ಆಲೆಮನೆ ಮತ್ತು ಕೋಣದ ಸಗಣಿ…

ತಮ್ಮಣ್ಣ ಬೀಗಾರ

ಸಾಹಿತ್ಯ, ಚಿತ್ರ ಹಾಗೂ ವ್ಯಂಗ್ಯ ಚಿತ್ರ ರಚನೆಯಲ್ಲಿ ಹೆಸರಾದವರು ತಮ್ಮಣ್ಣ ಬೀಗಾರ. ಮುಂತಾದವುಗಳಲ್ಲಿ ನಿರತರು.ಇವರ ಹಸಿರೂರಿನ ಹುಡುಗ ಪುಸ್ತಕಕ್ಕೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಹಾಗೂ ಮರಬಿದ್ದಾಗ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ಮಕ್ಕಳ ಚಂದ್ರ ಪ್ರಶಸ್ತಿ ಬಂದಿವೆ.

ಈಗೆಲ್ಲ ಆಲೆಮನೆ ಅಂದರೆ ನಮ್ಮ ಹಳ್ಳಿಗಳಲ್ಲಿ ಮೋಟಾರ ಸಹಾಯದಿಂದ ತಿರುಗುವ ಗಾಣಗಳನ್ನು ಅಳವಡಿಸಿ ಆಧುನಿಕಗೊಳಿಸಿಕೊಂಡಿದ್ದಾರೆ. ಈಗ ಆಲೆಮನೆಗಳು ತುಂಬಾ ಅಪರೂಪವಾಗಿವೆ. ಆದರೆ ಹಿಂದೆ ಹಾಗಿರಲಿಲ್ಲ. ಸಾಮಾನ್ಯವಾಗಿ ನಮ್ಮ ಊರಿನ ಪ್ರತಿ ಮನೆಗಳಲ್ಲಿಯೂ ತಮ್ಮ ಗದ್ದೆಗಳ ಒಂದಿಷ್ಟು ಭಾಗಗಳಲ್ಲಿ ಕಬ್ಬು ಬೆಳೆಸುತ್ತಿದ್ದರು. ಊಟಕ್ಕೆ ಬೇಕಾಗುವಷ್ಟು ಅಕ್ಕಿ ಬೆಳೆದುಕೊಳ್ಳುವ ಹಾಗೆ ತಿನ್ನಲು ಬೇಕಾಗುವಷ್ಟು ಬೆಲ್ಲ ಬೆಳೆದುಕೊಳ್ಳುವುದೂ ಅವರ ರೂಢಿಯಾಗಿತ್ತು.

ಇತ್ತೀಚೆಗೆ ಭತ್ತದ ಗದ್ದೆಗಳು, ಕಬ್ಬಿನ ಗದ್ದೆಗಳು, ತೆಂಗಿನ ತೋಟ, ತೋಟದ ತುಂಬಾ ಇರುತ್ತಿದ್ದ ಮಾವಿನ ಮರಗಳು, ಹಲಸಿನ ಮರಗಳು ಎಲ್ಲಾ ಮಾಯವಾಗಿ ಅಡಿಕೆ ತೋಟಗಳೇ ಆವರಿಸಿಕೊಂಡಿವೆ. ಇರಲಿ, ನಾನು ನಿಮಗೆ ಆಲೆ ಮನೆಗಳ ಬಗ್ಗೆ ಹೇಳಬೇಕು. ಆಲೆ ಮನೆ ಕೂಡಾ ಆಗಿನ ಮಕ್ಕಳಿಗೆ ಗಣೇಶನ ಹಬ್ಬ ದೀಪಾವಳಿ ಹಬ್ಬಗಳು ಹೇಗೆ ಸಂಭ್ರಮ ತರುತ್ತಿದ್ದವೋ ಹಾಗೇ ಸಂಭ್ರಮ ಸಂತಸ ತರುತ್ತಿತ್ತು.

ಆಲೆಮನೆ ಎಂದ ಕೂಡಲೇ ನನಗಂತೂ ನೆನಪಾಗುವುದು ನೊರೆ ಬೆಲ್ಲ. ಹೌದು ನೊರೆ ಬೆಲ್ಲವನ್ನು ಗರಟೆ (ತೆಂಗಿನಚಿಪ್ಪು)ಯಲ್ಲಿ ಹಾಕಿಕೊಂಡು ಕಬ್ಬು ಅರೆದು ಉಂಟಾದ ಕಬ್ಬಿನ ಸಿಪ್ಪೆಯ ತುಣುಕೊಂದನ್ನು ತೆಗೆದುಕೊಂಡು ಅದನ್ನು ಚಮಚಾದಂತೆ ಬಳಸಿ ಬೆಲ್ಲದಲ್ಲಿ ಅದ್ದಿ ಬಾಯಿಗಿಟ್ಟು ಚಪ್ಪರಿಸುತ್ತಿದ್ದೆವು. ನೊರೆ ಬೆಲ್ಲ… ಹಾಗಂದರೇನು ನಿಮಗೆ ಅನಿಸಿರಬಹುದು. ಕಬ್ಬಿನ ಹಾಲನ್ನು ದೊಡ್ಡ ಕೊಪ್ಪರಿಗೆಯಲ್ಲಿ ತುಂಬಿ ಕುದಿಸಿ ಬೆಲ್ಲ ತಯಾರಿಸುವುದು ನೀವು ಕೇಳಿರಬಹುದು. ಇಲ್ಲಿನ ಆಲೆಮನೆಗಳಲ್ಲೂ ಹಾಗೇ ಮಾಡುತ್ತಿದ್ದರು.

ನೆಲದಲ್ಲಿ ತಗ್ಗು ತೋಡಿ ಆ ತಗ್ಗಿನ ಕೊನೆಯಲ್ಲಿ ಕಬ್ಬಿಣದ ಕೊಪ್ಪರಿಗೆ ಇಡುವಂತೆ ಒಲೆಯನ್ನು ತಯಾರಿಸುತ್ತಿದ್ದರು. ಗಾಣ ತಿರುಗಿಸಿ ಕಬ್ಬನು ಅರೆದು ಬರುವ ಹಾಲಿನಿಂದ ಕೊಪ್ಪರಿಗೆ ತುಂಬಿದ ಮೇಲೆ ದೊಡ್ಡ ದೊಡ್ಡ ಮರದ ಕಾಂಡಗಳನ್ನು ಒಲೆಗೆ ಹಾಕಿ ಬೆಂಕಿ ಉರಿಸಿ ಕಬ್ಬಿನ ಹಾಲನ್ನು ಕುದಿಸುತ್ತಿದ್ದರು. ಈ ಹಾಲು ಕುದಿದು ಅದರಲ್ಲಿರುವ ನೀರಿನ ಅಂಶವೆಲ್ಲ ಆವಿಯಾಗಿ ಬೆಲ್ಲ ತಯಾರಾಗಲು ಐದಾರು ತಾಸುಗಳೇ ಬೇಕಾಗುತ್ತಿದ್ದವು.

ಕಬ್ಬಿನ ರಸ ಬಿಸಿಯಾಗಿ ಕುದಿಯಲು ಪ್ರಾರಂಭ ಆಗುವ ಮೊದಲು ಅದರ ಮೇಲೆ ಕಪ್ಪನೆಯ ಒತ್ತರ ಸಂಗ್ರಹ ಆಗುತ್ತದೆ. ಅದನ್ನು ಜಾಳಿಗೆಯ ದೊಡ್ಡ ಸೌಟಿನಿಂದ ತೆಗೆದು ಹಾಕುತ್ತಿದ್ದರು. ನಂತರ ರಸ ಕುದಿಯುತ್ತ ಕುದಿಯುತ್ತ ಆವಿಯಾಗಿ ಕೊಪ್ಪರಿಗೆಯಲ್ಲಿ ಕಡಿಮೆ ಆಗುತ್ತಿತ್ತು. ಇದೆಲ್ಲ ನನ್ನಂತಹ ಮಕ್ಕಳಿಗೆ ಆಸಕ್ತಿ ದಾಯಕ ಸಂಗತಿ ಆಗಿರಲಿಲ್ಲ.

ಬೆಲ್ಲ ಸಿದ್ಧವಾಗುತ್ತ ಬಂದಹಾಗೆ ಬೆಲ್ಲದ ಪಾಕ ಬಂಗಾರದ ಬಣ್ಣಕ್ಕೆ ತಿರುಗಿ ಕೊಪ್ಪರಿಗೆಯ ಒಳಗೆ ದೊಡ್ಡ ದೊಡ್ಡ ಗುಳ್ಳೆಗಳಾಗಿ ಜಿಗಿದು ಬೀಳುತ್ತಿತ್ತು. ಇದು ಬೆಲ್ಲ ತಯಾರಾದದ್ದರ ಸೂಚನೆ ಎಂಬುದು ನನಗೆ ಗೊತ್ತು. ಆರೀತಿ ಕುದಿಯುವುದನ್ನು ಹೆಗ್ಗೊದಿ ಎಂದು ಹೇಳುತ್ತಿದ್ದರು. ಹೆಗ್ಗೊದಿ ಬಿದ್ದಾಗ ಘಮ ಘಮ ಪರಿಮಳ ಹರಡುತ್ತಿತ್ತು. ‘ಹೆಗ್ಗೊದಿ ಬಿತ್ತು. ಇನ್ನು ಬೆಲ್ಲ ಇಳಿಸುತ್ತಾರೆ. ನಮಗೆಲ್ಲ ಬಿಸಿಯಾದ ನೊರೆಬೆಲ್ಲ ಸಿಗುತ್ತದೆ’ ಎಂದುಕೊಳ್ಳುತ್ತ ತೆಂಗಿನ ಗರಟೆ ಹಿಡಿದು ಮಕ್ಕಳೆಲ್ಲ ಸಿದ್ಧವಾಗುತ್ತಿದ್ದೆವು.

ಕುದಿಯುತ್ತಿರುವ ಬೆಲ್ಲದ ಕೊಪ್ಪರಿಗೆಯನ್ನು ಒಲೆಯಿಂದ ಮೇಲೆ ಎತ್ತಿ ಬೆಲ್ಲವನ್ನು ಕೊಪ್ಪರಿಗೆಯಿಂದ ಖಾಲಿ ಮಾಡುವುದು ತುಂಬಾ ಎಚ್ಚರಿಕೆ ಬೇಡುವ ಕೆಲಸ. ಆಗ ಮಕ್ಕಳನ್ನು ದೂರಕ್ಕೆ ಓಡಿಸುತ್ತಿದ್ದರು. ಆದರೂ ಕೆಲವರು ಉರಿಯುವ ಒಲೆಯ ಹತ್ತಿರ ಬಂದು ನಿಂತು ನೋಡಲು ಪ್ರಯತ್ನಿಸುವುದೂ ಇತ್ತು.

ಉರಿಯುವ ಒಲೆಗೇನಾದರೂ ಜಾರಿದರೆ… ಎಂಬುದು ನೆನಪಾದರೆ ಭಯವಾಗುತ್ತದೆ. ಯಾರು ಒಲೆಯ ಹತ್ತಿರ ಬಂದು ನಿಲ್ಲುತ್ತಾರೋ ಅಂತಹ ಮಕ್ಕಳನ್ನು ದೊಡ್ಡವರು ಹಿಂದಿನಿಂದ ನಿಧಾನವಾಗಿ ಬಂದು ಹಿಡಿದು ತೆಳ್ಳನೆಯ ಕೋಲಿನಿಂದ ಎರಡು ಹೊಡೆದೇ ಆಚೆಗೆ ಕಳುಹಿಸುತ್ತಿದ್ದರು. ಪೆಟ್ಟು ತಿಂದವರು ಸ್ವಲ್ಪ ಹೊತ್ತು ಅತ್ತು ನಂತರ ಗರಟೆ ಹಿಡಿದು ಬೆಲ್ಲ ತಿನ್ನಲು ವಾಪಸ್ಸಾಗುತ್ತಿದ್ದರು.

ಕೊಪ್ಪರಿಗೆಗೆ ಮೂರು ದೊಡ್ಡ ಬಳೆಗಳಾಕಾರದ ಹಿಡಿಕೆಗಳು ಇರುತ್ತಿದ್ದವು. ನೇರಕ್ಕೆ ಇರುವ ಎರಡು ಹಿಡಿಕೆಗಳ ಮೂಲಕ ದಪ್ಪನೆಯ ಗಟ್ಟಿ ಕೋಲನ್ನು ತೂರಿ ಎರಡು ಜನ ಗಟ್ಟಿಮುಟ್ಟಾದ ಹಿರಿಯರು ಅಲ್ಲೇ ಆಚೆ ನೆಟ್ಟಿರುತ್ತಿದ್ದ ಎರಡು ಕವಲು ಗೂಟಗಳ ಮೇಲೆ ಕೋಲನ್ನು ಇಟ್ಟಾಗ ಕೊಪ್ಪರಿಗೆ ತೊಟ್ಟಿಲಿನಂತೆ ತೂಗಾಡುತ್ತಿತ್ತು. ಕೊಪ್ಪರಿಗೆಯ ಅಡಿಗೆ ಮರದಿಂದ ತಯಾರಿಸಿದ ಮರಿಗೆ (ದೋಣ ಯಂತಹ ಮರದ ಪಾತ್ರೆ) ಇಡುತ್ತಿದ್ದರು.

ಈಗ ಇನ್ನೊಬ್ಬ (ಮೂರನೇ ವ್ಯಕ್ತಿ) ಕೊಪ್ಪರಿಗೆಯ ಇನ್ನೊಂದು ಹಿಡಿಕೆಯ ಒಳಗೆ ಉದ್ದ ಕೋಲನ್ನು ತೂರಿ ಅಡ್ಡ ಕೋಲಿನ ಮೇಲೆ ಅದರ ತುದಿ ಇಟ್ಟು ನಿಧಾನವಾಗಿ ಬೆಲ್ಲವನ್ನು ಕೆಳಗಿನ ಮರಿಗೆಗೆ ಸುರಿಯುತ್ತಿದ್ದರು. ನಂತರ ತೆಳ್ಳನೆಯ ಬಟ್ಟೆಯಿಂದ ಅದನ್ನು ಸೋಸುವ ಕೆಲಸವೂ ನಡೆಯುತ್ತಿತ್ತು. ಇದನ್ನೆಲ್ಲ ನೋಡುತ್ತ ಮಕ್ಕಳಾದ ನಾವು ನೊರೆ ಬೆಲ್ಲಕ್ಕಾಗಿ ಕಾಯುತ್ತಿದ್ದೆವು. ಮರದ ಮರಿಗೆಗೆ ಸುರಿದ ಬಿಸಿ ಬೆಲ್ಲದ ಮೇಲೆ ಹಳದಿಯ ದಪ್ಪನೆಯ ನೊರೆ ನೊರೆಯಾದ ಪದರವೊಂದು ಏರ್ಪಡುತ್ತಿತ್ತು. ಇದೇ ನೊರೆಬೆಲ್ಲ. ಅದು ಎಷ್ಟು ರುಚಿಯಾಗಿರುತ್ತದೆ ಎಂದರೆ ನೀವು ತಿಂದೇ ನೋಡಬೇಕು.

ಆಗಲೇ ಹೇಳಿದ ಹಾಗೆ ಕಬ್ಬು ಗಾಣದಲ್ಲಿ ಅರೆದ ನಂತರ ಗಾಣದಿಂದ ರಸ ಹಿಂಡಲ್ಪಟ್ಟು ಕಬ್ಬಿನ ಮೃದುವಾದ ಸಿಪ್ಪೆ ಹೊರಗೆ ಬರುತ್ತದೆ. ಈ ಸಿಪ್ಪೆಯನ್ನು ಆಲೆಮನೆ ಸಮೀಪದ ಖಾಲಿ ಜಾಗದಲ್ಲಿ ಒಯ್ದು ರಾಶಿ ಹಾಕುತ್ತಿದ್ದರು. ಇದು ಮೆತ್ತಗಿನ ಎತ್ತರದ ಗುಡ್ಡದ ಹಾಗೆ ಆಗಿರುತ್ತಿತ್ತು. ಈ ಕಬ್ಬಿನ ಸಿಪ್ಪೆಯ ರಾಶಿಯಲ್ಲಿ ಆಡುವ ಮಜಾ ನೀವು ಅನುಭವಿಸಿಲ್ಲ ಎನಿಸುತ್ತದೆ. ನಾವು ಐದಾರುಜನ ಮಕ್ಕಳು ನಾಲ್ಕೂ ಕಾಲುಗಳನ್ನು ಬಳಸಿ ಈ ರಾಶಿಯ ತುದಿಗೆ ಏರುತ್ತಿದ್ದೆವು. ನಮಗಿರುವುದು ಎರಡೇ ಕಾಲು ಮತ್ತೆ ನಾಲ್ಕು ಕಾಲು ಎಲ್ಲಿಂದ ಬಂತು ಅಂದುಕೊಂಡಿರಾ… ಕಾಲಿನ ಜೊತೆಗೆ ಕೈಗಳನ್ನೂ ಉಪಯೋಗಿಸಿ ನಾಲ್ಕು ಕಾಲಿರುವ ಪ್ರಾಣಗಳಂತೆ ಮೇಲಕ್ಕೆ ಹತ್ತುತ್ತಿದ್ದೆವು. ಅದಕ್ಕಾಗಿ ಹಾಗೆ ಬರೆದೆ.

ರಾಶಿಯ ತುದಿಗೆ ಹತ್ತಿ ನಿಂತು ಕಾಲಿನಿಂದ ಒತ್ತಿ ಒತ್ತಿ ಅಲುಗಿಸಿದರೆ ಇಡೀ ರಾಶಿಯೂ ತೂಗಿದಂತೆ ಆಗುತ್ತಿತ್ತು. ಇದು ನಮಗೆ ತುಂಬಾ ಮಜವೆನಿಸುತ್ತಿತ್ತು. ನಂತರ ರಾಶಿಯಿಂದ ಕೆಳಕ್ಕೆ ಜಿಗಿಯುವುದು ಪ್ರಾರಂಭವಾಗುತ್ತಿತ್ತು. ಕೆಳಗೆ ಬಿದ್ದಾಗ ಏನೂ ಆಗುತ್ತಿರಲಿಲ್ಲ. ಮತ್ತೆ ಮತ್ತೆ ಮೇಲಕ್ಕೆ ಹತ್ತುವುದು ಕೆಳಕ್ಕೆ ಜಿಗಿಯುವುದು. ಎಷ್ಟುಸಾರಿ, ಎಷ್ಟು ಹೊತ್ತು ಹೀಗೆ ಮಾಡುತ್ತ ಇರುತ್ತಿದ್ದೆವು ಎಂಬುದು ಗಣನೆಗೇ ಬರುತ್ತಿರಲಿಲ್ಲ. ನಂತರ ಪಲ್ಟಿ ಹೊಡೆಯುವುದು, ಕಬ್ಬಿನ ಸಿಪ್ಪೆಯ ರಾಶಿಯನ್ನು ಸೀಳಿಕೊಂಡು ಒಳಕ್ಕೆ ಹೊಕ್ಕು ಮಲಗುವುದು ಎಲ್ಲ ನಡೆಯುತ್ತಿತ್ತು.

ಸಿಪ್ಪೆಯ ರಾಶಿಯ ಒಳಗೆ ತೂರಿಕೊಂಡರೆ ಒಂದು ರೀತಿಯ ಮುಗ್ಗಿದ ವಾಸನೆ ಬರುತ್ತಿತ್ತು ಮತ್ತು ಒಳಗೆ ತುಂಬಾ ಬಿಸಿ ಬಿಸಿಯಾಗಿ ಇರುತ್ತಿತ್ತು. ಅದಕ್ಕೆಲ್ಲಾ ಅಲ್ಲಿ ನಡೆಯುವ ಜೈವಿಕ ಕ್ರಿಯೆ ಕಾರಣ ಎಂದು ಈಗ ಗೊತ್ತಾಗಿದೆ. ಆಡುತ್ತ ಆಡುತ್ತ ಕತ್ತಲಾದದ್ದೂ ನಮಗೆ ತಿಳಿಯುತ್ತಿರಲಿಲ್ಲ. ಅಷ್ಟರಲ್ಲಿ ದೊಡ್ಡರ‍್ಯಾದರೂ ಕೋಲಿನೊಂದಿಗೆ ಬಂದು ಮೊದಲು ಸಿಕ್ಕಿದವರಿಗೆ ಒಂದು ಪೆಟ್ಟು ಹಾಕುತ್ತಿದ್ದಂತೆ ಎಲ್ಲರಿಗೂ ಗೊತ್ತಾಗಿ ಅವರಿಗೆ ಸಿಗದಂತೆ ಓಡಿ ಮನೆ ಸೇರುತ್ತಿದ್ದೆವು.

ಮನೆ ಸೇರಿದ ಮೇಲೆ ಮೈಯಲ್ಲಾ ಮುಟ್ಟಿ ನೋಡಿಕೊಂಡರೆ ಕಬ್ಬಿನ ರಸ ಮೈಗೆ ಅಂಟಿಕೊಂಡು ಅಂಟು ಅಂಟಾಗಿರುತ್ತಿತ್ತು. ಆದರೆ ಬರಿ ಕೈಕಾಲನ್ನಷ್ಟೇ ತೊಳೆದುಕೊಳ್ಳುತ್ತಿದ್ದ ನಾವು ಮಧ್ಯಾಹ್ನ ಸ್ನಾನ ಮಾಡಿದವರು ರಾತ್ರಿ ಸ್ನಾನ ಮಾತಾಡುತ್ತಲೇ ಇರಲಿಲ್ಲ. ಆದರೆ ನೆಲದ ಮೇಲೆ ಒಂದು ಕಂಬಳಿ ಹಾಗೂ ಯಾವುದಾದರೂ ತೆಳ್ಳನೆಯ ಬಟ್ಟೆ (ಅಮ್ಮನ ಸೀರೆ ಇತ್ಯಾದಿ) ಹಾಕಿಕೊಂಡು ಮಲಗುತ್ತಿದ್ದ ನಮಗೆ ರಾತ್ರಿ ಇರುವೆ ಕಚ್ಚಿದಾಗ ಎಚ್ಚರವಾಗುತ್ತಿತ್ತು. ನಮ್ಮ ಮೈಗೆ ಅಂಟಿದ ಸಿಹಿ ದ್ರವದ ವಾಸನೆ ಇರುವೆಗಳಿಗೆ ಗೊತ್ತಾಗಿ ಅವು ಓಳಿಯಾಗಿ ಬಂದು ನಮ್ಮ ಹಾಸಿಗೆಯಲ್ಲೆಲ್ಲ ಹರಡಿಕೊಂಡು ನಮಗೆ ಕಚ್ಚುತ್ತಿದ್ದವು.

ಒಮ್ಮೊಮ್ಮೆ ಒತ್ತಾಯದಿಂದ ತಲೆ ಕೂದಲೆಲ್ಲ ನೆನೆಯುವಷ್ಟು ಕೊಬ್ಬರಿ ಎಣ್ಣೆಯನ್ನು ನಮ್ಮ ತಲೆಗೆ ಹಾಕುತ್ತಿದ್ದರು… ಆವಾಗಲೂ ರಾತ್ರಿ ಇರುವೆಗಳು ಬಂದು ತಲೆಯ ಕೂದಲ ಒಳಗೆಲ್ಲಾ ತುಂಬಿಕೊಂಡು ಗುಳು ಗುಳು ಅನಿಸಿ ಕಚ್ಚಿ ಉರಿಯಾದಾಗಲೇ ನಮಗೆ ಎಚ್ಚರವಾಗುತ್ತಿತ್ತು. ಆದರೆ ಇದಕ್ಕೆಲ್ಲಾ ನಾವು ಹೆದರುತ್ತಿರಲಿಲ್ಲ. ನಮ್ಮ ಆಟಗಳು ಈ ಕಾರಣಗಳಿಂದಾಗಿ ಮೊಟಕುಗೊಳ್ಳುತ್ತಿರಲಿಲ್ಲ.

ಭತ್ತದ ತೆನೆಯನ್ನೆಲ್ಲಾ ಬಡಿದು ಭತ್ತ ಬೇರ್ಪಡಿಸಿ ನಂತರ ಉಳಿಯುವ ಹುಲ್ಲನ್ನು ದನಗಳಿಂದ ತುಳಿಸಿ ಮೃದುಗೊಳಿಸಿ ದನದ ಮೇವಿಗಾಗಿ ಸಂಗ್ರಹಿಸುತ್ತಾರೆ. ಇಂತಹ ಹುಲ್ಲಿನ ರಾಶಿ ಕಣದ ಬದಿಯಲ್ಲಿ ಇದ್ದಾಗಲೂ ನಾವು ಮಕ್ಕಳು ಅದರಲ್ಲಿ ಇದೇರೀತಿ ಜಿಗಿದು ಕುಣ ದು ಆಡುತ್ತಿದ್ದೆವು. ಹುಲ್ಲಿನ ರಾಶಿಯಲ್ಲಿದ್ದ ಧೂಳು ನಮಗೆ ಅಂಟಿಕೊಳ್ಳುವುದಲ್ಲದೇ ಮೈ ಎಲ್ಲಾ ಹುಲ್ಲಿನಿಂದ ಗೀರಲ್ಪಟ್ಟು ಗೀರುಗಳಾಗಿ ಉರಿ ತುರಿಕೆ ಉಂಟಾದರೂ ಅದೆಲ್ಲಾ ನಮ್ಮ ಲಕ್ಷಕ್ಕೇ ಬರುತ್ತಿರಲಿಲ್ಲ…

ಗಾಣ ತಿರುಗಿಸಲು ಈಗ ಯಂತ್ರ ಬಳಸುವಂತೆ ಆಗ ಬಳಸುತ್ತಿರಲಿಲ್ಲ. ಆಗ ಗಾಣ ತಿರುಗಿಸಲು ಬಳಸುತ್ತಿದ್ದುದು ಎತ್ತು ಅಥವಾ ಕೋಣಗಳು. ಹೌದು ಗಾಣದ ಮೇಲೆ ಮರದ ತೊಲೆ ಇಟ್ಟು ಅದಕ್ಕೆ ಎರಡೂ ಕಡೆಗೆ ಒಂದೊಂದು ಮರದ ಉದ್ದನೆಯ ಗಳವನ್ನು ಜೋಡಿಸುತ್ತಿದ್ದರು. ಅದನ್ನು ಡೊಂಕಿ ಎಂದು ಹೇಳುತ್ತಿದ್ದರು. ಪ್ರತಿ ಡೊಂಕಿಗೆ ಎರಡೆರಡು ಎತ್ತು ಅಥವಾ ಕೋಣವನ್ನು ಕಟ್ಟಿ ಅವುಗಳ ಮೂಲಕ ಗಾಣ ತಿರುಗಿಸಿ ಕಬ್ಬು ಅರೆಯುವುದಾಗಿತ್ತು. ನಮ್ಮ ಊರಿನ ಆಲೆ ಮನೆಗಳಲ್ಲಿ ಹೆಚ್ಚಾಗಿ ಕೋಣಗಳನ್ನು ಈ ಕೆಲಸಕ್ಕೆ ಬಳಸುತ್ತಿದ್ದರು.

ಮಲೆನಾಡಿನಲ್ಲಿ ನೀರು ಹೆಚ್ಚು. ನಮ್ಮ ಭತ್ತದ ಗದ್ದೆಗಳು ತುಂಬಾ ಕೆಸರಿನಿಂದ ಕೂಡಿರುತ್ತಿದ್ದವು. ಗದ್ದೆಯನ್ನು ಉಳುಮೆ ಮಾಡುವಾಗ ಉಳುವವನ ಕಾಲುಗಳು ಮೊಣಕಾಲಿಗಿಂತಲೂ ಮೇಲೆ ಕೆಸರಿನಲ್ಲಿ ಹೂತು ಹೋಗುತ್ತಿತ್ತು. ಹಾಗೆಯೇ ಉಳುಮೆಗೆ ಕಟ್ಟಿದ ಕೋಣಗಳ ಕಾಲೂ ತೊಡೆಯ ವರೆಗೆ ಹೂತು ಹೋಗಿ ಮೇಲಿನ ಭಾಗವಷ್ಟೇ ಕಾಣುತ್ತಿದ್ದುದೂ ಇದೆ. ಇಂತಹ ಕೆಸರು ಗದ್ದೆಗಳಿಗೆಲ್ಲ ಎತ್ತುಗಳನ್ನು ಇಳಿಸಿದರೆ ಅವು ಮುಂದಕ್ಕೆ ಹೋಗದೆ ಹೆದರಿ ಹಟಮಾಡುತ್ತಿದ್ದವು. ಹಾಗಾಗಿ ನಮ್ಮ ಪ್ರದೇಶಕ್ಕೆ ಕೋಣಗಳೇ ಹೆಚ್ಚು ಸೂಕ್ತ ಎಂದು ಕೋಣ ಎಮ್ಮೆಗಳನ್ನೇ ಹೆಚ್ಚಾಗಿ ಸಾಕುತ್ತಿದ್ದರು. ಹಾಗಾಗಿಯೇ ಆಲೆಮನೆ ಕೆಲಸಕ್ಕೂ ಕೋಣವನ್ನೇ ಬಳಸುತ್ತಿದ್ದರು.

ಹಾಂ, ಈ ಕೋಣಗಳು ನಿರಂತರವಾಗಿ ತಿರುಗುವಂತೆ ಅವರ ಬೆನ್ನ ಹಿಂದೆ ಯಾರಾದರೂ ಸಣ್ಣ ಕೋಲನ್ನು ಹಿಡಿದು ತಿರುಗ ಬೇಕಾಗಿತ್ತು. ಅವು ನಿಧಾನವಾಗಿ ಹೋಗುತ್ತಿದ್ದರೆ ಅವನ್ನು ಹೆದರಿಸಿ ಬೆನ್ನ ಮೇಲೆ ಕೋಲಿನಿಂದ ಹೊಡೆದು ಜೋರಾಗಿ ಹೋಗುತ್ತಿರುವಂತೆ ನೋಡಿಕೊಳ್ಳಬೇಕಾಗಿತ್ತು. ಹಿರಿಯರ ದೃಷ್ಟಿಯಲ್ಲಿ ಇದು ಮಕ್ಕಳು ಮಾಡಬೇಕಾದ ಕೆಲಸ.

ಕಬ್ಬನ್ನು ಗಾಣಕ್ಕೆ ಕೊಡುವ ಕೆಲಸವಿದ್ದರೂ ಕಬ್ಬಿನ ಜೊತೆ ತಮ್ಮ ಕೈಯನ್ನು ಗಾಣದ ಬಾಯಿಗೆ ಹಾಕಿಕೊಂಡಾರು ಎಂದು ಮಕ್ಕಳನ್ನು ಆ ಕೆಲಸಕ್ಕೆ ತೊಡಗಿಸುವುದು ಕಡಿಮೆ ಆಗಿತ್ತು. ನಮ್ಮ ಮನೆಯಲ್ಲಿ ಆಲೆಮನೆ ಶುರುವಾದಾಗ ನಾನು ಉತ್ಸಾಹದಿಂದಲೇ ಈ ಕೆಲಸ ಶುರುಮಾಡಿಕೊಳ್ಳುತ್ತಿದ್ದೆ. ಆದರೆ ಗಂಟೆಗಟ್ಟಲೆ ಕೋಣಗಳ ಹಿಂದೆಯೇ ತಿರುಗುವುದು ಬೇಜಾರಾಗುತ್ತಿತ್ತು. ಆಲೆಮನೆ ಕೆಲಸ ಮಾಡುವ ಕೋಣಗಳಿಗೆ ಕೊಡುತ್ತಿದ್ದ ಮುಖ್ಯ ಆಹಾರವೆಂದರೆ ಕಬ್ಬಿನ ಹಸಿರಾದ ಎಲೆಗಳು.

ಕಬ್ಬಿನ ಬುಡ ಕಡಿಯುವ ಮೊದಲು ಅದರ ತಲೆಯ ಭಾಗವನ್ನು ಕತ್ತರಿಸಿ ಹಸಿರು ಎಲೆಗಳನ್ನು ಒಟ್ಟು ಸೇರಿಸಿ ಹೊರೆಯನ್ನು ಕಟ್ಟುತ್ತಿದ್ದರು. ಈ ಹೊರೆಗಳನ್ನು ಕೋಣಗಳಿಗೆ ತಿನ್ನಲು ಆಹಾರವಾಗಿ ಕೊಡುತ್ತಿದ್ದರು. ಆಲೆಮನೆ ಕೆಲಸ ಮಾಡುವ ಕೋಣಗಳನ್ನು ಹೊರಕ್ಕೆ ಮೇಯಲು ಬಿಡುವುದು ಕಡಿಮೆ ಆಗಿತ್ತು. ಹೊಟ್ಟೆ ತುಂಬಾ ಕಬ್ಬಿನ ಹಸಿರೆಲೆಗಳನ್ನು ತಿಂದಿರುತ್ತಿದ್ದ ಕೋಣಗಳು ಗಾಣದ ಸುತ್ತ ತಿರುಗುತ್ತ ಆಗಾಗ ಒಂದು ರೀತಿಯ ಕಪ್ಪು ಮಿಶ್ರಿತ ಹಸಿರು ಸಗಣಿಯನ್ನು ರಾಶಿ ರಾಶಿಯಾಗಿ ಹಾಕುತ್ತಿದ್ದವು. ಕೋಣಗಳು ಈ ರೀತಿ ವಿಸರ್ಜಿಸಿದ ಸಗಣಿಯನ್ನು ಆಲೆ ಮನೆಯಿಂದ ಹೊರಕ್ಕೆ ಹಾಕುವುದು ಕೋಣದ ಹಿಂದೆ ತಿರುಗುವವನದೇ ಕೆಲಸ. ಆಗ ನಾವು ಅಡಿಕೆ ಮರದ ಹಾಳೆಯನ್ನು ತಂದು ಇಟ್ಟುಕೊಂಡಿರುತ್ತಿದ್ದೆವು.

ಕೋಣ ಸಗಣಿ ಹಾಕಲು ಪ್ರಾರಂಭಿಸುತ್ತಿದ್ದಂತೆ ಅದರಡಿಯಲ್ಲಿ ಹಾಳೆ ಹಿಡಿದು ಅದು ಕೆಳಗೆ ನೆಲದ ಮೇಲೆ ಬೀಳದಂತೆ ಸಂಗ್ರಹಿಸಿ ಹೊರಕ್ಕೆ ಹಾಕುವುದು ನಮ್ಮ ಉಪಾಯ. ಆದರೆ ನಾನೆಲ್ಲೋ ನೋಡುತ್ತಿದ್ದಾಗ ಕೋಣ ಸಗಣಿ ಹಾಕಲು ಪ್ರಾರಂಭಿಸಿ ಬಿಡುತ್ತಿತ್ತು. ಹಾಳೆ ಹಿಡಿಯುವಷ್ಟರಲ್ಲಿ ನೆಲದಮೇಲೆ ಬೀಳುತ್ತಿತ್ತು. ಗಡಬಿಡಿಯಲ್ಲಿ ಹಿಡಿಯಲು ಹೋಗಿ ಮೈಮೇಲೂ ಬೀಳಿಸಿಕೊಂಡಿದ್ದಿದೆ. ಆಗೆಲ್ಲ ಕಬ್ಬಿನ ಸಿಹಿ ಹಾಲು, ಬೆಲ್ಲ, ಕಬ್ಬಿನ ಕೋಲಿನ ರುಚಿಯ ಖುಷಿ ಎಲ್ಲ ಒಂದಿಷ್ಟುಹೊತ್ತು ಮರೆತು ಹೋಗುವುದು ಇದ್ದರೂ… ಸಿಟ್ಟು ಬರುತ್ತಿರಲಿಲ್ಲ.

ಆಲೆಮನೆಯ ಸಂಭ್ರಮದಲ್ಲಿ ಶುಂಟಿ ಬೆರೆಸಿದ ಕಬ್ಬಿನ ಹಾಲು, ಕುದಿಯುವ ಬೆಲ್ಲದಲ್ಲಿ ಬೇಯಿಸಿದ ಪಪ್ಪಾಯಿ, ಎಳೆ ತೆಂಗಿನಕಾಯಿಯ ಹೋಳುಗಳು, ಕಬ್ಬಿನ ಹಾಲು ಬಳಸಿ ಮಾಡುವ ಸಿಹಿ ದೋಸೆ, ಒಬ್ಬರ ಆಲೆ ಮನೆ ಮುಗಿಯುತ್ತಿದ್ದಂತೆ ಇನ್ನೊಂದು ಆಲೆಮನೆ ಪ್ರಾರಂಭವಾಗುವುದು ಎಲ್ಲ ಊರ ತುಂಬ ಹರಡುವ ಖುಷಿಗಳಾದರೆ ಇವುಗಳ ಮುಂದೆ ಕೋಣದ ಸಗಣಿ ಖುಷಿಗೆ ಒಂದಿಷ್ಟು ಗೊಬ್ಬರವೇ ಹೊರತು ಮತ್ತಿನ್ನೇನೂ ಅಲ್ಲ.

‍ಲೇಖಕರು Admin

June 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ನೂತನ ದೋಶೆಟ್ಟಿ

    ಆಲೆಮನೆಯ ನೆನಪನ್ನು ಚೆನ್ನಾಗಿ ಮಾಡಿಸಿದ್ದೀರಿ. ನನಗೂ ನೊರೆ ಬೆಲ್ಲ ಬಹಳ ಇಷ್ಟ. ನಾವೂ ಕಬ್ಬಿನ ಸಿಪ್ಪೆಯಿಂದಲೇ ತಿನ್ನುತ್ತಿದ್ದೆವು. ಆಗಷ್ಟೇ ತೆಗೆದು ಕಬ್ಬಿನ ಹಾಲಿಗೆ ಮೆಣಸಿನ ಕಾಳು, ಶುಂಠಿ ಹಾಕಿ ಕುಡಿದರದೇ ಸ್ವರ್ಗ. ನನಗೆ ಬಹಳ ಇಷ್ಟವಾಗುವುದು ಆಲೆಮನೆಯ ಸುತ್ತ ಏರ್ಪಡುವ ಹಬ್ಬದ ವಾತಾವರಣ.

    ಪ್ರತಿಕ್ರಿಯೆ
    • ತಮ್ಮಣ್ಣ ಬೀಗಾರ

      ಧನ್ಯವಾದಗಳು ಮೇಡಂ. ನಮಸ್ತೆ

      ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    ಆಲೆಮನೆಯ ಕಬ್ಬಿನ ಹಾಲಿನ ರುಚಿ ವಿಶಿಷ್ಠವಾದದ್ದು. ಶೀತ ಒಡೆಯಲಿ ಎಂದು ಶುಂಠಿ ಮೆಣಸು ಕುಟ್ಟಿ ಹಾಕುತ್ತಿದ್ದರು. ನೊರೆನೊರೆಯ , ಸಿಹಿ ,ಕಾರ ಮತ್ತು ಕೊಂಚವೆ ಕೊಂಚ ಹುಳಿ ಮಿಶ್ರಿತ ಆ ಹಾಲಿನ ರುಚಿ ಬಹಳ ದಿನ ನಾಲಿಗೆಯಲ್ಲಿ ಉಳಿಯುವಂತಹದ್ದು. ನೀವು ನೊರೆ ಅನ್ನುವುದನ್ನು ನಮ್ಮ ಕಡೆ ಬಿಸಿಬೆಲ್ಲ ಅನ್ನುತ್ತೇವೆ ಅನಿಸುತ್ತದೆ. ಆಲೆಮನೆಗೆ ಹೋದವರಿಗೆಲ್ಲ ಮುದ್ದೆ ಮುದ್ದೆ ಕೊಡುತ್ತಿದ್ದರು. ಮೈಸೂರು ಪಾಕು ಅದರ ಮುಂದೆ ಏನೇನೂ ಅಲ್ಲ. ಮೆತ್ತಮೆತ್ತಗೆ , ಹಲ್ವಾ ತರಹದ ಅದನ್ನು ಬಿಸಿಯಲ್ಲಿ ತಿಂದವರು ಮರೆಯುವುದಿಲ್ಲ.

    ಈಗ ಆಲೆಮನೆಗಳಿಲ್ಲ. ಫ್ಯಾಕ್ಟರಿಗೆ ಕಬ್ಬು ಹೋಗುವುದು ಶುರುವಾದ ಮೇಲೆ ಬಹಳ ಶ್ರಮ , ಬಹಳ ಎಚ್ಚರಿಕೆ ಅಗತ್ಯವಾದ ಆಲೆಮನೆಗಳ ಕೆಲಸವನ್ನು ಮೈಮೇಲೆ ಎಳೆದುಕೊಳ್ಳುವವರು ಕಡಿಮೆಯಾದರು.

    ನಮ್ಮ ಕಡೆ ನೀರಿನ ವಸ್ತಿ ಕಡಿಮೆ. ನೀರಿನ ವಸ್ತಿಯಿದ್ದ ಎಲ್ಲೋ ಕೆಲವರು ಕಬ್ಬಿನ ಗದ್ದೆಗೆ ಮನಸ್ಸು ಮಾಡುತ್ತಿದ್ದರು. ಬಹಳ ಅಪರೂಪ. ಮನೆ ಮಟ್ಟಿಗೆ ಬೆಲ್ಲ ಮಾಡಿಕೊಳ್ಳುತ್ತಿದ್ದವರು ಅಲ್ಲಲ್ಲಿ ಇದ್ದರಷ್ಟೇ ಹೊರತು ಭಾರೀ ಕಬ್ಬಿನಗದ್ದೆಗಳಾಗಲೀ ಭಾರೀ ಆಲೆಮನೆಗಳಾಗಲೀ ಕಡಿಮೆ. ನೀರಿನ ಹಾಹಾಕಾರ ಜಾಸ್ತಿ. ಹೀಗೆ ಅಪರೂಪದ ಆಲೆಮನೆ ಹಾಕಿದರೆ ಮುತ್ತುವ ಜನಕ್ಕೆ ಹಾಲು ಬಿಸಿಬೆಲ್ಲದ ಪೂರೈಕೆಗೇ ಅರ್ಧ ಬಂಡವಾಳ ಖಾಲಿಯಾಗುವುದು. ಆದರೆ ಜನರ ಮನಸ್ಸು ದೊಡ್ಡದು. ಅಂತೂ ಬಂದವರಿಗೆಲ್ಲ ಸಪ್ಲೈ ಮಾಡುತ್ತಿದ್ದರು.

    ನಿಮ್ಮ ಲೇಖನ ನಲವತ್ತು ಐವತ್ತು ವರ್ಷಗಳ ಹಿಂದಿನ ನೆನಪು ತಂದಿತು‌

    ಪ್ರತಿಕ್ರಿಯೆ
    • ತಮ್ಮಣ್ಣ ಬೀಗಾರ

      ನಿಜ ಮೇಡಮ. ಇದು ನನ್ನ ಬಾಲ್ಯದ ನೆನಪು. ನಮ್ಮ ಮಲೆನಾಡಿನ ಬೆಲ್ಲ ತೆಳುವಾದ ಜೋನಿ ಬೆಲ್ಲ. ಬಿಸಿ ಬೆಲ್ಲದ ಮೇಲೆ ಬಂಗಾರದ ಬಣ್ಣದ ನೊರೆಯ ಪದರ ಇರುತ್ತದೆ. ಅದೇ ನೊರೆಬೆಲ್ಲ. ನಿಮ್ಮ ವಿವರವೆಲ್ಲ ಓದಿ ಖುಷಿ ಆಯಿತು. ವಂದನೆಗಳು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: