ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಮಗುವಿನ ಚಿತ್ರ..

ಎನ್ ಸಂಧ್ಯಾರಾಣಿ 

ದುಂಡು ಮುಖ, ಇಷ್ಟೇ ಇಷ್ಟು ಬಾಯಿ, ಮುಖದ ತುಂಬಾ ಕೆಂಬಾರ ಹಾಗೇ ಇತ್ತು.  ತಲೆಗೆ ಟೋಪಿ ಹಾಕಿದಂತೆ ಕಪ್ಪು ಕೂದಲು, ಮಗುವಿನ ದೇಹದ ಬೆಳವಣಿಗೆ ತೆಳುವಾಗಿದ್ದರೂ ಕಣ್ಣು ಮೂಗು ಚಿತ್ರದಲಿ ಬಿಡಿಸಿಟ್ಟಂತೆ.  ’ತಿನ್ನಲಾರದ ಹಣ್ಣಷ್ಟೇ ರುಚಿ ಅಲ್ಲ, ಮುಟ್ಟಲಾರದ ಹೂವೂ ಸೊಗಸು’.  ಈ ಹೂವಿದ್ದದು ಒಂದು ಇನ್ ಕ್ಯುಬೆಟರಿನಲ್ಲಿ.  ಎಂಟು ತಿಂಗಳಿಗೆ ಹುಟ್ಟಿದ ಕೂಸು ಅದು, ತಂಗಿಯ ಮಗು, ಮುದ್ದಾದ ಹೆಣ್ಣು ಮಗು.  ನಮ್ಮ ಮನೆಯ ಮೊದಲ ಮೊಮ್ಮಗು.  ಮನೆಯವರೆಲ್ಲಾ ದಿನಕ್ಕೆರಡು ಬಾರಿ ಆಸ್ಪತ್ರೆಗೆ ಬರುತ್ತಿದ್ದೆವು.  ಆದರೆ ಆ ಮಗುವನ್ನು ನೋಡಿ ಖುಷಿ ಪಡಬೇಕೇ ಹೊರತು ಎತ್ತಿಕೊಳ್ಳುವಂತಿಲ್ಲ.  ದಿನ ತುಂಬುವ ಮೊದಲು ಹುಟ್ಟಿದ ಪಾಪು, ಒಂದು ವಾರ ಇನ್ ಕ್ಯುಬೇಟರಿನಲ್ಲಿ ಇಡಬೇಕು ಎಂದಿದ್ದರು.

ಅಂದೂ ಹಾಗೆಯೇ.  ಬಾಣಂತಿಗೆ ಊಟ ತಂದವಳು ಅವಳಿಗೆ ಊಟ ಕೊಟ್ಟು ಮಗುವನ್ನು ನೋಡಲು ಹೋದೆ.  ಹೋದವಳು ಮಗುವನ್ನು ನೋಡುತ್ತಾ ಅಲ್ಲೇ ನಿಂತೆ.  ಸ್ವಲ್ಪ ಹೊತ್ತಾಯಿತು.  ಯಾಕೋ ಮಗು ಅಸಹಜವಾಗಿ ಮಲಗಿದೆ ಅನ್ನಿಸಿತು.  ತಕ್ಷಣ ಸಿಸ್ಟರ್ ಅನ್ನು ಕರೆದೆ.  ಬಂದವರೇ ಮಗುವನ್ನು ನೋಡಿದರು, ಓಡಿ ಹೋಗಿ ಡಾಕ್ಟರನ್ನು ಕರೆತಂದರು.  ನನ್ನನ್ನು ಹೊರಗೆ ಕೂತಿರಿ ಅಂದರು.  ಹೊರಗೆ ಬಂದವಳಿಗೆ ಕೈಕಾಲು ನಡುಗುತ್ತಿತ್ತು.  ತಕ್ಷಣಕ್ಕೆ ಏನು ಮಾಡುವುದೂ ತೋಚುತ್ತಿಲ್ಲ.  ಆಗ ಸೆಲ್ ಫೋನ್ ಇರಲಿ, ಮನೆಯಲ್ಲಿ ಟೆಲಿಫೋನ್ ಸಹ ಇರಲಿಲ್ಲ.  ಇಂತಹ ಪರಿಸ್ಥಿತಿಯಲ್ಲಿ ತಂಗಿಯೊಬ್ಬಳನ್ನೇ ಬಿಟ್ಟು ಮನೆಗೆ ಹೇಗೆ ಹೋಗಲಿ?  ಅಲ್ಲಿದ್ದರೂ ಯಾವ ಬಾಯಲ್ಲಿ ನನ್ನ ತಂಗಿಗೆ ವಿಷಯ ಹೇಳಲಿ?  ಒದ್ದಾಡುತ್ತಾ ಇದ್ದೆ.  ಅಷ್ಟರಲ್ಲಿ ಡಾಕ್ಟರು ಬಂದರು.  ’ಸಾರಿ ಅಮ್ಮ, ಮಗು ತೀರಿಕೊಂಡಿದೆ’ ಅಂದರು.  ಏನು ಮಾಡುವುದು?  ಬಾಣಂತಿಗೆ ಹೇಗೆ ವಿಷಯ ಹೇಳುವುದು?  ದುಃಖ ಒಳಗಿಂದ ಒತ್ತರಿಸಿಕೊಂಡು ಬರುತ್ತಿತ್ತು.

ಮನೆಯ ಮೊದಲು ಮೊಮ್ಮಗು.  ’ಅಳಬೇಡ ಸನ್ನಿ ಆಗುತ್ತದೆ, ಎಂದು ಅವಳಿಗೆ ಹೇಳುತ್ತಿರುವಾಗಲೇ ನಮಗೆ ಅಳು ಬಂದುಬಿಡುತ್ತಿತ್ತು.  ನಮ್ಮ ಮನೆಯೊಳಗೂ ಬರದ ಆ ಕೂಸು ನಮ್ಮ ಮನೆಯಲ್ಲಿ ಬಿಟ್ಟು ಹೋದ ಖಾಲಿತನ ಹೋಗಲು ತುಂಬಾ ದಿವಸಗಳು ಬೇಕಾದವು.  ಆಮೇಲೆ ಮನೆಗೆ ಮೂರು ಮಕ್ಕಳು ಬಂದವು, ಮೂರೂ ಗಂಡು.  ಆ ಕೂಸು ಅಂದು ಸಾಯಲು ಏನು ಕಾರಣ?  ಅವಧಿಗೆ ಮೊದಲೇ ಹುಟ್ಟಿದ್ದಕ್ಕೆ ಮಗು ಉಳಿಯಲಿಲ್ಲವಾ?  ಅದೊಂದು ದುಃಖವಾದರೆ ಅಕಸ್ಮಾತ್ ಆ ಮಗು ಇನ್ ಕ್ಯುಬೇಟರಿನ ದೋಷದಿಂದ ಕಣ್ಣು ಮುಚ್ಚಿದ್ದರೆ?  ಆ ಪ್ರಶ್ನೆ ಮನೆಯಲ್ಲಿ ಯಾರೂ ದನಿ ಎತ್ತಿ ಕೇಳದಿದ್ದರೂ ಎಲ್ಲರನ್ನೂ ಕೊರೆಯುತ್ತಲೇ ಇತ್ತು.

ಇಂದಿಗೂ ಪ್ರತಿ ಸಲ ಗೌರಿ ಹಬ್ಬ, ದೀಪಾವಳಿ ಬಂದಾಗಲೂ ನಾನು ಮನಸ್ಸಿನಲ್ಲೇ ಲೆಕ್ಕ ಹಾಕುತ್ತೇನೆ, ಆ ಕೂಸು ಬದುಕಿದ್ದಿದ್ದರೆ ಈಗ ಎಷ್ಟು ವರ್ಷಗಳಾಗುತ್ತಿದ್ದವು?  ಹೆಣ್ಣು ಮಗು ಇಲ್ಲದ ಮನೆ ನಮ್ಮದು.  ಪ್ರತಿ ಹಬ್ಬವೂ ಖಾಲಿಯೇ.  ಎಲ್ಲೋ ಯಾವುದೋ ಹೆಣ್ಣು ಮಗು ಮುದ್ದಾಗಿ ಕಂಡರೆ, ನಮ್ಮ ಪಾಪು ಇದ್ದಿದ್ದರೆ ಎಂದು ಮನಸ್ಸು ನಿಟ್ಟುಸಿರಿಡುತ್ತದೆ.  ಬೆಳಗ್ಗೆ ಮೂಗಿನ ಬಳಿ ಪುಟಾಣಿ ಕೊಳವೆ ಹಾಕಿಸಿಕೊಂಡು ಅಮ್ಮನ ಕೈಯಲ್ಲಿ ಕೊನೆಯುಸಿರೆಳೆದ ಆ ಮಗುವಿನ ಚಿತ್ರ ನೋಡಿದಾಗಿನಿಂದ ನನ್ನ ಮನಸ್ಸಿನಲ್ಲಿ ಹಳೆಯ ನೋವು ಮತ್ತೆ ಅಳುತ್ತಲಿದೆ.  ಆ ಮಗುವಿನ ತಲೆಯ ಗುಂಗುರು ಗುಂಗುರು ಕೂದಲು, ಮುಚ್ಚಿದ ಕಣ್ಣುಗಳು, ಗಲ್ಲ…… ದೇವರೇ… ಮಕ್ಕಳು ಹೋದ ನೋವು ಯಾಕೆ ಇದ್ದಕ್ಕಿದ್ದಂತೆ ಹೀಗೆ ಹೊಸನೋವಿನ ತೀವ್ರತೆಯಲ್ಲಿ ಕೊಲ್ಲುತ್ತದೆ?  ಆ ಅಮ್ಮನಿಗೆ ಮತ್ತೆಂದಾದರೂ ತನ್ನ ಕೈಗಳನ್ನು ಸುಮ್ಮನೆ ನೋಡಿಕೊಳ್ಳಲು ಸಾಧ್ಯವೆ?

ಎಪ್ಪತ್ತು ಮಕ್ಕಳು.  ಸರ್ಕಾರ ಎಪ್ಪತ್ತು ಮಕ್ಕಳ ಸಾವಿಗೆ ಎಪ್ಪತ್ತು ಕಾರಣಗಳನ್ನು ಕೊಡುತ್ತಿದೆ,  ಆ ಎಪ್ಪತ್ತು ಕಾರಣಗಳಲ್ಲಿ ಉಸಿರಾಡಲಾಗದೆ ಮಕ್ಕಳು ಸತ್ತವು ಎನ್ನುವ ಸತ್ಯದ ಕಾರಣ ಬಿಟ್ಟು ಮಿಕ್ಕೆಲ್ಲಾ ಇದೆ.  ಎಪ್ಪತ್ತು ಮಕ್ಕಳ ಸಾವು….ಅದೂ ನಮ್ಮ ಅಜಾಗರೂಕತೆಯಿಂದ ಆದ ಸಾವು.  ಈ ಸೂತಕವನ್ನು ಎಂದಾದರೂ ಕಳೆದುಕೊಳ್ಳಬಲ್ಲೆವೆ ನಾವು?  ಪುಟಾಣಿ ನೀಲಿ ಪಾದಗಳ ಎದುರಲ್ಲಿ ನಡೆಯುತ್ತಿರುವ ರಾಜಕಾರಣ ನಮ್ಮ ಕೈಗೆ ಎಂದೂ ಅಳಿಸದ ರಕ್ತದ ಕಲೆಗಳನ್ನು ಅಂಟಿಸಿದೆ.  ಆ ಪುಟ್ಟ ದೇವರುಗಳ ಸಾವಿಗೆ ಕಂಬನಿಯಿಡಲೂ ಬಿಡುವಿಲ್ಲದಂತೆ ಜನ ಸರ್ಕಾರದ ರಕ್ಷಣೆಗೆ ಟೊಂಕ ಕಟ್ಟಿನಿಂತಿರುವುದು ನೋಡಿದರೆ ನಾಚಿಕೆ ಆಗುತ್ತದೆ.  ಒಂದು ಆಸ್ಪತ್ರೆಯಲ್ಲಿ ಈ ಪರಿ ಅಜಾಗರೂಕತೆ ಇದೆ ಎಂಡರೆ ಅದಕ್ಕೆ ಕಾರಣವಾದವರನ್ನು ಹುಡುಕುವ, ಪ್ರಶ್ನಿಸುವ ಸಿಟ್ಟು ಕೂಡ ಜನರಲ್ಲಿ ಮೂಡುತ್ತಿಲ್ಲ ಎಂದರೆ ಎಲ್ಲಿಗೆ ಮುಟ್ಟಿದ್ದೇವೆ ನಾವು?  ಅದಕ್ಕಿಂತ ಜರೂರಾಗಿ ನಮಗೀಗ ಆ ಆಮ್ಲಜನಕದ ಸಿಲೆಂಡರ್ ಗಳನ್ನು ಹೊಂಚಿ ತಂದು, ಮಕ್ಕಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಡಾಕ್ಟರನ್ನು ಬೇಟೆಯಾಡುವುದು ಬೇಕಿದೆ.

ದೇವರೆ…. ಇನ್ನೆಷ್ಟು ವರ್ಷಗಳು, ಇನ್ನೆಷ್ಟು ಮನೆಗಳಲ್ಲಿ ಹಬ್ಬದ ದಿನ ಬೆರಳು ಮಡಚಿ ಮಗುವಿನ ವಯಸ್ಸು ಲೆಕ್ಕಹಾಕುವ, ಕಂಬನಿ ಇಡುವ, ನಿಟ್ಟುಸಿರಿಡುವ ಅಪ್ಪ ಅಮ್ಮಂದಿರುತ್ತಾರೆಯೋ…ನನ್ನ ಕಣ್ಣುಗಳಿಗೆ ಹೆಟ್ಟಿಕೊಂಡಿರುವ ಆ ಮಗುವಿನ ಚಿತ್ರವನ್ನು ಎಂದಾದರೂ ನಾನು ಮರೆತೇನೆಯೇ?

‍ಲೇಖಕರು avadhi

15 August, 2017

2 Comments

  1. ಅಕ್ಕಿಮಂಗಲ ಮಂಜುನಾಥ

    ಓದುತ್ತ ಓದುತ್ತ ಈ ಭ್ರಷ್ಟ ವ್ಯವಸ್ಥೆಯಲ್ಲಿ ಮತ್ತೆಷ್ಟು ಸಂಕಟಗಳು ನಮ್ಮ ಕಣ್ಣ ಮುಂದೆ ಕಾಡುತ್ತಿರುತ್ತವೆಯೋ ಎಂದು ನೋವಾಯಿತು.

  2. Savitri hatti

    ಅಕ್ಕ , ನಮ್ಮ ಅಕ್ಕ ಏಳೂವರೆ ತಿಂಗಳಿಗೆ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟಳು. ಅದಕ್ಕೆ ಯಾವುದೇ ವಿಶೇಷ ವೈದ್ಯಕೀಯ ಉಪಚಾರ ಮಾಡಿರಲಿಲ್ಲ. ಈಗ ಆ ಮಗು ಒಂಭತ್ತನೇ ತರಗತಿಯ ವಿದ್ಯಾರ್ಥಿ…

    ಈಗ ನಡೆದ ಸಾಮೂಹಿಕ ಶಿಶು ಮರಣ ಒಂಥರಾ ಸಾಮೂಹಿಕ ಹತ್ಯೆ ಇದ್ದಂತೆ. ಮರೆಯಲಾದೀತೆ! ಸಾಯುವತನಕ ಆ ತಂದೆ ತಾಯಿಗಳಿಗೆ ಇದು ದುಃಸ್ವಪ್ನ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading