ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಹಾ ಇಸ್ಕೂಲೇ..

 

 ಇಸ್ಕೂಲ್ ಗೆ ಹೋಗಿದ್ದು..

ಡಾ ಎಲ್ ಸಿ ಸುಮಿತ್ರಾ, ತೀರ್ಥಹಳ್ಳಿ

ಮತ್ತೆ ಮುಂಗಾರು , ಮಳೆ ಮೋಡ, ಶಾಲೆಗಳು ಪ್ರಾರಂಭವಾಗಿವೆ. ಹಳದೀಬಣ್ಣದ ಸ್ಕೂಲ್ ವ್ಯಾ ನ್ ಗಳು ಮತ್ತೆ ಮೆರವಣಿಗೆ ಹೊರಟಿವೆ. ತೀರ್ಥಹಳ್ಳಿಯಂತಹ ತಾಲ್ಲೊಕು ಕೇಂದ್ರದ ಸ್ಕೂಲ್ ಗಳಿಗೆ ೨೫, ೩೦ ಕಿ ಮೀ ದೂರದಿಂದ ಹತ್ತಾರು ಸ್ಕೂಲ್ ವ್ಯಾನ್ ಗಳು ಬಸ್ ಗಳೂ, ಪ್ರತಿನಿತ್ಯ ಪುಟ್ಟ ಮಕ್ಕಳನ್ನು ಹೊತ್ತು ತರುತ್ತಿವೆ. ಬೆಳಿಗ್ಗೆ ಏಳೂವರೆಗೆ ಮನೆ ಬಿಟ್ಟ ಮಕ್ಕಳು ಸಂಜೆ ಆರೂವರೆಗೆ ಮನೆ ತಲುಪುತ್ತಾರೆ. ಆಟ ಇಲ್ಲ, ಪಾಠವೆಂಬ ಶಿಕ್ಷೆ ಮಾತ್ರ. ಸಹಜವಾಗಿಯೇ ಐದು ದಶಕದ ಹಿಂದಿನ ನನ್ನ ಪ್ರೈಮರಿ ಶಾಲೆ ನೆನಪಾಯಿತು.

rainಆಗ ನಮ್ಮ ಶಾಲೆಯ ಮಕ್ಕಳು  ಎಲ್ಲರೂ “ಇಸ್ಕೂಲ್ “ ಅಂತಿದ್ದರು ನಾವೂ ಹಾಗೆ ಹೇಳ್ತಿದ್ವಿ..  ನನಗೆ ಸ್ಕೂಲ್ ಮತ್ತು ಕಾಲೇಜ್ ಗಳ ಕುರಿತು ನೆನೆಸಿಕೊಂಡಾಗ ಪ್ರೈಮರಿ ಶಾಲಾ ದಿನಗಳು ಆಕರ್ಷಕ ಅನ್ನಿಸುತ್ತವೆ. ಮುಂಗಾರಿನ ಮಿಂಚು ಗುಡುಗುಗಳ ಜತೆಗೆ ಮಳೆಗಾಲದ ಶಾಲೆ ನೆನಪಾಗುತ್ತದೆ. ನಾನು ಸ್ಕೂಲಿಗೆ ಹೋದ ಮೊದಲ ದಿನ ನೆನಪಾಗುತ್ತೆ.

ಮಲೆನಾಡಿನ  ಹೃದಯದಲ್ಲಿರುವ ಪುಟ್ಟ ಊರು ನನ್ನದು. ಎರಡು ಫರ್ಲಾಂಗ್ ನಡೆದರೆ ಬಸ್ ಓಡಾಡುವ ರಸ್ತೆ. ರಸ್ತೆ ದಾಟಿ ಒಂದು ಕಿ ಮೀ ದೂರದಲ್ಲಿ ನಮ್ಮ ಇಸ್ಕೂಲು. ನಮ್ಮ ದೃಷ್ಟಿಯಲ್ಲಿ ಅದು ಯಾವುದೇ ವಿಶ್ವವಿದ್ಯಾಲಯಕ್ಕೂ ಕಡಿಮೆಯಿಲ್ಲ. ನಾವು ಮನೆಯಿಂದ ಹೊರಟು  ಸ್ಕೂಲಿಗೆ ಹೋಗುವವರೆಗಿನ ಅನುಭವಗಳನ್ನೂ ಸೇರಿಸಿಕೊಂಡರೆ ತರಗತಿಯ ಹೊರಗೆ ಕಲಿತಿದ್ದೇ ಜಾಸ್ತಿ. ಒಂದು ಕಾಲದಲ್ಲಿ ಮಠವಾಗಿದ್ದ ಕಟ್ಟಡದಲ್ಲಿ ನಮ್ಮ ಶಾಲೆಯಿತ್ತು. ಕಳೆದ ಶತಮಾನದ ಆರಂಭದಲ್ಲಿದ್ದ ವೀರಶೈವ ಮಠವೊಂದು ಶತಮಾನದ ಮಧ್ಯ ಭಾಗ ತಲುಪುವುದರೊಳಗೆ ದುರವಸ್ಥೆಗೆ ಬಂದಿತ್ತು. ಅರವತ್ತರ ದಶಕದ ಆರಂಭದ ಭೂಸುಧಾರಣೆಯ ವೇಳೆಗೆ ಮಠದ ಆಸ್ತಿಪಾಸ್ತಿಗಳು ಉಳುವವರ ಪಾಲಾದವು. ಆ ಕಟ್ಟಡದಲ್ಲಿದ್ದವರಿಗೆ ’ಮಠದ ಸಾಹುಕಾರರು” ಎಂಬ ಹೆಸರು ಮಾತ್ರ ಉಳಿದಿತ್ತು.

ಅವರ ಮನೆ ಇಂಗ್ಲಿಷ್ ವರ್ಣಮಾಲೆಯ ಎಲ್ ಅಕ್ಷರ ಅಂತಿತ್ತು. ಅದರ ಒಂದು ತುದಿಯಲ್ಲಿದ್ದ  ಕೊಠಡಿಯೇ ನಮ್ಮ ಸ್ಕೂಲು. [ನಮ್ಮ ಶಾಲೆಯ ಸರ್ಕಾರಿ ಕಟ್ಟಡವನ್ನು ಅದೇ ವರ್ಷ ಆರಂಭವಾಗಿದ್ದ ತಾಲ್ಲೂಕ್ ಬೋರ್ಡ್ ಹೈಸ್ಕೂಲ್ ಗೆ ತಾತ್ಕಾಲಿಕವಾಗಿ ಕೊಟ್ಟಿದ್ದರು] ಒಂದರಿಂದ ನಾಲ್ಕರವರೆಗಿನ ಕ್ಲಾಸ್ ಗಳ ಏಕೋಪಾಧ್ಯಾಯ ಶಾಲೆ. ನಮ್ಮ ಪಕ್ಕದ ಮನೆಯ ಮಕ್ಕಳೆಲ್ಲ ಸ್ಕೂಲ್ ಗೆ ಹೋಗುತ್ತಿದ್ದುದನ್ನು ನೋಡಿ ಆಗಷ್ಟೆ ನಾಲ್ಕು ತುಂಬಿದ್ದ ನಾನು ಸ್ಕೂಲ್ಗೆ ಹೋಗಬೇಕೆಂದು ಹಠ ಮಾಡ್ತಿದ್ದೆ .ಅಜ್ಜ ಮತ್ತು ಅಪ್ಪ ಅಕ್ಷರ ಕಲಿಸಿದ್ದರಲ್ಲ. ಅಕ್ಷರ ತಿದ್ದಿ ಬರೆಯಲು ಒಂದು ಬಳಪದ ಸ್ಲೇಟ್.. ಬರೆಯಲು ಬಣ್ಣದ ಕಡ್ಡಿ [ಬಳಪ].

