ನಾನೂ ರಾಮನೂ ಭಗವಾನನೂ..
ಹ ಚ ನಟೇಶ್ ಬಾಬು
ನಾನೊಬ್ಬ ದೈವಭಕ್ತ, ಶ್ರೀರಾಮನ ಬಗ್ಗೆ ಅಭಿಮಾನ. ಇದರಲ್ಲಿ ಯಾವ ಅನುಮಾನವೂ ಇಲ್ಲ.
ಆದರೆ, ಬಿಜೆಪಿ ಮತ್ತು ಸಂಘಪರಿವಾರದ ರಾಮನು ನನ್ನ ರಾಮನಲ್ಲ.!
ಅವರು ಹೇಳುವ ರಾಮ ನನಗೆ ಬೇಕಿಲ್ಲ. ಅವರ ರಾಮನೇ ಬೇರೆ, ನನ್ನ ರಾಮನೇ ಬೇರೆ. ಅವರ ಹಿಂದೂ ಧರ್ಮವೇ ಬೇರೆ, ನನ್ನ ಹಿಂದೂ ಧರ್ಮವೇ ಬೇರೆ ಎನ್ನುವ ಸ್ಪಷ್ಟೀಕರಣವನ್ನೂ ಜತೆಯಾಗಿ ಓದಿಕೊಳ್ಳಿ.
ನನ್ನಂತೆಯೇ ವೈಯಕ್ತಿಕ ನೆಲೆಯಲ್ಲಿ ಅವರವರು ಅವರವರ ಧರ್ಮ ಮತ್ತು ದೇವರನ್ನು ಗೌರವಿಸುತ್ತಾರೆ, ವಿಶ್ವಾಸವಿಟ್ಟಿದ್ದಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಆದರೆ, ನಮ್ಮ ನಂಬಿಕೆಗಳು ಮತ್ತು ಪದ್ಧತಿಗಳು ಇನ್ನೊಬ್ಬರಿಗೆ ಕಿರಿಕಿರಿಯಾಗದಂತೆ, ನೋವಾಗದಂತೆ ಎಚ್ಚರವಹಿಸಬೇಕು.
ಅಂದಹಾಗೇ, ಈ ಬರಹದ ಮೊದಲ ಒಂದೆರಡು ಸಾಲುಗಳನ್ನು ಇಟ್ಟುಕೊಂಡು ಹೇಗೆ ಬೇಕಾದರೂ ನನ್ನ ವ್ಯಕ್ತಿತ್ವವನ್ನು ಅಳೆಯಬಹುದು. ಆ ಸಾಲುಗಳ ಸುತ್ತಲೇ ಗಿರಕಿ ಹೊಡೆಯುತ್ತಾ ಸನಾತನಿ, ಗೊಡ್ಡು ಮನುಷ್ಯ, ಕೋಮುವಾದಿ ಎಂದೆಲ್ಲ ಹೇಳಿಬಿಡಬಹುದು.
ಈಗಿನ ಟಿಆರ್ಪಿ ಮಾಧ್ಯಮ ಜಗದಲ್ಲಿ ಇದೇ ತಾನೇ ನಡೆಯುತ್ತಿರುವುದು. ಒಬ್ಬ ವ್ಯಕ್ತಿಯನ್ನು ಹಿಡಿಹಿಡಿಯಾಗಿ ನೋಡದೇ, ಬಿಡಿಬಿಡಿಯಾಗಿ ಕಲ್ಪಿಸಿಕೊಂಡು ಗಲ್ಲಿಗೇರಿಸಬೇಕು ಎನ್ನುವ ತೀರ್ಪನ್ನು ಮಾಧ್ಯಮಗಳು ಬರೆಯುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಂತೂ ಕೆಲವರು ಎಲ್ಲವನ್ನೂ ತಮಗೆ ಹೇಗೆಬೇಕೋ ಹಾಗೇ ಜೋಡಿಸಿಕೊಳ್ಳುವಲ್ಲಿ ಜಾಣರು.
ಗೊತ್ತಿಲ್ಲದ ಭಾಷೆಗಳನ್ನು ಅರೆದು ಕುಡಿಯುತ್ತಿರುವ ನಾವು ನಮ್ಮದೇ ಮಾತಿನ ಅರ್ಥ ಗ್ರಹಿಸುವಲ್ಲಿ ಸೋಲುತ್ತಿದ್ದೇವೆ. ಮಾತಿಗೊಂದು ಘನತೆಯಿದೆ ಅನ್ನುವುದನ್ನೂ ಮರೆಯುತ್ತಿದ್ದೇವೆ. ಮಾತಿಗಿರುವ ಘನತೆಯನ್ನು ಅರ್ಥ ಮಾಡಿಕೊಳ್ಳಲು ‘ಬಾಹುಬಲಿ’ ಚಿತ್ರದ ಒಂದು ತುಣುಕು ನೆಪವಾಗಬಹುದೇನೋ.
ಚಿತ್ರದಲ್ಲಿ ಕಟ್ಟಪ್ಪ ಅನ್ನುವ ಪಾತ್ರವಿದೆ. ಅವರ ಪೂರ್ವಿಕರು ನೀಡಿದ್ದ ಮಾತಿಗೆ ಕಟ್ಟುಬಿದ್ದು ತನಗೆ ಇಷ್ಟವಿಲ್ಲದೇ ಹೋದರೂ, ದುಷ್ಟರಾಜನಿಗೂ ವಿಧೇಯನಾಗಿ ಉಳಿದು ಬಿಡುತ್ತಾನೆ. ‘ಯಾರೋ, ಎಂದೋ ನೀಡಿದ ಮಾತಿಗೆ ಈಗಲೂ ಬದ್ಧತೆ ತೋರುವ ಅಗತ್ಯವಿದೆಯೇ?’ ಎನ್ನುವ ಪ್ರಶ್ನೆಗೆ, ‘ಮಾತು ಕೊಟ್ಟವರು ಹೋಗಿರಬಹುದು.. ಆದರೆ ಆ ಮಾತು ಈಗಲೂ ಇದೆ’ ಅನ್ನುತ್ತಾನೆ. ಕಟ್ಟಪ್ಪನ ಉತ್ತರ ನಮ್ಮ ಅನೇಕ ಹುಸಿ ಮಾತುಗಳನ್ನು ಕಟ್ಟಿಹಾಕುವಷ್ಟು ಗಟ್ಟಿಯಾಗಿದೆ. ನಮ್ಮ ವ್ಯಕ್ತಿತ್ವಗಳ ಸವಕಲತ್ತ ಬೆಳಕು ತೋರುತ್ತದೆ.
ನನ್ನ ರಾಮನ ಬಗ್ಗೆ ಹೇಳುವಾಗ ನಮ್ಮ ತಾಯಿಯ ಬಗ್ಗೆಯೂ ಹೇಳಬೇಕು. ಅವಳು ರಾಮನ ಪರಮಭಕ್ತೆ. ಭಕ್ತಿಯಲ್ಲಿ ಶಬರಿಯನ್ನೂ ಮೀರಿಸುವಳೇನೋ ಎನ್ನುವ ಅನುಮಾನ ನನ್ನೊಳಗೆ. ಪ್ರತಿ ಶನಿವಾರ ಅಮ್ಮ ಮಾಡುವ ರಾಮನ ಪೂಜೆ, ರಾಮ ಪುಸ್ತಕದ ವಾಚನವನ್ನು ಕೇಳಿ ಬೆಳೆದವನು ನಾನು.
ಆ ಪೂಜೆ, ಪದ್ಧತಿಗಿಂತಲೂ ಕೊನೆಯದಾಗಿ ಪ್ರಸಾದವಾಗಿ ಅಮ್ಮ ನೀಡುತ್ತಿದ್ದ ತುಪ್ಪ ಬೆರೆಸಿದ ಸಕ್ಕರೆ (ಕೆಲವು ಸಲ ರವೆ ಉಂಡೆ) ತಿನ್ನುವುದೇ ಒಂದು ಆನಂದ. ರಾಮನಿಗಿಂತಲೂ ಅವನ ಫೋಟೊ ಮುಂದೆ ಅಮ್ಮ ಇಡುತ್ತಿದ್ದ ರವೆಉಂಡೆಗಳು ನನ್ನ ಗಮನವನ್ನು ಸೆಳೆಯುತ್ತಿದ್ದವು.
ರಾಮಭಕ್ತಿಯಲ್ಲಿ ಅಮ್ಮನಿಗೂ ಸವಾಲುವೊಡ್ಡುವಂತೆ ನನಗೆ ಜತೆಯಾಗಿದ್ದಾಳೆ ಬಾಳಸಂಗಾತಿ. ಅವಳದೂ ಎಲ್ಲವೂ ಸೇಮ್ ಟು ಸೇಮ್. ಪೂಜೆ ಮುಗಿಸಿದ ಅರ್ಧಾಂಗಿ, ‘ಬನ್ನಿ ರಾಮನಿಗೊಂದು ನಮಸ್ಕಾರ ಹಾಕಿ’ ಎಂದರೆ ಶ್ರದ್ಧೆಯಿಂದ ಪುಟ್ಟ ಮಗು ಹೋಗುವಂತೆ ರಾಮನ ಮುಂದೆ ನಿಂತು ನಮಸ್ಕರಿಸುತ್ತೇನೆ. ಆ ಫೋಟೊದಲ್ಲಿ ನನ್ನ ಅಮ್ಮ ಅಥವಾ ಪತ್ನಿ ಕಂಡಂಥ ರಾಮ ನನಗೆ ಎಂದೂ ಕಂಡಿಲ್ಲ. ಜಗದಲ್ಲೊಂದು ಸೂಪರ್ ಪವರ್ ಅನ್ನುವುದಂತೂ ಇದ್ದೇ ಇದೆ. ಅದನ್ನು ಬಹುತೇಕರು ದೇವರು ಅನ್ನುತ್ತಾರೆ. ನಾನು ಆ ದಿವ್ಯಶಕ್ತಿಯನ್ನು ಆ ಕ್ಷಣದಲ್ಲಿ ರಾಮನ ಮೂಲಕ ಕಾಣಲು ಯತ್ನಿಸುತ್ತೇನೆ.
ನನಗೆ ಈ ಫೋಟೊ, ದೇಗುಲಗಳ ದೇವರ ಮೇಲೆ ವಿಶ್ವಾಸವಿಲ್ಲ, ಭಕ್ತಿಯೂ ಇಲ್ಲ. ಪ್ರಕೃತಿಯಲ್ಲಿನ ದೇವರೇ ಇಷ್ಟ. ದೀನರಲ್ಲೇ ದೇವರನ್ನು ಕಾಣಬೇಕು, ಕಾಯಕದಲ್ಲೇ ಕೈಲಾಸ ದರ್ಶಿಸಬೇಕು ಅನ್ನುವ ಮಾತುಗಳಲ್ಲೇ ಹೆಚ್ಚಿನ ನಂಬಿಕೆ.
ಆದರೆ, ‘ರಾಮನಿಗೊಂದು ನಮಸ್ಕಾರ ಹಾಕು ಬಾ’ ಎಂದು ಅಮ್ಮನೋ, ಪತ್ನಿಯೋ ಕರೆದಾಗ – ನನ್ನ ವಿಚಾರಗಳನ್ನು ಮತ್ತೆ ಹೇಳಬೇಕು ಎಂದು ಅನಿಸುವುದಿಲ್ಲ. ಏಕೆಂದರೆ ಇದೆಲ್ಲ ತಿಳಿದಿದ್ದೇ ಅವರು ನನ್ನನ್ನು ಕರೆಯುತ್ತಿರುತ್ತಾರೆ! ಇಷ್ಟಕ್ಕೂ ನಮಸ್ಕಾರ ಹಾಕಿದ ಮಾತ್ರಕ್ಕೆ, ನಾನು ಬದಲಾದೆ ಎಂದೇನೂ ಅರ್ಥವಲ್ಲ. ‘ನಿಮ್ಮ ಪೂಜೆ, ಪುನಸ್ಕಾರಗಳೆಲ್ಲ ವ್ಯರ್ಥ’ ಎಂದು ಅವರನ್ನು ಕಟ್ಟಿಹಾಕುವ ಮನಸ್ಸೂ ಮತ್ತು ಅಧಿಕಾರವೂ ನನಗಿಲ್ಲ.
ನಾನು ನಂಬಿದ ವಿಚಾರಗಳು ಎಷ್ಟು ಶ್ರೇಷ್ಠವೋ ಅವರ ನಂಬಿಕೆಗಳೂ ಅಷ್ಟೇ ಶ್ರೇಷ್ಠ. ಎಲ್ಲವೂ ಅನುಭವದ ಮೂಸೆಯಲ್ಲಿಯೇ ರೂಪುಗೊಳ್ಳಬೇಕು. ಹೀಗೆಯೇ ಯಾರದೇ ಪದ್ಧತಿ, ನಂಬಿಕೆಯನ್ನು ಪ್ರಶ್ನಿಸುವ, ಘಾಸಿಗೊಳಿಸುವ ಅಧಿಕಾರ ನಮಗಿಲ್ಲ. ಹಾಗೆಂದು ನಮ್ಮ ಭಾವನೆಗಳನ್ನು ಮುಚ್ಚಿಡಬೇಕೆಂದೂ ಅರ್ಥವಲ್ಲ. ಆದರೆ, ಅದಕ್ಕೂ ಒಂದು ಚೌಕಟ್ಟು ಇದೆ.
ನನಗೂ ಕೆಲವು ವಿಷಯಗಳಲ್ಲಿ ರಾಮನ ಬಗ್ಗೆ ಅಸಮಾಧಾನವಿದೆ, ಸಿಕ್ಕಿದರೆ ನಾಲ್ಕು ಪ್ರಶ್ನೆ ಕೇಳೋಣ ಅನಿಸುತ್ತದೆ. ಜತೆಗೆ ರಾಮನ ಆದರ್ಶಗುಣಗಳ ಬಗ್ಗೆ ಗೌರವವೂ ಇದೆ. ಹೀಗೆಯೇ ಕೃಷ್ಣ, ಶಿವ ಎಲ್ಲರ ಬಗ್ಗೆಯೂ ಇದೇ ಮನಸ್ಥಿತಿ. ಟೀಕೆಗಳೂ ಇವೆ, ಮೆಚ್ಚುಗೆಗಳೂ ಇವೆ.
ಆದರೆ, ಈ ದೇವರುಗಳ ಮುಂದೆ ನಿಂತಾಗ, ನಾನು ಎಲ್ಲವನ್ನೂ ಮರೆಯುತ್ತೇನೆ. ಅಲ್ಲಿ ಸರ್ವಶಕ್ತನನ್ನು ಮಾತ್ರ ಕಾಣುತ್ತೇನೆ. ಅವನಿಗೆ ಹೆಸರಿಲ್ಲ, ಕೆಲವು ಸಲ ರಾಮ ಎಂದು ಹೆಸರಿಸುತ್ತೇನೆ, ಕೆಲವು ಸಲ ಶಿವ, ಕೆಲವು ಸಲ ರಾಘವೇಂದ್ರ. ಯಾವುದೇ ಪ್ರತಿಮೆ, ವಸ್ತು, ಕಾಯಕ ಯಾವುದೇ ಆದರೂ ಅಲ್ಲಿ ನನ್ನ ದೇವರನ್ನು ಹುಡುಕಿಕೊಳ್ಳುತ್ತೇನೆ.
ನನ್ನ ದೇವರಿಗೆ ಮಂಗಳಾರತಿ ಬೇಕಿಲ್ಲ,
ಹೂವು-ಹಣ್ಣುಗಳೂ ಬೇಕಿಲ್ಲ,
ಸ್ನಾನದ ಮಡಿಯೂ ಇಲ್ಲ.
ರಾಮ ದೇವರು ಎಂದರೆ ನನ್ನದೇನೂ ಅಭ್ಯಂತರವಿಲ್ಲ. ಹೌದು, ಅವನು ದೇವರು ಎಂದು ನಾನೂ ಮೊಹರು ಒತ್ತುತ್ತೇನೆ. ಆದರೆ ಆತನಿಗೆ ಯಾರೋ ಅಂಟಿಸುವ ವಿಶೇಷಣಗಳು, ಅವನ ಆರಾಧನೆಗೆ ಯಾರೋ ನೀಡಿದ ನಿಯಮಗಳ ಬಗ್ಗೆ ನನಗೆ ಒಪ್ಪಿಗೆಯಿಲ್ಲ. ನನ್ನ ರಾಮನನ್ನು ಆರಾಧಿಸುವ ಬಗೆ ಹೇಗೆಂಬುದು ನನಗೆ ಗೊತ್ತು. ಅದಕ್ಕೆ ಬೇರೆಯವರ ಸಹಾಯ ಬೇಕಿಲ್ಲ.
ದೇವರಿಗೆ ಬೇಕಾದ್ದು ಭಕ್ತಿ ಮಾತ್ರ. ಮನಬಂದಂತೆ ಪೂಜೆ ಮಾಡಿದ ಕಣ್ಣಪ್ಪನಿಗೇ ಶಿವ ಒಲಿದನಲ್ಲ. ‘ಏಯ್, ರಾಮನ ಪೂಜೆ ಮಾಡುವ ವಿಧಾನ ಇದಲ್ಲ’ ಎಂದರೆ ನಾನು ಒಪ್ಪುವುದಿಲ್ಲ. ಏಕೆಂದರೆ ಅವರ ರಾಮನೇ ಬೇರೆ, ನನ್ನ ರಾಮನೇ ಬೇರೆ. ‘ನಿಮ್ಮ ರಾಮ ಸರಿಯಿಲ್ಲ’ ಎಂದು ಯಾರಾದರೂ ಹೇಳಿದರೆ ನನಗೆ ಸಿಟ್ಟು ಬರುವುದಿಲ್ಲ. ಅವರು ಗ್ರಹಿಸಿರುವ ರೀತಿಯೇ ಬೇರೆ ಎಂದು ಕೊಳ್ಳುತ್ತೇನೆ. ಏಕೆಂದರೆ ಅವರು ನೋಡುತ್ತಿರುವ ರಾಮನೇ ಬೇರೆ, ನಮ್ಮ ರಾಮನೇ ಬೇರೆ. ಪತ್ನಿಯನ್ನು
ಕಾಡಿಗೆ ಕಳುಹಿಸಿದ ರಾಮನನ್ನು ಅವರು ಟೀಕಿಸಬಹುದು. ಆದರೆ ನಾನು ಪೂಜಿಸುತ್ತಿರುವುದು ಆ ರಾಮನನ್ನು ಅಲ್ಲವಲ್ಲ! ಇಷ್ಟಕ್ಕೂ ರಾಮ ಆ ರೀತಿ ಮಾಡಿದ್ದರೆ ಮಾಡಿರಲಿ ಬಿಡಿ.. ಅದನ್ನು ಅನುಸರಿಸುವ ಕರ್ಮ ಯಾರಿಗೇನಿದೆ?
ಶ್ರೀರಾಮನ ಬಗ್ಗೆ ಭಗವಾನ್ ಅಂಥವರು ಆಡಿದ ಮಾತುಗಳು ಕೆಲವರಿಗೆ ಬೇಸರ, ಸಿಟ್ಟನ್ನೂ ತರಿಸಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ಭಗವಾನ್ ನುಡಿಗಳನ್ನು ಖಂಡಿಸುವ ನೆಪದಲ್ಲಿ ಕೋಮುದ್ವೇಷವನ್ನು ಕೆಲವರು ವಾಂತಿ ಮಾಡುತ್ತಿದ್ದಾರೆ. ಫೇಸ್ಬುಕ್ನಲ್ಲಿ ಕೆಲವರ ವಾಲ್ ಗಳು ತಿಪ್ಪೆಗುಂಡಿಗಳಂತಾಗಿದ್ದು, ಬರೀ ಗಬ್ಗು ವಾಸನೆ.
ಅವರಿಗೆ ನೀಡಿರುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು ಎನ್ನುವ ಆಂದೋಲನವೂ ನಡೆಯುತ್ತಿದೆ. ನಡೆಯಲಿ.. ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ, ಆ ಗೆರೆಯನ್ನು ಯಾವಾಗಲೋ ಅಳಿಸಲಾಗಿದೆ ಅನ್ನುವುದಕ್ಕೆ ಆ ಆಂದೋಲನ ನೇತಾರರ ವಾಲ್ ಗಳಲ್ಲಿನ ಜೀವವಿರೋಧಿ ಬರಹಗಳು, ಅದಕ್ಕೆ ಪೂರಕವಾದ ಕಾಮೆಂಟ್ ಗಳು, ಲೈಕ್ ಗಳು ಭಯ ಹುಟ್ಟಿಸುವಂತಿವೆ.
ಯಾವುದೋ ಕಾಲದ ದ್ವೇಷವನ್ನು ಈಗ ಭಗವಾನ್ ವಿರುದ್ಧ ಕೆಲವರು ತೋರಿಸಿಕೊಳ್ಳುತ್ತಿದ್ದಾರೆ. ಕೆಲವರು ಜಾಣ ಮೌನದ ಮೂಲಕ, ಆ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುತ್ತಿದ್ದಾರೆ. ಮೈಗೆ ಕಾವು ಕೊಡುವ ಬೆಂಕಿಗೆ ಪೆಟ್ರೋಲ್ ಸೇರುತ್ತಿದ್ದು, ಕ್ರಮೇಣ ಅದು ನಮ್ಮನ್ನೇ ಸುಡಬಹುದು ಎನ್ನುವ ಸಣ್ಣ ಅನುಮಾನವೂ ಮೂಡುತ್ತಿಲ್ಲ. ಭಗವಾನ್ ಅವರದು ಬೂಸಾ ಸಾಹಿತ್ಯ ಎಂದು ಈಗ ಪಂಡಿತರು ಬಾಯಿಬಿಡುತ್ತಿದ್ದಾರೆ. ಒಂದು ವೇಳೆ ಅವರು ಕೇಸರಿಶಾಲನ್ನು ಮೈಮೇಲೆ ಹಾಕಿಕೊಂಡಿದ್ದರೆ, ಬೂಸಾ ಸಾಹಿತ್ಯದ ಪ್ರಶ್ನೆಯೇ ಹುಟ್ಟುತ್ತಿರಲಿಲ್ಲವೇನೋ?
ಭಗವಾನ್ ರ ಮಾತುಗಳಿಂದ ನನ್ನ ರಾಮನ ವ್ಯಕ್ತಿತ್ವಕ್ಕೆ ಲವಲೇಶವೂ ಘಾಸಿಯಾಗಿಲ್ಲ. ಅವರು ಹೇಳುವ ರಾಮನೇ ಬೇರೆ. ಅವನು ಲೋಪದೋಷಗಳನ್ನು ಹೊಂದಿರುವ ರಾಮ. ನನ್ನ ರಾಮ ಪರಿಪೂರ್ಣ.
ಭಗವಾನ್ ಅವರು ಈ ನೆಲದ ಕೆಲವೇ ಕೆಲವು ಪ್ರಾಜ್ಞರಲ್ಲಿ ಒಬ್ಬರು. ವಿಷಯದ ಬಗ್ಗೆ ನಿಖರವಾಗಿ ಮಾತನಾಡುವ ತಿಳಿವಳಿಕೆಯಿದೆ. ಆದರೆ, ಯಾರೋ ಕೆಲವು ಸ್ವಘೋಷಿತ ರಾಮಭಕ್ತರು ಮತ್ತು ಧರ್ಮೋದ್ಧಾರಕರ ಅತಿರೇಕಗಳಿಂದ ಅವರು ರೋಸಿ ಹೋಗಿದ್ದಾರೆ ಅನಿಸುತ್ತದೆ. ಅವರನ್ನು ಟೀಕಿಸುವ ಭರದಲ್ಲಿ ಆ ಜನರ ಭಾಷೆಯನ್ನೇ ಭಗವಾನ್ ರೂಢಿಸಿಕೊಂಡಿದ್ದಾರೆ.
ಮೂಲಭೂತವಾದಿಗಳಿಗೆ ಉತ್ತರ ನೀಡುವ ಉತ್ಸಾಹದಲ್ಲಿ ಅಸಲಿ ರಾಮಭಕ್ತರ ಮನಸ್ಸಿಗೆ ನೋವು ತಂದಿದ್ದಾರೆ. ಹೀಗಾಗಿಯೇ ಭಗವಾನರ ವಿಚಾರ ಬೆಂಬಲಿಸುವ ಜನರೂ, ಅವರ ಮಾತುಗಳಿಂದಾಗಿ ದೂರ ನಿಂತಿದ್ದಾರೇನೋ ಅನಿಸುತ್ತದೆ.
ನಮ್ಮ ಸಮಾಜದಲ್ಲಿ ಭಗವಾನ್ ಗೆ ಮಾತ್ರವಲ್ಲ, ಎಲ್ಲರಿಗೂ ತಮ್ಮ ವಿಚಾರಗಳನ್ನು ಹೇಳುವ ಸ್ವಾತಂತ್ರ್ಯವಿದೆ. ಕೇಳುವ ಸಹಿಷ್ಣುತೆಯನ್ನು ನಾವು ಕಳೆದುಕೊಳ್ಳಬಾರದು. ಕೇಳಿದ ಮಾತ್ರಕ್ಕೆ ಒಪ್ಪಿಕೊಳ್ಳುತ್ತೇವೆ, ಒಪ್ಪಿಕೊಳ್ಳಬೇಕು ಎಂದೇನೂ ಕಾನೂನಿಲ್ಲ.
ಕೇಳಿದ ಮಾತು ಸರಿಯಿಲ್ಲ ಎಂದು ಅನ್ನಿಸಿದಾಗ ವಿರೋಧಿಸುದರಲ್ಲೂ ತಪ್ಪಿಲ್ಲ. ಆದರೆ, ಹೇಳುವ, ವಿರೋಧಿಸುವ ಪದ್ಧತಿಗಳು ಅಸಹ್ಯಕರವಾಗಿ ಇರಬಾರದು. ಚರ್ಚೆಗಳು ವ್ಯಕ್ತಿಯನ್ನು ಅರಳಿಸಬೇಕೇ ಹೊರತು, ನಾಶ ಮಾಡಬಾರದು.
ಒಂದು ವಿಷಯವನ್ನು ನಾವೆಲ್ಲರೂ ಮರೆಯಬಾರದು. ಟೀಕೆ-ಟಿಪ್ಪಣಿಗಳನ್ನು ಸಹಿಸಿಕೊಂಡು ಜೀರ್ಣಿಸಿಕೊಂಡೇ ಹಿಂದೂ ಧರ್ಮವೆನ್ನುವುದು ಇನ್ನೂ ಉಳಿದಿದೆ. ಅದೇ ಇದರ ಅಸಲಿ ತಾಕತ್ತು. ಭಗವಾನ್ ಮಾತಿನಿಂದ ರಾಮನಿಗೆ ಅವಮಾನವಾಯಿತು ಎಂದ ಬೊಬ್ಬೆ ಹಾಕುವ ಅಗತ್ಯವಿಲ್ಲ. ಇಂಥ ಮಾತಿನಿಂದ ರಾಮ ಚಿಕ್ಕವನು ಹೇಗಾಗುತ್ತಾನೆ? ನೀವೇ ರಾಮನನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಬೇಕಾಗುತ್ತದೆ.
। ಒಂದು ಹಳೆಯ ಬರಹ, ಆದರೆ ಬೆಳಕು ಕಾಣುತ್ತಿರುವುದು ಈಗಲೇ ।






NIJAKKU SUNDARA BARAHA – MANSIGE MUTTITU – DHANYAVADAGALU
Very good..