ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಆ ದಿನಗಳು….' – ಡಾ ಶಿವಾನಂದ ಕುಬಸದ ಬರೀತಾರೆ

 

-ಡಾ.ಶಿವಾನಂದ ಕುಬಸದ

ಹೌದು, ಆ ದಿನಗಳ ನೆನಪೆ ಅಪ್ಯಾಯಮಾನ, ನೆನಪಿಸಿಕೊಂಡರೆ ರೋಮಾಂಚನ. “ಶಿಕ್ಷಕರ ದಿನ”ದ ಈ ಸಂದರ್ಭದಲ್ಲಿ ಎಲ್ಲ ನೆನಪಾಗುತ್ತಿವೆ. ಎಂಥಾ ಸುಖವಿತ್ತಾಗ ..!! ಕಷ್ಟಗಳಿಲ್ಲ, ಜವಾಬ್ದಾರಿಯಿಲ್ಲ, ನಾಳಿನ ಚಿಂತೆಯಿಲ್ಲ. ಅದೇಕೋ ‘ಶಿಕ್ಷಕರು’ ಅಂದೊಡನೆ ಪ್ರಾಥಮಿಕ ಶಾಲಾ ಶಿಕ್ಷಕರೇ ನೆನಪಾಗುತ್ತಾರೆ, ‘ವಿದ್ಯಾರ್ಥಿ ದೆಸೆ’ ಎಂದರೆ ಆ ಶಾಲೆಗಳೇ ನೆನಪಾಗುತ್ತವೆ.
ಆಗ ನಮ್ಮ ಹಳ್ಳಿಯಲ್ಲಿಯ ಶಾಲೆ ಹಂಚು ಹೊದಿಸಿದ ಹಳೆಯ ಕಟ್ಟಡ. ಬ್ರಿಟಿಷರು ಕಟ್ಟಿಸಿದ್ದು. ಸುತ್ತ ಆಟದ ಮೈದಾನ. ಕಡಿಮೆ ಮಳೆಯ ಬಿಜಾಪುರ ಜಿಲ್ಲೆಯಾದರೂ ಸುತ್ತಲೂ ಗಿಡಗಳು. ನಾಲ್ಕೇ ರೂಮಿನ ಆ ಕಟ್ಟಡದಲ್ಲಿ ಏಳು ಕ್ಲಾಸುಗಳು. ಶಾಲೆಯ ಹೆಸರು,‘’ಜೀವನ ಶಿಕ್ಷಣ ಕನ್ನಡ ಗಂಡು ಮಕ್ಕಳ ಸರಕಾರೀ ಶಾಲೆ’’ ಹೌದು. ಆಗಿನ ಎಲ್ಲ ಶಾಲೆಗಳೂ ಜೀವನ ಶಿಕ್ಷಣದ ಕೇಂದ್ರಗಳಾಗಿದ್ದವು. ಬಡಿಗತನ, ಹೆಣಿಕೆ, ಕೈತೋಟ ಮಾಡುವುದು, ನೀತಿಪಾಠಗಳು, ಇತ್ಯಾದಿ, ಆಗಿನ ‘ಕರಿಕುಲಂ’ನಲ್ಲಿ ಸೇರಿದ್ದವು.

ನಾನು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ನನಗೆ ಭರ್ತಿ ಆರು ವರ್ಷಗಳು. ಹಠ ಮಾಡುತ್ತಲೇ ಶಾಲೆಗೆ ಹೊರಟಿದ್ದೆ. ಕೈಯಲ್ಲಿ ನಮ್ಮವ್ವ ಹೆಣೆದುಕೊಟ್ಟ ಪಾಟೀ ಚೀಲ, ಅದರಲ್ಲಿ ೬*೮ ಇಂಚಿನ ಕಟ್ಟಿಗೆಯ ಕಟ್ಟಿನ ಒಂದು ಪಾಟಿ, ಒಂದು ಬಳಪ, ಇಷ್ಟೇ … ಮನೆಯಿಂದ ಇನ್ನೂ ಒಂದೆರಡು ಮಾರು ಹೋಗಿರಲಿಲ್ಲ, ನನ್ನನ್ನು ಹಿಡಿದ ನಮ್ಮಣ್ಣನ ಕೈ ಕೊಸರಿ ಅಳುತ್ತಾ ಓಡಿ ಬಂದಿದ್ದೆ. ಮನೆಯಿಂದ ಎರಡು ನೂರು ಮೀಟರ್ ದೂರದಲ್ಲಿದ್ದ ಶಾಲೆಗೆ ಹೋಗಲೂ “ಹೋಮ್ ಸಿಕ್ ನೆಸ್ “!! . ಶಾಲಾ ಮಾಸ್ತರರೇ ಮನೆಗೆ ಬಂದು ರಮಿಸಿ ಕರೆದುಕೊಂಡು ಹೋಗಿ,ಮೊದಲ ದಿನದ ಪಾಠ ಪ್ರಾರಂಭಿಸಿದ್ದೆ ತಡ, ತಿರುಗಿ ನೋಡುವ ಪ್ರಮೇಯವೇ ಇಲ್ಲ. ಅವರ ‘ಕಲಿಸುವ ಪ್ರೀತಿ, ರೀತಿಯೇ ‘ ಅಂಥದ್ದು…
ಇನ್ನೂ ಎಲ್ಲ ಈಗಲೇ ನಡೆದಂತೆ ನೆನಪಿದೆ. ಆ ದಿನಗಳೇ ಅಂಥವು, ಎಂದೂ ಮರೆಯದಂಥವು….ಮೈದಾನದಲ್ಲಿ ನಮ್ಮನ್ನು ಸಾಲಾಗಿ ನಿಲ್ಲಿಸಿ ಮಗ್ಗಿ ಬಾಯಿಪಾಠ ಮಾಡಿಸಿದ್ದು, ತಪ್ಪು ಮಾಡಿದವರಿಗೆ ಸರಿ ಮಾಡಿದವನಿಂದ ಕಪಾಳಿಗೆ ಏಟು ಕೊಡಿಸಿದ್ದು, ಅದಕ್ಕೆ ಕೆಲವರು ತಮಗೆ ಸರಳ ಮಗ್ಗಿ ಬರುವಂಥ ಸ್ಥಳ ಹುಡುಕಿ ನಿಲ್ಲುತ್ತಿದ್ದರು, ಹದಿಮೂರು, ಹತ್ತೊಂಭತ್ತು, ಇಪ್ಪತ್ಮೂರು, ಇಪ್ಪತ್ತೊಂಭತ್ತರ ಮಗ್ಗಿ ಬರಬಾರದಂಥ ಜಾಗೆ ನೋಡಿ ನಿಲ್ಲುತ್ತಿದ್ದರು. ಆದರೆ ಒಂದು ವರ್ಷ ಮುಗಿಯುವುದರೊಳಗೆ ಎಲ್ಲರೂ ಪರ್ಫೆಕ್ಟ್…
ಎರಡೂ ಕೈಗಳನ್ನು ಮುಂದೆ ಕಟ್ಟಿ “ತಿರುಕನ ಕನಸು” ಮಂಗಗಳ ಉಪವಾಸ” ಸೋಮೇಶ್ವರ ಶತಕ” “ಪುಣ್ಯ ಕೋಟಿ” ಗಳನ್ನು ಬಾಯಿಪಾಠ ಮಾಡಿಸಿದ ರೀತಿ ಹೇಗಿತ್ತೆಂದರೆ ಈಗಲೂ ಆ ಪದ್ಯಗಳ ಬಹುಭಾಗ ನಾನು ಹೇಳಬಲ್ಲೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಗಳಂದು ಯುನಿಫಾರ್ಮ್ ತೊಟ್ಟು, ‘ಗಾಂಧೀಟೊಪ್ಪಿಗೆ’ ಹಾಕಿಕೊಂಡು ಮಾಡಿದ “ಪ್ರಭಾತ ಫೇರಿ” ಶನಿವಾರಗಳಂದು ಮಾಡಿದ ‘ಲೆಜಿಮ್’ ಆಟಗಳನ್ನು ಅದೆಂತು ಮರೆಯುವುದು?
ನಾನು ಮೊದಲ ಸಲ ಪೆನ್ ಹಿಡಿದದ್ದು ಐದನೆಯ ಕ್ಲಾಸಿಗೆ ಹೋದಾಗ. ಒಳಗಿನ ‘ಮಸಿ’ ಕಾಣುವಂಥ ಪೆನ್ನನ್ನು ನಮ್ಮ ಅಜ್ಜಿ ಬಿಜಾಪುರದಿಂದ ನಾಲ್ಕಾಣೆ ಕೊಟ್ಟು ತಂದಿದ್ದಳು. ಊರಿಗೆಲ್ಲ ತೋರಿಸಿ ಸಂಭ್ರಮ ಪಟ್ಟಿದ್ದೆ. ಹೈಸ್ಕೂಲ್ ಗೆ ಹೋಗುವ ವರೆಗೂ ಅದನ್ನು ಕಾಪಾಡಿಕೊಂಡು ಬಂದಿದ್ದೆ.
ಪ್ರತಿ ಶನಿವಾರ ನಾವೆಲ್ಲ ಹುಡುಗರೇ ಕೂಡಿ ನೆಲ ಸಾರಿಸುತ್ತಿದ್ದೆವು. ದನಗಳಿದ್ದವರು ತಮ್ಮ ಮನೆಯಿಂದ ಸೆಗಣಿ ಹೊತ್ತು ತರುವುದು, ಅದನ್ನು ನೀರಲ್ಲಿ ಕಲೆಸಿ ಹದವಾದ ರಾಡಿ ಮಾಡಿ ಎಲ್ಲ ಕೂಡಿ ನೆಲ ಸಾರಿಸುತ್ತಿದ್ದೆವು. ಆಗ ಅದೊಂದು ಸಂತೋಷದಾಯಕ ಕ್ರಿಯೆ. ಜೊತೆಗೇ ನಮ್ಮ ಶಾಲೆಯನ್ನು ನಾವೇ ಸ್ವಚ್ಚಗೊಳಿಸಿದ ನೆಮ್ಮದಿ. ಸೋಮವಾರ ನಾವು ಶಾಲೆಗೆ ಬರುವುದರೊಳಗೆ ಆ ಸೆಗಣಿಯೆಲ್ಲ ಒಣಗಿ, ನಾವು ನೆಲಕ್ಕೆ ಕುಳಿತರೆ ನೆಲ ತಂಪು, ಜೊತೆಗೆ ಕೋಣೆಯ ತುಂಬೆಲ್ಲ ಸೆಗಣಿಯ ‘ಘಮಲು’. ಇದೆಲ್ಲದರ ಮೇಲೆ ನಮ್ಮ ಮಾಸ್ತರು ಹೇಳುವ ಜಾನಪದ
“ಕಸವ ಹೊಡೆಯುವ ಕೈ ಕಸ್ತೂರಿ ನಾತಾವ
ಬಸವಣ್ಣ ನಿನ್ನ ಸೆಗಣೀಯ ಬಳದ ಕೈ
ಎಸಳ ಯಾಲಕ್ಕಿ ಗೊನಿ ನಾತ….”
ಕೃಷಿ ಪ್ರಧಾನವಾದ ನಮ್ಮ ಹಳ್ಳಿಯ ಮಕ್ಕಳಿಗೆ ಇದಕ್ಕಿಂತ ಒಳ್ಳೆಯ ಹಾಡು, ಪಾಠ ಬೇಕೇ …?
ಪ್ರತಿ ‘ಶಿಕ್ಷಕರ ದಿನ’ದಂದು ನನ್ನ ಮನಸ್ಸು ಇಂಥವುಗಳನ್ನು ನೆನೆದು ಮುದಗೊಳ್ಳುತ್ತದೆ.
ಈಗಿನವರಿಗೆ ಈ ಸುಖ ಸಿಕ್ಕೀತೇ..?
 

‍ಲೇಖಕರು G

6 September, 2014

7 Comments

  1. suresh rajamane

    ನಿಜ ಸರ್ ಆಗಿನ ಪದ್ದತಿಯಲ್ಲಿ ತುಂಬಾ ಜೀವನ ಪಾಠಗಳೇ ಇರುತ್ತಿದ್ದವು ಈಗಿನ ಪಾಠಗಳೂ ಇವೆ ಆದರೆ ಕೇವಲ ಪರಿಕ್ಷೇಗೆ ಸೀಮಿತವಾಗಿವೆ..
    ನಾನು ಕಲಿತದ್ದು ಹಳ್ಳಿ ಶಾಲೆ ಹಂಚಿನ ಮನೆ ತರಹ ಇತ್ತು ಈ ಸಾರಿಸುವ ಪರಿಪಾಠ ನಮ್ಮಲ್ಲಿಯೂ ಇತ್ತು ಶಾಲೆಯ ಮುಂದೆ ಕೈಪಂಪು ಬಕೀಟ ತಗೊಂಡು ಮನೆ ಮನೆ ತಿರುಗಿ ಸಗಣಿ ತಂದು ಸಾರಿಸುತ್ತೆದ್ದೆವು ಜೊತೆಗೆ ನಾವು ಕೂಡೋ ಜಾಗಕ್ಕೆ ಮತ್ತಷ್ಟು ಲೇಪಿಸುತ್ತಿದ್ದೆವು..
    ಆ ದಿನಗಳು ತುಂಬಾ ಬೆಲೆಬಾಳುವಂತಹವು ನಮ್ಮ ಬದುಇನಲಿ ನಾವೆಲ್ಲ ಹಾಗೆ ಕಲಿತದ್ದರಿಂದಲೋ ಏನೋ ತಕ್ಕಮಟ್ಟಿಗೆ ಪರಿಸ್ಥಿತಿಗಳನ್ನು ಅರ್ಥೈಸಿಕೊಳ್ಳೋ ಸಾಮರ್ಥ್ಯ ಬಂದಿದೆ… ನಿಮ್ಮ ಬರಹ ನನ್ನನ್ನು ನನ್ನ ಬಾಲ್ಯದ ದಿನಗಳತ್ತ ಕರೆದೊಯ್ಯುವಂತೆ ಮಾಡಿತು..
    ಸೂಪರ್

  2. Anand Kunchanur

    Nice writing sir..nanna primary shaaleya dinagalu nenapaadavu! 🙂

  3. Shrishail

    Tumba Channagide Sir,
    Adbutavagide…

  4. ಅ೦ಗಡಿ ಇಂದುಶೇಖರ

    ಸರ್, “ಜೀವನ ಶಿಕ್ಷಣ ಕನ್ನಡ ಗಂಡುಮಕ್ಕಳ ಸರಕಾರೀ ಶಾಲೆ” ಅನ್ನುವದರ ಬದಲು “ಸರಕಾರೀ ಹಿರಿಯ ಪ್ರಾಥಮಿಕ ಕನ್ನಡ ಗಂಡುಮಕ್ಕಳ ಶಾಲೆ, ರಟ್ಟೀಹಳ್ಳಿ”… ಅಂತಾ ಮಾತ್ರ ಬದಲಾವಣೆ ಮಾಡಿದರೆ ಸಾಕು, ಇದು ನನ್ನ ಅನುಭವ ಲೇಖನವಾಗುತ್ತದೆ. ಬಾಲ್ಯ ನೆನಪಿಸಿದ್ದಕ್ಕೆ ಶಿವಾನಂದ ಸರ್ ಗೆ ಧನ್ಯವಾದಗಳು….

  5. Aravind

    Good one, as always…

  6. Ganapathi Magalu

    ನಿಜ. ಹಿಂದಿನ ತಲೆಮಾರಿನವರು ಹಳ್ಳಿಗಳಲ್ಲಿ ಕಲಿತವರಿಗೆಲ್ಲಾ ಈ ತರಹದ ಅನುಭವ ಆಗಿರುತ್ತದೆ. ನಮ್ಮ ತಂದೆ ತಾಯಿಯರಿಗೆ ನಾವು ಮನೆ, ಶಾಲೆಗಳಲ್ಲಿ ಕೆಲಸ ಮಾಡುವುದು ಕಲಿಕೆಯ ಒಂದು ಭಾಗವವಾಗಿ ನೋಡುತ್ತಿದ್ದರು. ಈಗ? ನಾವೆ ನಮ್ಮ ಮಕ್ಕಳಿಗೆ ಹೀಗೆ ಅನುಭವ ಪಡೆಯಿರಿ ಅನ್ನುತ್ತೇವಾ?

  7. ಹನುಮಂತ ಅನಂತ ಪಾಟೀಲ, ರಿಪ್ಪನ್ ಪೇಟೆ

    Nija andin prathamika shaalaa dinagal nenapu indigoo mana daaladalli acchaliyde beroorive. nimma lekhan andin gata dinamaanagal ondu sundar sansmarane.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading