ಮೊನ್ನೆ ಸ್ನೇಹಿತರ ದಿನ ಬಂತಲ್ವ ..?ಯಾಕೋ ….. ಕಾಲೇಜು ದಿನಗಳ ನೆನಪುಗಳು ಕಾಡಲಾರಂಭಿಸಿದವು .ನಾನಾಗ ಉಡುಪಿಯ ಮಹಾತ್ಮಾ ಗಾಂಧಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದೆ .ನನ್ನೂರು ಪುಟ್ಟ ಹಳ್ಳಿಯಾದ್ದರಿಂದ ಅಲ್ಲಿ ಹತ್ತಿರದಲ್ಲಿ ಕಾಲೇಜಿರಲಿಲ್ಲ.ಹಾಸ್ಟೆಲಿನಲ್ಲಿ ಉಳಿಯುವುದು ಅನಿವಾರ್ಯವಾಗಿತ್ತು .ಆಗ ಉಡುಪಿ ಪ್ರತ್ಯೇಕ ಜಿಲ್ಲೆಯಾಗಿರಲಿಲ್ಲ,ಮಂಗಳೂರಿಗೆ ಸೇರಿತ್ತು .ನಮ್ಮ ಕಾಲೇಜು ಆಗ ತುಂಬಾ ಹೆಸರುವಾಸಿ…ಈಗಲೂ ಕೂಡಾ…
ಕಾಲೇಜು ಕ್ಯಾಂಪಸ್ ತುಂಬಾ ಸುಂದರವಾಗಿತ್ತು .ಕಾಲೇಜಿನ ಹಿಂಭಾಗದಲ್ಲಿದ್ದ ಸುಂದರವಾದ ಬೋಟಾನಿಕಲ್ ಗಾರ್ಡನ್ ಹಸಿರು ಹಸಿರಾಗಿತ್ತು . ನಮ್ಮ ಹಾಸ್ಟೆಲ್ ಪಕ್ಕದಲ್ಲೇ ಇದ್ದುದರಿಂದ ಕಾಲೇಜು ಪ್ರಾರಂಭವಾಗಲು ೫ ನಿಮಿಷ ಇದೆಯೆನ್ನುವಾಗ ಹೊರಡುತ್ತಿದ್ದೆವು .ನಮಗೆ ಹಾಸ್ಟೆಲ್ ರೂಮಿನಲ್ಲಿ ಕೂಡಾ ಪ್ರೋಮೋಶನ್ ಥರ ಇರ್ತಾ ಇತ್ತು .ಮೊದಲನೆಯ ಪದವಿಯಲ್ಲಿದ್ದಾಗ ೫ ಜನರಿರುವ ಕೋಣೆ ,೨ ಡನೆಯ ಪದವಿಯಲ್ಲಿ ೩ ಜನರಿರುವ ಕೋಣೆ ಹಾಗೂ ಕೊನೆಯ ಪದವಿಯಲ್ಲಿ ಇಬ್ಬರಿರುವ ಕೋಣೆ .ಬೇರೆ ಬೇರೆ ಆಯ್ಕೆಗಳನ್ನು ತೆಗೆದುಕೊಂಡ ವಿಧ್ಯಾರ್ಥಿಗಳ ಜೊತೆ ಬೆರೆಯಲು ಮುಕ್ತ ಅವಕಾಶಗಳಿದ್ದವು .ಫ್ರೆಂಡ್ಸ್ ಗ್ರೂಪ್ ಕೂಡಾ ಇರ್ತಿತ್ತು .ಹಾಸ್ಟೆಲ್ ವಾರ್ಡೆನ್ ತುಂಬಾ ಶಿಸ್ತಿನವರಾಗಿದ್ದು ಅವರನ್ನು ಕಂಡರೆ ಎಲ್ಲರೂ ಹೆದರುತ್ತಿದ್ದರು .ಮನೆಗೆ ತಿಂಗಳಿಗೊಮ್ಮೆ ಮಾತ್ರ,ತಿಂಗಳಿಗೊಂದು ಸಿನೆಮಾ,ಶಾಪಿಂಗ್ ಗೆ ಅನುಮತಿಯಿತ್ತು . ಶಾಪಿಂಗ್ ಸಿಕ್ಕಾಗ ಇಡೀ ಉಡುಪಿ ಸುತ್ತುತ್ತಿದ್ದೆವು .ನಮಗೆ ಗೊತ್ತಿಲ್ಲದ ಅಂಗಡಿಗಳೇ ಇರಲಿಲ್ಲ .ಎಲ್ಲಾ ಕಡೆ ನಮಗೊಂದು ಶಾಪಿಂಗ್ ಇರ್ತಾ ಇತ್ತು . ರಥಬೀದಿಯಲ್ಲಿ ಗಾಜಿನ ಬಳೆ, ಬೊಟ್ಟು…ಫಾಶನ್ಸ್ ನಲ್ಲಿ ಫ್ಯಾನ್ಸಿ ಟಾಪ್ಸ್,ನಂತರ ಫೇಮಸ್ ಫೂಟ್ ವೇರ್ ನಲ್ಲಿ ಹೀಲ್ಸ್ …ಹೀಗೇ ಮುಗೀತಾನೆ ಇರಲಿಲ್ಲ .ಶಾಪಿಂಗ್ ಆದ ಮೇಲೆ ನಮ್ಮದು ಹೋಟೆಲ್ ಧಾಳಿ ನಡೆಯುತ್ತಿತ್ತು .ಉಡುಪಿಯ ಮುಖ್ಯ ರಸ್ತೆಯಲ್ಲಿರುವ ‘ಡಯಾನ ‘ ಹೋಟೆಲ್ ನಮ್ಮ ಮುಖ್ಯ ಆಕರ್ಷಣೆಯಾಗಿತ್ತು ‘.ಡಯಾನ’ ದಲ್ಲಿ ಸಿಗುವ ಗಡ್ ಬಡ್ ಐಸ್ ಕ್ರೀಮ್ ತುಂಬಾ ಫೇಮಸ್…. ಅಲ್ಲಿ ಚೆನ್ನಾಗಿ ಮಸಾಲೆ ದೋಸೆ ,ಚನ್ನಾ ಬತೂರ ,ಬ್ರೆಡ್ ರೋಸ್ಟ್ ಮಾಡುತ್ತಿದ್ದರು .ಬ್ರೆಡ್ಡನ್ನು ಸಣ್ಣದಾಗಿ ಕತ್ತರಿಸಿ ಎಣ್ಣೆಯಲ್ಲಿ ಕೆಂಪಗೆ ಹುರಿಯುತ್ತಿದ್ದರು .ಅದರ ಜೊತೆ ಹಸಿರು …ಹಸಿರಾದ … ಪುದಿನ ಚಟ್ನಿ .ವಾವ್ ..ಈಗಲೂ ನೆನೆಸಿಕೊಂಡಾಗ ಬಾಯಲ್ಲಿ ನೀರೂರುತ್ತದೆ .ನನ್ನ ಫ್ರೆಂಡ್ ಒಬ್ಬಳು ಸ್ಟೈಲ್ ಹೊಡೆಯೋದಕ್ಕೆ ಹೋಗಿ ಫೋರ್ಕ್ನಲ್ಲಿ ತಿನ್ನಕ್ಕೆ ಟ್ರೈ ಮಾಡಿ ಮೈ ಮೇಲೆ ಎಲ್ಲಾ ಚೆಲ್ಲಿ ಕೊಂಡಿದ್ದಳು .ಈಗಲೂ ಅದನ್ನು ಅವಳಿಗೆ ಹೇಳಿ ರೇಗಿಸುವುದಿದೆ .’ತರ್ಲೆ ….ನಿಂಗೆ ಯಾವುದು ನೆನಪಿಲ್ಲಾಂದ್ರೂ ಇದು ನೆನಪಿದೆ ..ಅಲ್ವಾ…’ಅಂತ ಅವಳು ಬೈತಾಳೆ….
ತಿಂಗಳಿಗೊಂದರಂತೆ ಸಿನೆಮಾ ನೋಡುತ್ತಿದ್ದೆವು .ಆಗಲೂ ಈಗಿನಂತೆ ಹಿಂದಿ ಸಿನೆಮಾ ವ್ಯಾಮೋಹ ಎಲ್ಲರಿಗೂ …ಕನ್ನಡ ಅಷ್ಟಾಗಿ ನೋಡುತ್ತಿರಲಿಲ್ಲ.ಮಿಥುನ್ ಚಕ್ರವರ್ತಿ ,ಸನ್ನಿಡಿಯೋಲ್ ..ಇವರೆಲ್ಲ ಆಗಿನ ಫೇವ್ ರೆಟ್ಸ್….
ನನ್ನ ಗೆಳತಿಯರಲ್ಲಿ ಒಬ್ಬೊಬ್ಬರದು ಒಂದೊಂದು ಊರು .ನನ್ನದು ದಕ್ಷಿಣ ಕನ್ನಡ,ಇನ್ನಿಬ್ಬರು ಧಾರವಾಡ ,ಇನ್ನೊಬ್ಬಳು ಉಡುಪಿಯವಳೇ …ಧಾರವಾಡದ ಗೆಳತಿಯರು ಊರಿಗೆ ಹೋದರೆ ಧಾರವಾಡ ಪೇಡ ತರಲೇಬೇಕಿತ್ತು ..ತರುತ್ತಿದ್ದರು ಕೂಡಾ.ಪ್ರತಿಯೊಬ್ಬರೂ ಮನೆಗೆ ಹೋದಾಗ ವಿವಿಧ ರೀತಿಯ ತಿಂಡಿಗಳು ಬರುತ್ತಿದ್ದವು .ಹಾಸ್ಟೆಲ್ನಲ್ಲಿ ತಿಂದ ಜೋಳದ ರೊಟ್ಟಿ ಹಾಗೂ ಸಬ್ಬಸಿಗೆ ಸೊಪ್ಪಿನ ಪಲ್ಯದ ರುಚಿ ಇನ್ನೂ …ಹಸಿ ….ಹಸಿಯಾಗಿದೆ …..!!!
ಕಾಲೇಜಿನಲ್ಲಿ ಹುಡುಗಿಯರಿಗೆ ಡ್ರೆಸ್ ಕೋಡ್ ಕೂಡಾ ಇತ್ತು .ಹುಡುಗಿಯರು ಸ್ಲೀವ್ ಲೆಸ್ ಟಾಪ್ ಹಾಕುವಂತಿರಲಿಲ್ಲ .ಹುಡುಗರ ಈಗಿನ ಸ್ಟೈಲ್ ನಂತೆ ಆಗ ಯಾವುದೂ ಅವರಿಗಿರಲಿಲ್ಲ .ಆದರೂ ಹುಡುಗರಿಗೆ ತಲೆ ಕೆದರುವಂತಿರಲಿಲ್ಲ. ಕಾಲೇಜಿಗೆ ಬಂದರೆ ನಮ್ಮ ಗ್ರೂಪ್ ಚದುರಿ ಹೋಗುತ್ತಿತ್ತು .ನನ್ನದು ಕನ್ನಡ ,ಒಬ್ಬಳು ಹಿಂದಿ ,ಇಬ್ಬರು ಸಂಸ್ಕೃತ ..ಹೀಗೇ ಭಾಷಾ ವಿಭಜನೆಯಗುತ್ತಿತ್ತು .ಕ್ಲಾಸ್ ನಂತರ ಮತ್ತೆ ಗ್ರೂಪ್ ಒಂದಾಗುತ್ತಿತ್ತು . ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಸಂಸ್ಥೆಯ [NSS ] ಕಾರ್ಯಚಟುವಟಿಕೆಗಳಿದ್ದವು .ಎರಡನೆಯ ಪದವಿಯಲ್ಲಿದ್ದಾಗ ನಾವೆಲ್ಲ ಫ್ರೆಂಡ್ಸ್ ಈ ಸಂಸ್ಥೆ ಗೆ ಸೇರಿದ್ದೆವು.ಅದೊಂದು ಮರೆಯಲಾಗದ ಜೀವನಾನುಭವವಾಗಿತ್ತು.ಉಡುಪಿಯ ಸಮೀಪದ ಕೆಮ್ತೂರು ಎಂಬ ಗ್ರಾಮದಲ್ಲಿ ಸುಮಾರು ೨ ಕಿ .ಮೀ .ಉದ್ದದ ರಸ್ತೆ ಮಾಡುವ ಕೆಲಸ ನಮ್ಮದಾಗಿತ್ತು .ರಸ್ತೆ ಮಾಡುವ ಕೆಲಸ ಅಷ್ಟು ಸುಲಭದ್ದಾಗಿರಲಿಲ್ಲ.ಒಂದು ಕಡೆ ಗುಡ್ಡವನ್ನು ಕಡಿದು ಸಮತಟ್ಟು ಮಾಡಬೇಕಿತ್ತು .ಊರಿನ ಜನರೂ ನಮ್ಮೊಂದಿಗೆ ಸಹಕರಿಸಿದ್ದರು .ಎಂದೂ ಮಣ್ಣು ಹೊರದ ನಾವು ಅಂದು ತಲೆ ಮೇಲೆ ಮಣ್ಣು ಹೊತ್ತಿದ್ದೆವು .ನಮ್ಮದೆಲ್ಲಾ ಮಿಲಿಟರಿಯಲ್ಲಿ ನಡೆದಂತೆ ಟೈಮ್ ಟೈಮ್ ಗೆ ಕೆಲಸಗಳು ನಡೆಯುತ್ತಿದ್ದವು .ನಾನು ಸಮಯದ ಬೆಲೆಯನ್ನು ಅಲ್ಲಿ ಚೆನ್ನಾಗಿ ಕಲಿತೆ.ಯಾರೂ ಮೇಲಲ್ಲ ..ಯಾರೂ ಕೀಳಲ್ಲ.ದುಡಿಯುವವನೆ ದೊಡ್ಡಪ್ಪ…ಮುಂತಾದ ಜೀವನದ ಸರಳ ಸತ್ಯಗಳ ಅರಿವೂ ಆಯಿತು .ಅಂದಿನಿಂದ ಪ್ರಕೃತಿಯನ್ನು ಹೊಸ ಪ್ರೀತಿಯಿಂದ …ಹೊಸ ಕಣ್ಣಿಂದ ನೋಡಲು ಸಾಧ್ಯವಾಯಿತು .
ಕ್ಯಾಂಪ್ ನಲ್ಲಿ ಯಾವಾಗಲೂ ಲವಲವಿಕೆಯ ವಾತಾವರಣ . ಬೆಳಗ್ಗಿನಿಂದ ಮಧ್ಯಾಹ್ನ ಶ್ರಮದಾನ ,ಮಧ್ಯಾಹ್ನದ ಊಟದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು .ಆಶುಭಾಷಣ ,ಚರ್ಚಾಕೂಟ ,ಗಣ್ಯ ವ್ಯಕ್ತಿಗಳಿಂದ ಭಾಷಣ ಮುಂತಾದವುಗಳಿದ್ದವು.ನಂತರ ಸಂಜೆ ಕಾಫಿ ,ತಿಂಡಿ ..ತಿಂಡಿಯ ನಂತರ ಬಯಲಲ್ಲಿ ಸುತ್ತಾಟ .ರಾತ್ರಿ ಒಂದು ದಿನ ಬಾನ್ ಫೈರ್ ಮಾಡಿದ್ದರು .ಅಂತಾಕ್ಷರಿ ..ಹಾಡು ಎಲ್ಲಾ ನಡೆದಿತ್ತು .ಎಲ್ಲರೂ ಸ್ಟೈಲ್ ಹೊಡೆದದ್ದು ಅಲ್ಲದೆ ಎರಡು ಸಾಲಿಗಿಂತ ಜಾಸ್ತಿ ಹಾಡು ಯಾರಿಗೂ ಬರುತ್ತಿರಲಿಲ್ಲ . ಎಲ್ಲಾ ಕನಸಿನಂತೆ ..ಈಗಲೂ ಸ್ಮೃತಿ ಪಟಲದಲ್ಲಿ ಅಚ್ಚಾಗಿವೆ .
ಎರಡನೆಯ ವರ್ಷದ ಕ್ಯಾಂಪ್ ,ಮಜಾ ಎಲ್ಲಾ ಮುಗಿದು ಕೊನೆಯ ವರ್ಷ ಬಂದಾಗ ಓದಿನ ಕಡೆ ಗಮನ ಹರಿಸಿದ್ದೆವು .ಬೇರೆ ಚಟುವಟಿಕೆಗಳೆಲ್ಲಾ ಕಡಿಮೆಯಾಗಿದ್ದವು .ಕಣ್ಣೆವೆಯಿಕ್ಕುವಷ್ಟರಲ್ಲಿ ಮೂರನೆಯ ವರ್ಷ ಕಳೆದು ಹೋಗಿತ್ತು .ಎಲ್ಲರೂ ಆಟೋಗ್ರಾಫ್ ಬರೆಯುವುದು ,ಕೊಡುವುದು ಇದರಲ್ಲೇ ಬ್ಯುಸಿಯಾಗಿದ್ದರು .ಎಲ್ಲಾರದು ಕೊನೆಯ ಸಾಲು ಒಂದೇ ….forget me not …ಎಲ್ಲರೂ ಹಳೆ ನೆನಪುಗಳನ್ನು ಮೆಲುಕು ಹಾಕಲು ಆರಂಭಿಸಿದ್ದರು … ಕೆಲವರದು ಆಟೋಗ್ರಾಫ್ ಬರೆದು ೨-೩ ಪುಸ್ತಕಗಳಾಗಿದ್ದವು .ಕೆಲವರು ಬರೆಯಲು ಮರೆತ ಕೆಲವು ವಿಷಯಗಳನ್ನು ಆಮೇಲೆ ಪುಟಗಳ ಮಧ್ಯದಲ್ಲಿ ಅಡ್ಡಾದಿಡ್ಡಿ ಬರೆದು ಕರಡು ಪ್ರತಿಯಂತಾಗಿದ್ದವು.ಯಾವ ಕಡೆ ಪ್ರಾರಂಭ ಎಲ್ಲಿ ಮುಕ್ತಾಯ ಎಂದು ತಿಳಿಯುತ್ತಿರಲಿಲ್ಲ .ಆಗ ಯಾರ ಬಳಿಯೂ ಕ್ಯಾಮೆರಾ ಇರಲಿಲ್ಲ .ಎಲ್ಲಾ ಮಧ್ಯಮ ವರ್ಗದಿಂದ ಬಂದವರು .ಪಾಕೆಟ್ ಮನಿ ಸಿಗುತ್ತಿರಲಿಲ್ಲ .ಯಾರ ಬಳಿಯೂ ದುಡ್ದಿರುತ್ತಿರಲಿಲ್ಲ . ನನ್ನ ಗೆಳತಿಯ ಬಳಿ ಒಂದು ಹಳೆ ಕ್ಯಾಮೆರಾ ಇತ್ತು .ಯಾವಾಗಲೋ ಒಮ್ಮೆ ಅದು ಸರಿ ಇದ್ದಾಗ ಕೆಲವು ಫೋಟೋ ತೆಗೆದಿದ್ದವು .ಆಗ ಫೋಟೋ ತೆಗೆಯುವ ಮತ್ತು ತೆಗೆಸಿಕೊಳ್ಳುವ ಹುಚ್ಚು ಎಲ್ಲರಿಗೂ…….
ಪರೀಕ್ಷೆ ಹತ್ತಿರ ಬಂದಂತೆ ಪಡ್ಡೆ ಹುಡುಗರೂ ಕೂಡಾ ಸೀರಿಯಸ್ ಆಗಿದ್ದರು .ಸೆಂಡ್ ಆಫ್ ಪಾರ್ಟಿಗಳು ಮುಗಿದು ಎಲ್ಲರೂ ಓದಲು ಪ್ರಾರಂಭಿಸಿದ್ದರು .ನಮ್ಮ ಗೆಳತಿಯರ ಗುಂಪು ಬೇರೆಯಾಗುವ ದಿನಗಳು ಬರುತ್ತಿದ್ದಂತೆ ಎಲ್ಲರ ಕಣ್ಣುಗಳು ತುಂಬಲಾರಂಭಿಸಿದ್ದವು.ಎಲ್ಲರೂ ಅಳುತ್ತಲೇ ಬೀಳ್ಕೊಂಡಿದ್ದೆವು .ಯಾರಿಗೂ ಪುನಃ ಭೇಟಿಯಾಗುವೆವು ಎಂಬ ನಂಬಿಕೆಯಿರಲಿಲ್ಲ .ಆಗ ಈಗಿನ ಥರ ಇ ಮೇಲ್ ,ಮೊಬೈಲ್ ಇರಲಿಲ್ಲ .ಕಪಟ ಮೋಸ ಏನೂ ತಿಳಿಯದ ಮುಗ್ಧತೆ .. ಕೈ ಬರಹದ ಉದ್ದುದ್ದ ಪತ್ರಗಳು ರವಾನೆಯಗುತ್ತಿದವು.
ಹೂಂ ….ಅವೆಲ್ಲ ನೆನಪುಗಳು ….ಈಗ ನೆನಪಿನ ಬಾಕ್ಸ್ ಸೇರಿವೆ …ಭದ್ರವಾಗಿ ಮನದ ಕಪಾಟಿನಲ್ಲಿದೆ . ಈಗ ಅವೆಲ್ಲ ನಿಂತು ಹೋಗಿದ್ದರೂ ಆ ಸ್ನೇಹಿತರು ಈಗಲೂ ನನ್ನೊಂದಿಗಿದ್ದಾರೆ…ಎಂದು ಹೇಳಲು ಖುಷಿಯಾಗುತ್ತಿದೆ ..ಒಂದು ಕಾಲ್ ಬಟನ್ ಒತ್ತಿದರೆ ಸಾಕು …..ಆ ಕಡೆಯಿಂದ ಗಾಯತ್ರಿ ಮಂತ್ರದ ಕಾಲರ್ ಟೋನ್ ಕೇಳಿಸುತ್ತದೆ .ಅಯ್ಯೋ ..ಇವಳು ಈಗಲೇ ಮಂತ್ರ ಕೇಳಲು ಪ್ರಾರಂಭಿಸಿದ್ದಾಳೆ …ಭಗವಂತಾ …ಅಂತ ಗೊಣಗುತ್ತಾ ಮಂತ್ರ ಕೇಳುವಷ್ಟರಲ್ಲಿ …ಹಾಯ್..ಎಂಬ ಆಪ್ತ ದನಿ … …. ಕಾಲೇಜ್ ನಲ್ಲಿ ಇಟ್ಟ ಅನ್ವರ್ಥ ನಾಮದೊಂದಿಗೆ ಹಾಜಿರ್…….ಸರ್ ……







Tumbaa chenngide.
ನೆನಪುಗಳ ಮಾತೆ ಮಧುರ ..
ಹಳೆ ಸಿಹಿ ನೆನಪುಗಳೇ ಹಾಗೆ ಪುಂಖಾನುಪುಂಖವಾಗಿ ನೆನಪಿಗೆ ಬಂದು ಮುದ ಕೊಡುತ್ತವೆ. ಚೆನ್ನಾಗಿತ್ತು ಲೇಖನ.
ಮಾಲಾ
yellarigu dhanyavadagalu….:)
SAVINENAPUGALU BEKU SAVIYALEE BADUKU ENNUVA HAGE NIMMA COLLEJU DINAGALA BADUKINA SAVI NAMAGU TILISIDDAKKE SORRY SAVIYALU HAGOO NAMMA COLLEGJU DINAGALA PURVA LOKAKKE KAREDOYDDAKKE ABINANDANEGALU ANANTHAMURTHYYAVARA KLIPJOINT ANNO KATHYALLI ONDU MATU BARUTTE ” NANNANTE COLLEGE MUNDIRUVA MARADA KELAGE YAVUDADAROBBA HUDUGA HUDIGIYA JOTE MATANADUTTA NINTALLI APRABUDHHA HUDUGARIDDARILI PRABHUDDA ADYAPAKARA KANNU AVARAMELE AGA IVELLA NIJAVAGIDDAVU EEGA BIDI ELLA MEDIA MOBILE EMAIL GMAIL PRABHAVAVENO NIMMA BARAHAKKONDU HRUDAYAPURVAKA ABINANDANE D,RAVI VARMA HOSPET
Dhanyavadagalu Raviyavare..:)
ಈ ವಂದನಾರ್ಪಣೆ ನಿಮಗಾಗಿ ಹಾಡುವೆ, ಆ ನೆನಪು ಪುನಃ ಕವಿಯಾಗಿ ಮಾಡಿದೆ. ಧನ್ಯವಾದಗಳು