
ಅನುಪಮಾ ಪ್ರಸಾದ್
ಆಯ್ಕೆಯ ಪುಸ್ತಕ; ಇಷ್ಟದ ಪುಸ್ತಕ ಹಲವು. ಸದ್ಯ ಓದಿದವುಗಳಲ್ಲಿ ಕೆಲವು ಇವು. ಮತ್ತೆ ಮತ್ತೆ ಓದಿಸಿಕೊಳ್ಳುವ ಇಂದಿರಾ ಗೋಸ್ವಾಮಿ ನನ್ನನ್ನು ಕಾಡುವ ಭಾರತೀಯ ಲೇಖಕಿಯರಲ್ಲಿ ಪ್ರಮುಖರು.
ಆತ್ಮಕಥೆ ಎಂದರೆ ಇದು ಅಂತನಿಸಿದ್ದು ತೆಹಮಿನಾ ದುರ್ರಾನಿಯ `ಆರನೆ ಹೆಂಡತಿಯ ಆತ್ಮ ಕಥೆ’. ಪಾಕಿಸ್ಥಾನಿ ರಾಜಕೀಯದ ಒಳ ಆಟಗಳ ಬಗ್ಗೆ ಪ್ರಬುದ್ಧ ಗ್ರಹಿಕೆಯನ್ನೂ ಈ ಕೃತಿ ಕಟ್ಟಿಕೊಡುತ್ತದೆ. ಇದನ್ನು ಅನುವಾದಿಸಿದ ಆರ್.ಕೆ.ಹುಡುಗಿ (ರಾಹು) ಈ ಕೃತಿಯನ್ನ ವಿಶಿಷ್ಟ ಆತ್ಮ ಚರಿತ್ರೆ ಎಂದು ಹೇಳಿರುವುದು ಅಕ್ಷರಶಃ ಸರಿಯೇ.
`ರೂಪರೂಪಗಳನು ದಾಟಿ’ ಮೂಲಕ ಎಸ್.ದಿವಾಕರರ ಬೇರೆ ಬೇರೆ ಬರಹಗಳನ್ನು ಒಂದೆಡೆ ಸಂಗ್ರಹಿಸಿ ನರೇಂದ್ರ ಪೈಯವರು ನಿಜವಾಗಿಯೂ ರೂಪರೂಪಗಳನ್ನು ದಾಟಿಸಿದ್ದಾರೆ.
ಜಗದೀಶ್ ಕೊಪ್ಪ ಅನುವಾದಿಸಿದ `ಪುತ್ರಶೋಕ’ ಓದುವಾಗ, ಸ್ವತಂತ್ರ ಭಾರತದಲ್ಲಿ ತುರ್ತು ಪರಿಸ್ಥಿತಿಯ ಭೀಭತ್ಸತೆಗೆ ಬಲಿಯಾದ ಜೀವಗಳ ನೆನೆದು ಮನಸು ಹಳಹಳಿಸುತ್ತದೆ. ಮಗ ಬರುತ್ತಾನೆಂದು ಕಾದವರಿಗೆ ಆತ ಆತ್ಮಾಘಾತವಾಗುವಂತಹ ಹಿಂಸೆಯ ನಂತರ ಸಾವನ್ನಪ್ಪಿದ್ದಾನೆಂಬ ಸತ್ಯ ಎದುರಾದಾಗ ಅರಗಿಸಿಕೊಳ್ಳಲು ಸಾಧ್ಯವೆ? ಆ ಸತ್ಯದ ಬೆಂಕಿಯನ್ನು ಹೊಟ್ಟೆಯಲ್ಲಿ ಹೊತ್ತೂ ನ್ಯಾಯಕ್ಕಾಗಿ ಹೋರಾಡಿದ ತಂದೆಯೊಬ್ಬನ ಯಾತನೆಯನ್ನು ಪದ ವೈಭವವಿಲ್ಲದೆ ಓದುಗನಿಗೆ ದಾಟಿಸುವ ಪುಸ್ತಕವಿದು.
ಮಲೆಯಾಳಂ ಮೂಲದ `ಬಿಡುಗಡೆ’ ವಿಭಿನ್ನ ರೀತಿಯ ರಚನೆಯ ಕಾದಂಬರಿ.
ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ ನನ್ನ ಮಟ್ಟಿಗೆ ಅಮೂಲ್ಯ ಓದು. ಸದ್ಯ ನನ್ನ ಕೈಯಲ್ಲಿರುವ ಪುಸ್ತಕ ಜಗದೀಶ್ ಕೊಪ್ಪ ಅವರ `ಮುಗಿಯದ ಯುದ್ಧ’ (ಭಾರತದ ನಕ್ಸಲ್ ಇತಿಹಾಸದ ಕಥನ)




0 Comments