–ನಂದಿನಿ ಹೆದ್ದುರ್ಗ
ನನ್ನ ಪ್ರೇಮಕ್ಕೊಂದು
ನಮ್ರ ವಿಧೇಯತೆಯಿದೆ
ನೆನಪುಗಳ ತೊಳೆದು
ಗುರುತುಗಳ ಒರೆಸಿ
ನೋವುಗಳಿಗೆ
ಪೇನ್ ಕಿಲ್ಲರ್ ಹಚ್ಚಿ…
ಬರೆದ ಹಳೆಯ ಕವಿತೆಗಳ
ತಿದ್ದಿ
ಕತ್ತರಿಸಿ ಕಥೆಯಲ್ಲಿದ್ದ
ತೀವ್ರ ಪ್ರೇಮದ ಭಾಗ
ತಡೆದು ಇಂಗಿಸಿ ಕಂಬನಿ
ಒರಟಾಗಿಸಿಕೊಂಡು ಜೀವ
ಬರಡಾಗಿಸಿಕೊಂಡು ಭಾವ
ಸತ್ತು ಬದುಕುವುದ ಕಲಿಯುತ್ತೇನೆ
ಪ್ರತೀ ಸಣ್ಣ ಪ್ರೇಮದ
ವಿದಾಯದ ಕಾಲದಲ್ಲೂ!
ಒಟ್ಟಿಗೆ ಬಿತ್ತಿದ ಬಿತ್ತ
ಬೆಳೆದು ತಾಯಿಮರವಾಗಿರುವ
ಹೊತ್ತು.
ಮಸೆದ ಮಚ್ಚು ಮತ್ತೊಮ್ಮೆ ಉಜ್ಜಿ
ಹರಿತ ನೋಡಿ ಹರೆಗಳ ಕೊಚ್ಚಿ
ಬೇರಿಗೆ ತೊಟ್ಟು ವಿಷದ ಹನಿ ಬಿಟ್ಟು
ಉದುರಿದ ಎಳೆಮರಿಗಳ
ಕಿಂಚಿತ್ ಒಳ್ಳೆಯತನದಲ್ಲಿ
ನಾಯಿಗೆ ಎಸೆಯುತ್ತಾ
ಹೊಸ ಹುಟ್ಟು ಪಡೆದವಳಂತೆ ನಟಿಸಿ
ಅದನ್ನೇ ಜೀವಿಸುತ್ತೇನೆ
ನಾಳೆ ಬರುವ ಸಾವನ್ನು
ಈ ಘಳಿಗೆಯೇ ಬರುವಂತೆ
ನಿಶ್ಚಲ ಮನಸ್ಥಿತಿಯಲ್ಲಿ
ಬೇಡುತ್ತೇನೆ
ಎದುರಿನ ಜೀವಕ್ಕೆ ಬಿಡುವಿದ್ದು
ಇನ್ನೂ
ಎರಡು ತಾಸು
ಮುಂದುವರೆಸುವ ಹಂಬಲವೆದ್ದು
ಎರಡು ಒದ್ದೆ ಮಾತು ಚೆಲ್ಲಿದ್ದಷ್ಟೆ!!
ಅಂಗಳದ ಆಕಾಶಮಲ್ಲಿಗೆ ಮರದಲ್ಲಿ
ಜೊಂಪೆಜೊಂಪೆ ಮೊಗ್ಗು
ತೂಗಿದ ಹರೆ ಭರ್ತಿ ಹಣ್ಣು
ದಂಡೆ ಮಲ್ಲಿಗೆ ಕೊಂಡು
ಜೀವ ಪರಿಮಳಿಸಿಕೊಂಡು
ಆ ಸಂಜೆಗೆ ಎರಡೆರಡು ಮುಡಿಪು
ಎದೆಯಲೊಂದು ಒಡೆಯಲಾರದ ಒಡಪು
ರದ್ದಿಯಲ್ಲಿದ್ದ ಮಧುರ ಮಾರ್ದವಗಳ
ಮರು ಓದು
ಮರಳುಗಾಡೆಂಬ ಹಳೆಯ ಸಾಲು
ಒರೆಸಿ ಮಲೆಕಾಡು ಎಂದು ಬದಲಿಸಿ
ಹಕ್ಕಿ ಚಿಟ್ಟೆ ಜೇನು ಕಪ್ಪೆಗಳ ಹುಟ್ಟಿಸಿ…
ಮತ್ತೊಂದು ಹೊಸಸೃಷ್ಟಿ
ಆತ್ಮಕ್ಕೆ ಹೊಸದೃಷ್ಟಿ!!
ಒಂದು ತುಡುಗು ಬಿಡುವಿನಲ್ಲಿ
ದೇಹಚೇಷ್ಟೆಗೆ ಅವನು
ಕಳುಹಿಸುವ
ತುಂಡು ಪದವನ್ನು ಮೆದುವಲ್ಲಿ ಹಿಂಜಿ
ಭಾವಗೀತೆಯಾಗಿಸುವ
ನನ್ನ ಪ್ರೇಮಕ್ಕೊಂದು
ನಮ್ರ ವಿಧೇಯತೆಯಿದೆ






0 Comments