ನನ್ನ ಬಾಲ್ಯದ ಒಡನಾಡಿ ಚಿದಾನಂದಗೌಡ
ಹುಲುಗಪ್ಪ ಕಟ್ಟೀಮನಿ
ನನ್ನ ಬಾಲ್ಯದ ರಂಗ ಒಡನಾಡಿ, ಜೀವದ ಗೆಳೆಯ ಚಿದಾನಂದ ಗೌಡ ಮರಳಿಬಾರದೂರಿಗೆ ಹೋದ.
ಸುಮಾರು 40 ವರ್ಷಗಳ ಹಿಂದೆ ನಮ್ಮಿಬ್ಬರ ಜೋಡಿ ನನ್ನೂರು ಹಗರಿಬೊಮ್ಮನಹಳ್ಳಿಯಲ್ಲಿ. ನನ್ನ ಹೆಸರಿನೊಂದಿಗೆ ಅವನ ಹೆಸರು ತಳುಕಾಗಿ ಮನೆ ಮಾತಾಗಿತ್ತು. ಇಬ್ಬರೂ ಒಟ್ಟೊಟ್ಟಿಗೆ ಗರಡಿ ಮನೆಗೆ ಹೋದವರು, ನಮ್ಮೂರಿನ ವೆಂಕಟರಮಣ ಸ್ವಾಮಿ ರಥೋತ್ಸವದಲ್ಲಿ ತೇರಿಗೆ ಸನ್ನೆ ಕೋಲನ್ನು ಹೊತ್ತವರು, ಅಂದಿನ ರಾಮನಗರದ ‘ಯುವಕರ ಸಂಘ’ದ ಕಟ್ಟೆಯ ಮೇಲೆ ಏಕಾಂಕ ನಾಟಕಗಳನ್ನು ಪುಂಖಾನು ಪುಂಖವಾಗಿ ಪ್ರದರ್ಶನ ಮಾಡಿದವರು.
ಅವನು ಏಕಾಂಕ ನಾಟಕಗಳನ್ನು ಬರೆಯುವುದು, ನಾ ಪಾತ್ರ ಮಾಡುವುದು. ಮಾರನೇ ದಿನ ನಾಟಕದ ಪ್ರತಿಕ್ರಿಯೆಗಾಗಿ ಬೀದಿ ಬೀದಿಗಳನ್ನು ಸುತ್ತುತ್ತ ಬೀದಿ ಕಾಮಣ್ಣರಾಗುವುದು. ನಾನು ನಮ್ಮ ತೋಟದಲ್ಲಿ ಕೆಲಸ ಮಾಡಿ ಸಂಜೆ ಮನೆಗೆ ಬರುತ್ತಿದ್ದಂತೆ ನಮ್ಮ ಮನೆಗೆ ಚಿದಾನಂದ ಹಾಜರಾಗುತ್ತಿದ್ದ. ನಮ್ಮ ಮೊದಲ ಸುತ್ತಿನ ಸುತ್ತು ಸುಬ್ಬಣ್ಣ ಹೋಟೆಲಿನ ಮಸಾಲೆದೋಸೆ ಅಥವ ಚೆನ್ನ ಬಸಪ್ಪನ ಮಂಡಕ್ಕಿ, ಅಲಸಂದೆ ವಡೆಗಾಗಿ ನಮ್ಮ ಇನ್ನೊಬ್ಬ ಸ್ನೇಹಿತ ಹುಳ್ಳಿ ನಾಗರಾಜನನ್ನೋ ಅಥವಾ ಮಿಲ್ನಲ್ಲಿ ಗುಮಾಸ್ತನಾಗಿದ್ದ ಪರಶುರಾಮನನ್ನೋ ಹಿಡಿದು ರಮಿಸುತ್ತಿದ್ದೆವು.
ನಾಗರಾಜ ನಾಟಕದಲ್ಲಿ ಪಾತ್ರ ಮಾಡಲು ಹಿಂಜರಿಯುತ್ತಿದ್ದ. ಮುಜುಗರದ ಸ್ವಭಾವದವನು. ಪರಶುರಾಮನ ಜೇಬಲ್ಲಿ ಯಾವಾಗಲೂ ಚಿಲ್ಲರೆ ಕಾಸಿರುತ್ತಿತ್ತು. ಹಾಗಾಗಿ ಅವನಿಗೊಂದು ಚಿಕ್ಕ ಪಾತ್ರವನ್ನು ಕೊಡುತ್ತಿದ್ದೆವು. ಪಾತ್ರ ಹಂಚಿಕೆಯಲ್ಲಿ ನಾವಿಬ್ಬರೂ ‘ಮಿಡ್ ಸಮ್ಮರ್’ನ ನಿಕ್ ಬಾಟಮ್ ರೇ. ಆಗೆಲ್ಲ ಶಾಲಾ, ಕಾಲೇಜುಗಳಲ್ಲಿ ಹುಡುಗ-ಹುಡುಗಿಯರು ಏನ್ರಪ್ಪ… ಏನ್ರಮ್ಮ ಎಂದು ಕರಿಯುತ್ತಿದ್ದ ಕಾಲ. ಯಾರಾದರೂ ‘ಏನ್ರಪ್ಪ’ ಎಂದರೂ ಅವರು ಯಾವ ಭಾವದಿಂದ ಹೇಳಿದರು, ಹೇಳುವಾಗ ಅವರ ಕಣ್ಣುಗಳು ಯಾರನ್ನು ನೋಡುತ್ತಿದ್ದವು, ನೋಡಿ ನಕ್ಕಿದ್ದು ನನ್ನನ್ನೇ ಎಂದು ಜಗಳದಲ್ಲಿ ಗುದ್ದಾಡುತ್ತಿದ್ದೆವು. ನ್ಯಾಯ ಪಂಚಾಯತಿಗೆ ನಮ್ಮ ಮುಜುಗರದ ನಾಗರಾಜನೇ ಎದುರಾಗುತ್ತಿದ್ದ.
ನಮ್ಮ ಪಾಲಿಗಂತು ನಾವು ನಿಂತ ನೆಲ ಚೆಂಡಿನಂತೆ ನಮ್ಮನ್ನು ಪುಟಿದೇಳಿಸುತ್ತಿತ್ತು. ಊರು ಬಿಟ್ಟು ಇಬ್ಬರೂ ನೀನಾಸಮ್‍ಗೆ ಸೇರುವ ತನಕ ನಮಗೆ ಕಾಲವೇ ಹುಡುಗಾಟದ ಕಾಲವಾಗಿತ್ತು. ನಮ್ಮನ್ನು ಊರು ಬಿಡಿಸಿದವರು ಶ್ರೀ ಗುರುಮೂರ್ತಿ ಪೆಂಡಕೂರ್ ಅವರು. ನಮ್ಮ ಪ್ರತಿಭೆಯ ಪ್ರದರ್ಶನಕ್ಕೆ ‘ಯುವಕರ ಸಂಘ’ದ ಕಟ್ಟೆಯೂ ಆಗಿತ್ತು. ನಮ್ಮಿಬ್ಬರ ಅಭಿನಯದ ಗೀಳನ್ನು ನೋಡಿ ಒಂದು ದಿನ ಗುರುಮೂರ್ತಿಯವರು ಹೆಗ್ಗೋಡಿನಲ್ಲಿ ನಾಟಕ ಕಲಿಸುವುದಕ್ಕೆ ಒಂದು ಶಾಲೆ ಇದೆ. ಅಲ್ಲಿಗೆ ಹೋದ್ರೆ ನೀವು ಉದ್ಧಾರ ಆಗ್ತೀರಿ. ನೀವು ಹೋದ್ಮೇಲೆ ಈ ಊರು ಉದ್ಧಾರ ಆಗ್ತದೆ ಎಂದರು.
ಅಲ್ಲೀ ತನಕ ನವರಾತ್ರಿ, ಶಿವರಾತ್ರಿಗಳಲ್ಲಿ ನಾಟಕ ಮಾಡೋದು, ಅಲಿಸಂದೆ ವಡೆ, ಮಸಾಲೆದೋಸೆಯ ಬಯಕೆಯಲ್ಲಿ ಕಾಲ ಕಳಿಯೋ ನಮಗೆ (ಎಷ್ಟೋ ಸಲ ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಆಗಬೇಕಪ್ಪ ಅಂತ ಬಯಸುತ್ತಿದ್ದೆವು. ಯಾಕೆಂದರೆ ಕಂಡಕ್ಟರ್ ಮತ್ತೆ ಡ್ರೈವರ್‍ಗಳಿಗೆ ನಮ್ಮೂರಿನ ಹೋಟೆಲ್‍ಗಳಲ್ಲಿ ಮಂಡಕ್ಕಿ ವಡೆ ಪುಕ್ಸಟ್ಟೆ ಕೊಡುತ್ತಿದ್ದರು) ನಾಟಕ ಕಲಿಸುವುದಕ್ಕೆ ನಾಟಕದ ಶಾಲೆ ಇದೆ ಅನ್ನೋ ವಿಚಾರವೇ ಸ್ವರ್ಗಕ್ಕೆ ಮೂರೇ ಗೇಣಂತಾಗಿತ್ತು.
ಅಷ್ಟೊತ್ತಿಗಾಗಲೆ ತರಂಗದಲ್ಲಿ ‘ಕಾಗೆಗಳು’ ಅನ್ನೋ ಕತೆ ಬರೆದು ಚಿದಾನಂದಗೌಡ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದ. ರೈಲು ಹಳಿಯ ಈಚಿನ ಭಾಗವೆಲ್ಲ ರಾಮನಗರ, ಹಳಿಯ ಆಚಿನ ಊರು ಹಗರಿಬೊಮ್ಮನಹಳ್ಳಿ, ಹಗರಿಯ ಸೇತುವೆಯ ಆಚಿನ ಊರು ಹಳೇ ಊರು. ನಮ್ಮ ರಾಮನಗರಕ್ಕೆ ತಳುಕಾಗಿ ಹರಳಿಹಳ್ಳಿ, ಕುರುದಗಡ್ಡಿ ಚಿಂತ್ರಪಳ್ಳಿ ಅನ್ನುವ ಸಣ್ಣ ಸಣ್ಣ ಹಳ್ಳಿಗಳು. ನಮ್ಮ ನಟನೆಯ ಖ್ಯಾತಿ ಈ ಹಳ್ಳಿಗಳಿಗು ಪಸರಿಸಿತ್ತು.
ರೈಲು ಹಳಿಯ ಆಚಿನ ಹಗರಿಬೊಮ್ಮನಹಳ್ಳಿಯ ‘ಜ್ಯೋತಿ ವೃಂದ’ದವರು, ನಮ್ಮ ‘ಯುವಕರ ಸಂಘ’ದವರು ಒಟ್ಟೊಟ್ಟಿಗೆ ನಾಟಕಗಳನ್ನಾಡುತ್ತಿದ್ದೆವು. ಅಲ್ಲಿ ಇನ್ನೊಬ್ಬ ಗೆಳೆಯ ಪಿ.ಗೋವಿಂದ ಹಾಗೂ ನಮ್ಮೂರಿನ ಯುವರಾಜ ವಿಜಯಕುಮಾರ್, ಗಂಗಾಧರ ಎಲ್ಲರೂ ಸಂಜೆ ಹೊತ್ತು ಕೂತು ಈರಣ್ಣನ ಚಹ ಕುಡಿಯುತ್ತ ನಮ್ಮ ಮಾತುಗಳನ್ನು ಕವನದ ಸಾಲುಗಳಂತೆ ಉದ್ಧರಿಸುತ್ತ ರಮ್ಯಕವಿ ‘ಕಾಳಿದಾಸ’ರಾಗುತ್ತಿದ್ದೆವು.
ಶ್ರೀ ಗುರುಮೂರ್ತಿ ಪೆಂಡಕೂರ್ ಅವರ ಆಣತಿಯಂತೆ ನೀನಾಸಂ ರಂಗಶಿಕ್ಷಣ ಕೇಂದ್ರದ ಸಂದರ್ಶನಕ್ಕೆ ನಾನು ಮತ್ತು ಚಿದಾನಂದಗೌಡ ಹೊರಟೆವು. ಪಿ.ಗೋವಿಂದ, ಆತನನ್ನು ಎಲ್ಲರೂ ಚ.ಚಿ.ನ. ಎಂದು ಕರೆದು ರೇಗಿಸುತ್ತಿದ್ದರು. ಚ.ಚಿ.ನ. ಅಂದರೆ ಚಲನಚಿತ್ರ ನಟ. ನಾಟಕದ ಕರಪತ್ರದಲ್ಲಿ ಆತನ ಹೆಸರಿನ ಮುಂದೆ ಚ.ಚಿ.ನ. ಎಂದಿರುತ್ತಿತ್ತು. ಚ.ಚಿ.ನ. ಎಂದಾಗಲೆಲ್ಲ ಆತನಿಗೆ ಏನೋ ಒಳಗೊಳಗೇ ಖುಷಿ. ನಮ್ಮೂರಿನ ಯುವರಾಜ ವಿಜಯಕುಮಾರನಂತೂ ಚ.ಚಿ.ನ. ಎಂದೇ ರೇಗಿಸುತ್ತಿದ್ದ. ಈ ಚ.ಚಿ.ನ. ಗೋವಿಂದಗೆ ನಾವಿಬ್ಬರೂ ಹೋಗುವುದು ಬೇಸರದ ಸಂಗತಿಯಾಗಿತ್ತು. ಆಗಾಗ ಆಡುವ ನಾಟಕಗಳಿಗೆ ನಾವು ಆತನಿಗೆ ಸಾಥ್ ನೀಡುತ್ತಿದ್ದೆವು.
ಈ ಗೆಳೆಯನೂ ಈಗಿಲ್ಲ. ಅಕಾಲಿಕವಾಗಿ ನಡೆದೇಬಿಟ್ಟ. ಒಳ್ಳೆ ಸಂಘಟಕನಾಗಿದ್ದ. ಎಲ್ಲರನ್ನೂ ಒಟ್ಟುಗೂಡಿಸಿ ನಾಟಕ ಮಾಡುತ್ತಿದ್ದ. ತನ್ನ ಪಾತ್ರವನ್ನು ಆಯ್ಕೆ ಮಾಡಿಕೊಂಡು ಉಳಿದ ಪಾತ್ರಗಳನ್ನು ನೀವೆ ಹಂಚಿಕೊಳ್ಳಿ ಎಂದು ಪುಸ್ತಕವನ್ನು ಮುಂದಿಡುತ್ತಿದ್ದ.
ನೀನಾಸಂ ರಂಗಶಿಕ್ಷಣ ಕೇಂದ್ರದ ಸಂದರ್ಶನದಲ್ಲಿ ಚಿದಾನಂದಗೌಡ ಆಯ್ಕೆಯಾದ. ನಾನು ಆಗಿರಲಿಲ್ಲ. ಎಲ್ಲರಿಗೂ ಆಶ್ಚರ್ಯ. ಸಂದರ್ಶನದಲ್ಲಿ ಪ್ರಸನ್ನ ಇದ್ದರು. ‘ನೀವು ರಾಜಕುಮಾರ್ ಸಿನಿಮಾ ಜಾಸ್ತೀ ನೋಡ್ತೀರೇನು?’ ಎಂದು ಕೇಳಿದ್ದರು. ಸರಿಯಾಗಿ ಕೇಳಿದ್ದರು (ಆ ದಿನಗಳಲ್ಲಿ ರಾಜಕುಮಾರ್ ನಮ್ಮ ಮನೆದೇವರಾಗಿದ್ದರು). ಸಂದರ್ಶನ ಮುಗಿಸಿ ಊರಿಗೆ ಮರಳಿ ಬರುವಾಗ ಇಬ್ಬರೂ ಅಳುತ್ತ ಬಂದೆವು. ಆಯ್ಕೆಯಾಗಲಿಲ್ಲವೆಂದು ನಾನು ಅತ್ತರೇ, ನನ್ನನ್ನು ಬಿಟ್ಟಿರಲಾರದೆ ಅವನು ಅತ್ತಿದ್ದ.
ಇಬ್ಬರೂ ದಿಕ್ಕೇ ತೋಚದೆ ಮೊತ್ತಮೊದಲ ಬಾರಿಗೆ ಎಮ್.ಪಿ.ಪ್ರಕಾಶರನ್ನು ಭೇಟಿ ಮಾಡಲು ಹೋದೆವು. ಕೈಯ್ಯಲ್ಲಿ ನೀನಾಸಂ ಪರಿಚಯ ಪುಸ್ತಕವನ್ನು ಹಿಡಿದಿದ್ದ ನನ್ನನ್ನು ‘ಏನು ತಮ್ಮ ಯಾಕೆ ಬಂದಿದ್ದಿ?’ ಎಂದು ಯಾವುದೋ ಊರಿನ ನ್ಯಾಯ ಪಂಚಾಯಿತಿಯಲ್ಲಿ ತೊಡಗಿದ್ದ ಅವರೇ ನಮ್ಮನ್ನು ಮಾತಾಡಿಸಿದರು. ನಮ್ಮ ನಟನೆಯ ಮೋಹವನ್ನು ತೋಡಿಕೊಂಡೆವು ‘ನನಗಿಂತ ಮುದೇನೂರು ಸಂಗಣ್ಣನವರ ಹತ್ತಿರ ಹೋಗಿ. ಕೆ.ವಿ.ಸುಬ್ಬಣ್ಣನವರು ಅವರಿಗೆ ತುಂಬ ಆಪ್ತರು’ ಎಂದರು.
ಸತ್ಯನಾರಾಯಣ ಶೆಟ್ಟರ್ ಬಳಿ ಹೋಗಿ ಇಲ್ಲೇ ಹೋಗಿ ಬರುತ್ತೇವೆ ಎಂದು ಅವರ ಟಿ.ವಿ.ಎಸ್. ಮೊಪೆಡ್ ಪಡೆದೆವು. ಅವರಿಂದ ಮೊಪೆಡ್ ಪಡೆಯುವುದು ಸುಲಭವಾಗಿರಲಿಲ್ಲ. ಆದರೆ ನಮಗೆ ಅವರು ಎಂದೂ ಇಲ್ಲ ಎಂದವರಲ್ಲ. ಚಿಗಟೇರಿಗೆ ಸಂಗಣ್ಣನವರನ್ನು ಹುಡುಕುತ್ತ ಹೊರಟೆವು. ಬಿಸಿಲಿನ ತಾಪ. ಮೊಪೆಡ್ ಹಾಂಡಲ್ಲಿಗೆ ಎರಡು ಕಡ್ಡಿ ಕಟ್ಟಿ ಅದಕ್ಕೆ ಟವೆಲ್ ತುದಿ ಕಟ್ಟಿ ಇನ್ನೆರಡು ತುದಿಗಳನ್ನು ನಾನು ಹಿಡಿದುಕೊಂಡು ನೆರಳಿನಲ್ಲಿ ಚಿಗಟೇರಿಗೆ ಹೋದೆವು. ನಮ್ಮ ಪ್ರಯಾಣ ರಸವತ್ತಾದ ಸುದ್ದಿಗಳೊಂದಿಗೆ ಸಂಭಾಷಣೆಯೊಂದಿಗೆ ಶ್ರಮಿಸುತ್ತಿತ್ತು.
ಜಗತ್ ಪ್ರಸಿದ್ಧ ಈ ಶೇಕ್ಸ್ಪಿಯರ್, ಸೋಫೋಕ್ಲಿಸ್, ಇಬ್ಸನ್, ಮುಂತಾದವರು, ನಮ್ಮ ಕಾರ್ನಾಡ, ಕಂಬಾರರು ಸಹ ನಮ್ಮ ಬಳಿ ಸುಳಿದಿರಲಿಲ್ಲ. ನಮ್ಮದೇ ಶೈಲಿಯಲ್ಲಿ ಆಟ ಕಟ್ಟಿ ಆಡಿದವರು ನಾವು.
ಸಂಗಣ್ಣನವರು ಜಾನಪದ ವಿದ್ವಾಂಸರು. ಅವರನ್ನು ಭೇಟಿಯಾದಾಗ ಸಂಜೆಯಾಗಿತ್ತು. ಜೋಳದ ಮೂಟೆಗೆ ಆತು ಕುಳಿತವರು ‘ಹುಡುಗ ತುಂಬ ಆಸೆ ಪಡ್ತಾನೆ ಸುಬ್ಬಣ್ಣ. ಒಮ್ಮೆ ಅವಕಾಶ ಕೊಡ್ರೀ’ ಎಂದು ಒಂದು ಚೀಟಿಯಲ್ಲಿ ಬರೆದು ಕೊಟ್ಟರು. ಆ ಚೀಟಿಯನ್ನು ರಾಮನ ಪಾದುಕೆ ಹೊತ್ತು ತಂದ ಭರತನಂತೆ ಜೋಪಾನ ಮಾಡಿ ತಂದು ಸುಬ್ಬಣ್ಣನವರ ಹೆಸರಿಗೆ ಅಂಚೆ ಡಬ್ಬಿಗೆ ಕೈ ಮುಗಿದು ಹಾಕಿದ್ದೆ. ಅಷ್ಟೊತ್ತಿಗಾಗಲೆ ಚಿದಾನಂದಗೌಡ ಅನಿವಾರ್ಯವಾಗಿ ಹೆಗ್ಗೋಡಿಗೆ ಹೊರಟು ನಿಂತಿದ್ದ. ಸುಬ್ಬಣ್ಣವರಿಂದ ನನಗ್ಯಾವ ಉತ್ತರವೂ ಬಂದಿರಲಿಲ್ಲ. ಭಾರವಾದ ಮನಸ್ಸಿನಲ್ಲಿ ಒಬ್ಬರನ್ನೊಬ್ಬರು ಬೀಳ್ಕೊಟ್ಟಿದ್ದೆವು.
ನಾನು ಒಂಟಿಯಾದೆ ಯುವಕರ ಸಂಘದ ಕಟ್ಟೆ, ಅವನೆಲ್ಲಿ? ಎಂದು ಕೇಳುತ್ತಿತ್ತು. ಒಂದು ವಾರ ಕಳೆದಿರಬಹುದು ನೀನಾಸಮ್‍ನಿಂದ ಟೆಲಿಗ್ರಾಮ್. ‘ಗಂಟು ಮೂಟೆಯೊಂದಿಗೆ ಬನ್ನಿ’ ಎಂದಿತ್ತು. ಆ ಹೊತ್ತು ನಾನು ಪಟ್ಟ ಸಂತೋಷ ಎಷ್ಟೆಂದು ಹೇಗೆ ಹೇಳಲಿ. ಎಲ್ಲರ ಮನೆ-ಮನೆಗೂ ಓಡಿ… ಓಡಿ… ಹೇಳಿದ್ದೆ. ಪೆಂಡಕೂರ್ ಗುರುಮೂರ್ತಿಯವರಂತು ಅಭಿಮಾನದಿಂದ ಬೀಗಿದರು.
ನಮ್ಮಿಬ್ಬರಿಗೂ ಊರೇ ಬಳಗವಾಗಿತ್ತು. ನಮ್ಮ ಯುವರಾಜ ತನ್ನ ಎರಡು ಒಳ್ಳೇ ಶರ್ಟುಗಳನ್ನು ನನಗಾಗಿ ಪ್ಯಾಕ್ ಮಾಡಿ ತಂದಿದ್ದ. ನನ್ನನ್ನು ಬೀಳ್ಕೊಟ್ಟಾಗ ಭಾವ ತೀವ್ರತೆಯ ಸನ್ನಿವೇಶವಾಗಿತ್ತು. ಇನ್ನು ಹೆಗ್ಗೋಡು ಮುಟ್ಟುತ್ತಿದ್ದಂತೆ ಆಗಲೇ ಅಲ್ಲಿಯ ಗೆಳೆಯರೊಂದಿಗೆ ಬೆರೆತಿದ್ದ ಚಿದಾನಂದಗೌಡ ನನ್ನನ್ನು ನೋಡುತ್ತಿದ್ದಂತೆಯೇ ನಿಜ ಹೇಳ್ತೇನೆ ‘ಬಂಗಾರದ ಪಂಜರ’ ಸಿನೇಮಾದ ಕೊನೆಯಲ್ಲಿ ರಾಜಕುಮಾರ ಮತ್ತೆ ತನ್ನ ಹಟ್ಟಿಗೆ ಬಂದು ಕುರಿಗಳ ಮದ್ಯೆ ಬಟ್ಟೆ ಗಂಟು ತೂರಿ ಕುರಿಗಳೊಂದಿಗೆ ಸಂತೋಷ ಪಟ್ಟಂತೆ ನನ್ನನ್ನು ಎತ್ತಿ ಕುಣಿದಾಡಿದ್ದ. ಅಲ್ಲಿದ್ದ ನಾಟಕದವರೆಲ್ಲ ಈ ದೃಶ್ಯವನ್ನು ನೋಡಿದ್ದರು.
ಒಂದು ವರ್ಷ ಕಳೆಯಿತು ನಮ್ಮಿಬ್ಬರ ಬಗ್ಗೆ ಒಳ್ಳೆ ಅಭಿಪ್ರಾಯವಿತ್ತು. ಯಾಕೋ ಅವನಿಗೆ ಅಲ್ಲಿ ಮುಂದುವರೆಯಲು ಮನಸ್ಸಿರಲಿಲ್ಲ. ರಾತ್ರಿ ಹೊತ್ತು ಉಳಿದ ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದ. ಯಶವಂತ ಸರದೇಶಪಾಂಡೆ, ಸಂಜಯ್‍ದೊರೆ (ಪಿ. ಶೇಷಾದ್ರಿಯವರ ಅಣ್ಣ), ಪ್ರಭಾಕರ್ ಜೋಶಿ (ಸೇಡಂ), ಅಡ್ಡಂಡ ಕಾರ್ಯಪ್ಪ, ಅನಿತ, ಭಾಗೀರತಿ ಭಾಯಿ ಕದಂ, ಜಗದೀಶ ಮನೆವಾರ್ತೆ ನಾವೆಲ್ಲರೂ 85-86ರ ಬ್ಯಾಚ್‍ನವರು.
ಮುಂದೆ ಚಿದಾನಂದಗೌಡ ಬೆಂಗಳೂರಲ್ಲಿ ‘ಸುದ್ದಿ ಸಂಗಾತಿ’ ಪತ್ರಿಕೆಗೆ ಸೇರಿಕೊಂಡ. ಅವನಿಗೆ ನಟನೆಗಿಂತ ಸಾಹಿತ್ಯದಲ್ಲಿ ಹೆಚ್ಚು ಒಲವಿತ್ತು. ನಾನು ನೀನಾಸಂ ತಿರುಗಾಟದಲ್ಲಿ. ಅಲ್ಲಿಗೆ ಬಿ.ವಿ.ಕಾರಂತರು ಬಂದರು, ಅಲ್ಲಿಂದ ರಂಗಾಯಣಕ್ಕೆ ಬಂದೆ. ಅಷ್ಟೊತ್ತಿಗೆ ಗೌಡ ಒಳ್ಳೊಳ್ಳೆಯ ಕನಸುಗಳನ್ನು ಬರೆದು ಕತೆಗಾರನಾಗಿದ್ದ.
‘ಸುಯೋಧನ ಪ್ರಕಾಶನ’ದಿಂದ ಪತ್ರಿಕೆಯೊಂದನ್ನು ತಂದ. ತಾಲೂಕು ಕಛೇರಿಯಲ್ಲಿರುವ ಅಧಿಕಾರಿಗಳು ಈತನಿಗೆ ಗೌರವ ಕೊಡಲಾರಂಭಿಸಿದರು. ಅವರ ಬೇಜವಾಬ್ದಾರಿತನವನ್ನು ಪತ್ರಿಕೆಯಲ್ಲಿ ಬರೆಯುತ್ತಿದ್ದ, ನಿಷ್ಠುರವನ್ನು ಕಟ್ಟಿಕೊಂಡ. ಯಂಡಮೂರಿ ವೀರೇಂದ್ರನಾಥರ ಪ್ರಭಾವದಿಂದ ‘ಸತ್ಯಶ್ರೀ ಸ್ವಾಮಿಯ ಕಾಮಾಶ್ರಮ’ ಕಾದಂಬರಿ ಬರೆದ. ಗೆಳೆಯ ಗೋವಿಂದ ತೀರಿಕೊಂಡ ಬಳಿಕ ಊರು ನಾಟಕವಿಲ್ಲದೆ ಬಣ-ಬಣವಾಯಿತು.
ನಮ್ಮ ಮಾರ್ಗದರ್ಶಿಗಳು ಶ್ರೀ ಗುರುಮೂರ್ತಿ ಪೆಂಡಕೂರ್ ಅವರೂ ಸಹ ಇತ್ತೀಚೆಗೆ ಬೆಂಗಳೂರು ಸೇರಿದರು. ಊರಿನ ಶ್ರೀಮಂತ ಮನೆತನ. ದೊಡ್ಡ ವ್ಯಾಪಾರಸ್ತರು. ಆದರೆ ಯಾವಾಗಲು ಅವರ ಬಗಲಲ್ಲಿ ಸಾಹಿತ್ಯವಿರುತ್ತಿತ್ತು. ಪ್ರತೀ ದಿನ ಸಂಜೆ ಅವರ ಮನೆಯಂಗಳದಲ್ಲಿ ಜಮಖಾನೆಯ ಮೇಲೆ ಕಿರು, ಮರಿ ಸಾಹಿತಿಗಳನ್ನು ಕೂಡು ಹಾಕಿ ವಾರಕ್ಕೊಂದಾದರು ಕತೆ, ಕವನ ಬರೆಯಬೇಕು ಎಂದು ತಾಕೀತು ಮಾಡಿ ಅವರ ಬಾಯಿಗೆ ಪೇಪೂರುಮೆಂಟು ಕೊಡುತ್ತಿದ್ದರು. ದೊಡ್ಡ ಮೇಧಾವಿ, ವೈಶ್ಯ ಮನೆತನದಲ್ಲಿ ವಿಶಿಷ್ಟ ಸ್ವಭಾವದವರು. ಉತ್ತಮ ಅಭಿರುಚಿ ಇದ್ದವರು. ಬಳ್ಳಾರಿ ಜಿಲ್ಲೆಯ ಸಾಹಿತಿಗಳ ಸಾಹಿತ್ಯವನ್ನು ಯುವಕರ ಸಂಘದಿಂದ ಪ್ರಕಟಿಸಿದವರು.
ನಮ್ಮ ಗೌಡ ಬೆಂಗಳೂರಿನಲ್ಲಿರುವಾಗಲೇ ಸುಧಾ ಅವರನ್ನು ಇಷ್ಟಪಟ್ಟು ಮದುವೆಯಾದ. ಸುಧಾ ಚಿದಾನಂದಗೌಡ ಉತ್ತಮ ಅಭಿರುಚಿಯುಳ್ಳವರು. ಇಬ್ಬರ ಮದುವೆಯ ಪ್ರಸಂಗದಲ್ಲಿ ನನ್ನದೊಂದು ಚಿಕ್ಕ ಪಾತ್ರವೂ ಇತ್ತು. ನಾನು ಊರಿಗೆ ಹೋದಾಗಲೆಲ್ಲ ಮಂಡಕ್ಕಿ ಒಗ್ಗರಣೆ ಮಿರ್ಚಿ ಮಾಡಿಕೊಟ್ಟು ಗೆಳೆಯರ ಸಂಭಾಷಣೆಯನ್ನು ಕೇಳುತ್ತಿದ್ದರು. ನಾಟಕ, ಕವನ, ಕತೆ, ಪಾತ್ರದ ವಿಶ್ಲೇಷಣೆ ಹೀಗೆ ಮಾತಾಡುವಾಗ ಸಮಯ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡುತ್ತಿತ್ತು. ತನ್ನ ಸೃಜನಶೀಲತೆಯನ್ನು ಹೆಂಡತಿ ಸುಧಾ ಅವರಿಗೆ ಬಿಟ್ಟುಕೊಟ್ಟಂತೆ ಮೌನವಾದ.
ಸುಧಾ ಅವರು ಒಂದಾದಮೇಲೊಂದು ಕೃತಿಗಳನ್ನು ತಂದರು. ಶೇಕ್ಸ್ಪಿಯರ್ ನ ನಾಟಕಗಳ ಸ್ತ್ರೀ ಪಾತ್ರಗಳನ್ನು ಚಂದಾಗಿ ವಿಶ್ಲೇಷಿಸಿದ್ದಾರೆ. ಒಮ್ಮೊಮ್ಮೆ ಹುಳ್ಳಿ ನಾಗರಾಜ್‍ನನ್ನೂ, ನನ್ನ ತಮ್ಮ ರಾಚಣ್ಣನವರ ರಾಮಣ್ಣನನ್ನೂ (ರಾಮಣ್ಣ ಮನೆಯ ಮಗ್ಗುಲ ಬಾಲ್ಯದ ಗೆಳೆಯ ತಮ್ಮನಂತೆ ಇದ್ದವ ಈಗಲೂ ಹಾಗೆ ಇದ್ದೇವೆ) ಸೇರಿಕೊಂಡು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ.
ನಮಗೆ ನಿನ್ನ ಟೈಮ್ ಕೊಡು ಎಂಬುದು ಅವರ ತಾಕೀತಾಗಿತ್ತು. ಅವನಿಗೆ ಹತಾಶೆಗೆ ನಾವೆಲ್ಲ ಬೇರೆ ಬೇರೆ ಊರಿನಲ್ಲಿರುವುದಾಗಿತ್ತು. ಆಗೆಲ್ಲ ಸೈಕಲ್ ಮೇಲೆ ಹೊಸಪೇಟೆ, ಹಂಪಿ ಸುತ್ತಿದವರು ನಾವು. ನಾಗರಾಜನಾದರು ವಕೀಲಿತನಕ್ಕೆ ಬಿಡುವು ಸಿಕ್ಕಾಗಲೆಲ್ಲ ಬೆಂಗಳೂರಿನಿಂದ ಊರಿಗೆ ಹೋಗಿ ಗೌಡನ ಜೊತೆ ಸೇರುತ್ತಿದ್ದ. ತನ್ನ ಸುಯೋಧನ ಪ್ರಕಾಶನದಿಂದ ಶ್ರೀ ಗೋಪಾಲ್ ವಾಜಪೇಯಿ ಅವರ ನಂದ ಭೂಪತಿ (ಕಿಂಗ್ ಲಿಯರ್), ಸುಣ್ಣದ ಬಳಪದ ವೃತ್ತ (ಚಾಕ್ ಸರ್ಕಲ್) ನಾಟಕಗಳನ್ನು ಅಚ್ಚು ಹಾಕಿಸಿ ನಾಟಕದ ಮೇಲಿನ ಅಭಿಮಾನ ಮೆರೆದ.
ನನ್ನೂರಿಗೆ ನಾನು ಎರಡು ದಿನದ ಮಟ್ಟಿಗೆ ಹೋಗುವ ನನ್ನನ್ನು ದೂರಿದ, ಛೇಡಿಸಿದ ಕಾಲಿಗೆ ಚಕ್ರ ಕೊಂಡಿದ್ದ ನನಗೆ ನಿಲ್ಲಲಾಗುತಿರಲಿಲ್ಲ. ಹೆಗ್ಗೋಡಿನಿಂದ ಎಂಬತ್ತೈದರಲ್ಲಿ ಅವನು ನನ್ನನ್ನು ಬಿಟ್ಟುಹೋದಾಗ ಸ್ತಬ್ಧನಾಗಿದ್ದೆ. ಮೊನ್ನೆ ಅವನ ಮಗ ಕರೆ ಮಾಡಿ ‘ಹುಲುಗಪ್ಪ ಕಟ್ಟೀಮನಿಯವರ, ನಾನು ಚಿದಾನಂದಗೌಡರ ಮಗ. ನಮ್ಮ ತಂದೆ ಹೋಗಿ ಬಿಟ್ರು ಅಂದಾಗ ಏನು ಮಾತಾಡದೆ ಸ್ತಬ್ಧನಾಗಿ ಬಿಟ್ಟೆ. ನಮ್ಮಿಬ್ಬರ ಮಧ್ಯೆ ಆಡುವ ಮಾತುಗಳು ಮುಗಿದಿರಲಿಲ್ಲ, ಮಾತು ನಿಲ್ಲಿಸಿಬಿಟ್ಟ. ಆತನ ಕುಟುಂಬಕ್ಕೆ ದೇವರು ಸಾಂತ್ವನ ನೀಡಲಿ ಎಂದು ಹೇಳುವುದಷ್ಟೇ ಈಗ ಉಳಿದಿರುವುದು.
*ನಮ್ಮಿಬ್ಬರ ಗುರುಗಳು ಶ್ರೀ ಚಿದಂಬರರಾವ್ ಜಂಬೆಯವರು ಲಕ್ನೋದಿಂದ ಈ ಗೆಳೆಯನಿಗಾಗಿ ಮರುಗಿದರು.






ಓದಿ ಬಹಳ ಖೇದವಾಯ್ತು ಸರ್