ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರಿಟೀಷರ ನಾಡು ಇಂಗ್ಲೆಂಡ್‍ನಲ್ಲಿ ಗಾಂಧಿ ಸ್ಮರಣೆ

ಇಂಗ್ಲೆಂಡಿನಲ್ಲಿ ಗಾಂಧಿ ಮತ್ತು ಪ್ರತಿಮಾತ್ಮಕ ಪ್ರತಿಮೆಗಳು

ಪ್ರೇಮಲತಾ.ಬಿ.

ಮತ್ತೊಂದು ಗಾಂಧಿ ಜಯಂತಿ ಬಂದಿದೆ. ಬರಿಯ ಭಾರತವಲ್ಲ ಜಗತ್ತಿನಾದ್ಯಂತ ಇರುವ ಭಾರತೀಯರು ಗಾಂಧೀಜಿಯ ಸ್ಮರಣೆ ಮಾತ್ರವಲ್ಲ ಸ್ಮಾರಕಗಳಿಗೂ ಭೇಟಿ ನೀಡುವ ಸಮಯವಿದು. ಅದರಲ್ಲೂ ಗಾಂಧೀಜಿಯವರು ‘ಭಾರತ ಬಿಟ್ಟು ತೊಲಗಿ’ ಎಂದು ಓಡಿಸಿದ ಬ್ರಿಟಿಷ್ ನಾಡಲ್ಲಿ ಇದಕ್ಕೆ ಅವಕಾಶವಿದೆಯೇ?

ಯುನೈಟೆಡ್ ಕಿಂಗ್ ಡಂ ನ ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಮತ್ತು ವೇಲ್ಸ್ ನಲ್ಲಿ ಹಲವು ಗಾಂಧೀಜಿಯ ಪ್ರತಿಮೆಗಳಿವೆ. ಮುಖ್ಯ ಕಾರಣವಿಷ್ಟೆ. ಗಾಂಧಿ ಬರಿ ಭಾರತದ ನೇತಾರ ಮಾತ್ರವಲ್ಲ, ಜಗತ್ತು ಕಂಡ ಒಬ್ಬ ಮಹಾನ್ ನಾಯಕ. ಈ ಆಧುನಿಕ ಕಾಲದಲ್ಲಿ ಕೂಡ ಅಹಿಂಸೆಯ ಅಸ್ತ್ರವನ್ನು ಉಪಯೋಗಿಸಿ ಸಂಗ್ರಾಮಗಳನ್ನು ಗೆಲ್ಲಬಹುದೆಂಬ ತತ್ವವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟ ಅದ್ವಿತೀಯ ಚೇತನ.

ಸೋಲಿಸಲ್ಪಟ್ಟ ದೇಶ ಕೂಡ ಗೌರವವನ್ನು ನೀಡಬಲ್ಲಂತಹ ವ್ಯಕ್ತಿ. ರಾಜಕೀಯ ಮುತ್ಸದ್ದಿ. ಮಾನವೀಯತೆಯ ಅತಿ ದೊಡ್ಡ ಅನಾವರಣ. ಅದೃಷ್ಟವೆಂದರೆ ನಾನು ಪ್ರಸ್ತುತ ವಾಸಿಸುವ ನಗರದ ಸಮೀಪದಲ್ಲಿ ಕೂಡ ಗಾಂಧೀಜಿಯ ಪ್ರತಿಮೆಯಿರುವುದು.

ಆದರೆ, ಲಂಡನ್ನಿನ ಪಾರ್ಲಿಮೆಂಟ್ ಚೌಕಿಯಲ್ಲಿರುವ ಗಾಂಧಿಯ ಪ್ರತಿಮೆ ಅತ್ಯಂತ ಆಸಕ್ತಿದಾಯಕವಾದ್ದು. ಗಾಂಧಿಯ ಪ್ರತಿಮೆಯನ್ನು ಸ್ಥಾಪಿಸಲು ತಮ್ಮ ದೇಶದ ಮಹಿಳಾ ಪ್ರಧಾನಿ, ಉಕ್ಕಿನ ಮನುಷ್ಯಳೆಂದೇ ಪ್ರಖ್ಯಾತಳಾದ ಮಾರ್ಗರೆಟ್ ಥ್ಯಾಚರಳ ವಿಗ್ರಹವನ್ನು ಬ್ರಿಟಿಷ್ ಸರ್ಕಾರ ಮತ್ತೊಂದೆಡೆಗೆ ಸಾಗಿಸಿದ್ದು ಅತ್ಯಂತ ಆಸಕ್ತಿದಾಯಕ ವಿಚಾರ (ಈ ಮಾರ್ಗರೆಟ್ ಥ್ಯಾಚರಳು ಹುಟ್ಟಿ ಬೆಳೆದ ಊರಿನಲ್ಲೇ ನನ್ನ ಪ್ರಸ್ತುತ ವಾಸ).

8ನೇ ತಾರೀಖು 2014ರಲ್ಲಿ ಭಾರತದ ಗಾಂಧಿ ಸ್ಮೃತಿಯ ಬಳಿ ನಿಂತ ಜಾರ್ಜ್ ಆಸ್ಬಾರ್ನ್ ಮತ್ತು ವಿಲ್ಲಿಯಂ ಹೇಗ್ ವಿಶ್ವ ಪಿತಾಮಹ ಮಹಾತ್ಮ ಗಾಂಧಿಯ ಪ್ರತಿಮೆಯನ್ನು ಇಂಗ್ಲೆಂಡಿನ ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಸ್ಥಾಪಿಸುತ್ತೇವೆ ಎಂದು ತಿಳಿಸಿದ್ದರು. ಅದರಂತೆ, 14 ಮಾರ್ಚ್ 2015ರಲ್ಲಿ 9 ಅಡಿ ಎತ್ತರದ ಗಾಂಧಿಯ ಕಂಚಿನ ಪ್ರತಿಮೆಯನ್ನು ಪ್ರಪಂಚದ ಅತಿ ಹಳೆಯ ಪ್ರಜಾಸತ್ತಾತ್ಮಕ ದೇಶದ ಪಾರ್ಲಿಮೆಂಟ್ ಚೌಕಿಯಲ್ಲಿ ಸ್ಥಾಪಿಸಲಾಯಿತು.

ಗಾಂಧಿ ಓದಿದ್ದು ಕೂಡ ಲಂಡನ್ನಿನಲ್ಲಿ. ಲಂಡನ್ನಿನ ಒಡನಾಟ ಗಾಂಧಿಗೆ ಬಹಳ ಕಿರಿಯ ವಯಸ್ಸಿನಿಂದಲೇ ದೊರೆತಿತ್ತು. ಆಗಿನ ಬ್ರಿಟಿಷ್ ಪ್ರಧಾನಿ ರಾಮ್ಸೇ ಮೆಕ್ ಡೊನಾಲ್ದ್ ನ ಆಫೀಸಿನ ಬಳಿ ನಿಂತಿದ್ದ 1931 ರ ಗಾಂಧಿಯ ಭಾವಚಿತ್ರವನ್ನು ಆಧರಿಸಿ ಈ ಪ್ರತಿಮೆಯನ್ನು ತಯಾರಿಸಲಾಗಿದೆ. ಬ್ರಿಟನ್ನಿನ ಪ್ರಖ್ಯಾತ ಶಿಲ್ಪಿ ಫಿಲಿಪ್ ಜಾಕ್ಸನ್ ಈ ಪ್ರತಿಮೆಯನ್ನು ತಯಾರು ಮಾಡಿದವನು.

ತಮ್ಮ ದೇಶಕ್ಕೆ ಓದಲು ಬಂದಿದ್ದ ಈ ಚಾಣಕ್ಷ ಹುಡುಗ ತಮ್ಮನ್ನು ತನ್ನ ದೇಶದಿಂದ ಹೊರಗಟ್ಟಿ ತೋರಿಸಿದ ಗಟ್ಟಿತನವನ್ನು, ಮನಸ್ಥೈರ್ಯವನ್ನು ಊಹಿಸಲು ಬ್ರಿಟಿಷರಿಗೆ ತಾನೇ ಹೇಗೆ ಗೊತ್ತಾಗಲು ಸಾಧ್ಯವಿತ್ತು?

ಗಾಂಧಿಯ ಪ್ರತಿಮೆಯನ್ನು ವರ್ಣಿಸುತ್ತ ಅತಿ ದೊಡ್ಡ ಪ್ರಜಾಸತ್ತಾತ್ಮಕ ದೇಶದ ಪಿತಾಮಹ ಗಾಂಧಿ ಪ್ರಪಂಚದ ಅತಿಹಳೆಯ ಪ್ರಜಾಸತ್ತಾತ್ಮಕತೆಯನ್ನು  ಬಿಂಬಿಸುವ ಈ ಜಾಗದಲ್ಲಿ ಸ್ಮರಣೀಯರಾಗಿರುವುದು ಅತ್ಯಂತ ಸೂಕ್ತ -ಎಂದು  ಬ್ರಿಟಿಷ್ ವಿದೇಶಿ ಸಚಿವ ಜಾರ್ಜ್ ಆಸ್ಬಾರ್ನ್ ಬಣ್ಣಿಸಿದರು.

ಗಾಂಧಿಯ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಮತ್ತು ಅಮಿತಾಬ್ ಬಚ್ಚನ್ ಕೂಡ ಈ ಪ್ರತಿಮೆಯ ಅನಾವರಣದ ಸಮಯದಲ್ಲಿ ಭಾಗವಹಿಸಿದ್ದರು. ವಿತ್ತಮಂತ್ರಿ ಅರುಣ್ ಜೇಟ್ಲಿ ಕೂಡ ಜೊತೆಯಲ್ಲಿದ್ದರು. ಆಗಿನ್ನೂ ಹೊಸದಾಗಿ ಭಾರತದ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ಈ ಹೊಂಬೆಳಕಿನಲ್ಲಿ ಮೀಯುತ್ತ ಗಾಂಧಿಯನ್ನು  ಅತ್ಯಂತ ಪೂಜನೀಯ ಭಾವದಿಂದ ಸ್ಮರಿಸಿ ಉದ್ಘಾಟನಾ ಭಾಷಣ ಮಾಡಿದ್ದರು.

ಬ್ರಿಟನ್ನಿನ ವಿಲಿಯಂ ಹೇಗ್ ಮಾತನಾಡುತ್ತ ಗಾಂಧಿಯವರ ಭಾತೃತ್ವ, ವಿಭಜನೆಯನ್ನು ವಿರೋಧಿಸುವ ಗುಣ ಮತ್ತು ಭಾರತವನ್ನು ಮುಂದುವರೆಸಬೇಕೆಂಬ ಆಸೆ ಮತ್ತು ಅಹಿಂಸೆಯ ಬಗೆಗಿನ ಬದ್ಧತೆ ಅವತ್ತಿನ ಕಾಲಕ್ಕಷ್ಟೇ ಅಲ್ಲ ಇವತ್ತಿಗೂ ಸಲ್ಲುವಂತದ್ದು -ಎಂದು ಹೇಳಿದ್ದು ಒಪ್ಪುವಂತಹ ಮಾತಾಗಿದೆ.

ಬ್ರಿಟಿಷ್ ಪಾರ್ಲಿಮೆಂಟಿನ ಎದುರು ಗಾಂಧಿಯ ಪ್ರತಿಮೆಯ ಅನಾವರಣದ ಮುಖ್ಯಸ್ಥಿಕೆಯನ್ನು ವಹಿಸಿಕೊಂಡದ್ದು ಬ್ರಿಟನ್ನಿನ ಸಾಜಿದ್ ಜಾವೆದ್ ಎನ್ನುವ ಸಾಂಸ್ಕೃತಿಕ ಸಚಿವ. ಈತನ ತಂದೆ-ತಾಯಿಗಳು ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಕಾಲದಲ್ಲಿ ಬ್ರಿಟನ್ನಿಗೆ ವಲಸೆ ಬಂದವರು. ಆಗ ನಡೆದ ಸಂಘರ್ಷದ ನೇರ ಅನುಭವ ಇರುವವರು.

ಇದೇ ಕಥೆಗಳಿಂದ ಪ್ರೇರಿತನಾಗಿ ತಾನು ಸಾರ್ವಜನಿಕ ಸೇವೆಯನ್ನು ವೃತ್ತಿ ಮಾಡಿಕೊಂಡಿದ್ದಾಗಿ ಹೇಳುತ್ತ ಗಾಂಧಿ ಎಲ್ಲ ಧರ್ಮೀಯರಿಗೂ ಸಮಾನವಾಗಿ ಹೋರಾಡಿದ ಮಹಾತ್ಮ, ಹಾಗಾಗಿ ಆತನ ಪ್ರತಿಮೆ ಸಹಿಷ್ಣುತೆಯ ಪ್ರತೀಕ ಎಂದನು.

ಅವರವರ ಹಿನ್ನೆಲೆ, ಚರಿತ್ರೆ, ಧರ್ಮ ಯಾವುದೇ ಇರಲಿ ಪ್ರಪಂಚದ ಯಾರೇ ಆದರೂ ಈ ಮನುಷ್ಯನ ಸಾಧನೆಗಳನ್ನು ಮೆಚ್ಚುತ್ತಾರೆ. ಮಾನವೀಯತೆಯನ್ನು ಅಪ್ಪುತ್ತಾರೆ ಎನ್ನುತ್ತ ಗಾಂಧಿ ಭಾರತಕ್ಕೆ ಮಾತ್ರ ನಾಯಕರಲ್ಲದೆ ಇಡೀ ಪ್ರಪಂಚಕ್ಕೆ ದಾರಿದೀಪವಾದ ಘಟನೆಗಳನ್ನು ನೆನೆದ. ಇವೆಲ್ಲ ವಿಚಾರಗಳೂ ಗಾಂಧಿಯ ಪ್ರತಿಮೆಗೆ ಅಡಿಪಾಯಗಳಾದದ್ದು ಹೀಗೆ.

14 ಮಾರ್ಚ್  2015 ರ ದಿನಾಂಕವನ್ನೇ ಆರಿಸಿಕೊಳ್ಳಲು ಕೂಡ ಕಾರಣವಿತ್ತು. ಆ ದಿನ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ನೂರನೇ ವರ್ಷವನ್ನು ಅದು ಪ್ರತಿನಿಧಿಸುತ್ತಿತ್ತು.

1915 ರಲ್ಲಿ ಗೋಪಾಲ ಕೃಷ್ಣ ಗೋಖಲೆಯವರ ಕರೆಯನ್ನು ಮನ್ನಿಸಿ ಗಾಂಧೀಜಿ ಭಾರತಕ್ಕೆ ಮರಳಿದರು. ಅಂದಿನಿಂದಲೇ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕೆ (1915-1947) ನಾಂದಿ ಹಾಡಿದ್ದು. ಗೋಖಲೆಯವರ ಕರೆಯನ್ನು ಗಾಂಧಿಗೆ ತಲುಪಿಸಿದ ಮನುಷ್ಯ ಸಿ. ಎಫ್. ಆಂಡ್ರ್ಯೂಸ್ ಎನ್ನುವಾತ.

ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧಿಯವರು ಧುಮುಕಿದ ಈ ಸುದಿನವನ್ನು ಆತನ ಶತ್ರು ದೇಶದವರಾಗಿದ್ದ ಬ್ರಿಟಿಷರು ಈ ರೀತಿ ಆಚರಿಸಿದ್ದು ಅತ್ಯಂತ ಹೃದಯಂಗಮ ಅನುಭವವಾಗಿತ್ತು. ಚರಿತ್ರೆಯಲ್ಲಿ ಎಲ್ಲ ವಿಚಾರಗಳು ತಲೆಕೆಳಗಾದ ಕಾಲವನ್ನು ಬಿಂಬಿಸಿತ್ತು.

ಇದೇ ಚೌಕಿಯಲ್ಲಿ ಗಾಂಧಿಯನ್ನು ದ್ವೇಷಿಸಿದ, ಭಾರತದ ಸ್ವಾತಂತ್ರ್ಯವನ್ನು ವಿರೋಧಿಸಿದ ಇಂಗ್ಲೆಂಡ್‍ನ ಪ್ರಧಾನಿ ವಿನ್ಸ್ಟನ್ ಚರ್ಚಿಲ್‍ನ ಪ್ರತಿಮೆಯೂ ಇರುವ ವಿಪರ್ಯಾಸವಿದೆ. ಭಾರತಕ್ಕೆ 1948 ರಲ್ಲಿ ಸ್ವಾತಂತ್ರ್ಯ ಕೊಡವುದೆಂಬ ಒಪ್ಪಂದವಾಗಿತ್ತು. ಆದರೆ ಕೊನೆಯ ಬ್ರಿಟಿಷ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಭಾರತದಲ್ಲಿ ಆಗ ಉಂಟಾಗಿದ್ದ ಸಿವಿಲ್ ಯುದ್ಧಕ್ಕೆ ಹೆದರಿದ.

ಭಾರತದಲ್ಲಿ ಆಗುವ ಎಲ್ಲ ಸಾವು-ನೋವಿನ ಕಳಂಕ ಬ್ರಿಟಿಷ್ ಮೊನಾರ್ಕಿಗೆ ಬರದಿರಲೆಂದು ಒಂದು ವರ್ಷ ಮೊದಲೇ ಸ್ವಾತಂತ್ರ್ಯವನ್ನು ನೀಡಿದ. ಇದನ್ನು ಸಹಿಸಲಾಗದೆ ಚರ್ಚಿಲ್ ಕೆಂಡಕಾರಿದ್ದ. ಗಾಂಧಿಯನ್ನು ಕಂಡರೆ ಆತನಿಗಾಗುತ್ತಿರಲಿಲ್ಲ. ಆದರೆ, ಸತ್ತ ನಂತರ ತನ್ನದೇ ನೆಲದಲ್ಲಿ ಗಾಂಧಿಯ ಪ್ರತಿಮೆ  ತನಗೆ ಹತ್ತಿರವಾಗಿ ಮತ್ತು ತನ್ನ ಸಮಾನವೇ ನಿಲ್ಲಬಹುದೆಂದು ಇವನು ಊಹಿಸಿರಲಿಲ್ಲ. ಆತನ ಆತ್ಮ ಕುದ್ದಿರಲೂ ಸಾಕು.

ಬ್ರಿಟಿಷರನ್ನು ಭಾರತದಿಂದ ಓಡಿಸಿದ ಗಾಂಧಿ ಬ್ರಿಟಿಷ್ ಸಾಮ್ರಾಜ್ಯದ  ಅವಿರತ ರಾಜಕೀಯ ಮಿತ್ರತ್ವಕ್ಕೆ  ಸಾಂಕೇತಿಕವಾಗಿ ಕಾರಣವಾದದ್ದು ಹೀಗೆ. ಭಾರತವನ್ನು ವಿಶ್ವದ ಇತರೆ ದೇಶಗಳು ಗುರುತಿಸುವುದು ಗಾಂಧಿಯ ಮೂಲಕ. ಕಳೆದ ತಿಂಗಳು ಜಯಭೇರಿ ಹೊಡೆಯುತ್ತ  ಅಮೆರಿಕಾದ ಹ್ಯೂಸ್ಟನ್ ನಗರಕ್ಕೆ ಭೇಟಿಕೊಟ್ಟಾಗ ಅಮೆರಿಕಾದ ರಾಯಭಾರಿ ಭಾರತವನ್ನು ಗಾಂಧಿ ಕಟ್ಟಿದ ದೇಶವೆಂದು ಕರೆದದ್ದು  ಜನಮನದಲ್ಲಿ ಹಸಿರಾಗಿ ಉಳಿಯಿತು. ಗಾಂಧಿಯಿಲ್ಲದ ಭಾರತ ಇತರೆ ವಿಶ್ವಗಳಿಗೆ ಭ್ರಷ್ಟ ರಾಜಕೀಯ ದೇಶವೊಂದನ್ನಷ್ಟೆ ಉಳಿಸುವುದು. ಗಾಂಧಿಯಿಲ್ಲದ ಭಾರತವನ್ನು ಯಾರೂ ಗುರುತಿಸುವುದಿಲ್ಲ.

ಯುಕೆ (ಯುನೈಟೆಡ್ ಕಿಂಗ್ ಡಂ) ನಲ್ಲಿ ಗಾಂಧಿಯ ಪ್ರತಿಮೆ ಅತಿ ಹೆಚ್ಚು ಭಾರತೀಯರು ನೆಲೆಸಿರುವ ಲೆಸ್ಟರ್ ಎನ್ನುವ ನಗರದಲ್ಲಿಯೂ ಇದೆ. ಏಳೂವರೆ ಅಡಿ ಎತ್ತರದ ಈ ಪ್ರತಿಮೆಯ ಅನಾವರಣವನ್ನು ಸಾವಿರಾರು ಭಾರತೀಯರು ನಿಂತು ನೆರವೇರಿಸಿದರು. ಈ ಕಂಚಿನ ಪ್ರತಿಮೆಯನ್ನು ಕಲ್ಕತ್ತಾದ ಗೌತಮ್ ಪಾಲ್ ಎನ್ನುವ ಶಿಲ್ಪಿ ಕಡೆದಿದ್ದಾನೆ. ಜಗತ್ತಿನ ಹಲವೆಡೆ ಇರುವ ಗಾಂಧಿಯ ಪ್ರತಿಮೆಗಳನ್ನು ಕಡೆದು ಕಳಿಸಿದ ಹಿರಿಮೆ ಈತನದು. ಇದು ಯುಕೆಯಲ್ಲಿ ಸ್ಥಾಪಿತವಾದ ಎರಡನೆಯ ಗಾಂಧಿಯ ಪ್ರತಿಮೆ.

ಮೊತ್ತ ಮೊದಲ ಪ್ರತಿಮೆ ಲಂಡನ್ನಿನ ಟಾವಿಸ್ಟಾಕ್ ಚೌಕಿಯಲ್ಲಿ 1968 ರಲ್ಲಿಯೇ ಸ್ಥಾಪಿತವಾಗಿದೆ. ಬ್ರಿಟಿಷರಲ್ಲಿ ಗಾಂಧಿಯ ಬಗ್ಗೆ ಬಹಳ ತಿಳುವಳಿಕೆಯಿದೆ. ಗಾಂಧಿಯನ್ನು ಆಳವಾಗಿ ಅಭ್ಯಸಿಸಿರುವ ಹಲವಾರು ಜನರಿದ್ದಾರೆ.

1982 ನವೆಂಬರ್ 30 ರಂದು ರಿಚರ್ಡ್ ಅಟ್ಟೆನ್ಬರೋ ನಿರ್ದೇಶಿಸಿ ಬಿಡುಗಡೆ ಮಾಡಿದ ಗಾಂಧಿ ಎನ್ನುವ ಚಲನಚಿತ್ರವನ್ನು ಭಾರತದ ಸಹಯೋಗದಲ್ಲಿ ಮಾಡಿದ್ದು ಕೂಡ ಬ್ರಿಟಿಷರೇ. ಇದು ಮುಂದಿನ ಎರಡು ವಾರಗಳಲ್ಲಿ ಯುಕೆ ಮತ್ತು ಯುಎಸ್‍ಎ ದೇಶಗಳಲ್ಲಿ ಬಿಡುಗಡೆಯಾಯಿತು. ಆ ಮೂಲಕ ಜಗತ್ತಿನ ಹಲವೆಡೆ ಸಂದು ಮುಕ್ತ ಪ್ರಶಂಸೆಗೆ ಪಾತ್ರವಾಯ್ತು. ಇದು ಗಾಂಧಿಯ ಬಗ್ಗೆ  ಜಗತ್ತಿನ ಜನರಲ್ಲಿ ಇನ್ನೂ ಹೆಚ್ಚಿನ ಅರಿವನ್ನು ಮೂಡಿಸಿದ್ದು ಸುಳ್ಳಲ್ಲ.

ಲೆಸ್ಟರ್ ನಗರದ 25% ಜನರು ಭಾರತೀಯರು. ಅದರಲ್ಲೂ ಹೆಚ್ಚಾಗಿ ಗುಜರಾತಿಗಳು. ಗಾಂಧಿ ಜಯಂತಿಯಂದು ಇಲ್ಲಿ ಜನರು ಪ್ರತಿವರ್ಷ ಕಲೆಯುತ್ತಾರೆ. ಲಂಡನ್ ಬಿಟ್ಟರೆ ಅತಿ ಹೆಚ್ಚು ಭಾರತೀಯರು ನೆಲೆಸಿರುವ ನಗರವಿದು. ಸುಮಾರು ಮೂರು ಲಕ್ಷ ಜನ ಭಾರತೀಯರು ಇಲ್ಲಿ ನೆಲೆಸಿದ್ದಾರೆ ಎನ್ನುವ ಅಂದಾಜಿದೆ.

ಯುಕೆಯ ಮತ್ತೊಂದು ಭಾಗ ವೇಲ್ಸ್ ನ ರಾಜಧಾನಿ ಕಾರ್ಡಿಫ್ ನಗರದಲ್ಲಿ ಕೂಡ ಗಾಂಧಿಯ ಆರಡಿಯ ಕಂಚಿನ ಪ್ರತಿಮೆಯಿದೆ. ವೇಲ್ಸ್ ನ ಹಿಂದೂ ಸಮಿತಿ ಇದಕ್ಕೆ ಬೇಕಾದ ಸುಮಾರು 65 ಲಕ್ಷಗಳನ್ನು ಸಂಗ್ರಹಿಸಿ ರಾಮ ಸುತಾರ್ ಮತ್ತು ಆತನ ಮಗ ಅನಿಲ್ ಕಡೆದ ಪ್ರತಿಮೆಯನ್ನು ಕಾರ್ಡಿಫ್ ನಗರದ ಮಿಲಿನಿಯಂ ಸೆಂಟರ್ ನಲ್ಲಿ ಸ್ಥಾಪಿಸಿದ್ದಾರೆ.

ವೇಲ್ಸ್ ಗೂ ಗಾಂಧೀಜಿಗೂ ಹಳೆಯ ಸಂಬಂಧವಿದೆ. ವೇಲ್ಸ್ ಯುಕೆ ಯಲ್ಲಿ ಒಂದು ಪ್ರಾಂತ್ಯ. ಇಂಗ್ಲೀಷಿನ ಪ್ರಭಾವ ಇಡೀ ಜಗತ್ತಿನ ಮೇಲೆ ಆಗಿದ್ದರೂ ಬ್ರಿಟಿಷರ ಈ ಸಣ್ಣ ಪ್ರಾಂತ್ಯ ತಮ್ಮ ವೆಲ್ಶ್ ಭಾಷೆಯನ್ನು ಉಳಿಸಿಕೊಳ್ಳಲು ಹೋರಾಡಿದವರು. ಇಂದಿಗೂ ಅವರು ತಮ್ಮ ಭಾಷೆಯನ್ನು ಉಳಿಸಿಕೊಂಡಿರುವ ಇವರು ಅಪ್ರತಿಮ ವೀರರು, ಸ್ವದೇಶಾಭಿಮಾನಿಗಳು ಎಂಬ ಹೆಸರನ್ನು ಪಡೆದವರು.

ಗಾಂಧಿಯವರು ಈ ದೇಶದ ಅಂದಿನ ಪ್ರಧಾನಿ ಡೇವಿಡ್ ಲಾಯ್ಡ್ ಜಾರ್ಜ್ ನ ಸ್ವದೇಶಿ ಭಾಷೆಯ ಪ್ರೇಮದಿಂದ ಪ್ರೇರಿತರಾಗಿದ್ದವರು. ಆಗಾಗಲೇ ತಮ್ಮ ಆತ್ಮ ದೀಪಗಳನ್ನು ನಂದಿಸಿಕೊಂಡು ಬ್ರಿಟಿಷರ ಭಾಷೆ ಇಂಗ್ಲೀಷಿಗೆ ಶರಣಾಗುತ್ತಿದ್ದ ಭಾರತೀಯರನ್ನು ನೋಡಿ ಬೇಸತ್ತಿದ್ದ ಗಾಂಧೀಜಿ 1909ರಲ್ಲಿ ಒಂದೆಡೆ ಹೀಗೆ ಬರೆದು ಗುಡುಗಿದ್ದಾರೆ.

ಮಿ. ಲಾಯ್ಡ್ ಜಾರ್ಜ್ ತಮ್ಮ ದೇಶದ ಮಕ್ಕಳು ತಮ್ಮ ಭಾಷೆಯನ್ನು ಮರೆಯದಂತೆ ಕಾಯ್ದುಕೊಂಡಿದ್ದಾರೆ. ನಮ್ಮ ಭಾರತದ ಜನರಿಗೆ ತಮ್ಮ ಭಾಷೆಗಳನ್ನು ಉಳಿಸಿಕೊಳ್ಳಲು ಈ ಸಣ್ಣ ಪ್ರಾಂತ್ಯ ವೇಲ್ಸ್ ಗಿಂತ ಹೆಚ್ಚಿನ ಪ್ರೇರಣೆ ಬೇಕೆ? ಆ ಜನತೆಗಿಂತ ನಮ್ಮ ಜನರಿಗೆ ಕಾಳಜಿ ಹೆಚ್ಚಿರಬೇಡವೇ?

ಯುಕೆಯ ಇನ್ನೊಂದು ಪ್ರಾಂತ್ಯ ಸ್ಕಾಟ್ಲ್ಯಾಂಡ್. ಅದರ ರಾಜಧಾನಿ ಎಡಿನ್ಬರೋ ಎನ್ನುವ ಸುಂದರ ಚಾರಿತ್ರಿಕ ಸ್ಥಳ. ಅಲ್ಲಿಯ ಸಾಟನ್ ಪಾರ್ಕ್ ನಲ್ಲಿ 1997 ರಲ್ಲಿ ಗಾಂಧಿಯವರ ಪುಟ್ಟ ಪ್ರತಿಮೆ ಸ್ಥಾಪಿತವಾಗಿದೆ.

ಬೇರೆಯದಕ್ಕೆ ಹೋಲಿಸಿದರೆ ಈ ಜಾಗಕ್ಕೆ ಬರುವ ಮಂದಿ ಕಡಿಮೆಯೇ. ಆದರೆ ಬಂದ ಜನರ ಕಣ್ಣಿಗೆ ಈ ವಿಶ್ವಮಾನವನ ಮಂದಸ್ಮಿತ ಮುಖ ಎದುರಾಗುತ್ತದೆ. 20ನೇ ಶತಮಾನದ ವಿಶ್ವದ ಸೂಪರ್ ಹೀರೋವಿನ ದರ್ಶನವಾಗುತ್ತದೆ.

ಗಾಂಧಿಯ 150ನೇ ಜಯಂತಿಯ ಸಂದರ್ಭದಲ್ಲಿ ಭಾರತ ಸರ್ಕಾರದ ಆಯೋಗ ಐರ್ಷೈರ್ ನಗರದ ದೊಡ್ಡ ಸಭಾಂಗಣದಲ್ಲಿ 400 ಕೆ.ಜಿ. ತೂಕದ ಮತ್ತೊಂದು ಪ್ರತಿಮೆಯನ್ನು ಅನಾವರಣ ಮಾಡಿತು ಇದು ಆರನೇ ಪ್ರತಿಮೆ.

ಇಡೀ ವಿಶ್ವ ತೋರದಿದ್ದ ಬುದ್ದಿವಂತಿಕೆಯನ್ನು ಬ್ರಿಟಿಷರಿಗೆ ತೋರಿಸಿ ಅಹಿಂಸೆ ಎನ್ನುವ ಅಸ್ತ್ರವನ್ನು ಉಪಯೋಗಿಸಿ ಬ್ರಿಟಿಷರ ಗನ್ನುಗಳನ್ನು ಉಪಯೋಗಕ್ಕೆ ಬರದಂತೆ ಮಾಡಿ ವಿಶ್ವದೆದುರು ಬ್ರಿಟಿಷರ ಮಾನ ಹರಾಜು ಹಾಕುವ ತಂತ್ರವನ್ನು ತೋರಿದ ಗಾಂಧಿ ವಿಶ್ವ ಕಂಡ ಒಬ್ಬ ಅತಿದೊಡ್ಡ ರಾಜಕೀಯ ಮುತ್ಸದ್ದಿ.

ವೈರಿಗಳ ಪಾಲಿಗೆ ಕಬ್ಬಿಣದಂತ ಕಠಿಣ ಹಠವಾದಿ. ತನ್ನದೇ ದೇಶದ ಬಡವರ ಪಾಲಿಗೆ ಬೆಣ್ಣೆ ಹೃದಯದ ಸಂತ. ವೈರಿಗಳೂ ಬೆರಗಾಗಿ ಅಸಹಯಾಕರಾಗುವಾಗ ಗಾಂಧಿ ಅವರ ಕಕ್ಕರುಮಕ್ಕರುತನವನ್ನು ಹೀಯಾಳಿಸದೆ ಕೈ ಕುಲುಕಿ ಮಿತೃತ್ವವನ್ನು ತೋರಿದ ವಿಶಾಲ ಹೃದಯಿ.

ಮುಳುಗುತ್ತಿದ್ದ ದೇಶವನ್ನು ದಡ ತಲುಪಿಸಿದ ಗಾಂಧಿ ಸ್ವತಂತ್ರ ಭಾರತದ ಚುಕ್ಕಾಣಿ ಹಿಡಿಯುವಂತೆ ತನ್ನ ಅನುಯಾಯಿಗಳಿಗೆ ಹೇಳಿ ಎಲ್ಲ ಆಡಳಿತ ಪದವಿಗಳನ್ನು ಅವರಿಗೆ ಒಪ್ಪಿಸಿ ಅದೆಲ್ಲಕ್ಕಿಂತಲೂ ಎತ್ತರಕ್ಕೇರಿ ನಿಂತ ವ್ಯಕ್ತಿ.

ಹೊರದೇಶಗಳ ದಾಳಿಯಿಂದ ಭಾರತವನ್ನು ಮುಕ್ತಗೊಳಿಸಿದ ಗಾಂಧಿ ತಮ್ಮದೇ ದೇಶದಲ್ಲಿ  ಹಿಂಸೆ ಮತ್ತು ಗಲಭೆಗಳನ್ನು ನೋಡಬೇಕಾಯಿತು. ಧಾರ್ಮಿಕ ನಂಬಿಕೆಗಳ ಕುರುಡಿಗೆ ಗಾಂಧಿ ತೋರಿದ ಬೆಳಕು ಕಣ್ಣು ಕುಕ್ಕಿತು.

ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಉದ್ರೇಕದ ಮತ್ತು ಅಭದ್ರ ಮನಸ್ಥಿತಿಯಲ್ಲಿದ್ದ ದೇಶದಲ್ಲಿ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗದ ಅರೆ ಬರೆ ತಿಳುವಳಿಕೆಯ ವಿಕಾರ ಮನಸ್ಸಿನ ದೇಶದ್ರೋಹಿಯೊಬ್ಬನ ಮೂಲಕ ಗಾಂಧಿ ಹತರಾಗಬೇಕಾದ್ದು ಎಲ್ಲರ ದುರ್ದೈವ.

ಗಾಂಧಿ ನಮ್ಮ ದೇಶದಲ್ಲಿ ಹುಟ್ಟಿದ್ದು ನಮ್ಮ ಅದೃಷ್ಟ. ಈ ವಿಶ್ವ ಮಾನವನ ಕಾರಣ ಇಂದು ಭಾರತಕ್ಕೆ ವಿಶ್ವದ ಮ್ಯಾಪ್‍‍‍‍‍ನಲ್ಲಿ ಒಂದು ಪ್ರಮುಖ ಗುರುತಿದೆ. ಭಾರತವನ್ನೇ ತನ್ನ ಬದುಕನ್ನಾಗಿ ಮಾಡಿಕೊಂಡು ತನ್ನ ಎಲ್ಲವನ್ನೂ ತ್ಯಾಗ ಮಾಡಿದ ಈ ವ್ಯಕ್ತಿಯ ಧ್ಯೇಯಗಳನ್ನು ಅರಿತುಕೊಂಡು, ಇಂದಿನ ಭಾರತದ ಹಲವು ರಾಜಕೀಯ ವರ್ತನೆಯನ್ನು ನೋಡಿದರೆ ಜಗತ್ತಿನಲ್ಲಿ ಗಾಂಧಿಗೆ ಭಾರತಕ್ಕಿಂತ ಅತಿ ಹೆಚ್ಚಿನ ಸ್ಥಾನವಿದೆ ಎನ್ನುವುದು ತಟ್ಟನೆ ಹೊಳೆಯುತ್ತದೆ.

ಆ ಮಹಾತ್ಮನಿಗೆ ಅನವರತ ನಮನ.

‍ಲೇಖಕರು avadhi

3 October, 2019

1 Comment

  1. Ravi Sanikop

    ಬಹಳ ಸುಂದರವಾದ ಲೇಖನ . ಓದಿ ಮನಸ್ಸಿಗೆ ಬಹಳ ಅಂತೋಷವಾಯ್ತು . ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading