'ಪಡ್ಡಾಯಿ' ಕಟ್ಟಿದ ಕಥೆ- ನನ್ನೊಳಗೆ ಮ್ಯಾಕ್ಬೆತ್ ಇಳಿದು ಹೋಗಿದ್ದ..


ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದವರು ಅಭಯ ಸಿಂಹ. ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ ‘ಗುಬ್ಬಚ್ಚಿಗಳು’. ೨೦೦೮ ರಲ್ಲಿ ಆರಂಭವಾದ ಇವರ ಚಿತ್ರ ಪಯಣಕ್ಕೆ ಈಗ ದಶಕದ ವಸಂತ.
ಕಡಲ ಅಲೆಗಳ ಅಬ್ಬರವನ್ನು ಆಲಿಸುತ್ತಲೇ ಬೆಳೆದ ಹುಡುಗನಿಗೆ ಮನಸ್ಸು ಮತ್ತೆ ಮತ್ತೆ ಅತ್ತಲೇ ಎಳೆದದ್ದು ಆಕಸ್ಮಿಕವಲ್ಲ. ತಾನು ಬಾಲ್ಯದಿಂದಲೂ ಕಂಡ ಸಮುದ್ರ, ಮೀನುಗಾರರು, ದೋಣಿ, ಬಲೆ, ಹಡಗು ಎಲ್ಲವನ್ನೂ ಸೇರಿಸಿ ಕಟ್ಟಿದ ಚಿತ್ರವೇ ‘ಪಡ್ಡಾಯಿ’.
ತುಳು ಭಾಷೆಯ ಈ ಸಿನೆಮಾ ಕೇವಲ ಭಾಷೆಯ ಕಾರಣಕ್ಕಾಗಿ ಮಾತ್ರ ನೋಡುಗರನ್ನು ಕಾಡಲಿಲ್ಲ. ಬದಲಿಗೆ ಇದು ಯಶಸ್ವಿಯಾಗಿ ತುಳು ನೆಲದ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಚಿತ್ರ. ಈ ಚಿತ್ರಕ್ಕೆ ಮತ್ತೆ ರಾಷ್ಟ್ರ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿತು.
ಅಭಯ ಸಿಂಹ ಹೇಗೆ ತಮ್ಮ ಸಿನೆಮಾವನ್ನು ಕಟ್ಟುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಪ್ರಶ್ನೆಯನ್ನು ನಾವೂ ಕೇಳಬೇಕು ಎಂದುಕೊಂಡಿದ್ದಾಗಲೇ ಅಭಯ ಸಿಂಹ ‘ಅಕ್ಷರ ಪ್ರಕಾಶನ’ದ ಮೂಲಕ ‘ಪಡ್ಡಾಯಿ’ ಕಟ್ಟಿದ ಕಥೆಯ ಕೃತಿಯನ್ನು ಹಿಡಿದು ಬಂದರು.
ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಗಳು ಬೆರಳೆಣಿಕೆಯಷ್ಟು. ಇಂತಹ ಸಂದರ್ಭದಲ್ಲಿ ಚಿತ್ರಕಥೆಯ ಸಮೇತ ಅಭಯ ಸಿಂಹ ಪಡ್ಡಾಯಿ ಕಟ್ಟಿದ ಕಥೆಯನ್ನು ಹೇಳಿದ್ದಾರೆ. ಓದಿ-
ಈ ಕೃತಿ ಕೊಳ್ಳುವ ಆಸಕ್ತಿ ಇದ್ದಲ್ಲಿ  ಇಲ್ಲಿ ಒತ್ತಿ 

| ನಿನ್ನೆಯಿಂದ |

2

‘ಮ್ಯಾಕ್ಬೆತ್’ ನಾಟಕದಲ್ಲಿ ಅನೇಕ ಪ್ರಬಲ ರೂಪಕಗಳಿವೆ, ಅದರಲ್ಲಿ ಒಂದು ಯುದ್ಧದ ಕಲ್ಪನೆ. ನಮ್ಮ ಮೊಗವೀರರಿಗೆ ನಿತ್ಯ ಜೀವನವೇ ಒಂದು ಯುದ್ಧ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕರಾವಳಿಯಲ್ಲಿ ಮೀನುಗಾರಿಕೆಗೆ ರಜೆ ಇರುತ್ತದೆ. ಕೆಲವು ಕಬ್ಬಿಣದ, ಯಾಂತ್ರೀಕೃತ ಬೋಟುಗಳು ಈ ಸಮಯದಲ್ಲಿ ನೀರಿಗಿಳಿದರೂ, ಸಾಧಾರಣವಾಗಿ ಸಾಂಪ್ರದಾಯಿಕ ಮೀನುಗಾರಿಕೆಯವರು ಈ ಸಮಯದಲ್ಲಿ ಸಮುದ್ರಕ್ಕೆ ಹೋಗುವುದಿಲ್ಲ.
ಮಳೆಗಾಲದಿಂದಾಗಿ, ಸಮುದ್ರ ಕೆರಳಿರುತ್ತದೆ ಎನ್ನುವುದು ಇದಕ್ಕೆ ಒಂದು ಕಾರಣವಾದರೆ, ಈ ಸಮಯದಲ್ಲಿ ಮೀನುಗಳು ಮೊಟ್ಟೆಯಿಟ್ಟು, ಮರಿಮಾಡುವ ಸಮಯ. ಈ ರಜೆಯಿಂದಾಗಿ, ಮುಂದಿನ ವರ್ಷದ ಮೀನುಗಾರಿಕೆ ಹೇಗೆ ನಡೆಯಲಿದೆ ಎನ್ನುವುದೂ ನಿರ್ಧಾರವಾಗುತ್ತದೆ.
ಈ ಮೀನುಗಾರಿಕೆ ರಜೆ ಮುಗಿದು ಮೀನುಗಾರರು ಸಮುದ್ರಕ್ಕೆ ಇಳಿಯುತ್ತಿದ್ದಂತೆ, (ಆಗಸ್ಟ್ ಸುಮಾರಿನಿಂದ ಈ ಮೀನುಗಾರಿಕಾ ಸೀಸನ್ ಮತ್ತೆ ಆರಂಭವಾಗುತ್ತದೆ) ಸಮುದ್ರ ಇನ್ನೂ ಸಂಪೂರ್ಣವಾಗಿ ಶಾಂತವಾಗಿರುವುದಿಲ್ಲ. ಆಗ ಮೀನುಗಾರಿಕೆ ಆರಂಭವಾಗುವಾಗ ಅನೇಕ ಮೀನುಗಾರರನ್ನು ಸಮುದ್ರ ಆಹುತಿ ತೆಗೆದುಕೊಳ್ಳುತ್ತದೆ. ಈ ನಿತ್ಯ ಹೋರಾಟದ ಜೀವನ ಯಾವ ಯುದ್ಧಕ್ಕಿಂತಲೂ ಕಡಿಮೆಯದ್ದಲ್ಲ. ಇಂಥಾ ಎದುರಾಳಿಯನ್ನು ಒಂದು ಬದಿಗೆ ಇಟ್ಟುಕೊಂಡೇ ಜೀವನ ನಡೆಸುವ ಸಾಹಸಿಗಳು ನಮ್ಮ ಮೊಗವೀರರು. ಅವರು ಮುಗ್ಧರು, ಮೃದುಸ್ವಭಾವದವರು.

ಆದರೆ, ಹೊರಾವರಣದಲ್ಲಿ ಸಾಕಷ್ಟು ಒರಟರಾಗಿಯೂ ಕಾಣಿಸುತ್ತಾರೆ. ಇದು ಒಬ್ಬ ಸೈನಿಕನ ಗುಣಸ್ವಭಾವಗಳಿಗೆ ಸುಲಭವಾಗಿ ಹೋಲಿಕೆಯಾಗುವ ಸನ್ನಿವೇಶ. ಹೀಗಾಗಿ, ‘ಮ್ಯಾಕ್ಬೆತ್’ ಅಳವಡಿಕೆಯ ಒಂದು ಪ್ರಮುಖ ಭಾಗ ಸುಲಭವಾಗಿಯೇ ಆರಂಭವಾಯಿತು.
ನಾಟಕದ ಜಾಯಮಾನದಲ್ಲಿ ಅನೇಕ ದೀರ್ಘವಾದ, ಸ್ವಗತಗಳು ಸಹಜ. ಆದರೆ, ಅಂಥವು ಸಿನಿಮಾದಲ್ಲಿ ಕೃತಕವಾಗಿ ಕಾಣಿಸುತ್ತವೆ. ಹೀಗಾಗಿ, ಅಂಥಾ ಸಂದರ್ಭಗಳಲ್ಲಿ ಸಿನಿಮಾ ಮಾಧ್ಯಮದೊಳಗಿನ ರೂಪಕಗಳನ್ನು ಹುಡುಕುವುದು ಅಗತ್ಯವಾಗಿರುತ್ತದೆ.
‘ಮ್ಯಾಕ್ಬೆತ್’ ನಾಟಕದಲ್ಲಿ ರಾಜ ಡಂಕನ್ನನ್ನು ಕೊಲ್ಲಲು ಮ್ಯಾಕ್ಬೆತ್ ಸಿದ್ಧನಾದಾಗ, ಅಲ್ಲಿ ಒಂದು ದೀರ್ಘವಾದ ಆತ್ಮವಿಮರ್ಶೆ ನಡೆಯುತ್ತದೆ. ನನ್ನ ಮನೆಯಲ್ಲಿ ಇರುವ ಅತಿಥಿ, ನನಗೆ ಊಟ ಕೊಟ್ಟವನು, ಜೊತೆಯಲ್ಲಿರುವುದು ಗೆಳೆಯ ಬ್ಯಾಂಕೋ, ಅವನೋ ವೃತ್ತಿಯಲ್ಲಿ ಜೊತೆಕೊಟ್ಟವನು. ಇವರಿಗೆ ಮೋಸ ಮಾಡುವುದು ಸರಿಯೇ ಎನ್ನುವ ತೊಳಲಾಟ ಮ್ಯಾಕ್ಬೆತ್‌ನಲ್ಲಿ ಕಾಣಿಸುತ್ತದೆ.
ಇದನ್ನು ಸಿನೆಮಾಕ್ಕೆ ಅಳವಡಿಸುವಾಗ, ಒಂದು ಸಣ್ಣ ಮಟ್ಟಿನ ಅಸಂಗತಕ್ಕೆ ಹೋಗಬೇಕಾಯಿತು. ಇಲ್ಲಿ ಕೊಲೆಯ ಕಲ್ಪನೆಯಿಂದ ಪೀಡಿತವಾಗಿರುವ ಮಾಧವನಿಗೆ, ಪತ್ನಿ ಕೊಲೆ ಮಾಡು ಎಂದು ಕತ್ತಿಯನ್ನು ಚಾಚಿದಾಗ, ಒಂದು ಕ್ಷಣದಲ್ಲಿ ಅದು, ದೊನ್ನೆಯಲ್ಲಿ ಆಹಾರ ನೀಡುತ್ತಿರುವ ಅನ್ನದಾತ ದಿನೇಶಣ್ಣನಾಗಿಯೂ, ಇನ್ನೊಂದು ಕ್ಷಣ, ಜೊತೆಯಾಗಿ ಉದ್ಯೋಗಕ್ಕೆ ಹೋಗಿ, ಮೀನು ಹಿಡಿಯುವ, ಕೊಬ್ಬಿದ ಮೀನೊಂದನ್ನು ಹಿಡಿದು ನಿಂತಿರುವ ಗೆಳೆಯ ಬನ್ನಂಜೆಯಾಗಿಯೂ ಕಾಣಿಸುತ್ತದೆ. ಅವರಿಬ್ಬರ ಮುಖದಲ್ಲೂ ಕಾಣಿಸುವ ಆತ್ಮೀಯ ನಗು, ಮಾಧವನ ಮನಸ್ಸನ್ನು ಇನ್ನಷ್ಟು ಗೊಂದಲಕ್ಕೀಡು ಮಾಡುತ್ತದೆ.

ಆದರೆ, ಒತ್ತಾಯ ಮಾಡುತ್ತಿರುವ ಪತ್ನಿಯ ಒತ್ತಡ ಎಲ್ಲವನ್ನೂ ಮರೆಸಿ, ಮಾಧವನ ಕೈಯ್ಯಲ್ಲಿ ಕೊಲೆಗಟುಕ ಕತ್ತಿಯನ್ನು ಇಡುತ್ತದೆ. ಇಲ್ಲಿ ಒಂದೇ ಒಂದು ಸಂಭಾಷಣೆಯೂ ಇಲ್ಲ! ಹೀಗೆ ಅನೇಕ ಸಂದರ್ಭಗಳಲ್ಲಿ, ಆಯಾ ಸಂದರ್ಭಕ್ಕೆ ಸರಿಹೋಗುವಂತೆ ಹೊಸ ರೂಪಕಗಳನ್ನು ಕಂಡುಕೊಳ್ಳಬೇಕಾಯಿತು.
ಮ್ಯಾಕ್ಬೆತ್ ನಾಟಕದಲ್ಲಿ ಅದ್ಭುತ ಎನಿಸುವ ಇನ್ನೊಂದು ಕಲ್ಪನೆ ಸುಗಂಧ ದ್ರವ್ಯದ್ದು. ಕೊಲೆ ಎಂದರೆ ಆತ್ಮೀಯರ ರಕ್ತಪಾತ ಎಂದು ಮ್ಯಾಕ್ಬೆತ್ ಭಯಗೊಂಡಿದ್ದಾಗ, ಲೇಡಿ ಮ್ಯಾಕ್ಬೆತ್, ರಕ್ತದ ಬಗ್ಗೆ ಹೆದರಬೇಡ, ನೀರಿನಿಂದ ತೊಳೆದರೆ ಅದು ಮೈಯ್ಯಿಂದ ಹೋಗುತ್ತದೆ ಎನ್ನುತ್ತಾಳೆ. ಆದರೆ, ಪಾಪ ಪ್ರಜ್ಞೆ ಉತ್ತುಂಗಕ್ಕೆ ಏರಿದಾಗ, ಅದೇ ಲೇಡಿ ಮ್ಯಾಕ್ಬೆತ್ ತನ್ನ ಕೈಯ್ಯಲ್ಲಿ ಸದಾ ರಕ್ತವನ್ನು ಕಲ್ಪಿಸುತ್ತಾ, ಯಾವುದೇ ಸುಗಂಧ ದ್ರವ್ಯದಿಂದಲೂ ಈ ಕಮಟು ಹೋಗುತ್ತಿಲ್ಲವಲ್ಲಾ ಎಂದು ದುಃಖಿಸುತ್ತಾಳೆ.
ನಾಟಕದ ಈ ಭಾಗವನ್ನು ಗ್ರಹಿಸುವಾಗ, ವಾಸನೆ ಎನ್ನುವ ಕಲ್ಪನೆ ನನ್ನ ಚಿತ್ರಕಥೆಯಲ್ಲಿ ಹೊಸತೊಂದು ಅನುಭವ ನೀಡಬಹುದು ಎನಿಸಿತು.
ಮಂಗಳೂರಿನಲ್ಲಿ ಮೀನು ಒಣಗಿಸುವ ಮತ್ತು ಸಾಗಿಸುವ ದಾರಿಯಲ್ಲಿ ಸಂಚರಿಸಿದವರಿಗೆ, ಮೀನಿನ ವಾಸನೆ ಹೇಗೆ ಇಡೀ ಊರಿಗೆ ಹರಡಿರುತ್ತದೆ ಎನ್ನುವುದು ನೆನಪಾಗಬಹುದು. ಆದರೆ, ಮಂಗಳೂರಿನಲ್ಲೇ ಸಾಕಷ್ಟು ಕಾಲ ಇರುವವರು ಈ ವಾಸನೆಗೆ ಒಗ್ಗಿಹೋಗಿರುತ್ತಾರೆ. ಮೊಗವೀರರಿಗೋ ಈ ವಾಸನೆಯೇ ವಾಸ್ತವವಾಗಿರುತ್ತದೆ.

ಆಧುನಿಕತೆಯ ಭರಾಟೆಯಲ್ಲಿ, ತಮ್ಮದಲ್ಲದ ಜೀವನವನ್ನು ಹುಡುಕುತ್ತಿರುವ ಸುಗಂಧಿಯಂಥಾ ಪಾತ್ರ, ತನ್ನ ಮೈಯ್ಯ ಮೀನಿನ ವಾಸನೆಯಿಂದಲೇ ಬಿಡುಗಡೆ ಬಯಸುವ ಸಾಧ್ಯತೆ, ನನಗೆ ಕುತೂಹಲ ಮೂಡಿಸಿತು. ಹೀಗಾಗಿ, ಲೇಡಿ ಮ್ಯಾಕ್ಬೆತ್ ನಮ್ಮಲ್ಲಿ ಸುಗಂಧಿಯಾಗುತ್ತಾಳೆ. ಆಕೆ ಆಧುನಿಕತೆಯ ವಾಸನೆಯಿಂದ ಆಕರ್ಷಿತಳು. ತನ್ನ ಚರ್ಮದಿಂದಾಚೆಗಿನ ಬದುಕು ಬಯಸುವವಳು. ದೈಹಿಕವಾದ ಬದಲಾವಣೆಯಿಂದ, ಅಂತಸ್ತಿನ ಬದಲಾವಣೆ ಸಾಧ್ಯ ಎಂದು ನಂಬಿದ್ದಾಳೆ ಈಕೆ. ಹೀಗೆ ಸುಗಂಧ ದ್ರವ್ಯ ಚಿತ್ರಕಥೆಯಲ್ಲಿ ಒಂದು ಮಹತ್ತರವಾದ ಪಾತ್ರವಹಿಸುತ್ತದೆ.
ಮ್ಯಾಕ್ಬೆತ್‌ನಲ್ಲಿ ಬರುವ ಮೂರು ಮಾಟಗಾತಿಯರು ಬಹಳ ಕುತೂಹಲಕಾರಿ ವಿಚಾರ. ಇಡೀ ಕಥೆಗೆ ಮೂಲ ತಿರುವು ನೀಡುವುದೇ ಅವರು. ಇವರು ಮನುಷ್ಯನೊಳಗಿನ ಆಸೆಯನ್ನೇ ಇನ್ನೊಂದು ರೀತಿಯಲ್ಲಿ ಧ್ವನಿಸಿ, ಅವನಿಗೆ ತನ್ನೊಳಗಿನ ವಿಚಾರಕ್ಕೆ ಶ್ರಮಿಸುವಂತೆ ಮಾಡುತ್ತವೆ.
ಅವು ಸ್ಪಷ್ಟವಾಗಿ ಏನನ್ನೂ ಹೇಳದೇ, ಕಿವಿಗಳು, ತಾವು ಕೇಳಬೇಕು ಎಂದು ಬಯಸಿದ ವಿಷಯಗಳನ್ನು ಕೇಳಿಸಿಕೊಳ್ಳುವಂತೆ ಮಾಡುತ್ತವೆ. ಈ ಕಲ್ಪನೆಯನ್ನು ನಮ್ಮ ಚಿತ್ರಕಥೆಗೆ ತರುವಾಗ, ತುಳುನಾಡಿನ ದೈವದ ಕಲ್ಪನೆಗೆ ನಾನು ಇದನ್ನು ಸಮೀಕರಿಸಿಕೊಂಡೆ. ಮಾಧವ, ದೈವವನ್ನು ಕಂಡೆ ಎಂದು ಭ್ರಮಿಸಿ ಬಂದು, ಆ ಅಲೌಕಿಕ ಅನುಭವವನ್ನು ತನ್ನ ಪತ್ನಿಗೆ ವಿವರಿಸುತ್ತಾನೆ. ಆಗ ಆಕೆ, “ದೈವದ ನುಡಿ ಎಂದರೆ, ಅದು ನಮ್ಮ ಮನಸ್ಸಿನ ನುಡಿಯೇ ಅಲ್ಲವೇ” ಎನ್ನುತ್ತಾಳೆ.
ಆದರೆ, ಈ ಘಟನೆ, ಸುಗಂಧಿಗೆ ತಮ್ಮಿಬ್ಬರ ಜೀವನದ, ಮುಂದಿನ ಪ್ರಳಯಕ್ಕೆ ನಾಂದಿ ಹಾಡಲು ಸಾಕಾಗುತ್ತದೆ! ಮ್ಯಾಕ್ಬೆತ್ ನಾಟಕದಲ್ಲಿ ಈ ಕೆಲಸಕ್ಕೆ ಮಾಟಗಾತಿಯರನ್ನು ಬಳಸಿಕೊಳ್ಳಲಾಗುತ್ತದೆ. ಮಾಟಗಾತಿಯರ ಕಲ್ಪನೆ, ಒಂದು ಸ್ಥಾಪಿತ ಧಾರ್ಮಿಕ ವ್ಯವಸ್ಥೆಯ ಹೊರಗಿನದ್ದು. ಅದನ್ನು ಶೇಕ್ಸ್‍ಪಿಯರ್ ಉದ್ದೇಶಪೂರ್ವಕವಾಗಿಯೇ, ಬಳಸಿಕೊಂಡಿದ್ದಾನೆ. ಜನರ ಮನಸ್ಸಿನ ವಿಕ್ಷಿಪ್ತತೆಯನ್ನು ಸೂಚಿಸಲು ಹೀಗೆ ಮಾಡಿದ್ದಾನೆ ಎಂದು ಓದಿದ್ದೆ.
ದೈವಾರಾಧನೆಯೂ, ನಮ್ಮಲ್ಲಿ ಸ್ಥಾಪಿತ ಧಾರ್ಮಿಕ ವ್ಯವಸ್ಥೆಯ ಹೊರಗಿನದ್ದಾಗಿದ್ದರೂ, ಜನರ ನಂಬಿಕೆಯ ಪರಿಧಿಯಲ್ಲಿ ತೀರಾ ಒಳಗಿನದ್ದೇ ಆಗಿದೆ. ಸಾಮಾಜಿಕವಾಗಿ ದೈವಾರಾಧನೆಯ ಕಲ್ಪನೆ ಬಹಳ ರೋಚಕವಾಗಿದ್ದು, ಬಹಳ ಮುಖ್ಯದ್ದಾಗಿದೆ. ಈ ವಿಷಯ ನಮ್ಮ ಅಳವಡಿಕೆಯಲ್ಲಿ ತುಂಬಾ ಸಹಾಯವಾಯಿತು.
ನಮ್ಮ ಸಿನಿಮಾ ಕಟ್ಟುವಾಗ, ನನ್ನನ್ನು ಕಾಡುತ್ತಿದ್ದ ಇನ್ನೊಂದು ಅಂಶ, ಮಂಗಳೂರಿನಲ್ಲಿ ದುಬೈ ಬಗ್ಗೆ ಇರುವ ಒಂದು ರೀತಿಯ ಸೆಳೆತ. ನನ್ನ ಹಲವಷ್ಟು ಸಹಪಾಠಿಗಳು, ಗೆಳೆಯರು ಇಂದು ದುಬೈಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ಓದುತ್ತಿದ್ದ ಸಮಯದಲ್ಲಿ ಎಷ್ಟೋ ಜನಕ್ಕೆ ಅವರ ಸಂಬಂಧಿಗಳು ದುಬೈಯಲ್ಲಿ ಇದ್ದಾರೆ ಎನ್ನುವುದೇ ಹೆಮ್ಮೆಯ ವಿಷಯವಾಗಿತ್ತು. (ದುಬೈ ಎಂದರೆ ಸಾಮಾನ್ಯವಾಗಿ ಎಲ್ಲಾ ಗಲ್ಫ್ ದೇಶಗಳನ್ನು ಸೇರಿಸಿದ ಒಂದು ಕಲ್ಪನೆ ಮಾತ್ರವಾಗಿತ್ತು ಅಂದು ನಮಗೆ!)
ಈ ವ್ಯಾಮೋಹ ಇಂದಿಗೂ ಒಂದು ಮಟ್ಟಿಗೆ ನಮ್ಮಲ್ಲಿದೆ. ಹೀಗಾಗಿ, ನಮ್ಮ ಸಿನಿಮಾದಲ್ಲೂ ದುಬೈ ಎನ್ನುವುದು, ಒಂದು ಅದ್ಭುತ ಸಾಧ್ಯತೆಗಳ, ಕನಸಿನ ಜಾಗವಾಗಿ ಬಳಸಿಕೊಂಡೆ. ಇಲ್ಲಿ ಇರುವುದನ್ನು ಬಿಟ್ಟು, ಇನ್ನೆಲ್ಲೋ ಇದೆ ಅಂದುಕೊಳ್ಳುವ ಒಂದು ಸ್ವರ್ಗವನ್ನು ಹುಡುಕುವವರೇ ನಾವೆಲ್ಲಾ.
ನಮ್ಮ ಚಿತ್ರದಲ್ಲಿ ಬರುವ ಮಂಜೇಶನ ಪಾತ್ರವೂ ಅಂಥಾದ್ದೇ. (ಡಂಕನ್ ದೊರೆಯ ಮಗನ ಪಾತ್ರ ಇದು) ಅವನಿಗೆ ಸದಾ, ತಾನು ದುಬೈಗೆ ಹೋಗಬೇಕು, ಅಲ್ಲಿ ಯಾವ ಕೆಲಸವೇ ಆದರೂ ತೊಂದರೆ ಇಲ್ಲ. ಆದರೆ, ಇಲ್ಲಿ ಒಡೆಯನಾಗಿ ಇರುವುದಕ್ಕಿಂತಲೂ, ದುಬೈಯಲ್ಲಿ ಸೇವಕನಾಗಿರುವುದೇ ಲೇಸು ಎನ್ನುವಂಥಾ ಕಲ್ಪನೆ! ಅವನ ಈ ಕಲ್ಪನೆಯೇ ಅವನ ವೈಯಕ್ತಿಕ ದುರಂತಕ್ಕೆ ಕಾರಣವಾಗುತ್ತದೆ.
ಈ ಸ್ವರ್ಗದ ಕಲ್ಪನೆ, ನಮ್ಮ ಸುಗಂಧಿಯಲ್ಲೂ ಕಾಣುತ್ತದೆ. ಮೈ ವಾಸನೆಯಿಂದ ತಪ್ಪಿಸಿಕೊಳ್ಳಲು ಬಯಸುವ ಆಕೆಗೆ ಒದಗಿ ಬರುವುದು, ದುಬೈಯಿಂದ ಬಂದ ಒಂದು ಸುಗಂಧ ದ್ರವ್ಯ! ಈ ಶ್ರೀಮಂತಿಕೆಯ ವಾಸನೆಯೂ ಆಕೆಯ ವೈಯಕ್ತಿಕ ದುರಂತದೆಡೆಗೆ ಆಕೆಯನ್ನು ಕರೆದುಕೊಂಡು ಹೋಗುತ್ತದೆ.
ನಮ್ಮ ಚಿತ್ರದಲ್ಲಿ ಬರುವ ಆಮಿಷದ ದೊರೆ, ಸದಾಶಿವನೂ ಬರುವುದು ಆ ಕಡೆಯಿಂದಲೇ, ಇಲ್ಲಿ ದುಬೈ ದೇಶದ ಹೆಸರು ಇದ್ದರೂ, ಇದು ಒಂದು ಆಮಿಷಗಳನ್ನು ಹೊತ್ತು ತರುವ ಕಾಲ್ಪನಿಕ ದೇಶವಾಗಿಯಷ್ಟೇ ಇದನ್ನು ಕಾಣಬೇಕು.
ಇನ್ನು ಅಳವಡಿಕೆಯ ಸಂದರ್ಭದಲ್ಲಿ, ಸೆಮಿಯಾಟಿಕ್ಸ್ (ಸಂಜ್ಞಾಶಾಸ್ತ್ರ – ಸಂಜ್ಞೆಗಳು ರೂಪಕವಾಗುವ ಸಂದರ್ಭ) ವಿಷಯದಲ್ಲೂ ಸಾಕಷ್ಟು ಸಾಧ್ಯತೆಗಳಿದ್ದವು.

ಈ ಸಿನೆಮಾ ನೋಡಲು- 
ಅಮೆಜಾನ್ ಪ್ರೈಮ್ ನಲ್ಲಿ ಪಡ್ಡಾಯಿ ಸಿನಿಮಾ ಇದೆ.
Link to audience in UK:
Link to audience in USA:
Link to audience in India:

‍ಲೇಖಕರು avadhi

October 1, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: