ಸ್ಮಿತಾ ಅಮೃತರಾಜ್
ಕ್ಷಣ ಕ್ಷಣಗಳು ಸೇರಿ ದಿನಗಳಾಗುತ್ತಿವೆ. ದಿನಗಳೆಲ್ಲಾ ಇಂದು -ನಾಳೆಗಳೆಂಬ ಅದೃಶ್ಯ ಕಡತಗಳ ಒಳ ಹೊಕ್ಕು ಮೆಲ್ಲಗೆ ಮುಖ ಹುದುಗಿಸಿಕ್ಕೊಂಡು ವರುಷಗಳಾಗುತ್ತಿವೆ. ಸದ್ದಿಲ್ಲದೇ ಕಾಲ ಕರಗುತ್ತಿದೆ. ಕೈ ಜಾರಿ ಹೋಗುತ್ತಿದೆ. ಆದರೂ ನಾವುಗಳು ಏನನ್ನೋ ಕಾಯುತ್ತಿದ್ದೇವೆ. ಇದು ಮಾತ್ರ ಸುಳ್ಳಲ್ಲ. ಯಾವುದೋ ಒಂದು ಆಶಾವಾದ, ಸುಂದರ ದಿನಗಳ ಬಗ್ಗೆ ನಿರೀಕ್ಷೆ. ಎಲ್ಲಾ ನೋವು, ಕಷ್ಟ-ಕಾರ್ಪಣ್ಯಗಳನ್ನು ಹಿಂದಿಕ್ಕಿ ಯಾವುದೋ ಒಂದು ಸಂತಸದ ಪವಾಡ ಏಕಾ ಏಕಿ ಜರುಗಿಬಿಡಬಹುದೆಂಬ ಬಲವಾದ ಆಸೆ. ಇಂತಹ ಹಪ ಹಪಿಕೆಯಲ್ಲೇ ನಾವು ವರುಷಗಳನ್ನು ತಳ್ಳಿಬಿಟ್ಟಿರುತ್ತೇವೆ. ಅಸಹನೀಯ ಅಸಾಹಯಕ ದಿನಗಳನ್ನು ಕೂಡ ಇಂತಹ ಕನಸಿನೊಳಗೆ ತೂರಿಬಿಟ್ಟು ಬದುಕ್ಕನ್ನು ಸಹ್ಯವಾಗಿಸಿಕೊಂಡಿರುತ್ತೇವೆ. ಈ ಬದುಕಿಗೆ ಅದೆಂಥಹ ಆಕರ್ಷಣೆ? ತೀರದ ತಹ ತಹಿಕೆ.. ದಿನ ಹೀಗೆ ಸಾಗುತ್ತಲೇ ಇದೆ. ಯಾವುದೇ ಒಡಂಬಡಿಕೆಗಳಿಗೆ ಬಗ್ಗದೆ, ಯಾವುದೇ ಸುಖ ದು:ಖಗಳನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳದೆ. ನಾವುಗಳು ಮಾತ್ರ ದಿನದ ಲೆಕ್ಕಾಚಾರಗಳನ್ನು ಮನಸ್ಸಿನೊಳಗೆ ಕಾಯ್ದಿಟ್ಟುಕ್ಕೊಂಡು ಮರುಗುತ್ತಿರುತ್ತೇವೆ. ಗೊತ್ತಿದೆ. ಈ ಕ್ಷಣ ನಿಲ್ಲುವುದಿಲ್ಲ. ಹಿಡಿದಿಟ್ಟುಕೊಳ್ಳಲಾಗುವುದಿಲ್ಲ. ಅದೃಶ್ಯವಾಗಿ ಸೋರಿ ಹೋಗುತ್ತಿದೆ. ಗತಕಾಲದ ಚಿತ್ರಗಳಂತೆ ಇತಿಹಾಸಕ್ಕೆ ದಾಖಲಾಗಿಬಿಡುತ್ತದೆ. ಅಚ್ಚರಿಯಾಗುತ್ತದೆ. ಆಳವಾಗಿ ಚಿಂತಿಸಿದರೆ ವಿಷಾದವೂ ಆಗುತ್ತದೆ. ವಿನೋದವೂ ವಿಷಾದವೂ ನಮ್ಮ ಮನಸ್ಸಿನ ಚಿತ್ರಗಳೇ ಆಗಿರುವುದರಿಂದ ನಿರ್ಲಿಪ್ತ, ನಿರ್ಭಾವುಕ ಕ್ಷಣಗಳನ್ನು ಆ ಕ್ಷಣದ ಮಟ್ಟಿಗಾದರೂ ನಮ್ಮ ಹದಕ್ಕೆ ಬೇಕಾದಂತೆ ತಟ್ಟಿಕೊಳ್ಳುವುದು ನಮ್ಮೊಳಗೇ ಇದೆ. ಆಗದ್ದು ಹೋಗದಕ್ಕೆ ಕ್ಷಣಗಣನೆ ಮಾಡುತ್ತಾ ಯುಗಗಳಾಗಿ ಪರಿವರ್ತನೆ ಮಾಡುವ ನಾವುಗಳು ಕ್ಷಣದ ಮಿತಿಯೊಳಗೆ ಅಪೂರ್ವ ಸುಂದರತೆಯನ್ನು ಧಾಖಲಿಸುವ ವಿಚಾರವನ್ನು ಮರೆತೇ ಬಿಟ್ಟಿರುತ್ತೇವೆ.
ಪುಟ್ಟ ಗರಿಕೆ ಹುಲ್ಲಿನೆಸಳ ಮೇಲೆ ಹನಿ ಬಿಂದು ಕದಲದೆ ನಿಂತಿದೆ. ಸೂರ್ಯನನ್ನು ತನ್ನೊಳಗೆ ಆವಾಹಿಸಿಕೊಳ್ಳುವ ಅಪೂರ್ವ ಕ್ಷಣಗಳಿಗಾಗಿ. ಕೆಲವೇ ಕ್ಷಣಗಳಲ್ಲಿ ತಾನು ಆವಿಯಾಗಿ ಹೋಗುವೆನೆಂಬ ಸತ್ಯ ಬಹುಷ; ಇಬ್ಬನಿಗೆ ಗೊತ್ತಿರಲೇ ಬೇಕು. ಇಲ್ಲದಿದ್ದರೆ, ಸೂರ್ಯನನ್ನೇ ತನ್ನೊಳಗೆ ಹಿಡಿದಿಟ್ಟುಕೊಳ್ಳುವ ಆ ಗಳಿಗೆಗಾಗಿ ಅದು ಕಾತರಿಸಲಾರದು. ಈಗ ಇಬ್ಬನಿ ಪ್ರತಿಫಲಿಸುತ್ತಿದೆ. ಆಗಸದ ಸೂರ್ಯ ಇಬ್ಬನಿಯ ಎದೆಯೊಳಗೆ ಪಾರದರ್ಶಕವಾಗಿ ನಗುತ್ತಿದ್ದಾನೆ ಆ ಕ್ಷಣದ ಸತ್ಯವಾಗಿ. ಹಗಲೊಂದು ಹೀಗೇ ಬಂದು ಹಾಗೇ ಹೊಗುವ ಹೊತ್ತಲ್ಲಿ ನೆನಪುಗಳು ಎಡತಾಕುತ್ತವೆ. ಮುಗಿಲು ಸುಮ್ಮಗೆ ಚಿತ್ರ ವಿಚಿತ್ರ ಚಿತ್ರ ಬಿಡಿಸುತ್ತಾ ಹಗಲನ್ನೆಲ್ಲಾ ಗುಡ್ಡೆ ಹಾಕಿ ಕೊಂಡೊಯ್ಯುತ್ತಿದೆ ಅಂತನ್ನಿಸುತ್ತದೆ. ಆದರೆ ಕ್ಷಣಗಳನ್ನು ಹಿಡಿದಿಟ್ಟುಕೊಳ್ಳಲಾಗದ ಬಗ್ಗೆ ಆಕೆಗೂ ಅತೀವ ವೇದನೆಯಿದೆ. ಹಗಲು ಹುಟ್ಟಿದೊಡನೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಏಕಕಾಲದಲ್ಲಿ ಒಮ್ಮೆಗೇ ಹತ್ತಾರು ಕೆಲಸಗಳನ್ನು ನಿಭಾಯಿಸಿಕೊಂಡು, ಏಕಪಾತ್ರಾಭಿನಯ ಮಾಡುವ ಆಕೆ ತನಗಾಗಿ ಒಂದಷ್ಟು ಸಮಯವನ್ನು ವ್ಯಯಿಸಿಕೊಳ್ಳಲಾಗದೆ ನಿಟ್ಟುಸಿರು ಬಿಡುವ ಹೊತ್ತಲ್ಲಿ ಮತ್ತೊಂದು ಸಂಜೆ ಎದುರಾಗುತ್ತದೆ. ಕೆಲಸ ಮುಗಿಯಿತೇ? ಬೆಳಕ ಬಾಗಿಲು ಮುಚ್ಚಲೇ? ಎಂದು ಅವಸರಿಸಿದಂತಾಗುತ್ತದೆ. ಈಗಷ್ಟೇ ಯಾವುದೋ ಒಂದು ಹಿತದ ಗುಂಗಿನಲ್ಲಿ ತೇಲುತ್ತಿದ್ದಳಷ್ಟೆ. ಆ ಕ್ಷಣ ಕತ್ತಲಾಗಿ ಕಪ್ಪಾಯಿತು. ನವಿರು ಅಲೆಯೊಂದು ದೂರಕ್ಕೆ ಬೀಸಿ ಹೋಯಿತು.
ಹೊಸಿಲ ರಂಗೋಲಿ ನಿರ್ಧಯವಾಗಿ ಕಲಸಿ ಧೂಳಿಗೆ ಬಣ್ಣ ಮೆತ್ತಿ ಒಗೆದಂತೆ ಭಾಸವಾಗುತ್ತಿದೆ. ಕ್ಷಣವೇಕೆ ಹೀಗೆ ನಿಷ್ಕರುಣಿಯಾಗುತ್ತಿದೆ? ಬದುಕು ತಿಳಿದುಕೊಂಡಷ್ಟೂ ಗೋಜಲು ಗೋಜಲು. ವ್ಯಾಖಾನಿಸಿದಷ್ಟೂ ಅರ್ಥಹೀನ. ಕ್ಷಣಗಳೆಲ್ಲಾ ನೀರ್ಗುಳ್ಳೆಯಂತೆ ಒಡೆದು ಕನಸುಗಳೆಲ್ಲಾ ಕ್ಷಣ ಭಂಗುರವಾಗುತ್ತಿದೆ. ಕಾಲ ಕಾಯುವುದೇ ಇಲ್ಲವೇ? ಈಗ ಅವಳಿಗೆ ಅದರತ್ತಲೇ ನೆನಕೆ. ಮೊನ್ನೆ ಮೊನ್ನೆ ಹಸುಗೂಸು ತೊಟ್ಟಿಲಿಂದಿಳಿದು ಅಂಬೆಗಾಲಿಕ್ಕಿ ಯಾವ ಮಾಯಕದಲ್ಲಿ ಎದೆಯೆತ್ತರಕ್ಕೆ ಬೆಳೆದು ನಿಂತದ್ದು? ಸರಿಯಾಗಿ ಕನ್ನಡಿಗೆ ಕಣ್ಣು ಕೀಲಿಸದೇ ಅದೆಷ್ಟು ದಿನಗಳುರುಳಿದವು? ಹೊಳಪು ಕಳೆದುಕೊಂಡ ಕಣ್ಣುಗಳು. ಮಾಸಿದ ಕೆನ್ನೆಗಳು. ಬೆಳ್ಳಗಾದ ಮುಂಗುರುಳು. ಕಣ್ಣು ಸುಳ್ಳೋ? ಕನ್ನಡಿ ಸುಳ್ಳೋ? ಒಮ್ಮೆಗೇ ಗೊಂದಲ ಚಡಪಡಿಕೆ. ಮರುಗಳಿಗೆ ಜ್ನಾನೋದಯ. ಇಷ್ಟು ದಿನ ಮಾಡಿದ್ದು ಅದೇ ಬೋರು ಹೊಡೆಸುವ ಹಳಸಲು ಕೆಲಸಗಳಲ್ಲವೇ? ಹೊಸ ಕೆಲಸಗಳನ್ನು ಹುರುಪಿನಿಂದ ಯಾವೊತ್ತು ಕೈಗೆತ್ತಿಕೊಳ್ಳುವುದು? ಆದರೆ ಮಾಡಲೇ ಬೇಕಾದ ಅನಿವಾರ್ಯ ಕೆಲಸಗಳನ್ನ ಹೇಗೆ ನಿಭಾಯಿಸುವುದು? ಯಾರ ಸುಪರ್ಧಿಗೆ ಒಪ್ಪಿಸುವುದು? ಮತ್ತೆ ಗಲಿಬಿಲಿ. ಇದ್ಯಾವುದೂ ಬೇಡವೇ ಬೇಡ. ಕನವರಿಕೆಗಳು ಮುಗಿಯುವುದೇ ಇಲ್ಲ. ಒಳಗೊಂದು ಸಮಜಾಯಿಷಿ. ಕಾಣದಾ ಕಡಲಿಗೇ ಹಂಬಲಿಸಿದೇ ಮನ.. ಕಾಣಬಲ್ಲೆನೇ ಒಂದು ದಿನಾ ಕಡಲನೂ.. ಕೂಡಬಲ್ಲೆನೇ.. ಮನಸ್ಸು ಹಾಡೊಂದ ಗುನುಗಿಕೊಳ್ಳುತ್ತದೆ. ಕಾಲ ಕಾಯುವುದಿಲ್ಲ. ಕಾಯುವಿಕೆಗೂ ಅರ್ಥವಿಲ್ಲ ಮನಸ್ಸು ಗೊಣಗಿಕೊಳ್ಳುತ್ತದೆ. ಎಂದಿನಂತೆ ಮನಸ್ಸು ಹಳೆಯದಕ್ಕೆ ಒಗ್ಗಿಕೊಳ್ಳುತ್ತಲ್ಲೇ ಹೊಸತಿಗಾಗಿ ತುಡಿಯುತ್ತಲೇ ಇರುತ್ತದೆ.
ಇಂತಹುದೇ ಎಷ್ಟೊಂದು ಬೆಳಗು ಎಷ್ಟೊಂದು ಸಂಜೆಗಳು ದಿನವೂ ಹೀಗೆ ಸರಿದು ಹೋಗಿಲ್ಲ? ಲೆಕ್ಕವಿಡಲು ಪುರುಸೊತ್ತಾದರೂ ಎಲ್ಲಿದೆ? ಈ ಬೆಳಗು-ಬೈಗಿನ ನಡುವಲ್ಲಿ ಎಷ್ಟೊಂದು ಆಲಾಪ? ಎಷ್ಟೊಂದು ರಾಗ ತಾನ? ಆಲಿಸುವ ವ್ಯವಧಾನವಾದರೂ ಇತ್ತೇ? ಈ ಹಗಲು ಮಾಸುತ್ತಾ ಕುಂದುತ್ತಿದ್ದಂತೆ ಮತ್ತೊಂದು ಹಗಲಿನ ನಿರೀಕ್ಷೆ. ಕತ್ತಲಿಡೀ ಆಗಸದಲ್ಲಿ ಕತೆ ಹೇಳುವ ಕೋಟಿ ಕೋಟಿ ನಕ್ಷತ್ರ. ಕಪ್ಪು ಕತ್ತಲಿಗೂ ಸುಂದರತೆಯನ್ನು ತಂದಿಕ್ಕುವ ಬೆಳದಿಂಗಳು ಎಲ್ಲವೂ ಸೋಜಿಗ. ಗಾಡಾಂದತೆಯೊಳಗೆ ಮತ್ತೆ ಭರವಸೆಯ ಮಿಣುಕು ದೀಪ. ಬೆಳಕು ಕತ್ತಲಿನ ಕಣ್ಣುಮುಚ್ಚಾಲೆಯಲ್ಲಿ ಕಣ್ಣೊಳಗೊಂದು ದೀಪದ ಹೊಳಪು. ಭರವಸೆಯ ಝಲಕು. ಕಾಲದ ಗಾಲಿ ತಿರುಗುತ್ತಲೇ ಇದೆ. ಯಾವುದೋ ಕಾಯುವಿಕೆಯಲ್ಲಿ ಬದುಕು ಬಿಮ್ಮನೆ ಕುಳಿತು ಚಲಿಸುತ್ತಿದೆ. ಸುಂದರ ಕ್ಷಣಗಳು ಎದುರಾಗುತ್ತಲೇ ಇವೆ. ಆದರೆ ಕಾಯುವ ಕಣ್ಣಿಗೆ ಅರಿವಿಗೆ ನಿಲುಕದ ನಿರೀಕ್ಷೆ..! ಈ ಮನಸ್ಸಿಗೂ ಅದೆಷ್ಟೊಂದು ಬಣ್ಣಗಳು? ಹೂವಿನಂತೆ ಅರಳುವ ಮುದುಡುವ ಪ್ರಕ್ರೀಯೆಗೆ ಒಳಗಾದಷ್ಟೂ ಮನಸ್ಸು ಹದಗೊಳ್ಳುತ್ತದೆ. ಮಾಗಿಕೊಳ್ಳುತ್ತದೆ. ಮನಸ್ಸಿನೊಳಗೊಂದು ನದಿ ಹರಿಯುತ್ತಲೇ ಇದೆ. ಗುಡ್ಡ ಇಳಿಜಾರು ಹತ್ತಿ ಇಳಿಯುತ್ತಾ, ಸುತ್ತು ಬಳಸುತ್ತಾ ಕಡಲಿನ ಕಡೆಗೇ ಧ್ಯಾನಿಸುತ್ತಾ.. ಯಾವುದೋ ಕಾಣದ ಗಮ್ಯದೆಡೆಗೆ ಮನಸ್ಸು ಧೇನಿಸುತ್ತಿರುವಾಗ ಬದುಕು ನೀರಸವೆಂದೆನಿಸುವುದಿಲ್ಲ. ಕರಗಿದ ಕ್ಷಣಗಳಿಗಾಗಿ ಪರಿತಪಿಸುತ್ತಾ ಬರುವ ಕ್ಷಣಗಳನ್ನು ಕೊಂದುಕೊಳ್ಳುವುದರಲ್ಲೇನಿದೆ ಪ್ರಯೋಜನ? ಅನುಭವಿಸುತ್ತಾ ಸಾಗಿದರೆ ಪ್ರತಿಕ್ಷಣವೂ ಸುಂದರತೆಯ ಪ್ರತೀಕವೇ. ಆದರೆ ನಮ್ಮ ವ್ಯರ್ಥ ಹಳಹಳಿಕೆಗಳ ಗೋಜಿಗೆ ಸಿಲುಕಿಕೊಳ್ಳದೆ, ಇದ್ಯಾವುದರ ಪರಿವೆಯೇ ಇಲ್ಲದೆ ಅದೆಷ್ಟೋ ನಿಗೂಡಗಳನ್ನು ರಹಸ್ಯಗಳನ್ನು ಬಚ್ಚಿಟ್ಟುಕ್ಕೊಂಡು ಕಾಲ ಚಲಿಸುತ್ತಲೇ ಇದೆ. ಈ ಹೊತ್ತಲ್ಲಿ ಸುಮ್ಮಗೆ ನಿಡುಸುಯ್ಯುವ ಗೆಳತಿಗೆ ಕವಿತೆ ಸಾಲೊಂದ ಗುನುಗ ಬೇಕೆನ್ನಿಸುತ್ತದೆ. ಕಾಲ ಕಾಯುವುದಿಲ್ಲ ಗೆಳತಿ.. ಆಗಲೇಬೇಕಾದುದಕೆ ಮರುಕವನೇಕೆ ಪಡುತಿ..?!.







Liked the narration. Keep writing. All the best.
very poetic smitha
Good writing
Kavyatmakavu…kalatmakavu…adantaha gadha chintaneya ramyavada baraha smita.nirantaravagirali nimma baraha.
ಸ್ಮಿತ ಅವರೆ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಒಂದು ಒಳ್ಳೆಯ ಕಾವ್ಯ ವನ್ನು ಓದಿದಾಗಾಯಿತು.
ಹೀಗೇ ಬರೆಯುತ್ತಿರಿ.
good…..all da best…..
thanks ellrigoo-smitha