ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶ್ರೀಕಂಠನ್ ಹಂಬಲಿಸುವ ನಾದಸೌಖ್ಯ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

17

ಶೇಷಾದ್ರಿಪುರಂನ ಪುಟ್ಟರಂಗಣ್ಣ ಲೇಔಟ್‌ನಲ್ಲಿರುವಶ್ರೀಕಂಠನ್ ರವರ ಮನೆ ಅವರಂತೆಯೇ ಬಹು ಸರಳ. ಆ ಮನೆಯೊಳಗಿನ ಜನ, ಅವರ ಜೀವನಶೈಲಿ ಮತ್ತು ಪಾರಿವಾರಿಕ ಮಾತುಕತೆಗಳೆಲ್ಲ ಅವರ ಆಡಂಬರರಾಹಿತ್ಯ ಮತ್ತು ವಿನಯವನ್ನು ಪ್ರತಿಫಲಿಸುತ್ತವೆ. ಶ್ರೀಕಂಠನ್‌ರವರಿಗೆ ಸಂದಿರುವ ಒಟ್ಟು ಪ್ರಶಸ್ತಿಗಳು ಮತ್ತು ಬಿರುದುಗಳ ಸಂಖ್ಯೆ ಸುಮಾರು ೧೫೦. ಅವುಗಳಲ್ಲಿ ಅತಿ ಮುಖ್ಯವಾಗಿರುವ ೫೦ ಸನ್ಮಾನ ಪತ್ರಗಳಿಗೆ ಕಟ್ಟುಹಾಕಿಸಿ ಮನೆಯ ಗೋಡೆಗಳ ಮೇಲೆ ತೂಗುಹಾಕಲಾಗಿದೆ. ಬದಿಯ ಗೂಡುಗಳ ಮೂಲೆಮೂಲೆಗಳಲ್ಲಿತುರುಕಿಟ್ಟ ಪ್ರಶಸ್ತಿಫಲಕಗಳ ನಡುವೆ ಸಂಗೀತ ಮತ್ತು ತತ್ವಶಾಸ್ತ್ರದ ಕುರಿತ ಸುಮಾರು ೧೨೦೦ ಪುಸ್ತಕಗಳು ಎಡೆಬಿಡದೆ ಬಿಗಿಯಾಗಿ ಜೋಡಿಸಲ್ಪಟ್ಟಿವೆ.

ಸಂಗೀತದ ಸಂತ-ವಾಗ್ಗೇಯಕಾರರ ಕೃತಿಗಳ ಸಾಹಿತ್ಯವುಳ್ಳ, ಬಗೆಬಗೆಯ ಗಾತ್ರ- ಆಕಾರಗಳ ಬಹುಸಂಖ್ಯೆಯ ಪುಸ್ತಕಗಳು ವರ್ಗೀಕರಿಸಲ್ಪಟ್ಟಿರುವಂತೆ, ಸಂಗೀತದ ಟಿಪ್ಪಣಿಗಳಿರುವ ಅಸಂಖ್ಯ ಕಡತಗಳು ಒಂದರ ಮೇಲೊಂದು ಪೇರಿಸಲ್ಪಟ್ಟಿವೆ…. ೧೦ ಅಡಿ ಘಿ೧೦ ಅಡಿ ವಿಸ್ತೀರ್ಣವುಳ್ಳ, ಜಾಲರಿ ಅಳವಡಿಸಿರುವ ಎರಡು ಕಿಟಕಿಗಳು ಮಾತ್ರ ಇರುವ ಕೋಣೆಯೊಂದರಲ್ಲಿ ನೀವು ಇವೆಲ್ಲವನ್ನೂ ಕಲ್ಪಿಸಿಕೊಳ್ಳಬಲ್ಲಿರಾದರೆ, ಅದು ಶ್ರೀಕಂಠನ್ ರವರ ಪ್ರೀತಿಯ ಕೋಣೆ. ಅಲ್ಲೇ ಅವರು ಪ್ರತಿದಿನ ಸಂಗೀತ ತರಗತಿಗಳನ್ನು ನಡೆಸುವುದು!

ಶ್ರೀಕಂಠನ್ ಬೀಟೆಮರದ ತಮ್ಮ ಕುರ್ಚಿಯಲ್ಲಿ ಕುಳಿತು ವಿಶ್ರಮಿಸಿಕೊಳ್ಳಲು ಆಗಾಗ ಈ ಕೋಣೆಗೆ ಬರುತ್ತಾರೆ ಮತ್ತು ಅತಿಥಿಗಳನ್ನು ಕುಳ್ಳಿರಿಸಲು ಬದಿಗಳಲ್ಲಿ ಎರಡು ಸೋಫಾಗಳನ್ನು ಹಾಕಲಾಗಿದೆ. ನಡುಮಧ್ಯಾಹ್ನಗಳಲ್ಲಿ ಮತ್ತು ಸಂಜೆ ಮಾಗಿದ ಹೊತ್ತಿನಲ್ಲಿ ಶ್ರೀಕಂಠನ್ ತಮ್ಮ ಪ್ರೀತಿಯ ಈ ಕುರ್ಚಿಯ ಮೇಲೆ ಕುಳಿತಿರುವುದನ್ನು ಕಾಣಬಹುದು! ಮನಬಿಚ್ಚಿ ಹಗುರಗೊಳ್ಳಲು ಅಥವಾ ಆಳವಾದ ಸಂಗೀತ ಚಿಂತನೆಯಲ್ಲಿ ಕರಗಿಹೋಗಲು ಈ ಗಾನತಪಸ್ವಿ ಆಗಾಗ ಚಪ್ಪಾಳೆ ತಟ್ಟುತ್ತ ಶೂನ್ಯದಲ್ಲಿ ಮಗ್ನರಾಗಿ, ಧ್ಯಾನಸ್ಥರಾಗಿರುವುದನ್ನು ನೋಡಲು ಆನಂದವಾಗುತ್ತದೆ.

ಮುಖದ ತುಂಬ ನಗೆಯರಳಿಸಿಕೊಂಡು ಕುಳಿತಿರುವ ಅವರನ್ನು ನಾನು ಕೇಳುತ್ತೇನೆ: “ನಿಮಗೆ ನಿಮ್ಮ ಕೋಣೆ ಬಹಳ ಇಷ್ಟವೇ ಸರ್? ಇಲ್ಲಿ ಸುಮ್ಮನೆ ಕುಳಿತು, ನಿಮ್ಮ ಪ್ರಶಸ್ತಿಗಳನ್ನೆಲ್ಲ ನೋಡುತ್ತ, ನೆನಪಿನ ದಾರಿಗೆ ಜಾರುವುದು ಸಂತಸದ ಅನುಭವವಾಗಿರಬೇಕು, ಅಲ್ಲವೆ?” ಎಂದು. ಅವರೆಂದರು: “ನಾನು ಚಿಕ್ಕವನಾಗಿದ್ದಾಗ ನನ್ನ ಅಭ್ಯಾಸಕ್ಕಾಗಿ ಇನ್ನೊಂದು ಕೋಣೆಯನ್ನು ಉಪಯೋಗಿಸುತ್ತಿದ್ದೆ. ಆದರೆ ಈಗೆರಡು ದಶಕಗಳಿಂದ ನನಗೆ ಈ ಸ್ಥಳ ಇಷ್ಟ….. ಇದು ನನ್ನನ್ನು ಭಾವುಕನನ್ನಾಗಿ ಮಾಡುತ್ತದೆ. ಈ ಎಲ್ಲ ಪ್ರಶಸ್ತಿಗಳನ್ನು ನೋಡಿದಾಗ ತೆರೆದುಕೊಳ್ಳುವ ಆ ಒಳ್ಳೆಯ ದಿನಗಳ ನೆನಪು ಅದ್ಭುತವಾಗಿರುತ್ತದೆ. ಈ ಕೋಣೆ ನನಗೆ ಬಹಳ ಪ್ರಿಯವಾದದ್ದು. ನಾನು ‘ವಾಣಿಜ್ಯ’ ಧೋರಣೆಯ ಮನುಷ್ಯನಾಗಲಿಲ್ಲ ಎನ್ನುವ ಬಗ್ಗೆ ನನಗೆ ಸಂತೋಷ ಇದೆ, ತೃಪ್ತಿ ಇದೆ. ಗೋಡೆಯ ಮೇಲೆ ತೂಗು ಹಾಕಿರುವ ಪ್ರತಿಯೊಂದು ಪ್ರಶಸ್ತಿಯೂ ಅರ್ಥಗರ್ಭಿತವಾದ ಯಾವುದನ್ನೋ ಪ್ರಚಾರ ಮಾಡಲು ನಾನು ನಿರ್ವಹಿಸಿದ ಒಂದು ನಿರ್ದಿಷ್ಟವಾದ ಕರ್ತವ್ಯವನ್ನು ಜ್ಞಾಪಕಕ್ಕೆ ತರುತ್ತದೆ.

ನನ್ನ ಇಡೀ ಮನೆಯಲ್ಲಿ ಇವುಗಳೆಲ್ಲ ತುಂಬಿವೆ ಮತ್ತು ಈ ಕೋಣೆಯಲ್ಲಿ ಇವು ಹೆಚ್ಚಾಗಿವೆ. ಮುಂದೆ ಇದನ್ನು ಈ ಕೋಣೆಯನ್ನು ‘ಜ್ಞಾಪಕ ಸಂಗ್ರಹಶಾಲೆ’ ಯನ್ನಾಗಿ ಪರಿವರ್ತಿಸುವ ಅಥವಾ ಈ ಮನೆಯ ಆವರಣದಲ್ಲಿ ಔಪಚಾರಿಕವಾಗಿ ‘ಶ್ರೀಕಂಠನ್ ಸಂಗೀತ ಶಾಲೆ’ಯನ್ನು ಪ್ರಾರಂಭಿಸುವ ಆಲೋಚನೆ ನನ್ನ ಮಕ್ಕಳಿಗಿದೆ. ತಾವು ಬಯಸಿದ್ದನ್ನು ಕಾರ್ಯಗತಗೊಳಿಸುವುದು ಅವರಿಗೇ ಬಿಟ್ಟದ್ದು”.

ಶ್ರೀಕಂಠನ್ ತಮ್ಮ ಮಾತನ್ನು ಮುಂದುವರಿಸುತ್ತ, ಪ್ರಸಿದ್ಧ ಗಾಯಕರಾಗಿದ್ದು, ಇಂದಿಗೂ ತಮ್ಮ ಬಳಿ ಸಂಗೀತ ಕಲಿಯಲು ಬರುವ ಶಿಷ್ಯರಿಗೆ ಈಗಲೂ ಈ ಕೋಣೆಯಲ್ಲೇ ಪಾಠ ನಡೆಯುತ್ತದೆ ಎಂದು ಹೇಳುತ್ತಾರೆ: “ಎಂ.ಎಸ್.ಶೀಲಾ ನನ್ನ ಬಳಿ ಪಾಠ ಕಲಿಯಲು ಪ್ರಾರಂಭಿಸಿ ಸುಮಾರು ನಲವತ್ತು ವರ್ಷಗಳಾದವು. ಈಗಲೂ ಅವರು ತರಗತಿಗಳಿಗೆ ಬರುತ್ತಾರೆ! ಇಸ್ರೋದ ಛೇರ್‌ಮನ್ ಆಗಿರುವ ರಾಧಾಕೃಷ್ಣನ್, ಇಲ್ಲಿ ಸುಖವಾಗಿ ಕುಳಿತು ನನ್ನ ಮುಂದೆ ಹಾಡುತ್ತಾರೆ” ಎಂದು.

ಶ್ರೀಕಂಠನ್ ದೊಡ್ಡ ವಾಸ್ತವವಾದಿಗಳು. ಅವರೆನ್ನುತ್ತಾರೆ, “ನಾದದ ಈ ಪುಟ್ಟ ಪ್ರಪಂಚ, ನನ್ನ ಪಾಲಿಗೆ ಸ್ವರ್ಣನಿರ್ಮಿತವಾದ ಅರಮನೆಯಿದ್ದಂತೆ. ವೈಭವೋಪೇತವಾದ ಜೀವನದಲ್ಲಿ ನನಗೆ ಎಂದಿಗೂ ಆಸಕ್ತಿ ಇರಲಿಲ್ಲ. ಹಾಗೆಯೇ ಹೆಸರು, ಕೀರ್ತಿ ಮತ್ತು ಸಂಪತ್ತುಗಳಲ್ಲಿಯೂ ಕೂಡ. ಇವೆಲ್ಲ ನನ್ನನ್ನೆಂದಿಗೂ ಆಕರ್ಷಿಸಲಿಲ್ಲ. ನನಗೆ ನಿಜವಾದ ವಿಶ್ವಾಸವಿದ್ದದ್ದು, ನಮ್ಮ ಶ್ರೀಮಂತ ಪರಂಪರೆ, ಸಂಗೀತ, ಇತಿಹಾಸ ಮತ್ತು ಸಂಸ್ಕೃತಿಗಳೊಡನೆ ನನ್ನನ್ನು ನಾನು ಗುರುತಿಸಿಕೊಳ್ಳುವ ಜೀವನದ ಉತ್ಕೃಷ್ಟತೆಯಲ್ಲಿ ಮಾತ್ರವೇ. ಸಂಗೀತ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಶ. ಗಾಂಧರ್ವ ವೇದದಲ್ಲಿ ನಿರೂಪಿಸಲ್ಪಟ್ಟಿರುವ ಮತ್ತು ಅಪೌರುಷೇಯವಾದ ಮೂಲವನ್ನುಳ್ಳ ಇದು ಕನಿಷ್ಠ ಪಕ್ಷ ೩೦೦೦ ವರ್ಷಗಳ ಇತಿಹಾಸವನ್ನು ಹೊಂದಿದೆ. ನಮ್ಮ ಪರಂಪರೆ ಸುದೀರ್ಘಕಾಲ ವಿಕಾಸಗೊಂಡ ನಂತರವೇ ಪರಿಪಕ್ವತೆವಾಗಿ ವೈವಿಧ್ಯತೆಯನ್ನು ಅಭಿವ್ಯಕ್ತಿಗೊಳಿಸಿದೆ. ನಾದಬ್ರಹ್ಮದ, ಅರ್ಥಾತ್ ‘ಭಗವಂತನು ಪ್ರಣವ ನಾದದ ಮೂರ್ತರೂಪ’ ಎನ್ನುವ ಪರಿಕಲ್ಪನೆ, ವಿಶ್ವದ ಚಿಂತನೆಯ ಧಾರೆಗೆ ಭಾರತದ ಕೊಡುಗೆ. ಈ ವಿಷಯವನ್ನು ಭಾರತೀಯರು ಅಭಿಮಾನದಿಂದ ಅರಿತುಕೊಳ್ಳುವುದು ಒಳ್ಳೆಯದು” ಎಂದು.

ದಿನಗಳು ಸರಿದಂತೆ ಸಂಗೀತಲೋಕದಲ್ಲಿ ಏನು ಸಂಭವಿಸಬಹುದು ಎನಿಸುತ್ತದೆ ಅವರಿಗೆ? ಶ್ರೀಕಂಠನ್ ನುಡಿಯುತ್ತಾರೆ, “ಇಂದು ಕರ್ನಾಟಕ ಸಂಗೀತ ಸಂಕ್ರಮಣ ಪರ್ವದಲ್ಲಿದೆ. ಸಂಪ್ರದಾಯ ಮತ್ತು ಸಂಸ್ಕೃತಿಗಳಿ೦ದ ದೂರ ಸರಿಯುವ ಪ್ರಕ್ರಿಯೆಯನ್ನು ಕ್ರಾಂತಿಕಾರಕ ಮತ್ತು ಆವಿಷ್ಕಾರಕ ಸಂಚಲನ ಎಂದು ಭಾವಿಸಲಾಗುತ್ತಿದೆ. ಆದರೆ, ‘ಎಲ್ಲ ಸಂಸ್ಕೃತಿಗಳೂ ನನ್ನ ದೇಶದೊಳಗೆ ತಡೆಯಿಲ್ಲದೆ ಹರಿದು ಬರಲಿ. ಆದರೆ ಅವು ನನ್ನ ಸಂಸ್ಕೃತಿಯನ್ನು ಬುಡಮೇಲು ಮಾಡುವಷ್ಟು ರಭಸವಾಗದಿರಲಿ” ಎಂಬ ಗಾಂಧೀಜಿಯವರ ಮಾತನ್ನು ನೆನಪಿಟ್ಟುಕೊಳ್ಳಿ.

ಸಂತ ತ್ಯಾಗರಾಜರು ತಮ್ಮ ಕಾಪಿ ರಾಗದ ‘ಇಂತಸೌಖ್ಯಮನಿನೇ ಚೆಪ್ಪಜಾಲ, ಎಂತೋ ಏಮೋ ಎವ್ವರಿಕಿ ದೆಲುಸುನೋ’ ಕೃತಿಯಲ್ಲಿ ವಿವರಿಸಿರುವಂತೆ ಸ್ವರ-ರಾಗ-ಲಯದ ಅಮೃತದೊಡನೆ ರಾಮನಾಮದ ಮಾಧುರ್ಯವನ್ನು ಭಗವಾನ್ ಶಂಕರ ಮಾತ್ರ ಅನುಭವಿಸಲು ಸಾಧ್ಯ. ಆದ್ದರಿಂದ, ಕರ್ನಾಟಕ ಶೈಲಿಯಲ್ಲಿ ಹುದುಗಿರುವ ಇಂಥ ನಾದಸೌಖ್ಯವನ್ನು ಸಂರಕ್ಷಿಸಿಕೊಳ್ಳುವ ಕೆಲಸ ಸಂಗೀತಗಾರರ, ವಾಗ್ಗೇಯಕಾರರ, ಅಧಿಕಾರಿಗಳ, ಶ್ರೋತೃಗಳ ಮತ್ತು ವಿಮರ್ಶಕರ ಪಾಲಿಗೆ ಬಿಟ್ಟದ್ದು” ಎಂದು.

Photos by : MOHAN SRENIVASAN

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: