‘ಆನೆ ಸಾಕಲು ಹೊರಟವಳ’ ಕಥೆ

ಕಲಾ ಚಿದಾನಂದ

‘ಆನೆ ಸಾಕಲು ಹೊರಟವಳು’ ಶೀರ್ಷಿಕೆಯನ್ನು ಹೊತ್ತ ಕೃತಿಯ ಲೇಖಕಿ ಕೊಡಗಿನ ಕೃಷಿಕ ಮಹಿಳೆ, ಸಹನಾ ಕಾಂತಬೈಲು. ಇದು ಅವರ ಚೊಚ್ಚಲ ಕೃತಿಯೂ ಹೌದು.

ಈ ಕೃತಿಯಲ್ಲಿ ಲೇಖಕಿ ಹಳ್ಳಿಯ ಕೃಷಿ, ಹೈನುಗಾರಿಕೆ, ಜೇನು ಸಾಕಾಣಿಕೆ, ಮನೆಯಲ್ಲೇ ವಿದ್ಯುತ್ ಉತ್ಪಾದನೆ ಮುಂತಾದ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತನ್ನ ಸ್ವಂತ ಅನುಭವವನ್ನು  ಸರಳ ಪದಗಳೊಂದಿಗೆ ಸರಾಗವಾಗಿ ಪೋಣಿಸುತ್ತಾ ಹೋಗುತ್ತಾರೆ. ಕೃಷಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಓದುಗರಿಗೆ ತಿಳಿಸಿಕೊಡುತ್ತಾರೆ. ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಹಳ್ಳಿಯ ಜನರ ಪಾಡು, ನೈಸರ್ಗಿಕ ವೈಪರೀತ್ಯಗಳಿಂದ ಬೆಳೆಗೆ ಆಗುವ ಹಾನಿ, ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಹೋಗುವ ರೈತರ ಪರಿಸ್ಥಿತಿ, ಎಲ್ಲವನ್ನು ಸಾಧಾರವಾಗಿ ವಿವರಿಸುತ್ತಾರೆ.

ಬೆಳೆದ ಬೆಳೆಗೆ ಸರಿಯಾಗಿ ದರ ಸಿಗದ  ಕೃಷಿಕರ ಅತಂತ್ರ ಸ್ಥಿತಿಗೆ ಪರಿಹಾರವನ್ನು ಪ್ರಶ್ನಿಸುತ್ತಾರೆ. ಹಳ್ಳಿಯ ತೋಟಗಳಲ್ಲಿ ಬೆಳೆಯುವ ಗಿಡಮೂಲಿಕೆಗಳನ್ನೂ, ಅನೇಕ ಬಗೆಯ ಸಾವಯವ ತರಕಾರಿ, ಹಣ್ಣುಗಳ ಖಾದ್ಯಗಳನ್ನೂ ಓದುಗರಿಗೆ ಬಾಯಲ್ಲಿ ನೀರೂರುವಂತೆ ಪರಿಚಯಿಸಿದ್ದಾರೆ. ರೈತರ ಕೃಷಿಯೊಂದಿಗಿನ ಭಾವನಾತ್ಮಕ ಸಂಬಂಧವನ್ನು ಕಟ್ಟಿಕೊಡುತ್ತಾರೆ. ಹಸುವನ್ನು ಸಾಕಿ ಹೈನುಗಾರಿಕೆ ಮಾಡಿದ ಅನುಭವವುಳ್ಳ ಬರಹಗಾರ್ತಿ, ‘ಹೋರಿ ಕರುವಿನ ವಿದಾಯ ಪ್ರಸಂಗ’ವನ್ನು ಕಥನ ರೂಪದಲ್ಲಿ ಮನ ಕರಗುವಂತೆ ಚಿತ್ರಿಸಿದ್ದಾರೆ.

ಜೇನು ನೊಣಗಳ ಬಗ್ಗೆ ಹಾಗೂ ಅದರ ಸಾಕಣಿಕೆಯ ಬಗ್ಗೆ ವಿಶೇಷ ಮಾಹಿತಿಯನ್ನು ಕುತೂಹಲಕಾರಿಯಾಗಿ ನೀಡಿದ್ದಾರೆ. ಕರೆಂಟಿನ ವ್ಯವಸ್ಥೆಯಿಲ್ಲದ ಹಳ್ಳಿ ಮನೆಯಲ್ಲಿ ತನ್ನ ಬದುಕು ತನಗಿಷ್ಟವಾದ ಓದು-ಬರಹಗಳಿಲ್ಲದೆಯೆ ರುಬ್ಬುಗಲ್ಲಿನ ಜೊತೆಯಲ್ಲಿಯೇ ಕಳೆದುಹೋಗುವುದೆಂಬ ಆತಂಕದಿಂದ ಎಚ್ಚೆತ್ತುಕೊಂಡ ವಿಚಾರಗಳಿವೆ. ಛಲದಿಂದ ಹರಸಾಹಸಪಟ್ಟು ಮನೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಕೆಲಸಕ್ಕೆ ಕೈ ಹಾಕಿ ಯಶಸ್ವಿಯಾದ ಲೇಖನವನ್ನು ಓದುವಾಗ ನಮಗರಿವಿಲ್ಲದೆ ಮನದಲ್ಲಿ ಏನೋ ಒಂದು ಬಗೆಯ ಉದ್ಗಾರ ಹೊರಹೊಮ್ಮುತ್ತದೆ.ಮನೆಯ ಒಳಗೂ, ಹೊರಗೂ ನಿಸ್ವಾರ್ಥ ದುಡಿಮೆ ಮಾಡಿಯೂ ಹೆಣ್ಣು ತನ್ನನ್ನು ಗುರುತಿಸಿಕೊಳ್ಳಲಾಗದ ವಿಷಾದದ ಸಂಗತಿಗಳಿರುವ ಲೇಖನಗಳೂ ಇವೆ.

ಶಾಲೆಗಳಲ್ಲಿ ಕೃಷಿ ಶಿಕ್ಷಣದ ಆಶಯ, ಹಳ್ಳಿಗಳಲ್ಲಿ ಬದಲಾಗುತ್ತಿರುವ ಮದುವೆ ಮುಂತಾದ ಸಮಾರಂಭಗಳ ವೈಖರಿ, ನೈಸರ್ಗಿಕ ವಸ್ತುಗಳ ಬಳಕೆ,ಎಲ್ಲವನ್ನು ವಿವರಿಸುವ ಅರ್ಥಪೂರ್ಣ ಬರಹಗಳಿವೆ. ಸಹನಾ ಅವರ ಹೆಚ್ಚಿನ ಲೇಖನಗಳಲ್ಲಿ ಹಳ್ಳಿಯ ಸೊಗಡು ಕಲಾತ್ಮಕವಾಗಿ ಮೂಡಿಬಂದಿದೆ. ಅಲ್ಲದೆ ಮುಂಬೈ, ಕಲ್ಕತ್ತಾ ಮಹಾನಗರಗಳಲ್ಲಿಯೂ, ಅಮೇರಿಕಾ ದಲ್ಲಿಯೂ ಅವರು ಸಂಚರಿಸಿದ ಪ್ರದೇಶಗಳ, ಅಲ್ಲಿ ಅವರು ಗ್ರಹಿಸಿದ ಸೂಕ್ಷ್ಮ ವಿಷಯಗಳ ಕಿರು ವರ್ಣನೆಯಿದೆ.

 

ಅವರ ಬರಹಗಳಲ್ಲಿ ಮನುಷ್ಯ ಸಂಬಂಧಗಳ ಭಾವನಾತ್ಮಕ ಸ್ಪಂದನೆಯಿದೆ. ಆಧುನಿಕತೆಯ ಸುಳಿವೂ ಇಲ್ಲದ ಹಳ್ಳಿಯಲ್ಲಿ ಹುಟ್ಟಿ, ಬೆಳೆದ ಒಬ್ಬ ಕೃಷಿಕ ಮಹಿಳೆ ಇಷ್ಟೆಲ್ಲಾ ವಿಷಯಗಳನ್ನು ಗ್ರಹಿಸಿ, ಅನುಭವಿಸಿ, ಅರ್ಥೈಸಿಕೊಂಡು ಓದುಗರಿಗೆ ಆಸಕ್ತಿ ಹುಟ್ಟುವ ರೀತಿಯಲ್ಲಿ ನಿರೂಪಿಸಿದ ಪರಿ ಅಚ್ಚರಿ ಹುಟ್ಟಿಸುವಂತಿದೆ. ಲೇಖಕಿ ಕಾಡಿನಲ್ಲಿ ಆನೆ ಸಾಕುವ ಚಿಂತನೆ, ಕೃತಿಯ ಶೀರ್ಷಿಕೆಗೆ ಹೊಳಹು ನೀಡಿದೆ.

ಹೀಗೆ ಅನೇಕ ರೀತಿಯ ವಿಷಯ ಜ್ಞಾನಗಳನ್ನು ಸರಳ ಶೈಲಿಯಲ್ಲಿ ಕಟ್ಟಿಕೊಟ್ಟು, ಸುಂದರವಾದ ಮುಖಪುಟದೊಂದಿಗೆ ಓದುಗರ ಮುಂದಿರುವ ಲಲಿತ ಪ್ರಬಂಧಗಳ ಗುಚ್ಛ ‘ಆನೆ ಸಾಕಲು ಹೊರಟವಳು’. ಖ್ಯಾತ ಹಿರಿಯ ಲೇಖಕ ನಾಗೇಶ್ ಹೆಗಡೆ ಅವರಿಂದ ಸುಂದರವಾದ ಮುನ್ನುಡಿಯನ್ನೂ, ಖ್ಯಾತ ಸಾಹಿತಿ ಡಾ. ಬಿ ಜನಾರ್ದನ ಭಟ್ ಇವರಿಂದ ಚಂದದ ಬೆನ್ನುಡಿಯನ್ನು ಬರೆಸಿಕೊಂಡು,  ಪ್ರಕಟಗೊಂಡ ಈ ಕೃತಿ ವೈಶಿಷ್ಟ್ಯಪೂರ್ಣವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.

ಈ ಪ್ರಬಂಧ ಸಂಕಲನ ಹೆಚ್ಚಿನ ಓದುಗರ ಕೈ ಸೇರಲಿ. ಲೇಖಕಿಗೆ ಅಭಿನಂದನೆಗಳು.

‍ಲೇಖಕರು avadhi

January 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ವಿಜಯೇಂದ್ರ ಕುಲಕರ್ಣಿ .ಕಲಬುರಗಿ

    ಆನೆ ಸಾಕಲು ಹೊರಟವಳ ಕತೆ ಪುಸ್ತಕದ ಪ್ರಕಾಶಕರ ವಿಳಾಸ ಮತ್ತು ಪುಸ್ತಕದ ಬೆಲೆ ತಿಳಿಸಿ.

    ಪ್ರತಿಕ್ರಿಯೆ
    • Kala Bhagwat

      ಶ್ರೀರಾಮ ಬುಕ್ ಸೆಂಟರ್
      1573/ಎ, ವಿದ್ಯಾನಗರ, ಮಂಡ್ಯ
      ಪುಸ್ತಕದ ಬೆಲೆ: ರೂ.90

      ಪ್ರತಿಕ್ರಿಯೆ
  2. ರಾಧಿಕಾ.ಜಿ. ಕಾಮತ್

    ಉದಯವಾಣಿ ಪತ್ರಿಕೆಯಲ್ಲಿ ಬಂದಂತಹ ಎಲ್ಲಾ ಅಂಕಣಗಳನ್ನು ಜೋಪಾನವಾಗಿ ಇಟ್ಟಿದ್ದೆ..ಈಗ ಅದು ಪುಸ್ತಕ ರೂಪದಲ್ಲಿ ಹೊರ ಬಂದಿದೆ ಅದನ್ನು ಸಹ ಖರೀದಿಸಿರುವೆ…
    ಮಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದು ಲೇಖಕಿಯನ್ನು ಕಣ್ಣಾರೆ ಕಂಡು ಬಹಳ ಖುಷಿಯಾಯಿತು…

    ಪ್ರತಿಕ್ರಿಯೆ
  3. Vimala G.P

    ಪುಸ್ತಕ ಪರಿಚಯ ಬಹಳ ಚೆನ್ನಾಗಿ ಮೂಡಿ ಬಂದಿದೆ. ಶ್ರೀಮತಿ ಕಲಾ ಚಿದಾನಂದ್ ಹಾಗೂ ಶ್ರೀಮತಿ ಸಹನಾ ಕಾಂತಬೈಲು ಇವರಿಬ್ಗರಿಗೂ ಅಭಿನಂದನೆಗಳು.

    ಪ್ರತಿಕ್ರಿಯೆ
    • sangeetha raviraj

      edondu aparoopada krithi sahanakka
      ennu enthaha krithigalu nimminda horabarali..
      kalaravru chennagi niroopisiddare

      ಪ್ರತಿಕ್ರಿಯೆ
  4. sangeetha raviraj

    nijavagiyu edondu aparoopada pusthaka sahanakka.
    ennu mundeyu enthaha krithi horabarali.
    kAlaravrru chennagi niroopisiddare.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: