ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಆಮ್ ಆದ್ಮಿ ಏನು ಮಾಡಬೇಕು ?’ – ನಾ ದಿವಾಕರ್

ಪ್ರಜಾಸತ್ತೆಯಲ್ಲಿ ಸತ್ತೆಯಾ ಪ್ರಜೆಯೇ ?

ನಾ ದಿವಾಕರ

ಆರೂವರೆ ದಶಕಗಳ ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ವಿಶಿಷ್ಟ ಗುಣವಿದೆ. ಈ ವಿಶಿಷ್ಟ ಗುಣ ವಿಚಿತ್ರ ಎನಿಸಿದರೂ ಅಡ್ಡಿಯಿಲ್ಲ. ಪ್ರಾತಿನಿಧಿಕ ಪ್ರಜಾಸತ್ತೆಯನ್ನು ಅಂಗೀಕರಿಸರುವ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಭೌಮ ಪ್ರಜೆಗಳಿಂದ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಪ್ರಾತಿನಿಧಿತ್ವದ ಗ್ರಹಿಕೆಯೇ ಇಲ್ಲ. ತಾವು ಯಾರನ್ನು , ಏತಕ್ಕಾಗಿ, ಯಾವ ಪುರುಷಾರ್ಥಕ್ಕಾಗಿ ಪ್ರತಿನಿಧಿಸುತ್ತಿದ್ದೇವೆ ಎಂಬ ಅರಿವೂ ಇಲ್ಲ. ಹಾಗಾಗಿಯೇ ಇಲ್ಲಿನ ಆಡಳಿತ ವ್ಯವಸ್ಥೆ ಜನಪ್ರತಿನಿಧಿಗಳ ಭದ್ರ ಕೋಟೆಯಾಗಿ ಕಾಣುವುದೇ ಹೊರತು ಜನತೆಯ ರಕ್ಷಣಾ ಕವಚದಂತೆ ಕಾಣುವುದಿಲ್ಲ. ಸಾಂವಿಧಾನಿಕವಾಗಿ ಮತದಾನದ ಹಕ್ಕು ದೇಶದ ಪ್ರಜೆಗಳ ಅಮೂಲ್ಯ ಅಸ್ತ್ರವಾಗಿರುತ್ತದೆ. ಈ ಅಸ್ತ್ರವನ್ನು ಕಡ್ಡಾಯವಾಗಿ ಬಳಸುವಂತೆ ಆಗ್ರಹಿಸಲಾಗುತ್ತದೆ, ಪುಸಲಾಯಿಸಲಾಗುತ್ತದೆ, ಕಡ್ಡಾಯ ಮತದಾನದ ಆಗ್ರಹವೂ ಸಹ ಇತ್ತೀಚೆಗೆ ಕೇಳಿಬರುತ್ತಿದೆ. ಆದರೆ ತಮ್ಮ ಅಮೂಲ್ಯ ಅಸ್ತ್ರವನ್ನು ಬಳಸಿ ದೇಶವನ್ನಾಳುವ ಅವಕಾಶ ನೀಡುವ ಪ್ರಜೆಗಳ ಬಗ್ಗೆ ಪ್ರಜಾ ಪ್ರತಿನಿಧಿಗಳಿಗೆ ಕಾಳಜಿಯೇ ಇರುವುದಿಲ್ಲ. ಇದ್ದರೂ ಅಂತಹ ಕಾಳಜಿಯ ಹಿಂದೆ ಸ್ವಾರ್ಥ ಹಿತಾಸಕ್ತಿ ಇರುತ್ತದೆ. ಹಾಗಾಗಿಯೆ ದೇಶದ ಸಾರ್ವಭೌಮ ಜನತೆ ಆಡಳಿತ ವ್ಯವಸ್ಥೆಯನ್ನು ಸಮರ್ಥವಾಗಿ, ಪ್ರಾಮಾಣಿಕತೆಯಿಂದ, ಪಾರದರ್ಶಕತೆಯಿಂದ, ನಿಷ್ಠೆಯಿಂದ ಮುನ್ನಡೆಸಲು ನೀಡುವ ಅವಕಾಶವನ್ನು ಆಳುವ ವರ್ಗದ ಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ, ತಮ್ಮ ವೃದ್ಧಿಗಾಗಿ ಬಳಸಿಕೊಳ್ಳುತ್ತಾರೆ. ಇದು ಪಕ್ಷಾತೀತವಾಗಿ ಭಾರತವನ್ನು ಕಾಡುತ್ತಿರುವ ಸಮಸ್ಯೆ.

ಕಲೆ : ಆರ್ ಕೆ ಲಕ್ಷ್ಮಣ್

ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕತೆ ಮತ್ತು ಮತ ಬ್ಯಾಂಕುಗಳು ಪ್ರಧಾನ ಪಾತ್ರ ವಹಿಸುತ್ತವೆ. ರಾಜಕೀಯ ಪಕ್ಷಗಳಿಗೆ ದೇಶದ ಅಳಿವು ಉಳಿವಿಗಿಂತಲೂ ತಮ್ಮ ಪಕ್ಷದ ಅಳಿವು ಉಳಿವು ಮುಖ್ಯವಾಗುತ್ತದೆ. ಇಲ್ಲಿ ಸಂವಿಧಾನ/ಸರ್ಕಾರ ಎಂಬ ಸಾರ್ವಭೌಮ ಸಂಸ್ಥೆಗಳಿಗಿಂತಲೂ ಪಕ್ಷ ಎಂಬ ಸಂಸ್ಥೆ ಪ್ರಧಾನ್ಯತೆ ಗಳಿಸುತ್ತದೆ. ಹಾಗಾಗಿ ಆಡಳಿತಾರೂಢ ಪಕ್ಷಗಳು ಜನಪರ ಮುಖವಾಡವನ್ನು ಹೊತ್ತುಕೊಂಡೇ ಸುಪ್ತವಾಗಿ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುತ್ತಾರೆ. ಜನತೆಯಿಂದ ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆ ವ್ಯವಸ್ಥಿತವಾಗಿ ಕಸಿದುಕೊಳ್ಳುವ ಅಮೂಲ್ಯ ಸಂಪನ್ಮೂಲಗಳು ಯಾವುವು, ಹೇಗೆ ಕಸಿದುಕೊಳ್ಳಲಾಗುತ್ತದೆ, ಯಾವ ಪ್ರಮಾಣದಲ್ಲಿ ಲೂಟಿಯಾಗುತ್ತದೆ ಎಂದು ಜನತೆಗೆ ಅರಿವಾಗದಂತೆ ಒಂದು ರೋಚಕ ಮಂಜಿನ ಪರದೆಯನ್ನು ಸೃಷ್ಟಿಸಿ, ಪರದೆಯ ನೇಪಥ್ಯದಲ್ಲಿ ಔದ್ಯಮಿಕ ಹಿತಾಸಕ್ತಿಗಳಿಗೆ ರತ್ನಗಂಬಳಿ ಹಾಸಲಾಗುತ್ತದೆ. ಪರದೆಯ ಮೇಲಿನ ರಂಗು ರಂಗಿನ ಸುಂದರ ಚಿತ್ರಣಗಳ ಮೂಲಕ ಜನಸಾಮಾನ್ಯರನ್ನು ಮರುಳುಮಾಡಲಾಗುತ್ತದೆ. ಸರ್ಕಾರ ಅಭಿವೃದ್ಧಿ ಮತ್ತು ಸಮಾನತೆಯ ಹೆಸರಿನಲ್ಲಿ ಜನತೆಗೆ ಆಯ್ದುಕೊಳ್ಳಲು ಎಸೆಯುವ ಮೀಸಲಾತಿ, ಸಬ್ಸಿಡಿ, ಪರಿಹಾರ, ನೆರವು, ಸಾಲ ಮುಂತಾದ ತುಣುಕುಗಳನ್ನೇ ಮಹಾಪ್ರಸಾದ ಎಂದು ಸ್ವೀಕರಿಸುವ ಜನತೆ ಪರದೆಯ ಹಿಂದಿನ ತಮ್ಮ ಕರಾಳ ಭವಿಷ್ಯದ ದರ್ಶನವಾಗುವುದೇ ಇಲ್ಲ.
ಈ ವಿಶಿಷ್ಟ ಸನ್ನಿವೇಶದಲ್ಲೇ ಆಳುವ ಜನಪ್ರತಿನಿಧಿಗಳು ತಮ್ಮ ಆತ್ಮರಕ್ಷಣೆಗಾಗಿ ಆತ್ಮವಂಚನೆ ಮಾಡಿಕೊಂಡರೂ ಚಿಂತೆಯಿಲ್ಲ ಎಂಬ ನೆಲೆಯಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಇಂತಹ ತೀರ್ಮಾನಗಳ ಪೈಕಿ ಶಾಸಕರ, ಸಂಸದರ ವೇತನ ಹೆಚ್ಚಳವೂ ಒಂದು. ಕೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಸಂಘಟಿತ ನೌಕರರು ತಮ್ಮ ದಿನಗೂಲಿ ಮತ್ತು ವೇತನ ಹೆಚ್ಚಳಕ್ಕಾಗಿ ವರ್ಷಗಟ್ಟಲೆ ಮುಷ್ಕರ, ಪ್ರತಿಭಟನೆ ನಡೆಸಬೇಕು. ಕೆಲವೊಮ್ಮೆ ಲಾಠಿ ಪ್ರಹಾರಕ್ಕೂ ಸಿದ್ಧರಾಗಬೇಕು. (ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಇದನ್ನೇ ಮಾಡಿದೆ). ಮೈಸೂರಿನ ಫಾಲ್ಕನ್ ಕಾರ್ಖಾನೆಯ ಕಾರ್ಮಿಕರು ಹಲವು ತಿಂಗಳುಗಳಿಂದ ವೇತನ ಪಡೆದಿಲ್ಲ. ಕಾರ್ಖಾನೆ ಮುಚ್ಚುವ ಸಾಧ್ಯತೆಗಳು ಹೆಚ್ಚಾಗಿದ್ದು ನೂರಾರು ಕುಟುಂಬಗಳು ಬೀದಿಪಾಲಾಗುತ್ತವೆ. ರಾಜ್ಯದ ಅಂಗನವಾಡಿ ನೌಕರರು ಹೆಚ್ಚಿನ ವೇತನಕ್ಕಾಗಿ, ಸವಲತ್ತುಗಳಿಗಾಗಿ ಆಗ್ರಹಿಸುತ್ತಾ ಹೋರಾಡುತ್ತಲೇ ಇದ್ದಾರೆ. ಈ ದುಡಿಯುವ ವರ್ಗಗಳ ಬೇಡಿಕೆ ಆಳ್ವಿಕರ ಕಿವಿಗೆ ಬೀಳುವುದೇ ಇಲ್ಲ.
ಆದರೆ ಸಾರ್ವಭೌಮ ಜನತೆಯಿಂದ ಆಯ್ಕೆಯಾಗಿ ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿಯುವ ಆಳ್ವಿಕರ ವೇತನ/ಸೌಲಭ್ಯ/ಸವಲತ್ತು ಹೆಚ್ಚಿಸಲು ಒಂದು ಕ್ಷಣಸಾಕು. ಏಕಾಏಕಿ ವೇತನ ದುಪ್ಪಟ್ಟು ಹೆಚ್ಚಾಗುತ್ತದೆ. ಕರ್ನಾಟಕದ ಜನಪರ ಸರ್ಕಾರವೂ ಇದೇ ಮಾರ್ಗ ಅನುಸರಿಸಿದೆ. ಶಾಸಕರ ವೇತನದಲ್ಲಿ ಶೇ 75ರಷ್ಟು ಹೆಚ್ಚಳ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ 47.5 ಕೋಟಿ ಹೆಚ್ಚಿನ ಹೊರೆ ಹೊರಿಸಲಿದೆ. ಶಾಸಕರ ಮೂಲ ವೇತನ, ಪ್ರಯಾಣ ಭತ್ಯೆ, ದೂರವಾಣಿ ಕರೆ, ವಿಶೇಷ ಭತ್ಯೆ ಎಲ್ಲವನ್ನೂ ಹೆಚ್ಚಿಸಲಾಗಿದೆ. ನಿಮ್ಮ ಸೀಟಿನ ಬೆಲ್ಟುಗಳನ್ನು ಬಿಗಿ ಮಾಡಿಕೊಳ್ಳಿ ಎಂಬ ಘೋಷಣೆ ಜನಸಾಮಾನ್ಯರಿಗೆ ಮಾತ್ರ, ಆಳುವವರಿಗಲ್ಲ. ಏಕೆಂದರೆ ಅವರ ಸೀಟುಗಳು ರಾಜಸಿಂಹಾಸನದಂತೆ ಬೆಲ್ಟುಗಳೇ ಇರುವುದಿಲ್ಲ.
ಕಾರ್ಮಿಕರ ವೇತನ ಪರಿಷ್ಕರಣೆಯ ಸಂದರ್ಭದಲ್ಲಿ ಸಂಸ್ಥೆಯ ಅಥವಾ ಸರ್ಕಾರದ ಆದಾಯ/ವೆಚ್ಚದ ತುಲನೆ ಮಾಡಲಾಗುತ್ತದೆ. ಬೊಕ್ಕಸದ ಹೊರೆಯನ್ನು ಪರಿಗಣಿಸಲಾಗುತ್ತದೆ. ಕಾರ್ಮಿಕರ ಅಗತ್ಯತೆ ಗೌಣವಾಗುತ್ತದೆ. ಆದರೆ ಶಾಸಕರ ವೇತನ ಪರಿಷ್ಕರಣೆಗೆ ಇದಾವುದೂ ಅನ್ವಯಿಸುವುದಿಲ್ಲ. ವಿಚಿತ್ರ !!! ನಿಜ, ಶಾಸಕರಿಗೆ ಮತ್ತು ಸಂಸದರಿಗೆ ಅವರ ಕಾರ್ಯ ನಿರ್ವಹಿಸಲು ಸೂಕ್ತ ವೇತನ/ಅನುಕೂಲಗಳ ಅವಶ್ಯಕತೆ ಇರುತ್ತದೆ. ಆದರೆ ದೇಶದ ಭವಿಷ್ಯವನ್ನು ನಿರ್ಧರಿಸುವ ಉತ್ಪಾದಕೀಯ ಶಕ್ತಿಗಳಿಗೂ ಬದುಕು ಇರುವುದಲ್ಲವೇ ? ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗುವ ರೈತರಿಗೆ ನೆರವಾಗಲು ಪ್ರಧಾನಿಗಳು ಬ್ಯಾಂಕುಗಳ ಮೊರೆ ಹೋಗುತ್ತಾರೆ. ನಿಂತ ನೆಲವೇ ಕುಸಿದಾಗ ದಿಕ್ಕುಗಾಣದೆ ವಲಸೆ ಹೋಗುತ್ತಾ ನಗರಗಳಲ್ಲಿ ಸ್ಲಂ ನಿವಾಸಿಗಳಾಗುವ ಕೂಲಿ ಕಾರ್ಮಿಕರು ಉದ್ಯಮಿಗಳ ಮೊರೆ ಹೋಗಬೇಕಾಗುತ್ತದೆ. ಇವರ ಬವಣೆ, ಸಂಕಷ್ಟಗಳ ಬಗ್ಗೆ ಶಾಸನ ಸಭೆಗಳಲ್ಲಿ ಮೊಸಳೆ ಕಣ್ಣೀರು ಗಂಗೆ ಯಮುನೆಯಂತೆ ಹರಿದರೂ ಆಳ್ವಿಕರ ಹೃದಯಬಡಿತ ಹೆಚ್ಚುವುದಿಲ್ಲ. ಏಕೆಂದರೆ ಹೃದಯಶೂನ್ಯರನ್ನು ನಾವು ಪಟ್ಟಕ್ಕೇರಿಸಿದ್ದೇವೆ. ನಮಗೆ ಬೇಕಾದ್ದನ್ನು ನಾವು ನಮ್ಮಿಷ್ಟದಂತೆ ನಮಗೆ ಬೇಕೆನಿಸಿದಾಗ ಪಡೆಯುತ್ತೇವೆ , ಅದು ನಮ್ಮ ಆಜನ್ಮ ಸಿದ್ಧ ಹಕ್ಕು – ನಿಮಗೆ ಬೇಕಾದ್ದನ್ನು ಹೋರಾಡಿ ಪಡೆಯಿರಿ ಎಂಬ ಘೋಷಣೆಯಡಿ ಆಡಳಿತ ನಡೆಯುತ್ತಿದೆ. ಆಮ್ ಆದ್ಮಿ ಏನು ಮಾಡಬೇಕು ?
 

‍ಲೇಖಕರು G

5 April, 2015

2 Comments

  1. ಕಿರಣ್

    ಸರ್, ಬಹಳ ಸಮಯೋಚಿತವಾದ ಮಾತುಗಳನ್ನು ತೂಕಬಧ್ಹವಾಗಿ ಹೇಳಿದ್ದೀರಿ. ಧನ್ಯವಾದಗಳು.
    ನಮ್ಮದು ಅತ್ಯಂತ ಅಪ್ರಬುಧ್ಹ ಪ್ರಜಾಪ್ರಭುತ್ವ ಎನ್ನುವುದು ವಿದಿತ.
    “ಸ್ವಂತ ಬದ್ಧತೆಗಿಂತ ಸಾರ್ವಜನಿಕ ಬದ್ಧತೆ ಇರುವ ಜನಸಂಖ್ಯೆ ಹೆಚ್ಚಾದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥವಿದೆ” ಎನ್ನುತ್ತಾನೆ Plato.
    ಅದು ತಿರುಗಾ ಮುರುಗಾ ಆದರೆ ಏನಾಗಬಹುದೆಂಬುದಕ್ಕೆ ನಮ್ಮ ದೇಶವೇ ಸಾಕ್ಷಿ!
    ಸ್ವಂತ ಬದ್ಧತೆ ವಿಪರೀತವಾಗಿ ಅಮರಿಕೊಳ್ಳುವ ಜನಸಮುದಾಯ ನಮ್ಮದು. ಸಾರ್ವಜನಿಕ ಬದ್ಧತೆ ಇರುವ ಪ್ರಜೆಗಳ ಸಂಖ್ಯೆ ಶೇ 1 ಕೂಡ ಇರುವುದು ಅನುಮಾನ!
    ನೀವು ಸರಿಯಾಗಿ ಹೇಳಿದಂತೆ ಸರ್ಕಾರ ಎಸೆಯುವ ಮೀಸಲಾತಿ, ಸಬ್ಸಿಡಿ, ಪರಿಹಾರ, ನೆರವು, ಸಾಲಕ್ಕೆ ವೋಟು ಮಾರಿಕೊಳ್ಳುವ ಪ್ರಜಾನೀಕ ನಾವು. ಇದರೊಂದಿಗೆ ಸೀರೆ, ಹೆಂಡ, TV, Mixi, ಉಚಿತ ವಿದ್ಯುತ್ತು, ಉಚಿತ ನೀರು ಮುಂತಾದ ಬಿಟ್ಟಿಭಾಗ್ಯದ ಭರವಸೆ ಇದೆಲ್ಲವನ್ನೂ ಸೇರಿಸಿಕೊಳ್ಳಿ.
    ಇವುಗಳಿಂದ ದೇಶ ಉದ್ಹ್ಹಾರವಾಗುತ್ತಾ ಅಂತ ಎಷ್ಟು ಜನ ಪ್ರಶ್ನೆ ಮಾಡುತ್ತಾರೆ? “ಅವರೇನು ಕಮ್ಮಿ ತಿನ್ನುತ್ತಾರಾ? ಈಗ ಕೊಡುತ್ತಾರೆ. ಕೊಡಲಿ ಬಿಡು, ತೆಗೆದುಕೊಳ್ಳದೆ ಇದ್ದರೆ ನಾವು ಗೂಶ್ಲು ಅಂತ ಅರ್ಥ” ಎನ್ನುಜ ಜನ ತಮಿಳುನಾಡಿನಿಂದ ದೂರದ ದಿಲ್ಲಿಯವರೆಗೆ ವ್ಯಾಪಕವಾಗಿ ಇದ್ದಾರೆ.
    ಕೋಳಿ ಮೊದಲಾ? ಮೊಟ್ಟೆ ಮೊದಲಾ?
    ದೇಶಬಧ್ಹತೆ ಇಲ್ಲದ ಜನ; ಸ್ವಹಿತ ಬಿಟ್ಟು ಬೇರೆ ಯಾವುದೇ ಬಧ್ಹತೆ ಇಲ್ಲದ ರಾಜಕಾರಣ – ಇದು ನಮ್ಮ ಇಂದಿನ ಪರಿಸ್ಥಿತಿ.
    Benevolent Dictatorship ಇರಬೇಕು ಎನ್ನುತ್ತಾನೆ ಚಾಣಕ್ಯ. ದೇಶ ಈ ಜಂಜಾಟಗಳಿಂದ ದೂರಾಗಲು ಅದೊಂದೇ ದಾರಿ ಎಂದು ಹಲವರ ಅಂಬೋಣ. ಆದರೆ ಅದು ಸಾಧ್ಯವಾ? ವಿಶ್ವ ರಾಜಕಾರಣ ಅದಕ್ಕೆ ಅನುವು ಮಾಡಿಕೊಡುತ್ತದಾ?
    ಎಲ್ಲಾ ಒಂಥರಾ ಶೂನ್ಯ ಸಾರ್! ಒಳಗೆಲ್ಲಾ ಒಂದು ವಿಧದ ಸಂಕಟ. ಮುಕ್ತಿಯೇ ಇಲ್ಲ ಎನ್ನುವ ಭಾವನೆ. ಈ ಭಾವಕ್ಕೂ ಪದಸ್ವರೂಪ ಕೊಟ್ಟ ನಿಮಗೆ ವಂದನೆ.

  2. Manjulanarayanarao

    Nice Article

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading