ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಷಾಡದ ಮಳೆ ಹನಿಗಳ ನಡುವೆ ಕಥೆ ಹುಟ್ಟುವ ಪರಿ – ಸತೀಶ್ ಚಪ್ಪರಿಕೆ

೧

– ಸತೀಶ್ ಚಪ್ಪರಿಕೆ

ಆಷಾಡದ ಮಳೆ, ದಟ್ಟ ಮೋಡಗಳು, ಬೀಸುವ ಗಾಳಿ, ಕೊರೆಯುವ ಚಳಿಗೂ ಕಥೆಗಳಿಗೂ ಏನು ಸಂಬಂಧ!? ಬೇರೆಯವರ ಪಾಲಿಗೆ ಇವುಗಳ ನಡುವೆ ಯಾವುದೇ ಸಂಬಂಧ ಕಾಣದೇ ಹೋಗಬಹುದು. ಆದರೆ ಕಳೆದ 25 ವರ್ಷಗಳ ಅವಧಿಯಲ್ಲಿ ನನ್ನೆದೆಯಲ್ಲಿ ಹುಟ್ಟಿದ ಪ್ರತಿಯೊಂದು ಕಥೆ ಕೂಡ (ಒಂದನ್ನು ಬಿಟ್ಟು) ಆಷಾಢದ ಮಳೆಗೆ ತಳುಕು ಹಾಕಿಕೊಂಡಿದೆ. 23 ವರ್ಷಗಳ ಹಿಂದೆ ಮೊದಲ ಕಥೆ ‘ಅರ್ಥ’ ಹುಟ್ಟಿದ್ದು ಸುರಿವ ಮಳೆಯ ನಡುವೆ. ಅದಾದ ಮೇಲೆ ಮೊದಲ ಕಥಾಸಂಲಕನ ‘ಬೇರು’ವಿನಲ್ಲಿ ಪ್ರಕಟಗೊಂಡ ಪ್ರತಿಯೊಂದು ಕಥೆಗಳು ಕೂಡ ಅರಳಿದ್ದು ಮಳೆ ಹನಿಗಳ ನಿನಾದದ ನಡುವೆಯೇ!

ಬೇರೆಕಥೆಗಾರರ ಮನದಲ್ಲಿ, ಎದೆಯಲ್ಲಿಕಥೆ ಹೇಗೆ ಹುಟ್ಟುತ್ತದೆ ಎನ್ನುವ ಅರಿವು ನನಗಿಲ್ಲ. ಆದರೆ, ನನ್ನೆದೆಯಲ್ಲಿ ಕಥೆ ಹುಟ್ಟುವ ಪರಿ ಹಲವು ಬಾರಿ ನನ್ನನ್ನೇ ಅಚ್ಚರಿಯ ಸಾಗರದೊಳಗೆ ಮುಳುಗಿಸಿ ಬಿಟ್ಟಿದೆ. ಕೆಲವೊಮ್ಮೆ ರಸ್ತೆಯ ಬದಿ, ಆಸ್ಪತ್ರೆಯೊಳಗೆ, ಮಾಲ್ ನ ಮೂಲೆಯಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುವಾಗ, ವಿಮಾನದಲ್ಲಿ ಹಾರುತ್ತಿರುವಾಗ, ಕೈಯಲ್ಲಿ ಬೇರೊಂದು ಪುಸ್ತಕ ಹಿಡಿದಾಗ, ದಟ್ಟಕಾನನದ ನಡುವೆ ಒಂಟಿಯಾಗಿ ನಿಂತಾಗ…ಎದೆಯಲ್ಲಿ ಕಥೆಯ ಬೀಜ ಬಿದ್ದು ಬಿಡುತ್ತದೆ. ಆ ಬೀಜ ಮನದಲ್ಲಿಯೇ ಮೊಳಕೆಯೊಡೆದು, ಸಸಿಯಾಗಿ, ಚಿಗುರೊಡೆದರೂ ಸಂಪೂರ್ಣವಾಗಿ ಅಕ್ಷರ ರೂಪ ತಾಳುವುದು ಮಾತ್ರ ಮಳೆಯ ಹನಿಗಳ ಸದ್ದಿನ ನಡುವೆಯೇ. ಅದೂ ಮೊದಲ ಮಳೆಯ ಹನಿ ಭುವಿಯನ್ನು ಚುಂಬಿಸಿ, ಘಮ್ಮೆನ್ನುವ ಮಣ್ಣಿನ ಸುವಾಸನೆ ಮೂಗಿಗೆ ಬಡಿದ ಮೇಲೆ ಕಥೆಗಳು ಅಕ್ಷರ ರೂಪ ತಾಳುವ ಪ್ರಕ್ರಿಯೆ ಆರಂಭವಾಗುತ್ತದೆ.

ಹಲವೊಮ್ಮೆ ಬೆಂಗಳೂರಿನ ಯಾರಿಗೋ ಸೇರಿದ ಎಂಟನೇ ಮಹಡಿಯ ಅಪಾರ್ಟ್ ಮೆಂಟ್ ಬಾಲ್ಕನಿಯಲ್ಲಿ ನಿಂತು; ಕೆಲವೊಮ್ಮೆಉಜಿರೆಯ ನಮ್ಮ ಮನೆಯ ಬಾಲ್ಕನಿಯಲ್ಲಿನ ತೂಗುಯ್ಯಾಲೆಯಲ್ಲಿ ಕೂತು; ಯಾವಾಗಲೋ ಒಮ್ಮೆ ಚಪ್ಪರಿಕೆ ಮನೆಯ ಅಂಗಳದಲ್ಲಿ ಒದ್ದೆಯಾಗಿ ನಿಂತು; ಶಿರಾಡಿ, ಚಾರ್ಮಾಡಿ, ಆಗುಂಬೆ, ಊಟಿಯ ಘಾಟಿಗಳಲ್ಲಿ ಸಾಗುವಾಗ ಸುರಿವ ಮಳೆಯನ್ನು ಆಸ್ವಾದಿಸಿದ ಮೇಲೆ ಎದೆಯೊಳಗಿನ ಕಥೆಗಳು ಉಕ್ಕಲಾರಂಭಿಸುತ್ತವೆ. ಅದು ಹೇಗೆಂದರೆ ಮಳೆಗಾಲದ ಸಂದರ್ಭದಲ್ಲಿ ಘಾಟಿಯ ಗುಡ್ಡಗಳ ಮೇಲಿಂದ ಎಗ್ಗಿಲ್ಲದೇ ಜಲಧಾರೆ ಉಕ್ಕಿ ಧುಮ್ಮಿಕ್ಕಿದ ಹಾಗೆ. ಹಾಗೆ ಧುಮ್ಮಿಕ್ಕುವಾಗ ಆ ಜಲಧಾರೆಯ ನಡುವೆ ನಾನೇ ಕಳೆದುಹೋಗುವ, ಸೃಜನಶೀಲ ಸ್ಖಲನದ ಸುಃಖ ಅನುಭವಿಸುವ ಸಂದರ್ಭ ವರ್ಣಿಸಲಸಾಧ್ಯ!

Untitled
ಕಥೆ ಹುಟ್ಟುವ ಪರಿಯ ಬಗ್ಗೆ ಈಗ ಬರೆಯಲು ಹೊರಟಿರುವ ಮುಖ್ಯಕಾರಣ ನನ್ನ ಎರಡನೇ ಕಥಾಸಂಕಲನ ‘ಗರ್ಭ’ ಜನ್ಮತಾಳಿರುವುದು. ಅದೂ ಕೂಡ ಒಂದು ವಿಚಿತ್ರ ಸಂಧಿಗ್ಧದಲ್ಲಿ. ಕಳೆದ ಐದಾರು-ವರ್ಷಗಳಲ್ಲಿ ಹಲವಾರು ವೈಯಕ್ತಿಕ ಕಾರಣಗಳಿಂದ ‘ಇನ್ನು ಮುಂದೆ ಕನ್ನಡದಲ್ಲಿ ಬರೆಯಬಾರದು’ ಎಂಬ ನಿರ್ಧಾರಕ್ಕೆ ಬಂದ ದಿನಗಳು ಬದುಕಲ್ಲಿ ಹಲವಿವೆ. ಹೆಚ್ಚಿನ ಪಕ್ಷ ಮಾಧ್ಯಮಲೋಕದ ಅವಿಭಾಜ್ಯ ಅಂಗವಾಗಿ ಎರಡು ದಶಕ ಕಳೆದಿರುವುದರ ಪರಿಣಾಮ, ಆ ನಕಾರಾತ್ಮಕ ಭಾವನೆ ಮೊಳಕೆ ಒಡೆದಿರಬಹುದು. ಕನ್ನಡದಲ್ಲಿ ಬರೆಯಬೇಕೋ ಅಥವಾ ಬೇಡವೋ ಎಂಬ ದ್ವಂದ್ವದ ನಡುವೆಯೇ ನನ್ನೆಲ್ಲ ಮಾದ್ಯಮದ ಕುರಿತಾದ ಬರವಣಿಗೆಗಳನ್ನು ಕೇವಲ ಇಂಗ್ಲಿಷ್ಗೆ ಸೀಮಿತಗೊಳಿಸಿ ಹಲವು ವರ್ಷಗಳೇ ಆದವು. ಅದರಿಂದ ಮನಸ್ಸಿಗೆ ಅಂತಹ ಕಿರಿ-ಕಿರಿ ಆಗಲಿಲ್ಲ. ಆ ನಡುವೆ ಕಥೆ ಮತ್ತು ಕಾದಂಬರಿಯ ಕಥಾವಸ್ತು ಎದೆಯಲ್ಲಿ ಮೊಳಕೆಯೊಡೆದಾಗಲೆಲ್ಲ, ಕನ್ನಡ ಮತ್ತು ಇಂಗ್ಲಿಷ್ ಸಂಘರ್ಷ ಮಿತಿ ಮೀರಿ ನಿಂತಿತು. ಈ ನಡುವೆ ದಶಕದಿಂದ ಎದೆಯಲ್ಲಿ ಇಟ್ಟುಕೊಂಡಿದ್ದ ‘ಮೋಕ್ಷ’ ಎಂಬ ಕಾದಂಬರಿಯ ಕಥಾ ಹಂದರವನ್ನು ಇಂಗ್ಲಿಷ್ನಲ್ಲಿ ಬರೆಯುವ ಯತ್ನ ಮಾಡಿದ್ದು ಆಯಿತು. ಒಂದು ಅಧ್ಯಾಯ ಬರೆದ ಮೇಲೆ ಕೂಡ ಮನದೊಳಗಿನ ದ್ವಂದ್ವಕ್ಕೆ ಕೊನೆ ಹಾಡಲಾಗದೇ, ‘ಮೋಕ್ಷ’ಕ್ಕೆ ಮೋಕ್ಷ ನೀಡಲು ಆಗಲೇ ಇಲ್ಲ. ಕೊನೆಗೂ ಆ ದ್ವಂದ್ವದಿಂದ ಹೊರಗೆ ಬರಲು ಸುಮಾರು ಮೂರು ವರ್ಷಗಳಷ್ಟು ದೀರ್ಘ ಕಾಲ ಬೇಕಾಯಿತು. ಸೃಜನಶೀಲ ಬರವಣಿಗೆಗಳೆಲ್ಲ ಕನ್ನಡದಲ್ಲಿ ಮತ್ತು ನನ್ನ ವೃತ್ತಿಗೆ ಸಂಬಂಧಿಸಿದ ಬರವಣಿಗೆಗಳೆಲ್ಲ ಇಂಗ್ಲಿಷ್ನಲ್ಲಿ ಎಂಬ ನಿರ್ಧಾರ   ಮೂಡಿದ ಮೇಲೆ ಮನಸ್ಸು ನಿರಾಳವಾಯಿತು. ಅದರ ಪರಿಣಾಮ ಆಷಾಢದ ಮಳೆ ಮತ್ತೆ ಸುರಿಯಿತು.

‘ಗರ್ಭ’ದಲ್ಲಿ ಇರುವ ಒಂದು ಕಥೆಯನ್ನು ಬಿಟ್ಟು, ಉಳಿದೆಲ್ಲ ಕಥೆಗಳು ಕೂಡ ಆಷಾಢದ ಮಳೆ ಹನಿಗಳ ನಡುವೆಯೇ ಅರಳಿ ನಿಂತವು. ಅದಕ್ಕೆ ಒಂದೇ ಒಂದು ಅಪವಾದವೆಂದರೆ ಸಂಕಲನದ ಶೀರ್ಷಿಕೆಯಾಗಿರುವ ‘ಗರ್ಭ.’ ಈ ಕಥೆ ಮಾತ್ರ ಹುಟ್ಟಿದ್ದು, ಅದನ್ನು ನಾನು ಬರೆದಿದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ. ಅದೆಂತಹ ಸನ್ನಿವೇಶ ಎನ್ನುವುದರ ಪೂರ್ಣ ವಿವರಣೆನೀಡುವುದಿಲ್ಲ. ‘ಗರ್ಭ’ ಹುಟ್ಟಿದ್ದು ಮತ್ತು ನಾನು ಆ ಇಡೀ ಕಥೆಯನ್ನು ಬರೆದಿದ್ದು ಆಸ್ಪತ್ರೆಯೊಂದರ ಮುಂದೆ, ಕಾರಿನಲ್ಲಿ ಕೂತು, ನಡುರಾತ್ರಿಯಲ್ಲಿ ನಾನೊಬ್ಬನೇ ಬಲವಂತವಾಗಿ ನಿದ್ರೆ ಮಾಡುವ ಯತ್ನ ಮಾಡುತ್ತಿದ್ದಾಗ. ಸೋತು ಹೋಗಿದ್ದ ಜೀವವನ್ನು ಕೊಡವಿ ಮೇಲೇಳಿಸಿದ ಕಥೆ ‘ಗರ್ಭ.’ ಆ  ಕಥೆ ಮೊಳಕೆಯೊಡೆದ ಮರಕ್ಷಣ, ಬ್ಯಾಗಿನಲ್ಲಿದ್ದ ಲ್ಯಾಪ್ಟಾಪ್ತೆಗೆದು ಒಂದೇ ಉಸಿರಿನಲ್ಲಿ ಬರೆಯಲಾರಂಭಿಸಿದಾಗ ಮುಂಜಾನೆ ಒಂದುಗಂಟೆ. ಕಥೆ ಮುಗಿಸಿದ್ದು ಮುಂಜಾನೆ ಐದು ಗಂಟೆಗೆ!

ಅದು ಅಚ್ಚರಿಯೋ ಅಥವ ವಾಸ್ತವವೋ… ಇದುವರೆಗೆ ನಾನು ಬರೆದ ಯಾವುದೇ ಕಥೆ ಬಲವಂತವಾಗಿ ಹಡೆದ ಕೂಸಲ್ಲ. ಪ್ರತಿಯೊಂದು ಕಥೆ ಕೂಡ ಅವಾಗಿಯೇ ಬರೆಸಿಕೊಂಡ ಸೃಜನಶೀಲ ತುಣುಕುಗಳು. ಆ ಕಾರಣದಿಂದಲೇ ಕಳೆದ 23 ವರ್ಷಗಳ ಅವಧಿಯಲ್ಲಿ ನನಗೆ 20 ಕಥೆಕೂಡ ಬರೆಯಲು ಸಾಧ್ಯವಾಗದೇ ಇರುವುದು. ಹಾಗೆಂದ ಕೂಡಲೇ ಅವೆಲ್ಲ ಶ್ರೇಷ್ಠ ಅಥವಾ ಅತ್ಯುತ್ತಮ ಕಥೆಗಳು ಎಂಬ ಭ್ರಮೆ ನನಗಿಲ್ಲ. ಒಬ್ಬ ನಿಜವಾದ ಕಥೆಗಾರ ಅಥವಾ ಯಾವುದೇ ಸೃಜನಶೀಲ ಲೇಖಕ ಅನುಭವಿಸುವ ಸೃಜನಶೀಲ ಸ್ಖಲನದ ಮುಂದೆ ಶ್ರೇಷ್ಠತೆಯ ವ್ಯಸನಗಳು ನಶ್ವರ. ಯಾವುದೇ ಒಂದು ಸೃಜನಶೀಲ ಕ್ರಿಯೆ ಮುಗಿದ ತತ್ಕ್ಷಣ ಸಿಗುವ ಆ ಒಂದು ಕ್ಷಣದ ‘ಸುಃಖ’ ಅನುಭವಿಸಿದವರಿಗೆ ಮಾತ್ರಗೊತ್ತು. ಅದನ್ನು ಬಿಟ್ಟು ಆನಂತರ ಬರುವ ತೆಗಳಿಕೆ, ಹೊಗಳಿಕೆ, ಅಪ್ರಶಸ್ತಿಗಳು, ಪ್ರಶಸ್ತಿಗಳು… ಒಂದು ನಿಜವಾದ ಸೃಜನಶೀಲ ಮನಸ್ಸಿನ ಅಂತಹ ಪರಿಣಾಮ ಬೀರುವುದಿಲ್ಲ.

ಒಬ್ಬ ಸೃಜನಶೀಲ ಲೇಖಕ, ಕಲಾವಿದ, ಸಂಗೀತಗಾರ… ಯಾರೇ ಆಗಲಿ,ಯಾರಿಗಾಗಿ ಸೃಜನಶೀಲ ಕ್ರಿಯೆಯಲ್ಲಿ ತನ್ಮಯನಾಗುತ್ತಾರೆ ಎಂಬ ಪ್ರಶ್ನೆಗೆ ಇರುವ ಒಂದೇ ಒಂದು ಉತ್ತರ, ‘ಅವನಿಗಾಗಿ ಅಥವ ಅವಳಿಗಾಗಿ!’ ಒಬ್ಬಕಥೆಗಾರನನ್ನೇ ತೆಗೆದುಕೊಂಡರೆ ಕಥೆ ಹುಟ್ಟುವ, ಬರೆಯುವ, ಸ್ಖಲನದ ಸುಃಖ ಅನುಭವಿಸುವುದು ಆತನಿಗೆ ಮುಖ್ಯವಾಗಿರುತ್ತದೆ. ಅದಕ್ಕಿಂತ ಮೊದಲಿನ ಹಾಗೂ ಆನಂತರದ ಗಳಿಗೆಗಳು ಕಥೆಗಾರನ ಪಾಲಿಗೆ ಅಷ್ಟು ಮುಖ್ಯವಾಗುವುದಿಲ್ಲ. ಅಂತಹ ಒಂದು ಸನ್ನಿವೇಶದಲ್ಲಿ ಎರಡನೇ ಬಾರಿಗೆ ನಾನೀಗ ನಿಂತಿದ್ದೇನೆ.

ಅದೃಷ್ಟವೋ ಅಥವ ದುರಾದೃಷ್ಟವೋ, ‘ಗರ್ಭ’ದ ಯಾವುದೇ ಕಥೆ ಇದುವರೆಗೆ ಎಲ್ಲಿಯೂ ಪ್ರಕಟವಾಗಿಲ್ಲ. ‘ಗರ್ಭ’ದ ಬೀಜ ಎದೆಯೊಳಗೆ ಬಿದ್ದಾಗ ನಾನೊಂದು ಪ್ರಜ್ಙಾಪೂರ್ವಕವಾದ ನಿರ್ಧಾರ ತೆಗೆದುಕೊಂಡಿದ್ದೆ. ಅದೇನೆಂದರೆ, ಈ ಕಥಾಸಂಕಲನದಲ್ಲಿ ಬರುವ ಯಾವುದೇ ಕಥೆಯನ್ನುಎಲ್ಲಿಯೂ ಪ್ರಕಟಣೆಗೆ ಕಳುಹಿಸಬಾರದು. ಇಲ್ಲಿನ ಪ್ರತಿಯೊಂದು ಕಥೆಯೂ ಓದುಗರ ಪಾಲಿಗೆ ಹೊಚ್ಚ ಹೊಸದಾಗಿರಬೇಕು. ಅದರಿಂದ ನನಗೆ ಆಗಬಹುದಾದ ಲಾಭ, ನಷ್ಟ ..ಅದರ ಬಗ್ಗೆ ನನಗೆ ಚಿಂತೆಯಿಲ್ಲ. ಆ ನಿರಾಳ ಮನೋಭಾವದಿಂದಲೇ, ಕೆಲವೇ ದಿನಗಳಲ್ಲಿ ‘ಗರ್ಭ’ವನ್ನು ‘ಪ್ರಕಾಶ’ಕರ ಕೈಗೆ ತಲುಪಿಸುವುದು ಮಾತ್ರ ನನ್ನಕರ್ತವ್ಯ. ಆನಂತರ ಅದೇನಿದ್ದರೂ ಓದುಗರ, ಸಾಹಿತ್ಯಾಸಕ್ತರ ಕೂಸು. ಈ ನಡುವೆ ಒಟ್ಟಾರೆ ಆಷಾಢದ ಮಳೆಯ ನಡುವೆ ಮಿಂದೆದ್ದ ಸುಃಖ ಮಾತ್ರ ನನ್ನದು.ಕಥೆಗಾರನ ಬದುಕು ಧನ್ಯವಾಗಲು ಬದುಕಲ್ಲಿ ಆಗೊಮ್ಮೆ, ಈಗೊಮ್ಮೆಇಂತಹ ಸುಃಖ, ಸಮಾಧಾನ ಸಿಕ್ಕರೆ ಸಾಕು.

‍ಲೇಖಕರು G

5 August, 2015

2 Comments

  1. mahantesh k

    ನಿಮ್ಮ ಕಥಾಸಂಕಲನ ಬೇಗ ‘ಗರ್ಭ’ದಿಂದ ಹೊರಬರಲಿ ನಾವು ಕಾತುರರಾಗಿದ್ದೇವೆ.

  2. Prof. Shiva Billava

    You tell writer yo my address. Prof Shiva Billava, 4/21,Vijaynagar, Marol Maroshi Road, Andheri (E), Mumbai-400 059.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading