ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಕೊಂಡಿಗಳು ಹೃದಯಗಳೊಡನೆ ಮಿಲಾಯಿಸಿದ್ದವು..

ಸಂಗಾತಿ

vinate sharma

ವಿನತೆ ಶರ್ಮ

ಓದಲು ತನಗೆ ಬೇಕಾಗಿದ್ದ ಒಂದು ನಿರ್ದಿಷ್ಟವಾದ ಮಕ್ಕಳ ಪುಸ್ತಕವನ್ನು ಹುಡುಕುತ್ತಾ ಮಗರಾಯ ಕಪಾಟಿನಿಂದ ಎಲ್ಲಾ ಪುಸ್ತಕಗಳನ್ನೂ ಹೊರಗೆಳೆದು ಚಿಲ್ಲಾಪಿಲ್ಲಿ ಮಾಡಿದ್ದ. ಎಷ್ಟೋ ವರ್ಷಗಳಿಂದ ಅವು ಶೇಖರಣೆಯಾಗಿದ್ದವು. ಪ್ರತಿಯೊಂದು ಪುಸ್ತಕಕ್ಕೂ ಅದರದೇ ಆದ ಪ್ರತ್ಯೇಕ ನೆನಪು, ಬೆಚ್ಚನೆಯ ಕೊಂಡಿ ಇತ್ತು.

kid readingಆ ಕೊಂಡಿಗಳು ಮೂರು ಖಂಡಗಳಲ್ಲಿದ್ದ ಕುಟುಂಬದವರೊಡನೆ, ಸ್ನೇಹಿತರೊಡನೆ,ಹೃದಯಗಳೊಡನೆ ಮಿಲಾಯಿಸಿದ್ದವು.

ಒಂದೊಂದು ಪುಸ್ತಕವನ್ನು ಕೈಗೆತ್ತಿಕೊಂಡು ಸವರಿ ಹಾಳೆ ಬಿಡಿಸಿದರೆ ಅದೆಷ್ಟು ಕತೆಗಳು ಹೊರ ಚಿಮ್ಮುತ್ತಿದ್ದವು! ಕೈಯಲ್ಲಿದ್ದ ಪುಸ್ತಕ ಹೇಳಿದ ತನ್ನದೇ ಕತೆ ಒಂದಾದರೆ ಆ ಪುಸ್ತಕ ನಮ್ಮ ಮನೆಗೆ, ನಮ್ಮ ಮಗುವಿನ ಬಳಿಗೆ, ನಮ್ಮೆಲ್ಲರ ಮನಕ್ಕೆ ಬಂದು ಬೆಸುಗೆ ಹಾಕಿದ ಕತೆಗಳು ಎಷ್ಟೋ.

ಆ ಪುಸ್ತಕಗಳ ಹಿಂಡಿನಲ್ಲಿ ಇರುವೆ, ಆಮೆಯಿಂದ ಹಿಡಿದು ಮೊಸಳೆ ಆನೆಗಳವರೆಗೂ ಗಾತ್ರದಲ್ಲಿ, ಪಾತ್ರಗಳಲ್ಲಿ, ಕೇಂದ್ರದಲ್ಲಿ … ಎಳೆ ಕಂದನ ಹಾಡುಗಳ ಪುಸ್ತಕವೂ …ವೈವಿಧ್ಯವಿದೆ. ಎದೆ ತುಂಬಿ ಬಂತು. ಹಾಗೆ ಈ ಮಗನಿಗೂ ಅನ್ನಿಸುತ್ತಿರಬಹುದು ಎಂಬ ಗುಮಾನಿ ನನಗೆ. ಮಗ ಅವನ್ನೆಲ್ಲಾ ನೋಡುವುದು, ಕೆಲವನ್ನ ಕೈಯಲ್ಲಿಟ್ಟುಕೊಂಡು ನೋಡಿ, ಒಮ್ಮೊಮ್ಮೆ ಹಾಗೆ ಯಾಕೋ ಏನೋ ಕಿಟಕಿಯಾಚೆ ನೋಡುತ್ತಾ ದೂರ ದಿಗಂತದತ್ತ ನೋಟ ಹರಿಸುವುದು ನನ್ನ ಗಮನಕ್ಕೆ ಬರುತ್ತಿತ್ತು.

ಕೆಲದಿನಗಳಾದರೂ ಅವೆಲ್ಲವೂ ಹಾಗೆ ಹರಡಿಕೊಂಡು ಇದ್ದವು.

ನೋಡಿ ಸಾಕಾಗಿ ಮಗನಿಗೆಂದೆ “ಇದ್ಯಾಕೆ ಇವನ್ನೆಲ್ಲಾ ಹೀಗೆ ನೆಲದ ಮೇಲೆ ಬಿಟ್ಟಿದ್ದೀಯ? ಕಪಾಟಿನಲ್ಲಿ ಜೋಡಿಸಬಾರದೆ? ಹಾಗೇ ಜೋಡಿಸುವಾಗ ನಿನಗೆ ಬೇಡವಾದ ಅಗೋ ಆ ಚಿಕ್ಕ ಮಕ್ಕಳ ಪುಸ್ತಕಗಳನ್ನೆಲ್ಲಾ ಪಕ್ಕಕ್ಕಿಡು. ನಿಮ್ಮ ಶಾಲೆಯಲ್ಲಿರುವ ಬುಕ್ ಚಾರಿಟಿ ಬಾಕ್ಸ್ ಗೆ ಹಾಕ್ತೀನಿ.”

ತಕ್ಷಣ ಮಗ ಬೇಡ ಬೇಡ ಎಂದ. ಆಶ್ಚರ್ಯವಾಗಿ ತಿರುಗಿ ನೋಡಿದೆ. ಪುಸ್ತಕಗಳ ಮಧ್ಯದಲ್ಲಿ ಕೂತು ಪುನಃ ಬಾಲ್ಯದ ತನ್ನ ಮತ್ತೊಂದು ನೆಚ್ಚಿನ ಪುಸ್ತಕವನ್ನು ಹುಡುಕುತ್ತಿದ್ದ ಹಾಗೆ ಕಂಡಿತು. “ಯಾಕೆ, ಚಾರಿಟಿ ಬಾಕ್ಸ್ ಗೆ ಹಾಕೋದು ಬೇಡ ಅಂದ್ರೆ ಮತ್ತೇನು ಮಾಡಬೇಕು ಅಂತಿದ್ದೀಯ” ಪ್ರಶ್ನೆ ಮಾಡಿದೆ.

“ಇವನ್ನೆಲ್ಲಾ ಮತ್ತೊಮ್ಮೆ ಓದಿ ಮುಗಿಸಿ ಎತ್ತಿಡ್ತೀನಿ. ಮುಂದೆ ನನ್ನ ಮಕ್ಕಳಿಗೆ ಕೊಡ್ತೀನಿ. ಪುಸ್ತಕಗಳು ನಮ್ಮ ಸ್ನೇಹಿತರಲ್ವಾ,” ಅಂದ ಅವನ ಮುಖದ ಮೇಲೆ ಮುದ್ದಿನ ಮಂದಹಾಸ. ನಾನು ಆ ಯಶೋದಾ ಮಾತೆಯಾಗ್ಬಿಟ್ಟೆ.

ನಂತರ, ನಾನು ಆಸ್ಟ್ರೇಲಿಯಾದಲ್ಲಿ ಪಿ ಎಚ್ ಡಿ ಮಾಡ್ತಿದ್ದಾಗ ಬರೆದ (ಜೂನ್ ೨೦೦೧) ಈ ಕವನ ನೆನಪಿಗೆ ಬಂತು.

vinate books2

 

ಪ್ರೇಮ ಸಂಗಾತಿ

 

ಕಾಡಬೇಡ ನೀ

ಆವರಿಸಿಕೊಂಡದ್ದು ಸಾಕು

ಅವ್ಯಕ್ತವಾಗಿರಲು ಬೇಕು

ನೀ ಕಾಡಿದಷ್ಟೂ ನಿನ್ನನ್ನೇ

girl readingಕನವರಿಸುತ್ತೇನೆಂಬ ಚಿಂತೆ.

ದಿನವೆಲ್ಲಾ ನಿನ್ನನ್ನಪ್ಪಿಕೊಂಡದ್ದು ಸಾಲದೇ

ಪಕ್ಕ ಸರಿದು ಇನಿಯನಿಗೆ ಬಾ ಹೇಳು

ಮೋಹಿನಿಯಂತೆ ನೀ ಕಾಡಿ

ನಿನ್ನನ್ನು ಹಿಂಬಾಲಿಸಿ

ರಾತ್ರಿ ನಿದ್ದೆಯಲಿ ನಾ ನಡೆದರೆ

ಆ ನನ್ನ ಫ್ಲಾಟ್ ಮೇಟ್

ಅಂಬ್ಯುಲೆನ್ಸಗೋ ಇಲ್ಲಾ ಪೋಲೀಸರಿಗೋ

ಮಾಡುವ ತುರ್ತುಕರೆಯ ಭಯ.

ಓದಿ ಓದಿ ಕುರುಡಿಯಾಗುತ್ತೀಯ!

ಬಾಲ್ಯದ ಅಪ್ಪನ ಮಾತು ಅರ್ಧ

ನಿಜವಾಗಿ ಬಿಟ್ಟಿದೆಯಲ್ಲಾ ಎಂಬ ಹೊಟ್ಟೆಕಿಚ್ಚು,

“ಎಲ್ಲೋ ಯಾವುದೋ ಲೈಬ್ರರಿಯಲ್ಲಿ

ಒಂದಿನ ನೀನು ಕಳೆದೇ ಹೋಗುತ್ತೀಯ”

ಅಮ್ಮನ ಮಾತು ಸುಳ್ಳುಎಂಬ ಗರ್ವ.

ನೇರಳೆ ಬಣ್ಣ ತೊಟ್ಟ ಫೆಮಿನಿಸ್ಟ್ ಗಳು,

ಕೆಂಪುಕಪ್ಪು ಹಸಿರಿನ ಚಳುವಳಿಗಳು

ಯಾವ ಹೊದ್ದಿಕೆ ಸರಿ ಎಂದು ಪೇಚಾಡಿದ

ಅಲೆಮಾರಿಗಳು. ಎಲ್ಲವೂ ನನ್ನ ಪ್ರೇಮ

ಸಂಗಾತಿಗಳೇ- ಪುಸ್ತಕಗಳು.

‍ಲೇಖಕರು admin

28 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading