ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆನಂದ ಭೋವಿ ಬರೆದ ಸಣ್ಣಕಥೆ ’ಹೋರಿ’

– ಆನಂದ ಭೋವಿ


“ಹುತ್ತತ, ಹುತ್ತತ, ಹುರ್ಯೋ, ಹುರ್ಯೋ, ಹಾಕಲೇ, ಹಾಕಲೇ, ಹುರ್ಯೋ ಬಪ್ಪರೇ ಮಗನೇ” ಹನಮಂತನ ಕೂಗೂ ಗುಡ್ಡದ ವಾರಿಗೆ ಬಡಿದು ಪ್ರತಿಧ್ವನಿ ಆಗುತ್ತಿತ್ತು. ಗಸಕ್ಕ, ಗಸಕ್ಕ ಆಕಳ ಮ್ಯಾಲ ಎರೇರಿ ಹೊಕ್ಕಿದ್ದ ಅವನ ಕರಿ ಹೋರಿ “ಬಸ್ಯಾ” ಹೂಂಕ್ ಹೂಂಕ್ ಢರಕಿ ಹೊಡೆದು ಮೂಗೂ ಹಿಗ್ಗಿಸಿ ಆಕಳ ಮುಕಳಿ ಮೂಸಿ ನೋಡಿ ಹೂಂಕರಿಸಿ ಅದರ ಡುಬ್ಬದ ಮ್ಯಾಲ ಕಾಲ ಹಾಕತ್ತಿತ್ತು. ಆಕಳ ಬಾಲ ಮ್ಯಾಲಕೆತ್ತಿ ಹಿಡಕೊಂಡ’ ನಿಂತ ಗದಿಗೆಪ್ಪಾ ಆಕಳ ಸಂಕಟ ನೋಡಾಕ ಆಗದ “ಹಗರಕಲೇ, ಹಗರಕ ನನ್ನ ಆಕಳ ಸತ್ತ ಗಿತ್ತ ಹೋಗಿತ್ತ ಸ್ವಲ್ಪ ಮೂಗದಾರ ಜೋರಾಗಿ ಹಿಡಿ, ಬೇದರಸಲೇ ಸಡ್ಲ ಬೀಡಬೇಡ ಹಿಡಿಕೋ, ಹಿಡಿಕೋ,” ಹೋರಿ ಹೊಡತಕ್ಕ ಚಡಪಡಿಸುತ್ತಿದ್ದ ಆಕಳ ಬಾಲ ಬಿಟ್ಟು ಹಿಂದಕ್ಕ ಸರಿದ ನಿಂತ.
ಕಟಮಳ್ಳಿ ಸೂತ್ತ ಮೂತ್ತಲಿನ ಹತ್ತ ಹಳ್ಳಿಗೆಲ್ಲಾ ಸರದಾರನಂಗ ತಿರಗಾಡುತ್ತಿದ್ದ “ಬಸ್ಯಾ” ಬೆದಿಗಿ ಬಂದ ಆಕಳಿಗೆಲ್ಲಾ ಹುಟ್ಟುವ ಕರುಗಳ ಅಪ್ಪನಾಗಿ ಹೂಂಕರಿಸುತ್ತ ಆಡ್ಡಾಡುತ್ತಿದ್ದ. ಮಸ್ತ ಜವಾರಿ ಕರಿ ಹೋರಿ, ಹನಮಂತನ ಪಾಲಿಗೆ ಇನ್ನೂ ಸಣ್ಣ ಪಾಪು. ಮುಸು ಮುಸು ತೇಕುತ್ತ ಎದೂರಿಗೆ ಬರುವ ಮಂದಿಗೆ, ದನಕರುಗಳ್ಳಿಗೆ ಚೂಪಾದ ತನ್ನ ಕೋಡು ತೋರಿಸಿ ಅಂಜಿಸುವ ಗೂಳಿ ಎತ್ತು ಆಗಿತ್ತು.

*********

ಹೈನ ಮಾಡಾಕಂತ ನಾಲ್ಕ ಎಮ್ಮಿ, ನಾಲ್ಕ ಆಕಳ ಕಟ್ಟದ್ದ ಬಿಟ್ರ ಹೋರಿ ಗಿರಿ ಸುದ್ಧಿಗೆಲ್ಲಾ ಕೈ ಹಾಕಿದಾಕಿ ಅಲ್ಲ ತಂಗೆವ್ವ. ಮಗ ಹನಮಂತ ಸಾಕಿದ್ದ ಹೋರಿ ಈ ಪಾರಿ ಸುದ್ಧಿ ಮಾಡತೈತಿ, ಹಿಂಗ ನಾಲ್ಕ ಊರಾಗ ಮೆರದಾಡತೈತೆನ್ನುವ ಕಲ್ಪನಾನ ಇರಲಿಲ್ಲ, ನಾಲ್ಕ ಶೂಲ ಮುಗಿಸಿ ಸಾಯುಅಂಗ ಆಗಿದ್ದ ಮುದಿ ಆಕಳ ಕಡೀಬಾರೆ ಹೆಣ್ಣ ಕರ ಇಳಿತೈತಿ, ಅನ್ನುವ ಆಕೆಯ ಮಾತು ಸುಳ್ಳಾಗಿ ಮಿರಿ ಮಿರಿ ಮಿಂಚುವ ಕರಿ ಹೋರಿ ಇಳಿದು ಸತ್ತು ಹೋಗಿತ್ತು. ಮುದಿ ಆಕಳ ಹಾಲ ಹಿಂಡಿ ಊರ ತುಂಬ ಮಾರಬೇಕಂತ ಮಾಡಿದ್ದ ಆಕೆಯ ಮುಖದಾಗ ತಾಯಿ ಇಲ್ಲದ ಹೋರಿ ಮರಿ ಸಣ್ಣ ಮುಖದ ಚಿಂತೆ ಕಾಣತ್ತಿತ್ತು. ಕುಟ್ಟಿ ಕುಟ್ಟಿ ತಿನ್ನಿಸುತ್ತಿದ್ದ ಕುಸುಬಿ ಹಿಂಡಿ, ಆಗಸಿ, ಮೂಸಿ ನೋಡದಿದ್ದ ಕರದ ಮುಖ ಕಂಡು ಮರ ಮರ ಮರಗುತ್ತಿದ್ದಳು.
ಮನಿ ಹೈನಕ್ಕಂತ ಇಟಗೊಂಡಿದ್ದ ಇನ್ನೊಂದು ಆಕಳ ಮಲಿಯೊಳಗ ಸಣ್ಣಗ ಬರುತ್ತಿದ್ದ ಹಾಲ ಹಿಂಡವದನ್ನ ಬಿಟ್ಟು, ಹೋರಿ ಮರಿ ಸತ್ತ ಹೋಗಿತ್ತ, ವಿಚಾರ ಮಾಡಿ ಇದರ ಬಾಯಿ ತಗೊಂಡು, ಆ ಆಕಳ ಕೆಚ್ಚಲಕ ಹಾಕಿದಳು. ಮೊದಮೊದಲು ಒದ್ಯಾಕ ಶೂರು ಮಾಡಿದ ಆಕಳ ಅದು ತನ್ನ ಕೂಸಂತ ತಿಳಿಕೊಂತೋ, ಎನೋ? ಹಗರಕ ಹೋರಿ ಮೈ ನೆಕ್ಕುತ್ತ ಅದು ಸೀಪಿದಂಗ ಅದರ ಬಾಯಾಗ ಹಾಲ ಸುರಸಾಕ ಶೂರು ಮಾಡಿತು. ಸಿಕ್ಕ ಸಿಕ್ಕ ಆಕಳ ಕೆಚ್ಚಲಕೆಲ್ಲಾ ಬಾಯಿ ಹಾಕೊದನ್ನ ರೂಡಿ ಮಾಡಿಕೊಂಡ ಹೋರಿ ಮರಿ, ಹನಮಂತನ ಕೂಡ ಆಟ ಆಡಕ್ಕೊಂತ ಬುರು ಬುರು ಕಾಂಗ್ರೆಸ ಕಸದಂಗ ಬೆಳಿತು.
ಆಗ ತಾನೇ ಮುಖದ ಮ್ಯಾಗ ಮೀಸಿ ಮೂಡಿ ಹರೇಕ ಬಂದಿದ್ದ ಹನಮಂತ ಈ ಕರದ ಮ್ಯಾಲ ಭಾಳ ಜೀವ ಇದ್ದ, ದಿನಾ ಅದರ ಮೈ ತಿಕ್ಕಿ ಬೆನ್ನೆಲ್ಲಾ ತುರುಸುತ್ತಿದ್ದ ಆಗ ಚಿಗಿತ್ತಿದ್ದ ಅದರ ಕೋಡಗಳನ್ನ ಕುಡುಗೋಲು ತುದಿಯಿಂದ ತಿಕ್ಕಿ ತಿಕ್ಕಿ ಹೊಳಪು ಮಾಡುತಿದ್ದ . ಸೋಮವಾರಕೊಮ್ಮೆ ಅದರ ಮೈ ತೊಳೆದು ಕಾಲ ಸಂದ್ಯಾಗ ಕಿವಿ ಬಡ್ಡ್ಯಾಗ ಬಾಲದ ತುದಿಯಾಗ ಮುಚಗೊಂಡ ಕುಳಿತ ಉಣ್ಣಿಯನ್ನೆಲ್ಲ ಕಸುವಿನಿಂದ ಕಿತ್ತು ತೆಗೆದು ಕಲ್ಲಿನಿಂದ ಜಜ್ಜಿ ಕುಸಿಪಡುತಿದ್ದ. ಹನುಮಂತನ ನೋಡಿದ್ರ ಸಾಕ ಢರಕಿ ಹೋಡಿತ್ತ ಹೋರಿ ಅವನ ಮೈ ಮುಖ ನೆಕ್ಕಿ ಪ್ರೀತಿ ತೊರುತ್ತಿತ್ತು.
ಹೋರಿ ಬೆಳೆದಂಗ ಅದರ ಕಾಟಾನು ಜಾಸ್ತಿ ಆತೂ. ಸಿಕ್ಕ ಸಿಕ್ಕ ದನಗಳಿಗೆ ಗುದ್ದುವುದು, ಎದುರಿಗ ಬಂದವರನ್ನ ಹಾಯಾಕ ಹೊಗುವುದು, ಸಣ್ಣ ಮಕ್ಕಳ ಮೈ ಮೇಲೆಲ್ಲ ಎರಿ ಹೋಗುವುದು ನೋಡಿ ಊರಾಗಿನ ಮಂದಿ ತಂಗೆವ್ವನ ಕೂಡ, ಹನುಮಂತನ ಮ್ಯಾಲ ಜಗಳಕ್ಕ ಬಂದ್ರು. ಇದರಿಂದ ಬ್ಯಾಸರ ಆದ ತಂಗೆವ್ವ “ಅದರ ಕಾಟ ಜಾಸ್ತಿ ಆಗೈತಿ ಸುಮ್ಮನ ಸವದತ್ತಿ ಸಂತಿಗೇ ಹೊಡಕೊಂಡ ಹೊಗ ಯಾರಾರ ಕಟುಕರ ಕೈಯಾಗ ಸಿಕ್ಕಮ್ಯಾಲ ಅದರ ಸೊಕ್ಕ ಮುರಿತೈತಿ” ಹನುಮಂತನ ಮುಸಡಿಗೆ ತಿವಿದಳು.
ಹೋರಿ ಮ್ಯಾಲ ಪ್ರಾಣಾನ ಇಟಗೊಂಡಿದ್ದ ಆಂವ ಕಟುಕರು ಅಂದಿದ್ದಕ್ಕ ಕಣ್ಣೀರು ತಗೆದ,ಬಾರಕೋಲು ತಗೊಂದು ಹಕ್ಕಿತುಂಬಾ ಓಡಾಡಿಸಿ ಹೋರಿ ಡುಬ್ಬದ ತುಂಬಾ ಬಾರ ಮುಡುವಂಗ ಬಡಿದ . ಹೋರಿ ಕೆಸರಾಡ್ಕೊಂತ ಹಕ್ಕಿತುಂಬಾ ಬಿಡಾಡಿತು. ಆದ್ರ ಇವನ ಮ್ಯಾಲ ಹಾಯಾಕು ಬರಲಿಲ್ಲ, ಒದ್ಯಾಕು ಬರಲಿಲ್ಲ. ಅದು ಇಂವನ ಹಚಗೊಂಡ ವೇದನೆ ನೋಡಿ ರಾತ್ರಿಯಲ್ಲಾ ಕಣ್ಣಿರ ಸುರಿಸಿದ. ಹನುಮಂತ ಊಟ ಮಾಡದ ಅದಕ್ಕೂ ಹಿಡಿ ಮೇವು ಹಾಕದ ಮಲಗಿಕೊಂಡ.
ರಾತ್ರಿಯಲ್ಲಾ ಉಪವಾಸ ಬಿದಿದ್ದ ಹೋರಿ ಮುಂಜಾನೆದ್ದು ಹೂಂಕರಿಸಲಿಲ್ಲ ಢರಕಿನೂ ಹೋಡಿಲಿಲ್ಲ, ಹನುಮಂತ ಮ್ಯಾಲಕ್ಕೆಳುವದನ್ನ ಕಣ್ಣಿರ ತುಂಬಿದ ಕಣ್ಣಿನಿಂದ ನೋಡುತ್ತಾ ಮಲಗಿತ್ತು, ರಾತ್ರೀಯಿಡಿ ನಿದ್ದೆ ಮಾಡದೇ ಅತ್ತಗೊಮ್ಮೆ, ಇತ್ತಾಗೊಮ್ಮೆ ಊರಲಾಡುತ್ತ ಮಲಗಿದ್ದ ಹನುಮಂತ ಬೆಳಕ ಹರಿದಿದ್ದ ತಡ, ಜೀವ ತಡ್ಯಾಕ ಆಗದೇ ಮ್ಯಾಲಕ್ಕೆದ್ದು ಹೊಗಿ ಹೋರಿ ಮೈಮ್ಯಾಲ ಕೈ ಆಡಸುತ್ತನಿಂತ
ಮುಂಜ ಮುಂಜಾಲೇ ಹೋರಿ ಮೈಮ್ಯಾಲ ಕೈಯಾಡಿಸುತ್ತಾ ನಿಂತ. ಮಗನ ಮಾರಿ ಮ್ಯಾಲಿನ ಕಳಾ ನೋಡಿ ತಂಗೇವ್ವಾ ಕಳವಳಗೊಂಡಳು “ಲಾ ಹನಮ್ಯಾ ಅದಕ್ಯಾಕ ಅಷ್ಟ ಚಿಂತಿ ಮಾಡತಿ, ಆ ಪೀರಸಾಬನಕಡೆ ಹೋಗಿ ಅದರ ತಡ್ಡ ಬೀಜ ಬಡಸ್ಕೊಂಡ ಬಾ, ಅದಕ್ಕ ಇನ್ನೊಂದ ಹೋರಿ ಜೊಡಿ ಮಾಡಿ ಹರಗಾಕ, ಬಿತ್ತಾಕ ಶುರು ಮಾಡಿದ್ರ, ಅದರ ಅರ್ಬಟಾ ತಾನ ಕಡಿಮಿ ಆಗತೈತಿ,”ಹದ ಬಂದಾಗ ಹರಗಬೇಕು, ಬೇದಿ ಬಂದಾಗ ಬಿತ್ತಬೇಕು ಅಂತಾರಲ್ಲ ಹಂಗ ಆಗೈತಿ, ಅದಕ್ಕ ಅದ ಕೊಸರಿಕೊಂಡು ಕುಣಿತ ಶೂರು ಮಾಡೈತಿ, ಹಂಗ್ಯಾಕ ಮಾರಿ ಉಬ್ಬಸಕೋಂಡ ನಿಂತಿ, ಹಕ್ಯಾಗಿನ ಸೆಗಣಿ ಬಳಿದು ಹೊತ್ತ ಎರುವದ್ರೊಳಗ ಪೀರಸಾಬನ ಹಿಡಿ, ಇಲ್ಲದಿದ್ರ ಊರಕೇರಿ ಅಡ್ಡಾಡುವ ಮನಸ್ಯಾ ಆಂವ”
ಹನುಮಂತ ನಿಂತ ಉಸಿರುಮತ್ತೆ ಛಾಲು ಆತು.”ಅವ್ವ ಎಲ್ಲಿ ಹೋರಿ ಮಾರಿಯೇ ಬಿಡತಾಳು ಅನ್ನಕೊಂಡಿದ್ದ ಅಂವಗ ಅದರ ಬೀಜ ಬಡಿಸಿ ಹೊಲಕ್ಕೆ ರೂಢಿ ಮಾಡೋಣ ಅಂದಿದ್ದು ಬಾರಿ ಖುಷಿ ತಂದಿತ್ತು, ಜೀವಕ್ಕ ಜೀವಾನ ಇಟಕೋಂಡಿತ್ತು ಹೋರಿ ಎಲ್ಲಿ ತನ್ನ ಕೈ ಬಿಟ್ಟು ಹೋಗತೈತಿ ಇದ ಚಿಂತ್ಯಾಗ ರಾತ್ರಿಯಲ್ಲಾ ನಿದ್ದೆನೆ ಮಾಡಿರಲಿಲ್ಲ. “ಆತ ಬೇ ಯವ್ವಾ ಹಂಗ ಮಾಡತೇನಿ” ಹಾಡ ಹಾಡಕೊಂಡ ಹಕ್ಯಾಗಿನ ಶೆಗಣಿ ಎತ್ತಿ ತಿಪ್ಪಿಗಿ ಎಸದ ಬಂದ, ಎಮ್ಮಿ, ಆಕಳು ಕರ, ಮಣಕಗಳೆಲ್ಲಾ ಹೋಯ್ದು ತುಂಬಿಸಿದ್ದ ಊಚ್ಚಿ ಗ್ವಾನಿಯನೆಲ್ಲಾ ಖುಷಿ ಖುಷಿಯಿಂದ ಖಾಲಿ ಮಾಡಿದ.
ಹನುಮಂತ ಹೋರಿ ಸವಾರಿ ಮಸೂತಿ ಮುಂದಿನ ಆಲದ ಗಿಡದ ಕಟ್ಟಿಗೆ ಬಂದಿತು. ಆಗಲೇ ಪೀರಸಾಲ ತನ್ನ ಕಾಯಕ ಶುರುಮಾಡಿದ್ದ. ಹರೆಕ ಬಂದ ಹೋರಿಗೆಲ್ಲಾ ಮೂಗುದಾರ ಹಾಕಿ ತನ್ನ ಲಯಕ್ಕ ತರುವ ಆಟ ಪ್ರಾರಂಭಿಸಿದ್ದ. ಮುಸು ಮುಸು ಮುಸುಗುಡುತ್ತಿದ್ದ ಹೋರಿ ಕಾಲಿಗೆ ಹಗ್ಗದ ತೊಡಕ ಹಾಕಿ ನೆಲಕ್ಕ ಅಂಗಾತ ಕೆಡವಿ ಅದರ ಕುತ್ತಿಗೆಗೆ ಕೋಡಿಗೆ ಹಗ್ಗದ ಲಗಾಮು ಹಾಕಿ ನಾಲ್ಕು ಜನ ಗಟ್ಟಿಮಸ್ತಾದ ಪೈಲವಾನರು ಬಿಗಿದ ಹಿಡಿದ್ರೂ ಹೋರಿಗಳ ಕೆಸರಾಟ ನಿಲ್ಲುತ್ತೀರಲಿಲ್ಲ, ಹಂಗೂ ಹಿಂಗೂ ಲಗಾಟ ಹೊಡಿಸಿ ಮಿಸಿಲಾಡದಂಗ ಕಾಲಕಟ್ಟಿ ಹೋರಿ ಒದಿಯಲಂಗ,ಜಿಗಿಯಲಂಗ, ಹಾರಲಂಗ ಅಂಗಾತ ಮಲಗಿಸಿ ನಾಲ್ಕು ಮಂದಿ ಹಿಡಿದ ಮ್ಯಾಲ ಪೀರಸಾಬನ ಕಾಯಕ ಆರಂಭ ಆಗತಿತ್ತು ಬಲತು ತುಂಬಿಕೋಂಡ ಬೀಜಕೆಲ್ಲಾ ತನ್ನ ಒರಟ ಕೈ ಆಡಿಸಿ ಬೆಣಚಕಲ್ಲತಗೊಂಡ ತಡ್ಡಬೀಜದ ಚರ್ಮಕ್ಕ ಒಂದೆರಡು ಸಾರಿ ಕೊರೆದು ನರದ ಕೊಂಡಿ ಕತ್ತರಿಸಿದ ನೋವಿಗೆ ವಿಲಿ ವಿಲಿ ಒದ್ದಾಡತ್ತಿದ್ದ ಹೋರಿಗಳು ತಮ್ಮ ಗಂಡಸತನ ಕಳೆದಕೊಂಡು ಕರಬಗೆಟ್ಟು ಉಲ್ಲಾಡತ್ತಿದ್ದವು. ಆಂವ ಅಷ್ಷಕ್ಕ ಬೀಡತ್ತಿರಲಿಲ್ಲ ಜೋತುಬಿದ್ದ ತುಂಬಿಕೊಂಡಿದ್ದ ಎರಡು ಬೀಜದ ಗಂಟಿಗೆ ಕೆತ್ತಿ ಇಟ್ಟಿದ್ದ ಗೂಟ ತಗೊಂಡು ಕಂಬಾರ ಸಾಲ್ಯಾಗ ಕಾಯ್ದು ಕಬ್ಬಿಣಕ್ಕೆ ಸುತ್ತಿಗಿ ಎತ್ತಿ ಹೋಡದಂಗ ಗಸಕ್ಕ ಗಸಕ್ಕ ಹೋಡದ್ರ ಜೋತಬಿದ್ದ ಬೀಜ ಮ್ಯಾಲಕ್ಕೇರಿ ಹೋರಿಗಳ ಜೀವ ಹ್ಯಾರಾರಿ ಹ್ಯಾರಾರಿ ಹೋದಂಗ”ಅಂಬಾ, ಅಂಬಾ” ಕೂಗೂ ಹರೆ ಕಳಕೊಂಡ ಹೋರಿ ಕುರಿಮರಿ ಒದರಿದಂಗ ಆಗುತಿತ್ತು, ಮುಸುಮುಸು ಮುಸುಡತ್ತಿದ್ದ ಮುಸುಡಿ, ನೆಗ್ಗಿದ ಅಲ್ಯೂಮಿನಿಯಂ ತಾಟಿನಂಗ ಅಂದಕಳಕೊಂಡ ಬಿದ್ದ ಹೋರಿಗಳು ಮ್ಯಾಲಕ್ಕೂ ಎಳಲಿಕ್ಕಾಗದ ಮಣಕಾಲ ಊರಿ ತಿಣಕಾಡುತ್ತಿದ್ದವು. ಮ್ಯಾಲಕ್ಕೇರಿದ ಬೀಜದ ಗಂಟಿನ ನೋವಿಗೆ ಪೀರಸಾಬ ಗಾಂದ ಎಣ್ಣಿ, ಅರಿಸಿನ ಪುಡಿ ಬರಸುಬವಾಗ ಹಿತ ಆದಂಗ ಆಗಿ ಪಿಳಿ ಪಿಳಿ ಕಣ್ಣುಬಿಟಕೊಂಡ ಅವನನ್ನ ನೋಡುತ್ತಿದ್ದವು.
ಹನುಮಂತನ ಎದಿ ಧಸಕ್ಕೆಂದಿತು ಈ ನಮೂನಿ ಲಗಾಟ ಹೊಡೆಸಿ ಗೂಟ ತಗೊಂಡ ಬೀಜಕ್ಕೆ ಹೊಡೆದ್ರ ಎಲ್ಲಿ ನನ್ನ”ಬಸ್ಯಾ” ಸತ್ತ ಹೊಕ್ಕಾಣ” ಪೀರಸಾಬನ ಕಡೆ ಒಮ್ಮೆ ತನ್ನ ಹೋರಿ ಕಡೆ ಒಮ್ಮೆ ದಿಕ್ಕು ತೋಚದಂಗ ನೋಡ್ತಾಕತ್ತಿದ್ದ. ಇರೋ ಎರಡ ಹೋರಿ ಬೀಜ ಬಿಡಿದು ಸುಸ್ತ ಆಗಿದ್ದ ಅಂವ ಎಲಿ ಅಡಕಿ ಹಾಕೊಂಡು ತಂಬಾಕ ತಿಕ್ಕಿ ಬಾಯಾಗ ಇಟಗೊಂಡು ಹನುಮಂತಗ ಸನ್ನೆ ಮಾಡಿ “ನಾಲ್ಕ ಮಂದಿಗೆಲ್ಲಾ ಆಸಕೋ ಹೋರಿ ಅಲ್ಲಲೆ ತಮ್ಮಾ ಇನಷ್ಟ ಮಂದಿ ಕೂಡಸು ಬಾಳ ತ್ರಾಸ ಕೋಡುವಂಗ ಕಾಣತೈತ “ಪೀರಸಾಬನ ಮಾತು ಮುಗಿದಿರಲಿಲ್ಲ ಇಂವ ಕೈಯಲ್ಲಿ ಹಿಡಿದಿದ್ದ ಹೋರಿ ಹಗ್ಗ ಕೈ ಬಿಟ್ಟು ದುಬ್ಬದ ಮ್ಯಾಲ ಚಪ್ಪರಿಸಿಬಿಟ್ಟ, ಬಿದ್ದು ಉರುಳಾಡುತ್ತಿದ್ದ ಹೋರಿ ನೋಡಿ ಚಿಗರ ಹೊಡೆದಿದ್ದ ಬಸ್ಯಾ ಹಿಂದ ಮುಂದ ನೋಡದ ಕಿತ್ತಕೊಂಡ ಒಡಾಕ ಶೂರು ಮಾಡಿತು.
“ಹಿಡಿಕೋ, ಹಿಡಿಕೋ, ಕೂಡಿದ ಮಂದಿ ಚೀರಿದರೂ ಎದೂರಿಗೆ ಬಂದವರಿಗೆ ತನ್ನ ಚೂಪಾದ ಕೋಡು ತೋರಿಸಿ ಗೋಣ ಅಲ್ಲಾಡಿಸಿ ಛಂಗನೇ ಜಿಗಿದು ಹಾರಿ ಹೋಯಿತು ಹನಮಂತ ಹೋ, ಹೋ, ಬಾ, ಬಾ, ಚೀರುತ್ತ ಅದರ ಬೆನ್ನು ಹಿಂದೆ ಒಡತೊಡಗಿದ.
ಊರಿನ ಹಿಂಡಕರಕಿ ದನಗಳೆಲ್ಲಾ ಗುಡ್ಡದ ವಾರಿಯೊಳಗ ಚಿಗಿತಿದ್ದ ಹುಲ್ಲು ಮೇಯುತ್ತ ಗುಡ್ಡದ ತುದಿಕಡೆ ಹೊರಟಿದ್ದವು. ದನಗಳ ಅಂಬಾಕೂಗಿಗೆ ಮರಳಾಗಿ ಹೋರಿ ಹಿಂಡ ದನಗಳ ಮಧ್ಯ ಸೇರಿಕೊಂಡು ಮಾಯವಾತಿತು. ದಿಗಿಲ ಬಡಿದ ಹನಮಂತ ಹೋರಿ ಹುಡುಕುತ್ತ ದನಗಳ ಮಧ್ಯ ಕಲ್ಲ ಎಸೆಯತೊಡಗಿದ. ದನದ ಹಿಂಡಿನ ನಟ್ಟ ನಡುವೆ. ಹೋರಿ ಮುಸುಗುಟ್ಟುತ್ತಿತ್ತು ಬೆದಿಗಿ ಬಂದ ಆಕಳ ಮ್ಯಾಲ ಕಾಲ ಹಾಕಿ ಆಕಳ ಬಯಕೆ ತೀರಿಸುತ್ತಿತ್ತು. ಇದರ ಕಡತಕ್ಕ ಢರಕ್ಕಿ ಬಂದ್ರು ತಡಕ್ಕೊಂಡ ಆಕಳು ಸುಖ ಸಿಕ್ಕಾಂಗಾಗಿ ಹೋರಿಯ ಮುಖವನ್ನು ತಿರುಗಿ ತಿರುಗಿ ನೆಕ್ಕತ್ತಿತ್ತು. ಗಾಂವ ಸಿಕ್ಕ ಹೋರಿ ಮುಂದಿನ ಕಾಲಿನಿಂದ ಹಿಡಪ ಹಾಕಿ ಆಕಳ ದುಬ್ಬದ ಮ್ಯಾಲ ಎರೇರಿ ಎರೇರಿ ತೇಕತ್ತಿತ್ತು. ಹನಮಂತ ಗಪ್ಪನ ಗರ ಬಡಿದವರಂಗ ನಿಂತ, ಹತ್ತ ನಿಮಿಷದ ಹೋರಿ ನೆಲಕ್ಕ ಕೆಡವಿದ್ರ? ಚಿಂತಿಸಿದ. ಭಲೇ ಮಗನೆ, ಭಲೇ. ಹೋರಿ ಸಮೀಪ ಹೋಗಿ ಪಿಕಿ ಪಿಕಿ ಕಣ್ಣ ಬಿಟ್ಟ.
ಹನಮಂತ ಹೋರಿ ಬೇಸಿ ಹಾರತೈತಿ, ಒಮ್ಮೆ ಕಟ್ಟಿಸಿದ್ರ ಆಕಳ ಗಬ್ಬ ಆಗುವುದು ಗ್ಯಾರಂಟ, ಈ ಸುದ್ಧಿ ಸುತ್ತ ಹಳ್ಳಗೆಲ್ಲಾ ಡಂಗುರ ಬಡಿದಂಗ ಹಾರಾಡಿತು. ಪ್ರತಿದಿನ ಹನಮಂತನ ಮನಿ ಮುಂದ ಆಕಳಗಳ ಸಾಲು ಚಾಲು ಆತು. ಹನಮಂತನ ಕೈ ಮೀಸಿ ಮ್ಯಾಲ ಬಂತು. ಆರಂಭಕ್ಕೆ ಯಾರಿಗೂ ರೊಕ್ಕ ರೂಪಾಯಿ ಕೇಳಲಿಲ್ಲ ಭಾಳ ಬೇಡಿಕೆ ಬಂದಂಗ ನೂರೂ ಇನ್ನೂರೂ ಇಸಗೊಂಡು ಆಕಳ ಮ್ಯಾಲ ಹೋರಿ ಬಿಡಾಕ ಪ್ರಾರಂಭಿಸಿದ. ಯಾವಾಗ ಊರ ಆಕಳಗಳ ಗರ್ಭಕ್ಕೆ ತನ್ನ ವಿರ್ಯ ಬಿಡಾಕ ಪ್ರಾರಂಭಿಸಿತೋ “ಬಸ್ಯಾ”ನ ನಸೀಬನೂ ತೇರಿತು. ಅದಕ್ಕೆ ಪ್ರತಿದಿನ ಹಸಿಮೇವು ಅಗಸಿ ಹಿಂಡಿ, ಕೋಳಿತತ್ತಿ. ಪುರಮಾಸಿ ಮೇಯಿಸಾಕ ಪ್ರಾರಂಭಿಸಿದ. ಮುಂಜಾನೆ ಆದರ ಸಾಕು, ಹನುಮಂತ ಮನಿ ಮುಂದ ಹಿಂಡ ಹುಡುಗರು ನಿಂತಕೊಂಡು “ಹುತ್ತತ್ತ, ಹುತ್ತತ್ತ, ಹುರ್ಯೊ ಚೀರುತ್ತ ಹೋರಿಗೆ ಹುರುಪು ಕೊಡುವ ಕೊಡುವ ಸೌಂಡ ಜಾಸ್ತಿ ಆಗಿತ್ತು ಒಮ್ಮೆಮ್ಮೆ ಮೂರನಾಲ್ಕು ಆಕಳ ಮ್ಯಾಲೆಲ್ಲ ಎರಿದ್ರು ಸುಸ್ತ ಆಗದ, ಕೋಡ ಅಲ್ಲಾಡಿಸಿ ಕುಣಿತಿತ್ತು. ಅಂತಾ ಟೈಮದಾಗಿಲ್ಲಾ ಹನುಮಂತ ಋಷಿ ಋಷಿಯಿಂದ ಟಾವೆಲ್ ಮ್ಯಾಲಕ್ ಹಾರಿಸಿ ತಾನ ಎರಿದಂಗ ಕ್ಯಾಕಿ ಹೋಡಿತ್ತಿದ್ದ.
” ಬರೇ ಹಿಂಗ ಹೋರಿ ಜೋಡಿ ಗೂಳಿಯಂಗ ಅಡ್ಡಾಡತಿಯೋ, ಎನಾದರ ಮನೆ ಬಾಳೆ ಮಾಡತಿಯೋ, ನಿನ್ನ ಮುಸಡಿಗೆ ಎಷ್ಟಂತ ಬಡದ ಹಾಕಲೀ, ಸೆಟದ ಹೊಗೋ ಹೊತ್ತೆನ್ಯಾಗ ದುಡಿಯುವುದು ತಪ್ಪಲಿಲ್ಲ”, ಮಾರಿ ತಿರುವಿದ ತಂಗೆವ್ವ ಊರ ಹಿರಿಯರನೇಲ್ಲಾ ಕೊಡಿಸಿ ಮಗನ ಮದುವೆ ಮಾಡೋ ವಿಚಾರ ಮಾಡಿದಲು,
ನಾಚಗೊಂಡ ನುಲಿತಿದ್ದ ಹನುಮಂತಗ ಜೊಡ ಆದ “ಕಾಶವ್ವ” ಸಣ್ಣ ವಯಸ್ಸಿನ ಹುಡುಗಿ. ಆಗ ತಾನೇ ಮೈನೆರೆದು ಹರೆ ಬೆಳೆಯುತ್ತಿದ್ದ ವಯಸ್ಸು ಸಾದ ಕಪ್ಪು ಬಣ್ಣದಾಕಿ, ಮುಖದ ಮ್ಯಾಲ ಅರಿಸಿಣ ನೀರ ಬಿದ್ದ ಮ್ಯಾಲ ಹೊಸ ಕಳೆ ಬಂದಿತು. ಹಂಗ ನೋಡಿದ್ರ ಕಾಶವ್ವ ಹನುಮಂತಗ ದುರದಾಕೆನೂ ಅಲ್ಲ, ತಂಗೆವ್ವನ ಚಿಗವ್ವನ ಮಗನ ಮಗಳು, ಹಿಂಗಾಗಿ ದೊಡ್ಡ ವಜನ ಆಗದಂಗ ತನ್ನ ತವರ ಮನೆ ಕಡೆ ಸಂಬಂದ ತಂದು ಮದುವೆ ಮಾಡಿದ್ದಳೂ ಸಣ್ಣ ವಯಸ್ಸಿನ ಮಗ ಸೊಸೆಗೆ ನೆದರ ತೆಗೆದು ಚೆಂದಾಗಿ ಬಾಳೆ ಮಾಡಿರಂತ ಹರಿಸಿದಳು.
ಹನುಮಂತ ಕರೇನ ಹೋರಿ ಜೋಡಿ ಆಡಿ ಗೂಳಿಯಂಗ ಆಗಿದ್ದ. ಹೊಸ ಹುರುಪಿನ್ಯಾಗ ಕಾಶವ್ವನ ಹಣ್ಣಗಾಯಿ, ನೀರಿ ಗಾಯಿ ಮಾಡಿ ಊರಳಾಡಿದ ಸಣ್ಣ ಹುಡುಗಿ ಇವನ ಕಡತನಕ್ಕ ನಿದ್ದೆಗೆಟ್ಟು ಸಣ್ಣಮುಖಮಾಡಿ ಅಡ್ಡಾಡತಿತ್ತು.
ಒಂದಿಷ್ಟ ದಿನ ಕಳಿತು.
ದನದ ದವಾಖಾನೆ ಕಟಮಳ್ಳಿ ಊರಾಗ ಆರಂಭವಾಯಿತು. ವೆಟರನರಿ ಡಾಕ್ಟರು ಕೈ ತುಂಬಾ ಬ್ಲೌಸ್ ಹಾಕಿಕೊಂಡು ಎಮ್ಮೆ ಎತ್ತು ಆಕಳು ಕೋಣಗಳ ಮುಕಳಿಯೊಳಗ ಕೈ ಹಾಕಿ ಹೊಟ್ಟೆಯಲ್ಲ ಕೈ ಯಾಚಿಸಿ ಶಗಣಿ ಹೊರಗ ತರಾಕ ಪ್ರಾರಂಭಿಸಿದ . ಎಮ್ಮಿ ಎತ್ತು ಆಕಳು ಜಡ್ಡ ಬಿದ್ರ, ಕುಂಟಿದ್ರ ಕೊಳಿಯ ಹಸಿ ತತ್ತಿ ತಿನ್ನಿಸಿ, ಗಾಂದೆನ್ನಿ ಅರಶಿನ ಬೇರು ಹಾಕಿ ಕಟ್ಟತಿದ್ದ ರೈತರೆಲ್ಲ ಸಣ್ಣ ಪುಟ್ಟ ಬ್ಯಾನಿಗೆಲ್ಲ ದನಗಳನ್ನ ದವಾಖಾನೆಗೆ ತರಲು ಪ್ರಾರಂಭಿಸಿದರು. ಅಂತು ಇಂತ ಇಂಜಕ್ಷನ್ ಗಳು ಮನ್ಯಾಗಿನ ನಾಯಿ ಬೆಕ್ಕುಗಳಿಗೂ ಚುಂಚಸಾಕ ಚಾಲು ಆತೂ.
ಜವಾರಿ ಆಕಳಿಗೆ ಜಸರ್ಿ ಹೊರಿಯ ವಿರ್ಯ ತುಂಬಿದ ಇಂಜಕ್ಷನ್ಗೆ ಒಮ್ಮಿಂದೊಮ್ಮೆಲೆ ಬೆಲೆ ಬಂದಿತು, ಮಣಕ ಮಣಕ ಗಿಡ್ಡ ಆಕಳಿಗೆಲ್ಲ ಗೊಡ್ಡ ಬಿದ್ದ ಹೊಂಟಾವು ಅವಕ್ಕ ಜಸರ್ಿ ಇಂಜಕ್ಷನ್ ಮಾಡಿದ್ರ ಹುಟ್ಟುವ ಕರು ಪಸಂದ ಇರತೈತಿ ಬಕಿಟ ತುಂಬಾ ಹಾಲು ಹಿಂಡತೈತಿ. ಬ್ಯಾರೆ ದೇಶದಾಗ ಈ ಆಕಳದ ಹಾಲು ಕುಡಿತಾರ, ಅದಕ್ಕ ಅವ್ರು ದಷ್ಟ ಪುಷ್ಟ ಕೆಂಪಗ ಇರತಾರ, ಈ ವಿಷಯಗಳೆಲ್ಲ ತೇಲಾಡಾಕ ಆರಂಭವಾದ ಮ್ಯಾಲ ಬೆದಗಿ ಬಂದ ಆಕಳಗಳ ಹಿಂಡು ದನದ ದವಾಖಾನಿಯೊಳಗ ಶಗಣಿ ಹಾಕಾಕ ಹತ್ತಿಕೊಂಡವು.
ದನದ ಡಾಕ್ಟರು ಊರಿನ ರೈತರಿಗೆಲ್ಲ ಸಾಹೇಬರಾಗಿ ರೈತರು ಸಾಕಿದ ದನಗಳಿಗೆ ವಂಶಾಬಿವ್ರದ್ದಿ ದಯಪಾಲಿಸುವ ಬ್ರಹ್ಮದೇವರಾದ್ರು.
ತಂಗೆವ್ವ ಹೊಟಬ್ಯಾನಿ ಹಚಗೊಂಡಳು ಮಗಗ ಮದುವಿ ಮಾಡಿ ಮೂರು ವರ್ಷದ ಮ್ಯಾಲಾತು ಸೊಸೆ ಮುಖದಾಗ ಕಳೆ ಬರಲಿಲ್ಲ, ಊರಮಂದಿ ಮುಂದ ಸಡಗರದಿಂದ ಊಟ ಹಾಕಿಸ ಬೆಕಂತ ಮಾಡಿದ್ದ ಆಕೆಯ ಆಕಲು ಕೈ ಕೊಟ್ಟಿತ್ತು, ಮೊದ ಮೊದಲು ಸೊಸೆಯ ಹಂಗಿಸಿ ಮಾತನಾಡಿದಳು. “ನಾ ಸಾಯುವದ್ರಳೊಗ ಮೊಮ್ಮಗನ ಮುಖ ಕಾಣುವುದಿಲ್ಲ, ತವರ ಮನಿಯಂತ ಗುಂಡಕಲ್ಲತಂದು ತನ್ನ ಮಗಗ ಕಟ್ಟಿದಂಗ ಆತು” ಅತ್ತ್ತಿಯ ಸೆಡವಕ್ಕೆ ಹಂಗಿನ ಮಾತಿಗೆ ಕಾಶವ್ವ ಬಿಕ್ಕಿ ಬಿಕ್ಕಿ ಅಳತೊಡಗಿದಳು.
ಸಿಕ್ಕಿ ಸಿಕ್ಕಿ ದೇವರಿಗೆಲ್ಲಾ ಕೈಮುಗಿದು, ಹರಕಿಹೊತ್ತು ದಿಡ ನಮಸ್ಕರ ಹಾಕಿದಳು ತನ್ನ ಗೆಳತಿಯರೆಲ್ಲಾ ಬಾಣೆಂತನಕ್ಕಂತ ತವರ ಮನೆ ಕಡೆ ಬಂದಾಗ ಅವರ ಕೊಸ ನೋಡಿ ಮುಸು ಮುಸು ಅಳುತ್ತ ತನ್ನ ಹಣೆಬರಾ ನೆನೆದು ದೇವರಿಗೆ ಹಿಡಿ ಶಾಪ ಹಾಕಿದಳು. ಆಕೇ ದೇವರಿಗೆ ಬೈದದ್ದಬಂತು ಈಕೆ ಹೋಟ್ಟೆ ಮುಂದ ಬರಲಿಲ್ಲ ಇದ ಚಿಂತ್ಯಾಗ ತಂಗೆವ್ವ ಸೊರಗಿ ಸೊರಗಿ ಕಣ್ಣ ಮುಚ್ಚಿದಳು.
-*-*-*-*-*-**-*
ಅವ್ವ ಸತ್ತ ಮ್ಯಾಲ ಹನುಮಂತನ ನಶೀಬನೂ ಕೈ ಕೊಡಾಕ ಪ್ರಾರಂಭಿಸೀ ಮಸ್ತ ಪಸಂದಾಗಿ ಬೆಳಿಸಿದ್ದ ಹೋರಿ ಇತ್ತಿತ್ತಲಾಗ ಯಾಕೋ ತೇಕಾಕ ಪ್ರಾರಂಭಿಸಿತು ಸೋತು ಆಕಳ ಮ್ಯಾಲ ಎರಬೇಕೆಂದ್ರ ಅತ್ತಾಗ ಅತ್ತಾಗ ಇತ್ತಾಗ ಹೊಡಿದು ಬಡಿದು ಹತ್ತಿಸ ಬೇಕಿತ್ತು ಹಾರಿ ಹಾರಿ ಮ್ಯಾಲಕೇಳುತ್ತಿದ್ದ ಅದರ ಕಾಲುಗಳು ಮಡಚಿ ಬಿಳತೊಡಗಿದೇ ತುರಿಸಿ ಬೆದರಿಸಿ ಚಪ್ಪರಿಸಿದಾಗತೊಮ್ಮೆ ತಿಣಕಾಡಿ ಆಕಳನ್ನ ನೆಕ್ಯಾಕ ಶುರು ಮಾಡುತಿತ್ತು.
ದನದ ದವಾಖಾಣೆಯೊಳಗ ಕೃತಕ ಗರ್ಭಧಾರಣೆ ಮಾಡಸಿದ್ರ ಯಾವ ತ್ರಾಸು ಆಗುವುದಿಲ್ಲಾ ಗರ್ಭಕಟ್ಟುವುದು ಗ್ಯಾರಂಟಿ. ಡಾಕ್ಟರ್ ಭಾಳ ಛಲೋ ಅದಾರ ಅಂತೇಳಿ ದನಗಳ ಹಿಂಡು ಆಕಡೆ ಮುಖಮಾಡಿತ್ತು ಇತ್ತಿತ್ತಲಾಗಿ ಹನುಮಂತ ಹೋರಿ ಹಿಡಕೋಂಡ ಧನ ಇದ್ದವರ ಮನೆಗೆ ಹೊಗಿ ನಿಮ್ಮ ಆಕಳ ಎನಾದ್ರು ಬೆದಿಗ ಬಂದೈತೇನು”ಹುಚ್ಚರಂಗ ಅಡ್ಡಾಡಲಿಕ್ಕೆ ಛಾಲು ಮಾಡಿದ.
ಕಾಶವ್ವನ ಕಿವಿಯೊಳಗ ಮಗ್ಗಲ ಮನಿಯೊಳಗ ಶಾಲೆ ಕಲಿತ ಇಂದ್ರವ್ವ ನಶೀಬು ತೆರೆಯುವ ಮಾತು ಹೇಳಿದ್ದಳು. ಮುಂಜಾನೆ ಎಂಟರ ಬಸ್ಸಿಗೆ ಹುಬ್ಬಳ್ಳಿಗೆ ಬಂದ ಕಾಶವ್ವ ಕೆ,ಎಂ,ಸಿ ದವಾಖಾಣೆಯೊಳಗಿನ ಬೆಡ್ ಮ್ಯಾಲ ಮಲಗಿದಳು. ಡಾಕ್ಟರ್ ಕಡೆ ಓಡಾಡಿ, ರಕ್ತಾನ, ಕಾಲಮುಡಿನ ಪರೀಕ್ಷೆ ಮಾಡಿಸಿ ಖಷಿ ಖಷಿಯಿಂದ ಮನೆದಾರಿ ಹಿಡಿದಳು.
ಕಲ್ಲಿನ ವಾರಿಮ್ಯಾಲ ಹೋರಿ ಮೇಯಿಸಿಕೊಂಡು ಸುಸ್ತು ಆಗಿ ಮನೆಗೆ ಬಂದ ಹನುಮಂತ “ಅವರವ್ವರ,ಹೋರಿ ಹಾರಸದ ಬರೇ ಇಂಜಕ್ಷನ್ ಮ್ಯಾಲ ಕರ ಹುಟ್ಟಸತ್ತಾರಂತ ಎಲ್ಲರಿಗೂ ಹುಚ್ಚ ಹಿಡದೈತಿ ,ಇಂಜಕ್ಷನಿಗೇನು ಜವಾರಿ ಕರ ಆಗತೈತಿ . ಚಿಪ್ಪಾಡಿ ದಂಟಿನಂತ ಕರಕ್ಕ ದವಾಖಾನಿ ಬಾಗಿಲ ಬಡ್ಯಾಕತ್ತಾರ “ಕುಂಡಿ ಊರಿ ಪಡಸಾಲಿಯೊಳಗ ಕುಂತ,
ಕಾಶವ್ವನ ಮುಖ ಕೆಂಪಗಾಗಿತ್ತು.
“ನಾನು ದವಾಖಾನೆಗೆ ಹೊಗಿದ್ದೆ”
“ಎನ ಅಂದ್ರೂ ಡಾಕ್ಟರು”
ನನ್ನ ಕಡೆ ಸೂಜಿಯಷ್ಟು ದೋಷ ಇಲ್ಲಂತ”. ಹನುಮಂತನ ಮುಖ ಕಪ್ಪಗಾಯಿತು. ಹಲ್ಲು ಕಡಿದು ಹೆಂಡತಿಯ ಕಡೆ ನೋಡಿದ ಸಿಟ್ಟು ತಡೆಯಲಿಕ್ಕಾಗದೇ ಗೋಡೆಗೆ ಹಣೆ ಚೆಚ್ಚಿಕೊಂಡು ಅಳತೊಡಗಿದ.
ಆಕೀ ಅವನ ಗಂಡಸ್ತನದ ಬಗ್ಗೆ ಮಾತನಾಡಕತ್ತಾಳು ಅಂದಕೊಂಡ
“ಅಂದ್ರ ನನ್ನ ಕಡೇ ದೋಷ ಐತೇನು”
ಗಲ್ಲ ಊಬ್ಬಿಸಿ ಊರಿಗಣ್ಣಿನಿಂದ ಕೆಕ್ಕರಿಸಿದ ಕಾಶವ್ವಾ ನೇಲಕ್ಕ ಅಂಗೈ ಬಡಿಯುತ್ತ ಚೀರತೊಡಗಿದಳು.
“ಮೂರ ಹೊತ್ತ ಹೋರಿ ಹಾರಸಕ್ಕೊಂತ ಹೋಗಾಂವ ನೀನು , ನೀನಗೆಲ್ಲಿ ಖಬರ ಐತಿ. ಹೆಣ್ಣ ಮಕ್ಕಳ ಸಂಕಟ ನೀನಗೇನ ಗೊತ್ತ, ಹೋದವರು, ಬಂದವರು ನನ್ನ ಗೊಡ್ಡ ಎಮ್ಮಿ ಅನ್ನುವಾಗ ನೀನ್ನ ಗಂಡಸತನದ ಬಗ್ಗೆ ಹೇಳಿದ್ರ ಛಲೋ ಇತ್ತ”.
ಹನಮಂತಗ ದಿಕ್ಕ ತೋಚದಂಗ ಆತು ಹಣೆಿ ಮ್ಯಾಲಿನ ನರ ಊಬ್ಬಿ ನಿಂತವು. “ನಮ್ಮ ನಶೀಬದಾಗ ಇದ್ದಂಗ ಆಗಲೀ ಬಿಡು,” ಕಾಶವ್ವನ ರಂಬಸಾಕ ನೋಡಿದ.
“ನನ್ನ ನಶೀಬಕ್ಕೇನು, ದೆವ್ವ ಬಡಿದಿಲ್ಲ, ನನಗ ಮಕ್ಕಳು ಬೇಕು ಅಂದ್ರ ಬೇಕು ಇಲ್ಲಿದಿದ್ರ ನಾನು ಕೇರಿನೋ ಬಾವಿನೋ ನೋಡಕೊತಿನಿ, ಈ ಮಂದಿ ಬ್ಯಾಯಾಗ ಸಿಕ್ಕ ಪ್ಲಾಸ್ಟಿಕ್ ಚರಿಗಿ ಆಗೇನಿ”
“ಹುಚ್ಚ ಹಿಡದೈತೇನ ನಿನಗ ಮಕ್ಕಳ ಅಂದ್ರ ಅಂಗಡಿಯೊಳಗಿನ ಗೊಂಬೆಯೇನ ತಂದ ಕೊಡಾಕ”
“ನಿನೇನು ತಂದ ಕೊಡಬ್ಯಾಡ, ಒಂದಿಷ್ಟು ರೊಕ್ಕ ಕೊಡ ಸಾಕ” ಅಂದ್ರ
“ಮಕ್ಕಳ ಮಾಡುವ ಇಂಜಕ್ಷನ್ ಬಂದೈತಿ. ಅದನ್ನು ಚುಂಚಿಸಕೊಂಡ್ರ ಮಕ್ಕಳ ಆಗತಾವಂತ, ನೀ ಎನ ಮಾಡತಿಯೋ ಗೊತ್ತಿಲ್ಲ, ನನಗ ಮಕ್ಕಳ ಆಗೂ ಇಂಜಕ್ಷನ್ ಮಾಡಸು, ಡಾಕ್ಟರ್ ಜೋಡಿ ನಾ ಎಲ್ಲ ಮಾತನಾಡಿ ಬಂದೇನಿ”
ಕಾಶವ್ವ ತನ್ನ ಎದಿಯೊಳಗಿನ ಕಪಾನೆಲ್ಲಾ ಕ್ಯಾಕರಿಸಿ ಉಗಿದಳು.
ಕಬರಗೆಟ್ಟು ಮ್ಯಾಲಕ್ಕೆದ್ದ ಹನಮಂತ, ಹಕ್ಯಾಗಿನ ಹೋರಿ ಹತ್ರ ಬಂದ ನಿಂತ, ಇವನನ್ನ ದಿಟ್ಟಿಸಿ ನೋಡಿದ ಹೋರಿ ತಲೆ ಕೆಳಗ ಮಾಡಿ ಹೂಂಕರಿಸಿತು. ಅದರ ಮೈ ಮ್ಯಾಲ ತುರಿಸಿದಂಗ ಮಾಡಿದ, ಇಂವ ಹಗರಕ ಬುಡಕ್ಕ ಕೈ ಹಾಕಿ ಹೋರಿಯ ಜೋತು ಬಿದ್ದಿದ್ದ ಥಡ್ಡಬೀಜ ಹಿಚಕತೊಡಗಿದ.
 

‍ಲೇಖಕರು G

13 November, 2014

2 Comments

  1. tirupati bhangi

    KATE CHANNAGIDE

  2. Anonymous

    good story
    B.Kambar

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading