ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು. ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು.
ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿದ್ದು ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು.
ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು.

ನಿಮಗೂ ಇಷ್ಟವಾದರೆ ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ ಎಂದು ಕೇಳಿದ್ದೆವು ..
ಹಾಗೆ ಮುಂದುವರೆದ ಎರಡು ಲಹರಿಗಳು ಇಲ್ಲಿವೆ
ಇನ್ನಷ್ಟು ನಿಮ್ಮ ಮನದಾಳದೊಳಗೆ ಉಕ್ಕುತ್ತಿದ್ದರೆ ತಡ ಯಾಕೆ ನೀವೂ ಬರೆದು ಕಳಿಸಿ

ಸಂಗೀತಾ ಕಲ್ಮನೆ
ಆಹಾ! ಅದೆಷ್ಟು ಸುಂದರ ಅವಳ ಅವಸ್ಥೆ. ಓದಿ ನಡೆದ ಹಳೆ ಘಟನೆ ನೆಪಿಗೆ ಬಂತು. ಈ ಕಥೆ ಮುಂದುವರೆಸುವ ಸಣ್ಣ ಪ್ರಯತ್ನ.
————–
ಲಂಗು ಲಗಾಮಿಲ್ಲದ ಯೌವ್ವನದ ಹುಚ್ಚು ಹೊಳೆಯಲ್ಲಿ ಅಂಟಿಕೊಂಡ ಮನದನ್ನನ ವಿಷಯ ಮುಚ್ಚಿಟ್ಟು ಮನೆಯವರ ಒತ್ತಾಯಕ್ಕೆ ಮಣಿದು ಅವರು ತೋರಿದ ಹುಡುಗನ ಜೊತೆ ಎಂಗೇಜಮೆಂಟ ಮಾಡಿಕೊಂಡು ಕಣ್ ತಪ್ಪಿಸಿ ಕಾಲಿಗೆ ಬುದ್ಧಿ ಹೇಳಿ ಸುಯ್ಯ…. ಅಂತ ಇನಿಯನ ಬೈಕ್ ಹತ್ತಿ ಬಂದೆ ಬ್ಯೂಟಿಪಾಲ೯ರ ಮಾಯಾಂಗನೆ ಕೈಯಲ್ಲಿ ತಗಲಾಕೊಂಡೆ.
ಕುಚಿ೯ ಆಕಡೆ ಈ ಕಡೆ ತನಗೆ ಬೇಕಾದಂತೆ ತಿರುಗಿಸುತ್ತಾಳೆ ನನ್ನ ಗಿರಗಿಟ್ಟಿ ಗೊಂಬೆ ಮಾಡ್ತಿದ್ದಾಳೆ. ಮೊನ್ನೆ ತಾನೆ ರೆಡಿ ಮಾಡಿದ್ರಲ್ಲ ಎಲ್ಲ ಸೇರಕಂಡು ಪಟ್ಟದ ಗೊಂಬೆ ಅಂದ್ರು ಕಂಡವರು. ಈಗೇನು ಅನ್ನಬಹುದು. ಎಲ್ಲರ ಮುಖ ಬಾಡಿಹೋದ ಹರಿವೆ ಸೊಪ್ಪಾಗಿರಬೇಕು. ನನಗೊ ಕಾಲೆಲ್ಲ ತರ ತರ ನಡುಗುತ್ತಿದೆ. ಓಡಿ ಹೋಗಿ ರಿಜಿಸ್ಟರ್ ಮ್ಯಾರೇಜು. ಅಯ್ಯೋ ಅಮ್ಮ, ಇರಮ್ಮ ನಿನ್ನ ಹುಬ್ಬು ಒಳ್ಳೆ ಬಾಣದಾಗೆ ಮಾಡಿ ಇನಿಯನ ಕಣ್ ಸೆಳೆಯೋದು ಬ್ಯಾಡ್ವಾ.
ಕಿರುಗಣ್ಣು ಹಾಯಿಸಿದಾಗೊ ಕಾಣೊ ಆ ಹುಡುಗನ ಕೈನಲ್ಲಿ ಸಿಕ್ಕಿರೋದು ನಾಕಾಣೆ. ಇಷ್ಟು ಪರದಾಡೊ ಬದುಕಿಗೆ ಮಾಡಿದ ಪಾಪ ತೊಳಿಲಿ ಅಂತ ಕೋಟಿ ತೀಥ೯ದಲ್ಲಿ ಮಿಂದೆದ್ದು.ಓಡಿಬಂದೆನಲ್ಲ. ನಲ್ಲನ ಬೈಕೇರಿ ನಾ ಬೇಗ ಹೋಗಬೇಕು . ಇವಳ.ಕೈಚಳಕ್ಕಿಂತ ನನ್ನ ಮನಸ್ಸು ಜೋರಾಗಿ ಓಡ್ತಿದೆ. ಬಿಟ್ಟಾಕು ಹುಡುಗ ಜೀವದ ಭಯ ಬಿಟ್ಟು ನಾಕಾಣೆ ಹಿಡಿಯೊ ಕಸರತ್ತು ಇನ್ನ್ಮೇಲೆ ನಾ ಕೊಡುವೆ ಮತ್ತೊಂದಾಣೆ. ಊಹಿಸ್ರೆಲಾ ಇದೆಷ್ಟು ಆಣೆ?

ಲಕ್ಷ್ಮಿ
Double thrilled..!!
ಸಿಗ್ಗಿನ ಮದುಮಗಳು ಬಾಗುವ ಬಿಲ್ಲಿನ ಪೋರನ ನಿಸ್ತೇಜಳಾಗಿ ದಿಟ್ಟಿಸಿದಳೋ ಮನದ ಆತಂಕಕ್ಕೆ ಇನ್ನಷ್ಟು ಆತಂಕವ ಬೆರಸಿ ನೋಡಿದಳೋ ಅವಳಿಗದು ಹೊರ ಜಗತ್ತಷ್ಟೆ.. ಜಗತ್ತು ಕಟ್ಟಡದ ಕೆಳಗೆ ಓಡುತ್ತಿದೆ ಪುರುಸೊತ್ತಿಲ್ಲದೆ.ಇವಳಿಲ್ಲಿ ಹೊಸ ಜಗತ್ತಿಗೆ ಕಾಲಿಡಲು ತಯಾರಾದರೂ ಆಗುತ್ತಿದ್ದರೂ ಅದೇನದು ಬೇಸರ..
ಸಾಲದೆಂಬಂತೆ ಕಿಟಕಿಯಾಚೆ ಮೆಟ್ರೋ ರೈಲು,ಒಳಗೆ ಲಿಫ್ಟು ದೃಷ್ಟಾಂತಕ್ಕೆ.ರಾಕೆಟ್ಟಿನ ವೇಗದಲ್ಲಿ ನಾಣ್ಯ ತರಲು ಹೋದ ಹುಡುಗನಿಗ್ಯಾರೋ ಹತ್ತಿರದವರು ನೀಡಿರಬೇಕು ನಾಣ್ಯವ ತಮ್ಮ ನೆನಪಿಗೆ ..ಬಹುಶಃ ಬೆಲೆ ಕಟ್ಟಲಾಗದೇನೊ..ಅದಕೆ ಮೆಟ್ಟಿಲು ಹತ್ತಿ ಬರುವಾಗಷ್ಟು ತೃಪ್ತಿ ಮತ್ತೆ ಸಿಕ್ಕಿದ್ದಕ್ಕೆ,ದಕ್ಕಿದ್ದಕ್ಕೆ..
ಕಾಯ್ಕಿಣಿ ಫೋಟೋ: ಬಾಲು ಮಂದರ್ತಿ





0 Comments
Trackbacks/Pingbacks