ಆ ಮಕ್ಕಳು ಕಿಲ ಕಿಲ ನಗುತ್ತಲೇ ಇದ್ದರು..

4

ಶುಭ್ರನಗೆಯ ಪ್ರಭಾವಳಿಯೇ ಅಂಥದ್ದು. ಪಾರಿಜಾತದ ಹೂಗಳು ಗಿಡದ ಸುತ್ತಲೆಲ್ಲಾ ಹರಡಿ ಘಮ್ಮನೆಯ ಪರಿಮಳವನ್ನು ಹವೆಯಲ್ಲಿ ಸಿಂಪಡಿಸುವಂತೆ ಸಂತಸದ ತಂಗಾಳಿಯನ್ನು ಶುಭ್ರ ಮುಗುಳ್ನಗೆಯೊಂದು ಯಾವ ಸಂದರ್ಭದಲ್ಲಾದರೂ ತರಬಲ್ಲದು. ಅಲ್ಲೂ ನಗೆಬಿತ್ತನೆಯ ಕಾರ್ಯಕ್ರಮವೇ ನಡೆಯುತ್ತಿತ್ತು. ಎಮಿರೇಟ್ಸ್ ನ ಗಗನಸಖಿಯರು ಪುಟ್ಟ ಪುಟ್ಟ ಪೊಟ್ಟಣಗಳನ್ನು ವಿಮಾನದೊಳಗಿದ್ದ ಮುದ್ದು ಮಕ್ಕಳಿಗೆ ಕೊಡುತ್ತಾ ಕ್ರಿಸ್ಮಸ್ ಹಬ್ಬದ ಸಪ್ರ್ರೈಸ್ ಉಡುಗೊರೆಗಳನ್ನು ಹಂಚುತ್ತಿದ್ದರು. ಎಮಿರೇಟ್ಸ್ ಎಂದು ಮುದ್ರಿತವಾಗಿದ್ದ ಆ ಪುಟ್ಟ ಪೊಟ್ಟಣಗಳಲ್ಲಿ ಏನೆಲ್ಲಾ, ಎಷ್ಟೆಲ್ಲಾ! ಒಂದರಲ್ಲಿ ಪುಟ್ಟ ಕೇಕ್, ಇನ್ನೊಂದರಲ್ಲಿ ಎಮಿರೇಟ್ಸ್ ವಿಮಾನದ ಸುಂದರವಾದ ಮಾಡೆಲ್, ಮತ್ತೊಂದರಲ್ಲಿ ಇನ್ನೂ ಏನೇನೋ… ಮಕ್ಕಳಿಗಂತೂ ಖುಷಿಯೇ ಖುಷಿ!

ಇನ್ನು ಸಾಂತಾಕ್ಲಾಸ್ ಟೋಪಿಯನ್ನು ಧರಿಸಿ ಸಿಕ್ಕ ಒಂದಿಷ್ಟು ಅವಧಿಯಲ್ಲೇ ಮಕ್ಕಳನ್ನು ರಂಜಿಸುತ್ತಿದ್ದ ಗಗನಸಖಿಯರ ಕಣ್ಣುಗಳಲ್ಲೂ ಆ ಮಕ್ಕಳ ಸಂತಸದ್ದೇ ಹೊಳಪು. ನೋಡಲು ಆಟಿಕೆಯಂತಿದ್ದ ಪೋಲರಾಯಿಡ್ ಕ್ಯಾಮೆರಾ ಒಂದನ್ನು ಹಿಡಿದು ಇವರುಗಳು “ಸೇ… ಚೀಈಈಈಈಸ್” ಎಂದರೆ ಮಕ್ಕಳೂ ಕೂಡ ಸಂತೃಪ್ತರಾಗಿ ನಗೆಯನ್ನು ಚೆಲ್ಲುವವರು. ತಕ್ಷಣವೇ ಕ್ಯಾಮೆರಾದಿಂದ ಹೊರಬಂದ ಚಿತ್ರಗಳನ್ನು ಮಕ್ಕಳಿಗೆ ಈ ಗಗನಸಖಿಯರು ನೀಡುವಾಗ ಮಕ್ಕಳ ಉಲ್ಲಾಸವನ್ನು ನೋಡಬೇಕು.

ಹೆಚ್ಚು ಖುಷಿಯಾದ ಮಕ್ಕಳಿಂದ ಒಂದೊಂದು ಸಿಹಿಮುತ್ತೂ ಕೂಡ ಈ ಸುಂದರಿಯರಿಗೆ ಬೋನಸ್.

ಹೀಗೆ ಏರ್ ಪೋರ್ಟುಗಳಲ್ಲಿ, ವೈಮಾನಿಕ ಪ್ರಯಾಣಗಳಲ್ಲಿ ಪ್ರತೀಬಾರಿಯೂ ಏನಾದರೊಂದು ಕತೆಗಳು, ಸ್ವಾರಸ್ಯಕರ ದೃಶ್ಯಗಳು ನನಗೆ ಸಿಕ್ಕೇಸಿಗುತ್ತವೆ. ನಾವೆಲ್ಲರೂ ಹಬ್ಬ, ರಜೆ, ಪ್ರವಾಸ ಅಂತೆಲ್ಲಾ ಮನೆಯವರನ್ನು, ಪ್ರೀತಿಪಾತ್ರರನ್ನು ಸೇರುವ ಸಂಭ್ರಮದಲ್ಲಿದ್ದರೆ ಆ ದಿನಗಳಲ್ಲೂ ನಗುನಗುತ್ತಾ ಗ್ರಾಹಕರ ಸೇವೆಯನ್ನು ಮಾಡುವ ಹಾಸ್ಪಿಟಾಲಿಟಿ ಇಂಡಸ್ಟ್ರಿಯ ಸಿಬ್ಬಂದಿಗಳನ್ನು ಕಂಡರೆ ನನಗೆ ವಿಶೇಷ ಅಭಿಮಾನ.

ಕ್ರಿಸ್ಮಸ್ ಋತುವಿನಲ್ಲಿ ಉಡುಗೊರೆಯ ಮೂಟೆಯನ್ನು ತರುವ ಸಾಂತಾಕ್ಲಾಸ್ ಒಂದು ಕಾಲ್ಪನಿಕ ಪಾತ್ರವಷ್ಟೇ ಆಗಿರಬಹುದು. ಈ ಗಗನಸಖಿಯರೂ ಕೂಡ ಸಾಂತಾಕ್ಲಾಸ್ ಗಿಂತ ಏನು ಕಮ್ಮಿ ಎಂದು ಯೋಚಿಸುತ್ತಾ ಎಮಿರೇಟ್ಸ್ ಏರ್ ಲೈನ್ಸ್ ನ ಒಡೆಯ ನಾನೇ ಎಂಬಂತೆ ಒಳಗೊಳಗೇ ಉಬ್ಬಿಹೋದೆ. ನನ್ನ ನೆನಪಿನ ಬುತ್ತಿಯ ತುಂಬಾ ಇಂಥಾ ಅಪರೂಪದ ಕ್ಷಣಗಳೇ ಹೆಚ್ಚು.

ದೇಶೀಯ ವೈಮಾನಿಕ ಪ್ರಯಾಣಗಳನ್ನು ಅದೆಷ್ಟು ಬಾರಿ ನಡೆಸಿದ್ದರೂ ಅಂತಾರಾಷ್ಟ್ರೀಯ ಪ್ರಯಾಣಗಳ ಅನುಭವವೇ ಬೇರೆ. ವಿಮಾನಗಳ ಗಾತ್ರ, ವೈಭವ, ನಿರ್ವಹಣೆ, ಸೌಲಭ್ಯ, ಊಟೋಪಚಾರ ಹೀಗೆ ಎಲ್ಲದರಲ್ಲೂ ಅಂತಾರಾಷ್ಟ್ರೀಯ ಮಟ್ಟದ ಏರ್ ಲೈನ್ಸ್ ಗಳು ಒಂದು ಹೆಜ್ಜೆ ಮುಂದೆಯೇ ಇರುತ್ತವೆ. ಇನ್ನು ಜಗತ್ತಿನ ಅತ್ಯುತ್ತಮ ಏರ್ ಲೈನ್ಸ್ ಗಳಲ್ಲೊಂದಾದ ಎಮಿರೇಟ್ಸ್ ಬಗ್ಗೆ ಹೇಳಬೇಕೇ? ದಿನವಿಡೀ ನನ್ನನ್ನು ಬೇತಾಳದಂತೆ ಕಚ್ಚಿಕೊಂಡಿದ್ದ ಸುಸ್ತೂ ಕೂಡ ಏರ್ ಪೋರ್ಟಿನಲ್ಲಿ ನನ್ನನ್ನು ಬೀಳ್ಕೊಟ್ಟು ತನ್ನ ದಾರಿ ಹಿಡಿದಿತ್ತು. ಇನ್ನು ಆಸನಕ್ಕೆ ಅಳವಡಿಸಲಾಗಿದ್ದ ತರಹೇವಾರಿ ಎಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಒಂದು ಕ್ಷಣ ಗೊಂದಲಕ್ಕೊಳಗಾದ ನಾನು ಪಕ್ಕದ ಆಸನದಲ್ಲಿದ್ದ ಬಾಲಕನೊಬ್ಬನನ್ನು ನೋಡುತ್ತಾ, ಅವನನ್ನೇ ಅನುಸರಿಸುತ್ತಾ, ಒಂದೊಂದು ಸಾಧನಗಳ ಜೊತೆಗೂ ಸ್ವಪರಿಚಯ ಮಾಡಿಕೊಂಡೆ. ಕೆಲವೊಮ್ಮೆ ಕಾಪಿ ಮಾಡುವುದೂ ಕೂಡ ಮರ್ಯಾದೆ ಉಳಿಸಿಕೊಳ್ಳುವುದರಲ್ಲಿ ಪ್ರಯೋಜನಕ್ಕೆ ಬರುತ್ತದೆ ನೋಡಿ.

ಆ ಬಾಲಕ ಇಂಥಾ ಪ್ರಯಾಣಗಳನ್ನು ಅದೆಷ್ಟು ಬಾರಿ ಮಾಡಿದ್ದನೋ. ಬಂದ ಕೂಡಲೇ ತನ್ನ ಪುಟ್ಟ ಚೀಲವೊಂದನ್ನು ತಲೆಯ ಮೇಲಿನ ಗೂಡಿನಲ್ಲಿ ಎಸೆದು, ಸೀಟ್ ಬೆಲ್ಟ್ ಬಿಗಿದು, ಬೆಚ್ಚನೆ ಕಂಬಳಿಯನ್ನೂ ಹೊದ್ದು, ಚಕ್ಕಳಮಕ್ಕಳ ಹಾಕಿಕೊಂಡು ಆಸನಕ್ಕೆ ಅಳವಡಿಸಲಾಗಿದ್ದ ಟಿ.ವಿ. ಮುಂದೆ ಕೂತುಬಿಟ್ಟಿದ್ದ. ನೆಂಟರ ಮನೆಗೆ ಬಂದವನಂತೆ ಹೆಡ್ ಫೋನ್ ಅನ್ನು ಸಿಕ್ಕಿಸಿಕೊಂಡು, ಕುಳಿತ ಒಂದೆರಡು ನಿಮಿಷಗಳಲ್ಲೇ `ಸೆಟಲ್’ ಆಗಿಬಿಟ್ಟಿದ್ದ ಅವನನ್ನು ನೋಡಿ ಖುಷಿಯಾಯಿತು. ವಿಲಾಸ ಅಂದರೆ ಹೀಗಿರಬೇಕಪ್ಪಾ!

ದೆಹಲಿಯಿಂದ ದುಬೈಗಿರುವುದು ಸುಮಾರು ಎರಡೂವರೆ ಗಂಟೆಯ ಪ್ರಯಾಣ. ವಿಮಾನದೊಳಗೆ ಹೊಕ್ಕ ಕೂಡಲೇ ಸುಖನಿದ್ರೆಗೆ ಜಾರಬೇಕು ಎಂದು ಲೆಕ್ಕ ಹಾಕಿದ್ದ ನಾನು ಚಾನೆಲ್ ಗಳನ್ನು ಬದಲಾಯಿಸುತ್ತಾ ಮನರಂಜನೆಯ ಮೋಡ್ ಗೆ ಸರಿದುಹೋದೆ. ಹೊಸ ಯುವ ನಟರನ್ನೇ ಹೊಂದಿದ್ದ ಸಾಮಾಜಿಕ ಕಳಕಳಿಯ ಕನ್ನಡ ಚಿತ್ರವೊಂದು ಸುಮಾರು ಒಂದು ಗಂಟೆಗಳ ಕಾಲ ಒಳ್ಳೆಯ ಮನರಂಜನೆಯನ್ನು ನೀಡಿತು. ನಂತರವೂ ವಿವಿಧ ಭಾಷೆ ಮತ್ತು ದೇಶಗಳ ಚಲನಚಿತ್ರಗಳಿಗೆ ಕಣ್ಣಾಡಿಸುತ್ತಾ ಹೋದ ನಾನು ಕಡೆಗೂ ನಿಂತಿದ್ದು ಬಹುಷಃ ಆಗಲೇ ಬಹುತೇಕ ಭಾಗ ಮುಗಿದಿದ್ದ ಪಾಕಿಸ್ತಾನಿ ಚಿತ್ರವೊಂದರಲ್ಲಿ.

ಆ ಚಿತ್ರದ ಅದ್ದೂರಿ ಸೆಟ್, ಸ್ಫುರದ್ರೂಪಿ ನಟನಟಿಯರು, ಇಂಪಾದ ಸಂಗೀತ… ಇವೆಲ್ಲವೂ ಅದೆಷ್ಟು ಕಣ್ಸೆಳೆಯುವಂತಿತ್ತು ಅಂದರೆ ಇದೇನು ಕರಣ್ ಜೋಹರ್ ಸಿನೆಮಾ ನೋಡುತ್ತಿರುವೆನೇ ಎಂದನ್ನಿಸತೊಡಗಿತ್ತು. ಪಾಕಿಸ್ತಾನದಲ್ಲೂ ಇಂಥಾ ಚಿತ್ರಗಳು ಬಿಡುಗಡೆಯಾಗುತ್ತವೆಯೇ ಎಂದು ಅಚ್ಚರಿ ಬೇರೆ. ಪಾಕಿಸ್ತಾನೀ ಚಿತ್ರದಲ್ಲಿ “ಬಲ್ಲೇ… ಬಲ್ಲೇ…” ಎಂಬ ಹಾಡು ಬರುತ್ತಿದ್ದರೆ ಮನದಲ್ಲೆಲ್ಲಾ ಪಂಜಾಬಿನದ್ದೇ ಕಂಪು.

ಮುಂದೆ ಕೆಲ ತಿಂಗಳುಗಳ ಬಳಿಕ ಬಾಲಿವುಡ್ ಚಿತ್ರ `ರಯೀಸ್’ ಬಿಡುಗಡೆಯಾದ ನಂತರವೇ ಆ ಪಾಕಿಸ್ತಾನೀ ಸುಂದರಿ ಯಾರೆಂದು ತಿಳಿದು ಬಂತು. ನಾನಂದು ನೋಡಿದ್ದ ಚಿತ್ರ ಪಾಕಿಸ್ತಾನದ ಇತ್ತೀಚಿನ ಹಿಟ್ ಚಿತ್ರಗಳಲ್ಲೊಂದಾದ, ಮಾಹಿರಾ ಖಾನ್ ಮತ್ತು ಹೂಮಾಯೂನ್ ಸಯೀದ್ ಮುಖ್ಯಭೂಮಿಕೆಯಲ್ಲಿದ್ದ `ಬಿನ್ ರೋಯೇ’.

ಅಂತೂ ಮೊದಲ ಹಂತದ ಪ್ರಯಾಣವು ಭರ್ಜರಿಯಾಗಿಯೇ ಮುಗಿದಿತ್ತು. ನಾವು ದುಬೈಯ ಧರೆಗಿಳಿದಾಗಿತ್ತು.

**************

ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣವು ನೋಡಲು ದೈತ್ಯ ಶಾಪಿಂಗ್ ಮಾಲ್ ನಂತಿದೆ ಅನ್ನುವುದನ್ನು ಬಿಟ್ಟರೆ ನಾವು ಹೊರದೇಶದಲ್ಲಿದ್ದೇವೆ ಎಂದೇನೂ ಅನ್ನಿಸಲಿಲ್ಲ. ಎತ್ತ ನೋಡಿದರೂ ಭಾರತೀಯ ಮುಖಗಳೇ. ಎಲ್ಲೆಲ್ಲೂ ಏಷ್ಯನ್ನರದ್ದೇ ಕಾರುಬಾರು. ಆ ವಿಲಾಸಿ ಏರ್ ಪೋರ್ಟಿನಲ್ಲಿ ಏನೇನಿದೆ ಎಂಬುದನ್ನು ವಿಸ್ತ್ರುತವಾಗಿ ನೋಡಲು ಒಂದಿಡೀ ದಿನವೇ ಬೇಕಾಗಬಹುದೇನೋ! ಆದರೆ ಅದಕ್ಕೆಲ್ಲಾ ಸಮಯವಿಲ್ಲದ ನಾವು ಟ್ರಾನ್ಸಿಟ್ ವೀಸಾಗಾಗಿ ದುಬೈ ಏರ್ ಪೋರ್ಟಿನ ಇಮಿಗ್ರೇಷನ್ ವಿಭಾಗದತ್ತ ನಡೆದಿದ್ದೆವು.

ಕಣ್ಣುಹಾಯಿಸಿದಲ್ಲೆಲ್ಲಾ ಹನುಮಂತನ ಬಾಲದಂತಿದ್ದ ಉದ್ದನೆಯ ಕ್ಯೂಗಳೇ. ಎಮಿರೇಟ್ಸ್ ಏರ್ ಲೈನ್ಸ್ ದುಬೈಯಲ್ಲಿ ತಂಗಿಕೊಳ್ಳಲು ಹೋಟೇಲ್ ವ್ಯವಸ್ಥೆಯನ್ನು ಮಾಡಿದ್ದರಿಂದ ಏರ್ ಪೋರ್ಟ್ ಬಿಟ್ಟು ಹೋಟೇಲ್ ಕಡೆಗೆ ಹೋಗಬೇಕಾಗಿತ್ತು. ಆದರೆ ನಮ್ಮ ಪಾಸ್ ಪೋರ್ಟುಗಳಲ್ಲಿ ಅಂಗೋಲಾ ವೀಸಾ ಇತ್ತೇ ಹೊರತು ದುಬೈ ವೀಸಾ ಅಲ್ಲ. ಹೀಗಾಗಿ ತಾತ್ಕಾಲಿಕ ಬಳಕೆಗಾಗಿರುವ ಟ್ರಾನ್ಸಿಟ್ ವೀಸಾಗಳನ್ನು ಪಡೆಯುವುದು ಕಡ್ಡಾಯ. ಅತ್ತ ಇಮಿಗ್ರೇಷನ್ ವಿಭಾಗದಲ್ಲಿ ಕುಳಿತಿದ್ದ ಶ್ವೇತವಸ್ತ್ರಧಾರಿ ಸಿಬ್ಬಂದಿಯೊಬ್ಬ ಕಿವಿ ತುರಿಸುತ್ತಾ, ತಲೆ ಕೆರೆಯುತ್ತಾ, ಮೂಗಿನ ಹೊಳ್ಳೆಗಳ ಆಳವನ್ನು ತನ್ನ ತೋರುಬೆರಳಿನಿಂದ ಅಳೆದು ನೋಡುತ್ತಾ ಸಮಯ ಪೋಲುಮಾಡುತ್ತಿದ್ದರೆ ಇತ್ತ ನನ್ನ ಬೆನ್ನ ಹಿಂದಿರುವ ಜನರ ಸಾಲು ಮಾತ್ರ ಉದ್ದವಾಗುತ್ತಲೇ ಹೋಗುತ್ತಿತ್ತು.

ಪಾಪ ಈತನಿಗೆ ಬೋರಾಗುತ್ತಿದೆಯೇನೋ ಎಂದು ಸುಮ್ಮನೆ ಮಾತಿಗಿಳಿದರೆ “ಏನೋ ನಿನ್ನ ಗೋಳು… ತೆಪ್ಪಗಿರು” ಎಂದು ಹೇಳಿ ನನ್ನ ಬಾಯಿಯನ್ನೇ ಮುಚ್ಚಿಸಿಬಿಟ್ಟ ಅರಬ್ ಸಾಹೇಬ. ಭಾರತದ ವಿವಿಧ ಏರ್ ಪೋರ್ಟುಗಳಲ್ಲಿ ಯಾವಾಗಲೂ ಸೌಜನ್ಯದ ಸೇವೆಯನ್ನೇ ಆಸ್ವಾದಿಸಿದ್ದ ನನಗೆ ಇದೊಂದು ಹೊಸ ಅನುಭವ. ಆದರೆ ಗಾಂಜಾದ ಅಮಲಿನಲ್ಲಿದ್ದಂತೆ ಮಾತನಾಡುತ್ತಿದ್ದ ಆತನನ್ನು ಕಂಡು ನನಗೆ ತಮಾಷೆಯೆನಿಸಿತ್ತು. ಈತ ಕೊಂಚ ಮೈಗಳ್ಳನಾಗಿರಬಹುದೇ ಹೊರತು ಇನ್ನೇನೂ ಅಲ್ಲ ಎಂಬುದು ನನ್ನ ಯೋಚನೆ. ಹೀಗೆ ಒಂದೊಂದೇ ಹಂತಗಳನ್ನು ದಾಟಿ ಕೊನೆಗೂ ಹೋಟೇಲಿನ ಬಸ್ಸೊಂದು ಏರ್ ಪೋರ್ಟಿಗೆ ಬಂದು ನಮ್ಮನ್ನು ಕರೆದೊಯ್ಯುವಷ್ಟರಲ್ಲಿ ಬರೋಬ್ಬರಿ ಮೂರು ಗಂಟೆಗಳು ಕಳೆದುಹೋಗಿದ್ದವು.

ಹೋಟೇಲಿನ ರೂಮಿಗೆ ತೆರಳಿ ಹಾಸಿಗೆಗೆ ಮೈಚೆಲ್ಲಿದ ನಾನು ಸಹಜವಾಗಿಯೇ ಕೈಗಡಿಯಾರದತ್ತ ಕಣ್ಣು ಹಾಯಿಸಿದ್ದೆ. ನಮ್ಮ ಮುಂದಿನ ವೈಮಾನಿಕ ಪ್ರಯಾಣಕ್ಕೆ ಕೆಲವೇ ಕೆಲವು ಗಂಟೆಗಳಷ್ಟೇ ಬಾಕಿಯಿದ್ದವು. ಅಷ್ಟಕ್ಕೂ ನಿದ್ರಿಸುವುದೇ ಆದರೆ ಎರಡೂವರೆ ಗಂಟೆಗಳ ಕಾಲವಷ್ಟೇ ನಾನು ನಿದ್ರಿಸಬಹುದಾಗಿತ್ತು. ಮೊದಲೇ ಸ್ವಭಾವತಃ ಕುಂಭಕರ್ಣನಾಗಿದ್ದ ನನಗೆ ಆ ಯೋಚನೆಯಿಂದಲೇ ದಿಗಿಲಾಗಿತ್ತು. ಈಗೇನಾದರೂ ಮಲಗಿದರೆ ಏಳುವ ಪ್ರಶ್ನೆಯೇ ಇಲ್ಲ ಎಂದು ಲೆಕ್ಕಹಾಕಿದ ನಾನು ಸುಮ್ಮನೆ ಈ ಎರಡೂವರೆ ಗಂಟೆಗಳನ್ನು ಸೋಫಾದಲ್ಲಿ ತೂಕಡಿಸುತ್ತಲೇ ಕಳೆದೆ. ಹೇಗೂ ಮುಂದಿನ ಪ್ರಯಾಣದಲ್ಲಿ ನಿದ್ರಿಸಿದರಾಯಿತು ಎಂಬ ಲೆಕ್ಕಾಚಾರ ನನ್ನದು. ಮುಂಜಾನೆ ಐದರ ಹೊತ್ತಿಗೆ ಉಪಾಹಾರವನ್ನು ಸವಿದು ತಯಾರಾಗಿ ನಿಂತಿದ್ದ ನಮ್ಮನ್ನು ಅದೇ ಬಸ್ಸು ಮತ್ತೆ ಏರ್ ಪೋರ್ಟಿಗೆ ಕರೆದೊಯ್ದಿತ್ತು.

ದುಬೈಯಿಂದ ಎರಡನೇ ಬಾರಿ ಆಗಸಕ್ಕೆ ಚಿಮ್ಮಿದ ನಮಗೆ ಮತ್ತೆ ಭರ್ತಿ ಏಳೂವರೆ ಗಂಟೆಗಳ ತಡೆರಹಿತ ಹಾರಾಟ. ಆಫ್ರಿಕಾದ ನಾಲ್ಕೈದು ದೇಶಗಳನ್ನು ದಾಟಿ ಲುವಾಂಡಾದವರೆಗೆ ಬರಬೇಕು. ಮತ್ತದೇ ಪುಷ್ಕಳ ಭೋಜನ, ರೆಡ್ ವೈನ್ ಮತ್ತು ಒಂದರ ಹಿಂದೊಂದರಂತೆ ಚಲನಚಿತ್ರ ವೀಕ್ಷಣೆ. ನಾನು ವಿಮಾನದ ಒಂದು ಭಾಗದಲ್ಲಿದ್ದರೆ ನನ್ನೊಂದಿಗೆ ಬಂದಿದ್ದ ಅಧಿಕಾರಿ ವಿಮಾನದ ಇನ್ನೊಂದು ಮೂಲೆಯಲ್ಲಿ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತವೋ ಏನೋ ವಿಮಾನವು ಪ್ರಯಾಣಿಕರಿಂದ ತುಂಬಿಹೋಗಿತ್ತು. ಈ ಬಾರಿಯೂ ಕಿಟಕಿ ಬದಿಯ ಆಸನವು ಸಿಕ್ಕಿಲ್ಲದ್ದಕ್ಕೆ ಸೇಡು ತೀರಿಸುವವನಂತೆ ನಾನು ಬೆನ್ನುಬೆನ್ನಿಗೆ ಚಲನಚಿತ್ರಗಳನ್ನು ನೋಡುತ್ತಲೇ ಹೋದೆ. ನನ್ನ ಪಕ್ಕದಲ್ಲಿದ್ದ ತಿಂಡಿಪೋತ ಟರ್ಕಿಷ್ ದಂಪತಿಗಳು ಪ್ರಯಾಣದುದ್ದಕ್ಕೂ ಸ್ಕಾಚ್ ಸವಿಯುವುದರಲ್ಲೇ ವ್ಯಸ್ತರಾಗಿದ್ದರಿಂದ ಅವರನ್ನು ಮಾತಿಗೆಳೆದು ಪಾಪ ಕಟ್ಟಿಕೊಳ್ಳುವುದು ಬೇಡವೆಂದು ನಾನು ತೀರ್ಮಾನಿಸಿದ್ದೆ. ನಿದ್ದೆ ಮತ್ತೊಮ್ಮೆ ಮರೆತುಹೋಗಿತ್ತು.

ಏಳೂವರೆ ಗಂಟೆಗಳ ಸುದೀರ್ಘ ಪ್ರಯಾಣದ ನಂತರ ನಮ್ಮ ಎಮಿರೇಟ್ ಏರ್ ಲೈನ್ಸ್ ವಿಮಾನವು ಲುವಾಂಡಾದ ಧರೆಗಿಳಿದಿತ್ತು. ಅಂತೂ ನಾನು ಆಫ್ರಿಕಾಕ್ಕೆ ಬಂದಿಳಿದಿದ್ದೆ. ವಿಮಾನದ ಹೊರಕ್ಕೆ ಬಂದಿಳಿದರೆ ಕಣ್ಣಿಗೆ ರಾಚುತ್ತಿದ್ದ ರಣಬಿಸಿಲು. ದೆಹಲಿಯ ಮೈಕೊರೆಯುವ ಚಳಿಗೆ ಥರ್ಮಲ್ಸ್, ಟೀ-ಶರ್ಟು, ಸ್ವೆಟ್ಟರ್, ಜಾಕೆಟ್, ಟೋಪಿ ಹೀಗೆ ಒಂದರ ಮೇಲೊಂದು ಬಟ್ಟೆಗಳನ್ನು ಧರಿಸಿ ಬೆರ್ಚಪ್ಪನಂತೆ ಬಂದಿದ್ದ ನನಗೆ ಎಲ್ಲವನ್ನೂ ಒಂದೊಂದಾಗಿ ಬಿಚ್ಚುವುದೇ ಮೊದಲ ಕೆಲಸವಾಯಿತು. ನಾನು ಈವರೆಗೆ ಕೇಳಿ ತಿಳಿದಿದ್ದ ಕಳಪೆ ಆಫ್ರಿಕನ್ ಏರ್ ಪೋರ್ಟುಗಳಿಗಿಂತ ವಿಭಿನ್ನವಾಗಿ, ವ್ಯವಸ್ಥಿತವಾಗಿ ಕಂಡ ಲುವಾಂಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನನಗೆ ಸಮಾಧಾನವನ್ನು ತಂದಿದ್ದಂತೂ ಸತ್ಯ.

ಲ್ಯಾಂಡಿಂಗ್ ಮುಗಿಸಿ ಹಳದಿ ಜ್ವರ ಲಸಿಕೆಯ ದಾಖಲಾತಿಗಳು ಮತ್ತು ಇಮಿಗ್ರೇಷನ್ ವಿಭಾಗಕ್ಕೆ ನಡೆದ ನಮಗೆ ಕಂಡ ಮೊಟ್ಟಮೊದಲ ಅಚ್ಚರಿಯೆಂದರೆ ಚೀನೀಯರ ದಂಡು. ಲುವಾಂಡಾ ಏರ್ ಪೋರ್ಟಿನಲ್ಲಿ ಅದೆಷ್ಟು ಮಂದಿ ಚೀನೀ ಪ್ರಯಾಣಿಕರು ತುಂಬಿಕೊಂಡಿದ್ದರೆಂದರೆ ನಾವು ಬಂದಿಳಿದಿದ್ದು ಲುವಾಂಡದಲ್ಲೋ ಅಥವಾ ಬೀಜಿಂಗ್ ಏರ್ ಪೋರ್ಟಿನಲ್ಲೋ ಎಂಬಂತಾಗಿತ್ತು. ಲುವಾಂಡಾ ಏರ್ ಪೋರ್ಟು ಇತರ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುವ ಪರಿಣಾಮವಾಗಿ ಇಮಿಗ್ರೇಷನ್ ಕಾರ್ಯಾರ್ಥವಾಗಿ ಮತ್ತದೇ ಉದ್ದುದ್ದ ಸಾಲುಗಳು.

ಏರ್ ಪೋರ್ಟಿನಲ್ಲಿದ್ದ ಅಂಗೋಲನ್ ಸಿಬ್ಬಂದಿಗಳನ್ನು ಮತ್ತು ಬೆರಳೆಣಿಕೆಯ ಆಪ್ರಿಕನ್/ಐರೋಪ್ಯ ಪ್ರಯಾಣಿಕರನ್ನು ಹೊರತುಪಡಿಸಿದರೆ ಚೀನೀಯರದ್ದೇ ಕಾರುಬಾರು. ರಾಶಿ ರಾಶಿ ಪಾರಿವಾಳಗಳು ಒಂದೇ ಜಾಗದಲ್ಲಿ ಸೇರಿದರೆ ಹೇಗೆ ಗುಟುರು ಹಾಕುತ್ತವೆಯೋ ಅಂತೆಯೇ ಚೀನೀಯರ ನಿಲ್ಲದ ಕರಪರ ಕರಪರ ಮಾತು, ನಗೆ, ಚೆಲ್ಲಾಟಗಳು. ನಮ್ಮಲ್ಲಿಯ ಸಂತೆಗಳೇ ವಾಸಿಯೇನೋ ಎಂಬಂತೆ ನನ್ನ ಜೊತೆಗಿದ್ದ ಅಧಿಕಾರಿಯನ್ನು ನೋಡಿದರೆ ಅವರ ಮುಖದಲ್ಲೂ ನಗು. ಈ ಮಧ್ಯೆ ನಮ್ಮೊಂದಿಗಿದ್ದ ಪೋರ್ಚುಗೀಸ್ ಸಹಪ್ರಯಾಣಿಕನೊಬ್ಬ ಕಾಲಹರಣ ಮಾಡಲು ನಮ್ಮೊಂದಿಗೆ ಮಾತಿಗಿಳಿಯುತ್ತಾ “ಇಲ್ಲಿಯ ಸುರಕ್ಷಾ ಸಿಬ್ಬಂದಿಗಳೊಂದಿಗೆ ಹೆಚ್ಚು ಮಾತನಾಡಲು ಹೋಗಬೇಡಿ. ವೃಥಾ ಹಣ ಕೀಳುತ್ತಾರೆ”, ಎಂದು ಕಾಳಜಿಯಿಂದ ಹೇಳಿಕೊಂಡ. ನಾವು ಮೊದಲ ಬಾರಿ ಬಂದಿದ್ದು ಎಂದು ನಮ್ಮ ಮುಖಭಾವಗಳಿಂದಲೇ ಆತನಿಗೆ ತಿಳಿಯಿತೋ ಏನೋ. ಆತನ ಅತ್ಯಮೂಲ್ಯ ಸಲಹೆಗೆ ಧನ್ಯವಾದಗಳನ್ನರ್ಪಿಸಿದ ನಾವುಗಳು ಮುಂದಿನ ಹಂತಗಳನ್ನು ದಾಟಲು ಸಾಗಿದೆವು.

ಈವರೆಗೆ ಇಂಗ್ಲಿಷ್ ಭಾಷೆಯನ್ನು ಸ್ವರ್ಣಸಿಂಹಾಸನದಲ್ಲಿರಿಸಿದ್ದ ನಮಗೆ ಲುವಾಂಡಾದಲ್ಲಿ ಇಂಗ್ಲಿಷ್ ಭಾಷೆಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂದು ತಿಳಿದಾಗ ಹೇಗಪ್ಪಾ ಮುಂದೆ ಎಂದು ಮನದಲ್ಲೇ ತೌಡುಕುಟ್ಟಿದೆವು. ಇಮಿಗ್ರೇಷನ್ ವಿಭಾಗದ ಅಧಿಕಾರಿಗಳು ಪೋರ್ಚುಗೀಸ್ ಭಾಷೆಯಲ್ಲಿ ಅದೇನು ಕೇಳಿದರೋ, ನಮಗೆಷ್ಟು ಅರ್ಥವಾಯಿತೋ ದೇವರೇ ಬಲ್ಲ. ಸುಮ್ಮನೆ ಮಾತಾಡುವ ಅಧಿಕಪ್ರಸಂಗತನವನ್ನು ತೋರಿ ಮತ್ತೆ ಲುವಾಂಡಾ ಏರ್ ಪೋರ್ಟಿನಲ್ಲೇ ಉಳಿಯುವ ಇಚ್ಛೆಯೂ ನಮಗಿರಲಿಲ್ಲವಾದ್ದರಿಂದ ಟ್ರಾಫಿಕ್ ಪೋಲೀಸಪ್ಪನಂತೆ ಕೈಸಂಜ್ಞೆಗಳನ್ನು ಬಳಸುತ್ತಾ, ಹೌದು-ಅಲ್ಲಗಳಿಗೆ ಕೋಲೇಬಸವನಂತೆ ತಲೆಯಾಡಿಸುತ್ತಾ ಹೇಗೋ ಎಲ್ಲವನ್ನೂ ಮುಗಿಸಿದೆವು. ಹೀಗೆ ದಾಖಲಾತಿ ಪರಿಶೀಲನೆಗಳ ವಿವಿಧ ಹಂತಗಳನ್ನು ಮುಗಿಸಿ ಲುವಾಂಡಾ ಏರ್ ಪೋರ್ಟಿನಿಂದ ಹೊರಬರುವಷ್ಟರಲ್ಲಿ ಸಂಜೆಯ ಐದು ದಾಟಿತ್ತು. ಸೂರ್ಯ ಮೆತ್ತಗೆ ತಣ್ಣಗಾಗಲಾರಂಭಿಸಿದ್ದ.

“ಬೆಂವಿಂದು… ಬೆಂವಿಂದು… (ಸ್ವಾಗತ… ಸ್ವಾಗತ…)”, ಎನ್ನುತ್ತಾ ಆಗಮನದ ಮುಖ್ಯದ್ವಾರದಲ್ಲಿ ನಿಂತಿದ್ದ ಇಬ್ಬರು ತರುಣರು ನಮ್ಮನ್ನು ಸ್ವಾಗತಿಸಿದರು. ಭಾರದ ಲಗೇಜುಗಳನ್ನು ಮಾತಿಲ್ಲದೆ ಈ ಇಬ್ಬರಿಗೆ ಹಸ್ತಾಂತರಿಸಿದ ನಾವುಗಳು ಅವರನ್ನೇ ಹಿಂಬಾಲಿಸುತ್ತಾ ಮುನ್ನಡೆದೆವು.

ಬೆಂವಿಂದು ಅ ಅಂಗೋಲ… ರಿಪಬ್ಲಿಕ್ ಆಫ್ ಅಂಗೋಲಾ ದೇಶಕ್ಕೆ ಸುಸ್ವಾಗತ…!

‍ಲೇಖಕರು avadhi

September 27, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: