ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ
ಮಹಿಪಾಲ ರೆಡ್ಡಿ ಮುನ್ನೂರ್
ಸನ್ಮಾನ್ಯ ಮುಖ್ಯಮಂತ್ರಿಗಳೇ,
ಲಿಂಗಣ್ಣ ಸತ್ಯಂಪೇಟೆ ಅವರ ಸಾವಿನ ತನಿಖೆ ಏನಾಯ್ತು..?
ಇದು ನನ್ನೊಬ್ಬನದೇ ಪ್ರಶ್ನೆ ಅಲ್ಲ.
ಸಮಸ್ತ ಕಲಬುಗರ್ಿಯ ಜನರ ಪ್ರಶ್ನೆ. ಅಷ್ಟೇ ಅಲ್ಲ, ಹೈದ್ರಾಬಾದ ಕನರ್ಾಟಕದವರ ಪ್ರಶ್ನೆ. ಇನ್ನೂ ಹೇಳಬೇಕೆಂದರೆ, ನಾಡಿನ ಸಮಸ್ತ ಪ್ರಜ್ಞಾವಂತರ ಪ್ರಶ್ನೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ ಹೇಗೆ ಎಂದು ಪ್ರಶ್ನಿಸುವ ಹೊಸ ಪತ್ರಕರ್ತರ ಪ್ರಶ್ನೆ. ಹಿರಿಯ ಲೇಖಕರೊಬ್ಬರ ಸಾವೇ ಹೀಗಾದರೆ ಹೇಗೆ ಎಂಬ ಸಾಹಿತಿ ಬಳಗದ ಪ್ರಶ್ನೆ. ಬಸವ ಮಾರ್ಗವನ್ನು ಕಂಡುಕೊಂಡು, ಆ ಮೂಲಕ ಸಾರ್ವಜನಿಕರಲ್ಲಿ ಬಸವ ಬೆಳಕು ನೀಡುವಲ್ಲಿ ಯಾವತ್ತೂ ಮುಂಚೂಣಿಯಲ್ಲಿ ಇರುತ್ತಿದ್ದ ಲಿಂಗಣ್ಣ ಸತ್ಯಂಪೇಟೆ ಅವರದ್ದು, ಬಹಿರಂಗವಾಗದ ಅಸಹಜ ಸಾವನ್ನು ಕಂಡ ಬಸವಾಭಿಮಾನಿಗಳ ಸ್ವಾಭಿಮಾನಕ್ಕೆ ಆಗಿರುವ ಧಕ್ಕೆ. ಆದರೂ ಇದೂವರೆಗೆ ತನಿಖೆ ಆಗದಿರುವುದೇ ಸಮಸ್ತರ ಸೋಜಿಗದ ಪ್ರಶ್ನೆ.
ಲಿಂಗಣ್ಣ ಸತ್ಯಂಪೇಟೆ ಅವರ ಅಸಹಜ ಸಾವಿಗೆ ಮೂರು ತಿಂಗಳಾಯಿತು. ಅದ್ಯಾಕೋ ಗೊತ್ತಿಲ್ಲ. ಅವರ ಸಾವಿನ ರಹಸ್ಯ ಅರ್ಥಮಾಡಿಕೊಳ್ಳಲಾಗುತ್ತಿಲ್ಲ.
ದಿಟ್ಟ ಬರಹಗಾರ, ಸಾಹಿತಿ, ನಿಭರ್ೀಡೆಯ ಪತ್ರಕರ್ತ ಎಲ್ಲವೂ ಆಗಿದ್ದ ಲಿಂಗಣ್ಣ ಸತ್ಯಂಪೇಟೆ ಅವರ ಬಗ್ಗೆ ಎಲ್ಲವನ್ನೂ ಅರಿತುಕೊಂಡಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಿಐಡಿ ತನಿಖೆಗೆ ಒಪ್ಪಿಸಿದ್ದು ಗೊತ್ತು. ಆದರೆ ಅದೇನಾಯಿತು ಎಂಬುದೇ ಯಾರಿಗೂ ಗೊತ್ತಾಗಲಿಲ್ಲ.
ಹೌದು, ಲಿಂಗಣ್ಣ ಸತ್ಯಂಪೇಟೆ, ಕಂಡದ್ದನ್ನು ಕಂಡ ಹಾಗೆ ಬರೆಯಬಲ್ಲ ಛಾತಿ ಹೊಂದಿದ್ದರು. ಲಿಂಗಣ್ಣ ಸತ್ಯಂಪೇಟೆ ‘ಹೀಗಿದ್ದರು……’ ಎಂದು ಅಂದುಕೊಳ್ಳುತ್ತಿರುವಾಗಲೇ ‘ಈಗಿಲ್ಲ…..’ ಎಂಬುದನ್ನು ಕಳೆದ ಎರಡ್ಮೂರು ತಿಂಗಳಿಂದ ನಂಬುವುದಕ್ಕೆ ಆಗುತ್ತಲೇ ಇಲ್ಲ.
ಮೇಷ್ಟ್ರು ಆಗಿದ್ದವರು, ‘ಲಂಕೇಶ ಪತ್ರಿಕೆ’ಗೆ ಬರೆಯುವ ಮೂಲಕ ಪತ್ರಕರ್ತರಾಗಿ ಹೊರಹೊಮ್ಮಿದವರು. ರೈತ ಹೋರಾಟಗಳಿಂದಾಗಿ ಜನಮನ ಸೆಳೆದವರು. ‘ಅಗ್ನಿ ಅಂಕುರ’ ಪತ್ರಿಕೆಯ ಬರಹಗಳಿಂದ ಚಾಟಿಯೇಟು ನೀಡಿದವರು, ವಯಸ್ಸಾದಂತೆಲ್ಲಾ ಮಾಗಿದ ಅನುಭವಾಗಿ ಬಸವ ಫಿಲಾಸಫಿಯನ್ನು ಹೆಚ್ಚು ಓದಿಕೊಂಡು, ‘ಬಸವ ಮಾರ್ಗ’ ಎಂಬ ಧಾಮರ್ಿಕ ಮ್ಯಾಗಝೀನ್ ಪ್ರಕಟಿಸುತ್ತಿದ್ದರು. ಆ ಮೂಲಕ ಬಸವ ಅನುಯಾಯಿಗಳಿಗೊಂದು ರಹದಾರಿ, ಬಸವಣ್ಣನನ್ನು ಅರಿಯಲು ಯತ್ನಿಸುವವರಿಗೊಂದು ಕೈಪಿಡಿ, ವಚನಕಾರರನ್ನು ಪರಿಚಯಿಸಿಕೊಳ್ಳುವವರಿಗೊಂದು ಪರಿಚಯಿಕೆ, ಸ್ವಾಮಿಕುಲ ಚಕ್ರವತರ್ಿಗಳಿಗೊಂದು ‘ಮಾರ್ಗ’, ಶರಣರಿಗೊಂದು ‘ಅನುಭವ ಮಂಟಪ’ದ ಮುಖವಾಣಿ, ಶರಣ ಚಿಂತಕರಿಗೊಂದು ವೇದಿಕೆ, ಹಾಗೇ ಸುಮ್ಮನೆ ಓದುವವರಿಗೊಂದು ದೀವಿಗೆ, ಸಮಸ್ತರಿಗೊಂದು ಬಸವ ಬೆಳಗು ಆಗಿದ್ದ ಬಸವ ‘ಮಾರ್ಗ’ಕಾರ ಕಳೆದು ಹೋದರು ಎಂಬ ಸತ್ಯವನ್ನು ನುಂಗಲು ಈಗಲೂ ಆಗುತ್ತಿಲ್ಲ.
‘……ಇಷ್ಟು ಬೇಗ ಯಾಕೆ ಹೋದಿರಿ?
ಹೋಗುವಾಗ ನಮ್ಮನ್ನೆಲ್ಲಾ ಯಾಕೆ ನೆನೆಸಿಕೊಳ್ಳಲಿಲ್ಲ? ಕಡೆ ಗಳಿಗೆಯಲ್ಲಿ ನಮಗೊಂದು ಮಾತು ಕೂಡ ಹೇಳಲಿಲ್ಲ?…’ ಹಾಗಂತ ಕೇಳಬೇಕೆನಿಸಿದರೂ ಬಾಯಿಂದ ಮಾತೇ ಹೊರಡುತ್ತಿಲ್ಲ.
ಹೇಳುವುದಕ್ಕೇನೂ ಇಲ್ಲದಿದ್ದರೆ ಲಿಂಗಣ್ಣ ಸತ್ಯಂಪೇಟೆ ಅವರು ಬರೆಯುವ ಗೋಜಿಗೆ ಹೋಗುತ್ತಿರಲಿಲ್ಲ. ಇಲ್ಲಿಯವರೆಗೂ ಅವರು ಬರೆದಿದ್ದಾರಲ್ಲಾ…. ಅದರಲ್ಲಿ, ಏನಾದರೊಂದು ಬಾಳಿಗೆ, ನಮ್ಮ ಬದುಕಿಗೆ, ಬಸವಾದಿ ಶರಣರ ಬದುಕಿನ ಬೋಧನೆಗಳಿಗೆ ಸಂಬಂಧಿಸಿದ ವಿಷಯಗಳನ್ನೆತ್ತಿ ಹೇಳುತ್ತಾ ಬಂದಿದ್ದಾರೆ.
ಅದು ಲಂಕೇಶ ಪತ್ರಿಕೆ ಹಾಗೂ ಅಗ್ನಿ ಅಂಕುರ ಪತ್ರಿಕೆಗಳ ಮೂಲಕ ಮಾನವೀಯ ಕಾಳಜಿಯ ವರದಿಗಳಾಗಿರಬಹುದು, ರಾಜಕಾರಣಿಗಳ ಲಂಪಟತನವಾಗಿರಬಹುದು, ಅಧಿಕಾರಿಗಳ ಲಂಚಗುಳಿತನವಾಗಿರಬಹುದು, ಬಸವ ಮಾರ್ಗದ ಮೂಲಕ ಆಚಾರ-ವಿಚಾರಗಳಲ್ಲಿ ಕಾಯಕ ಸಂಸ್ಕೃತಿಯನ್ನು ಮಾಡಿಕೊಂಡು ಬರುತ್ತಿರುವ ಶರಣ ಪ್ರಮಥರ ಸಾಧನೆಯನ್ನು ಎತ್ತಿಹಿಡಿಯುವ ಲೇಖನಗಳಾಗಿರಬಹುದು, ಢೋಂಗಿ ಸ್ವಾಮಿಗಳನ್ನು ಬೆತ್ತಲೆ ಮಾಡುವ ನಿಷ್ಠುರ ವರದಿಗಳಾಗಿರಬಹುದು…. ಹೀಗೆ ಇನ್ನೇಸೋ….!
ಅವರದು ಅರ್ಥವಿಲ್ಲದ ವ್ಯರ್ಥ ಬರವಣಿಗೆಯಲ್ಲ.
ಅವರ ಬರವಣಿಗೆಯಲ್ಲಿದ್ದ ಒಗರು, ವಿಚಾರ ವ್ಯವಸ್ಥೆ, ಹೇಳುವ ತಾಕತ್ತು ಬೇರಾರಲ್ಲೂ ಇಲ್ಲ. ಆಡು ಮಾತಿನಲ್ಲಿ ಸೊಗಯಿಸಿ ಬರುವ ಅವರ ಬರವಣಿಗೆಗೆ ಓದುಗರನ್ನು ಒಮ್ಮೆಲೇ ಆತ್ಮೀಯರನ್ನಾಗಿಸಿಕೊಳ್ಳುವ ಸ್ವಭಾವವಿತ್ತು. ಅಲ್ಲಿ ವಿಚಾರಗಳಿಗೆ ಕೊರತೆಯಿಲ್ಲ. ನಮಗೆ ಒಪ್ಪಿಗೆ ಆಗುತ್ತದೋ ಇಲ್ಲವೋ ವಿವೇಚನೆಗೆ ಎಳೆಯುವ ಅವರ ಬರವಣಿಗೆಯಲ್ಲಿ ಕಾವಿದ್ದು ಮಾನವೀಯ ಕಂಪನವಿತ್ತು. ದುಷ್ಟತನವನ್ನು ಮೂಟೆಕಟ್ಟಿ ಎಳೆದು ಅಪ್ಪಳಿಸುವ ಎದೆಗಾರಿಕೆ ಹೊಂದಿದ್ದರು. ಲವಲವಿಕೆಯ ಅಗ್ಗಳಿಕೆಯಿತ್ತು. ಅವರಲ್ಲಿದ್ದ ಆತ್ಮವಿಶ್ವಾಸ ಅಸದೃಶವಾಗಿತ್ತು. ಬೌದ್ಧಿಕ ಬಲ ಇರುವ ಕಾರಣದಿಂದಾಗಿಯೇ ಅನ್ಯಾಯಗಳನ್ನು ಸಹಿಸಿಕೊಳ್ಳುತ್ತಿರಲಿಲ್ಲ. ಆಷಾಢಭೂತಿಗಳ ವಿರುದ್ದ ಸೆಡ್ಡು ಹೊಡೆದು ನಿಲ್ಲುತ್ತಿದ್ದರು. ಸತ್ಯಕ್ಕೆ ತಲೆಬಾಗುತ್ತಿದ್ದರು. ಅಸತ್ಯ ಕಂಡರೆ ಹಿಡಿದು ಬಾರಿಸುತ್ತಿದ್ದರೇನೋ ಎಂಬಷ್ಟರ ಮಟ್ಟಿಗೆ ಸಿಟ್ಟಿಗೇಳುತ್ತಿದ್ದರು.
ಲಿಂಗಣ್ಣ ಸತ್ಯಂಪೇಟೆ ಅವರ ಬರಹ ಬಿಸಿಲಲ್ಲಿ ಹಾಕಿದ ಬಣವೆಯಂತಲ್ಲ. ಅವರ ಬರಹ ಓದುವುದೆಂದರೆ, ಹುಣಸೆಹಣ್ಣಿಗೆ ಉಪ್ಪು-ಖಾರ-ಬೆಲ್ಲ ಸೇರಿಸಿ, ಬೆರೆಸಿ, ಕುಟ್ಟಿ ಮಾಡಿಕೊಂಡ ಉಂಡೆಯನ್ನು ಚಪ್ಪರಿಸಿದಂತೆ, ತಿಂದಷ್ಟೂ ತಿನ್ನಬೇಕೆನ್ನುವ ಚಪಲ.
ಅವರ ಬರಹ ಎಷ್ಟು ಸೊಗಸೋ, ಮಾತೂ ಅಷ್ಟೇ ಸೊಗಸು. ಹರಟೆಮಲ್ಲರಿಗೆ ಅಲ್ಲಿ ಅವಕಾಶಗಳಿಲ್ಲ. ನಡೆ ನುಡಿ ಒಂದಾಗದವರ ಮಾತುಗಳಿಗೆ ಒಪುತ್ತಿರಲಿಲ್ಲ. ಆದರೆ, ವಿಷಯಗಳನ್ನು ಚಚರ್ಿಸಲು ಸ್ನೇಹಿತರನ್ನು ಬಯಸುತ್ತಿದ್ದರು.
ಎರಡ್ಮೂರು ಸಲ ಶಹಾಪುರದ ಮನೆಗೆ ಹೋಗಿದ್ದೆ. ಪ್ರೀತಿಯಿಂದ ಬರಮಾಡಿಕೊಂಡಿದ್ದರು. ತಾವು ಬರೆಯುತ್ತ ಕುಳಿತಿದ್ದರೂ ನನಗಾಗಿ ಸಮಯವನ್ನು ನೀಡಿದರು. ಬರೆಯುವ ಸಂದರ್ಭದಲ್ಲಿ ಬಂದು ತೊಂದರೆ ಮಾಡಿರುವುದಕ್ಕೆ ಕ್ಷಮೆ ಕೇಳಿದರೆ, ‘ಅದೆಲ್ಲ ಇದ್ದದ್ದೇ’ ಎಂದು ಹೇಳಿ, ಕೂಡಿಸಿಕೊಂಡು ಉಭಯಕುಶಲೋಪರಿ ಸಾಂಪ್ರತ ಮಾತುಗಳು ನಡೆಯುತ್ತಿದ್ದವು. ಕೊನೆಗೆ ಊಟ ಮಾಡಿಸದೇ ಎಂದಿಗೂ ನನ್ನನ್ನು ಕಳಿಸಿಯೇ ಇಲ್ಲ. ಬೇಡವೆಂದರೂ ಕೇಳುತ್ತಿರಲಿಲ್ಲ.
ಇಷ್ಟೆಲ್ಲ ಇದ್ದರೂ ಇತ್ತೀಚೆಗೆ, ತೀರಾ ಇತ್ತೀಚೆಗೆ ಸಾಫ್ಟ್ ಆಗಿದ್ದರು ಎಂದು ಅನಿಸುತ್ತಿತ್ತು. ಅವರು ಆಡುವ ಮಾತುಗಳು ತಂದೆಯೊಬ್ಬ ತನ್ನ ಮಕ್ಕಳಿಗೆ ತಿಳಿಹೇಳುವ ರೀತಿಯಲ್ಲಿ ನನಗೆ ಸಾಕಷ್ಟು ಹೇಳಿದ್ದಾರೆ. ಅವರ ಪ್ರತೀ ಮಾತುಗಳು ಕೇಳಿದಾಗಲೂ ನನಗೆ ನನ್ನ ತಂದೆ ನೆನಪಾಗಿದ್ದರು. ಅವರ ಮಕ್ಕಳಿಗೆ ಹೇಗೆ ಹೇಳುತ್ತಿದ್ದರೋ….. ನನಗೂ ಹಾಗೇ ಹೇಳುತ್ತಿದ್ದರು.
ಕಳೆದ ವರ್ಷ ಅಮ್ಮ ಪ್ರಶಸ್ತಿಗೆ ದಶಮಾನೋತ್ಸವದ ಸಂಭ್ರಮ ಇತ್ತು. ಯಾವತ್ತೂ ಪ್ರಶಸ್ತಿಗಳಿಗೆ ಒಪ್ಪುವುದಿಲ್ಲ ಅವರು. ಹಾಗಂತ ಶಿವರಂಜನ್ಗೆ ಹೇಳಿ, ತಂದೆಗೆ ಒಪ್ಪಿಸಬಹುದೇ ಎಂದು ಕೇಳಿದ್ದೆ. ಆದರೆ, ‘ನನ್ನ ಮಾತಿಗಿಂತ ನಿನ್ನ ಬಗ್ಗೆ ಅವರಿಗೆ ಅಭಿಮಾನವಿದೆ. ನೀನೇ ಮಾತಾಡು’ ಎಂದಿದ್ದರು ಶಿವರಂಜನ್. ನೇರವಾಗಿ ಅವರಿಗೆ ಫೋನ್ ಮಾಡಿದೆ. ಅವರಿಗೆ ಅಮ್ಮ ಪ್ರಶಸ್ತಿ ಬಗ್ಗೆ ಗೊತ್ತಿತ್ತು. ಕಳೆದ ಹತ್ತು ವರ್ಷಗಳಿಂದ ಮಾಡುತ್ತ ಬರುತ್ತಿರುವ ಈ ಕಾರ್ಯದ ಬಗ್ಗೆ ಅವರಿಗೆ ಹೆಮ್ಮೆಯಿತ್ತು. ‘ಮನೆಯವರಿಗೇ ಪ್ರಶಸ್ತಿ ಕೊಟ್ರೆ ಹೆಂಗ್, ಹೊರಗಿನವರಿಗೆ ಕೊಡು’ ಅಂದಿದ್ದರು. ‘ಅದೆಲ್ಲ ಗೊತ್ತಿಲ್ಲರೀ, ನೀವು ಒಪ್ಪಬೇಕು’ ಅಂತ ಲಾಡಕೀ ಮಾತಾಡಿದ್ದೆ. ಮರು ಮಾತನಾಡದೇ, ಒಪ್ಪಿಕೊಂಡಿದ್ದರು. ಇದನ್ನು ಕೇಳಿಯೇ ಅನೇಕರು ಆಶ್ಚರ್ಯವೂ ಆಗಿದ್ದರು.
ಅಪ್ರಿಯ ಎನಿಸುವ ಸಂಗತಿಗಳಿಗೆ ಟೀಕೆ ಮಾಡುವ ಗುಣ ಹೇಗಿತ್ತೋ, ಪ್ರಿಯ ಎನಿಸುವ ಒಳ್ಳೆಯ ಕಾರ್ಯಗಳಿಗೆ ಉತ್ತೇಜನ, ಪ್ರೋತ್ಸಾಹ ಮಾಡುವ ಗುಣವೂ ಇತ್ತು ಅವರಲ್ಲಿ.
ಲಿಂಗಣ್ಣ ಸತ್ಯಂಪೇಟೆ ಅವರಿಗೆ ಅಮ್ಮ ಪುರಸ್ಕಾರ ನೀಡಿ ಗೌರವಿಸಿದ್ದೆ. ಪ್ರಶಸ್ತಿ ಸ್ವೀಕರಿಸಿ ಅಂದು ಅವರಾಡಿದ ಮಾತುಗಳು, ಎಂದಿಗೂ ಮರೆಯುವುದಿಲ್ಲ. ಮರುದಿನ ಬೆಳಿಗ್ಗೆ ಮನೆಗೆ ಬಂದಿದ್ದರು. ಅವರ ಜೊತೆಗೆ, ನಾಡಿನ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂತರ್ಿ ಇದ್ದರು. ಮೊಸರು ಜೊತೆಗೆ ಇದ್ದ ಒಗ್ಗರಣೆ ತಿನ್ನುತ್ತಲೇ, ನನ್ನ ಹೆಂಡತಿಯೊಂದಿಗೆ ಮಾತಾಡುತ್ತಿದ್ದರು. ಮಗಳನ್ನು ಮಾತಾಡಿಸಿದಂತೆ, ಸೊಸೆಯೊಂದಿಗೆ ಮಾತಾಡಿಸಿದಂತ್ತಿತ್ತು. ಆವತ್ತು ಅವರು ಹೇಳಿದ ಬುದ್ದಿಮಾತು ಇಂದಿಗೂ, ಎಂದಿಗೂ ಮಾಯವಾಗುವುದಿಲ್ಲ.
‘ಅಪ್ಪ -ಅಮ್ಮನ ಬಗ್ಗೆ ನೀವಿಬ್ಬರೂ ಇಟ್ಟುಕೊಂಡಿರುವ ಪ್ರೀತಿ ಇದೆಯಲ್ಲ… ಅದಕ್ಕೆ ಶರಣಾಥರ್ಿ’ ಎಂಬಂತಹ ಮಾತಾಡಿದ್ದರು.
ಲಿಂಗಣ್ಣ ಸತ್ಯಂಪೇಟೆ ಅವರ ಸಾವಿನ ಒಂದೆರಡು ವಾರದ ಆಸುಪಾಸಿನಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದ ಎರಡೂವರೆ ತಿಂಗಳಿಗೆ ಕನ್ನಡ ಭವನಕ್ಕೆ ನಡೆದುಕೊಂಡು ಬಂದಿದ್ದರು. ಅವರು ಬರುತ್ತಿರುವ ವಿಷಯ ಗೊತ್ತು ಮಾಡಿಕೊಂಡಿದ್ದ ಪರಿಷತ್ತಿನ ಗೌರವ ಕಾರ್ಯದಶರ್ಿ ಸುರೇಶ ಬಡಿಗೇರ, ಇನ್ನೋರ್ವ ಕಾರ್ಯದಶರ್ಿ ಬಿ.ಎಚ್.ನಿರಗುಡಿ ಅವರು ಲಿಂಗಣ್ಣ ಸತ್ಯಂಪೇಟೆ ಅವರನ್ನು ಸನ್ಮಾನಿಸುವುದಕ್ಕಾಗಿ ಶಾಲು, ಪುಸ್ತಕದ ತಯಾರಿ ಮಾಡಿದ್ದರು. ಕನ್ನಡ ಭವನದೊಳಗೆ ಬರುತ್ತಲೇ ಶುಭ ಹಾರೈಸಿದ್ದರು.
‘ಪರವಾಗಿಲ್ಲ, ನೀನು ಬಂದ ಮೇಲೆ ಸಾಹಿತ್ಯ ಕಾರ್ಯಕ್ರಮಗಳು ಚೆನ್ನಾಗಿ ಆಗುತ್ತಿವೆ. ಹೀಂಗ ಮಾಡಿಕೊಂಡು ಹೋಗು. ಕಟ್ಟಡ ಕಟ್ಟೋದಕ್ಕಿಂತ ಗುಲ್ಬರ್ಗದೊಳಗ ಸಾಹಿತ್ಯ ಕಾರ್ಯಕ್ರಮಗಳು ಕಡಿಮೆ ಆಗ್ಯಾವ. ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡು. ಒಳ್ಳೆಯ ಹೆಸರು ತರ್ತೀ ಅಂತ ಭರವಸೆ ನನಗಿದೆ. ನಿಮ್ಮ ಟೀಂ ಕೂಡ ಆ್ಯಕ್ಟಿವ್ ಇದೆ’ ಎಂದರು.
ಮೊದಲ ಬಾರಿ ಕನ್ನಡ ಭವನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ‘ಇದೆಲ್ಲ ಯಾಕಪ್ಪ’ ಎಂದರೂ ನಾವು ಕೇಳಲಿಲ್ಲ. ನಂತರ ಅವರನ್ನು ಬೀಳ್ಕೊಡಲು ಕನ್ನಡ ಭವನದ ಗೇಟ್ವರೆಗೂ ನಡೆದುಕೊಂಡು ಬಂದೆವು. ಕಾರಿನಲ್ಲಿ ಕೂತು, ಕೈಯಾಡಿಸಿ, ‘ಹೋಗಿ ಬರ್ತೀನಿ’ ಅಂದರು. ಆವತ್ತು ಆಡಿರುವ ಮಾತು, ಮಾಡಿದ ಟಾ ಟಾ.. ಅದೇ ಕೊನೆಯಾಯಿತು. ಆ ತಲೆಮಾರಿನ ತಳಮಳವೊಂದು ತಣ್ಣಗಾಯಿತು. ಇನ್ನ್ಯಾವತ್ತೂ ಕನ್ನಡ ಭವನಕ್ಕೆ ಅವರು ಬರುವುದಿಲ್ಲ ಎಂಬುವದನ್ನು ನೆನೆಸಿಕೊಂಡರೆ, ದುಃಖ ಉಮ್ಮಳಿಸುತ್ತದೆ.
ಅವರು ಇನ್ನಿಲ್ಲ ಅಂತ ಅಂದುಕೊಂಡ ಸಂದರ್ಭದಲ್ಲಿ, ‘ನಿಮ್ಮ ನೆನಹು ಮತ್ತು ಹಾಕಿಕೊಟ್ಟ ಮಾರ್ಗ ನಮಗೆಲ್ಲಾ ದೀವಿಗೆ. ಹಾಗಂತ ಮೋಡದಾಚೆಯ ಲೋಕದೊಳಗಿಂದ ನಮಗೆ ಹರಸಿ’ ಎಂಬ ಮನವಿ ಮಾಡುತ್ತಲೇ, `ನೀವೇನೋ ಹರಸುತ್ತೀರಿ, ಆದರೆ, ನಿಮ್ಮ ಸಾವಿನ ರಹಸ್ಯವನ್ನು ಗೆಲ್ಲುವುದರಲ್ಲಿ ನಮ್ಮನ್ನಾಳುತ್ತಿರುವ ಈ ಪ್ರಭುಗಳು ವಿಫಲರಾಗುತ್ತಿದ್ದಾರಲ್ಲ.. ಅವರಿಗೇನು ಹೇಳಬೇಕು.. ಹೇಗೆ ಕೇಳಬೇಕು.. ಎಂಬುದೇ ಅರ್ಥವಾಗುತ್ತಿಲ್ಲ…’ ಎಂಬ ಅನುಮಾನಗಳು ಕೂಡ ನಮ್ಮ ಜೊತೆಗಿವೆ
ಇವೆಲ್ಲ ನಿಮ್ಮ ಗಮನಕ್ಕಿರಲಿ ಎಂದು ಹೇಳುತ್ತಿದ್ದೇನೆ. ಇಷ್ಟಾಗಿಯೂ ಸಾವಿನ ರಹಸ್ಯ ಗೊತ್ತಾಗದಿದ್ದರೆ ಹೇಗೆ ಸಿಎಂ ಸಾಹೇಬರೆ..?
ಇಂತಿ
ಪ್ರಜ್ಞಾವಂತರ ಬಳಗದ ಪರವಾಗಿ





ಈ ರಾಜ್ಯದಲ್ಲಿ ಬದುಕಿರುವ ಕೋಟ್ಯಂತರ ಜನರ ಬದುಕಿನ ಬಗ್ಗೆ ಕಾಳಜಿ ಇಲ್ಲದವರು ಸತ್ತವರ ಬಗ್ಗೆ ಕಾಳಜಿ ವಹಿಸಲು ಸಾಧ್ಯವೇ ? ಯಾವುದಾದರು ದೇವಸ್ಥಾನ ಮಠ ಜ್ಯೋತಿಷಿಗಳನ್ನು ಕೇಳಿದರೆ ಉತ್ತರ ಸಿಗುವುದೇನೋ?
Nanna Appana melina nimma kalajige rhuni-shivaranjan satyampete