ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಮೈಸೂರಿನ ನಂಟು

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

। ಕಳೆದ ವಾರದಿಂದ ।

2

ಮೈಸೂರಿನ ನಂಟು

ಸಂಕೇತಿಗಳಲ್ಲಿ ಈ ಪ್ರಮಾಣದ ಸಂಗೀತಾಭಿರುಚಿ ಬೆಳೆಯಲು ಒಂದು ಕಾರಣವೆಂದರೆ ಮೈಸೂರಿನ ಆಸ್ಥಾನದಲ್ಲಿ ಲಲಿತಕಲೆಗಳಿಗಿದ್ದ ಅಪಾರ ಪೋಷಣೆ. ಸ್ವತಃ ಅರಸರುಗಳೂ ಸಂಗೀತವನ್ನು ರೂಢಿಸಿಕೊಂಡಿದ್ದರಲ್ಲದೆ, ಆಸ್ಥಾನ ವಿದ್ವಾಂಸರನ್ನು ನಿಯೋಜಿಸುವುದು, ದಸರಾ ಮುಂತಾದ ಉತ್ಸವಗಳಲ್ಲಿ ಕವಿಕಲಾವಿದರನ್ನು ಸಮ್ಮಾನಿಸುವುದು, ಅರಮನೆಯಲ್ಲೇ ಸಂಗೀತಪಾಠಶಾಲೆಯನ್ನು ಪ್ರಾರಂಭಿಸಿದ್ದೂ, ಶಾಲೆಗಳಲ್ಲೂ ಸಂಗೀತವನ್ನು ಪಠ್ಯವಿಷಯವಾಗಿ ಅಳವಡಿಸಿದ್ದು, ವಿವಿಧ ಪ್ರದೇಶಗಳ ರಾಜಸಭೆಗಳಿಂದ ವಿದ್ವಾಂಸರನ್ನು ವಿನಿಮಯಮಾಡಿಕೊಳ್ಳುತ್ತಿದ್ದದ್ದು—ಇತ್ಯಾದಿಗಳು ಸಂಕೇತಿಗಳ ಸ್ವಭಾವಸಹಜ ಸಂಗೀತಪ್ರತಿಭೆಗೆ ಸೂಕ್ತ ವೇದಿಕೆಯನ್ನೂ ಪ್ರೋತ್ಸಾಹವನ್ನೂ ಇತ್ತವು. ಪ್ರಖ್ಯಾತ ವೀಣಾವಿದ್ವಾಂಸರಾದ ರುದ್ರಪಟ್ಣಂ ರಂಗಪ್ಪ ಹಾಗೂ ಅವರ ಪುತ್ರ ವೀಣಾ ವೇಂಕಟರಮಣಯ್ಯನವರು ಮೈಸೂರು ಅರಮನೆಯ ಸಂಗೀತ-ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಈ ರಾಜಮನೆತನದ ಕೊನೆಯ 25ವರ್ಷಗಳ ಆಳ್ವಿಕೆಯಲ್ಲೇ (19ನೆಯ  ಕೊನೆಯ ಹಾಗೂ 20ನೆಯ ಶತಮಾನದ ಮೊದಲ ಭಾಗ) ರಾಜರ ಪೋಷಣೆಯಿಂದಾಗಿ ಸಂಕೇತಿ ಸಮುದಾಯದ ಹಲವು ಉತ್ತಮ ಸಂಗೀತ ವಿದ್ವಾಂಸರು ಬೆಳಕಿಗೆ ಬಂದರು. 

ಬದಲಾವಣೆಗಳ ಕಾಲದಲ್ಲಿ, ಆಂಗ್ಲರ ಶಿಕ್ಷಣ ಹಾಗೂ ಭಾರತದ ಸ್ವಾತಂತ್ರ್ಯದೊಂದಿಗೆ ಗ್ರಾಮೀಣ ಕರ್ನಾಟಕ ಪ್ರಾಂತಗಳಲ್ಲೇ ಇರುತ್ತಿದ್ದ ಈ ಜನಾಂಗದವರು ನಗರಗಳತ್ತ ಹೊರಡಲಾರಂಭಿಸಿದರು. ಇವರುಗಳ ಪೈಕಿ ಹಲವರು ವೈದ್ಯರಾಗಿಯೂ, ಇಂಜಿನಿಯರ್ಗಳಾಗಿಯೂ, ವಕೀಲರಾಗಿಯೂ, ಶಿಕ್ಷಣತಜ್ಞರಾಗಿಯೂ, ಆಡಳಿತಗಾರರಾಗಿಯೂ, ಉದ್ಯಮಿಗಳಾಗಿಯೂ ಅರಳಿದ್ದಾರೆ. ಅಮೇರಿಕದ NASA (North American Sanketi Association) ಸಂಸ್ಥೆಯು ಇದಕ್ಕೊಂದು ಉತ್ತಮ ನಿದರ್ಶನವಾಗಿದೆ! 

ಸಂಗೀತದಲ್ಲೇ ತಮ್ಮನ್ನು ತಾವು ಗಂಭೀರವಾಗಿ ತೊಡಗಿಸಿಕೊಂಡಿರುವ ಸಂಕೇತಿಗಳು ಹೆಚ್ಚಾಗಿ ಇರುವುದು ಹಾಸನ ಜಿಲ್ಲೆಯ ರುದ್ರಪಟ್ಣ ಹಾಗೂ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಚಿಲ್ಕುಂದ ಪ್ರದೇಶಗಳಲ್ಲಿ. ಸಂಕೇತಿಗರ ಮತ್ತೊಂದು ಪ್ರಸಿದ್ಧ ವಾಸಸ್ಥಾನವೆಂದರೆ ‘ಸಂಸ್ಕೃತ-ಗ್ರಾಮ’ವೆಂದೇ ಹೆಸರುವಾಸಿಯಾದ ಮತ್ತೂರು. ಇದು ಶಿವಮೊಗ್ಗೆಯಿಂದ 8 ಕಿಮೀ ದೂರದಲ್ಲಿದ್ದು, ತೀರ್ಥಹಳ್ಳಿಗೆ ಹೋಗುವ ಮಾರ್ಗದಲ್ಲಿದೆ. ಪಂಚೆ-ಅಂಗವಸ್ತ್ರಗಳನ್ನು ಧರಿಸಿ ಕೃಷಿಯ ಉಪಕರಣಗಳನ್ನು ಹಿಡಿದು, ವ್ಯವಸಾಯ ಮಾಡುತ್ತಲೇ ಸಂಸ್ಕೃತಭಾಷೆಯಲ್ಲೇ ಸಂಭಾಷಿಸುವ ಜನರನ್ನು ಇಲ್ಲಿ ಕಾಣಬಹುದಾಗಿದೆ! ಹಸಿರು ಹೊಲಗಳಲ್ಲಿ ದುಡಿಯುತ್ತಲೇ ಇವರು ವೇದಮಂತ್ರಗಳನ್ನು ಪಠಿಸುತ್ತಾರೆ. ಇಲ್ಲಿನ ಅಡುಗೆಮನೆಗಳಲ್ಲೂ ‘ಉರಿಕಾ, ಧರ್ಮೀ/ದರ್ವೀ, ಚಲನಿ, ಚಲ್ಲಿ’ ಮುಂತಾದ ಪದಗಳು ನಿನದಿಸುತ್ತವೆ!

ಮತ್ತೆ ಮತ್ತೂರು

ಸಂಜೆಯ ಆಗಸದ ಗಾಢಕೆಂಪಿಂದಲೂ ತಂಪಿಂದಲೂ ಪ್ರೇರಿತಳಾಗಿ ಸೊಂಪಾಗಿ ಹರಿಯುವ ತುಂಗೆಯ ತಟದಲ್ಲಿ ತಂಡತಂಡವಾಗಿ ನೆರೆದು ಶ್ಲೋಕಗಳನ್ನು ಹಾಡುತ್ತ, ಸಂಧ್ಯಾವಂದನೆ ಮಾಡುತ್ತ, ಮಂತ್ರೋಚ್ಚಾರಣ ಮಾಡುವವರು ಇಲ್ಲಿ ಕಾಣಬರುತ್ತಾರೆ. ಇದೇ ಮತ್ತೂರು! ಹೊಸಹಳ್ಳಿ ಗ್ರಾಮವೂ ಸೇರಿದಂತೆ ಈ ಗ್ರಾಮವು ‘ಸಂಸ್ಕೃತವು ಅದ್ವಿತೀಯವಾದ ಆಡುಭಾಷೆಯಾಗಬಲ್ಲುದು’ ಎಂಬುದನ್ನು ಸಾಬೀತುಪಡಿಸಿದೆ. ವಿಜಯನಗರದರಸರ ಕಾಲದಲ್ಲಿ ಮತ್ತೂರು ‘ಕೃಷ್ಣರಾಜಪುರ’ವೆಂಬ ಹೆಸರಿನಿಂದ ಪ್ರಖ್ಯಾತವಾಗಿತ್ತು ಎಂದು ಇತಿಹಾಸದ ದಾಖಲೆಗಳಿವೆ. ಒಮ್ಮೆ ತುಂಗೆಯ ಪ್ರವಾಹವು ಈ ಗ್ರಾಮವನ್ನೇ ಕೊಚ್ಚಿಹಾಕಿತ್ತು. ಎಲ್ಲರೂ ಸೇರಿ ಗ್ರಾಮವನ್ನು ಮತ್ತೆ ಕಟ್ಟಿಕೊಂಡರು. ಹಾಗಾಗಿ ಇದನ್ನು ಮತ್ತೂರು (ಮತ್ತೆ ಊರು) ಎಂಬುದಾಗಿ ಪುನರ್ನಾಮಕರಣ ಮಾಡಲಾಯಿತು.

ಯಜ್ಞಾದಿಗಳನ್ನು ಆಚರಿಸುವ ಸಲುವಾಗಿ ಕೇರಳಸೀಮೆಯ ಬ್ರಾಹ್ಮಣರನ್ನು ಕಳುಹಿಸಿಕೊಡುವಂತೆ ಮೈಸೂರು ದೊರೆಗಳು  ತಿರುವಾಂಕೂರು ಮಹಾರಾಜರನ್ನು ವಿನಂತಿಸಿಕೊಂಡಾಗ, ಈ ಪಂಗಡದವರನ್ನು ಇಲ್ಲಿಗೆ ಕಳಿಸಲಾಯಿತು ಎಂದು ಮತ್ತೂರಿನ ಗ್ರಂಥಗಳು ಹೇಳುತ್ತವೆ. ಯಜ್ಞಾದಿಗಳು ಸಂಪನ್ನವಾದ ಬಳಿಕ,ಈ ಬ್ರಾಹ್ಮಣರು ನದೀತೀರದಲ್ಲಿ ವಾಸ್ತವ್ಯ ಹೂಡಲು ಅನುಕೂಲವನ್ನೊದಗಿಸಿಕೊಡುವಂತೆ ದೊರೆಗಳನ್ನು ಕೇಳಿಕೊಂಡರು. ತುಂಗಾ-ಕಾವೇರೀ-ಹೇಮಾವತೀ ನದೀತೀರಗಳ ಇಕ್ಕೆಲಗಳಲ್ಲಿ ಇವರಿಗಾಗಿ ಗ್ರಾಮಗಳನ್ನು  ರೂಪಿಸಲಾಯಿತು. ತಮ್ಮ ಮೂಲಸ್ಥಾನದಲ್ಲಿ ಮಾಡುತ್ತಿದ್ದ ಅಡಕೆ, ತೆಂಗು ಹಾಗೂ ಬಾಳೆಗಳ ಕೃಷಿಯನ್ನು ಇವರು ಈ ಪ್ರಾಂತಕ್ಕೂ ತಂದರೆನ್ನಲಾಗುತ್ತದೆ.

1522ರಲ್ಲಿ ಆನೆಗೊಂದಿಯ  ರಾಜ ಅಚ್ಯುತರಾಯ ಕೃಷ್ಣರಾಯನು ಒಮ್ಮೆ ಇದೇ ಪ್ರಾಂತದ ತುಂಗಾತೀರದಲ್ಲಿ ಕುಳಿತು ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದನು. ಆಗ ವೇದಘೋಷದ ಮಧುರ ಗಂಭೀರನಾದವು ತೇಲಿಬಂತು. ಆ ವೇದಘೋಷವನ್ನು ಮಾಡುತ್ತಿದ್ದ ಹಳ್ಳಿಗರ ಗುಂಪಿನತ್ತ ರಾಜನು ಆಕರ್ಷಿತನಾದ. ಮಹಾರಾಜನ ಆಣತಿಯಂತೆ ಮಂತ್ರಿಯಾದ ತ್ರ್ಯಂಬಕರಾಯನು ಮತ್ತೆಮತ್ತೆ ಈ ಹಳ್ಳಿಗರನ್ನು ಸಂಪರ್ಕಿಸಿ ಆ ಗ್ರಾಮವನ್ನೇ ಬಳುವಳಿಯಾಗಿ ಸ್ವೀಕರಿಸುವಂತೆ ಕೇಳಿಕೊಂಡ. ಹೀಗೆ ವೇದ, ಸಂಸ್ಕೃತ ಹಾಗೂ ಸಾಂಸ್ಕೃತಿಕ ಕಲಾಪಗಳ ಅಮಿತ ಸಂಸ್ಕಾರವುಳ್ಳ ಈ ಗ್ರಾಮೀಣ ಸಮುದಾಯದವರಿಗೆ ಮತ್ತೂರು ಗ್ರಾಮವೇ ಬಳುವಳಿಯಾಗಿ ಸಿಕ್ಕಿತು. ಶಿವಮೊಗ್ಗೆಯ ಕೇಂದ್ರ ವಾಸ್ತುಸಂಗ್ರಹಾಲಯದಲ್ಲಿನ ತಾಮ್ರಶಾಸನದಲ್ಲಿ ಈ ವಿಷಯವು ದಾಖಲಾಗಿದೆ. 

60 ವರ್ಷಗಳ ಕಾಲ ಸತತವಾಗಿ ಸಂಸ್ಕೃತಭಾಷೆಯಲ್ಲೇ ಸಂಭಾಷಿಸಿರುವುದಕ್ಕಾಗಿ, 1982ರಲ್ಲಿ ಸ್ಥಳೀಯರಾದ ಸಾಗರ ರಾಮಚಂದ್ರಭಟ್ಟರೆಂಬವರನ್ನು ಮತ್ತೂರಿನಲ್ಲಿ ಸಮ್ಮಾನಿಸಲಾಯಿತು. ಆಗ ಅಲ್ಲಿ ನೆರೆದಿದ್ದರವರ ಪೈಕಿ ಪೇಜಾವರಮಠದ ಶ್ರೀ ವಿಶ್ವೇಶತೀರ್ಥರೂ ಇದ್ದರು. ಅವರು ಏಷಃ ಸಂಸ್ಕೃತಗ್ರಾಮಃ ಭವತು (ಮತ್ತೂರು ಸಂಸ್ಕೃತಗ್ರಾಮವಾಗಲಿ) ಎಂದು ಘೋಷಿಸಿದರು. “ಮತ್ತೂರು ಭವಿಷ್ಯದ ಸಂಸ್ಕೃತಗ್ರಾಮವಾಗುತ್ತದೆ” ಎಂದು ಮತ್ತೂರು ಕೃಷ್ಣಮೂರ್ತಿಯವರು ಹೇಳಿದರು. (ಇವರು ಮತ್ತೂರು ಗ್ರಾಮದವರೂ, ಸಂಕೇತಿಗರೂ ಆಗಿದ್ದು ಭಾರತೀಯ ವಿದ್ಯಾಭವನದ ಬೆಂಗಳೂರು ಹಾಗೂ ಲಂಡನ್ ಶಾಖೆಗಳ ನಿರ್ದೇಶಕರು ಹಾಗೂ ಪದ್ಮಶ್ರೀ ಪುರಸ್ಕೃತರು).

ಸುಮಾರು 5 ಲಕ್ಷಕ್ಕೆ ಹತ್ತಿರದಷ್ಟು ಸಂಕೇತಿಗಳು ಇಂದು ವಿಶ್ವಾದ್ಯಂತ ಹರಡಿದ್ದು, ಅಮೇರಿಕಾ-ಬ್ರಿಟನ್ ಗಳಲ್ಲಿ ದೊಡ್ಡಸಂಖ್ಯೆಯ ಸಂಕೇತಿಗಳು ನೆಲೆಸಿದ್ದಾರೆ. ಈಗ ಈ ಸಮುದಾಯವು ತನ್ನ ಬೆಳವಣಿಗೆಯನ್ನು ಅಧ್ಯಯನ ಮಾಡಲು, ವಂಶವೃಕ್ಷವನ್ನೂ ತಯಾರಿಸುತ್ತಿದೆ. ಭಾರತದಲ್ಲಿ ಸಂಕೇತಿ-ಸಂಘವೂ, ಸಂಕೇತಿ-ಅಕಾಡೆಮಿಯೂ ಸಕ್ರಿಯವಾಗಿದ್ದು, ಸಂಕೇತೀ ಭಾಷೆ-ಪದ್ಧತಿ-ಸಂಸ್ಕೃತಿಗಳ ಸಂಶೋಧನೆ ಹಾಗೂ ಸಂರಕ್ಷಣೆಯಲ್ಲಿ ತೊಡಗಿವೆ. ಈ ಸಂಗ್ರಹವು ಸಂಕೇತಿ-ಕುಲಕ್ಕೇ ಹೆಮ್ಮೆ ತರುವಂತಹದ್ದಾಗಿದೆ. ದೊಡ್ಡಸಂಖ್ಯೆಯ ಸಂಗೀತಗಾರರನ್ನೂ ವಾಗ್ಗೇಯಕಾರರನ್ನೂ ಹೊಂದಿರುವುದು ಸಂಕೇತಿ ಸಮುದಾಯದ ಗರಿಮೆ. ಆದರೂ ಇಷ್ಟೊಂದು ಸಂಗೀತಗಾರರನ್ನೂ ವಾಗ್ಗೇಯಕಾರರನ್ನೂ ನೀಡಿದ್ದು, ಶತಮಾನದಿಂದಲೂ ಕರ್ನಾಟಕ ಶಾಸ್ತ್ರೀಯಸಂಗೀತಕ್ಕೆ ಸತ್ವಯುತ ಕೊಡುಗೆಯನ್ನಿತ್ತಿರುವ ಈ ಸಂಕೇತಿ ಸಮುದಾಯವನ್ನು ಕರ್ನಾಟಕದಾಚೆ, ರಾಷ್ಟ್ರಮಟ್ಟದಲ್ಲಿ ‘ಸಂಗೀತಸಮುದಾಯ’ವೆಂದು ಇನ್ನೂ ಗುರುತಿಸಲಾಗಿಲ್ಲ ಎನ್ನುವುದು ನಿಜಕ್ಕೂ ಆಶ್ಚರ್ಯಕರ!

ಸ್ಮೃತಿಯ ರಜತರೇಖೆ

ಸಂಕೇತಿ ಸಂಗೀತಗಾರರ ಹೆಸರುಗಳ ಪಟ್ಟಿ ಸುದೀರ್ಘವಾಗಿದ್ದರೂ, ಅವರುಗಳ ಪೈಕಿ ದೊಡ್ಡಹೆಸರನ್ನು ಮಾಡಿದವರೂ ಹಲವರಿದ್ದರೂ, ಅನೇಕರು ಗುರುತಿಗೆ ಬಾರದೆ ಉಳಿದಿದ್ದಾರೆ. 

*19ನೆಯ ಶತಮಾನ ಹಾಗೂ 20ನೆಯ ಶತಮಾನದ ಮೊದಲ ಭಾಗದಲ್ಲಿ ಸಂಕೇತಿ ಸಂಗೀತಗಾರರು ನೂರಾರು ಸಂಖ್ಯೆಯಲ್ಲಿ ಹೊಮ್ಮಿಬಂದಿದ್ದಾರೆ. ಆರ್.ಕೆ. ಶ್ರೀಕಂಠನ್ ರವರ ಮಾತಾಮಹರು (ತಾಯಿಯ ತಂದೆ) ಬೆಟ್ಟದಪುರದವರು. ವೈಣಿಕರಾಗಿಯೂ, ಗಾಯಕರೂ, ವೀಣೆ ಶೇಷಣ್ಣ ಹಾಗೂ ಸುಬ್ಬಣ್ಣನವರ ಸಮಕಾಲೀನರೂ ಆಗಿದ್ದ ಇವರ ಸಂಗೀತಕ್ಕೆ ‘ಗಂಧರ್ವಗಾನ’ ಎಂಬ ಬಿರುದೇ ಬಂದಿತ್ತು. ವೀಣೆ ಶೇಷಣ್ಣನವರ ಸೋದರಿಯು ತಮ್ಮ ಅಣ್ಣನನ್ನು ‘ಇವರ ಶೈಲಿ’ಯನ್ನು ಅನುಸರಿಸುವಂತೆ ಬೇಡಿಕೊಳ್ಳುತ್ತಿದ್ದರು. ಅದಲ್ಲದೆ ಬೆಟ್ಟದಪುರದಲ್ಲಿ ಮೊಟ್ಟಮೊದಲು ಎರಡು ಮಹಡಿಗಳ ಮನೆಯನ್ನು ಕಟ್ಟಿದವರೇ ಇವರು. ಇವರ ಮನೆಯನ್ನು ‘ಮಹಡಿಮನೆ’ ಎಂದೇ ಗುರುತಿಸಲಾಗುತ್ತಿತ್ತು. ಅವರನ್ನು ‘ಮಹಡೀ ಶೋಮಿ’ ಎಂದು ಸಂಬೋಧಿಸಲಾಗುತ್ತಿತ್ತು. ಮಹಾನ್ ವಾಗ್ಗೇಯಕಾರರಾದ ವೀಣಾ ಪದ್ಮನಾಭಯ್ಯನವರಿಗೆ ಇವರು ಪರಮ ಆಪ್ತರಾಗಿದ್ದರು.

* ಕಲ್ಲಿಕೋಟೆಶ್ಯಾಮಾಶಾಸ್ತ್ರಿ

ಕಲ್ಲಿಕೋಟೆ ಶ್ಯಾಮಾಶಾಸ್ತ್ರಿಗಳು ಶ್ರೀಕಂಠನ್ ರವರ ದೊಡ್ಡಪ್ಪನವರು. ಉತ್ತಮ ಹರಿಕಥಾ-ವಿದ್ವಾಂಸರೂ ಪಿಟೀಲುವಾದಕರೂ ಆಗಿದ್ದರು. ಮುಂದೆ ಇವರು ಕನ್ನಡದಲ್ಲಿ ಪಂಡಿತರೆನಿಸಿ ಕಾವ್ಯವಾಚನದ ವ್ಯಾಖ್ಯಾನಕ್ಕೆ ಖ್ಯಾತರಾದರು.

*ಕೃಷ್ಣಶಾಸ್ತ್ರಿರವರು ಶ್ರೀಕಂಠನ್ ರವರ ತಂದೆಯವರು, ರುದ್ರಪಟ್ಣಂ ಶ್ಯಾಮಾಶಾಸ್ತ್ರಿಗಳ ತಮ್ಮನಾಗಿದ್ದು, ಸಂಸ್ಕೃತ ಮತ್ತು ಕನ್ನಡದಲ್ಲಿ ವಿದ್ವಾಂಸರಾಗಿದ್ದರು. ತಮ್ಮ ಮಾವನವರಾದ (ಹೆಂಡತಿಯ ತಂದೆ) ವೀಣೆ ನಾರಣಪ್ಪನವರ ಪ್ರಭಾವದಿಂದ ಸಂಗೀತವನ್ನು ಕಲಿತರು. ಪುರಾಣಗಳಲ್ಲಿ ಪರಿಣತಿಯನ್ನು ಪಡೆದ ಇವರಿಗೆ ಹರಿಕಥೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರು.ಉತ್ತಮ ಚಿತ್ರಕಲಾನಿಪುಣರೂ ಆದ ಇವರು ಕೆಲಕಾಲ ಚಿತ್ರಕಲಾ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಕೊಳಲುವಾದಕರಾದ ಎ.ಕೆ. ಸುಬ್ಬರಾಯರು ಇವರ ಶಿಷ್ಯರಾಗಿದ್ದರು.

ಕೃಷ್ಣಶಾಸ್ತ್ರಿಗಳು ಭಾಗ್ಯವಂತರು. ಏಕೆಂದರೆ ಅವರ ನಾಲ್ಕೂ ಪುತ್ರರೂ ಅವರ ಸಂಗೀತಪರಂಪರೆಯನ್ನು ಮುಂದುವರೆಸಿದರು! ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ಷೇತ್ರದಲ್ಲಿ ನಾಲ್ವರೂ ಹೆಸರುವಾಸಿಯಾದರು ಕೂಡ. 

ಹಿರಿಯ ಪುತ್ರ ಆರ್.ಕೆ.ವೆಂಕಟರಾಮಾಶಾಸ್ತ್ರಿಮೈಸೂರಿನ ಪಿಟೀಲು ಚೌಡಯ್ಯನವರ ಶಿಷ್ಯರು.ಇವರು ಮದ್ರಾಸ್ ಆಕಾಶವಾಣಿಯಲ್ಲಿ ಉದ್ಯೋಗನಿರತರಾಗಿದ್ದರು. ತಮ್ಮ ಕಾಲದ ಖ್ಯಾತಿವೆತ್ತ ಕಲಾವಿದರಾದ ಎಂ.ಎಸ್. ಸುಬ್ಬುಲಕ್ಷ್ಮಿರವರಂತಹ ಕಲಾವಿದರಿಗೆಲ್ಲ ಪಕ್ಕವಾದ್ಯವನ್ನು ನುಡಿಸಿದವರಿವರು. ಇವರ ಮೊಮ್ಮಗನಾದ  ಆರ್.ಕೆ.ಶ್ರೀರಾಮಕುಮಾರರು ಇಂದು ಹೆಸರಾಂತ ಪಿಟೀಲು ವಾದಕರು.

ಎರಡನೆಯ ಪುತ್ರ ಆರ್.ಕೆ.ನಾರಾಯಣಸ್ವಾಮಿರವರು ಮುಸಿರಿ ಸುಬ್ರಹ್ಮಣ್ಯ ಐಯ್ಯರರ ಶಿಷ್ಯರು. ಅವರ ಮಕ್ಕಳಾದ ಆರ್.ಎನ್. ತ್ಯಾಗರಾಜನ್ ಮತ್ತು ಆರ್.ಎನ್.ತಾರಾನಾಥ್ (ರುದ್ರಪಟ್ಣಂ ಸೋದರರೆಂದು ಪ್ರಸಿದ್ಧರು) ಮತ್ತು ಆರ್.ಎನ್. ಶ್ರೀಲತಾರವರು ಕರ್ನಾಟಕದ ಪ್ರಸಿದ್ಧ ಗಾಯಕರಾಗಿದ್ದಾರೆ. ಆರ್.ಎನ್. ತ್ಯಾಗರಾಜನ್ ರವರು ಚೆನ್ನೈ ದೂರದರ್ಶನದ ಉಪನಿರ್ದೇಶಕರಾಗಿ ನಿವೃತ್ತರಗಿದ್ದಾರೆ. ಶ್ರೀಲತಾರವರು ಮೈಸೂರು ವಿಶ್ವವಿದ್ಯಾಲಯದಿಂದ ಸಂಗೀತವಿಷಯದಲ್ಲಿ ಮೊಟ್ಟಮೊದಲ ಡಾಕ್ಟೊರೇಟ್ ಪದವಿ ಪಡೆದ ಕರ್ನಾಟಕದ ಗಾಯಕಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.ಇದೀಗ ಅವರು ಮೈಸೂರಿನ ಲಲಿತ ಕಲಾ ಕಾಲೇಜಿನಲ್ಲಿ ಅಧ್ಯಾಪನ ಮಾಡುತ್ತಿದ್ದಾರೆ. 

ಮೂರನೆಯ ಪುತ್ರರಾದ ರಾಮನಾಥನ್ ರವರು ಆಂಗ್ಲ ಪ್ರಾಧ್ಯಾಪಕರಾಗಿದ್ದು ಜೊತೆಗೇ ಸಂಗೀತ-ಕಚೇರಿಗಳನ್ನು ನೀಡುತ್ತಿದ್ದರು.

ನಾಲ್ಕನೆಯ ಪುತ್ರರೇ ಶ್ರೀಕಂಠನ್ ರವರು-ಈ ನಾಲ್ವರಲ್ಲಿ  ಅತ್ಯಂತ ಹೆಚ್ಚು ಪ್ರಸಿದ್ಧರು. ಕರ್ನಾಟಕ ಶಾಸ್ರೀಯ ಸಂಗೀತಕ್ಕೆ ನೀಡಿದ ಯೋಗದಾನಕ್ಕಾಗಿ ಇವರು 2011ರಲ್ಲಿ ಪದ್ಮಭೂಷಣ ಪ್ರಶಸ್ತಿಗೂ ಭಾಜನರಾದರು. ‘ರಾಜ್ಯ ಸಂಗೀತ-ವಿದ್ವಾನ್’ ಎಂಬ ಪ್ರಶಸ್ತಿ ಪುರಸ್ಕೃತರೂ ಆದ ಶ್ರೀಕಂಠನ್ ರವರು (ಇದು ಸರ್ಕಾರವು 1994ರಲ್ಲಿ ನೀಡಿದ ಬಿರುದು) ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಪ್ರವೀಣರು. ಕನ್ನಡ ಹಾಗೂ ಆಂಗ್ಲಗಳಲ್ಲಿ ಇವರು ಮಂಡಿಸಿರುವ ಗಾನ-ನಿರೂಪಣ ಕಾರ್ಯಕ್ರಮಗಳು ಇವರಲ್ಲಿನ ಉತ್ತಮ ವಿದ್ವತ್ತನ್ನೂ ಕಲಿಸುವ ಕೌಶಲವನ್ನೂ ಅಭಿವ್ಯಂಜಿಸಿವೆ. ಶ್ರೀಕಂಠನ್ ರವರ ಪುತ್ರ ರಮಾಕಾಂತ್ ರವರು ಉತ್ತಮ ಗಾಯಕರು. ಮೂರನೆಯ ವಯಸ್ಸಿನಲ್ಲೇ ಗಾಯನವನ್ನಾರಂಭಿಸಿದ ಬಾಲಪ್ರತಿಭೆ.ಶ್ರೀಕಂಠನ್ ರವರ ಪುತ್ರಿ ರತ್ನಮಾಲಾರವರು ಭಾವಗೀತಾಲೋಕದಲ್ಲಿ ಖ್ಯಾತಿವೆತ್ತ ಗಾಯಕಿ. ಶ್ರೀಕಂಠನ್ ರವರ ಇತರ ಮಕ್ಕಳಾದ ಉಮಾ, ನಳಿನೀ, ವಿಜಯಾ, ಚಂದ್ರಿಕಾ ಹಾಗೂ ಕುಮಾರ್ ರವರೂ ರಮಾಕಾಂತರೂ ರತ್ನಮಾಲಾರವರಷ್ಟು ಖ್ಯಾತಿ ಗಳಿಸಿಲ್ಲವಾದರೂ, ಉತ್ತಮ ಮಟ್ಟದ ಸಂಗೀತ ಪರಿಜ್ಞಾನವನ್ನೂ ಮಧುರಕಂಠಶ್ರೀಯನ್ನೂ ಉಳ್ಳವರಾಗಿದ್ದಾರೆ. ರಮಾಕಾಂತರು ಜೀವಶಾಸ್ತ್ರದಲ್ಲಿ ಉಪನ್ಯಾಸಕರಾಗಿ ಉದ್ಯೋಗ ವಹಿಸಿ ನಿವೃತ್ತರಾಗಿದ್ದಾರೆ.  ಇವರು ಉತ್ತಮ ಚಿತ್ರಕಲಾವಿದರೂ ವನ್ಯ ಜೀವಿ ಛಾಯಾ ಚಿತ್ರಗ್ರಾಹಕರೂ  ಆಗಿದ್ದಾರೆ. 

ಶ್ರೀಕಂಠನ್ ರವರ ಮೊಮ್ಮಗನಾದ ಅಚಿಂತ್ಯ (ಕುಮಾರ್ ರವರ ಪುತ್ರ), ಕುಲದ ಸಂಗೀತಪರಂಪರೆಯನ್ನು ಮುಂಬರೆಸುವ ದಿಕ್ಕಿನಲ್ಲಿ ಈಗಾಗಲೇ ತಯಾರಾಗುತ್ತಿದ್ದಾರೆ. ಅಂತೆಯೇ ಕುಮಾರ್ ರವರ ಪುತ್ರಿ ಜಯಶ್ರೀ ಕೂಡ ಪಿಟೀಲುವಾದನದಲ್ಲಿ ಈಗಾಗಲೇ ಪಳಗಿದ ಕಲಾವಿದೆ. 

ಇತರ ಖ್ಯಾ ಸಂಕೇತಿಸಂಗೀತಗಾರರು

*ಎನ್.ಚೆನ್ನಕೇಶವಯ್ಯ– ಮಂಡ್ಯಜಿಲ್ಲೆಯ ಇವರು, 1944ರಲ್ಲಿ ಮೈಸೂರು ರಾಜಪರಂಪರೆಯ ಆಸ್ಥಾನ ವಿದ್ವಾಂಸರಾಗಿ ನಿಯುಕ್ತರಾಗಿದ್ದ ಮೈಸೂರು ವಾಸುದೇವಾಚಾರ್ಯರ ಶಿಷ್ಯರಾದರು. ಚೆನ್ನಕೇಶವಯ್ಯನವರು ಹಲವಾರು ಪುಸ್ತಕಗಳನ್ನು ರಚಿಸಿದ್ದಾರಲ್ಲದೆ  ಮದ್ರಾಸ್   ಸಂಗೀತ ಅಕಾಡೆಮಿಯ ತಜ್ಞರ ಮOಡಲಿಯಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ಅಕಾಡೆಮಿಯ ಪತ್ರಿಕೆಗಳಿಗೆ ಹಲವಾರು ಲೇಖನಗಳನ್ನು ಸಲ್ಲಿಸಿದ್ದಾರೆ. ಇವರು ಆಕಾಶವಾಣಿಯ ಧ್ವನಿಪರೀಕ್ಷೆ  ಹಾಗೂ ಸಂಗೀತ ಪರೀಕ್ಷಾಮಂಡಲಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 

*ಸಿ.ರಂಗಯ್ಯನವರುಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದ ಇವರು ವೀಣಾ ವೆಂಕಟಗಿರಿಯಪ್ಪ ಹಾಗೂ ಮೈಸೂರು ವಾಸುದೇವಾಚಾರ್ಯರ ಶಿಷ್ಯರಾಗಿದ್ದರು. ಸುಮಾರು 500 ಕೃತಿಗಳನ್ನು ರಚಿಸಿದ ಹೆಗ್ಗಳಿಕೆ ಇವರದು. 72 ಮೇಳಕರ್ತರಾಗಗಳಲ್ಲೂ ಇವರು ಕೃತಿರಚನೆ ಮಾಡಿದ್ದಾರೆ. ಸಂಗೀತಸಿದ್ಧಾಂತಗಳ ಕುರಿತಾದ ಇವರ ಪುಸ್ತಕಗಳು ಬಹಳ ಮೆಚ್ಚುಗೆಯನ್ನು ಪಡೆದಿವೆ. 

*ಬಿ.ಸುಬ್ಬರಾವ್– ಹಾಸನ ಜಿಲ್ಲೆಯ ಬಸವಾಪಟ್ಣದ ಇವರು ಎ.ಹೆಚ್.ವೈದ್ಯನಾಥ ಐಯ್ಯರರ ಶಿಷ್ಯಪರಂಪರೆಯವರಾದ ವಿಶ್ವನಾಥಶಾಸ್ತ್ರಿಗಳಿಂದ ಶಿಕ್ಷಣವನ್ನು ಪಡೆದವರು. ಇವರು ವೀಣೆ, ಪಿಟೀಲು ಹಾಗೂ ಗೋಟುವಾದ್ಯಗಳಲ್ಲಿ ಪ್ರವೀಣರು. ಇವರು ಮಧ್ಯಪ್ರದೇಶದ ಕೃಷಿಇಲಾಖೆಯಲ್ಲಿ ಉಪನಿರ್ದೇಶಕರಾಗಿ ಸೇವೆಸಲ್ಲಿಸಿ ನಿವೃತ್ತರಾದರು. ನಾಗಪುರದಲ್ಲಿರುವಾಗ ಇವರು ವಿನಾಯಕರಾವ್ ಪಟವರ್ಧನ್ ರವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸಮಾಡಿದರು. ಈ ಕಾಲದಲ್ಲಿ ಇವರು ಕರ್ನಾಟಕ ಹಾಗೂ ಹಿಂದೂಸ್ಥಾನಿ ಎರಡೂ ಪದ್ಧತಿಗಳ ರಾಗಗಳನ್ನು ವಿವರಿಸುವಂತಹ ನಾಲ್ಕು ಸಂಪುಟಗಳ ‘ರಾಗನಿಧಿ’ ಎಂಬ ಪುಸ್ತಕವನ್ನೂ ಪ್ರಕಟಿಸಿದರು. 

ಆರ್.ಆರ್. ಕೇಶವಮೂರ್ತಿ– ಇವರು ರುದ್ರಪಟ್ಣಂ ರಾಮಸ್ವಾಮಯ್ಯನವರ ಪುತ್ರರು. ಮೈಸೂರಿನ ಬಿಡಾರಂ ಕೃಷ್ಣಪ್ಪರಂತಹ ವಿದ್ವನ್ಮಣಿಗಳಿಂದ ಇವರಿಗೆ ಶಿಕ್ಷಣವಾಯಿತು. 1934ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿ, ಕೀರ್ತಿವಂತರಾದರು. ಇವರು ಹಲವಾರು ಸುವಿಖ್ಯಾತ ಗಾಯಕರಿಗೆ ಪಕ್ಕವಾದ್ಯ ನುಡಿಸಿದ್ದಾರೆ. ಕರ್ನಾಟಕ ಗಾನಕಲಾ ಪರಿಷತ್ತಿನ ಸ್ಥಾಪಕ-ಸದಸ್ಯರೂ ಇವರೇ. 

ಆರ್.ಎಸ್. ಕೇಶವಮೂರ್ತಿ– ಇವರು ರುದ್ರಪಟ್ಣದವರು. ರುದ್ರಪಟ್ಣ ವೀಣಾರಂಗಪ್ಪ ಹಾಗೂ ವೀಣಾ ವೆಂಕಟರಮಣಯ್ಯನವರಂತಹ ಪ್ರಸಿದ್ಧ ವೈಣಿಕರ ಕುಟುಂಬಕ್ಕೆ ಸೇರಿದವರು ಇವರು. ವೀಣಾ ಭಕ್ಷಿ ಸುಬ್ಬಣ್ಣನವರಲ್ಲಿ ಪಡೆದ ಉನ್ನತ ಶಿಕ್ಷಣದಿಂದಾಗಿ ಇವರು ಮೈಸೂರಿನ ಆಸ್ಥಾನ ವಿದ್ವಾಂಸರಾಗುವ ಮಟ್ಟಕ್ಕೆ ಬೆಳೆದರು. ಇವರು ಇನ್ನೂ ಹದಿಹರೆಯದ ವಯಸ್ಸನ್ನು ತಲುಪುವ ಮೊದಲೇ ತಾವೇ ವೀಣೆಯನ್ನೂ ಅದರ ಘಟ್ಟಗಳನ್ನೂ ತಯಾರಿಸುವಷ್ಟು ಪರಿಣತಿಯನ್ನು ಪಡೆದರು. 1924ರಲ್ಲಿ ಇವರು 24 ತಂತಿಗಳ ಗಾಯತ್ರೀ ವೀಣೆಯನ್ನು ವಿರಚಿಸಿದರು. 1929ರಲ್ಲಿ ಬಿಡಾರಂ ಕೃಷ್ಣಪ್ಪನವರು ಮೈಸೂರಿನಲ್ಲಿ ನಿರ್ಮಿಸಿದ ಸೀತಾರಾಮಮಂದಿರದ ಉದ್ಘಾಟನೆಯಲ್ಲಿ ನುಡಿಸಿದರು ಕೂಡ.  ಇವರು‘ಬಾಲಕೋಕಿಲ’ (350ತಂತಿಗಳವಾದ್ಯ), ಜಲತರಂಗ್, ಪಿಟೀಲು, ಕೊಳಲು ಹಾಗೂ ಪಿಯಾನೋ ವಾದ್ಯಗಳಲ್ಲಿ ನುರಿತವರು. ಅವರ 11 ಮಕ್ಕಳ ಪೈಕಿ ಹೆಚ್ಚಿನವರು ಸಂಗೀತ ವಿದ್ವಾಂಸರಾದರು. ಆರ್.ಕೆ. ಶ್ರೀನಿವಾಸಮೂರ್ತಿ, ಟಿ.ಕೆ. ಸೂರ್ಯನಾರಾಯಣ, ಆರ್.ಕೆ. ರಾಘವನ್, ಆರ್.ಕೆ. ಪದ್ಮನಾಭ ಹಾಗೂ ಆರ್.ಕೆ. ಪ್ರಕಾಶರು ವೈಣಿಕರು. ಆರ್.ಕೆ. ಪ್ರಸನ್ನಕುಮಾರರವರು ಮೃದಂಗನಿಪುಣರು. ಆರ್.ಕೆ. ಚಂದ್ರಶೇಖರರವರು ಪಿಟೀಲುವಾದಕರು. ಇವರುಗಳ ಪೈಕಿ ಆರ್.ಕೆ.  ಸೂರ್ಯನಾರಾಯಣ ಹಾಗೂ ಆರ್.ಕೆ.  ಶ್ರೀನಿವಾಸಮೂರ್ತಿರವರು ಬಹಳ ಖ್ಯಾತಿವೆತ್ತ ವೈಣಿಕರು. ಆರ್.ಕೆ.  ಸೂರ್ಯನಾರಾಯಣರವರು ಸಂಸ್ಕೃತ, ಕನ್ನಡ, ತೆಲುಗು, ಮಣಿಪ್ರವಾಳ ಹಾಗೂ ಹಿಂದೀಭಾಷೆಗಳಲ್ಲಿ ಸುಮಾರು 400 ಕೃತಿಗಳನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರು. ಗುರು ರಾಘವೇಂದ್ರರ ಕುರಿತಾದ ಕೃತಿಯನ್ನು ಇವರು 1970ರಲ್ಲಿ ಕ್ವಾಲಾಲಂಪುರದಲ್ಲಿ ಮಂಡಿಸಿದರು ಕೂಡ. ಇವರು ಗುರುರಾಯರ ಕುರಿತು ರಚಿಸಿದ 24 ಕೃತಿಗಳನ್ನು ಗಣಿಸಿ, 1982ರಲ್ಲಿ ಮಂತ್ರಾಲಯದ ರಾಘವೇಂದ್ರಮಠವು ಇವರಿಗೆ ‘ಆಸ್ಥಾನವಿದ್ವಾಂಸ’ರೆಂಬ ಸ್ಥಾನವನ್ನು ನೀಡಿ ಸಮ್ಮಾನಿಸಿತು. ಸೂರ್ಯನಾರಾಯಣರು 72 ಜನಕ-ರಾಗ-ರತ್ನ-ಮಾಲಾ ಎಂಬ ಅಪರೂಪದ ಕೃತಿಯಲ್ಲದೆ ಮುಖಾರಿರಾಗದಲ್ಲಿ ‘ಯಮಧರ್ಮರಾಯ’ ಎಂಬ ಕೃತಿಯನ್ನೂ ರಚಿಸಿದ್ದಾರೆ.

ವೀಣಾ ಭಕ್ಷಿ ಸುಬ್ಬಣ್ಣ ಇವರು 1938ರಲ್ಲಿ ತಮ್ಮ ಪ್ರಿಯಶಿಷ್ಯರಾದ ಆರ್.ಎಸ್. ಕೇಶವಮೂರ್ತಿಗಳಿಗೆ ತಮ್ಮ ಕನಕ-ರಜತ-ವೀಣೆಯನ್ನುನೀಡಿದರು. ಇದರಲ್ಲಿ ಆಗಮ ಶಾಸ್ತ್ರಾನುಸಾರವಾಗಿ ಚಿನ್ನ ಹಾಗೂ ಬೆಳ್ಳಿಯ ಮೂರ್ತಿಗಳನ್ನು ಕೆತ್ತಲಾಗಿತ್ತು. ಇದಕ್ಕಿಂತ ಮೊದಲು 1931ರಲ್ಲಿ ಸರೋಜಿನೀನಾಯ್ಡುರವರು  ಗಾಂಧೀಜಿಯವರಿಗಾಗಿ ಮುಂಬೈನ ಬಿರ್ಲಾಭವನದಲ್ಲಿ ಕೇಶವಮೂರ್ತಿಗಳ ವೀಣಾ ಕಚೇರಿಯನ್ನು ಏರ್ಪಡಿಸಿದ್ದರು. ಗಾಂಧೀಜಿಯವರು ತಾವೇ ನೇಯ್ದ ನೆಲಹಾಸೊಂದನ್ನು ಇವರಿಗೆ ಬಳುವಳಿಯಾಗಿ ಕೊಟ್ಟರು. ಈ ವೈಣಿಕರು ರಬೀಂದ್ರನಾಥ ಟಾಗೋರರೊಡನೆ ಮಾಸ ಗಟ್ಟಲೆ ವಾಸಿಸಿ, ಮನಮೋಹಕ ಸಂಗೀತವನ್ನು ನುಡಿಸಿದರು. ಆಗ ರಬೀಂದ್ರನಾಥರು ಪಾಶ್ಚಾತ್ಯ ಸಂಗೀತದ ಅಧ್ಯಯನಕ್ಕಾಗಿ ಇವರನ್ನು ಯೂರೋಪಿಗೆ ಒಯ್ಯಲು ಮುಂದಾದರು. ಆದರೆ ವೈಣಿಕರು ಒಪ್ಪದೆ, ಕರ್ನಾಟಕಕ್ಕೆ ಹಿಂದಿರುಗಿದರು. 

ಪ್ರೊ.ಆರ್.ಎನ್.ದೊರೆಸ್ವಾಮಿ- 

ಇವರು ರುದ್ರಪಟ್ಣದ ನಿವಾಸಿಗರು. ಬಸವಾಪಟ್ಣದಲ್ಲಿ ಮುಖೋಪಾದ್ಯಾಯರಾಗಿದ್ದ ನಾಲಾ ವೆಂಕಟರಾಮಯ್ಯನವರ ಸುಪುತ್ರರು. ಸೇಲಂ ದೊರೈಸ್ವಾಮಿ ಐಯ್ಯರ್ ಹಾಗೂ ವೀಣಾ ವೆಂಕಟಗಿರಿಯಪ್ಪನವರಲ್ಲಿ ಶಿಕ್ಷಣ ಪಡೆದಮೇಲೆ ಇವರು 1947ರಲ್ಲಿ ಮೈಸೂರಿನ ಆಸ್ಥಾನವಿದ್ವಾಂಸರಾದರು. ಮೈಸೂರಿನಲ್ಲಿ ಲಲಿತ ಕಲಾ ಕಾಲೇಜು ಪ್ರಾರಂಭವಾದಾಗ, ಇವರನ್ನು ಸಂಗೀತ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಮೈಸೂರಿನ ಅಂದಿನ ಉಪಕುಲಪತಿಗಳಾಗಿದ್ದ ಕುವೆಂಪುರವರ ಪ್ರೇರಣೆಯಂತೆ ಇವರು ತಮ್ಮದೇ ಆದ 66 ಕೃತಿಗಳ ಪುಸ್ತಕವನ್ನು ಪ್ರಕಟಿಸಿದರು. ಇದರಲ್ಲಿ ಸಮಕಾಲೀನ ಸಮಾಜ ಹಾಗೂ ಸಂಗೀತಪರ ಪರಿಸರದ ಬಗ್ಗೆಯೂ ವ್ಯಾಖ್ಯಾನಗಳಿವೆ. 

*ಎಂ.ಆರ್. ಶಂಕರಮೂರ್ತಿ ಹಾಸನಜಿಲ್ಲೆಯ ಮದ್ದಲಾಪುರದ ಇವರು ಪ್ರಾರಂಭಿಕ ಶಿಕ್ಷಣವನ್ನು ಮತ್ತೂರು ರಾಮಮಂದಿರದ ಭಜನೆ ಮೇಷ್ಟ್ರು ಎನಿಸಿದ ರಾಮಭಟ್ಟರಲ್ಲಿ ಪಡೆದರು. ಮುಂದೆ ಆರ್.ಆರ್.ಕೇಶವಮೂರ್ತಿಗಳಲ್ಲಿ ಉನ್ನತ ಶಿಕ್ಷಣ ಪಡೆದರು. ಸಂಗೀತಕ್ಕೆ ಪಠ್ಯಪುಸ್ತಕಗಳ ಅಭಾವವಿರುವುದನ್ನು ಗಮನಿಸಿದ ಇವರು ಕರ್ನಾಟಕ ಸಂಗೀತ ತರಂಗಿಣಿ ಸರಣಿಯಲ್ಲಿ 40 ಪುಸ್ತಕಗಳನ್ನು ಪ್ರಕಟಿಸಿದರು. 

*ವೀಣಾ ವೆಂಕಟರಮಣಯ್ಯ– ಹಿಂದೆಯೇ ಉಲ್ಲೇಖಿಸಿರುವಂತೆ ಇವರು ಖ್ಯಾತ ವೈಣಿಕರೂ ವಾಗ್ಗೇಯಕಾರರೂ ಆಗಿದ್ದರು. ಕೇದಾರಗೌಳರಾಗ-ಝಂಪೆತಾಳದಲ್ಲಿ ಇವರು ರಚಿಸಿರುವ ‘ವಿರಿಭೋನಿ—‘ ತಾನವರ್ಣವೂ, ಅಂತೆಯೇ ನಾಯಕಿ ರಾಗದಲ್ಲಿನ ತಾನವರ್ಣವೂ ಕರ್ನಾಟಕ ಶಾಸ್ತ್ರೀಯ ಸಂಗೀತಲೋಕದಲ್ಲಿಯೇ ಮೇರುಕೃತಿಗಳೆನಿಸಿವೆ.

*ಗಂಗಾಧರಯ್ಯನವರು (ಗಂಗಪ್ಪ) ವಕೀಲರೂ, ಗಾಯಕರೂ ಆಗಿದ್ದರು. ಕೊಳಲು ಮಹಾಲಿಂಗಂರವರ ಶಿಷ್ಯರಾದ ಇವರ ಪುತ್ರ ಬಿ.ಜಿ ಶ್ರೀನಿವಾಸರವರು ಖ್ಯಾತ ಕೊಳಲುವಾದಕರು.

*ಗಾಯಕ, ಗಾನಕಲಾಭೂಷಣ ಆರ್.ಕೆ.  ಪದ್ಮನಾಭ– ರುದ್ರಪಟ್ಣದಲ್ಲಿ ಪುರೋಹಿತರಾಗಿದ್ದ ಕೃಷ್ಣಪ್ಪನವರ ಪುತ್ರರಾದ ಇವರು ಹೆಸರಾಂತ ಸಂಗೀತ ಕಲಾವಿದರು. ಇವರು ಬೆಂಗಳೂರಿನ ಹೆಚ್.ವಿ. ಕೃಷ್ಣಮೂರ್ತಿಗಳಲ್ಲಿ ಶಿಕ್ಷಣ ಪಡೆದರು. ಇವರು ತಮ್ಮ ಶಾರದಾಕಲಾಕೇಂದ್ರದಲ್ಲಿ ಸಂಗೀತ ತರಗತಿಗಳನ್ನು ನಡೆಸುತ್ತಾರೆ. ಯುವಕಲಾವಿದರಿಗಾಗಿ ಗುರುಕುಲ ಸಂಗೀತಶಿಬಿರಗಳನ್ನೂ ನಡೆಸುತ್ತಾರೆ. ಹರಿದಾಸರ ಕೃತಿಗಳ ಕುರಿತಾದ ಇವರ ಗಾನ-ವ್ಯಾಖ್ಯಾನ ಕಾರ್ಯಕ್ರಮಗಳು ಉದಯೋನ್ಮುಖ ಕಲಾವಿದರಿಗೆ ಉತ್ತಮ ಪಠ್ಯಸಾಮಗ್ರಿಯಾಗಿ ಒದಗುತ್ತಿವೆ. ಅಸಂಖ್ಯಾತ ಕೃತಿಗಳನ್ನು ರಚಿಸಿರುವ ಇವರು ವಾದಿರಾಜಸ್ವಾಮಿಗಳ ಅನೇಕ ಕೃತಿಗಳಿಗೆ ರಾಗಸಂಯೋಜನೆ ಮಾಡಿದ್ದಾರೆ.

ಸಂಕೇತಿ ಗಾನಮಾಧುರ್ಯಕ್ಕೆ ಸಂಬಂಧಿಸಿದ ವೃತ್ತಾಂತಗಳು

* ಆ ಕಾಲದಲ್ಲಿ ಮುಂಬೈ ವಿಭಾಗಕ್ಕೆ ಸೇರಿದ್ದ ಧಾರವಾಡದ ಕಲೆಕ್ಟರ್ ಆದ ಓರ್ವ ಬ್ರಿಟಿಷ್ ಅಧಿಕಾರಿಯು, ವಿ.ಎನ್.ನಾರಣಪ್ಪನವರ ಕಂಠಮಾಧುರ್ಯಕ್ಕೆ ಮನಸೋತರು. ಮುಂದೆ ಅವರು ರುದ್ರಪಟ್ಣಕ್ಕೆ ಹೋದಾಗ, ಅಕ್ಷರಶಃ ನಾರಣಪ್ಪನವರನ್ನು ಧಾರವಾಡಕ್ಕೆ ಎಳೆದುಕೊಂಡೇಹೋಗಿ, ಅಲ್ಲಿ ಮನಸ್ಸಿಗೆ ತೃಪ್ತಿಯಾಗುವಷ್ಟು ಅವರ ಸಂಗೀತವನ್ನು ಆಸ್ವಾದಿಸಿದರು. 

* ಮೈಸೂರು ಮಹಾರಾಜರಾದ ಚಾಮರಾಜ ಒಡೆಯರ್ರು ಒಮ್ಮೆ ರಾಮನಾಥಪುರ ದೇವಸ್ಥಾನಕ್ಕೆ ಹೊಂದಿಕೊಂಡಿದ್ದ ‘ವಹ್ನಿಪುಷ್ಕರಿಣಿ’ಯತ್ತ ತೆರಳಿದಾಗ, ಅಲ್ಲೇ ಪಕ್ಕದ ಅಡಕೆತೋಟದಿಂದ ಆಹ್ಲಾದಕಾರಿಯಾದ ಸಂಗೀತ ಕೇಳಿಬಂತು. ಅದೇನೆಂದರೆ, ತಮ್ಮ ಅಡಕೆತೋಟದಲ್ಲಿ ಕೃಷಿ ಮಾಡುತ್ತಲೇ, ತೊಟ್ಟಿ ತಮ್ಮಪ್ಪನವರು ತಮ್ಮ ಶಿಷ್ಯರಿಗೆ ಸಂಗೀತಪಾಠವನ್ನು ಕಲಿಸುತ್ತಿದ್ದರು. ಮಹಾರಾಜರು ಆ ಗಾಯಕರನ್ನು ನೋಡಬಯಸಿದಾಗ, ಅವರು ಹೋಗಲಿಲ್ಲ. ಬದಲಾಗಿ ಮಹಾರಾಜರನ್ನೇ ತಮ್ಮ ಅಡಕೆ ತೋಟಕ್ಕೆ  ಆಹ್ವಾನಿಸಿದರು. ಮಹಾರಾಜರೂ ಅದಕ್ಕೊಪ್ಪಿದರು. ದೊರೆಗಳಿಗೆ ಅಡಕೆಪಟ್ಟೆಯ ಆಸನವನ್ನು ನೀಡಿ ಕುಳ್ಳಿರಿಸಿ, ಒಂದು ಘಂಟೆಯ ಕಾಲ ಸುಶ್ರಾವ್ಯವಾಗಿ ಹಾಡಿದರು. ಸುಪ್ರಸನ್ನರಾದ ಮಹಾರಾಜರು ಅವರಿಗೆ ಮೈಸೂರು ಆಸ್ಥಾನದಲ್ಲಿ ಸ್ಥಾನವನ್ನು ನೀಡಲು ಮುಂದಾದರು. ಆದರೆ ತನಗೆ ‘ಅಡಕೆಮರಗಳಿಗಾಗಿಯೂ ತಮ್ಮ ಶಿಷ್ಯರಿಗಾಗಿಯೂ ಹಾಡುವುದರಲ್ಲೇ ಹೆಚ್ಚು ಸಂತೋಷ’ ಎನ್ನುತ್ತ ಆ ಪುರಸ್ಕಾರವನ್ನು ನಯವಾಗಿಯೇ ನಿರಾಕರಿಸಿದರು.

*ಆರು ಅಡಿ ಎತ್ತರದ ಶತಾವಧಾನಿ ವೀಣಾ ವೆಂಕಟರಾಮಯ್ಯನವರು ‘ಭೂರಿಭೋಜನವಿದ್ದರೆ ಸಾಕು, ತಮ್ಮೊಳಗಿನ ಪ್ರತಿಭೆ ಚೆನ್ನಾಗಿ ಹೊಮ್ಮುತ್ತದೆ’ ಎಂದೇ ನಂಬಿದ್ದರು. ಅವರು ಊಟಕ್ಕೆ ಕುಳಿತರೆ ಒಮ್ಮೆಲೆ ಒಂದು ಸೇರು ಅನ್ನವನ್ನು ಮುಗಿಸಿಬಿಡುತ್ತಿದ್ದರು! ಸಂಕೇತಿಗಳನ್ನು ಭೋಜನಪ್ರಿಯರೆಂದೇ ಗುರುತಿಸುವುದೂ ಉಂಟು. ಮನೆಯಲ್ಲಿ ಮಾಡಿದ ತುಪ್ಪವನ್ನು ಸುರಿದುಕೊಂಡು ನಿಧಾನವಾಗಿ ಭೋಜನವನ್ನು ಆಸ್ವಾದಿಸುವುದು ಅವರಿಗೆ ಬಹಳ ಪ್ರಿಯ! 

ವೆಂಕಟರಾಮಯ್ಯನವರು ಪ್ರಖ್ಯಾತರಾದ ವೀಣಾ ಧನಮ್ಮಾಳ್ ರವರಲ್ಲಿ ಸಂಗೀತ ಶಿಕ್ಷಣವನ್ನು ಪಡೆಯುತ್ತಿದ್ದಾಗ, ಒಂದೊಂದು ತರಗತಿಗೂ ಒಂದು ಚಿನ್ನದ ನಾಣ್ಯವನ್ನು ಅರ್ಪಿಸಬೇಕಾಯಿತು! ಹೀಗೆಂದು ಮೈಸೂರಿನಲ್ಲಿರುವ ಸಮುದಾಯ ಅಧ್ಯಯನ ಕೇಂದ್ರದ Sanketi Studies ಎಂಬ 20 ಕಂತುಗಳ ಗ್ರಂಥಮಾಲಿಕೆಯಲ್ಲಿ ಉಲ್ಲೇಖವಾಗಿದೆ.

* ಅದ್ಭುತ ವಾಗ್ಗೇಯಕಾರರಾದ ಸಿ.ರಂಗಯ್ಯನವರು, ಬಾಲ್ಯದಲ್ಲಿ ಚಿಲ್ಕುಂದ ಗ್ರಾಮದಲ್ಲಿದ್ದಾಗ, ಹೊಲಗದ್ದೆಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಅವರ ತಂದೆಯು ತುಂಬ ಬೈದರು. ಮುನಿಸಿಕೊಂಡು ಮನೆ ಬಿಟ್ಟು ಓಡಿಹೋದ ಇವರು ಮೈಸೂರಿನಲ್ಲಿ ಭಿಕ್ಷಾನ್ನದಲ್ಲಿ ಜೀವಿಸಿದರು. ಆ ಬಳಿಕ ಸದ್ವಿದ್ಯಾಶಾಲೆಗೆ ಸೇರಿಕೊಂಡು ವಿದ್ಯಾವಂತರಾದರು.ಮುಂದೆ ಇವರು ತಮ್ಮ 500 ಕೃತಿಗಳ ಪುಸ್ತಕವನ್ನು ಪ್ರಕಟಿಸಬೇಕೆಂದು ಕೋರುತ್ತ ಕನ್ನಡ ಸಂಸ್ಕೃತಿ ಇಲಾಖೆಯವರನ್ನು ಸಮೀಪಿಸಿದಾಗ, ಅಲ್ಲಿನ ಅಧಿಕಾರಿಯೊಬ್ಬರು ‘ಈ ಸತ್ವಹೀನವಾದದ್ದನ್ನು ಪ್ರಕಟಿಸೆಂದು ನಿಮಗಾರು ಹೇಳಿದರು?” ಎಂದು ಮೂದಲಿಸಿದರು. ಮುಂದೆ ರಂಗಯ್ಯನವರು ದಿವಂಗತರಾದ ಮೇಲೆ, ಅವರ ಶಿಷ್ಯರು 1984ರಲ್ಲಿ ಅದನ್ನು ಪ್ರಕಟಿಸಿದರು.

The original in English – ‘Voice of a Generation – RK Srikantan’ can be sourced from the RK Srikantan Trust – Call Kumar Srikantan -9845376091.   

‍ಲೇಖಕರು Admin

April 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: