ಆ ಅರೆಸುಟ್ಟ ದೇಹಗಳ ಮೇಲೆ

 

 

 

ಭಾರತಿ ಬಿ ವಿ

 

 

 

ಸುಟೋಮು ಯಮಾಗುಚಿ

ಹಿರೋಷಿಮಾ ಮತ್ತು ನಾಗಸಾಕಿ ಎರಡೂ ಸ್ಫೋಟಗಳಲ್ಲಿ ಸಿಕ್ಕು ಪವಾಡ ಸದೃಶನಾಗಿ ಪಾರಾದ ದುರಾದೃಷ್ಟವಂತ ಮತ್ತು ಅದೃಷ್ಟವಂತ ಕೂಡಾ. ಹಾಗೆ ಬದುಕುಳಿದವರು ತನ್ನ 93ನೆಯ ವಯಸ್ಸಿನಲ್ಲಿ ಮೂತ್ರಪಿಂಡ ಮತ್ತು  ಯಕೃತ್ತಿನ ಕ್ಯಾನ್ಸರ್’ನಿಂದ ಜನವರಿ 4, 2010 ರಂದು ತೀರಿಕೊಂಡರು.
ಅವರ And the River Flowed as a Raft of corpses ಅನ್ನುವ ಪದ್ಯ ಸಂಗ್ರಹದ ಕೆಲವು ಪದ್ಯಗಳ ಅನುವಾದ ಇವು ….

ಮಹಾನ್ ನಗರ ಹಿರೋಶಿಮಾದಲ್ಲಿ
ಧಗಧಗಿಸುತ್ತಾ, ಅಬ್ಬರಿಸುತ್ತಾ
ಈ ದಿನದ ಮುಂಜಾವು ಕಾಲಿರಿಸಿತು.
ನದಿಯಲ್ಲಿ ಮಾನವ ದೇಹಗಳ ತೆಪ್ಪವೊಂದು
ತೇಲುತ್ತಾ ನನ್ನ ದಿಕ್ಕಿಗೆ ಬಂದಿತು.

ಆ ಅರೆಸುಟ್ಟ ದೇಹಗಳ ಮೇಲೆ
ಕಾಲಿಡಬಾರದೆಂದು ಅಂದುಕೊಳ್ಳುತ್ತಲೇ
ಅವುಗಳ ಮೇಲೆಯೇ ಕಾಲಿಟ್ಟೆ
ಮತ್ತು ಬೆಂದುಹೋದ ಪಕ್ಕೆಲುಬುಗಳು ಕಂಡವು,
ಅವರ ಧೈರ್ಯಕ್ಕೆ
ಹಳದಿ ಬಣ್ಣದ ಛಾಯೆಯಿತ್ತು …

ಒಬ್ಬರ ಮೇಲೊಬ್ಬರ ದೇಹಗಳ ರಾಶಿ ಪೇರಿಸಲ್ಪಟ್ಟಿತ್ತು
ಮತ್ತು ಆ ನೆಲ ಮತ್ತೆಂದೂ ಒಣಗುವುದಿಲ್ಲ,
ಅದು ಉರಿದುಹೋಗಿ ಸತ್ತ ಎಲ್ಲರ
ಕೊಬ್ಬಿನಲ್ಲಿ ಅದ್ದಿದಂತಿದೆ.

ಅವುಗಳು ಸುಟ್ಟ ಚಿಂದಿ ಎಂದೆಣಿಸಿದೆ
ಆದರೆ ಅವುಗಳನ್ನು ಸಮೀಪಿಸಿದಾಗ ಅರಿವಾಯಿತು
ಸಣ್ಣಗೆ ವಿಲಿಗುಟ್ಟುತ್ತಿದ್ದ ಆದರೆ ಇನ್ನೂ ಜೀವಂತವಿದ್ದ
ವ್ಯಕ್ತಿಯೊಂದು ಅದನ್ನು ಧರಿಸಿದೆಯೆಂದು

ಸಾಮ್ರಾಜ್ಯಶಾಹಿಗಳ ಯುದ್ದ ವಿರಾಮ
ಆಜ್ಞೆಯನ್ನು ರೇಡಿಯೋ ತರಂಗಗಳು
ಪ್ರಸಾರ ಮಾಡಿದವು.
ಈಗಾಗಲೇ ಹಿರೋಷಿಮಾ ಮತ್ತು ನಾಗಸಾಕಿ
ಅಣುಬಾಂಬ್ ದಾಳಿಯಿಂದ ಪಾಳುಬಿದ್ದಾಗಿದೆ,
ತುಂಬ ತಡವಾಯಿತು

ಆಗಸ್ಟ್ ಒಂಭತ್ತು.
ಅಣುಬಾಂಬ್ ಸ್ಫೋಟನೆಯ ಸ್ಥಳದ
ಹತ್ತಿರವಿರುವ ಕ್ಯಾಥೋಲಿಕ್ ಸ್ಮಶಾನದಲ್ಲಿ ಗೋರಿಕಲ್ಲುಗಳು ಸಾಲಾಗಿ ಬಿದ್ದಿವೆ.
ಎಲ್ಲ ಕಲ್ಲುಗಳ ಮೇಲೂ
ಒಂದೇ ದಿನಾಂಕ ಕೊರೆಯಲ್ಪಟ್ಟಿದೆ,
ಆಗಸ್ಟ್ ಒಂಭತ್ತು.

ವಯಸ್ಸಾದ ನನ್ನ ಹೆಂಡತಿ ಮತ್ತು ನನ್ನ ಮಗ
ಇಬ್ಬರೂ ಹಿಬಾಕುಶರು,
ಕ್ಯಾನ್ಸರ್ ಪೀಡಿತ ಭಾಗಕ್ಕೆ ಶಸ್ತ್ರಚಿಕಿತ್ಸೆಯಾಗಿದೆ,
ಈಗ ವಿಕಿರಣ ಚಿಕಿತ್ಸೆಯಲ್ಲಿದ್ದಾರೆ

ಅಣುಬಾಂಬ್ ದಾಳಿಯಾದಾಗ
ವಿದ್ಯಾರ್ಥಿಗಳಾಗಿದ್ದ ನೀವು ನಂತರ ವೈದ್ಯರಾದಿರಿ
ಈಗ, ಬೊಬ್ಬೆಗಳ ಕಲೆಗಳಿದ್ದ ಅಂಗೈಯಲ್ಲಿ
ನೀವು ಸ್ಟೆತೊಸ್ಕೋಪ್ ಹಿಡಿದಿರುವಿರಿ

ನನ್ನ ಬದುಕು ಒಂದು ಮಂಜಿನ ಹನಿ
ಅಣುಬಾಂಬ್ ದಾಳಿಯಾದ ಐವತ್ತು ವರ್ಷಗಳಾದ ನಂತರವೂ ಬದುಕಿರುವೆ
ಮತ್ತು ಈಗಲೂ ಅಣ್ವಸ್ತ್ರರಹಿತ ಜಗತ್ತಿಗಾಗಿ ಹಂಬಲಿಸುತ್ತಲೇ ಇದ್ದೇನೆ

ಅವಳು ಇಪ್ಪತ್ತೆಂಟು ವರ್ಷದವಳಿರುವಾಗ
ಆತ್ಮಹತ್ಯೆ ಮಾಡಿಕೊಂಡಾಗ
ಏಳು ವರ್ಷದ ನಾನು ಅಮ್ಮನ ಪಕ್ಕ ನಿಂತಿದ್ದೆ,
ಓಹ್ ಎಷ್ಟೊಂದು ದುಃಖಿತನಾಗಿ ಮತ್ತು ಅಸ್ವಸ್ಥನಾಗಿ

ಹಿಬಾಕುಶ: ಅಣುಬಾಂಬ್ ದಾಳಿಯಲ್ಲಿ ಬದುಕುಳಿದವರು

‍ಲೇಖಕರು avadhi

January 4, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: