ಆತ ಹೊರಟೇ ಹೋದ..

ಎಂ. ಪ್ರಜ್ವಲ್

ನೆನ್ನೆ ರಾತ್ರಿ ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಅಂತ ಗೊತ್ತಾದಾಗ ಮೌನವಾಗಿದ್ದೆ. ಆದರೆ, ಇವತ್ತು ಬೆಳಗ್ಗೆ ಸುಮಾರು ಹನ್ನೊಂದೂವರೆ ಹೊತ್ತಿಗೆ ಅವನು ತೀರಿಕೊಂಡ ಅಂತ ಸುದ್ದಿ ಬಂತು. ಒಂದು ಕ್ಷಣ ಮನಸ್ಸು ಖಾಲಿ ಆದಂತಾಯ್ತು.

1988ರಿಂದ 2019ರ ತನಕ ಹಲವಾರು ವಿಭಿನ್ನ ರೀತಿಯ ಸಿನಿಮಾಗಳಲ್ಲಿ ಆತ ನಟಿಸಿ ಸೈ ಎನ್ನಿಸಿಕೊಂಡಿದ್ದ. ವಿಶೇಷ ಎನ್ನುವಂತೆ ಆತ ನಟಿಸಿದ ಬಹುತೇಕ ಸಿನಿಮಾಗಳು ರಾಷ್ಟ್ರಪ್ರಶಸ್ತಿ ಪಡೆದಿದ್ದವು. ಹಾಲಿವುಡ್‌ಗೂ ಕಾಲಿಟ್ಟು ಅಲ್ಲೂ ಜನಮೆಚ್ಚುಗೆ ಪಡೆದಿದ್ದ ಈ ಪುಣ್ಯಾತ್ಮ ಇಷ್ಟು ಜಲ್ದಿ ಹೋಗುತ್ತಾನೆ ಅಂತ ಯಾರು ಕನಸು ಕಂಡಿದ್ದರು ?

ಅವನು ಪಾತ್ರವಾಗಿದ್ದ ಸಲಾಂ ಬಾಂಬೆ, ದೃಷ್ಟಿ, ಏಕ್ ಡಾಕ್ಟರ್ ಕೀ ಮೌತ್, ಮುಝ್‌ಸೆ ದೋಸ್ತಿ ಕರೋಗೆ, ಗೋಲ್, ಮಕ್ಬೂಲ್, ಮುಂಬೈ ಮೇರಿ ಜಾನ್, ಪಾನ್ ಸಿಂಗ್ ತೋಮರ್, ಹೈದರ್, ಪೀಕು, ತಲ್ವಾರ್ ವಿಭಿನ್ನ ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದವು. ತೀರಾ ಇತ್ತೀಚೆಗೆ ಬಂದಿದ್ದ ಕಾರ್‌ವಾನ್ ಚಿತ್ರದಲ್ಲಿ ತನ್ನೆದುರಿದ್ದ ದುಲ್ಕರ್ ಸಲ್ಮಾನ್ ಎಂಬ ಮಮ್ಮೂಟ್ಟಿ ಮಗನನ್ನೂ ಆತ ಚಿತ್ ಮಾಡಿದ್ದ. ಪೀಕು ಚಿತ್ರದಲ್ಲೂ ಆತ ಅಮಿತಾಭ್ ಎನ್ನುವ ನಟನಾಪರ್ವತದ ಎದುರು ಮಾಡಿದ್ದು ಇದನ್ನೇ.

ಪ್ರಶಸ್ತಿಗಳ ವಿಚಾರದಲ್ಲಿ ಆತ ಸ್ವಲ್ಪ ಹಿಂದುಳಿದ ವಿದ್ಯಾರ್ಥಿ ಅನ್ನಬಹುದೇನೋ. ಆದರೆ ಆತನ ವಿಶೇಷ ಏನೆಂದರೆ ಮೊದಲು “ಪದ್ಮಶ್ರೀ”ಯಿಂದ ಗೌರವಾನ್ವಿತನಾಗಿ ಆನಂತರ ರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿ ಸ್ವೀಕರಿಸಿದ. (ನೀವು ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ನೋಡಿದಾಗ ಗೊತ್ತಾಗುತ್ತೆ, ಸಾಮಾನ್ಯವಾಗಿ ಅಲ್ಲಿರುವ ಸಿನಿಮಾ ಮಂದಿ ಮೊದಲು ರಾಷ್ಟ್ರಪ್ರಶಸ್ತಿ ಪಡೆದು ನಂತರ “ಪದ್ಮ” ಗೌರವಕ್ಕೆ ಭಾಜನರಾದವರು.)

ಇವುಗಳ ಜೊತೆಗೆ ಆತ ನಮಗೆ ಅಂದರೆ ವಿಶೇಷವಾಗಿ ಕನ್ನಡಿಗರಿಗೆ ಇನ್ನೊಂದು ಕಾರಣಕ್ಕೂ ಇಷ್ಟವಾಗಿದ್ದ. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅವನಿಗೆ ಗುರು ಆಗಿದ್ದವರು ನಮ್ಮ ಹೆಮ್ಮೆಯ ಹಿರಿಯ ರಂಗಕರ್ಮಿ ಪ್ರಸನ್ನ ಅವರು. 2015ರಲ್ಲಿ ಪ್ರಸನ್ನ ಅವರು ಮೈಸೂರು ಜಿಲ್ಲೆಯ ಬದನವಾಳಿನಲ್ಲಿ ಆರಂಭಿಸಿದ್ದ ಸುಸ್ಥಿರ ಅಭಿವೃದ್ಧಿ ಆಂದೋಲನಕ್ಕೆ ತನ್ನೆಲ್ಲಾ ಕೆಲಸ ಬಿಟ್ಟು ಬಂದು ಬೆಂಬಲ ಸೂಚಿಸಿದ್ದ. ಬೆಂಬಲದ ಜೊತೆಗೆ ಒಂದು ರಾತ್ರಿ ಅಲ್ಲೇ ಉಳಿಯುವ ಮೂಲಕ ಗುರುದಕ್ಷಿಣೆ ನೀಡಿದ್ದ.

ಅವನ ಬಗ್ಗೆ ಹೇಳೋಕೆ ಬಹಳ ಇದೆ, ಆದರೆ ನಾನು ಅವನನ್ನು ಕಂಡ ರೀತಿ ಇದು. ಇದರ ಜೊತೆಗೆ ಅವನ ಮೇಲೆ ನನಗೆ ಒಂದು ಚಿಕ್ಕ ಕಂಪ್ಲೇಂಟ್ ಕೂಡ ಇತ್ತು. ಅದೇನೆಂದರೆ ಅವನು ಹೇಳೋ ಡೈಲಾಗ್‌ನಲ್ಲಿ ಅರ್ಧಕ್ಕರ್ಧ ಕೇಳುತ್ತಲೇ ಇರಲಿಲ್ಲ, ಹಾಗ್ಹಾಗೇ ನುಂಗಿಬಿಡುವ.

ಆದರೂ, ಅವನ ಅಭಿನಯ ಅತ್ಯುತ್ತಮವಾಗಿರುತ್ತಿತ್ತು. ಮುಖದಲ್ಲಿಯೇ ಭಾವನೆಗಳನ್ನು ಬಲು ಚಂದಾಗಿ ಅವನಂತೆ ತೋರಿಸುವವರು ಮತ್ತೊಬ್ಬರು ಬರಬಹುದಾ ?

ಗೊತ್ತಿಲ್ಲ…

‍ಲೇಖಕರು avadhi

April 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: