ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಆದರ ನನ್ನ ಮಗಾ ಹೇಗಿರಬಹುದು….’ – ಪ್ರತಿಭಾ ಕಾಗೆ ಬರೀತಾರೆ


ಡಾ ಪ್ರತೀಭಾ ಕಾಗೆ

ಜೀವನ ಅನ್ನುವದು ಒಂದು ಚದುರಂಗದಾಟವಿದ್ದಂತೆ, ಯಾವಾಗ ಸೋಲು ಯಾವಾಗ ಗೆಲುವು ಯಾರಿಗೂ ಗೊತ್ತಿರದ ಸಂಗತಿ. ಹಾಗೆಯೇ ಸುಖ, ದುಃಖ ಕೂಡ ಒಂದು ಮಾತು ಹೇಳಬೇಕೆಂದರೆ ಸುಖ ಅನ್ನುವದು ದುಃಖ ಆಗಿ ಬದಲಿಸುವದು ಗೊತ್ತಾಗದೆ ಇರುವ ಹಾಗೆ ಘಟಿಸುವಂತಹದು. ನನಗೆ ಗೊತ್ತಿರುವ, ನಮ್ಮ ಮನೆಯ ಹತ್ತಿರದವರೇ ಆಗಿರುವ ಒಬ್ಬರು ತುಂಬಾ ಇಷ್ಟಪಟ್ಟು ತಮ್ಮ ಕನಸಿನ ಮನೆಯನ್ನು ಕಟ್ಟಿಕೊಂಡರು.  ಒಂದು ಮನೆ ಆಗಬೇಕಾದರೆ ಎಷ್ಟು ಕಷ್ಟ ಎನ್ನುವದು ತಮಗೆ ಗೊತ್ತಿರುವ ಸಂಗತಿ. ಮನೆ ಕಟ್ಟಿಸುವದು, ಅದಕ್ಕಾಗಿ ಕಷ್ಟ ಪಡುವದು ಅದರಲ್ಲೆನೂ ಮಹಾ ಅಂತ ನೀವು ಅನ್ನಬಹುದು. ಆದರೆ ಕಷ್ಟಪಟ್ಟು ಮನೆ ಕಟ್ಟಿಸಿದ ಮೇಲೆ ಅದರಲ್ಲಿ ನೆಮ್ಮದಿಯಿಂದ ಬದುಕುವದು ಅಷ್ಟೆ ಮುಖ್ಯ ಆಗಿರುತ್ತದೆ. ನೆಮ್ಮದಿನೆ ಇಲ್ಲ ಅಂದ ಮೇಲೆ ಆಇಟ್ಟಿಗೆ, ಸಿಮೆಂಟುಗಳಿಂದ ಕಟ್ಟಿದ ಕಟ್ಟಡಕ್ಕೆ ಏನಾದರೂ ಬೆಲೆ ಇರುವದಾ ?
ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣ ಅಂದರೆ ಅವರು ಕಟ್ಟಿಸಿದ ಮನೆ ಅವರನ್ನೆ ತಿನ್ನಲು ಬಂದಂತೆ ಭಾಸವಾಗುತ್ತಿದೆ. ಇಷ್ಟಪಟ್ಟು ತಮಗೆ ಅನುಕೂಲಕ್ಕೆ ತಕ್ಕನಾಗಿ ಮನೆ ಕಟ್ಟಿಸಿದರು.ಅಷ್ಟೆ ಸಂತೋಷದಿಂದ ಗೃಹಶಾಂತಿ ಕೂಡ ಮಾಡಿಸಿದರು. ಗೃಹಶಾಂತಿ ಮಾಡಿದ ಮರುದಿನದಿಂದಲೇ ಅಲ್ಲಿ ವಾಸಿಸಲು ಬಂದರು.ಅವರಿಗೆ ಇಬ್ಬರು ಜನ ಮಕ್ಕಳು ಒಂದು ಗಂಡು, ಒಂದು ಹೆಣ್ಣು, ಹೆಣ್ಣುಮಗಳು ದೊಡ್ಡವಳು ಮಗ ಅವಳಿಗಿಂತ ಕಿರಿಯವನಾಗಿದ್ದ. ಸುಖವಾದ ಸಂಸಾರ ಎನ್ನಬಹುದು. ಯಾವುದೆ ತೊಂದರೆ ಇಲ್ಲದ ಅನುಕೂಲಸ್ಥ ಕುಟುಂಬ, ಆದರೆ ಗೃಹಶಾಂತಿ ಆಗಿ ವಾಸಿಸಲು ಬಂದ ಸ್ವಲ್ಪ ದಿನದಲ್ಲಿಯೇ, ಒಂದು ಮುಂಜಾನೆ ಮಲಗಿದ ಮಗನನ್ನು ಎಬ್ಬಿಸಲು ಹೋದರೆ ಮಗನ ರೂಮು ಖಾಲಿ ಮನೆಯಲ್ಲಿಯೇ ಬೇರೆ ಕಡೆಯಲ್ಲಿ ನೊಡಿದರೆ ಅಲ್ಲಿಯೂ ಇಲ್ಲ ಆತಂಕದಿಂದ ಹೊರಗೆಲ್ಲ ಬಂದು ನೋಡಿದರು, ಅಕ್ಕಪಕ್ಕದವರನ್ನು ವಿಚಾರಿಸಿದರು, ಸ್ನೇಹಿತರನ್ನು ಕೇಳಿದರು ಎಲ್ಲರಿಂದಲೂ ಗೋತ್ತಿಲ್ಲ ಎಂಬ ಉತ್ತರ ಬಂದಿತು.
ರಾತ್ರಿ ಮಲಗಿದ ಮಗ ಬೆಳಗಾಗುವಷ್ಟರಲ್ಲಿ ಕಾಣಿಸಲಿಲ್ಲ ಅಂದರೆ ಆ ತಂದೆ, ತಾಯಿಗೆ ಹೇಗಾಗಿರಬೇಡ ಅವನೇನು ಚಿಕ್ಕ ಮಗು ಅಲ್ಲ ಆಟವಾಡ್ತಾ ಎಲ್ಲೊ , ಹೋಗಿರಬಹುದೆನ್ನಲು ಹೈಸ್ಕೂಲು ಓದುವವನಾಗಿದ್ದ. ದಿನವಿಡಿ ಚಡಪಡಿಕೇಯಲ್ಲಿಯೇ ದಿನ ಕಳೆದರು ಏನು ಸುಳಿವು ಸಿಗಲಿಲ್ಲ. ಹೀಗೆಯೇ ಎರಡು ದಿವಸ ಕಳೆಯಿತು ಒಂದು ದಿನ ಇದ್ದಕಿದ್ದಂತೆ ಯಾವುದೊ ವ್ಯಕ್ತಿ ಫೋನ ಮಾಡಿ ನಿಮ್ಮ ಮಗ ಇಲ್ಲಿದ್ದಾನೆ ಬಂದು ಕರೆದುಕೊಂಡು ಹೋಗಿ ಎಂದು ಹೇಳಿದ. ಆಗ ಆ ತಂದೆ, ತಾಯಿ ತುಂಬಾ ಸಂತಸಪಟ್ಟರು. ದೇವರಿಗೆ ಥ್ಯಾಂಕ್ಸ ಹೇಳಿದರು ಮರುದಿನವೇ ಹೋಗಿ ಮಗನನ್ನು ಕರೆದುಕೊಂಡು ಬಂದರು. ಆ ವೇಳೆಯಲ್ಲಿ ಅವನು ದೊರಕಿದ್ದು ದೂರದ ಮಹಾರಾಷ್ಟ್ರದಲ್ಲಿ ಯಾವನೊ ಒಬ್ಬ ಒಳ್ಳೆಯ ವ್ಯಕ್ತಿ ಅವನಿಂದಲೇ ನಂಬರ ತೆಗೆದುಕೊಂಡು ಫೋನ ಮಾಡಿದ್ದನು. ಮಗ ಸಿಕ್ಕಾಗ ತಂದೆ, ತಾಯಿ ಇಬ್ಬರು ಸಮಾಧಾನದ ನಿಟ್ಟಿಸಿರುಬಿಟ್ಟರು. ಆದರೆ ಇದು ಇಲ್ಲಿಗೆ ಮುಗಿಯಲಿಲ್ಲ. ಅದಾದ ಎರಡು ತಿಂಗಳ ನಂತರ ಮತ್ತೆ ಆ ಹುಡುಗ ಕಾಣೆಯಾಗಿದ್ದಾನೆ. ಸುಖಿ ಕುಟುಂಬ ಮನೆಯಲ್ಲಿ ಯಾವುದೇ ತೊಂದರೆ ಇಲ್ಲ, ಶಾಲೆಯಲ್ಲಿ ಕೂಡ ಪಾಠದಲ್ಲಿ ಸದಾ ಮುಂದೆ ಇರುವ ತಾನಾಯಿತು ತನ್ನ ಓದಾಯಿತು ಎನ್ನುವ ಸಭ್ಯ ಹುಡುಗ ಇದ್ದಕ್ಕಿದ್ದಂತೆ ಮತ್ತೆ ನಾಪತ್ತೆಯಾಗಿದ್ದಾನೆ.
ಈ ಘಟನೆಯಾಗಿ ಎಂಟು ತಿಂಗಳು ಕಳೆದಿದೆ ಆ ಹುಡುಗನ ಬಗ್ಗೆ ಏನು ಸುಳಿವಿಲ್ಲ, ಅವರು ಎಲ್ಲ ತರಹದ ಪ್ರಯತ್ನ ಮಾಡಿ ಕೈ ಚೆಲ್ಲಿ ಕುಳಿತಿದ್ದಾರೆ. ರೇಡಿಯೋ, ಟಿವಿ, ಪೋಲಿಸ್ ಕಂಪ್ಲೆಟ್ ಎಲ್ಲಾ ಆಗಿದೆ ಆದರೆ ಇದುವರೆಗೂ ಆ ಹುಡುಗನ ಬಗ್ಗೆ ಸಣ್ಣ ಸುಳಿವು ಕೂಡ ದೊರೆತಿಲ್ಲ. ಇದೆಲ್ಲಾ ಬರೆಯುವ ಕಾರಣ ಏನೆಂದರೆ ಇವತ್ತು ಬೆಳಿಗ್ಗೆ ಆ ಹುಡುಗನ ತಾಯಿ ನಮ್ಮ ಕ್ಲಿನಿಕಿಗೆ ಬಂದಿದ್ದಳು.ರಾತ್ರಿ ನಿದ್ರೆ ಬರುವದಿಲ್ಲಾ,ಊಟ ಸೇರುವದಿಲ್ಲ ಆದ ಕಾರಣ ಅಶಕ್ತಳಾಗಿದ್ದಳು. ಕೇಳಿದರೆ ಮಗನ ನೆನಪು ತೆಗೆದು ಅಳಲು ಶುರು ಮಾಡಿದಳು,ಏನ ಮಾಡುದರಿ ಮೇಡಂ ನಾವು ಇಲ್ಲಿ ನಮಗ ಬೆಕಾದ್ದನ್ನ ಮಾಡಿಕೊಂಡು ಶಿಸ್ತಾಗಿ ಊಟಾ ಮಾಡತಿವಿ, ಸೆಕೆ ಆಗುತ್ತದೆಂದು ಫ್ಯಾನ ಕೆಳಗೆ ಮಲಗ್ತಿವಿ ಆದರ ನನ್ನ ಮಗಾ ಹೇಗಿರಬಹುದು, ಏನು ಮಾಡತಿರಬಹುದು, ಊಟ ಮಾಡುತ್ತಾನೊ ಇಲ್ಲವೋ?ಎಲ್ಲಿ ಮಲಗುತ್ತಾನೊ ಏನೊ ಆ ತಾಯಿಯ ಮಾತು ಕೇಳಿ ನನ್ನ ಕರುಳು ಚುರ್ರ್ ಎಂದಿತು ಆ ನೊಂದ ಮನಸ್ಸಿಗೆ ಹೇಗೆ ಸಮಾಧಾನ ಹೇಳುವದೆಂಬುದು ತಿಳಿಯಲ್ಲಿಲ್ಲ. ಅವಳ ಮಾತು ಕೇಳಿ ನನ್ನ ಕಣ್ಣಲ್ಲಿ ಹನಿ ನೀರು ಜಿನುಗಿದವು.
 

‍ಲೇಖಕರು avadhi

29 April, 2014

1 Comment

  1. mmshaik

    kaaLjiyinda kudida lekhna..aadastu bega sigali endu hriysona.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading