
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.
ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.
ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.
ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…
10
ವಿದ್ಯಾರ್ಥಿಗಳ ತಂಡಗಳಿಗೆ ಪಾಠ ಹೇಳುವುದರಲ್ಲಿ ಶ್ರೀಕಂಠನ್ ನಿರತರಾಗಿದ್ದರೂ ಕೂಡ, ಅವರ ಶ್ರದ್ಧೆ ನಿಜವಾಗಿಯೂ ಇರುವುದು ಕಾಲಸಿದ್ಧವಾಗಿರುವ ‘ಒಬ್ಬ ಗುರು-ಒಬ್ಬ ಶಿಷ್ಯ’ ವ್ಯವಸ್ಥೆಯಲ್ಲಿ. ಅವರೆನ್ನುತ್ತಾರೆ- “ಒಂದು ಶೈಲಿಯನ್ನು ಅನುಸರಿಸಲು ಉತ್ಸುಕರಾಗಿರುವ ವಿದ್ಯಾರ್ಥಿಗಳಿಗೆ ನಮ್ಮ ಪರಂಪರೆಯನ್ನು ಹಸ್ತಾಂತರಿಸಲು ಇದು ಹೆಚ್ಚು ಅಧಿಕೃತವಾಗಿರುವ ಮಾರ್ಗವಾಗಿದೆ” ಎಂದು.
ಇಲ್ಲಿಯವೆರೆಗೆ, ಈ ಏಳು ದಶಕಗಳಲ್ಲಿ ಶ್ರೀಕಂಠನ್ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. ಇವರಲ್ಲಿ ಹತ್ತನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ಕಛೇರಿ ನೀಡುವ ಸ್ತರವನ್ನು ತಲುಪಿದ್ದರೆ, ಐದನೇ ಒಂದು ಭಾಗದಷ್ಟು ಜನ ಇಂದಿನ ಸಂಗೀತ ವಲಯದಲ್ಲಿ ಸಕ್ರಿಯ ಕಲಾವಿದರಾಗಿದ್ದಾರೆ.
ಕಾಳಿದಾಸನ ಗುರುಪರ ಉಕ್ತಿಯನ್ನು ಆಧರಿಸಿ ಟಿ.ಎಸ್.ಸತ್ಯವತಿ ತಮ್ಮ ಗುರು ಶ್ರೀಕಂಠನ್ ರವರ ಅತ್ಯುತ್ಕೃಷ್ಟತೆಯನ್ನು ಬಣ್ಣಿಸುತ್ತಾರೆ: “ತನ್ನ ಕಲೆಯನ್ನು ಪ್ರದರ್ಶಿಸುವುದರಲ್ಲಿ ಒಬ್ಬ ವ್ಯಕ್ತಿ ಶ್ರೇಷ್ಠನಾಗಿರಬಹುದು. ತನ್ನ ಕಲೆಯನ್ನು ಸಂವಹನ ಮಾಡುವಲ್ಲಿ ಇನ್ನೊಬ್ಬನಿಗೆ ವಿಶೇಷ ಸಾಮರ್ಥ್ಯ ಇರಬಹುದು. ಆದರೆ ಈ ಎರಡೂ ಬಗೆಯ ಉತ್ತಮಿಕೆ ಇರುವವನು ಗುರುಸಮುದಾಯದ ಅಗ್ರಭಾಗದಲ್ಲಿ ಪ್ರತಿಷ್ಠಿತನಾಗಲು ಯೋಗ್ಯನೆನಿಸುತ್ತಾನೆ” ಎಂದು.
ತಾವು ಯಾವ ಸ್ಥಳದಲ್ಲೇ ಹಾಡಲಿ, ತಮ್ಮ ಸಾಮರ್ಥ್ಯದ ಪರಾಕಾಷ್ಠೆಯನ್ನು ಪೂರ್ಣವಾಗಿ ಬಳಸಿಕೊಂಡು ಹಾಡುವುದು ಶ್ರೀಕಂಠನ್ ರವರ ಪದ್ಧತಿ ಎನ್ನುವುದು ಜನಜನಿತವಾದಂತೆ, ಅಧ್ಯಾಪನದಲ್ಲಿ ಶ್ರೀಕಂಠನ್ ರವರು ತೋರುವ ಪ್ರಾಮಾಣಿಕತೆಯೂ ಮ್ನನಣೆ ಗಳಿಸಿದೆ. “ಅವರು ಶಿಸ್ತನ್ನು ಪರಿಪೂರ್ಣವಾಗಿ ಪಾಲಿಸುವ ಶಿಕ್ಷಕರು ಎನ್ನುವ ಕೀರ್ತಿ, ನಿಯಮಪಾಲನೆಯ ಕುರಿತು ಅವರಿಗಿರುವ ಆದರವನ್ನು ಬಿಂಬಿಸುತ್ತದೆ, ಅಷ್ಟೆ. ಇದು ಗುರಿ ಸಾಧಿಸುವ ನಿಟ್ಟಿನಲ್ಲಿ ಅಂತಸ್ಸಾಕ್ಷಿಪೂರ್ವಕವಾಗಿ ಪರಿಶ್ರಮಿಸುವಂತೆ ಸಂಗೀತದಲ್ಲಿ ಆಳವಾದ ಆಸಕ್ತಿಯುಳ್ಳವರಿಗೆ ನೀಡಲಾಗುವ ಕರೆ” ಎನ್ನುತ್ತಾರೆ ಅವರ ಹಿರಿಯ ಶಿಷ್ಯೆ ಎಂ.ಎಸ್.ಶೀಲಾ. ತಮ್ಮ ಶಿಷ್ಯಸಮುದಾಯವನ್ನು ಶೋಧಿಸಿ, ಸತ್ವಶಾಲಿಗಳನ್ನು ಮಾತ್ರ ಬಳಿ ಉಳಿಸಿಕೊಳ್ಳುವಲ್ಲಿ ಬಹುಶಃ ಈ ಧೋರಣೆ ಶ್ರೀಕಂಠನ್ ರವರಿಗೆ ಸಹಕಾರಿಯಾಗಿದೆ.

“ನನ್ನ ಹಾಗೂ ವಿದ್ಯಾರ್ಥಿಗಳ ಸಮಯ ಅಮೂಲ್ಯವಾದುದು. ‘ಸುಮ್ಮನೆ ಕಾಲಕ್ಷೇಪಕ್ಕಾಗಿ ಸಂಗೀತ ಕಲಿಯಲು ಬರುತ್ತೇವೆ’ ಎಂದು ಆಲಸ್ಯದಿಂದ ಹೇಳುವ ವಿದ್ಯಾರ್ಥಿಗಳು ನನಗೆಂದಿಗೂ ಇಷ್ಟವಾಗುವುದಿಲ್ಲ” ಎನ್ನುವ ಶ್ರೀಕಂಠನ್ ತಮ್ಮ ನಿಬಂಧನೆಗಳನ್ನು ಮತ್ತು ಆದರ್ಶಗಳನ್ನು ಎಂದಿಗೂ ಸಡಿಲಿಸಿಲ್ಲ, ಸಡಿಲಿಸುವುದೂ ಇಲ್ಲ.
ಶ್ರೀಕಂಠನ್ ರವರ ಕಟ್ಟುನಿಟ್ಟಾದ ತತ್ವಬದ್ಧತೆ ಮತ್ತು ನಿರ್ದಾಕ್ಷಿಣ್ಯದ ಮಾತುಗಳು ಅವರ ಬಳಿ ಸಾಲುಗಟ್ಟುವ ವಿದ್ಯಾರ್ಥಿಗಳಲ್ಲಿ ಅಳುಕು ಮೂಡಿಸಿವೆ. ಶ್ರೀಕಂಠನ್ ರವರ ನಂಬಿಕೆಗಳನ್ನು ಒಪ್ಪುವುದು ಮತ್ತು ಅವರಿಂದ ಸಂಗೀತ ಕಲಿಯುವುದು ವಿದ್ಯಾರ್ಥಿಗಳಿಗೆ ಬಿಟ್ಟ ವಿಷಯಗಳಾದರೂ, ಅವರು ಮಾತ್ರ ತಾವು ನಂಬಿದ ವಿಷಯಗಳ ಬಗ್ಗೆ ನಿಸ್ಸಂಕೋಚವಾಗಿ ಮಾತನಾಡುತ್ತಾರೆ. ಸಂಗೀತ ತ್ರಿಮೂರ್ತಿಗಳ ಕೃತಿಗಳ ಕುರಿತು ಶ್ರೀಕಂಠನ್ ನಡೆಸಿಕೊಟ್ಟ ಕಾರ್ಯಾಗಾರವೊಂದರಲ್ಲಿ, ಓರ್ವ ವ್ಯಕ್ತಿ ಆಧುನಿಕ ಕೃತಿಗಳ ಕುರಿತು ಅವರ ಅಭಿಪ್ರಾಯ ಏನೆಂದು ಕೇಳಿದರು. ಅದಕ್ಕೆ ಶ್ರೀಕಂಠನ್ ಉತ್ತರಿಸಿದ್ದು ಹೀಗೆ: “ನಾನು ನನ್ನ ವಿವರಣೆಯನ್ನು ರಾಗಗಳಿಂದ ಪ್ರಾರಂಭಿಸುತ್ತೇನೆ. ಅಪರೂಪದ ಆರೋಹಣ-ಅವರೋಹಣಗಳಿಗೆ ಕಛೇರಿಯಲ್ಲಿ ಸ್ಥಾನವಿದೆ – ಆದರೆ ಔಚಿತ್ಯಪೂರ್ಣ ಪ್ರಮಾಣದಲ್ಲಿ ಮಾತ್ರ. ಶಂಕರಾಭರಣದ ಶೈಲಿಯಲ್ಲಿ ಅಷ್ಟೇ ದೀರ್ಘವಾಗಿ ಬಿಂದುಮಾಲಿನಿಯನ್ನಾಗಲೀ, ಭೈರವಿಯಷ್ಟೇ ನಳಿನಕಾಂತಿಯನ್ನಾಗಲೀ ವಿಸ್ತಾರಗೊಳಿಸುವುದನ್ನು ನಾನು ಒಪ್ಪುವುದಿಲ್ಲ. ಇತಿಹಾಸವನ್ನೊಮ್ಮೆ ನೋಡಿ. ಸಂತ ತ್ಯಾಗರಾಜರೂ ಕೂಡ ನಳಿನಕಾಂತಿಯಲ್ಲಿ ಒಂದು ಕೃತಿಯನ್ನು ಮಾತ್ರ ರಚಿಸಿದ್ದಾರೆ”.
ಆದರೆ ಶ್ರೀಕಂಠನ್, ತಾವು ಆಧುನಿಕ ಕೃತಿಗಳನ್ನು ದೂರ ಮಾಡುತ್ತೇವೆ ಎಂದು ಜನ ನಂಬುವುದೇಕೆ ಎಂದು ಅಚ್ಚರಿ ಪಡುತ್ತಾರೆ. “ಮೊಟ್ಟ ಮೊದಲಿಗೆ, ಆಧುನಿಕ ವಾಗ್ಗೇಯಕಾರರ ಸಂಬ೦ಧವಾಗಿ ನನಗೆನಿಸುವುದು ಹೀಗೆ – ಪಾಪನಾಶಂ ಶಿವಂ, ಮೈಸೂರು ವಾಸುದೇವಾಚಾರ್ಯರು ಮತ್ತು ಮುತ್ತಯ್ಯ ಭಾಗವತರನ್ನು ಒಳಗೊಂಡಿದ್ದ ನಿಜವಾದ ವಾಗ್ಗೇಯಕಾರರ ಅಂತಿಮ ಪಂಕ್ತಿ, ಅವರೆಲ್ಲರ ನಿಧನದೊಂದಿಗೆ ಕಣ್ಮರೆಯಾಗಿದೆ. ಯಾವುದೇ ಕೃತಿ, ಆಧುನಿಕವಾದದೇ ಆಗಲಿ, ಪುರಾತನವಾದುದೇ ಆಗಲಿ, ಅರ್ಥಪೂರ್ಣವಾಗಿರಬೇಕು ಮತ್ತು ಶಾಸ್ತçದ ಕೆಲವು ನಿಬಂಧನೆಗಳಿಗೆ ಅನುಗುಣವಾಗಿರಬೇಕು. ಒಳ್ಳೆಯ ಪಾಠಾಂತರವಿರುವ ಅಂಥ ನೂತನ ಕೃತಿಗಳನ್ನು ಇಂದು ಅನೇಕ ಕಲಾವಿದರು ಹಾಡುತ್ತಿದ್ದಾರೆ ಮತ್ತು ನಾನು ಖಂಡಿತ ಇದಕ್ಕೆ ವಿರೋಧಿಯಲ್ಲ.
ಸಾಹಿತ್ಯ ಅರ್ಥಗರ್ಭಿತವಾಗಿದ್ದು, ಸಂಗತಿಗಳು ಸೋಪಾನಕ್ರಮದಲ್ಲಿ ಅದರ ಮರ್ಮವನ್ನು ವಿವರಿಸುವಂತಿದ್ದು, ಸಾಂಪ್ರದಾಯಿಕ ಪ್ರಸ್ತುತಿಯ ಚೌಕಟ್ಟಿನಲ್ಲಿ ಮನೋಧರ್ಮದ ಇತರ ಆಯಾಮಗಳನ್ನು ಒಳಗೊಂಡಿದ್ದರೆ, ಯಾರು ಏಕೆ ವಿರೋಧಿಸುತ್ತಾರೆ? ನಾನು ಕೃತಿರಚನೆಯ ವಿರೋಧಿಯಲ್ಲ. ಆದರೆ ಬೆಳಕಿಗೆ ಬರಬೇಕಾಗಿರುವ ಸಾವಿರಾರು ಸುವಿನ್ಯಸ್ತ ಕೃತಿಗಳು ಇಂದಿಗೂ ಲಭ್ಯವಿರುವಾಗ, ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ನಾವು ಬಳಸಿಕೊಳ್ಳಬಾರದೇಕೆ? ಇಂದು ಪ್ರಚಾರಕ್ಕೆ ಬಂದಿರುವ ಅಸಂಖ್ಯ ತಿಲ್ಲಾನಗಳು ವಾದ್ಯಸಂಗೀತವನ್ನು ದೃಷ್ಟಿಯಲ್ಲಿರಿಸಿಕೊಂಡು ರಚಿಸಲ್ಪಟ್ಟಿರುವಂಥವು ಎನಿಸುತ್ತದೆ. ಕನ್ನಡ ಭಾಷೆಯಲ್ಲಿ ಮತ್ತು ಜನಪ್ರಿಯ ರಾಗಗಳಲ್ಲಿ ಅದಾಗಲೇ ರಚಿಸಲ್ಪಟ್ಟಿರುವ ತಿಲ್ಲಾನಗಳನ್ನು ಪರಿಗಣಿಸಬೇಕೆಂದು ನಾನು ನಮ್ಮ ರಾಜ್ಯದ ಸಂಗೀತಗಾರರನ್ನು ಕೋರುತ್ತೇನೆ. ಗ್ರಹಿಕೆಗೆ ಸ್ಫರ್ಧೆಯೊಡ್ಡುವ ಆರೋಹಣ-ಅವರೋಹಣಗಳನ್ನುಳ್ಳ ಸಮುದ್ರಪ್ರಿಯ ಅಥವಾ ರೇವಗುಪ್ತಿ ರಾಗಗಳಲ್ಲಿ ಆಧುನಿಕ ವಾಗ್ಗೇಯಕಾರರಿಂದ ರಚಿಸಲ್ಪಟ್ಟಿರುವ ತಿಲ್ಲಾನಗಳಿಗಿಂತ ಇವು ಎಷ್ಟೋ ಪಾಲು ಉತ್ತಮವಾಗಿವೆ”.
ಇಂದು ಸಂಗೀತ ನೂರ್ಮಡಿಯಾಗಿ ಪ್ರಸಾರಗೊಂಡಿದ್ದರೂ, ಪ್ರತಿಭಾವಂತ ಯುವ ಕಲಾವಿದರಲ್ಲಿ ತನ್ಮಯತೆಯ ಕೊರತೆ ಇದೆ ಎನ್ನುವುದು ಶ್ರೀಕಂಠನ್ ರವರ ನಿರೀಕ್ಷಣೆ. “ಲೆಕ್ಕಾಚಾರದ ಸಂಗತಿ-ಸ೦ಚಾರಗಳು ಅವರ ಸಂಗೀತವನ್ನು ಯಾಂತ್ರಿಕ ಎನಿಸುವಂತೆ ಮಾಡಿಬಿಟ್ಟಿವೆ. ಮೆದುಳಿಗೆ ಕಸರತ್ತು ಮತ್ತು ಹೃದಯವನ್ನು ಮಿಡಿಯುವ ಶಕ್ತಿ – ಇವುಗಳಲ್ಲಿ ಯಾವುದು ಮುಖ್ಯ?” ಎಂದು ಕೇಳುತ್ತಾರೆ ಅವರು.
ತಮ್ಮ ಮಾತನ್ನು ಮತ್ತೂ ಮುಂದುವರಿಸುವ ಶ್ರೀಕಂಠನ್ ಹೇಳುವುದು ಇದು- “ಕಲ್ಪನಾಸ್ವರದಲ್ಲಿ ಮೃದಂಗದವರಿಗೆ ಸವಾಲೆಸೆಯುವಂಥ ಲಯಬದ್ಧವಾದ ಕ್ರಮವಿನ್ಯಾಸ ಮತ್ತು ಸಂಯೋಜನೆಗಳಿಗೆ ಹೆಚ್ಚು ಪ್ರಾಮುಖ್ಯತೆ. ಲಯವಾದ್ಯನಿಪುಣರ ಜ್ಞಾನವನ್ನು ನಾವೇಕೆ ಪರೀಕ್ಷಿಸಬೇಕು? ಭಾವಪೂರಿತ ಸ್ವರಕಲ್ಪನಾ ಪ್ರಕ್ರಿಯೆಗೆ ಸಂಕ್ಷಿಪ್ತ ಲಯವ್ಯವಹಾರ ತಡೆಯೊಡ್ಡುವುದಿಲ್ಲ. ಪಕ್ಕವಾದ್ಯ ಕಲಾವಿದರಿಗೆ ನೀವು ಸವಾಲೆಸೆಯಬೇಡಿ. ಇದರಿಂದ ವೇದಿಕೆಯ ಮೇಲೆ ನಿಮ್ಮ ಸೃಜನಶೀಲತೆಯ ಜಾಡನ್ನು ನೀವು ಕಳೆದುಕೊಳ್ಳುವಂತಾಗಿಬಿಡುತ್ತದೆ!” ಎ೦ದು. ಸ್ವರಗಳ ಹರಿವಿಗೆ ಅಡ್ಡಿಪಡಿಸುವ ಪೂರ್ವನಿರ್ಧಾರಿತ ಲೆಕ್ಕಾಚಾರದ ಮಾದರಿಗಳು ಇಲ್ಲದಿರುವುದರಿಂದ, ಸರಳ ಲಯದ ಸಾಂಗತ್ಯದಲ್ಲಿ ನಿರರ್ಗಳವಾಗಿ ಹರಿದುಬರುವ ಸರ್ವಲಘು ವಿನ್ಯಾಸದ ಕಲ್ಪನಾಸ್ವರಗಳು ಕಿವಿಗಳಿಗೆ ತುಂಬ ಸುಖಕರವಾಗಿರುತ್ತವೆ ಎನ್ನುವುದು ಶ್ರೀಕಂಠನ್ ರವರ ನಂಬಿಕೆ.

ಬಹುಪ್ರಚಲಿತ ಅಭ್ಯಾಸಗಳು….
ಟಿ.ಎಸ್.ಸತ್ಯವತಿ ತಮ್ಮ ಗುರುಗಳ ನಿಶ್ಚಿತಾಭಿಪ್ರಾಯಗಳನ್ನು ಹೀಗೆ ವಿವರಿಸುತ್ತಾರೆ-“ಶಾಸ್ತ್ರ, ಪ್ರಯೋಗದ ಮೇರುದಂಡ. ಕೃತಿಗಳ ಅರ್ಥ, ಅವುಗಳ ರಾಗಗಳು, ಸಾಹಿತ್ಯದಲ್ಲಿನ ಪದವಿನ್ಯಾಸ ಮತ್ತು ಕೃತಿರಚನೆಯ ಹಿನ್ನೆಲೆಗಳ ಕುರಿತ ಅರಿವು, ಪ್ರಸ್ತುತಿಯನ್ನು ಬಲಪಡಿಸಿ ಗುಣಮಟ್ಟವನ್ನು ವರ್ಧಿಸುತ್ತದೆ. ಅಧ್ಯಯನಶೀಲತೆ ಆರೋಗ್ಯಕರ ಎನ್ನುವುದು ನಿಜವಾದರೂ, ಅದು ಅತಿಯಾದಾಗ ಭಾವವನ್ನು ಕಳೆದುಬಿಡುವ ಸಾಧ್ಯತೆ ಇದೆ. ಒಬ್ಬ ಕಲಾವಿದ ಸಹಜವಾಗಿಯೇ ಗುರುವಿನ ಪಾತ್ರವನ್ನು ವಹಿಸುತ್ತಾನೆ ಮತ್ತು ಶ್ರೋತೃವರ್ಗದ ಭಾವಸ್ತರವನ್ನು ಮೇಲೆತ್ತಿ, ಹಲವು ಕಾಲ ಅವರೊಂದಿಗೆ ಉಳಿಯುವ ಸಂದೇಶವನ್ನು ಸಂವಹನ ಮಾಡುವ ಗುರುತರ ಹೊಣೆ ಅವನ ಮೇಲಿರುತ್ತದೆ” ಎಂದು. ಈ ಆಲೋಚನಾ ಲಹರಿಗೆ ಸಂಬ೦ಧಪಟ್ಟ೦ತೆ ಶ್ರೀಕಂಠನ್ ನಾಟಿಕುರಂಜಿ, ಹಿಂದೋಳ, ತೋಡಿ, ಶುದ್ಧಧನ್ಯಾಸಿ ಮತ್ತು ನಾಸಿಕಾಭೂಷಣಿ ರಾಗಗಳನ್ನು ‘ಹಾಡಬೇಕಾದ’ ರೀತಿಯಲ್ಲಿ ಹಾಡಿ, ನಂತರ ಇಂದು ‘ಹಾಡಲ್ಪಡುತ್ತಿರುವ’ ರೀತಿಯಲ್ಲೂ ಹಾಡಿತೋರಿಸಿ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಾರೆ.
ನಮ್ಮ ಸಂಭಾಷಣೆ ರಾಗಗಳ ಪ್ರಯೋಗಗಳತ್ತ ಒನೆದಾಗ, ಕೆಲವು ರಾಗಗಳಿಗೆ ನೀಡಲಾಗಿರುವ ಅತಿ ಪ್ರಾಶಸ್ತ್ರ್ಯ ಮತ್ತು ವಿವಾದಿ ರಾಗಗಳಿಗೆ ನೀಡಿರುವ ಪ್ರಾಮುಖ್ಯತೆಯ ಕುರಿತು ಹೆಚ್ಚುತ್ತಲೇ ಇರುವ ವಿವಾದಗಳ ಬಗ್ಗೆ ಶ್ರೀಕಂಠನ್ ಹೇಳುವುದು ಇದು- “ರಸಿಕರಿಗೆ ಬಹುಮಟ್ಟಿಗೆ ಸಂಗೀತದ ಸಾರಸರ್ವಸ್ವ ಅಡಗಿರುವುದು, ಹಳೆಯ ನೆನಪುಗಳನ್ನು ಕುದುರಿಸುವ ಅದರ ಶಕ್ತಿಯಲ್ಲಿ. ಜನರಿಗೆ ಬೇಕಾಗಿರುವುದು ಹಳೆಯ ನೆನಪುಗಳನ್ನು ಪುನರುಜ್ಜೀವಿಸುವ ಸಂಗೀತ. ಆದರೆ ಸಂಗೀತಗಾರರು ಪ್ರಯೋಗಶೀಲತೆಯನ್ನೂ ಕಳೆದುಕೊಳ್ಳಬಾರದು” ಎಂದು.
ಇದಕ್ಕೆ ಉದಾಹರಣೆಯಾಗಿ, ‘ಸಂಪ್ರದಾಯ’ ಶೀರ್ಷಿಕೆಯ ಸೋದಾಹರಣ ಭಾಷಣದಲ್ಲಿ ಹಂಬಲಿಕೆಯ ಬಗ್ಗೆ ಮಧುರೈ ಮಣಿ ಐಯ್ಯರ್ ತಮಗೆ ಹೇಳಿದ ಮಾತನ್ನು ಮೃದಂಗವಿದ್ವಾ೦ಸರಾದ ಟಿ.ವಿ. ಗೋಪಾಲಕೃಷ್ಣನ್ ಸ್ಮರಿಸಿಕೊಂಡರು ಎನ್ನುವ ಶ್ರೀಕಂಠನ್, ಅವರ ನುಡಿಗಳನ್ನು ಪುನರುಚ್ಚರಿಸುತ್ತಾರೆ. ತಮ್ಮ ಚಿಕ್ಕಂದಿನಲ್ಲಿ ತಾವು ವಿವಾದಿ ರಾಗಗಳನ್ನು ಬಹಳವಾಗಿ ಹಾಡುತ್ತಿದ್ದುದಾಗಿ ಮಧುರೈ ಮಣಿ ಐಯ್ಯರ್ ಹೇಳಿದ್ದರು. ಸಂಗೀತಲೋಕದಲ್ಲಿ ಹೆಸರು ಮಾಡುವ ಆಸೆಯೇನಾದರೂ ಇದ್ದಲ್ಲಿ ಹಾಗೆ ಮಾಡದಂತೆ ಅವರಿಗೆ ಮುಸುರಿ ಸಬ್ರಹ್ಮಣ್ಯ ಐಯ್ಯರ್ ಸಲಹೆ ನೀಡಿದ್ದರು. ಜ್ಯೋತಿಸ್ವರೂಪಿಣಿ, ಉಮಾಭರಣ, ಕನ್ನಡಗೌಳಗಳಂಥ ರಾಗನಿರೂಪಣೆಯಲ್ಲಿ ಸಿದ್ಧಹಸ್ತರಾದ ಮಣಿ ಐಯ್ಯರ್ ಟಿವಿಜಿ ಅವರಿಗೆ ಹೇಳಿದ್ದರು- “ನನ್ನ ಕೃತಿಗಳಾದ ‘ಕಾಪಾಲಿ’ ಮತ್ತು ‘ಕಣ್ಣ ಕನ್ ಕೋಡಿ ವೇಂಡುಮ್’ ಗಳನ್ನು ಆಲಿಸಲು ಇಂದಿಗೂ ಜನ ನನ್ನ ಕಛೇರಿಗಳಿಗೆ ಬರುತ್ತಾರೆ” ಎಂದು.
ಆದ್ದರಿಂದ ಈ ಪ್ರಸಿದ್ಧ ಮೃದಂಗ ವಿದ್ವಾಂಸರ ಅನಿಸಿಕೆಯಂತೆ, “ವಿವಾದಿ ರಾಗಗಳನ್ನು ಸಂಪೂರ್ಣವಾಗಿ ಏಕೆ ತೊರೆಯಬೇಕು? ಅವುಗಳನ್ನು ಅಲ್ಪ ಪ್ರಮಾಣದಲ್ಲಿ ಉಪಯೋಗಿಸಿ. ಕಛೇರಿಯೊಳಗೆ ತುರುಕಿದ ಸರಕಿನೊಳಗೆ ಅವು ನಸುಗಾಳಿಯಂತೆ ಚೇತೋಹಾರಿಯಾಗಿ ಸುಳಿದು ಅದ್ಭುತ ಪರಿಣಾಮವನ್ನು ಉಂಟು ಮಾಡುತ್ತವೆ.” ಶ್ರೀಕಂಠನ್ ರವರ ಅಭಿಮತ ಹೀಗಿದೆ: ‘ಇದು ಅತಿ ಮತ್ತು ಮಿತಿಯ ಕುರಿತು ಕಲಾವಿದರಿಗಿರುವ ಸಂವೇದನೆಯ ಪ್ರಶ್ನೆಯಾದ್ದರಿಂದ, ಸೂಕ್ಷ್ಮವಾಗಿ ಸ್ಪಂದಿಸಬಲ್ಲ ಸಂಗೀತಗಾರರ ಪಾಲಿಗೆ ಲಿಟ್ಮಸ್ ಪರೀಕ್ಷೆಯ ಹಾಗೆ.

ಕಮಲಾಮನೋಹರಿ, ರಸಿಕಪ್ರಿಯ, ಗಾನಮೂರ್ತಿ, ಚಲನಾಟ ಅಥವಾ ಋಷಭಪ್ರಿಯದಂಥ ರಾಗಗಳ ಭಾವಪರಿಣಾಮವನ್ನು ವರ್ಧಿಸಲು ಕಲಾವಿದರು ಹೆಚ್ಚೇನೂ ಮಾಡಲಾಗುವುದಿಲ್ಲ. ರಕ್ತಿರಾಗಗಳನ್ನು ಮಾತ್ರವೇ ಅವುಗಳ ಸಮಸ್ತ ವೈಭವದೊಂದಿಗೆ ನಿರೂಪಿಸಲು ಸಾಧ್ಯ. ಮಾಳವಿ ಮತ್ತು ಗಮನಶ್ರಮ ರಾಗಗಳಲ್ಲಿ ಉನ್ನತ ಸ್ತರದ ಸಾಮರ್ಥ್ಯವುಳ್ಳ ಕೆಲವು ವಿದ್ವಾಂಸರು ರಾಗ-ತಾನ-ಪಲ್ಲವಿಗಳನ್ನು ಪ್ರಸ್ತುತ ಪಡಿಸಿ, ಆ ರಾಗದ ವರ್ಣವೈಶಿಷ್ಟö್ಯವನ್ನು ಅನಾವರಣಗೊಳಿಸಿದರು! ಇದು ಹೊಸದೇನಲ್ಲ, ಆದರೆ ನಾನು ಒತ್ತಿ ಹೇಳುತ್ತಿರುವ ಅಂಶವೆAದರೆ, ‘ಕೇವಲ ಭಕ್ಷö್ಯವೇ ಭೋಜನವಾಗಲಾರದು” ಎಂಬುದು”.
ಸ್ವರಶುದ್ಧಿಯನ್ನು ನಿರಂತರ ಉಳಿಸಿಕೊಳ್ಳುವ ವಿಷಯಕ್ಕೆ ಶ್ರೀಕಂಠನ್ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಗಮಕಗಳು ಕರ್ನಾಟಕ ಸಂಗೀತದ ಪ್ರಮುಖ ಲಕ್ಷಣಗಳಾದರೂ ಅವುಗಳನ್ನು ಒಂದು ಪರಿಮಿತಿಯಲ್ಲಿ ಬಳಸಬೇಕೇ ವಿನಾ ಮಿತಿಮೀರಿ ಅಲ್ಲ ಎನ್ನುವುದು ಅವರ ವಾದ.
ಅವರೆನ್ನುತ್ತಾರೆ, “ಒಂದು ಸ್ವರ ತನ್ನ ಪಕ್ಕದ ಮತ್ತೊಂದು ಸ್ವರದ ಮೇಲೆ ಒತ್ತುವರಿ ಮಾಡುವಂತೆ ಅರ್ಥಹೀನವಾಗಿ ಸುಳಿಸುಳಿಯಾಗಿ ಗಮಕ ಪ್ರಯೋಗ ಮಾಡುವುದು ಅಸಹನೀಯವೆನಿಸಬಲ್ಲುದು” ಎಂದು. ಟಿವಿಜಿ ಮತ್ತೆ ಹೇಳುವಂತೆ, “ಎಂ.ಡಿ.ರಾಮನಾಥನ್ ಅವರ ಕೇದಾರವನ್ನು ಇಂದಿಗೂ ಜನ ಸ್ಮರಿಸಿಕೊಳ್ಳುವುದೇಕೆ? ಸೀಮಿತ ಗಮಕಗಳುಳ್ಳ ಶುದ್ಧ ಸ್ವರಗಳು ಸಾಮಾನ್ಯ ಶ್ರೋತೃಗಳ ಶ್ರವಣೇಂದ್ರಿಯಗಳಿಗೆ ಹಿತವೆನಿಸುತ್ತವೆ”.
ಸ್ವಧರ್ಮ…
ಸ್ವಧರ್ಮವೆಂದರೇನು ಎನ್ನುವ ಕುರಿತು ಸಂಶಯಗಳು ಸುಳಿದಾಡುತ್ತಲೇ ಇರುವಲ್ಲಿ ಶ್ರೀಕಂಠನ್ ಅವರ ವ್ಯಕ್ತಿತ್ವ ನಾದದ ನಿಶ್ಚಲ ಮಾದರಿಯಾಗಿ ಕಂಗೊಳಿಸುತ್ತ ಭರವಸೆ ಮೂಡಿಸುತ್ತದೆ. ಅವರ ಶಿಷ್ಯರೂ ಪ್ರಸಿದ್ಧ ವೇಣುವಾದಕರೂ ಆದ ಶಶಾಂಕ್ ಹೇಳುತ್ತಾರೆ- “ನಾನು ಶಾಸ್ತ್ರೀಯ ಮತ್ತು ಜಾಗತಿಕ ಸಂಗೀತ ವೇದಿಕೆಗಳೆರಡರಲ್ಲೂ ಸಕ್ರಿಯನಾಗಿದ್ದರೂ, ನನ್ನ ಪ್ರಾರಂಭಿಕ ಗುರುಗಳಾದ ಶ್ರೀಕಂಠನ್ ರವರತ್ತ ಬೆರಗಿನ ದೃಷ್ಟಿ ಹರಿಸುತ್ತೇನೆ.
ಹಲವಾರು ವರ್ಷಗಳಿಂದ ನಾನು ನೋಡಿರುವಂತೆ, ಸಂಪ್ರದಾಯ ಮತ್ತು ಅಂಧ ವಿಶ್ವಾಸಗಳ ನಡುವಿನ ವ್ಯತಾಸದ ಕುರಿತು ಹೃತ್ಪೂರ್ವಕವಾಗಿ ಚಿಂತನೆ ನಡೆಸಿಯೂ ಅವೆರಡೂ ಕಲೆಯದಂತೆ ಪ್ರತ್ಯೇಕಿಸಬಲ್ಲ ಅಪರೂಪದ ವ್ಯಕ್ತಿ ಅವರು. ಸಂಪ್ರದಾಯ ನಾವೀನ್ಯತೆಯ ಶೋಧನೆಗೆ ಸ್ವಾತಂತ್ರ್ಯ ನೀಡುವುದರಿಂದ ಅವರು ಅದನ್ನು ಗೌರವಿಸುತ್ತಾರೆ. ಆದರೆ ಅಂಧವಿಶ್ವಾಸ ಶುಷ್ಕತೆಗೆ ಜನ್ಮ ನೀಡುತ್ತದೆ. ಕರ್ನಾಟಕ ಪದ್ಧತಿಯ ಹೃದಯಭಾಗಲ್ಲಿ ಅಂತರ್ಗತವಾಗಿರುವ ಯಾವ ಘನತೆಯನ್ನು ಅವರು ಅನಾವರಣಗೊಳಿಸಿ, ಎಲ್ಲೂ ಅತಿ ಇಲ್ಲದಂತೆ ಇತರ ಅಂಶಗಳ ಜೊತೆಗೆ ಸರಿದೂಗಿಸುತ್ತಾರೋ ಅದನ್ನು ಅರಿತುಕೊಳ್ಳಲು ಇಷ್ಟು ಸಾಕು. ಕ್ಲ್ ಪ್ತತೆ ಮತ್ತು ಯೋಜನೆ ಅವರ ಗಾಯನದ ಪ್ರಮುಖ ಲಕ್ಷಣಗಳು. ಕಣ್ಕತ್ತಲು ತರಿಸುವ ಗಲ್ಲಿಗಳೊಳಗೆ ನಮ್ಮನ್ನು ದೂಡುವ ಸುತ್ತುಬಳಸಿನ ಪ್ರಸ್ತುತಿಯ ಅವಧಿಗೆ ಸೃಜನಶೀಲತೆ ಎಡೆಮಾಡಿಕೊಡಬಾರದು ಎನ್ನುವುದನ್ನು ಅವರು ಒತ್ತಿ ಹೇಳುತ್ತಾರೆ.ಇಲ್ಲದಿದ್ದರೆ ಅನುಭವ ಬರಿದೆ ವ್ಯರ್ಥವಾಗುತ್ತದೆ ಎನ್ನುವ ಮಾತನ್ನು ಅವರು ಸದಾ ಹೇಳುತ್ತಿರುತ್ತಾರೆ.ಕಛೇರಿಯ ಪ್ರತಿಯೊಂದು ರಚನಾತ್ಮಕ ಆಯಾಮಕ್ಕೂ ತಕ್ಕಷ್ಟು ಸಮಯವನ್ನು ನಿಗದಿಪಡಿಸಿಕೊಳ್ಳದೆ ಹೋದರೆ, ಅತಿಭೋಜನದಂತೆಯೇ ಬೇಸರ ತರಿಸುವ, ಅಯೋಜಿತವಾದ ಮತ್ತು ಪರಿಣಾಮಕಾರಿಯಲ್ಲದ ಪ್ರಕ್ರಿಯೆಗೆ ಎಡೆ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಅವರ ಮಾತು” ಎಂದು.
ಗ೦ಭೀರ ಸಂಗೀತಾಸಕ್ತಿಯುಳ್ಳ ಯುವಗಾಯಕರಲ್ಲಿ ಒಬ್ಬರಾದ ಮತ್ತು ಉತ್ಕೃಷ್ಟತೆಯನ್ನು ಏಕರೂಪವಾಗಿ ಉಳಿಸಿಕೊಂಡಿರುವ ಚಿತ್ರವೀಣಾ ರವಿಕಿರಣ್ ರವರು ಹಲವಾರು ಕಛೇರಿಗಳಲ್ಲಿ ಶ್ರೀಕಂಠನ್ ರವರಿಗೆ ಸಹಕಾರ ನೀಡಿದ್ದಾರೆ. ಪಿಟೀಲಿನ ಬದಲಾಗಿ ಈ ವಾದ್ಯದ ನೂತನ ಪ್ರಯೋಗವನ್ನು ಗಾಯಕ ವರಿಷ್ಠರಾದ ಶ್ರೀಕಂಠನ್ ಕೂಡ ಸ್ವಾಗತಿಸಿದ್ದಾರೆ. ಈ ಹೊಸ ಪ್ರಯತ್ನಗಳು ಎಲ್ಲರ ಗಮನ ಸೆಳೆದಿವೆ. ಇಂಥ ಕಛೇರಿಗಳು ‘ಸಂಪ್ರದಾಯ ಮತ್ತು ಅಂಧವಿಶ್ವಾಸ’ಗಳ ನಡುವಿನ ಅಗಾಧ ಅಂತರವನ್ನು ಗುರುತಿಸುವಲ್ಲಿ ಶ್ರೀಕಂಠನ್ ರವರಿಗಿರುವ ಸೂಕ್ಷ್ಮದೃಷ್ಟಿಗೆ ನಿದರ್ಶನಗಳನ್ನಾಗಿ ಎತ್ತಿ ತೋರಿಸಬಹುದಾಗಿದೆ. ಈ ಹಿರಿಯ ಮತ್ತು ಕಿರಿಯ ವಿದ್ವಾಂಸರು ಅದ್ಭುತ ತೋಡಿಯನ್ನು ವಿನಿಮಯ ಮಾಡಿಕೊಳ್ಳಲು, ವಾಸುದೇವಾಚಾರ್ಯರ ಗೌಳರಾಗದ ‘ಪ್ರಣಮಾಮ್ಯಹಂ’ ಕೃತಿಯ ಸ್ವರಪ್ರಸ್ತಾರದಲ್ಲಿ ಸವಾಲು- ಮಾರುತ್ತರಗಳಲ್ಲಿ ತೊಡಗಲು, ಹರಿಕಾಂಭೋಜಿ ರಾಗದಲ್ಲಿನ ಸಂತ ತ್ಯಾಗರಾಜರ ಅತ್ಯಂತ ಅಪರೂಪದ ಕೃತಿ ‘ಒಕ ಮಾಟ-ಒಕ ಬಾಣ’ದ ಭಕ್ತಿಮುಖಿಯಾದ ಸಂಗತಿಗಳಲ್ಲಿ ಸಂಭಾಷಿಸಲು, ಕಲಾನಿಧಿ ರಾಗದಲ್ಲಿನ ತ್ಯಾಗರಾಜರ ಅದ್ಭುತ ಕೃತಿ ‘ಚಿನ್ನ ನಾಡೇ ನಾ’ದಲ್ಲಿ ಸ್ವಾರಸ್ಯಕರ ನೂತನ ಪ್ರಯೋಗಗಳನ್ನು ಮಾಡಲು ಸಾಧ್ಯವಾಯಿತು.
ಈ ಹಿರಿಯ ವಿದ್ವಾಂಸರಲ್ಲಿರುವ ಬೃಹತ್ತಾದ ಕೃತಿಸಂಗ್ರಹ, ವೈವಿಧ್ಯತೆಯಿಂದ ಕೂಡಿರುವ ಹಲವು ರಚನಾತ್ಮಕ ಕಾರ್ಯಗಳಲ್ಲಿ ತೊಡಗುವ ಅವರ ಸಾಮರ್ಥ್ಯದ ಕುರಿತು ವಿಶ್ಲೇಷಿಸಲು ರವಿಕಿರಣ್ ಅವರನ್ನು ಸ್ಫೂರ್ತಿಗೊಳಿಸಿದೆ. ಸಂಪ್ರದಾಯಸ್ಥರಾಗಿರುವುದು ಅಭಿರುಚಿ ಮತ್ತು ಶಿಕ್ಷಣಕ್ಕೆ ಸಂಬ೦ಧಪಟ್ಟ ವಿಷಯವಾದರೂ, ಅಂಧವಿಶ್ವಾಸದ ಮಾರ್ಗಸೂಚಿಗಳಿಂದ ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳದೆ, ಶ್ರೀಕಂಠನ್ ರವರಂತೆ ಆವಿಷ್ಕರಣಶೀಲರಾಗಿರುವವರೆಗೆ, ನೀವು ಸಂಗೀತದ ಮೂಲಭೂತವಾದಿಗಳಾಗಿ ಪರಿಣಮಿಸದೆ ನಿಮಗೆ ಮತ್ತು ಸಮಾಜಕ್ಕೆ ಉಪಕಾರಿಗಳಾಗಿರುತ್ತೀರಿ ಎನ್ನುವುದು ರವಿಕಿರಣ್ ಅವರ ಅನಿಸಿಕೆ.
ಮೈಸೂರಿನಲ್ಲಿರುವ ಹಿರಿಯ ವಿದ್ವಾಂಸರಾದ ನಂದಕುಮಾರ್ ರವರು (ರಾ.ಸತ್ಯನಾರಾಯಣ ರವರ ಪುತ್ರರು) ಶ್ರೀಕಂಠನ್ ರವರ ಕಛೇರಿಯೊಂದನ್ನು ನೆನಪಿಸಿಕೊಳ್ಳುತ್ತಾರೆ- “ಅದು ೧೯೮೦ರ ದಶಕದ ನಡುಭಾಗ. ಆರ್‌ಕೆಎಸ್ ರವರಿಗೆ ಪಿಟೀಲು ವಿದ್ವಾಂಸರಾದ ಲಾಲ್ಗುಡಿ ಜಯರಾಮನ್ ರವರು ಪಕ್ಕವಾದ್ಯ ಸಹಕಾರ ನೀಡಿದ್ದರು. ತ್ರಿಶ್ಶೂರಿನಲ್ಲಿ ತ್ಯಾಗರಾಜ ಉತ್ಸವದ ಸಂದರ್ಭದಲ್ಲಿ ಗಾಯಕಶ್ರೇಷ್ಠರಾದ ಶ್ರೀಕಂಠನ್ ಆ ಸಂತರ ಕೇದಾರಗೌಳ ರಾಗದ ‘ವೇಣುಗಾಲ ಲೋಲುನಿ’ ಕೃತಿಯನ್ನು ಎತ್ತಿಕೊಂಡರು. ಪಾರದರ್ಶಕತೆಯಿಂದ ಕೂಡಿದ ಸಂಗತಿಗಳು ತರಂಗಗಳ೦ತೆ ಹೊಮ್ಮಿ ಬಂದವು ಮತ್ತು ಅವರ ಸಶಕ್ತ ಶಾರೀರ ಧ್ವನಿವರ್ಧಕದ ಬಳಕೆಯ ನಿಷ್ಟ್ರ ಯೋಜನವನ್ನು ಸಾರಿ ಹೇಳಿತು. ಅಧಿಕಾರಯುತ ಕಂಠದಿ೦ದ ತಮ್ಮ ಶಿಷ್ಯರಿಗೆ ಹೇಗೆ ಬೋಧಿಸುತ್ತೇವೆ ಎನ್ನುವುದನ್ನು ಅವರು ನಿದರ್ಶನಪೂರ್ವಕವಾಗಿ ತೋರಿಸಿದರು. (ಅವರ ಸಂಗೀತ ಎಷ್ಟು ಅಮೋಘವಾಗಿತ್ತೆಂದರೆ) ನಾವು ಅವರ ಸಂಗೀತವನ್ನು ಮಾತ್ರ ಆಲಿಸಿದೆವೇ ವಿನಾ, ನಮ್ಮ ದೃಷ್ಟಿ ಅವರತ್ತ ಹೊರಳಲೇ ಇಲ್ಲ. ಒಬ್ಬ ಕಲಾವಿದನ ಕಛೇರಿ ೩೦ ಸಂವತ್ಸರಗಳ ನಂತರವೂ ನಮ್ಮ ಸ್ಮರಣೆಯಲ್ಲಿ ಉಳಿಯುವುದಾದರೆ, ಅದು ಆ ಸಂಗೀತಗಾರನ ಪ್ರಬಲ ವ್ಯಕ್ತಿತ್ವವನ್ನು ಬಿಂಬಿಸುತ್ತದೆ” ಎಂದು.
“ಗಾಯತ್ರೀ ದೇವಿಯವರ (ಜಯಚಾಮರಾಜ ಒಡೆಯರ್ ರವರ ಪುತ್ರಿ) ವಿವಾಹ ಮಹೋತ್ಸವದ ಆರತಕ್ಷತೆಯ ಸಂದರ್ಭದಲ್ಲಿ ಶ್ರೀಕಂಠನ್ ನೀಡಿದ ಕಛೇರಿ ಮತ್ತೊಂದು ಸ್ಮರಣೀಯ ವಿಧ್ವತ್ಪçದರ್ಶನವಾಗಿತ್ತು. ಲಲಿತ ಕಲೆಗಳ ರಾಜಪೋಷಕರಾದ ತಮ್ಮ ತಂದೆಯವರ ನೆನಪಿನಲ್ಲಿ ಪ್ರಶಸ್ತಿಯೊಂದನ್ನು ತೆಗೆದುಕೊಂಡು, ಒಡೆಯರ್ ಅವರ ಪುತ್ರಿಯರು ಒಟ್ಟಾಗಿ ಬಂದರು ಮತ್ತು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಶ್ರೀಕಂಠನ್ ಮಾಡಿದ ಸಾಧನೆಯನ್ನು ಗುರುತಿಸಿ ೨೦೧೦ರಲ್ಲಿ ಮೊಟ್ಟ ಮೊದಲ ‘ಜಯಚಾಮರಾಜ ಒಡೆಯರ್ ಚಿತ್ಪçಭಾನಂದ ಪ್ರಶಸ್ತಿ’ಯನ್ನು ಅವರಿಗೆ ನೀಡಲಾಯಿತು” ಎನ್ನುತ್ತಾರೆ ನಂದಕುಮಾರ್.

ಎಲ್ಲರೂ ತಿಳಿದುಕೊಳ್ಳಲು ಬಯಸುವಂತೆ, ತಮ್ಮ ಸಂಗೀತ ಕಛೇರಿಗಳ ಉತ್ಕೃಷ್ಟತೆಯನ್ನು ನಿರಂತರವಾಗಿ ಉಳಿಸಿಕೊಳ್ಳಲು ಸಾಧ್ಯವಾಗಿರುವುದು ಯಾವುದರ ಪರಿಣಾಮವಾಗಿ ಎಂದು ಶ್ರೀಕಂಠನ್ ಅವರ ಅಭಿಪ್ರಾಯ?“ನನ್ನ ಪ್ರಕಾರ ಅದು ನನ್ನ ಪೂರ್ವಯೋಜನೆಯ ಫಲ. ಕಛೇರಿಯಲ್ಲಿ ವೈವಿಧ್ಯತೆಯನ್ನು ತರುವ ವಿಷಯಕ್ಕೆ ನಾನು ಬಹಳ ಪ್ರಾಮುಖ್ಯತೆ ಕೊಡುತ್ತೇನೆ. ಅಂತರ ಗಾಂಧಾರ, ಶುದ್ಧ ಗಾಂಧಾರ, ಶುದ್ಧ ಮಧ್ಯಮ ಮತ್ತು ಪ್ರತಿ ಮಧ್ಯಮಗಳನ್ನು ಹೊಂದಿರುವ ಮತ್ತು ವಿಭಿನ್ನ ತಾಳಗಳಲ್ಲಿರುವ ಕೃತಿಗಳನ್ನು ಸರದಿಯ ಪ್ರಕಾರ ಕಛೇರಿಗಳಲ್ಲಿ ಪ್ರಸ್ತುತಪಡಿಸಬೇಕು” ಎನ್ನುತ್ತಾರೆ ಶ್ರೀಕಂಠನ್. ಹೀಗೆ ವಿನ್ಯಾಸಗೊಳಿಸಲಾಗಿರುವ ಕಛೇರಿಗಳಲ್ಲಿ ವೈವಿಧ್ಯಪೂರ್ಣ ಆರೋಹಣ-ಅವರೋಹಣಗಳುಳ್ಳ ರಾಗಗಳನ್ನು ಆಲಿಸುವುದರಿಂದ ಶ್ರೋತೃಗಳಿಗೆ ಬೇಸರವಾಗುವುದಿಲ್ಲ ಎನ್ನುವುದು ಶ್ರೀಕಂಠನ್ ರವರ ಅಭಿಪ್ರಾಯ. “ಹಾಡುವಾಗ ಸಾಹಿತ್ಯಶುದ್ಧಿ, ತಮ್ಮ ಸೊಬಗನ್ನು ವರ್ಧಿಸಬಲ್ಲ ಅಲಂಕರಣದ ಸಕಲ ಆಯಾಮಗಳಿಂದ ಸಮೃದ್ಧಗೊಂಡ ಕೃತಿಗಳು, ರಾಗದ ನಿಜವಾದ ಸತ್ವವನ್ನು ಪ್ರಕಾಶಪಡಿಸಲು ಶಾಸ್ತçದ ನಿರ್ದೇಶಕ್ಕನುಸಾರವಾಗಿ ಜೀವಸ್ವರಗಳನ್ನು ಪ್ರಯೋಗಿಸುವ ರೀತಿ, ಇವೇ ಮೊದಲಾದ ಮೂಲಭೂತ ಅಂಶಗಳ ಕುರಿತು ಕಲಾವಿದರು ಗಮನ ಹರಿಸಬೇಕು” ಎನ್ನುವುದು ಶ್ರೀಕಂಠನ್ ರವರ ಅಭಿಮತ.
ಶ್ರೀಕಂಠನ್ ಮತ್ತು ನಸ್ಯ ಅತ್ಯಂತ ಸ್ವಚ್ಛವಾದ ಅಭ್ಯಾಸಗಳನ್ನುಳ್ಳ ಶ್ರೀಕಂಠನ್ ಯುವಕರಾಗಿದ್ದಾಗ ಹಲವು ವರ್ಷಗಳವರೆಗೆ ನಸ್ಯವನ್ನು ಉಪಯೋಗಿಸುತ್ತಿದ್ದರು ಎಂದರೆ ನಂಬಲಾಗುವುದಿಲ್ಲ.
ಒಂದು ದಿನ “ತುಂಬ ಜಿಗುಪ್ಸೆ ಹೊಂದಿ ನಾನು ನಸ್ಯದ ಡಬ್ಬವನ್ನು ಬಿಸಾಡಿಬಿಟ್ಟೆ” ಎಂದು ಹೇಳುತ್ತಾರೆ ಶ್ರೀಕಂಠನ್. ಅವರು ಹೇಳಿದಂತೆ ಕೇಳುವ ಕಾಲಜಯಿಯಾದ ಅವರ ಶಾರೀರದ ಬಗ್ಗೆ ಅವರೇನೆನ್ನುತ್ತಾರೆ? ‘ಮದ್ಯಪಾನ, ತಂಬಾಕು ಸೇವನೆ, ನಸ್ಯ ಹಾಕಿಕೊಳ್ಳುವುದು ಇವೇ ಮೊದಲಾದ ದುರಭ್ಯಾಸಗಳನ್ನು ಬಿಟ್ಟುಬಿಡಿ” ಎಂದು ನಗುವ ಶ್ರೀಕಂಠನ್ ನುಡಿಯುತ್ತಾರೆ: “ಬೀದಿಬದಿಯ ಆಹಾರವನ್ನು ಸೇವಿಸುವುದಿರಲಿ, ಆ ಕುರಿತು ಯೋಚನೆಯನ್ನೂ ಮಾಡಬಾರದು. ಧ್ಯಾನದಿಂದ ಅಂತರ೦ಗದಲ್ಲಿ ಸದಾ ಶಾಂತಿ ನೆಲಸುತ್ತದೆ. ಪ್ರತಿದಿನದ ನಿಯಮಿತ ಅಭ್ಯಾಸ ಸಂಗೀತಕ್ಕೆ ಅನಿವಾರ್ಯ. ಸಂಗೀತಗಾರರು ಸೂರ್ಯನಮಸ್ಕಾರ ಮಾಡಿ, ಧ್ವನಿಸಂಸ್ಕರಣೆಯ ಅಭ್ಯಾಸದಲ್ಲಿ ತೊಡಗುವುದು (ಅಕಾರ ಸಾಧನೆ, ಬಾಯನ್ನು ಸಂಪೂರ್ಣವಾಗಿ ತೆರೆದು ಅ-ಈ-ಐ-ಓ-ಯು ಎಂದು ಗುನುಗುವುದು) ಧ್ವನಿಯ ಸಂಚಾರ ಮತ್ತು ನಾದಗುಣವನ್ನು ಉತ್ತಮಪಡಿಸಿಕೊಳ್ಳಲು ಅತ್ಯಂತ ಪ್ರಯೋಜನಕಾರಿ.ಸಂಗೀತಗಾರರು ವೇದಿಕೆಯ ಮೇಲಿರುವಾಗ ಅತಿಯಾದ ಅಂಗಚೇಷ್ಟೆ ಮತ್ತು ಮುಖ ಹಿಂಡುವುದನ್ನು ತಪ್ಪಿಸುವುದು ಒಳ್ಳೆಯದು” ಎಂದು.
ಕಲಿಕೆಯ ತಂತ್ರಗಳು ವರ್ಧಿಷ್ಣು ಕಲಾವಿದರು ಪ್ರತಿಯೊಂದು ರಾಗದಲ್ಲೂ ಕನಿಷ್ಠ ಆರರಿಂದ ಎಂಟು ಕೃತಿಗಳನ್ನು ಕಲಿತುಕೊಳ್ಳುವುದು ಅತ್ಯವಶ್ಯಕ ಎಂದು ಒತ್ತಿ ಹೇಳುತ್ತಾರೆ ಶ್ರೀಕಂಠನ್. ಏಕೆಂದರೆ ಪ್ರತಿಯೊಂದು ಕೃತಿಯ ಬಂಧದಲ್ಲೂ ರಾಗಸ್ವರೂಪದ ವಿಭಿನ್ನ ಆಯಾಮಗಳು ಕಾಣಸಿಗುವುದರಿಂದ ಪ್ರತಿ ರಾಗದಲ್ಲೂ ಅನೇಕ ಕೃತಿಗಳನ್ನು ಕಲಿತುಕೊಳ್ಳುವುದು ರಾಗದ ಗ್ರಹಿಕೆಯನ್ನು ಉತ್ತಮಪಡಿಸುತ್ತದೆ. “ಪ್ರತಿಯೊಂದು ತಲೆಮಾರಿನ ಶ್ರೇಷ್ಠ ವಿದ್ವಾಂಸರ ಸಂಗೀತವನ್ನು ಆಲಿಸಿ ಮತ್ತು ಅವರು ರಾಗಸ್ವರೂಪವನ್ನು ಹೇಗೆ ಅಭಿವ್ಯಕ್ತಿಗೊಳಿಸಿದ್ದಾರೆ ಎನ್ನುವುದನ್ನು ಮತ್ತೆಮತ್ತೆ ಅಧ್ಯಯನ ಮಾಡಿ. ಮಧುವಂತಿ ಮತ್ತು ವಾಸಂತಿಗಳ೦ಥ ರಾಗಗಳನ್ನು ಅವುಗಳ ವ್ಯಕ್ತಿತ್ವವನ್ನು ಪ್ರಕಟಪಡಿಸುವುದಕ್ಕಿಂತ ಹೆಚ್ಚಾಗಿ ವಿಸ್ತಾರ ಮಾಡಲು ಸಾಧ್ಯವಿಲ್ಲ. ಆದರೆ ವಿಸ್ತಾರಗೊಳಿಸಲು ಅನಂತ ಪ್ರಯೋಗಗಳನ್ನು ಒದಗಿಸುವ ಶಹನ, ನಾಟಿಕುರಂಜಿ, ಧನ್ಯಾಸಿ, ತೋಡಿ, ಶಂಕರಾಭರಣ, ಪೂರ್ವಿಕಲ್ಯಾಣಿ, ಭೈರವಿ, ಕಲ್ಯಾಣಿ, ಬೇಗಡೆ ಅಥವಾ ದರ್ಬಾರ್ ರಾಗಗಳನ್ನು ವಿಶದವಾಗಿ ನಿರೂಪಿಸಬಹುದು” ಎನ್ನುವ ಹಿತವಚನಗಳನ್ನಾಡುತ್ತಾರೆ ಶ್ರೀಕಂಠನ್.
ರಾಗಾಲಾಪನೆಯನ್ನು ಅತ್ಯಂತ ವೇಗವಾಗಿ ಮಾಡುವುದನ್ನು, ವಿಶೇಷವಾಗಿ ಗಮಕಗಳ ವಿಸ್ತಾರ ಮಾಡುವಾಗ ಬಿರ್ಖಾಗಳನ್ನು ಅತಿಯಾಗಿ ಉಪಯೋಗಿಸುವುದನ್ನು ಶ್ರೀಕಂಠನ್ ಒಪ್ಪುವುದಿಲ್ಲ. ಅವರು ಹೇಳುತ್ತಾರೆ- “ರಾಗಾಲಾಪನೆಯನ್ನು ವಿಳಂಬಕಾಲದಲ್ಲಿ ಮಾಡಬೇಕು ಮತ್ತು ಬಿರ್ಖಾಗಳನ್ನು ಸೀಮಿತವಾಗಿ ಉಪಯೋಗಿಸಬೇಕು ಎಂದು ಪೂರ್ವಕಾಲದ ವಿದ್ವಾಂಸರು ನಮಗೆ ತಿಳಿಸಿಕೊಟ್ಟಿದ್ದರು. ಆದರೆ ಅತಿ ವೇಗ ಸಂಗೀತದ ಭಾವಸೌಂದರ್ಯದ ನೈರಂತರ್ಯಕ್ಕೆ ಮಾರಕ ಎಂಬುದನ್ನು ಅರಿತುಕೊಳ್ಳಲು ಇಂದು ಯಾರಾದರೂ ಪ್ರಯತ್ನಪಡುತ್ತಾರೆಯೆ? ಮಧ್ಯಮಕಾಲದ ಕೃತಿಯಿಂದ ಪ್ರಾರಂಭಿಸುವುದು ಅಥವಾ ತಿಲ್ಲಾನದೊಂದಿಗೆ ಮುಕ್ತಾಯ ಮಾಡುವುದು ವಿಭಿನ್ನ ಲಯಗಳ ಕೃತಿಗಳನ್ನು ಹೊಂದಿರಬೇಕಾದ ಸಂಗೀತ ಪದ್ಧತಿಯಲ್ಲಿ ಸಹಜವೇ ಸರಿ. ಆದರೆ ರಾಗದ ವಿವಿಧ ಮುಖಗಳನ್ನು ಉನ್ಮೋಚನಗೊಳಿಸಲು ಅಲಂಕಾರಾರ್ಥವಾದ ಆಯಾಮಗಳು ಅದರ ಚೇತೋಹಾರಿಯಾದ ಪರಿಚಯವನ್ನು ನೀಡುವಂತಿರಬೇಕು. ಇಂಥ ಸಕಲ ಲಕ್ಷಣಗಳ ಸಂಕ್ಷಿಪ್ತ ಸೇರ್ಪಡೆ, ನಮ್ಮ ಪ್ರಸ್ತುತಿಗೆ ಸಂಯಮಪೂರ್ಣವಾದ ಘನತೆಯನ್ನು ತಂದುಕೊಡುತ್ತದೆ” ಎಂದು.
೧೯೩೦ ಮತ್ತು ೪೦ರ ದಶಕಗಳಲ್ಲಿ ಸಂಗೀತ ಸಭೆಗಳು ಅನೌಪಚಾರಿಕವಾಗಿ ಮನೆಗಳಲ್ಲಿ ಜರುಗುತ್ತಿದ್ದವು ಎಂದು ಆರ್‌ಕೆಎಸ್ ಜ್ಞಾಪಿಸಿಕೊಳ್ಳುತ್ತಾರೆ. “ಅಲ್ಲಿ ಪಸರಿಸಿರುತ್ತಿದ್ದ ಶಾಂತಿ, ಕಲಾವಿದರು ಮತ್ತು ಶ್ರೋತೃಗಳು – ಈ ಎರಡೂ ವರ್ಗಗಳ ಹೃದಯಗಳನ್ನೂ ಸ್ಪರ್ಶಿಸುತ್ತಿತ್ತು. ಅದು ಹೇಗೋ ಅಂದಿನ ಶ್ರೋತೃಗಳು ಜ್ಞಾನಸಂಪನ್ನರಾಗಿರುತ್ತಿದ್ದುದು ಮಾತ್ರವಲ್ಲ, ಧ್ಯಾನಶೀಲರಾಗಿರುತ್ತಿದ್ದರು ಮತ್ತು ಪ್ರಶ್ನೆಗಳನ್ನು ಕೇಳುತ್ತಿದ್ದರು.

ದೇವಾಲಯಗಳ ಆವರಣಗಳಲ್ಲಿ ಸಣ್ಣ ಸಭೆಗಳು ಅಥವಾ ಪುಟ್ಟ ಕೋಣೆಗಳಲ್ಲಿ ಧ್ವನಿವರ್ಧಕಗಳ ಆರ್ಭಟವಿಲ್ಲದೆ ನಡೆಯುತ್ತಿದ್ದ ಕಛೇರಿಗಳು ಕ್ರಮೇಣ ಬಹುಜನ ರಸಿಕ ಕಛೇರಿಗಳಿಗೆ ಎಡೆ ಮಾಡಿಕೊಟ್ಟವು. ಆದರೆ ಇದು ಪಗ್ರತಿಯೆ? ಇಂದು ವರ್ಷದ ೩೬೫ ದಿನಗಳಲ್ಲೂ ಸಂಗೀತವಿರುತ್ತದೆ… ಮಕ್ಕಳ ದಿನದಲ್ಲಿ, ಮಹಿಳೆಯರ ದಿನದಲ್ಲಿ, ಅಸಂಖ್ಯ ಉತ್ಸವಗಳಲ್ಲಿ, ವಿದೇಶೀ ಗಣ್ಯರನ್ನು ಸ್ವಾಗತಿಸುವ ಸಂದರ್ಭಗಳಲ್ಲಿ, ಅಷ್ಟು ಮಾತ್ರವಲ್ಲ, ಶೋಕಾಚರಣೆಯ ದಿನಗಳಲ್ಲೂ ಕೂಡ! ಕಲಾವಿದರೂ ಪ್ರಚಾರಕ್ಕಾಗಿ ಹಾತೊರೆಯುವುದರಿಂದ ಇದೊಂದು ಲಾಭ ಗಳಿಕೆಯ ಚಟುವಟಿಕೆಯಾಗಿಬಿಟ್ಟಿದೆ. ಪ್ರಜಾಪ್ರಭುತ್ವೀಕೃತ ಶಾಸ್ತ್ರೀಯ ಪದ್ಧತಿಯ ಹೆಸರಿನಲ್ಲಿ ಇದು ಈಗ ವಾಣಿಜ್ಯೀಕರಣಗೊಂಡುಬಿಟ್ಟಿದೆ. ಯಾವುದನ್ನೇ ಅತಿಯಾಗಿ ಮಾಡಿದರೂ ಅದು ಜಿಗುಪ್ಸೆ ಉಂಟುಮಾಡುತ್ತದೆ, ನೀರಸವೆನಿಸುತ್ತದೆ. ಕಛೇರಿಗಳು ಆಹ್ಲಾದಕರವಾಗಿ ಉಳಿಯಲು ಅವುಗಳ ನಡುವೆ ಸಾಕಷ್ಟು ಅಂತರವಿರುವAತೆ ನೋಡಿಕೊಳ್ಳಬೇಕು” ಎಂದು.
‘ಕ್ಷಣದಲ್ಲಿ ಸಿದ್ಧವಾದದ್ದು ಕ್ಷಣದಲ್ಲಿ ಅಳಿಯುತ್ತದೆ’ ಎನ್ನುವುದನ್ನು ಆಲೋಚಿಸದೆ ಇಂದಿನ ಸಮಾಜ, ಸಿದ್ಧ ಆಹಾರದಂತೆ ಸಂಗೀತವನ್ನೂ ಗುಳಿಗೆಗಳ ರೂಪದಲ್ಲಿ ಒದಗಿಸುತ್ತಿದೆ ಎನ್ನುವುದು ಶ್ರೀಕಂಠನ್ ರವರ ಅನಿಸಿಕೆ. ‘ಹಿಂದೆ ನಂಬಿದ್ದ೦ತೆ ಶಿಸ್ತು ಮತ್ತು ದೃಢಪ್ರಯತ್ನಗಳನ್ನು ಇಂದು ಯಶಸ್ಸಿನ ಸೂತ್ರಗಳೆಂದು ಪರಿಗಣಿಸುತ್ತಿಲ್ಲ. ತಾಯ್ತಂದೆಯರು ಚಿಕ್ಕಮಕ್ಕಳನ್ನು ಕಛೇರಿ ನೀಡುವಂತೆ ಒತ್ತಾಯಪಡಿಸಿ ವೇದಿಕೆಗಳಿಗೆ ದೂಡುತ್ತಿದ್ದಾರೆ. ಇದು ಮಕ್ಕಳ ಶಕ್ತ್ಯು ತ್ಸಾಹಗಳು ಬಹುಬೇಗ ನಂದಿಹೋಗುವ೦ತೆ ಮಾಡುತ್ತದೆ’ಎನ್ನುತ್ತಾರೆ ಅವರು. ‘ಆದರೆ ನೀವು ಇದನ್ನೇ ಬಯಸುವಿರಾದರೆ ನಾನು ಹೇಳುವಂಥದ್ದು ಇನ್ನೇನೂ ಇಲ್ಲ. ನನ್ನನ್ನು ಕಟುವಾಗಿ ಟೀಕೆ ಮಾಡುವ ಕೆಲವರು, ‘ಸಿದ್ಧ ಪೀಠೋಪಕರಣಗಳೂ ಸಿದ್ಧ ಉಡುಪುಗಳೂ ಗ್ರಾಹಕರಿಗೆ ದೊರೆಯುವಂತಿರಬೇಕು’ ಎಂದು ವಾದಿಸುತ್ತಾರೆ. ಆಗಲಿ, ನಾಣ್ಯದ ಇನ್ನೊಂದು ಮುಖದ ಕುರಿತು ಮಾತನಾಡುವುದಾದರೆ, ಬಹುಶಃ ನಮ್ಮ ಶ್ರೋತೃಗಳೂ ತಾಳ್ಮೆ ಮತ್ತು ತಿಳಿವಳಿಕೆಗಳಿಲ್ಲದವರು ಎನಿಸುತ್ತದೆ’ ಎನ್ನುವುದು ಶ್ರೀಕಂಠನ್ ರವರ ಮಾತು.
ಯುವ ಸಂಗೀತಗಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ಅವರ ಸಲಹೆ ಏನು? “ನಮ್ಮ ಪೂರ್ವಿಕರು ನಮಗೆ ನೀಡಿರುವ ಅದ್ಭುತ ಸಂಪತ್ತನ್ನು ವಿರೂಪಗೊಳಿಸಬೇಡಿ.
ನಮ್ಮ ಪರಂಪರೆಯನ್ನು ಎತ್ತಿ ಹಿಡಿಯುವ ಮತ್ತು ಸಂಪ್ರದಾಯವನ್ನು ಅನುಸರಿಸುವ ಧ್ಯೇಯ ನಿಮ್ಮದಾಗಿರಬೇಕು. ಈ ಸಾವಿರಾರು ವರ್ಷಗಳಲ್ಲಿ ವೇದಗಳಲ್ಲಿ ಕಿಂಚಿತ್ತಾದರೂ ಬದಲಾವಣೆ ಆಗಿದೆಯೆ? ವೇದಗಳೊಡನೆ ಬಲವಾದ ನಂಟಿರುವ ನಮ್ಮ ಸಂಗೀತವನ್ನು ಮುಂದಿನ ತಲೆಮಾರುಗಳಿಗಾಗಿ ನಾವು ಸಂರಕ್ಷಿಸಬೇಕು. ವಾಗ್ಗೇಯಕಾರರಿಗೆ ನಿಷ್ಠನಾಗಿರುವ ದೃಷ್ಟಿಯಿಂದ ಪ್ರತಿಯೊಂದು ಕೃತಿಯಲ್ಲಿ ಹುದುಗಿರುವ ಭಾವದ ಕುರಿತು ನಾನು ಈಗಲೂ ಸಂಶೋಧನೆ ಮಾಡುತ್ತಿರುತ್ತೇನೆ. ಗಂಟೆಗಟ್ಟಲೆ ಅಭ್ಯಾಸ ಮಾಡುವುದರಿಂದ ಕಛೇರಿ ನೀಡುವಾಗ ಐದು ನಿಮಿಷಗಳಲ್ಲಿ ಕಲ್ಪನಾಶಕ್ತಿ ಬತ್ತಿಹೋಗಬಹುದು ಎನ್ನುವುದನ್ನು ವಿದ್ಯಾರ್ಥಿಗಳು ನೆನಪಿಟ್ಟುಕೊಂಡಿರಬೇಕು. ಸಂತುಲಿತ ಅಭ್ಯಾಸ ಪರಿಣಾಮ ಬೀರುವುದು ಇಲ್ಲಿಯೇ” – ಇದು ಶ್ರೀಕಂಠನ್ ರವರ ಸೂಕ್ತಿ.






0 Comments