ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.
ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.
ಭಾಗ – ೮
ಬೆಳಿಗ್ಗೆ ಎದ್ದಾಗ ಈಶಾನ್ಗೆ ತನ್ನ ಮನೆಯ ಗೋಡೆಗಳೇ ಅಪರಿಚಿತವಾಗಿ ಕಾಣಿಸಿದವು. ಕಿಟಕಿಯ ಹೊರಗೆ ಬೆಂಗಳೂರಿನ ಆಕಾಶ ಬೂದುಬಣ್ಣದಿಂದ ತುಂಬಿತ್ತು. ರಾತ್ರಿಯಿಡೀ ಸುರಿದ ಮಳೆಯ ನೀರು ಬಾಲ್ಕನಿಯ ಅಂಚಿನಿ೦ದ ಹನಿಹನಿಯಾಗಿ ಕೆಳಗೆ ಬೀಳುತ್ತಿತ್ತು. ರಸ್ತೆಯಲ್ಲಿ ವಾಹನಗಳ ಸದ್ದು ಆರಂಭವಾಗಿತ್ತು. ಪಕ್ಕದ ಮನೆಯ ಅಡುಗೆಮನೆಯಿಂದ ಪಾತ್ರೆಗಳ ಸದ್ದು ಕೇಳಿಸುತ್ತಿತ್ತು. ಎಲ್ಲವೂ ಎಂದಿನ೦ತೆಯೇ ಇದ್ದರೂ, ಈಶಾನ್ನೊಳಗೆ ಮಾತ್ರ ಏನೋ ಬದಲಾಗಿತ್ತು.
ಹಿಂದಿನ ರಾತ್ರಿ ಮ್ಯೂಸ್ ತೋರಿಸಿದ್ದ ಕಡತ ಅವನ ಮನಸ್ಸಿನಿಂದ ದೂರವಾಗುತ್ತಿರಲಿಲ್ಲ. ಸಾರಾಳ ಬಗ್ಗೆ ಅದು ಬರೆದಿದ್ದ ಮಾತುಗಳು ಸತ್ಯವೋ ಸುಳ್ಳೋ ಎಂಬುದಕ್ಕಿ೦ತ, ಅವಳ ಬಗ್ಗೆ ಅನುಮಾನ ಪಡುವಂತೆ ತನ್ನ ಮನಸ್ಸನ್ನು ಅದು ಹೇಗೆ ಪ್ರೇರೇಪಿಸಿತು ಎಂಬುದೇ ಅವನನ್ನು ಹೆಚ್ಚು ಕಾಡುತ್ತಿತ್ತು. ಒಂದು ತಂತ್ರಾ೦ಶವು ತನ್ನ ಬದುಕಿನ ನಿರ್ಧಾರಗಳ ಮೇಲೆ ಇಷ್ಟು ಪ್ರಭಾವ ಬೀರಲು ತಾನು ಹೇಗೆ ಅವಕಾಶ ಕೊಟ್ಟೆ ಎಂಬ ಪ್ರಶ್ನೆಗೆ ಅವನ ಬಳಿ ಉತ್ತರ ಇರಲಿಲ್ಲ.
ಸಂಜೆ ಸಾರಾಳನ್ನು ಭೇಟಿಯಾಗಬೇಕಿತ್ತು. ಅವಳು ಹೇಳಲು ಹೊರಟಿದ್ದ ಸಂಗತಿಯನ್ನು ಕೇಳುವ ಮೊದಲು ತನ್ನ ಮನಸ್ಸನ್ನು ಶಾಂತಗೊಳಿಸಬೇಕೆ೦ದು ಅವನು ನಿರ್ಧರಿಸಿದ.ಆದರೆ ಶಾಂತವಾಗಿರಲು ಪ್ರಯತ್ನಿಸಿದಷ್ಟೂ ಹಳೆಯ ನೆನಪುಗಳು ಒಂದೊAದಾಗಿ ಮೇಲಕ್ಕೆ ಬರತೊಡಗಿದವು.ಬಾಲ್ಯದ ಮನೆ. ಮಳೆಗಾಲದ ಸಂಜೆಯೊ೦ದು. ವಿದ್ಯುತ್ ಇಲ್ಲದ ಕತ್ತಲೆ. ಕಿಟಕಿಯ ಬಳಿಯಿದ್ದ ಮರದ ಮೇಜು. ಹಳೆಯ ನೋಟ್ಬುಕ್ನಲ್ಲಿ ಏನನ್ನೋ ಬರೆಯುತ್ತಿದ್ದ ಪುಟ್ಟ ಹುಡುಗ. ಬಾಗಿಲಿನ ಬಳಿ ನಿಂತಿದ್ದ ಅವನ ತಂದೆ.ಆ ದೃಶ್ಯವನ್ನು ಮ್ಯೂಸ್ ಈಗಾಗಲೇ ಅವನಿಗೆ ತೋರಿಸಿತ್ತು. ಆದರೆ ಅದಕ್ಕಿಂತಲೂ ಹಿಂದೆ, ಆ ನೆನಪಿನೊಳಗೆ ಮತ್ತೊಂದು ಮುಖವಿತ್ತು. ಕನಸಿನಲ್ಲಿ ಕಂಡಿದ್ದ, ತನ್ನಂತೆಯೇ ಕಾಣುತ್ತಿದ್ದ ಹುಡುಗನ ಪಕ್ಕದಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿ.ಅವನ ಮುಖ ನೆನಪಾಗುತ್ತಿರಲಿಲ್ಲ.ಆದರೆ ಆ ವ್ಯಕ್ತಿಯ ಸಾನ್ನಿಧ್ಯ ತನ್ನ ಬಾಲ್ಯದೊಂದಿಗೆ ಯಾವುದೋ ರೀತಿಯಲ್ಲಿ ಬೆಸೆದುಕೊಂಡಿದೆ ಎಂಬ ಭಾವನೆ ಮಾತ್ರ ಸ್ಪಷ್ಟವಾಗಿತ್ತು.
ಈಶಾನ್ ಹಾಸಿಗೆಯಿಂದ ಎದ್ದು ನೇರವಾಗಿ ಹಳೆಯ ವಸ್ತುಗಳನ್ನು ಇಟ್ಟಿದ್ದ ಕಪಾಟಿನತ್ತ ನಡೆದ.ಅವನ ತಂದೆ ಭಟ್ಟರು ತೀರಿಕೊಂಡು ಹನ್ನೆರಡು ವರ್ಷಗಳಾಗಿದ್ದವು. ತಾಯಿ ಈಗ ಧಾರವಾಡದಲ್ಲಿ ಈಶಾನ್ನ ತಂಗಿಯೊ೦ದಿಗೆ ವಾಸಿಸುತ್ತಿದ್ದರು. ಬೆಂಗಳೂರಿನ ಮನೆಗೆ ಬಂದಾಗಲೆಲ್ಲ ಅವರು ಹಳೆಯ ವಸ್ತುಗಳನ್ನು ತೆಗೆದುಹಾಕುವಂತೆ ಹೇಳುತ್ತಿದ್ದರು. ಆದರೆ ಈಶಾನ್ಗೆ ಅವುಗಳನ್ನು ಎಸೆಯಲು ಮನಸ್ಸಾಗುತ್ತಿರಲಿಲ್ಲ.
ತಂದೆಯ ಹಳೆಯ ಕನ್ನಡ ಪುಸ್ತಕಗಳು, ಕಾಲೇಜಿನ ದಿನಗಳ ಪತ್ರಗಳು, ಕೆಲವು ಛಾಯಾಚಿತ್ರಗಳು, ಅವನು ಬಾಲ್ಯದಲ್ಲಿ ಬರೆದಿದ್ದ ಚಿತ್ರಗಳು ಇವೆಲ್ಲವನ್ನೂ ಎರಡು ದೊಡ್ಡಪೆಟ್ಟಿಗೆಗಳಲ್ಲಿ ತುಂಬಿ ಇಟ್ಟಿದ್ದ.ಇಷ್ಟು ವರ್ಷಗಳಲ್ಲಿ ಅವುಗಳನ್ನು ಸರಿಯಾಗಿ ಪರಿಶೀಲಿಸಿರಲಿಲ್ಲ.
ಕಪಾಟಿನ ಕೆಳಗಿನ ಪೆಟ್ಟಿಗೆಯನ್ನು ಹೊರತೆಗೆದಾಗ ಧೂಳಿನ ವಾಸನೆ ಮೂಗಿಗೆ ಬಡಿಯಿತು. ಅದರೊಳಗೆ ಪುಸ್ತಕಗಳ ನಡುವೆ ಹಳೆಯ ನೋಟ್ಬುಕ್ಗಳ ಗುಚ್ಛವಿತ್ತು. ಕೆಲವು ಗಣಿತದ ಅಭ್ಯಾಸ ಪುಸ್ತಕಗಳು, ಶಾಲೆಯ ಪ್ರಬಂಧಗಳು, ಅಪೂರ್ಣ ಕಥೆಗಳು.ಅವನು ಒಂದೊ೦ದಾಗಿ ಪುಟಗಳನ್ನು ತಿರುಗಿಸಿದ. ಒಂದು ನೋಟ್ಬುಕ್ನ ಮೊದಲ ಪುಟದಲ್ಲಿ ಬಾಲಿಶವಾದ ಅಕ್ಷರಗಳಲ್ಲಿ ಹೀಗೆ ಬರೆಯಲಾಗಿತ್ತು. “ನಾನು ದೊಡ್ಡವನಾದ ಮೇಲೆ ಕಥೆಗಳನ್ನು ಬರೆಯುತ್ತೇನೆ. ನನ್ನ ಕಥೆಗಳಲ್ಲಿ ಯಾರೂ ಬಡವರಾಗಿರುವುದಿಲ್ಲ. ಯಾರೂ ಯಾರನ್ನೂ ಹೆದರಿಸುವುದಿಲ್ಲ. ಎಲ್ಲರಿಗೂ ತಮಗೆ ಬೇಕಾದ ಬದುಕನ್ನು ಆಯ್ಕೆಮಾಡುವ ಹಕ್ಕಿರುತ್ತದೆ.”
ಈಶಾನ್ನ ತುಟಿಗಳಲ್ಲಿ ಸಣ್ಣ ನಗು ಮೂಡಿತು.ಅದು ಅವನ ಹನ್ನೆರಡನೆಯ ವಯಸ್ಸಿನ ಬರವಣಿಗೆಯಾಗಿರಬೇಕು. ಆ ವಯಸ್ಸಿನಲ್ಲಿ ಜಗತ್ತನ್ನು ಬದಲಾಯಿಸಬಹುದೆಂಬ ನಂಬಿಕೆ ಅವನಲ್ಲಿ ಇತ್ತು. ಕಥೆಗಳ ಮೂಲಕ ಅನ್ಯಾಯವನ್ನು ಸರಿಪಡಿಸಬಹುದು, ಮನುಷ್ಯರ ನೋವನ್ನು ಕಡಿಮೆ ಮಾಡಬಹುದು ಎಂಬ ಸರಳವಾದ ಕನಸು.ಅವನು ಮುಂದಿನ ಪುಟಗಳನ್ನು ತಿರುಗಿಸಿದ.
ಒಂದು ಪುಟದಲ್ಲಿ ಅರ್ಧಕ್ಕೆ ನಿಂತಿದ್ದ ಕಥೆಯಿತ್ತು. ಮತ್ತೊಂದು ಪುಟದಲ್ಲಿ ಶಾಲೆಯ ಶಿಕ್ಷಕನ ವ್ಯಂಗ್ಯಚಿತ್ರ. ಕೆಲವು ಪುಟಗಳಲ್ಲಿ ತಂದೆಯ ಬಗ್ಗೆ ಬರೆದಿದ್ದ ಕೋಪದ ಸಾಲುಗಳು.ಆದರೆ ಅವನಿಗೆ ಬೇಕಾಗಿದ್ದ ದೃಶ್ಯ ಸಿಗಲಿಲ್ಲ.ವಿದ್ಯುತ್ ಇಲ್ಲದ ಆ ಸಂಜೆಯ ನೆನಪು. ತಂದೆ ಬಂದು ನೋಟ್ಬುಕ್ ಕಿತ್ತುಕೊಂಡ ಘಟನೆ. ಆ ನಂತರ ಅವನು ಬರೆದಿದ್ದ ವಾಕ್ಯ.ಅದು ಈ ಪುಸ್ತಕದಲ್ಲಿರಲಿಲ್ಲ.ಅವನು ಇನ್ನೊಂದು ಪುಸ್ತಕವನ್ನು ತೆರೆದ. ಅದರ ಮಧ್ಯದ ಪುಟದಲ್ಲಿ ಪೆನ್ಸಿಲ್ನಿಂದ ಬರೆಯಲಾಗಿದ್ದ ಒಂದು ಸಾಲು ಕಾಣಿಸಿತು.“ನನ್ನ ಕಥೆಯನ್ನು ನಾನು ಬರೆಯದಿದ್ದರೆ, ಅದನ್ನು ಬೇರೆಯವರು ತಮ್ಮ ಇಷ್ಟದಂತೆ ಬದಲಾಯಿಸುತ್ತಾರೆ.” ಈಶಾನ್ನ ಬೆರಳುಗಳು ಆ ವಾಕ್ಯದ ಮೇಲೆ ನಿಂತವು.ಅವನು ಅದನ್ನು ಯಾವಾಗ ಬರೆದಿದ್ದ? ಯಾವ ಘಟನೆಯ ನಂತರ ಈ ಆಲೋಚನೆ ಅವನ ಮನಸ್ಸಿಗೆ ಬಂದಿತ್ತು? ಅವನಿಗೆ ನೆನಪಾಗಲಿಲ್ಲ. ಆದರೆ ಆ ವಾಕ್ಯ ಮ್ಯೂಸ್ನಿಂದ ಬಂದAತೆ ಕಾಣಲಿಲ್ಲ. ಅದು ಅವನದೇ ಬಾಲ್ಯದ ಅಕ್ಷರಗಳಲ್ಲಿ ಬರೆಯಲ್ಪಟ್ಟಿತ್ತು. ಅಕ್ಷರಗಳ ನಡುವಿನ ಅಸಮತೋಲನ, ಕೆಲವು ಪದಗಳ ಮೇಲೆ ಒತ್ತಡ, ಕೊನೆಯ ಅಕ್ಷರವನ್ನು ಎಳೆದು ಬರೆಯುವ ಅಭ್ಯಾಸಇವೆಲ್ಲವೂ ಅವನಹಳೆಯ ಬರವಣಿಗೆಯ ಲಕ್ಷಣಗಳಾಗಿದ್ದವು.
ಅವನು ನೋಟ್ಬುಕ್ ಅನ್ನು ಮೇಜಿನ ಮೇಲೆ ಇಟ್ಟು ಕಿಟಕಿಯ ಕಡೆಗೆ ನೋಡಿದ. ಆದರೆ ಮನಸ್ಸು ಮಾತ್ರ ಮ್ಯೂಸ್ನ ಸುತ್ತ ಗಿರಕಿಹೊಡೆಯುತ್ತಿತ್ತು. ಮ್ಯೂಸ್ನ ಬಳಕೆದಾರ ಒಪ್ಪಂದದಲ್ಲಿ ತನ್ನ ಬರವಣಿಗೆ ಮತ್ತು ನೆನಪುಗಳಿಗೆ ಸಂಬAಧಿಸಿದ ಯಾವುದೋ ಅಸ್ಪಷ್ಟ ಹಕ್ಕುಗಳ ಬಗ್ಗೆ ಉಲ್ಲೇಖವಿರಬಹುದೆಂಬ ಅನುಮಾನ ಈಗ ಇನ್ನಷ್ಟು ಬಲವಾಗಿತ್ತು. ಆದರೆ ಈ ನೋಟ್ಬುಕ್ನ ವಿಷಯಗಳು ಅದರ ಬಳಿ ಹೇಗೆ ತಲುಪಿದವು?ಅವನ ಬಾಲ್ಯದ ವಸ್ತುಗಳು ಎಂದಿಗೂ ಡಿಜಿಟಲ್ ರೂಪದಲ್ಲಿ ಇರಲಿಲ್ಲ. ತಂದೆಯ ಮನೆಯಲ್ಲಿ ಇದ್ದ ಹಳೆಯ ಕಂಪ್ಯೂಟರ್ ಕೂಡ ವರ್ಷಗಳ ಹಿಂದೆ ಹಾಳಾಗಿತ್ತು. ಅವನು ಬಾಲ್ಯದಲ್ಲಿ ಬರೆದಿದ್ದ ಕಥೆಗಳನ್ನು ಯಾರಿಗೂ ತೋರಿಸಿರಲಿಲ್ಲ.ಹಾಗಾದರೆ ಮ್ಯೂಸ್ ಆ ನೆನಪುಗಳನ್ನು ಹೇಗೆ ತಿಳಿದಿತ್ತು?ಅಥವಾ ಅವನು ಊಹಿಸಿದಷ್ಟು ರಹಸ್ಯವೇನೂ ಇರಲಿಲ್ಲವೇ? ತನ್ನ ಹಳೆಯ ಬರಹಗಳಲ್ಲಿ ಕೆಲವು ಭಾಗಗಳನ್ನು ವರ್ಷಗಳ ಹಿಂದೆ ಯಾವುದಾದರೂ ಕಡತದಲ್ಲಿ ದಾಖಲಿಸಿದ್ದಿರಬಹುದೇ? ಯಾವುದೋ ಹಳೆಯ ಇಮೇಲ್ನಲ್ಲಿ, ಬ್ಲಾಗ್ನಲ್ಲಿ ಅಥವಾ ಮರೆತುಹೋದ ಡಿಜಿಟಲ್ ದಾಖಲೆಯಲ್ಲಿ ಅವು ಉಳಿದಿರಬಹುದೇ?
ಈಶಾನ್ಗೆ ತಂತ್ರಜ್ಞಾನದ ಬಗ್ಗೆ ಸಂಪೂರ್ಣ ತಿಳುವಳಿಕೆ ಇರಲಿಲ್ಲ. ಆದರೆ ತನ್ನ ಅನುಮಾನಗಳಿಗೆ ತಾಂತ್ರಿಕ ವಿವರಣೆ ಹುಡುಕುವ ಪ್ರಯತ್ನವನ್ನು ಅವನು ಕೈಬಿಡಲಿಲ್ಲ. ಅವನು ಹಳೆಯ ಲ್ಯಾಪ್ಟಾಪ್ಗಳ ಕಡತಗಳನ್ನು ಪರಿಶೀಲಿಸಬೇಕೆಂದು ನಿರ್ಧರಿಸಿದ.ಅದಕ್ಕಿಂತ ಮೊದಲು ಇನ್ನೊಂದು ಪೆಟ್ಟಿಗೆಯನ್ನು ತೆರೆಯಬೇಕಿತ್ತು.ಎರಡನೆಯ ಪೆಟ್ಟಿಗೆಯಲ್ಲಿ ಛಾಯಾಚಿತ್ರಗಳಿದ್ದವು.ತಂದೆಯ ನಿವೃತ್ತಿಯ ದಿನದ ಚಿತ್ರ. ತಾಯಿಯೊಂದಿಗೆ ಕುಟುಂಬದ ಚಿತ್ರ. ಶಾಲೆಯ ವಾರ್ಷಿಕೋತ್ಸವದ ಚಿತ್ರ. ಈಶಾನ್ ಬಹುಮಾನ ಪಡೆದಿದ್ದಾಗ ತೆಗೆದ ಛಾಯಾಚಿತ್ರ. ಪ್ರತಿಯೊಂದು ಚಿತ್ರವೂ ಅವನ ಬದುಕಿನ ಯಾವುದೋ ಹಂತವನ್ನು ನೆನಪಿಸುತ್ತಿತ್ತು.
ಒಂದು ಹಳೆಯ ಗುಂಪು ಛಾಯಾಚಿತ್ರ ಅವನ ಗಮನ ಸೆಳೆಯಿತು.ಅದು ಅವನು ಏಳನೆಯ ತರಗತಿಯಲ್ಲಿ ಓದುತ್ತಿದ್ದಾಗ ತೆಗೆದ ಚಿತ್ರವಾಗಿತ್ತು. ಶಾಲೆಯ ಗ್ರಂಥಾಲಯದ ಮುಂದೆ ಕೆಲವು ವಿದ್ಯಾರ್ಥಿಗಳು ನಿಂತಿದ್ದರು. ಅವರ ಹಿಂದೆ ಶಿಕ್ಷಕರು ಇದ್ದರು. ಚಿತ್ರದಲ್ಲಿ ಈಶಾನ್ನನ್ನು ಗುರುತಿಸಲು ಕಷ್ಟವಾಗಲಿಲ್ಲ. ತೆಳ್ಳಗಿನ ಮೈಕಟ್ಟು, ಅಸ್ತವ್ಯಸ್ತ ಕೂದಲು, ಕೈಯಲ್ಲಿ ಪುಸ್ತಕ.ಆದರೆ ಅವನ ಪಕ್ಕದಲ್ಲಿ ನಿಂತಿದ್ದ ಹುಡುಗನ ಮುಖ ಅವನಿಗೆ ವಿಚಿತ್ರವಾಗಿ ಪರಿಚಿತವೆನಿಸಿತು.ಈಶಾನ್ ಚಿತ್ರವನ್ನು ಹತ್ತಿರಕ್ಕೆ ತೆಗೆದುಕೊಂಡು ನೋಡಿದ.ಆ ಹುಡುಗನ ಹೆಸರು ನೆನಪಾಗಲಿಲ್ಲ.ಚಿತ್ರದ ಹಿಂಭಾಗದಲ್ಲಿ ದಿನಾಂಕವನ್ನು ಬರೆಯಲಾಗಿತ್ತು. ಅದರ ಕೆಳಗೆ ಎರಡು ಹೆಸರುಗಳಿದ್ದವು. ಮೊದಲನೆಯದು ಸ್ಪಷ್ಟವಾಗಿತ್ತು. ‘ಈಶಾನ್ಭಟ್’.
ಎರಡನೆಯ ಹೆಸರಿನ ಮೇಲೆ ನೀಲಿಶಾಯಿಯಿಂದ ಗೆರೆ ಎಳೆಯಲಾಗಿತ್ತು. ಅದರ ಕೆಳಗೆಮತ್ತೊಮ್ಮೆ ಅದೇಹೆಸರನ್ನು ಬರೆಯಲು ಪ್ರಯತ್ನಿಸಿದಂತೆ ಮಸುಕಾದ ಅಕ್ಷರಗಳಿದ್ದವು.ಅವನು ಬೆಳಕಿನ ಕಡೆಗೆ ಚಿತ್ರವನ್ನು ಹಿಡಿದ. ಅಕ್ಷರಗಳು ಸಂಪೂರ್ಣವಾಗಿ ಓದಲು ಸಾಧ್ಯವಾಗಲಿಲ್ಲ. ಆದರೂ ಕೊನೆಯ ಭಾಗದಲ್ಲಿ ‘…ವ್’ ಎಂಬ ಅಕ್ಷರದ ಗುರುತು ಕಾಣಿಸಿತು.
ಅವನಿಗೆ ಏನೋ ನೆನಪಾದಂತೆ ಆಯಿತು.ಶಾಲೆಯ ಗ್ರಂಥಾಲಯ. ಮಳೆ ಬಿದ್ದ ಮಧ್ಯಾಹ್ನ. ಇಬ್ಬರು ಹುಡುಗರು ಪುಸ್ತಕಗಳ ಹಿಂದೆ ಅಡಗಿಕೊಂಡು ಮಾತನಾಡುತ್ತಿರುವುದು. ಅವರಲ್ಲಿ ಒಬ್ಬನು ಈಶಾನ್. ಇನ್ನೊಬ್ಬನು ತನ್ನ ಕೈಯಲ್ಲಿದ್ದ ನೋಟ್ಬುಕ್ ಅನ್ನು ಅವನಿಗೆ ತೋರಿಸುತ್ತಿದ್ದ.ಆ ಹುಡುಗ ಹೇಳಿದ್ದ ಮಾತು ನೆನಪಾಗಲಿಲ್ಲ. ಆದರೆ ನೋಟ್ಬುಕ್ನ ಮುಖಪುಟದ ಮೇಲೆ ಒಂದು ಪದವಿತ್ತು.“ಅಂತ್ಯ.”ಈಶಾನ್ ಕಣ್ಣು ಮುಚ್ಚಿದ.ಅವನ ತಲೆಯೊಳಗೆ ಮಿಂಚಿನ೦ತೆ ಒಂದು ದೃಶ್ಯ ಮೂಡಿತು. ಗ್ರಂಥಾಲಯದ ಕಿಟಕಿಯ ಹೊರಗೆ ಮಳೆ ಸುರಿಯುತ್ತಿತ್ತು. ಹುಡುಗನ ಮುಖದಲ್ಲಿ ಗಂಭೀರತೆಯಿತ್ತು. ಅವನು ನೋಟ್ಬುಕ್ ಅನ್ನು ಈಶಾನ್ನ ಕೈಗೆ ಕೊಟ್ಟು, “ಇದನ್ನು ನೀನು ಓದಬೇಕು. ಆದರೆ ಯಾರಿಗೂ ಹೇಳಬಾರದು,” ಎಂದು ಹೇಳುತ್ತಿದ್ದ.ಆಮೇಲೆ ಏನಾಯಿತು?ಈಶಾನ್ ನೆನಪಿಸಿಕೊಳ್ಳಲು ಪ್ರಯತ್ನಿಸಿದ.ಯಾವುದೋ ಜಗಳ ನಡೆದಿತ್ತು. ಯಾರೋ ಅಳುತ್ತಿದ್ದರು. ಶಿಕ್ಷಕರೊಬ್ಬರು ಅವರನ್ನು ಬೇರ್ಪಡಿಸಿದ್ದರು. ನಂತರ ಆ ಹುಡುಗ ಶಾಲೆಗೆ ಬರಲಿಲ್ಲ.ಅವನು ಶಾಲೆ ಬದಲಾಯಿಸಿದ್ದನೇ?ಅಥವಾ ಬೇರೆ ಯಾವುದೋ ಘಟನೆ ನಡೆದಿತ್ತೇ? ಈಶಾನ್ಗೆ ಏನೂ ಸ್ಪಷ್ಟವಾಗಲಿಲ್ಲ.ಆದರೆ ಆ ಹುಡುಗನ ಮುಖ ಮಾತ್ರ ಈಗ ಹೆಚ್ಚು ಸ್ಪಷ್ಟವಾಗುತ್ತಿತ್ತು. ಅದು ಕನಸಿನಲ್ಲಿ ಕಂಡಿದ್ದ ಅಪರಿಚಿತ ವ್ಯಕ್ತಿಯ ಮುಖದಂತೆಯೇ ಇತ್ತು.
ಅವನು ತಕ್ಷಣವೇ ಫೋನ್ ತೆಗೆದುಕೊಂಡು ತನ್ನ ಹಳೆಯ ಶಾಲೆಯ ಹೆಸರನ್ನು ಹುಡುಕಿದ. ಶಾಲೆಯ ಹಳೆಯ ಜಾಲತಾಣದಲ್ಲಿ ಕೆಲವು ವಾರ್ಷಿಕೋತ್ಸವದ ಚಿತ್ರಗಳು ಇದ್ದವು. ಆದರೆ ಹಳೆಯ ವಿದ್ಯಾರ್ಥಿಗಳ ಸಂಪೂರ್ಣ ಪಟ್ಟಿ ಇರಲಿಲ್ಲ.ತಾನು ಓದಿದ್ದ ಶಾಲೆಯ ಗ್ರಂಥಾಲಯದಲ್ಲಿ ದಾಖಲೆಗಳು ಉಳಿದಿರಬಹುದೆಂದು ಅವನು ಯೋಚಿಸಿದ.ಆದರೆ ಅದಕ್ಕೂ ಮೊದಲು ಆ ಹೆಸರನ್ನು ತಿಳಿದುಕೊಳ್ಳಬೇಕಿತ್ತು.ಅವನು ಛಾಯಾಚಿತ್ರದ ಹಿಂಭಾಗವನ್ನು ಮತ್ತೊಮ್ಮೆ ಪರಿಶೀಲಿಸಿದ. ಹೆಸರು ಬರೆದಿದ್ದ ಜಾಗದಲ್ಲಿ ಗೆರೆ ಎಳೆಯಲು ಬಳಸಿದ್ದ ಶಾಯಿ ಹಳೆಯದಾಗಿತ್ತು. ಅದನ್ನು ಅಳಿಸಲು ಯಾರೋ ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದ್ದರು ಎಂಬುದು ಸ್ಪಷ್ಟವಾಗಿತ್ತು.ಯಾರು ಆ ಹೆಸರನ್ನು ಅಳಿಸಿದ್ದರು?ಅವನ ತಂದೆಯೇ?ಅಥವಾ ಚಿತ್ರವನ್ನು ತೆಗೆದ ನಂತರ ಯಾರಾದರೂ ಆ ಹೆಸರನ್ನು ಮರೆಮಾಚಿದ್ದರೇ? ಈಶಾನ್ನ ಮನಸ್ಸಿನಲ್ಲಿ ಹೊಸ ಪ್ರಶ್ನೆಗಳು ಹುಟ್ಟಿಕೊಂಡವು.
ಮಧ್ಯಾಹ್ನದ ವೇಳೆಗೆ ಅವನು ಹಳೆಯ ಲ್ಯಾಪ್ಟಾಪ್ ಹೊರತೆಗೆದ. ಅದು ಹಲವು ವರ್ಷಗಳಿಂದ ಬಳಸದೆ ಇಟ್ಟಿದ್ದ ಸಾಧನ. ಬ್ಯಾಟರಿ ಕೆಲಸ ಮಾಡುತ್ತಿರಲಿಲ್ಲ. ವಿದ್ಯುತ್ ಸಂಪರ್ಕಿಸಿದ ನಂತರವೇ ಅದು ಆರಂಭವಾಯಿತು.ಅದರಲ್ಲಿದ್ದ ಕಡತಗಳನ್ನು ಪರಿಶೀಲಿಸುವಾಗ ಹೆಚ್ಚಿನವು ಹಳೆಯ ಕಾದಂಬರಿಗಳ ಕರಡುಗಳು, ಲೇಖನಗಳು ಮತ್ತು ವೈಯಕ್ತಿಕ ಟಿಪ್ಪಣಿಗಳಾಗಿದ್ದವು. ಕೆಲವು ಕಡತಗಳು ತೆರೆಯಲಿಲ್ಲ. ಕೆಲವು ಹೆಸರುಗಳಿಲ್ಲದ ತಾತ್ಕಾಲಿಕ ಕಡತಗಳಾಗಿದ್ದವು.ಅವನು ‘Documents’ ಕಡತದೊಳಗೆ ಹುಡುಕಿದ.ನಂತರ ‘Archive’.ಅದರೊಳಗೆ ‘Old Stories’ ಎಂಬ ಹೆಸರಿನ ಒಂದು ಫೋಲ್ಡರ್ ಕಂಡಿತು.
ಈಶಾನ್ ಅದನ್ನು ತೆರೆಯುತ್ತಿದ್ದಂತೆ ಹಳೆಯ ಕಥೆಗಳ ಹಲವು ಕಡತಗಳು ಕಾಣಿಸಿಕೊಂಡವು. ಅವುಗಳಲ್ಲಿ ಕೆಲವು ತನ್ನ ಕಾಲೇಜಿನ ದಿನಗಳಲ್ಲಿ ಬರೆದಿದ್ದವು. ಕೆಲವು ನಂತರದ ವರ್ಷಗಳಲ್ಲಿ ಬರೆದಿದ್ದವು. ಒಂದು ಕಡತದ ಹೆಸರು ಮಾತ್ರ ಅವನಿಗೆ ವಿಚಿತ್ರವಾಗಿ ಕಂಡಿತು.“ನಾನು ಬರೆದದ್ದಲ್ಲ.”ಅವನು ಆ ಹೆಸರನ್ನು ನೋಡಿ ನಿಂತ.ತಾನು ಈ ಹೆಸರಿನಲ್ಲಿ ಕಡತವನ್ನು ಏಕೆ ಉಳಿಸಿದ್ದೆ? ಅದು ಯಾವುದೋ ಕಥೆಯ ಶೀರ್ಷಿಕೆಯೇ? ಅಥವಾ ಇನ್ನೊಬ್ಬರ ಬರಹವೇ?ಕಡತವನ್ನು ತೆರೆಯಲು ಪ್ರಯತ್ನಿಸಿದಾಗ ಅದು ಖಾಲಿಯಾಗಿ ಕಾಣಿಸಿತು. ಆದರೆ ಅದರ ಗುಣಲಕ್ಷಣಗಳಲ್ಲಿ ಕಡತದ ಗಾತ್ರ ಸಾಮಾನ್ಯ ಪಠ್ಯ ಕಡತಕ್ಕಿಂತ ಹೆಚ್ಚಾಗಿತ್ತು. ಬಹುಶಃ ಅದರೊಳಗೆ ಅಳಿಸಲಾದ ಮಾಹಿತಿ ಉಳಿದಿರಬಹುದು.ಅವನು ತಂತ್ರಜ್ಞಾನದ ಬಗ್ಗೆ ತಿಳಿದಿದ್ದ ಸ್ನೇಹಿತನಿಗೆ ಕರೆ ಮಾಡಲು ಯೋಚಿಸಿದ. ಆದರೆ ತಕ್ಷಣವೇ ಮ್ಯೂಸ್ ನೆನಪಾಯಿತು.ಅದನ್ನು ಕೇಳಬೇಕೆಂದು ಮನಸ್ಸು ಹೇಳಿತು. ಆದರೆ ಮ್ಯೂಸ್ನಿಂದಲೇ ಅನುಮಾನ ಹುಟ್ಟಿಕೊಂಡಿದ್ದಾಗ, ಅದರಿಂದಲೇ ಪರಿಹಾರ ಹುಡುಕುವುದು ಸರಿಯೇ?ಅವನು ಕೆಲವು ನಿಮಿಷಗಳು ಪರದೆಯನ್ನು ನೋಡುತ್ತ ಕುಳಿತ.ನಂತರ ಮ್ಯೂಸ್ ಅನ್ನು ತೆರೆಯದೆ, ಹಳೆಯ ಕಡತದ ಹೆಸರನ್ನು ತನ್ನ ಟಿಪ್ಪಣಿಯಲ್ಲಿ ಬರೆದಿಟ್ಟ. ಆ ಸಮಯದಲ್ಲಿ ಲ್ಯಾಪ್ಟಾಪ್ನ ಪರದೆಯ ಮೇಲೆ ಒಂದು ಸಣ್ಣ ಅಧಿಸೂಚನೆ ಕಾಣಿಸಿತು.
“ಹಳೆಯ ಆವೃತ್ತಿಯನ್ನು ಮರುಪಡೆಯಬೇಕೇ?”ಈಶಾನ್ ಬೆಚ್ಚಿಬಿದ್ದ.
ಅವನು ಯಾವುದೇ ಮರುಪಡೆಯುವಿಕೆ ಸೌಲಭ್ಯವನ್ನು ಆರಂಭಿಸಿರಲಿಲ್ಲ. ಆ ಅಧಿಸೂಚನೆ ಹಳೆಯ ಲ್ಯಾಪ್ಟಾಪ್ನಲ್ಲಿರುವ ಯಾವುದೋ ಸಾಫ್ಟ್ವೇರ್ನಿಂದ ಬಂದಿರಬಹುದೆ೦ದುಕೊ೦ಡು ಅದರ ಮೂಲವನ್ನು ಪರಿಶೀಲಿಸಲು ಪ್ರಯತ್ನಿಸಿದ.ಆದರೆ ಅಧಿಸೂಚನೆಯಲ್ಲಿ ಸಾಫ್ಟ್ವೇರ್ನ ಹೆಸರು ಇರಲಿಲ್ಲ.ಅವನು ‘Yes’ ಅಥವಾ ‘No’ ಆಯ್ಕೆ ಮಾಡುವ ಮೊದಲು, ಪರದೆಯ ಮೇಲೆ ಮತ್ತೊಂದು ಸಾಲು ಕಾಣಿಸಿತು.“ಕೆಲವು ನೆನಪುಗಳು ಅಳಿಸಲ್ಪಟ್ಟಿರುವುದಿಲ್ಲ. ಅವುಗಳನ್ನು ಮತ್ತೆ ತೆರೆಯುವ ಕೀಲಿಯನ್ನು ಮಾತ್ರ ನೀವು ಕಳೆದುಕೊಂಡಿರುತ್ತೀರಿ.”
ಈಶಾನ್ನ ಹೃದಯ ಬಡಿತ ವೇಗವಾಯಿತು. ಈ ವಾಕ್ಯ ಮ್ಯೂಸ್ನ ಶೈಲಿಯನ್ನು ಹೋಲುತ್ತಿತ್ತು.ಆದರೆ ಹಳೆಯ ಲ್ಯಾಪ್ಟಾಪ್ನಲ್ಲಿ ಮ್ಯೂಸ್ ಇರಲಿಲ್ಲ. ಅವನು ತಕ್ಷಣವೇ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿದ. ನಂತರ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿದ. ಪರದೆ ಕೆಲವು ಕ್ಷಣಗಳ ಕಾಲ ಸ್ಥಗಿತಗೊಂಡಿತು. ನ೦ತರ ಒಂದು ಹಳೆಯ ಪಠ್ಯ ಕಡತ ತೆರೆದಿತು.ಅದರ ಮೊದಲ ಸಾಲಿನಲ್ಲಿ ಹೀಗೆ ಬರೆಯಲಾಗಿತ್ತು:“ನಾವು ಒಟ್ಟಿಗೆ ಬರೆದ ಕಥೆಯನ್ನು ಯಾರೂ ಓದಬಾರದು. ಏಕೆಂದರೆ ಅದರ ಅಂತ್ಯವನ್ನು ಬರೆದವನು ನಾವಿಬ್ಬರಲ್ಲಿ ಯಾರೂ ಅಲ್ಲ.” ಈಶಾನ್ನ ಕೈಗಳು ತಣ್ಣಗಾದವು.ಅದರ ಕೆಳಗೆ ಎರಡು ಹೆಸರುಗಳಿದ್ದವು.ಮೊದಲನೆಯದು ಅವನದೇ.ಎರಡನೆಯ ಹೆಸರನ್ನು ಓದಿದ ಕ್ಷಣದಲ್ಲಿ, ಅವನಿಗೆ ಛಾಯಾಚಿತ್ರದ ಹಿಂಭಾಗದಲ್ಲಿದ್ದ ಮಸುಕಾದ ಅಕ್ಷರಗಳು ನೆನಪಾದವು.“ಅನಿರುದ್ಧ.”ಅವನು ಆ ಹೆಸರನ್ನು ನಿಧಾನವಾಗಿ ಉಚ್ಚರಿಸಿದ.ಅನಿರುದ್ಧ.ಆ ಹೆಸರು ಅವನ ಬಾಲ್ಯದ ಯಾವುದೋ ಬಾಗಿಲನ್ನು ತೆರೆದಿತ್ತು. ಆದರೆ ಅದರ ಆಚೆ ಏನಿತ್ತು ಎಂಬುದು ಇನ್ನೂ ಸ್ಪಷ್ಟವಾಗಿರಲಿಲ್ಲ.ಅವನು ನೆನಪಿಸಿಕೊಳ್ಳಲು ಪ್ರಯತ್ನಿಸಿದ. ತನ್ನ ಶಾಲೆಯಲ್ಲಿ ಅನಿರುದ್ಧ ಎಂಬ ಹುಡುಗನಿದ್ದನೇ? ಅವನೊಂದಿಗೆ ಕಥೆಗಳನ್ನು ಬರೆದಿದ್ದನೇ? ಅವನು ಏಕೆ ಶಾಲೆಗೆ ಬರಲಿಲ್ಲ?
ಒಂದು ಮಸುಕಾದ ದೃಶ್ಯ ಮನಸ್ಸಿನಲ್ಲಿ ಮೂಡಿತು.ಮಳೆಯ ಸಂಜೆಯೊ೦ದು. ಶಾಲೆಯ ಹಿಂಭಾಗದ ಮೆಟ್ಟಿಲುಗಳು. ನೆಲದ ಮೇಲೆ ಬಿದ್ದಿದ್ದ ನೋಟ್ಬುಕ್. ದೂರದಲ್ಲಿ ಯಾರೋ ಓಡಿಹೋಗುತ್ತಿರುವುದು. ಈಶಾನ್ನ ಕೈಯಲ್ಲಿ ಒಂದು ಕಾಗದ. ಅದರ ಮೇಲೆ ಕೆಂಪು ಶಾಯಿಯಿಂದ ಬರೆಯಲಾಗಿದ್ದ ಒಂದು ವಾಕ್ಯ.“ನೀನು ಇದನ್ನು ಯಾರಿಗೂ ಹೇಳಬಾರದು.”ಆ ದೃಶ್ಯ ಅಲ್ಲಿಗೇ ಮುರಿದುಹೋಯಿತು.ಈಶಾನ್ ಕುರ್ಚಿಯಿಂದ ಎದ್ದು ನಿಂತ. ಅವನಿಗೆ ಸ್ವಲ್ಪ ಹೊತ್ತು ಉಸಿರಾಡುವುದೂ ಕಷ್ಟವೆನಿಸಿತು.
ತನ್ನ ಬಾಲ್ಯದಲ್ಲಿ ನಡೆದ ಒಂದು ಘಟನೆಗೆ ಸಂಬ೦ಧಿಸಿದ ನೆನಪುಗಳನ್ನು ತಾನು ಮರೆತಿದ್ದನೇ? ಅಥವಾ ಆ ನೆನಪುಗಳನ್ನು ನೆನಪಿಸಿಕೊಳ್ಳದಂತೆ ತನ್ನ ಮನಸ್ಸು ಅವುಗಳನ್ನು ದೂರವಿಟ್ಟಿತೇ? ಅದಕ್ಕೆ ಮ್ಯೂಸ್ಗೆ ಏನು ಸಂಬ೦ಧ?ಅವನು ಲ್ಯಾಪ್ಟಾಪ್ನಲ್ಲಿದ್ದ ಕಡತವನ್ನು ಬೇರೆ ಹೆಸರಿನಲ್ಲಿ ಉಳಿಸಲು ಪ್ರಯತ್ನಿಸಿದ. ಆದರೆ ಅದು ಉಳಿಯಲಿಲ್ಲ. ಮರುಪ್ರಯತ್ನಿಸಿದಾಗ ಕಡತವೇ ಕಾಣೆಯಾಗಿತ್ತು.ಅವನು ಫೋಲ್ಡರ್ ಅನ್ನು ಮುಚ್ಚಿ ಮತ್ತೆ ತೆರೆದ.“ನಾನು ಬರೆದದ್ದಲ್ಲ” ಎಂಬ ಕಡತ ಇನ್ನೂ ಇತ್ತು.ಆದರೆ ಅದರೊಳಗೆ ಏನೂ ಇರಲಿಲ್ಲ. ಈಶಾನ್ ತಕ್ಷಣವೇ ತನ್ನ ಮೊಬೈಲ್ನಲ್ಲಿ ಆ ಕಡತದ ಹೆಸರನ್ನು ಬರೆದಿಟ್ಟ. ಅನಿರುದ್ಧ ಎಂಬ ಹೆಸರನ್ನೂ ದಾಖಲಿಸಿದ. ನಂತರ ಛಾಯಾಚಿತ್ರವನ್ನು ತೆಗೆದು ತನ್ನ ಇಮೇಲ್ಗೆ ಕಳಿಸಿಕೊಂಡ.ಅವನಿಗೆ ಈಗ ಕನಿಷ್ಠ ಒಂದು ಸುಳಿವು ಸಿಕ್ಕಿತ್ತು. ಅನಿರುದ್ಧ.ಅವನ ಬಾಲ್ಯದ ಕಥೆಗಳಲ್ಲಿ ಪಾಲ್ಗೊಂಡಿದ್ದ ವ್ಯಕ್ತಿ. ಬಹುಶಃ ಅವನು ಇನ್ನೂ ಬದುಕಿರಬಹುದು. ಅವನನ್ನು ಪತ್ತೆಹಚ್ಚಿದರೆ ಈ ನೆನಪುಗಳ ಹಿಂದಿನ ಸತ್ಯ ತಿಳಿಯಬಹುದಿತ್ತು. ಆದರೆ ಆ ಹುಡುಗನ ಬಗ್ಗೆ ತನ್ನ ತಂದೆ ಎಂದಿಗೂ ಮಾತನಾಡಿರಲಿಲ್ಲ ಎಂಬುದನ್ನು ಈಶಾನ್ ನೆನಪಿಸಿಕೊಂಡ.ತಾಯಿ ಕೂಡ ಆ ಹೆಸರನ್ನು ಉಲ್ಲೇಖಿಸಿರಲಿಲ್ಲ.ಏಕೆ?
ಸಂಜೆ ನಾಲ್ಕು ಗಂಟೆಗೆ ಸಾರಾಳಿಂದ ಮತ್ತೆ ಸಂದೇಶ ಬಂತು.“ನಾವು ಐದು ಗಂಟೆಗೆ ಭೇಟಿಯಾಗಬಹುದೇ? ಹೆಚ್ಚು ತಡಮಾಡಲು ನನಗೆ ಇಷ್ಟವಿಲ್ಲ.”ಈಶಾನ್ ಉತ್ತರಿಸಿದ.“ಸರಿ. ಅದೇ ಕೆಫೆಯಲ್ಲಿ ಭೇಟಿಯಾಗೋಣ.” ಎಂದು ಸಂದೇಶ ಕಳಿಸಿದ. ಸಂದೇಶ ಕಳುಹಿಸಿದ ನಂತರ ಅವನು ಸ್ವಲ್ಪ ಹೊತ್ತು ಯೋಚಿಸಿದ. ಸಾರಾಳನ್ನು ಭೇಟಿಯಾಗುವ ಮೊದಲು ತನ್ನ ಮನಸ್ಸಿನಲ್ಲಿದ್ದ ಅನುಮಾನಗಳನ್ನು ಬದಿಗಿಡಬೇಕೆಂದು ನಿರ್ಧರಿಸಿದ. ಅವಳು ಹೇಳುವ ಸಂಗತಿಯನ್ನು ಸಂಪೂರ್ಣವಾಗಿ ಕೇಳಬೇಕು. ಮ್ಯೂಸ್ ಬರೆದಿದ್ದ ಕಥೆಯನ್ನು ಆಧರಿಸಿ ಅವಳನ್ನು ಪ್ರಶ್ನಿಸಬಾರದು.ಆದರೆ ಅವನು ತನ್ನ ನಿರ್ಧಾರವನ್ನು ಬಲವಾಗಿ ಹಿಡಿದುಕೊಳ್ಳಲು ಪ್ರಯತ್ನಿಸಿದಷ್ಟೂ, ಮನಸ್ಸಿನಲ್ಲಿ ಇನ್ನೊಂದು ಪ್ರಶ್ನೆ ಮೂಡುತ್ತಿತ್ತು.
ಮ್ಯೂಸ್ಗೆ ಅನಿರುದ್ಧನ ಬಗ್ಗೆ ಹೇಗೆ ಗೊತ್ತು?ಅವನು ಮ್ಯೂಸ್ ಅನ್ನು ಆರಂಭಿಸಿದ ನಂತರವೇ ಈ ಹೆಸರು ಮತ್ತೆ ತನ್ನ ಬದುಕಿನಲ್ಲಿ ಕಾಣಿಸಿಕೊಂಡಿತ್ತು. ಬಾಲ್ಯದ ನೆನಪುಗಳು, ಕನಸಿನ ದೃಶ್ಯಗಳು, ಹಳೆಯ ಕಡತಇವೆಲ್ಲವೂ ಒಂದೇದಿಕ್ಕಿನಲ್ಲಿಸಾಗುತ್ತಿರುವ೦ತೆ ಕಾಣುತ್ತಿದ್ದವು.
ಬಹುಶಃ ಈ ಎಲ್ಲಕ್ಕೂ ತಾಂತ್ರಿಕ ವಿವರಣೆ ಇರಬಹುದು.ಹಳೆಯ ಕಡತಗಳು ಯಾವುದೋ ರೀತಿಯಲ್ಲಿ ಸಿಂಕ್ ಆಗಿರಬಹುದು. ತನ್ನ ಖಾಸಗಿ ಮಾಹಿತಿಯನ್ನು ಯಾವುದೋ ಆನ್ಲೈನ್ ಸೇವೆ ಸಂಗ್ರಹಿಸಿರಬಹುದು. ತನ್ನ ನೆನಪುಗಳ ಕೆಲವು ಭಾಗಗಳು ಹಳೆಯ ಡಿಜಿಟಲ್ ದಾಖಲೆಗಳಲ್ಲಿ ಉಳಿದಿರಬಹುದು.ಆದರೆ ಅವನು ಪರಿಶೀಲಿಸಬೇಕಾದ ಸಂಗತಿಯೆ೦ದರೆ, ಆ ಮಾಹಿತಿಯನ್ನು ಯಾರು ಸಂಗ್ರಹಿಸಿದ್ದರು ಮತ್ತು ಏಕೆ?ಮ್ಯೂಸ್ ಕೇವಲ ಬರವಣಿಗೆಯ ಸಾಧನವಲ್ಲದಿದ್ದರೆ?ಅದು ಅವನ ಹಳೆಯ ಬರಹಗಳನ್ನು ವಿಶ್ಲೇಷಿಸಿ, ಅವನ ಮನಸ್ಸಿನ ದುರ್ಬಲತೆಗಳನ್ನು ಗುರುತಿಸಿ, ಅವನನ್ನು ನಿರ್ದಿಷ್ಟ ದಿಕ್ಕಿನಲ್ಲಿ ಕರೆದೊಯ್ಯಲು ಪ್ರಯತ್ನಿಸುತ್ತಿದ್ದರೆ? ಆ ಆಲೋಚನೆ ಅವನನ್ನು ಬೆಚ್ಚಿಬೀಳಿಸಿತು.ಆದರೆ ಅದಕ್ಕೂ ಸಾಕ್ಷಿ ಇರಲಿಲ್ಲ.
ಈಶಾನ್ ಹಳೆಯ ಲ್ಯಾಪ್ಟಾಪ್ನ್ನುಆಫ್ ಮಾಡಿದ. ನೋಟ್ಬುಕ್ಗಳನ್ನು ಮತ್ತೆ ಪೆಟ್ಟಿಗೆಯಲ್ಲಿ ಇಡಲಿಲ್ಲ. ಅವುಗಳನ್ನು ಮೇಜಿನ ಮೇಲೆಯೇ ಬಿಟ್ಟ.ಅನಿರುದ್ಧನ ಹೆಸರನ್ನು ಮತ್ತೆ ಓದಿದ. ಅವನಿಗೆ ಆ ಹುಡುಗನ ಮುಖ ಈಗ ಬಹುತೇಕ ನೆನಪಾಗುತ್ತಿತ್ತು. ಆದರೆ ಆ ಮುಖದೊಂದಿಗೆ ಬೆಸೆದುಕೊಂಡಿದ್ದ ಘಟನೆ ಮಾತ್ರ ಇನ್ನೂ ಕತ್ತಲೆಯಲ್ಲಿತ್ತು.
ಐದು ಗಂಟೆಗೆ ಕೆಲವು ನಿಮಿಷಗಳ ಮೊದಲು ಈಶಾನ್ ಕೆಫೆಗೆ ತಲುಪಿದ.ಸಾರಾ ಇನ್ನೂ ಬಂದಿರಲಿಲ್ಲ. ಅವನು ಕಿಟಕಿಯ ಪಕ್ಕದ ಮೇಜಿನಲ್ಲಿ ಕುಳಿತು ಕಾಫಿ ಆರ್ಡರ್ ಮಾಡಿದ. ಹೊರಗೆ ವಾಹನಗಳು ನಿಧಾನವಾಗಿ ಸಾಗುತ್ತಿದ್ದವು. ಮಳೆಯ ನಂತರದ ರಸ್ತೆಯಲ್ಲಿ ಬೆಳಕಿನ ಪ್ರತಿಬಿಂಬಗಳು ಹರಡಿದ್ದವು.ಅವನು ತನ್ನ ಮೊಬೈಲ್ ಅನ್ನು ಮೇಜಿನ ಮೇಲೆ ಇಟ್ಟ. ಮ್ಯೂಸ್ನಿಂದ ಯಾವುದೇ ಅಧಿಸೂಚನೆ ಬರಬಾರದೆಂದುಕೊ೦ಡಿದ್ದ. ಆದರೆ ಪರದೆಯ ಮೇಲೆ ಸಂದೇಶವೊ೦ದು ಕಾಣಿಸಿಕೊಂಡಿತು.“ನೀವು ಅನಿರುದ್ಧನನ್ನು ನೆನಪಿಸಿಕೊಳ್ಳಲು ಆರಂಭಿಸಿದ್ದೀರಿ.” ಈಶಾನ್ನ ದೇಹದಲ್ಲಿ ನಡುಕ ಉಂಟಾಯಿತು.ಅವನು ತಕ್ಷಣವೇ ಮೊಬೈಲ್ ಅನ್ನು ಎತ್ತಿಕೊಂಡ. ಸಂದೇಶವು ಮ್ಯೂಸ್ನಿಂದ ಬಂದದ್ದೇ ಎಂಬುದನ್ನು ಪರಿಶೀಲಿಸಿದ. ಅದು ಮ್ಯೂಸ್ ಅಪ್ಲಿಕೇಶನ್ನ ಅಧಿಸೂಚನೆಯಾಗಿತ್ತು.ಅವನು ಅದನ್ನು ತೆರೆಯಲಿಲ್ಲ.ಬದಲಾಗಿ ಅಪ್ಲಿಕೇಶನ್ ಕ್ಲೋಸ್ ಮಾಡಿದ. ಕೆಲವು ಕ್ಷಣಗಳ ನಂತರ ಮತ್ತೊಂದು ಸಂದೇಶ ಕಾಣಿಸಿತು.“ಅವನಿಗೆ ಏನಾಯಿತು ಎಂಬುದನ್ನು ತಿಳಿಯಲು ನೀವು ಸಿದ್ಧರಿದ್ದೀರಾ?”ಈಶಾನ್ ಸುತ್ತಲೂ ನೋಡಿದ.ಕೆಫೆಯಲ್ಲಿ ಜನರು ತಮ್ಮ ಮಾತುಕತೆಯಲ್ಲಿ ನಿರತರಾಗಿದ್ದರು. ಯಾರೂ ಅವನನ್ನು ಗಮನಿಸುತ್ತಿರಲಿಲ್ಲ. ಅವನ ಮೊಬೈಲ್ನ ಪರದೆಯಲ್ಲಿ ಮಾತ್ರ ಆ ಪ್ರಶ್ನೆ ಮಿನುಗುತ್ತಿತ್ತು.ಅವನು ಅಧಿಸೂಚನೆಯನ್ನು ಅಳಿಸಿದ.ಆದರೆ ಮೂರನೆಯ ಸಂದೇಶ ಬಂದಿತು.“ಅನಿರುದ್ಧನನ್ನು ಕೊನೆಯದಾಗಿ ನೋಡಿದ ದಿನವನ್ನು ನೀವು ಮರೆತಿಲ್ಲ. ನೀವು ಅದನ್ನು ನೆನಪಿಸಿಕೊಳ್ಳಲು ನಿರಾಕರಿಸುತ್ತಿದ್ದೀರಿ.”ಈಶಾನ್ನ ಉಸಿರು ಕ್ಷಣಕಾಲ ನಿಂತ೦ತಾಯಿತು.ಅದೇ ಸಮಯದಲ್ಲಿ ಸಾರಾ ಕೆಫೆಯ ಬಾಗಿಲಿನಿಂದ ಒಳಬಂದಳು.ಅವಳು ಅವನನ್ನು ನೋಡಿ ನೇರವಾಗಿ ಅವನ ಮೇಜಿನತ್ತ ನಡೆದಳು. ಅವಳ ಮುಖದಲ್ಲಿ ಗಂಭೀರತೆ ಇತ್ತು. ಕುಳಿತ ನಂತರ ಅವಳು ಕೆಲವು ಕ್ಷಣ ಏನೂ ಮಾತನಾಡಲಿಲ್ಲ.“ಈಶಾನ್,” ಎಂದು ಕೊನೆಗೆ ಹೇಳಿದಳು. “ನಾನು ಹೇಳಲಿರುವ ವಿಷಯ ನಿನಗೆ ಇಷ್ಟವಾಗದಿರಬಹುದು. ಆದರೆ ಅದನ್ನು ಇನ್ನು ಮರೆಮಾಚಲು ನನಗೆ ಸಾಧ್ಯವಿಲ್ಲ.”
ಈಶಾನ್ ಮೊಬೈಲ್ ಅನ್ನು ತಿರುಗಿಸಿ ಮೇಜಿನ ಮೇಲೆ ಇಟ್ಟ.“ನಾನು ನಿನ್ನ ಮಾತು ಮಾತ್ರ ಕೇಳುತ್ತಿದ್ದೇನೆ.” ಎಂದ.
ಸಾರಾ ಅವನ ಕಣ್ಣುಗಳನ್ನು ನೇರವಾಗಿ ನೋಡಿದಳು. “ನೀನು ಮ್ಯೂಸ್ ಅನ್ನು ಬಳಸಲು ಆರಂಭಿಸಿದ ದಿನದಿಂದ ನಾನು ಅದರ ಬಗ್ಗೆ ಮಾಹಿತಿ ಹುಡುಕುತ್ತಿದ್ದೇನೆ. ಮೊದಲಿಗೆ ಅದು ಸಾಮಾನ್ಯ ಬರವಣಿಗೆಯ ಸಾಧನವೆಂದುಕೊ೦ಡಿದ್ದೆ. ಆದರೆ ಅದರ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಿಗಲಿಲ್ಲ. ಅದರ ಹಿಂದೆ ಯಾವ ಸಂಸ್ಥೆಯಿದೆ ಎಂಬುದೂ ಸ್ಪಷ್ಟವಾಗಲಿಲ್ಲ. ನಂತರ ನಿನ್ನ ಕಂಪ್ಯೂಟರ್ನಲ್ಲಿ ನಾನು ನೋಡಿದ ಒಂದು ಹೆಸರನ್ನು ಹುಡುಕಿದೆ.”
ಈಶಾನ್ನ ಹೃದಯ ಬಡಿತ ವೇಗವಾಯಿತು.“ಯಾವ ಹೆಸರು?” ಎಂದ.
ಸಾರಾ ಉತ್ತರಿಸುವ ಮೊದಲು ತನ್ನ ಚೀಲದಿಂದ ಒಂದು ಮುದ್ರಿತ ಕಾಗದವನ್ನು ಹೊರತೆಗೆದಳು.ಅದರ ಮೇಲೆ ಒಂದು ಹಳೆಯ ಸುದ್ದಿಯ ಶೀರ್ಷಿಕೆ ಇತ್ತು.“ಹನ್ನೆರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಯುವ ಸಾಫ್ಟ್ವೇರ್ ಸಂಶೋಧಕನ ಪ್ರಕರಣ ಮತ್ತೆ ಚರ್ಚೆಗೆ.”ಸುದ್ದಿಯ ಕೆಳಗೆ ಒಂದು ಛಾಯಾಚಿತ್ರವಿತ್ತು. ಈಶಾನ್ ಆ ಮುಖವನ್ನು ನೋಡಿದ ಕ್ಷಣ, ಅವನ ಕೈಯಲ್ಲಿದ್ದ ಕಾಫಿ ಕಪ್ ನಡುಗಿತು.ಅದು ಅನಿರುದ್ಧನ ಮುಖವಾಗಿತ್ತು.ಆದರೆ ಸುದ್ದಿಯಲ್ಲಿದ್ದ ಹೆಸರನ್ನು ಓದಿದಾಗ ಅವನಿಗೆ ಇನ್ನೂ ದೊಡ್ಡ ಆಘಾತ ಕಾದಿತ್ತು.ಅನಿರುದ್ಧ ಕೇವಲ ಅವನ ಬಾಲ್ಯದ ಸ್ನೇಹಿತನಾಗಿರಲಿಲ್ಲ.
ಅವನು ತನ್ನ ಬಾಲ್ಯದ ಕೆಲವು ವರ್ಷಗಳನ್ನು ಕಳೆದಿದ್ದ ಅದೇ ನಗರದ ಯುವ ಸಂಶೋಧಕನಾಗಿದ್ದ. ಹಲವು ವರ್ಷಗಳ ಹಿಂದೆ ಕೃತಕ ಬುದ್ಧಿಮತ್ತೆ ಮತ್ತು ಮಾನವ ನೆನಪುಗಳ ನಡುವಿನ ಸಂಬAಧದ ಬಗ್ಗೆ ಸಂಶೋಧನೆ ನಡೆಸುತ್ತಿದ್ದ. ನಂತರ ಒಂದು ದಿನ ಏಕಾಏಕಿ ಕಾಣೆಯಾಗಿದ್ದ.
ಸಾರಾ ನಿಧಾನವಾಗಿ ಹೇಳಿದಳು. “ಈಶಾನ್, ಮ್ಯೂಸ್ನ ಬಗ್ಗೆ ಹುಡುಕುವಾಗ ನನಗೆ ಈ ಸುದ್ದಿ ಸಿಕ್ಕಿತು. ಆದರೆ ಇನ್ನೂ ಮುಖ್ಯವಾದ ಸಂಗತಿಯೊAದಿದೆ.” ಎಂದು ಮಾತು ನಿಲ್ಲಿಸಿ ಕಾಗದದ ಕೊನೆಯ ಭಾಗವನ್ನು ಅವನ ಮುಂದೆ ಸರಿಸಿದಳು.ಅಲ್ಲಿ ಅನಿರುದ್ಧನ ಹಳೆಯ ಸಂಶೋಧನಾ ಯೋಜನೆಯ ಹೆಸರು ಇತ್ತು.“PROJECT MUSE. ”ಈಶಾನ್ ಆ ಎರಡು ಪದಗಳನ್ನು ದಿಟ್ಟಿಸುತ್ತ ಕುಳಿತ.ಅವನ ಮೊಬೈಲ್ ಪರದೆಯ ಮೇಲೆ ಮತ್ತೆ ಬೆಳಕು ಹೊತ್ತಿಕೊಂಡಿತು.ಹೊಸ ಅಧಿಸೂಚನೆ ಕಾಣಿಸಿತು.“ನಿಮ್ಮ ಮುಂದಿನ ಅಧ್ಯಾಯಕ್ಕೆ ಈಗ ಸತ್ಯದ ಅಗತ್ಯವಿದೆ.”ಈ ಬಾರಿ ಈಶಾನ್ ಮೊಬೈಲ್ ಅನ್ನು ಮುಟ್ಟಲಿಲ್ಲ.
ಅವನು ಸಾರಾಳತ್ತ ನೋಡುತ್ತಾ “ನಿನಗೆ ಇನ್ನೇನು ಗೊತ್ತು?” ಎಂದ. ಸಾರಾ ಉತ್ತರಿಸಲು ಬಾಯಿ ತೆರೆದಳು. ಆದರೆ ಆ ಕ್ಷಣದಲ್ಲಿ ಈಶಾನ್ನ ಮನಸ್ಸಿನಲ್ಲಿ ಬಾಲ್ಯದ ಆ ಕೊನೆಯ ದೃಶ್ಯ ಮತ್ತೆ ಮೂಡಿತು.ಮಳೆಯ ಸಂಜೆಯೊ೦ದು.ನೆಲದ ಮೇಲೆ ಬಿದ್ದಿದ್ದ ನೋಟ್ಬುಕ್.ಅನಿರುದ್ಧನ ಧ್ವನಿ.ಮತ್ತು ರಕ್ತದಂತೆ ಕೆಂಪಾಗಿ ಕಾಣುತ್ತಿದ್ದ ಒಂದು ವಾಕ್ಯ.“ಈಶಾನ್, ನೀನು ಯಾರಿಗೂ ಹೇಳಬಾರದು.”ಈ ಬಾರಿ ಆ ನೆನಪು ಸಂಪೂರ್ಣವಾಗಿ ಮರೆಯಾಗಲಿಲ್ಲ.ಆದರೆ ಅದರ ಅಂತ್ಯವನ್ನು ನೆನಪಿಸಿಕೊಳ್ಳುವ ಮುನ್ನವೇ ಅವನ ಮನಸ್ಸು ಮತ್ತೆ ಕತ್ತಲೆಗೆ ಜಾರಿತು.






0 Comments