘ನಿಮಗೆ ಕರನಾಡಕ ತಮಿಳುನಾಡು ಬಾರ್ಡರ್ ತೋರಿಸುತ್ತೇನೆಂದು’ ಕರೆದುಕೊಂಡು ಹೋದ, ಅಲ್ಲಿ ಹೋಗಿ ನೋಡಿದರೆ ನದಿಯ ಆಚೆ ಭಾಗವೇ ಕರ್ನಾಟಕ. ಇಲ್ಲಿ ಎರಡೂ ರಾಜ್ಯಗಳನ್ನು ಬೇರ್ಪಡಿಸುವುದೇ ಕಾವೇರಿ ನದಿ.
ತೇಲುವ ಅಂಗಡಿ – ಹಾರುವ ಹುಡುಗ
ಸಮುದ್ರದಲ್ಲಿ ತೇಲುವ ರೆಸ್ಟೋರೆಂಟ್ಗಳಿರುವಂತೆ ಇಲ್ಲಿ ನದಿ ಮೇಲೆ ತೇಲುವ ಹರಿಗೋಲಂಗಡಿ. ಅದರಲ್ಲಿ ಕೂಲ್ ಡ್ರಿಂಕ್ಸ್, ಗುಟ್ಕಾ, ನೀರಿನ ಪಾಕೆಟ್, ಹಣ್ಣು ಮುಂತಾದವುಗಳನ್ನಿಟ್ಟುಕೊಂಡು ತೆಪ್ಪದಲ್ಲಿ ಹೋಗಿ-ಬರುವವರಿಗೆ ಮಾರುವವರನ್ನು ಕಂಡು ತಲೆದೂಗಿದೆವು. ನೀರಲ್ಲೇ ವ್ಯಾಪಾರ ಮಾಡುವ ಸೂಪರ್ ಐಡಿಯಾ ಇವರ ತಲೆಗೆ ಹೇಗೆ ಹೊಳೆಯಿತೋ?
ಹಾಗೇ ತಲೆದೂಗುತ್ತಾ ತೇಲುತ್ತಿರಬೇಕಾದರೆ ದಡದ ದೊಡ್ಡ ಕಲ್ಲು ಕೋಪಿನ ಮೇಲೆ ಹುಡುಗನೊಬ್ಬ ನಿಂತು ಕಿರಿಚುತ್ತಿದ್ದ. ವಿಚಾರಿಸಿದಾಗ ತಿಳಿದಿದ್ದೇನೆಂದರೆ ಅವನು ಅಲ್ಲಿಂದ ನದಿಗೆ ಡೈ ಹೊಡೆದು ತೆಪ್ಪದಲ್ಲಿರುವವರಿಂದ ಇನಾಮು ಪಡೆಯುವ ಕಸುಬುದಾರನಂತೆ. ಹಲವಾರು ಹುಡುಗರದು ಇಲ್ಲಿ ಅದೇ ಉದ್ಯೋಗ. ಎಂಥಾ ಉಪಾಯ ನೋಡಿ. ದಿನಕ್ಕೆ ಹತ್ತಿಪ್ಪತ್ತು ಡೈ ಹೊಡೆದರೆ ಸಾಕು, ಮಸ್ತ್ ಸಂಪಾದನೆ. ಏನು ಎಲ್ಲರೂ ನಮ್ಮಂಥಾ ವಿಚಾರವಾದಿಗಳೇ (!!!) ಹೋಗಿರುತ್ತಾರಾ? ಕಾಲೇಜು ಹುಡುಗಿಯರು, ನ್ಯೂ ಕಪಲ್ಸ್ಗಳು ಕೊಟ್ಟೇ ಕೊಡುತ್ತಾರೆ.
ಫಿಶ್ ಫ್ರೈ ಫಿಶ್ ಫ್ರೈ

ಇದು ಹೆಂಗಸರ ಕಸುಬು. ಹಿಂದೆ ಪರಿಚಯಿಸಿದವರಿಗೆ ಹೋಲಿಸಿದರೆ ಇವರದು ಕಡಿಮೆ ಶ್ರಮ ಹಾಗೂ ಹೆಚ್ಚು ಆದಾಯದ ಬಾಬ್ತು. ಮೂರು ಕಲ್ಲು, ಸ್ವಲ್ಪ ಸೌದೆ, ಒಂದು ಬಾಂಡಲಿ, ಒಂದಿಷ್ಟು ಎಣ್ಣೆ ಹಾಗೂ ಮೀನಿನ ತುಂಡುಗಳು. ಇಷ್ಟು ಬಂಡವಾಳದ ಇವರು ಇಲ್ಲಿನ ಬೇರೆ ಕಸುಬುದಾರರಿಗೆ ಚಿಲ್ಲರೆ, ಕೈಸಾಲ ಕೊಡುವಷ್ಟು ಸ್ತಿತಿವಂತರು. ಅಲ್ಲದೆ ಇವರು ಬೇರೆಯವರಂತೆ ಪ್ರವಾಸಿಗರ ಬೆನ್ನು ಹತ್ತುವುದಿಲ್ಲ, ಗೋಗರೆಯುವುದಿಲ್ಲ, ಮಸಾಜ್ ಮಾಡಿಸಿಕೊಂಡು ಈಜಾಡಿದ ಸುಸ್ತಿಗೋ, ಮೀನು ಕರಿಯುವ ವಾಸನೆಗೋ ಸೋತು ಅವರೇ ಇವರ ಬಳಿ ಬರುತ್ತಾರೆ.
ಇವರಲ್ಲದೆ..
ಇನ್ನೂ ತರಾಂತರ ಜನರು ಇಲ್ಲಿದ್ದಾರೆ. ಬಟ್ಟೆ ಒಗೆಯುವವರು, ಇಸ್ತ್ರಿ ಮಾಡುವವರು, ಗಾಳಹಾಕುವವರು, ಐಸ್ ಕ್ಯಾಂಡಿ, ಹಣ್ಣು-ಹಂಪಲು ಮಾರುವವರು, ಖಾಲಿ ಬಾಟಲ್ ಮುಂತಾದ್ದವನ್ನು ಆರಿಸುವವರು…. ಒಟ್ಟಿನಲ್ಲಿ ಪ್ರವಾಸಿಗರಿಗಿಂತಲೂ ಇವರೇ ಅಧಿಕ.
ಇಡೀ ಮನೆಯ ಎಲ್ಲರಿಗೂ ಹೊಗೆನಕಲ್ ಉದ್ಯೋಗ ಕಲ್ಪಿಸಿದೆ. ಅಪ್ಪ ಮಸಾಜ್ ಮಾಡುತ್ತಿದ್ದರೆ, ಅಮ್ಮ ಮೀನು ಕರಿಯುತ್ತಾಳೆ, ಮಗ ಡೈ ಹೊಡೆಯುತ್ತಾನೆ, ಮಗಳು ಹಣ್ಣು ಮಾರುತ್ತಾಳೆ. ಹೀಗೆ ಫéಾಲ್ಸ್ ಮೇಲೆ ನೂರಾರು ಕುಟುಂಬಗಳು ಹೊಟ್ಟೆ ಹೊರೆಯುತ್ತಿವೆ. ಇಲ್ಲಿಗೆ ಕಾಲಿಟ್ಟ ತಕ್ಷಣ ಫéಾಲ್ಸ್ಗೆ ಬದಲಾಗಿ ಈ ಸ್ಥಳ ಥೇಟ್ ಮಾರುಕಟ್ಟೆಯಂತೆ ಭಾಸವಾಗುತ್ತದೆ. ಹಾಗಾಗಿ ಹೊಗೇನಕಲ್ನ ಒಂದು ಮುಖ ಪ್ರವಾಸಿಗರ ಸ್ವರ್ಗವಾದರೂ ಮತ್ತೊಂದು ಮುಖ ಹೊಟ್ಟೆ ಹೊರೆಯುವ ಮಾರ್ಗವಾಗಿದೆ.

ಇಂದಿಗೂ ನನಗೆ ಹೊಗೇನಕಲ್ ಅಂದ ತಕ್ಷಣ ಫಾಲ್ಸ್‌ಗಿಂತಲೂ ಹೆಚ್ಚು ನೆನಪಾಗುವುದು ಆ ತರಾವರಿ ಮುಖಗಳೇ.







ಹೊಗೇನಕಲ್ ಫಾಲ್ಸ್ ನನ್ನ ಹಳ್ಳಿಗೆ ಹತ್ತಿರ. ನಾನು ಅನೇಕ ಬಾರಿ ಹೋಗಿದ್ದೇನೆ. ಕರ್ನಾಟಕದ ಮೂಲಕ ನದಿ ದಾಟಿದರೆ ತಮಿಳುನಾಡು ಪ್ರಾರಂಭವಾಗುತ್ತದೆ. ಹೊಟ್ಟೆ ಹೊರೆಯುವ ಜನರಿದ್ದಾರೆ, ಆದರೆ, ನೀವು ಹೇಳಿದಂತೆ ಅಷ್ಟು ಕಾಡಿಬೇಡಿ ಮೈಮೇಲೆ ಬೀಳುವುದಿಲ್ಲ. ಒಮ್ಮೆ ಕೇಳುತ್ತಾರೆ, ಒಪ್ಪಿಕೊಂಡರೆ ಹೌದು ಇಲ್ಲದಿದ್ದರೆ ಇಲ್ಲ. ನೀರಿನ ಮೇಲೆ ತೆಪ್ಪದಲ್ಲಿ ತಿಂಡಿ ಮಾರುವವನು ಅವನ ಪಾಡಿಗವನು ಕಷ್ಟಪಟ್ಟು ಹುಟ್ಟು ಚಲಾಯಿಸಿಕೊಂಡು ಹೋಗುತ್ತಿರುತ್ತಾನೆ. ‘ತಿಂಡಿ ಬೇಕೆ?’ ಎಂದು ಸ್ವಾಭಾವಿಕವಾಗಿ ಕೇಳುತ್ತಾನೆ. ಅದು ಅವರವರ ಹೊಟ್ಟೆ ಪಾಡಷ್ಟೇ. ನಾವು ಕಾಡಿ ಬೇಡದಿದ್ದರೂ ತಿಂಗಳಿಗೆ ಸಂಬಳ ಕೊಡುವವರಿದ್ದಾರೆ. ಆದರೆ ಆ ದುರ್ಗಮ ಸ್ಥಳದಲ್ಲಿ ಅದು ಅವರ ಸ್ಥಿತಿ. ಈ ರೀತಿಯಾಗಿ ಕಾಡಿಬೇಡಿ ಅವರೇನು ಕೋಟಿ ಕೋಟಿ ಸಂಪಾದಿಸಿಲ್ಲ. ಆ ಹೊತ್ತಿನ ಕೂಳಷ್ಟೇ…