ನನ್ನ ಕಾಟ ತಡೆಯಲಾರದೆ ನನ್ನ ಅಪ್ಪ ಪಕ್ಕದ ಮನೆಯ ಅನಸೂಯ ಹತ್ತಿರ ಮೇಷ್ಟ್ರನ್ನು ಕೇಳು ಸುಮಿತ್ರಾನ ಸೇರಿಸಿಕೊಳ್ತಾರ ಅಂತ ಅಂದರು. ಸ್ಕೂಲ್ ಶುರುವಾಗಿ ತಿಂಗಳಾಗ್ತಾ ಬಂದಿತ್ತು. ಅದೇ ದಿನ ಸಂಜೆ ಮನೆ ಪಕ್ಕದ ಬಾವಿಕಟ್ಟೆಯ ಬಳಿ ನಿಂತಿದ್ದೆ. ಆಗ ಬಂದ ಅನಸೂಯ ಅಪ್ಪನ ಬಳಿ ನಾಳೆಯಿಂದ ಸುಮಿತ್ರಾನ ಕಳಿಸಬೇಕಂತೆ ಮೇಷ್ಟ್ರು ಹೇಳಿದಾರೆ ಅಂದಳು. ನನಗೆ ಒಳಒಳಗೇ ಭಯ, ಮರುದಿನ ಅಪ್ಪನ ಸೈಕಲ್ ಮುಂದೆ ಕುಳಿತು ಸ್ಕೂಲ್ ಗೆ ಹೋಗುವಾಗ ಸಂತೋಷ. ಈಶ್ವರ ದೇವಸ್ಥಾನದವರೆಗೆ ಪರಿಚಿತ ದಾರಿ ಮುಂದೆ ಅಪರಿಚಿತ.. ನಮ್ಮೂರ ಹರಿಜನ ಕೇರಿಯನ್ನೂ ದಾಟಿ ದಾರಿ ಇಳುಕಲಿನಲ್ಲಿ ಮುಂದುವರೆದು ಮುರಕಲ್ಲು ಗೋಡೆ ದಾಟಿ ಒಂದು ಅಂಜೂರದ ಮರದ ಬುಡದಲ್ಲಿ ನಾವು ಇಳಿದೆವು.

ಇನ್ನೂ ಮೇಷ್ಟ್ರು ರೆಡಿ ಆಗಿರ್ಲಿಲ್ಲ. ಅಲ್ಲೇ ಪಕ್ಕದಲ್ಲಿ ಅಂಗಳದಲ್ಲಿದ್ದ ಹಳೆಯ ಮರದ ದೋಣಿಗೆ ಒರಗಿಸಿಟ್ಟ ಪುಟ್ಟ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಮುಖಕ್ಷೌರ ಮಾಡಿಕೊಳ್ಳುತ್ತಿದ್ದರು. [ಈ ದೋಣಿ ಒಂದು ಕಾಲದಲ್ಲಿ ಮಠದವರು ಸಮೀಪದಲ್ಲಿದ್ದ ತುಂಗಾನದಿಯನ್ನು ದಾಟಲು ಉಪಯೋಗಿಸುತ್ತಿದ್ದಿರಬೇಕು.] ಮೇಷ್ಟರು ವಿಭೂತಿ ಹಚ್ಚಿ ರೆಡಿಯಾಗಿ ಬಂದ ಮೇಲೆ ನನ್ನನ್ನು ಶಾಲೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆಯಿತು. ”ಇನ್ನೂ ಐದು ವರ್ಷಾನೂ ಆಗಿಲ್ಲ ಇವಳಿಗೆ’ ಅಂತ ವಯಸ್ಸನ್ನು ಅವರಿಗೆ ಬೇಕಾದಷ್ಟು ಬರೆದುಕೊಂಡರು. ಅದು ಇದ್ದಿದ್ದಕ್ಕಿಂತ ಹದಿನಾಲ್ಕು ತಿಂಗಳು ಜಾಸ್ತಿ ಅಂತ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್  ನೋಡಿದಾಗಲೇ ನನ್ನ ಗಮನಕ್ಕೆ ಬಂದಿದ್ದು. ಪರಿಣಾಮ ಎರಡು ಜನ್ಮ ದಿನಾಂಕ!

ಹೆಚ್ಚು ಬೆಳಕಿಲ್ಲದ ದೊಡ್ದ ಕೋಣೆಯಲ್ಲಿ ನಾಲ್ಕು ಉದ್ದನೆಯ ಮಣೆಗಳು. ಮೇಷ್ಟ್ರು ಕೂರಲು ಒಂದು ಖುರ್ಚಿ, ಮೇಜು ಇಷ್ಟೆ. ಅಪ್ಪ ನೀನಿಲ್ಲೇ ಕುಳಿತಿರು ನಾನು ಬಸವಾನಿಗೆ ಹೋಗಿ ಬಣ್ಣದ ಬಳಪ ತರುತ್ತೇನೆ ಎಂದು ಹೋದರು ಎಷ್ಟು ಹೊತ್ತಾದರೂ ಬರಲಿಲ್ಲ.. ನಾನು ಅಳತೊಡಗಿದೆ ಅನಸೂಯ ಸಮಾಧಾನಿಸಿದಳು. ಎರಡು ಪೀರಿಯಡ್ ಆದಮೇಲೆ ರೀಸೆಸ್ ಗೆ ಬಿಟ್ಟರು. ಎಲ್ಲರೂ ಹೊರಗೆ ಓಡಿದೆವು. ಕಾಂಪೌಂಡ್ ಆಚೆಗೆ ಒಂದು ಪುಟ್ಟ ಕೊಳ ಅದಕ್ಕೂ ಸುತ್ತಲೂ ಜಂಬಿಟ್ಟಿಗೆಯ ಗೋಡೆಯಿತ್ತು. ಇನ್ನೊಂದು ಬದಿಯಲ್ಲಿ ಹರಿಯುವ ಪುಟ್ಟ ತೊರೆ. ದಡದಲ್ಲಿ ಕಾಡು ಸೂರ್ಯಕಾಂತಿ ಹೂಗಳ ಪೊದೆಗಳು. ದಾರಿ ಗದ್ದೆಬಯಲಿನ ನಡುವೆ ಹರಿದಿತ್ತು. ಕ್ಲಾಸ್ ರೂಮ್ ಎದುರಿಗೇ ಇದ್ದ ಅಂಜೂರದ ಮರದಲ್ಲಿ ಕೆಂಪು ಕೆನ್ನೀಲಿ ಹಣ್ಣುಗಳು ಆಕರ್ಷಿಸುತ್ತಿದ್ದವು. ಆದರೆ ಆ ಮನೆಯ ಹುಡುಗ ರಾಜು ಅವನ್ನೆಲ್ಲ ಲೆಕ್ಕ ಮಾಡಿ ಇಪ್ಪತ್ತೊಂದು ಹಣ್ಣು, ನಲವತ್ತು ಕಾಯಿ ಎಂದು ಚೀಟಿ ಅಂಟಿಸಿರುತ್ತಿದ್ದ. ಮಕ್ಕಳು ಅದನ್ನು ಲೆಕ್ಕಿಸದೆ ಹಣ್ಣು ಕೀಳುತ್ತಿದ್ದರು.

school goingಒಂದನೇ ಕ್ಲಾಸ್ ನಲ್ಲಿ ನಾವು ಆರು ಜನ, ಎರಡು, ಮೂರು, ನಾಲ್ಕನೇ ಕ್ಲಾಸ್ ಗಳಲ್ಲೂ ನಾಲ್ಕು, ಐದಕ್ಕಿಂತ ಜಾಸ್ತಿಯಿಲ್ಲ. ಒಟ್ಟು ೨೫ ಮಕ್ಕಳು. ಒಬ್ಬರೇ ಮೇಷ್ಟರು. ಈ ಸ್ಕೂಲ್ ನಲ್ಲಿ ಆ ಅಂಜೂರದ ಮರವೇ ನನ್ನ ಮುಖ್ಯ ಆಕರ್ಷಣೆ. ಒಂದನೇ ಕ್ಲಾಸ್ ಗೆ ಹೋಗಲು ಪ್ರಾರಂಭಿಸಿ ಕೆಲವೇ ದಿನಗಳಾಗಿತ್ತಷ್ಟೆ . ಸ್ಕೂಲ್ ನಲ್ಲಿ ನಮಗೆ ವ್ಯಾಕ್ಸಿನೇಷನ್ ಹಾಕಲು  ಆರೋಗ್ಯ ಇಲಾಖೆಯವರು ಬಂದರು. ಅದೊಂದು ಕ್ರೂರ ಶಿಕ್ಷೆಯಂತಿತ್ತು. ಮತ್ತೊಮ್ಮೆ ಮರಕೋತಿ ಆಡುವಾಗ ಮರದ ಕೊಂಬೆಗೆ ಉದ್ದಲಂಗ ಸಿಕ್ಕಿಕೊಂಡು ನಾನು ತಲೆಕೆಳಗಾಗಿ ನೇತಾಡಿದ್ದು. ದಾರಿಯಲ್ಲಿ ಹೋಗುವವರು ಯಾರೋ ನನ್ನನ್ನು ಇಳಿಸಿದರು. ಸುಮಾರು ಹೊತ್ತು ತಲೆಕೆಳಗಾಗಿ ಇದ್ದಿದ್ದರಿಂದ ರಾತ್ರಿಯಾಗುವಾಗ ಎರಡೂ ಕೈಗಳು ಊದಿಕೊಂಡವು. ಪ್ಲಾಸ್ಟಿಕ್ ಬಳೆಗಳನ್ನು ಕತ್ತರಿಸಿ ತೆಗೆದರು.

ಈ ರುದ್ರಪ್ಪ ಮೇಷ್ಟ್ರ ನಂತರ ವಾಸಪ್ಪ ರೆಡ್ಡಿ ಎಂಬ ಚನ್ನಗಿರಿ ಕಡೆಯವರು ಬಂದರು. ಒಂದು ವರ್ಷದಲ್ಲಿ ವರ್ಗವಾಗಿ ಹೋದರು. ಆಮೇಲೆ ಸಣ್ಣರಂಗಪ್ಪ ಎಂಬ ಹುಡುಗು ಮೇಷ್ಟ್ರು ಬಂದರು. ಈ ಮೇಷ್ಟ್ರಿಗೆ ಉತ್ಸಾಹ ತುಂಬಾ, ಹೊಸದಾಗಿ ಕೆಲಸಕ್ಕೆ ಸೇರಿದ್ದರು. ನಮ್ಮಿಂದ ನಾಟಕ ಮಾಡಿಸಿದರು. ಮಕ್ಕಳನ್ನು ಪಿಕ್ ನಿಕ್ ಗೆ ಕರೆದೊಯ್ದರು. ಮೊನ್ನೆ ಪರಿಚಿತರೊಬ್ಬರು ಒಂದು ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಅಧ್ಯಾಪಕ ರಾಗಿರುವವರು, ತಮ್ಮ ಸ್ಕೂಲ್ ನಲ್ಲಿ  ಕೆಲವು ಕ್ಲಾಸ್ ನಲ್ಲಿ ಬೆರಳೆಣಿಕೆಯ ಮಕ್ಕಳಿರ್ತಾರೆ.  ಹಾಗಾಗಿ ಅವರಿಗೆ ಚೆನ್ನಾಗಿ ಕಲಿಸಲು ಸಾಧ್ಯ. ವಾರ್ಷಿಕ ಫೀಸ್ ಲಕ್ಷಗಳ ಲೆಕ್ಕದಲ್ಲಿ ’ಅಂತ ಹೇಳುತ್ತಿದ್ದರು.

ನಾವು ಓದಿದ ಸ್ಕೂಲು ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ನೀಡುತ್ತಿದ್ದ ಸ್ಕೂಲ್ ಅಂತ ನಾನು ತಮಾಷೆ ಮಾಡಿದೆ. ಆರು ಮಕ್ಕಳ ಒಂದು ತರಗತಿ. ನಮ್ಮೆಲ್ಲಾ ಕಲಿಕೆ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಮೇಷ್ಟ್ರು ಒಂದು ವರವಾಗಿದ್ದ ಕಾಲ ಅದು. ಈಗಾಗಿದ್ದರೆ ಮಕ್ಕಳು ಕಡಿಮೆ ಎಂದು ಸ್ಕೂಲನ್ನೇ ಮುಚ್ಚುತ್ತಿದ್ದರೇನೋ? ಆದರೆ ನಿಜವಾಗಿಯೂ ಮೊಬೈಲ್, ಟಿ ವಿ ಗಳಿಲ್ಲದೆ ಮೇಷ್ಟ್ರ ಮಾತು, ಪುಸ್ತಕದ ಜ್ಞಾನ ಮಾತ್ರ ‘ಪ್ರಾಥಮಿಕ ಶಿಕ್ಷಣ’ ವಾಗಿದ್ದದ್ದು ಒಳ್ಳೆಯದೇ ಆಗಿತ್ತು ಅನ್ನಿಸುತ್ತದೆ. ಉಳಿದದ್ದು ಶಾಲೆಯ ಹೊರಗೆ ನಿಜಜೀವನದಲ್ಲಿ ‘ನಲಿಯುತ್ತಾ’ ಕಲಿತದ್ದು.

ಆಗ ಒಂದು ರೀತಿಯಲ್ಲಿ ನಮ್ಮ ಓದು ಬರೆಹ ಪರಿಸರ ಸ್ನೇಹಿಯಾಗಿತ್ತು. ಅಕ್ಷರ ಕಲಿತದ್ದು ಸ್ಲೇಟ್ ನಲ್ಲಿ. ಲೆಕ್ಕ, ಚಿತ್ರ, ಉಕ್ತ ಲೇಖನ ಎಲ್ಲಾ ಸ್ಲೇಟ್ ಮೇಲೆ. ಕಾಗದದ ವ್ಯರ್ಥ ಉಪಯೋಗ ಇಲ್ಲ. ಮಳೆಗಾಲದಲ್ಲಿ ಸ್ಲೇಟ್ ನಲ್ಲಿ ಬರೆದದ್ದು ಅಳಿಸಿ ಹೋಗದಂತೆ ಕಾಪಾಡಲು ಹರಸಾಹಸ ಪಡುತ್ತಿದ್ದೆವು. ರಕ್ಸಿನ್ ಬ್ಯಾಗ್ ನಲ್ಲಿ ಸ್ಲೇಟ್ ಮತ್ತು ಕನ್ನಡ, ಗಣಿತ, ಸಮಾಜ, ವಿಜ್ಞಾನ ಪುಸ್ತಕಗಳು, ಜಾಮಿಟ್ರಿ ಬಾಕ್ಸ್ ನಲ್ಲಿ ಬಳಪ ಇತ್ಯಾದಿ..

ಮಳೆಗಾಲದಲ್ಲಿ ಕೊಡೆ ಇರಲೇಬೇಕು. ಪುಟ್ಟ ಲೇಡೀಸ್ ಕೊಡೆ. ಪಾರದರ್ಶಕ ಹಿಡಿಕೆಯ ಒಳಗೆ ಎರಡು ಗುಲಾಬಿಯ ಚಿತ್ರ. ಅಪ್ಪ ನನಗೂ ತಮ್ಮನಿಗೂ ರೈನ್ ಕೋಟ್ ತಂದುಕೊಟ್ಟಿದ್ದರೂ ನಾವು ಸ್ಕೂಲ್ ಗೆ ಹೋಗುವಾಗ ಅದನ್ನು ಹಾಕುತ್ತಿರಲಿಲ್ಲ.  ಬೇರೆ ಯಾರ ಬಳಿಯೂ ರೈನ್ ಕೋಟ್  ಇರಲಿಲ್ಲ. ನಮಗೆ ಮಾತ್ರ ಹಾಕಿಕೊಳ್ಳಲು ಸಂಕೋಚ. ಅಜ್ಜನ ಜತೆ ಗದ್ದೆಗೆ ಹೋಗುವಾಗ ಮಾತ್ರ ರೈನ್ ಕೋಟ್ ಬಳಕೆಯಾಗ್ತಿತ್ತು. ಹೊಸ ತರಗತಿ, ಹೊಸಕೊಡೆ, ಹೊಸಪುಸ್ತಕ ಜತೆಗೆ ಮತ್ತೊಂದು ಮಳೆಗಾಲ.

ಈಗ ಮತ್ತೆ ಮಳೆಗಾಲ. ಆದರೆ ಹೊಸ ತರಗತಿಯಿಲ್ಲ.   ಆದರೆ ಗಂಟೆಗಟ್ಟಲೆ ಒಬ್ಬಳೇ ಲ್ಯಾಪ್ಟಾಪ್ ಎದುರಿಗೆ ಕುಳಿತು ದೇಶ ವಿದೇಶದ ಸಾಹಿತ್ಯ, ಕಲೆ, ಸಂಗೀತ ಗಿಡ, ಮರ, ಮನುಜರ ಕುರಿತು ಓದುತ್ತೇನೆ, ಕೇಳುತ್ತೇನೆ, ನೋಡುತ್ತೇನೆ.. ಆದರೆ ಆ ಪ್ರೈಮರಿ ಸ್ಕೂಲಿನ ಆ ಪುಟ್ಟ ಕ್ಲಾಸ್ ರೂಮ್ ನಲ್ಲಿ ಅದೇ ಸಹಪಾಠಿಗಳ ಜತೆ ಕುಳಿತುಕೊಳ್ಳಲು ಸಾಧ್ಯವೇ?

‍ಲೇಖಕರು Admin

3 June, 2016

6 Comments

  1. ತಿಮ್ಮನಗೌಡ ಅ೦ಗಡಿ

    ನೆನಪುಗಳ ಸಿರಿವ೦ತಿಕೆಯ ಸೊಗಸಾದ ಬರಹ. ಮರೆಯಲಾಗದ ಬಾಲ್ಯದ ಸೊಗಡನ್ನು ತು೦ಬಾ ಚೆನ್ನಾಗಿ ಚಿತ್ರಿಸಿದ್ದೀರಿ. ನಮ್ಮ ಬಾಲ್ಯದ ನೆನಪೂ ಮನಸ್ಸಲ್ಲಿ ಮೂಡತೊಡಗಿತು.

  2. Sumithra

    ಧನ್ಯವಾದಗಳು ತಿಮ್ಮನಗೌಡರೆ.

  3. ರಾಜೇಂದ್ರ ಪ್ರಸಾದ್

    ನಾನು ನಿಮ್ಮ ಮುಂದಿನ ಪೀಳಿಗೆಯವನಾದರೂ ಅನುಭವದಲ್ಲಿ ಅರ್ಧಕ್ಕೂ ಹೆಚ್ಚಿಗೆ ನಿಮ್ಮ ಪೀಳಿಗೆಯವನೇ.. ಆದರೆ ನಾವು ಇಸ್ಕೂಲು ಸೇರುವುದರ ಒಳಗೆ ಒಂದಷ್ಟು ಜನ ಮೇಸ್ಟ್ರರು , ಹೆಂಚಿನ ಕ್ಲಾಸ್ ರೂಮುಗಳು ಸಿಕ್ಕಿದ್ದವು. ಒಂದಷ್ಟಕ್ಕೇ ಮಣೆಗಳು, ಕೆಲವಕ್ಕೆ ಬೆಂಚುಗಳು, ಇನ್ನೂ ಕೆಲವು ಬರಿ ನೆಲ, ತೆರೆಯದೆ ಮುಚ್ಚಿಟ್ಟ ಹತ್ತಾರು ಭೂಪಟಗಳು, ಸರಿಯಾಗಿ ಕಾಂಪೌಂಡ್ ಇಲ್ಲದ ದೊಡ್ಡ ಶಾಲೆಯ ಸುತ್ತ ಬರೀ ಮುಳ್ಳು ಗಿಡಗಳು ಅಬ್ಬಾ .. ಎಷ್ಟೊಂದು ನೆನಪುಗಳನ್ನು ನಿಮ್ಮ ಬರಹ ಮತ್ತೆ ನೆನಪಿಸಿತು… ಆದರೆ ನಿಮ್ಮ ತಲೆಮಾರಿನ ಕಥನ ಕೇಳಲು ಭಾಳ ಆಸಕ್ತಿಕರವಾಗಿರುತ್ತದೆ.. ನಿಮ್ಮ ನೆನಪುಗಳನ್ನು ಮತ್ತಷ್ಟು ಕೆದಕಿ ಬರೆಯಿರಿ  :)

    • Sumithra

      ಧನ್ಯವಾದ ರಾಜೇಂದ್ರ…

  4. ಬೇಲೂರು ರಘುನಂದನ್

    ನೆನಪು ಬನಿ ಬಂದು ಘಮಲು ಬಾಲ್ಯಕ್ಕೆ ಮರಳಿದಾಗ ಅನುಭವದ ಬೆರಗು ನಮ್ಮನ್ನು ಕಾಡುತ್ತದೆ. ಈ ದಾರಿಯ ಸುಂದರ ಲಹರಿ ನಿಮ್ಮ ಬರಹ ಮೇಡಂ ….

    • Sumithra

      Thank you raghunandan

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading