ಆಧುನಿಕನೊಬ್ಬನ ಅದ್ವೈತ ಯಾತ್ರೆ

ಆರ್.ಡಿ. ಹೆಗಡೆ ಆಲ್ಮನೆ

ಶಂಕರ ವಿಹಾರ (ಆಧುನಿಕನೊಬ್ಬನ ಅದ್ವೈತ ಯಾತ್ರೆ)

ಲೇ: ಅಕ್ಷರ ಕೆ.ವಿ.

ಪ್ರಥಮ ಮುದ್ರಣ: ೨೦೧೯, ಪುಟಗಳು ೧೮೪,

ಬೆಲೆ ರೂ. ೧೮೦-೦೦,

ಅಕ್ಷರ ಪ್ರಕಾಶನ ಹೆಗ್ಗೋಡು, ಸಾಗರ, ಕರ್ನಾಟಕ

 

ಆಧುನಿಕಪೂರ್ವ ಭಾರತದಲ್ಲಿ ನಡೆದ ಬೌದ್ಧಿಕ ಚಟುವಟಿಕೆ ಕನ್ನಡದಲ್ಲಿ ಕ್ವಚಿತ್ತಾಗಿಯಷ್ಟೆ ಪ್ರಸ್ತಾಪಗೊಳ್ಳುತ್ತಿರುವಾಗ ಅದನ್ನೇ ಪ್ರಧಾನವಾಗಿ ಇಟ್ಟುಕೊಂಡು ಅದರ ಒಂದಷ್ಟು ಆಯಾಮಗಳ ಪರಿಚಯ ಮಾಡಿಕೊಡುತ್ತಿರುವ ಶಂಕರ ವಿಹಾರ ಕನ್ನಡದಲ್ಲಿ ಅಗತ್ಯವೆನಿಸಿದ್ದ ಕೃತಿ. ಇಲ್ಲಿ ಕೂಡ, ಭಾರತೀಯ ತತ್ವಶಾಸ್ತ್ರಗಳ ನಡುವಿನ ವಾಗ್ವಾದಗಳಿಗೆ ಆದಿಶಂಕರರು ಚಿಮ್ಮುಮಣೆಯಾಗಿ ಚಾಲನೆ ನೀಡಿದ  ಚಿಂತನೆಗಳಿಗೆ ಪ್ರಾಶಸ್ತ್ಯ ಕೊಟ್ಟು ಈ ಕೃತಿ ಬಂದಿದ್ದು, ಇದೀಗ ಮತ್ತೊಮ್ಮೆ ಒಂದಷ್ಟು ಸಂವಾದಗಳಿಗೆ  ಸಂದರ್ಭ ಒದಗಿಸೀತು. ಶಂಕರ ವಿಹಾರದಲ್ಲಿ ಹತ್ತು ಅಧ್ಯಾಯಗಳಿವೆ. ಆದರೆ  ಲೇಖಕರೇ ಹೇಳುವಂತೆ, ಇದು ಶಂಕರರ ಚಿಂತನೆಗಳ ಸಮಗ್ರ ಅವಲೋಕನವಲ್ಲ, ಇದೊಂದು “ಮಾನಸಿಕ ಪ್ರವಾಸಕಥನ” (ಪು ೧೭). ಆದ್ದರಿಂದ “ ಈ ಕಥನವು ಶಂಕರಾದ್ವೈತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವರಿಗಾಗಲೀ ಮಾಡಬಯಸುವವರಿಗಾಗಲೀ ಉಪಯುಕ್ತವಲ್ಲ” (ಪು ೧೪). ಆದರೆ ಈ ಕೃತಿಯಿಂದ ನಮಗೆ  ಬೇರೆ ಬೇರೆ ದರ್ಶನಗಳಿಗೆ  ನಿಮಿತ್ತವಾಗುವ ಹಲವು ತಾತ್ವಿಕ ಪ್ರಶ್ನೆಗಳ ಪರಿಚಯವಾಗುತ್ತದೆ; ಇದು ನಮಗೆ ಈ ಓದಿನಿಂದ ಸಿಗುವ  ದೊಡ್ಡ ಪ್ರಯೋಜನ.

ಮೊದಲನೆಯ ಅಧ್ಯಾಯ ‘ಶಂಕರಪ್ರವಾಸ’ದಲ್ಲಿ ಲೇಖಕರು  ಈ ಕೃತಿಯ ಉದ್ದೇಶ ಮತ್ತು ಮಿತಿಗಳನ್ನು ಹೇಳಿಕೊಳ್ಳುತ್ತಾರೆ. ಆದಿಶಂಕರರನ್ನು ಕುರಿತು ಇಂದು ಹಲವಾರು ಅಪಚಿತ್ರಗಳಿವೆ; ಅವುಗಳ ಪ್ರಸ್ತಾಪದೊಡನೆ ಎರಡನೆಯ ಅಧ್ಯಾಯ ‘ಶಂಕರವಿಕಲ್ಪ’ ದಲ್ಲಿ ಶಂಕರರ ಕುರಿತು ಚಾಲ್ತಿಯಲ್ಲಿರುವ ಚಿತ್ರಣಗಳ ನಡುವಿನ ವಿರೋಧಾಭಾಸಗಳನ್ನು ಗುರುತಿಸಲಾಗುತ್ತದೆ. ಮೂರನೆಯ ಅಧ್ಯಾಯ ‘ಶಂಕರ ವಿಚಾರ’ ಶಂಕರರ ಚಿಂತನೆಗಳ ಸಾರಾಸಾರಗಳ ವಿವೇಚನೆ. ಅವರದೆನ್ನಲಾಗುವ ಚಿಂತನೆಗಳಲ್ಲಿ ವೈಚಾರಿಕತೆ ಮತ್ತು ನಂಬಿಕೆಗಳನ್ನು ಈ ಭಾಗ ಪರೀಕ್ಷಿಸಲು ಯತ್ನಿಸುತ್ತದೆ. ಆಗ ಕಂಡ ಹೊಳಹುಗಳನ್ನೂ ಒಳಗೊಂಡ ಅಧ್ಯಾಯ ಇದು. ಮುಂದಿನ ಅಧ್ಯಾಯದಲ್ಲಿ ಶಂಕರ ಪ್ರತಿಪಾದಿತ ಅದ್ವೈತದ ಕೆಲವು ಮುಖ್ಯ ತತ್ವಗಳಿಗೂ ಬೇರೆ ಬೇರೆ ದರ್ಶನಗಳ ತಾತ್ವಿಕ ನೆಲೆಗಳಿಗೂ ಇರುವ ಸಾದೃಶ್ಯ-ವೈದೃಶ್ಯಗಳ ಅವಲೋಕನವಿದೆ.  ಇದು ಶಂಕರದರ್ಶನ ಎನ್ನುವ ನಾಲ್ಕನೆಯ ಅಧ್ಯಾಯ. ಶಂಕರದರ್ಶನವು ಹಾಕಿ ಕೊಟ್ಟ ಭದ್ರ ಬುನಾದಿಯ ಮೇಲೆ ಅಖಂಡವಾದ ಅದ್ವೈತದರ್ಶನ ನಿಂತಿರುವುದರಿಂದ ಇದೂ ಒಂದು ಮಹತ್ವವಾದ ಅಧ್ಯಾಯ ಇಲ್ಲಿ. ಮುಂದಿನ ಶಂಕರವಿಧಾನ ಎನ್ನುವ ಅಧ್ಯಾಯವೂ ಮಹತ್ವದ್ದೇ. ಇದರಲ್ಲಿ  ಶಂಕರರ ತಾರ್ಕಿಕ ವಿಧಾನದ ಅಸಮಗ್ರವಾದರೂ ಉಪಯುಕ್ತ ಎಂದು ತಿಳಿಯಬಹುದಾದ ಮಾಹಿತಿ ಸಿಗುತ್ತದೆ. ಮುಂದಿನ ಅಧ್ಯಾಯ ಶಂಕರ ಸಂಬಂಧ. (ಪುಟ ೧೪ರಲ್ಲಿ ಈ ಅಧ್ಯಾಯವನ್ನು ಬಹುಶಃ ತಪ್ಪಾಗಿ ಶಂಕರ ಸಂವಾದ ಎಂದು ಹೆಸರಿಸಲಾಗಿದೆ!) ಈ ಅಧ್ಯಾಯದಲ್ಲಿ ಎರಡು ಮುಖ್ಯ ಸಂಗತಿಗಳ ಅವಲೋಕನವಿದೆ. ಒಂದು, ಅದ್ವೈತಕ್ಕೂ ಇತರ ದರ್ಶನಗಳಿಗೂ ಇದ್ದ ಕೊಡುಕೊಳ್ಳುವ ಸಂಬಂಧ; ಮತ್ತೊಂದು,  ದರ್ಶನವೊಂದು ಧಾರ್ಮಿಕ ನಂಬುಗೆಯಾಗಿ ಮತ್ತು ಸಾಧನೆಯ ಮಾರ್ಗವಾಗಿ ಕ್ರಿಯೆಗೆ ತೊಡಗುವ ವಿಭಿನ್ನ ದಾರಿಗಳು. ಮುಂದಿನ ಶಂಕರ ಅನ್ವಯ ಎನ್ನುವ ಅಧ್ಯಾಯದ ಸ್ವಾರಸ್ಯವೆಂದರೆ ಇಲ್ಲಿ ಲೇಖಕರು ಕಾವ್ಯಮೀಮಾಂಸೆಗೂ ಗ್ರಾಹ್ಯವೆನಿಸಿದ ಶಾಂಕರದರ್ಶನದ ಅಂಶಗಳತ್ತ ಗಮನ ಸೆಳೆಯುತ್ತಾರೆ. ಈ ಬಗೆಯ ಅಧ್ಯಯನದಿಂದ ನಮ್ಮಲ್ಲಿ ಹೊಸ ಆಲೋಚನೆಗಳು  ಹುಟ್ಟಿಕೊಳ್ಳುವ ನಿರೀಕ್ಷೆ ಮಾಡಬಹುದು. ಮುಂದಿನ ಮೂರು ಅಧ್ಯಾಯಗಳು ಶಂಕರ ಸಮಾಜ, ಶಂಕರ ಚರಿತೆ ಮತ್ತು ಶಂಕರ ಸಂಧಾನ. ಇವು  ಶಂಕರರ ಚಿಂತನೆಗಳನ್ನು ಇಡಿಯಾಗಿ ಅಥವಾ ಭಾಗಶಃ ಇಂದಿಗೂ ಒಪ್ಪಿತಗೊಳಸುವ ಸ್ಪಷ್ಟ ಆಶಯಗಳಿರುವ ಚಿಂತನೆಗಳು. ಲೇಖಕರು ಅತಿ ಹೆಚ್ಚು ರಿಸ್ಕ್ ತೆಗೆದುಕೊಂಡದ್ದು ಈ  ಮೂರು ಅಧ್ಯಾಯಗಳಲ್ಲಿ. ಆದರೆ ಶಂಕರರು ಕಾರಣರಾಗಿ ಮುಂದಿನ ಸುಮಾರು ಮೂರು ಶತಮಾನಗಳ ಕಾಲ ಈ ದೇಶದ ಧಾರ್ಮಿಕ ವಲಯದಲ್ಲಿ ಮೆರೆದ ಶಿವಪಾರಮ್ಯವನ್ನು ಈ ಮೂರು ಅಧ್ಯಾಯಗಳಲ್ಲಿ ಒಮ್ಮೆಯಾದರೂ ಲೇಖಕರು ಪ್ರಸ್ತಾಪಿಸಬಹುದಿತ್ತು.

ಶಂಕರ ವಿಹಾರ ಆಧುನಿಕರಾದ ನಾವು ಮರೆತು ಸ್ವಸ್ಥಚಿತ್ತರಾಗಿಬಿಟ್ಟಿರುವ ಒಂದು ಮಹತ್ವದ ಅಧ್ಯಯನದತ್ತ ಕುತೂಹಲವನ್ನು ಹುಟ್ಟಿಸಬಲ್ಲ ಕೃತಿ. ಇಷ್ಟರಲ್ಲಾಗಲೇ ಪ್ರಾಜ್ಞ ಓದುಗರಿಂದ ಮೆಚ್ಚಿಗೆ ಪಡೆದ ಶಂಕರ ವಿಹಾರ ಲೇಖಕರು ಶಂಕರಾದ್ವೈತದ ಮೇಲೆ ಕೊಡುವ ಒತ್ತಿನಿಂದಾಗಿ ಎಷ್ಟು ವ್ಯಾಪಕವಾಗಿ ಸ್ವಾಗತ ಪಡೆಯಬಹುದು ಎನ್ನುವ ಕುತೂಹಲದ ಪ್ರಶ್ನೆಯೂ ಉದ್ಭವಿಸುತ್ತದೆ. ಅಂತಹ ಪ್ರಶ್ನೆಗಳಿರುವಾಗ ಕೂಡ ಇದರ ನಾಲ್ಕು ಅಧ್ಯಾಯಗಳು -ಶಂಕರ ವಿಚಾರ-ಶಂಕರ ದರ್ಶನ- ಶಂಕರ ವಿಧಾನ-ಶಂಕರ ಸಂಬಂಧ-ಇವು ಈ ದರ್ಶನವನ್ನು ಕನ್ನಡದಲ್ಲಿಯೇ ಓದಬೇಕಾದ ಅಸಹಾಯಕರಿಗೆ ನಿಸ್ಸಂದೇಹವಾಗಿ ಉಪಯುಕ್ತವಾಗಬಲ್ಲವು.

ಕೃತಿಯ ಕೊನೆಯಲ್ಲಿರುವ ದೀರ್ಘವಾದ ಅನುಬಂಧದ ಶೀರ್ಷಿಕೆ ‘ಶಂಕರ ಉಲ್ಲೇಖ’. ಇದು ಆಕರಗ್ರಂಥಗಳ ಪಟ್ಟಿ.‌ ಹೆಚ್ಚಿನ ಆಸಕ್ತಿಯಿರುವ ಓದುಗರು ಈ ಗ್ರಂಥಗಳ ನೆರವನ್ನೂ ಪಡೆಯಬಹುದು. ಒಳಪುಟಗಳಲ್ಲಿ ಕಲಾವಿದ ಇಕ್ಬಾಲ್ ಅಹ್ಮದ್ ಬರೆದ ನೂರಾರು ರೇಖಾಚಿತ್ರಗಳಿದ್ದು ಇವುಗಳ ಸಂಕೇತಗಳನ್ನು ತಿಳಿಯಲು ಒಂದಷ್ಟು ತಜ್ಞತೆ ಬೇಕಾಗಬಹುದು. ಲೇಖಕ ಅಕ್ಷರ ಕೆ.ವಿ.ಯವರು ಸಾಹಿತ್ಯ ಮತ್ತು ಸಂಸ್ಕೃತಿಯ ಹಲವು ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದರಿಂದ ಈ ಅಧ್ಯಯನಕ್ಕೆ ಸರ್ವತೋಭದ್ರವಾದ ಒಂದು ಸ್ಪಷ್ಟತೆ ಬಂದಿದೆ. ಕೆಲವು ಸಂದರ್ಭಗಳಲ್ಲಿ (ಉದಾಹರಣೆಗೆ “ಯಕ್ಷಗಾನದಂಥ ಅಭಿಜಾತ ಮೂಲದ ಕಲೆಗಳು ನಮ್ಮನ್ನು ಅದ್ವೈತ ಸೂಚಿತವಾದ ಸ್ಥಿತಪ್ರಜ್ಞ ವೀಕ್ಷಣಾನುಭವವೊಂದಕ್ಕೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿವೆಯಲ್ಲವೆ? ಪು.೧೧೯) ಲೇಖಕರು ನಮಗೆ ಅಸಮ್ಮತಿಯೊಡನೆ ಸಂವಾದವನ್ನು  ಮುಂದಕ್ಕೆ ನಡೆಸುವ ಅವಕಾಶವನ್ನೂ ನೀಡುತ್ತಾರೆ.  ಲೇಖಕರು ಅಲ್ಲಲ್ಲಿ ಪಾಶ್ಚಿಮಾತ್ಯ ತತ್ವಶಾಸ್ತ್ರಗಳಿಂದ ಸಂವಾದಿ ಚಿಂತನೆಗಳನ್ನು ನೆನಪಿಸುವುದು ಭಾರತೀಯ ಚಿಂತನೆಗಳ ವಿಭಿನ್ನ ನೆಲೆಯನ್ನು ತೋರಿಸುವುದಕ್ಕೆ. ಇಂತಹ ಸಾಮ್ಯ-ವೈಷಮ್ಯಗಳ  ವೀಕ್ಷಣೆಯಿಂದ ಚಿಂತನೆಗಳ ಪ್ರತ್ಯೇಕತೆಯನ್ನೂ ಉಪಯುಕ್ತತೆಯನ್ನೂ ಸುಲಭವಾಗಿ ಗ್ರಹಿಸಬಹುದಾಗಿದೆ.

ಈ ಪುಸ್ತಕಕ್ಕೆ ಬರೆದ ಬೆನ್ನುಡಿಯಲ್ಲಿ ಸುಂದರ್ ಸರುಕ್ಕೈ ಹೀಗೆ ಹೇಳುತ್ತಾರೆ: “ಇದೊಂದು ಅಪರೂಪದ ಶಂಕರ ಪ್ರವೇಶಿಕೆ. ಶಂಕರಾಚಾರ್ಯರನ್ನು ಅವರ ತತ್ವ, ಸಿದ್ಧಾಂತಗಳ ಸೀಮಿತ ಆವರಣದಿಂದ ಮೇಲೆತ್ತಿ ಸಮಕಾಲೀನ ಕಾಳಜಿಗಳ ಜತೆಗಿನ ಸಂವಾದದಲ್ಲಿ ಪರಿಚಯಿಸಲು ಹೊರಟಿರುವ ಮಹತ್ವಾಕಾಂಕ್ಷೆ ಈ ಕೃತಿಯ ಹಿನ್ನೆಲೆಯಲ್ಲಿದೆ. …… ಶಂಕರಲೋಕದಲ್ಲಿ ವಿಹರಿಸುತ್ತ ಅದು ನಮ್ಮನ್ನು ಆ ದಾರ್ಶನಿಕತೆಯ ಆದಿಯಿಂದ ಮೊದಲುಗೊಂಡು ಅದ್ವೈತಸಿದ್ಧಾಂತದ ಪ್ರಧಾನ ಪರಿಕಲ್ಪನೆಗಳ ವಲಯಗಳಲ್ಲಿ ಓಡಾಡಿಸುತ್ತ ಶಂಕರರ ಸಾಮಾಜಿಕ ನಿಲುವುಗಳ ವರೆಗೂ ಕರೆದೊಯ್ಯುತ್ತದೆ. … ಫಿಲಾಸಫಿ ಪುಸ್ತಕಗಳ ಸಿದ್ಧ ಮಾದರಿಯನ್ನು ಈ ಪುಸ್ತಕವು ತನ್ನ ಚತುರ ಗದ್ಯಶೈಲಿಯಿಂದ ಒಡೆಯುತ್ತದೆ; ……… ಈ ಬರಹವು ಸಾರ್ವಜನಿಕವಾಗಿ ಇವತ್ತು ನಾವು ದಾರ್ಶನಿಕ ಜಿಜ್ಞಾಸೆಗಳನ್ನು ಹೇಗೆ ನಡೆಸಬಹುದೆಂಬುದಕ್ಕೆ ಒಳ್ಳೆಯ ದೃಷ್ಟಾಂತ ಎಂಬಂತಿದೆ.”

‍ಲೇಖಕರು avadhi

October 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: